For Quick Alerts
ALLOW NOTIFICATIONS  
For Daily Alerts

ನೆಲನೆಲ್ಲಿ ಸೊಪ್ಪಿನ ತಂಪು ತಂಬುಳಿ

By Staff
|

ಇಂಥ ಸೊಪ್ಪುಗಳನ್ನು ಹುಡುಕಿ, ಅಡುಗೆಮಾಡಿ ಸವಿಯುವ ಆಸೆಗೆ 1/4 ಚಮಚ ಶ್ರದ್ಧೆ ಇರಬೇಕು

*ತೇಜಸ್ವಿನಿ ಹೆಗಡೆ, ಬೆಂಗಳೂರು

ನೆಲನೆಲ್ಲಿ ಮಳೆಗಾಲದಲ್ಲಿ ಬೆಳೆಯುವ ಪುಟ್ಟಗಿಡ. ನೆಲನೆಲ್ಲಿಗೆ ಸಂಸ್ಕೃತದಲ್ಲಿ ಭೂಮ್ಯಾಮಲಕಿ, ಹಿಂದಿಯಲ್ಲಿ ಪಾತಾಲ ಆಂವಲಾ ಹಾಗೂ ಇಂಗ್ಲೀಷಿನಲ್ಲಿ"Phyllanthus Amarus" ಎಂದು ಕರೆಯಲಾಗುತ್ತದೆ. ತರಕಾರಿಗಿಡಗಳೊಡನೆ ಕಳೆಯಾಗಿ ಬೆಳೆಯುತ್ತದೆ. ಇದರೆಲೆಗಳು ಬೆಟ್ಟದ ನೆಲ್ಲಿಯಂತಿದ್ದರೂ ಆಕಾರದಲ್ಲಿ ಬಲು ಚಿಕ್ಕದಾಗಿರುತ್ತವೆ. ಹಳದಿ ಬಣ್ಣದ ಹೂವುಗಳನ್ನು ಹೊಂದಿರುವ ಈ ಗಿಡದಲ್ಲಿ ಅಗಸ್ಟ್ ಸಪ್ಟೆಂಬರ್ ತಿಂಗಳಿನಲ್ಲಿ ಸಣ್ಣ ಸಣ್ಣ ಹಸಿರು ಬಣ್ಣದ ಗುಂಡಾಕಾರದ ಕಾಯಿಗಳನ್ನು ಕಾಣಬಹುದಾಗಿದೆ.

ನೆಲನೆಲ್ಲಿಯ ಸೊಪ್ಪು ಹಲವು ವಿಧದಲ್ಲಿ ಉಪಯುಕ್ತ. ಕಾಮಾಲೆಗೆ, ಉದರಶೂಲೆಗೆ ಶ್ಲೇಷ್ಮಾತೀಸಾರಕ್ಕೆ ಹಾಗೂ ಕಣ್ಣು ನೋವಿಗೆ ಇದರ ಸೊಪ್ಪು ದಿವ್ಯೌಷಧಿ. ಅಲ್ಲದೇ, ಪಿತ್ತಜನಕಾಂಗದ ಸಮಸ್ಯೆಗಳಿಗೂ ಇದನ್ನು ಔಷಧವನ್ನಾಗಿ ಉಪಯೋಗಿಸುತ್ತಾರೆ. ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವೈದ್ಯ ಎ.ಅರ್.ಎಂ.ಸಾಹೇಬ್ ಅವರ "ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು" ಎಂಬ ಪುಸ್ತಕವನ್ನು ಓದಬಹುದು.

ನೆಲನೆಲ್ಲಿ ತಂಬುಳಿಗೆ ಬೇಕಾಗುವ ಸಾಮಗ್ರಿಗಳು.

* ನೆಲನೆಲ್ಲಿ ಸೊಪ್ಪು - ಒಂದು ಹಿಡಿ ಅಥವಾ ಮುಷ್ಟಿಯಷ್ಟು
* ಜೀರಿಗೆ - 1/4 ಚಮಚ
* ಬಿಳೇ ಎಳ್ಳು - 1/4 ಚಮಚ
* ಕರಿಮೆಣಸಿನ ಕಾಳು(ಪೆಪ್ಪರ್) 2-3
* ಇಂಗು - ಚಿಟಿಗೆಯಷ್ಟು
* ಕಾಯಿತುರಿ - 1/4 ಭಾಗ
* ಕಡೆದ ಮಜ್ಜಿಗೆ - ಒಂದು ಲೋಟ
* ಬೆಲ್ಲ - ರುಚಿಗೆ ತಕ್ಕಷ್ಟು (ಸಿಹಿ ಆಗದವರು ಬೆಲ್ಲವನ್ನು ಹಾಕದೆಯೂ ಮಾಡಬಹುದು)
* ಉಪ್ಪು - ರುಚಿಗೆ ತಕ್ಕಷ್ಟು
* ತುಪ್ಪ - 1-2 ಚಮಚ

ಮಾಡುವ ವಿಧಾನ:

* ಮೊದಲಿಗೆ ನೆಲನೆಲ್ಲಿ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು.
* ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಜೀರಿಗೆ, ಎಳ್ಳು, ಕರಿಮೆಣಸಿನ ಕಾಳು ಹಾಗೂ ಇಂಗನ್ನು ಹಾಕಿ ಹುರಿಯಬೇಕು.
* ಹಾಕಿದ ಪದಾರ್ಥ ಚಟಗುಡುತ್ತಲೇ, ಇದಕ್ಕೆ ಹೆಚ್ಚಿಟ್ಟ ನೆಲನೆಲ್ಲಿ ಸೊಪ್ಪನ್ನೂ ಹಾಕಿ ಚೆನ್ನಾಗಿ ಹುರಿದು ತಣಿಸಬೇಕು.
* ಚೆನ್ನಾಗಿ ತಣಿದ ನಂತರ ಕಾಯಿತುರಿಯೊಂದಿಗೆ ಬೀಸಿ, ಸೋಸಿ ರಸವನ್ನು ಹಿಂಡಬೇಕು. ಜಿಗುಟನ್ನು ತೆಗೆಯಬೇಕು.
* ಸೋಸಿದ ರಸಕ್ಕೆ ಕಡೆದ ಮಜ್ಜಿಗೆ, ಉಪ್ಪು ಹಾಗೂ ಬೆಲ್ಲವನ್ನು ಹಾಕಿದರೆ ರುಚಿಕರ ಹಾಗೂ ಆರೋಗ್ಯಕರ ತಂಬುಳಿ ತಯಾರೆನ್ನಬಹುದು.

ನೆಲನೆಲ್ಲಿ ಸೊಪ್ಪಿನಿಂದ ಚಟ್ನಿಯನ್ನೂ ತಯಾರಿಸಬಹುದು. ಬಹೋಪಯೋಗಿಯಾಗಿರುವ ಇದು ಸುಲಭದಲ್ಲಿ ಬೆಳೆಯುವಂತಹದ್ದೂ ಆಗಿದೆ. ಇಂಥದ್ದನೆಲ್ಲ ಹುಡುಕಿ, ತಯಾರಿಸಿ, ಸವಿಯುವ ಆಸೆಗೆ 1/4 ಚಮಚ ಶ್ರದ್ಧೆ ಇರಬೇಕು.

English summary

Hurricaneweed Tambuli Recipe

Here are the step by step instructions to make Hurricaneweed tambuli recipe. Learn here.
X
Desktop Bottom Promotion