For Quick Alerts
ALLOW NOTIFICATIONS  
For Daily Alerts

ಧಿಡೀರ್ ರವಾ ಮಸಾಲೆ ದೋಸೆ

By Staff
|
rava masala dosa
ಅಕ್ಕಿ ನೆನೆಹಾಕಿ ಅದು ನೆನೆಯುವ ತನಕ ಕಾಯ್ದಿದ್ದು ಆಮೇಲೆ ಅದನ್ನು ರುಬ್ಬಿ ಆನಂತರ ಮತ್ತೆ ಅದು ಹುಳಿ ಹದ ಬರುವ ತನಕ ಕಾಯುವ ತಾಳ್ಮೆ ಯಾರಿಗಿದೆ. ತಾಳ್ಳೆ ಇದ್ದರೂ ರಾತ್ರಿ ಮನೆಗೆ ತಡವಾಗಿ ಬಂದು ಬೆಳಗ್ಗೆ ಬೇಗ ಕೆಲಸಕಾರ್ಯಗಳಿಗೆ ಓಡುವವರಿಗೆ ಇಲ್ಲಿದೆ ಫಾಸ್ಟ್ ಟ್ರ್ಯಾಕ್ ಫಾಸ್ಟ್ ಫಾರ್ ವರ್ಡ್ ರವಾ ಮಸಾಲಾ ದೋಸಾ.

*ತೇಜಸ್ವಿನಿ ಹೆಗಡೆ, ಬೆಂಗಳೂರು.

ಕೆಲವೊಮ್ಮೆ ಬೆಳಗಿನ ತಿಂಡಿಗೋ ಇಲ್ಲಾ ಸಾಯಂಕಲಕ್ಕೋ ಏನು ಮಾಡಬೇಕೆಂದೇ ತೋರುವುದಿಲ್ಲ. ಸಮಯದ ಅಭಾವ ಇದ್ದರಂತೂ ತುಂಬಾ ಗಡಿಬಿಡಿ ಆಗುವುದು ಸಹಜವೇ. ಏನೋ ಒಂದು ತಿಂಡಿ ಬೇಗನೆ ತಯಾರಿಸಬೇಕು ಎಂದೆನಿಸುತ್ತದೆ. ಜೊತೆಗೆ ಬಾಯಿಗೆ ರುಚಿಕರವಾಗಿಯೂ ಇದ್ದರೆ ಎಷ್ಟು ಚೆನ್ನಾ ಎಂದೂ ಎನಿಸುತ್ತದೆ. ಹಾಗಿದ್ದಲ್ಲಿ ಈ ದೋಸೆ ಒಂದು ಉತ್ತಮ ತಿಂಡಿ ಎನ್ನಬಹುದು.

ಧಿಢೀರನೆ ಅತಿಥಿಗಳು ಬಂದಾಗಲೂ ಈ ದಿಢೀರ್ ದೋಸೆಯನ್ನು ಮಾಡಿ ಬಡಿಸಬಹುದು. ತುಂಬಾ ಸ್ವಾದಿಷ್ಟವಾಗಿರುತ್ತದೆ. ರವೆಯನ್ನು ಇಡ್ಲಿ, ದೋಸೆ ಹಾಗೂ ಹಲ್ವಗಳ ತಯಾರಿಕೆಗಳಲ್ಲಿ ಮುಖ್ಯವಾಗಿ ಬಳಸುತ್ತಾರೆ. ಬಾಣಂತಿಯರಿಗೆ ರವೆ ಗಂಜಿಯನ್ನು ವಿಷೇಶವಾಗಿ ನೀಡುತ್ತಾರೆ. ರವೆ ಗಂಜಿ ತುಂಬಾ ಪೌಷ್ಠಿಕ. ಇದು ಎದೆಹಾಲು ಉತ್ಪತ್ತಿಗೆ ಹಾಗೂ ಹೆರಿಗೆಯ ನಂತರದ ಹೊಟ್ಟೆಯೊಳಗಿನ ಗಾಯ ಮಾಗುವುದಕ್ಕೂ(ಆಪೇರೇಷನ್ ಆಗಿದ್ದರೆ) ತುಂಬಾ ಸಹಕಾರಿಯಾಗಿದೆ. ರವೆಗಂಜಿಯನ್ನಲ್ಲದೇ ರವಾ ಶಿರವನ್ನೂ(ರವಾ ಕೇಸರಿ ಬಾತ್) ಮಾಡಿಕೊಡುತ್ತಾರೆ.

ಸ್ವಲ್ಪ ರವೆಗೆ 2 ಚಮಚ ತುಪ್ಪವನ್ನು ಹಾಕಿ ಹುರಿದು ಅದಕ್ಕೆ ಬೇಕಿದ್ದರೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ರುಚಿಗೆ ಬೇಕಾದಷ್ಟು ಸಕ್ಕರೆಯನ್ನು ಸೇರಿಸಿ, ಒಂದು ಲೋಟ ಹಾಲನ್ನು ಹಾಕಿ ಕದಕಿದರೆ ರವಾಗಂಜಿ ತಯಾರು. ರವಾಮಸಾಲ್‌ದೋಸೆಯನ್ನು ತಯಾರಿಸುವಾಗ ಸಣ್ಣರವೆಯನ್ನು ಬಳಸಿದರೆ ಉತ್ತಮ. ದೋಸೆ ಹೊಯ್ಯಲು ಸುಲಭವಾಗುವುದಲ್ಲದೇ ಮೃದುವಾಗಿಯೂ ಇರುತ್ತದೆ. ಕೆಳಗಿನಳತೆಯ ಸಾಮಗ್ರಿಗಳಿಂದ ಸುಮಾರು 6-8 ದೋಸೆಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

* ಸಣ್ಣರವೆ - ಒಂದು ಲೋಟ(ದೊಡ್ಡ ಗಾತ್ರದ್ದು)
* ಶುಂಠಿ - ಒಂದು ಇಂಚು
* ಹಸಿಮೆಣಸು - ಖಾರಕ್ಕೆ ತಕ್ಕಂತೆ. ತುಂಬಾ ಖಾರವಿದ್ದರೆ ಒಂದೇ ಸಾಕು.
* ಕೊತ್ತಂಬರಿಸೊಪ್ಪು - ಒಂದು ಹಿಡಿ
* ಕರಿಬೇವಿನ ಸೊಪ್ಪು - ಸುಮಾರು ಅರ್ಧ ಹಿಡಿಯಷ್ಟು
* ಕಾಯಿತುರಿ - 1-2 ಚಮಚ
* ಈರುಳ್ಳಿ - 1 ಗಡ್ಡೆ (ದೊಡ್ಡ ಗಾತ್ರದ್ದಾದರೆ ಅರ್ಧ ಮಾತ್ರ ಸಾಕು)
* ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

* ಮೊದಲು ಸಣ್ಣರವೆಯನ್ನು ತೊಳೆದು ನೀರನ್ನು ಬಸಿದಿಟ್ಟುಕೊಳ್ಳಬೇಕು. ತುಸು ಹೊತ್ತಿನಲ್ಲಿಯೇ ಅದು ತುಂಬಾ ಮೃದುವಾಗುತ್ತದೆ.
* ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿಮೆಣಸು, ಶುಂಠಿ ಹಾಗೂ ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಬೇಕು.
* ಹೆಚ್ಚಿಟ್ಟ ಸಾಮಗ್ರಿಗಳನ್ನು ಕಾಯಿತುರಿಯೊಂದಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಬೇಕು.
* ರುಬ್ಬಿದ ಮಿಶ್ರಣವನ್ನು ರವೆಯೊಂದಿಗೆ ಸೇರಿಸಿ ಉಪ್ಪನ್ನು ಹಾಕಿ ಒಮ್ಮೆ ಮಿಕ್ಸರ್‌ಗೆ ಹಾಕಿ ರುಬ್ಬಬೇಕು.
* ಬೇಕಿದ್ದರೆ ಸ್ವಲ್ಪ ನೀರನ್ನು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ತರಬೇಕು.
* ಬಾಣಲೆಯನ್ನು ಕಾಯಲಿಟ್ಟು ದೋಸೆಹಿಟ್ಟನ್ನು ತೆಳ್ಳಗೆ ಹೊಯ್ಯಬೇಕು.
* ಬಾಯಲ್ಲಿ ನೀರೂರಿಸುವ ಈ ದೋಸೆಯನ್ನು ಹಾಗೆಯೇ ತಿನ್ನಬಹುದು. ಜೊತೆಗೆ ಬೇರೆ ಪದಾರ್ಥವಾಗಲೀ, ಚಟ್ನಿಯಾಗಲೀ ಬೇಕೆಂದೆನಿಸುವುದಿಲ್ಲ.

Story first published: Friday, February 20, 2009, 12:23 [IST]
X
Desktop Bottom Promotion