For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿದ್ದಾಗ ಈಜುವುದರಿಂದ ದೊರೆಯುವ ಪ್ರಯೋಜನಗಳಿವು

|

ಸ್ತ್ರೀಯೋರ್ವಳು ಗರ್ಭವತಿಯಾಗೋದೆಂದರೆ ನಿಜಕ್ಕೂ ಅದು ಆಕೆಯ ಜೀವನದ ಅತ್ಯಂತ ರೋಮಾಂಚಕ ಕ್ಷಣ. ಅದು ಕೇವಲ ಆಕೆಗಷ್ಟೇ ಅಲ್ಲ; ಆಕೆಯ ಪತಿ, ಅತ್ತೆ, ಮಾವ, ತಂದೆ, ತಾಯಿ, ಸಹೋದರ, ಸಹೋದರಿ ಹೀಗೆ ಆಕೆಗೆ ಆಪ್ತೇಷ್ಟರಾದ ಎಲ್ಲರಿಗೂ! ಇವೆಲ್ಲರೂ ಆ ಗರ್ಭಿಣಿಯ ಕುರಿತು ಅಕ್ಕರೆಯಿಂದ, ವಿಶೇಷ ಕಾಳಜಿ ವಹಿಸಲು ಶುರುವಿಟ್ಟುಕೊಳ್ಳುತ್ತಾರೆ ಮತ್ತು ಅದು ತೀರ ಸಹಜ ಕೂಡ.

ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕಂದಮ್ಮನ ಕಾಳಜಿಗಾಗಿ ಆ ತಾಯಿಯಾಗುವವಳೂ ಕೂಡ ತಾನು ಸೇವಿಸುವ ಆಹಾರದಿಂದ ಆರಂಭಿಸಿ, ಕೈಗೊಳ್ಳುವ ಎಲ್ಲ ಚಟುವಟಿಕೆಗಳ ವಿಚಾರದಲ್ಲೂ ಜಾಗರೂಕಳಾಗಿರಬೇಕಾಗುತ್ತದೆ. ಹಾಗಾಗಿ ಮನೆಯವರೆಲ್ಲರೂ, "ನೀನು ಅದು ಮಾಡ್ಬೇಡ, ಇದು ಮಾಡ್ಬೇಡ, ಭಾರ ಎತ್ತಬೇಡ, ಜಾಸ್ತಿ ಸುತ್ತಾಡಬೇಡ" ಅಂತೆಲ್ಲ ಹೇಳುತ್ತ ಗರ್ಭಿಣಿಯ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಪೂರ್ಣವಿರಾಮ ಹಾಕಿಬಿಡೋದು ಸಹಜಾನೇ ಅನ್ನಿಸುತ್ತೆ. ಮನೆಯವರೆಲ್ಲ ಅಕ್ಕರೆಯ ಕಾರಣದಿಂದ ಹೀಗೆ ಹೇಳುತ್ತಾರಾದರೂ ಗರ್ಭಿಣಿಯ ಪಾಲಿಗಂತೂ ಇದು "ಅತಿಯಾಯ್ತು" ಅಂತಾ ಅನ್ನಿಸಿಬಿಡುತ್ತೆ.

ಅಲ್ಲ, ಗರ್ಭಿಣಿ ಅಂದ ಮಾತ್ರಕ್ಕೇ ಆಕೆಗೆ ಎಲ್ಲ ರೀತಿಯಲ್ಲೂ ನಿರ್ಬಂಧ ಹೇರಿ ಆಕೆಯನ್ನ ಮೂಲೆಯಲ್ಲಿ ಕೂರಿಸಿಬಿಟ್ಟರೆ ಹೇಗೆ ? ಅಷ್ಟಕ್ಕೂ ಗರ್ಭಿಣಿಯಾದವಳು ಎಲ್ಲ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಿ ಬಿಡಬೇಕೆಂದು ವೈದ್ಯರೂ ಹೇಳೋಲ್ಲ. "ತಾನೇನನ್ನ ಮಾಡ್ಬೇಕು, ಏನನ್ನ ಮಾಡ್ಬಾರ್ದೂ ?" ಅನ್ನೋದನ್ನ ನಿರ್ಧರಿಸೋ ಅಷ್ಟೋ ಇಷ್ಟೋ ಹಕ್ಕು ಆಕೆಗೂ ಇದೆ.

ಕೆಲವು ಸ್ತ್ರೀಯರು ಉತ್ತಮ ಈಜುಪಟುಗಳಾಗಿರ್ತಾರೆ ಮತ್ತು ಅದು ಅವರ ನೆಚ್ಚಿನ ಹವ್ಯಾಸವೂ ಆಗಿರುತ್ತದೆ. ಹೇಳಿಕೇಳಿ ಈಜು ಒಂದು ಅತ್ಯುತ್ತಮ ವ್ಯಾಯಾಮವೂ ಹೌದು. ಅದೇ ಸ್ತ್ರೀ ಗರ್ಭಿಣಿಯಾದಾಗ ಈಜೋದು ಸರಿಯೇ ? ತಪ್ಪೇ ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಈ ವಿಚಾರದಲ್ಲಿ ನಾವು ಸ್ವಲ್ಪ ಮುಂದುವರೆದು, "ಗರ್ಭಿಣಿಯಾದವಳು ಈಜುವುದು ತರವೇ?" ಅನ್ನೋದರ ಬಗ್ಗೆ ಒಂದಿಷ್ಟು ಮಾಹಿತಿಯನ್ನ ಕಲೆಹಾಕಿದ್ದೇವೆ.

"ಗರ್ಭಿಣಿಯಾಗಿರುವ ನೀವು ಈಜುವುದು ಸರಿಯೋ, ತಪ್ಪೋ ?" ಅನ್ನೋದನ್ನ ನಿರ್ಧರಿಸೋದಕ್ಕೆ ಈ ಮಾಹಿತಿ ನಿಮಗೆ ನೆರವಾಗಲಿದೆ (ಆದರೆ ಇಲ್ಲಿ ಒಂದು ವಿಚಾರ ನೆನಪಿಡಿ: ಆರೋಗ್ಯ ಸ್ಥಿತಿ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತೆ. ನಿಮ್ಮ ವೈಯಕ್ತಿಕ ಆರೋಗ್ಯ ಪರಿಸ್ಥಿತಿಯನ್ನ ಅವಲಂಬಿಸಿ, ಯಾವುದೇ ಚಟುವಟಿಕೆಯನ್ನ ಕೈಗೊಳ್ಳೋದರ ಬಗ್ಗೆ ನಿಮ್ಮ ವೈದ್ಯರ ಜೊತೆ ಸಮಾಲೋಚಿಸುವಷ್ಟು ಅತ್ಯುತ್ತಮ ನಿರ್ಧಾರ ಇನ್ನೊಂದಿರಲು ಸಾಧ್ಯವೇ ಇಲ್ಲ!!)

ಗರ್ಭಿಣಿಯಾದವರು ಈಜುವುದು ತರವೇ ?

ಗರ್ಭಿಣಿಯಾದವರು ಈಜುವುದು ತರವೇ ?

ಅಮೇರಿಕನ್ ಕಾಲೇಜ್ ಆಫ಼್ ಒಬ್ಸ್ಟೆಟ್ರಿಷಿಯನ್ಸ್ ಆ್ಯಂಡ್ ಗೈನೇಕೊಲೊಜಿಸ್ಟ್ಸ್ ನ ಪ್ರಕಾರ, ಗರ್ಭಿಣಿಯಾಗಿರೋವಾಗ ಈಜುವುದು ಒಂದು ಅತ್ಯಂತ ಸುರಕ್ಷಿತ ವ್ಯಾಯಾಮವಾಗಿದೆ. ಆದರೆ, ಇಲ್ಲಿ ಒಂದು ವಿಚಾರವನ್ನ ನೆನಪಿಟ್ಟುಕೋಬೇಕು. ಅದೇನಂದ್ರೆ, ನೀರಿನೊಳಗೆ ಧುಮುಕುವುದು, ವಾಟರ್ ಸ್ಕೈಯಿಂಗ್, ಸ್ಕೂಬಾ ಡೈವಿಂಗ್ ಗಳಂತಹ ಚಟುವಟಿಕೆಗಳು ಗರ್ಭಿಣಿಯರಿಗೆ ಹೇಳಿಸಿದವುಗಳಲ್ಲ. ಏಕೆಂದರೆ, ಅದು ಗರ್ಭಿಣಿಯರಲ್ಲಿ ಅಪಘಾತದ ಪ್ರಮಾಣವನ್ನ ಹೆಚ್ಚಿಸುತ್ತೆ.

ಪ್ರನಾಳಶಿಶುವಿನಂತಹ ವಿಧಾನದ ಮೂಲಕ (ಐ.ವಿ.ಎಫ಼್) ಗರ್ಭಿಣಿಯಾದವರಿಗೂ ಕೂಡ ಈಜು ಒಂದು ಅನುಮೋದಿತ ವ್ಯಾಯಾಮವೇ ಆಗಿದೆ. ಶರೀರದ ಮೇಲೆ ಹೆಚ್ಚಿನ ಒತ್ತಡವನ್ನ ಹೇರದ ಹೊರತು, ಪ್ರನಾಳಶಿಶು ರೀತ್ಯಾ ಗರ್ಭಿಣಿಯಾದ ಮಹಿಳೆಗೆ ಈಜು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನ ನೀಡುತ್ತದೆ.

ಐ.ವಿ.ಎಫ಼್. ರೀತ್ಯಾ ಗರ್ಭಿಣಿಯಾಗಿರುವಾಗ, ಚಟುವಟಿಕೆಗಳ ನಿರ್ಬಂಧದ ಕಾರಣದಿಂದ ನಿಮ್ಮ ಮಾಂಸಖಂಡಗಳ ಧಾರಣಾ ಶಕ್ತಿಯು ನಷ್ಟವಾಗುತ್ತದೆ ಅನ್ನೋ ಆತಂಕ ನಿಮಗಿದ್ದಲ್ಲಿ, ನಿಮ್ಮ ಈಗಿನ ಸದೃಢತೆಯನ್ನ ಕಾಪಿಟ್ಟುಕೊಳ್ಳೋ ನಿಟ್ನಲ್ಲಿ ಈಜು ಒಂದು ಸುರಕ್ಷಿತ ವಿಧಾನವೇ ಆಗಿದೆ.

ಉಸಿರಾಟದ ಸಾಮರ್ಥ್ಯ ಮತ್ತು ಶಕ್ತಿಯನ್ನ ಹೆಚ್ಚಿಸೋ ನಿಟ್ನಲ್ಲಿ, ಈಜು ಕಡಿಮೆ ಒತ್ತಡವನ್ನೊಳಗೊಂಡಿರುವ ಒಂದು ವ್ಯಾಯಾಮವಾಗಿದೆ. ದೇಹದ ತ್ರಾಣಶಕ್ತಿಯನ್ನ ಹೆಚ್ಚಿಸೋವಂತಹ ಆದರೆ ಹೊಟ್ಟೆಯನ್ನ ತಿರುಚದೇ ಇರೋವಂತಹ ವ್ಯಾಯಾಮಗಳು ಗರ್ಭಿಣಿಯರಿಗೆ ಪ್ರಶಸ್ತವಾದವು. ಈ ನಿಟ್ನಲ್ಲಿ ಸುರಕ್ಷಿತ ರೀತಿಯ ಈಜುಗಾರಿಕೆಯನ್ನ ತುಂಬು ಗರ್ಭಿಣಿಯೂ ಕೈಗೊಳ್ಳಬಹುದು.

ಗಮನದಲ್ಲಿರಿಸಬೇಕಾದ ಇತರ ಅಂಶಗಳು:

ಗಮನದಲ್ಲಿರಿಸಬೇಕಾದ ಇತರ ಅಂಶಗಳು:

ಸರ್ವೇಸಾಮಾನ್ಯವಾಗಿ ಗರ್ಭಿಣಿಯರ ಪಾಲಿಗೆ ಈಜುಗಾರಿಕೆ ಸುರಕ್ಷಿತ ಅಂತಾನೇ ಪರಿಗಣಿತವಾಗಿದ್ರೂ ಕೂಡ, ಕೆಲನಿರ್ಧಿಷ್ಟ ಆರೋಗ್ಯ ಸಮಸ್ಯೆಗಳಿರೋವಂತ ಅಥವ ಕೆಲಬಗೆಯ ಚಟುವಟಿಕೆಗಳನ್ನ "ಮಾಡಕೂಡದು" ಅಂತಾ ಹೇಳಿಸಿಕೊಂಡಿರೋವಂಥ ಗರ್ಭಿಣಿಯರು ನೀರಲ್ಲಿ ಈಜಾಡೋದು ಸರಿಯಲ್ಲ. ಹಾಗೇನಾದರೂ ನಿರ್ಬಂಧವನ್ನ ಮೀರಿ ಅವರು ಈಜಾಟದಲ್ಲಿ ತೊಡಗಿದರೆ ಮುಂದೆ ತೊಡಕಾಗಬಹುದು.

ಒಂದೊಮ್ಮೆ ನೀವು ಯಾವುದಾದ್ರೂ ಬೇರೆಯೇ ರೀತಿಯ ಆರೋಗ್ಯ ಸಮಸ್ಯೆ ಇರೋರು ಅಂತಾದ್ರೆ ಅದರ ಬಗ್ಗೆ ನಿಮ್ಮ ಡಾಕ್ಟ್ರ ಹತ್ರ ಏನೂ ಮುಚ್ಚಿಟ್ಟುಕೊಳ್ಳದೇ ವರದಿ ಮಾಡಿ. ಅದರಲ್ಲೂ ವಿಶೇಷವಾಗಿ ನಿಮ್ಮ ಮಾಮೂಲಿ ವ್ಯಾಯಾಮ ಯೋಜನೆಯನ್ನ ಬದಲಾಯಿಸಿಕೊಳ್ಳೋ ಯೋಚ್ನೆ ನಿಮ್ಗಿದ್ರೆ ಅಥವಾ ಯಾವ್ದಾದ್ರೂ ವಿಶೇಷ ಆರೋಗ್ಯ ಸಮಸ್ಯೆ ಇದ್ರೆ ಮುಚ್ಚುಮರೆ ಮಾಡದೇ ನಿಮ್ಮ ಡಾಕ್ಟ್ರ ಹತ್ರ ಅದನ್ನ ಹೇಳ್ಕೊಳ್ಳಿ.

ಅಪಾಯಗಳ ಬಗ್ಗೆ ಎಚ್ಚರಿಕೆಯಿಂದಿರಿ

ಅಪಾಯಗಳ ಬಗ್ಗೆ ಎಚ್ಚರಿಕೆಯಿಂದಿರಿ

ಈಜಾಡೋಕೇಂತಾ ಹೋಗೋವಾಗ ನಿಮಗೆ ಚೆನ್ನಾಗಿ ಗೊತ್ತಿರೋ, ಸುರಕ್ಷಿತವಾಗಿರೋ ಜಾಗದಲ್ಲಿ ಈಜಾಡೋಕೆ ಮುಂದಾಗೋದು ತುಂಬಾನೇ ಮುಖ್ಯ.

ಗರ್ಭಿಣಿ ಆಗೋಕೆ ಮುಂಚೆ ನೀವು ತುಂಬಾ ಹೊತ್ತು ಅನಾಯಾಸವಾಗಿ ಈಜಾಡ್ತಿದ್ರಿ. ಆದರೆ ಈಗ ಗರ್ಭಿಣಿಯಾದ್ಮೇಲೆ ನಿಮಗೆ ಬಲು ಬೇಗ ಸುಸ್ತು ಆಗುತ್ತೆ ಅನ್ನೋದು ನೆನಪಿರಲಿ. ಹಾಗಾಗಿ ಈಜಾಡೋಕೆ ಅಂತಾ ದಡದಿಂದ ತುಂಬಾ ದೂರ ಹೋಗೋದಕ್ಕೆ ಮುಂಚೆ ಅಥವಾ ಸಮುದ್ರದ ಮಧ್ಯದಲ್ಲೋ ಈಜಾಡೋಕೇಂತಾ ಹೋಗೋ ಮೊದ್ಲು ಸಾವ್ರ ಸಲ ಯೋಚ್ನೆ ಮಾಡಿ. ಸಮುದ್ರ ಅಲೆಗಳ ರಭಸವನ್ನ ಅಂದಾಜಿಸಿ, ನೀರು ತುಂಬಾ ಗಡುಸಾಗಿದೆಯೋ ಅಥವಾ ನೀರಿನಲ್ಲಿ ಯಾವುದಾದ್ರೂ ಬ್ಯಾಕ್ಟೀರಿಯಾಗಳು ಇರೋದ್ರ ಬಗ್ಗೆ ಸುದ್ದಿ ಇದೆಯಾ ಅನ್ನೋದನ್ನೆಲ್ಲ ಈಜೋಕೇಂತ ಹೋಗೋಕೆ ಮುಂಚೆ ಚೆನ್ನಾಗಿ ತಿಳ್ಕೊಂಡಿರಿ.

ನೀರಿನ ಉಷ್ಣತೆಯ ಮೇಲೂ ಕಣ್ಣಿರಬೇಕು!

ನೀರಿನ ಉಷ್ಣತೆಯ ಮೇಲೂ ಕಣ್ಣಿರಬೇಕು!

ತುಂಬಾ ಬಿಸಿಯಾಗಿರೋ ನೀರಲ್ಲಿ ಗರ್ಭಿಣಿಯರು ಈಜಾಡಿದ್ರೆ, ಅದು ಅವರ ದೇಹದ ಉಷ್ಣಾಂಶಾನಾ ಹೆಚ್ಚು ಮಾಡುತ್ತೆ. ಹಾಗಾಗಿ ತುಂಬಾ ಬೆಚ್ಚಗಿರೋ ನೀರಲ್ಲಿ ಈಜೋದು ಬೇಡ. ಗರ್ಭಿಣಿಯ ದೇಹದ ಉಷ್ಣತೆ 102.2°F (39°C) ಗಿಂತ ಜಾಸ್ತಿಯಾಗ್ಬಾರ್ದು. ಯಾಕಂದ್ರೆ ಆಕೆಯ ಹೊಟ್ಟೆಯಲ್ಲಿ ಮಗು ಬೆಳೀತಿದೆ. ತುಸು ಮೈಕೈ ಬೆಚ್ಚಗಾಗಿಸಿಕೊಳ್ಳಬೇಕೂಂತಾ ಗರ್ಭಿಣಿ ಬಿಸಿ ಟಬ್ ಗಳನ್ನ, ಬಿಸಿನೀರ ಬುಗ್ಗೆಯನ್ನ, ಅಥವಾ ತೀರ ಬೆಚ್ಚಗಿನ ಸ್ನಾನವನ್ನ ಮಾಡೋದೇ ಆಗಿದ್ರೆ, ಅದು ಜಾಗ್ರತೆಯ ಮಿತಿಯೊಳಗಿರಬೇಕು.

ಅದ್ರಲ್ಲೂ ವಿಶೇಷವಾಗಿ ಮೊದಲನೇ ತ್ರೈಮಾಸಿಕದಲ್ಲಿ, ಬಿಸಿನೀರಿನಲ್ಲಿ ಮುಳುಗಿ ದೇಹದ ಉಷ್ಣತೆ ಜಾಸ್ತಿಯಾದ್ರೆ, ಮಗು ಹುಟ್ಟೋ ಕಾಲಕ್ಕೆ, ಅರ್ಥಾತ್ ಪ್ರಸವದ ಸಮಯದಲ್ಲಿ ವ್ಯತ್ಯಾಸಗಳಾಗೋ ಸಾಧ್ಯತೆ ಇರುತ್ತೆ ಇಲ್ಲಾಂದ್ರೆ ಗರ್ಭಪಾತ ಆಗೋ ಸಾಧ್ಯತೆಯಂತೂ ತುಂಬಾನೇ ಹೆಚ್ಚಿರುತ್ತೆ. ಹಾಗಾಗಿ, ಈ ಸಲಹೆಯನ್ನ ಗಂಭೀರವಾಗಿ ತಗೊಳ್ಳೋದು ತುಂಬಾನೇ ಮುಖ್ಯ.

ಈಜೋಕೇ ಅಂತಾ ಹೊರಟಿರೋ ನೀರಿನ ಉಷ್ಣತೆ ಬಗ್ಗೆ ಹೇಳೋದಾದ್ರೆ ಅದು ಬಿಸಿ ಇದ್ರೆ ಮಾತ್ರ ತೊಂದರೆ ಅಂತೇನಲ್ಲ. ತೀರ ಚಳಿಯಿರೋವಾಗ ಕೆರೆ ನೀರಾಗ್ಲೀ, ಸಮುದ್ರದ ನೀರೇ ಆಗ್ಲೀ, ಸಾಮಾನ್ಯಕ್ಕಿಂತ ಜಾಸ್ತೀನೇ ತಂಪಾಗಿರುತ್ತೆ. ಇಂತಹ ತಂಪು ನೀರಲ್ಲಿ ಗರ್ಭಿಣಿ ಈಜಾಡಿದ್ರೆ ಆಕೆಯ ದೇಹಕ್ಕೆ ಧಕ್ಕೆಯಾಗಬಹುದು ಇಲ್ಲವೇ ಆಕೆಯ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ, ಹೊಟ್ಟೇಲೀ ಬೆಳೀತಾ ಇರೋ ಮಗು ದೃಷ್ಟಿಯಿಂದ, ಗರ್ಭಿಣಿಯಾಗಿರೋ ನೀವು ಯಾವ ನೀರಲ್ಲಿ ಈಜ್ಬೇಕೂ ಅಂತಾ ಹೊರಟಿದ್ದೀರೋ ಆ ನೀರು ಅತೀ ಬಿಸಿಯಾಗೂ ಇರ್ಬಾರ್ದು, ಅತೀ ತಣ್ಣಗೂ ಇರ್ಬಾರ್ದು.

ಈಜುಗಾರಿಕೆ ಇತಿಮಿತಿಯಲ್ಲಿರಲಿ

ಈಜುಗಾರಿಕೆ ಇತಿಮಿತಿಯಲ್ಲಿರಲಿ

ಒಂದು ವ್ಯಾಯಾಮದ ರೂಪದಲ್ಲಿ ಈಜಾಡೋದು ಗರ್ಭಿಣಿಯರಿಗೆ ನಿಜಕ್ಕೂ ಬಹಳ ಒಳ್ಳೆಯದು. ಯಾಕೇಂದ್ರೇ ಬಿದ್ದು ಪೆಟ್ಟಾಗೋ ಸಾಧ್ಯತೆ ತೀರಾ ಕಡಿಮೆ. ಜೊತೆಗೆ, ಗರ್ಭಿಣಿಯಾದಾಗ ಹೆಚ್ಚಿನ ಸ್ತ್ರೀಯರು ಅನುಭವಿಸೋ ನೋವು, ಯಾತನೆಗಳಿಗೆ ನೀರು ಹಾಯ್ ಎನಿಸೋ ಅನುಭವಾನಾ ಕೊಡುತ್ತೆ. ಆದ್ರೂನೂ, "ಅತಿಯಾದ್ರೆ ಅಮೃತಾನೂ ವಿಷಾನೇ" ಅನ್ನೋ ಗಾದೆ ಮಾತನ್ನ ಕೇಳಿದ್ದೀರಲ್ಲ, ಅದು ಈ ಈಜೋದಕ್ಕೂ ಅನ್ವಯಿಸುತ್ತೆ.

ಹೊಟ್ಟೆಯ ಮೇಲೆ ವಿಪರೀತ ಭಾರ ಬೀಳುತ್ತೆ ಅಂತಾದ್ರೆ, ಗರ್ಭಿಣಿ ಸ್ತ್ರೀ ಈಜಾಡೋದು ಸುರಕ್ಷಿತ ಅಲ್ಲ. ವಾಕರಿಕೆ ಬಂದಂತಾಗೋದು, ಮೈ ತುಂಬಾ ಬಿಸಿಯಾಗೋದು, ಯೋನಿಯಿಂದ ವಿಪರೀತ ಸ್ರಾವ, ರಕ್ತ ಒಸರೋದು, ಅಥವಾ ಹೊಟ್ಟೆ ಅಥವಾ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು; ಇಂಥವೆಲ್ಲ ಕಾಣಿಸಿಕೊಂಡ್ರೇ, ಈಜಾಡೋದನ್ನೂ ಒಳಗೊಂಡ ಹಾಗೆ, ಎಲ್ಲ ರೀತಿಯ ವ್ಯಾಯಾಮಗಳನ್ನ ಮಾಡೋದನ್ನ ಗರ್ಭಿಣಿ ಸ್ತ್ರೀಯರು ನಿಲ್ಲಿಸಬೇಕು.

ಒಂದು ಬಾರಿಗೆ ಸುಮಾರು ಅರ್ಧ ಘಂಟೆಯ ಕಾಲ ಈಜಾಡಿ. ಹೀಗೆ ವಾರದಲ್ಲಿ ಮೂರರಿಂದ ಐದು ಬಾರಿ ಅರ್ಧರ್ಧ ಘಂಟೆಯ ಕಾಲ ಈಜಾಡಿದರೆ ಸಾಕು. ಈಜಿಗೆ ನೀವು ಹೊಸಬರೇನಾದರೂ ಆಗಿದ್ದಲ್ಲಿ, ನಿಮ್ಮ ದೇಹದ ಸಾಮರ್ಥ್ಯಕ್ಕೆ ತಕ್ಕಹಾಗೆ ಸುರಕ್ಷಿತ, ನಿಯಮಿತ ಅಭ್ಯಾಸವನ್ನ ಹೇಳ್ಕೊಡೋದಕ್ಕೆ ನಿಮ್ಮ ತರಬೇತುದಾರರಲ್ಲಿ ಕೇಳಿಕೊಳ್ಳಿ. ಹೀಗೆ ಮಾಡಿದ್ರೆ, ಹೊಟ್ಟೆ ಮೇಲೆ ವಿಪರೀತ ಒತ್ತಡ ಬೀಳೋದು ತಪ್ಪುತ್ತೆ.

ಅಧ್ಯಯನದ ಪ್ರಕಾರ, ಗರ್ಭಿಣಿಯಾದ ಆರಂಭದಲ್ಲಿ ಮತ್ತು ಮಧ್ಯಮಾವಧಿಯಲ್ಲಿ, ಕೆರೆ ನೀರಲ್ಲಿ ಈಜಾಡಿದ ಗರ್ಭಿಣಿಯರನ್ನ, ಯಾವುದೇ ವ್ಯಾಯಾಮವನ್ನೇ ಮಾಡ್ದೇ ಇರೋ ಗರ್ಭಿಣಿಯರಿಗೆ ಹೋಲಿಸಿದಾಗ, ಅವಧಿಪೂರ್ವ ಪ್ರಸವದ ಅಥವಾ ಮಗುವಿನಲ್ಲಿ ಜನನ ದೋಷಗಳ ಅಪಾಯ ಸ್ವಲ್ಪಮಟ್ಟಿಗೆ ಕಡಿಮೆ ಇದ್ದಿದ್ದು ಕಂಡುಬಂತು.

ಗರ್ಭಿಣಿಯರು ಈಜಾಡೋದ್ರಿಂದ ಆಗೋ ಪ್ರಯೋಜನಗಳು ಏನೇನು ?

ಗರ್ಭಿಣಿಯರು ಈಜಾಡೋದ್ರಿಂದ ಆಗೋ ಪ್ರಯೋಜನಗಳು ಏನೇನು ?

ಒಳ್ಳೇ ನಿದ್ದೆ ಬರುತ್ತೆ! ಬೇರೆ ಬೇರೆ ಥರದ ಅನೇಕ ಏರೋಬಿಕ್ ವ್ಯಾಯಾಮಗಳ ಹಾಗೆ, ಕೆರೆಯಲ್ಲಿ ಒಂದಷ್ಟು ಹೊತ್ತು ಈಜಾಡೋದ್ರಿಂದಾನೂ ಗರ್ಭಿಣಿಗೆ ನಿದ್ದೆ ಇನ್ನಷ್ಟು ಚೆನ್ನಾಗಿ ಬರುತ್ತೆ. ಗರ್ಭಿಣಿಯಾಗಿರೋ ಬೇರೆ ಬೇರೆ ಅವಧಿಗಳಲ್ಲಿ ನಿದ್ದೆಗೆ ಜಾರೋದು ಕಷ್ಟ ಆಗಿರುತ್ತಾದ್ರಿಂದ, ಈಜಿನ ಈ ಪ್ರಯೋಜನಾನಾ ನಿರಾಕರಿಸೋ ಹಾಗಿಲ್ಲ.

ಗರ್ಭಿಣಿಯಾದಾಗ ಮೈ ತೂಕ ಜಾಸ್ತಿಯಾಗೋದು ತುಂಬಾನೇ ಸಹಜ, ಜೊತೆಯಲ್ಲಿ ಮೈಕೈ ಊದ್ಕೊಳ್ಳೋದೂ ಇರುತ್ತೆ. ಇದರಿಂದ ಗರ್ಭಿಣಿಗೆ ನೋವು, ಕಿರಿಕಿರಿ ಉಂಟಾಗುತ್ತೆ. ಇಂತಹ ನೋವು, ಕಿರಿಕಿರಿಗಳಿಗೆ ನೀರು ತುಂಬಾ ಆರಾಮ ಕೊಡುತ್ತೆ. ಮಗೂನಾ ಹಡೆಯೋ ಸಮಯದಲ್ಲೂ, ಶವರ್, ಬಾತ್, ಅಥವಾ ನೀರಿನ ಕೆರೆಯ ಬಳಕೆ ಪ್ರಸವದ ವೇಳೆ ಗರ್ಭಿಣಿಗಾಗೋ ನೋವನ್ನ ತಗ್ಗಿಸುತ್ತೆ.

ಗರ್ಭಿಣಿ ಈಜಾಡೋದ್ರಿಂದ, ಆಕೆಯ ಹೊಟ್ಟೇಲಿರೋ ಮಗುವಿನ ನರವ್ಯೂಹಕ್ಕೂ ಸಹಾಯ ಆಗುತ್ತೆ. ಪ್ರಯೋಗವೊಂದರಲ್ಲಿ, ಗರ್ಭಿಣಿ ಇಲಿಯೊಂದು ಈಜಾಡಿದಾಗ, ಅದರ ಗರ್ಭಸ್ಥ ಮರಿಯ ಮೆದುಳಿನ ಬೆಳವಣಿಗೆಯನ್ನ ಈಜು ಸಕಾರಾತ್ಮಕವಾಗಿ ಬದಲಾಯಿಸಿತ್ತು. ಹಾಗಾಗಿ ಗರ್ಭಿಣಿ ಈಜೋದ್ರಿಂದ ಆಕೆಯ ಗರ್ಭದಲ್ಲಿರೋ ಮಗೂನಾ ಹಿಪೋಕ್ಸಿಯಾ-ಇಸ್ಕೇಮಿಯಾದಂತಹ ನರರೋಗದಿಂದ ರಕ್ಷಿಸಿದ ಹಾಗಾಗುತ್ತೆ.

ಗರ್ಭಿಣಿಯರು ಎಲ್ಲ ಮೂರು ತ್ರೈಮಾಸಿಕಗಳಲ್ಲೂ ಈಜನ್ನ ಸುರಕ್ಷಿತವೆಂದೇ ಪರಿಗಣಿಸಬಹುದು. ಹಾಗಾಗಿ, ಗರ್ಭಿಣಿಯಾದ ಬಳಿಕ ಯಾವುದೋ ಒಂದು ಘಟ್ಟವನ್ನ ತಲುಪಿದ ಬಳಿಕ, ಈಜೋದು ಸರಿಯೋ ತಪ್ಪೋ ಅಂತಾ ಯೋಚ್ನೆ ಮಾಡೋದೇನೂ ಬೇಡ.

ಗರ್ಭಿಣಿಯರ ಸುರಕ್ಷಿತ ಈಜಾಟಕ್ಕೆ ಇದೋ ನಮ್ಮ ಸಲಹೆಗಳು:

ಗರ್ಭಿಣಿಯರ ಸುರಕ್ಷಿತ ಈಜಾಟಕ್ಕೆ ಇದೋ ನಮ್ಮ ಸಲಹೆಗಳು:

ನಿಮ್ಮ ಮೈಗೆ ಸರಿಯಾಗಿ ಒಪ್ಪುವ ಅಳತೆಯ ಈಜುಡುಗೆಯನ್ನ ಧರಿಸಿ. ಗರ್ಭಿಣಿಯಾದ ನಂತರ, ಮುಂದಿನ ದಿನಗಳಲ್ಲಿ ನಿಮ್ಮ ಮೈಮಾಟ ಬದಲಾಗುತ್ತೆ. ಹಾಗಾಗಿ, ನಿಮ್ಮ ಮೈಮಾಟಕ್ಕೆ ಹೊಂದಿಕೆಯಾಗ್ದೇ ಇರೋವಂತ ಯಾವ್ದೋ ಒಂದು ಈಜುಡುಗೇನಾ ಧರಿಸಿಕೊಂಡು ಈಜಾಡೋದು ಖಂಡಿತ ಸರಿಯಲ್ಲ, ಆದ್ದರಿಂದ ನಿಮ್ಮ ಮೈಮಾಟದ ಬದಲಾವಣೆಗೆ ತಕ್ಕ ಹಾಗೆ ನಿಮ್ಮ ಈಜುಡುಗೆಯನ್ನೂ ಬದಲಾಯಿಸ್ಕೋಬೇಕು.

ನದಿ, ಕೆರೆ, ಹೀಗೆ ನೀವು ಎಲ್ಲೇ ಈಜೋದಾಗಿರ್ಲೀ, ಅವುಗಳ ದಡ, ಅಥವಾ ಮೆಟ್ಟಿಲುಗಳಲ್ಲಿ ಹೆಜ್ಜೆಯೂರುವಾಗ ಮೈಯೆಲ್ಲ ಕಣ್ಣಾಗಿರಲಿ. ಯಾಕೇಂದ್ರೆ, ಹೆಚ್ಚಿನ ನದಿ, ಕೆರೆಗಳ ದಡಗಳು ಜಾರೋದು ಜಾಸ್ತಿ. ಹಾಗೆ ಜಾರಿಬಿದ್ದು ಹೊಟ್ಟೆ, ಮೈಕೈಗೆ ಪೆಟ್ಟಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಯಾವುದೇ ಪೂಲ್ ಲಾಕರ್ ರೂಮ್ ಗಳಲ್ಲಿ ಜಾಗ್ರತೆಯಿಂದ ಹೆಜ್ಜೆ ಹಾಕಿ. ಯಾಕೆಂದ್ರೆ, ಅಲ್ಲಿನ ನೆಲ ಒದ್ದೆಯಾಗಿದ್ದು ಜಾರೋದು ಹೆಚ್ಚು.

ಬಿಸಿಲಿನಿಂದ ತ್ವಚೆ ಕಪ್ಪಗಾಗೋದನ್ನ ತಡೆಯೋಕೆ ಕನಿಷ್ಟ ಎಸ್.ಪಿ.ಎಫ಼್. 30 ರ ಬ್ರಾಡ್-ಸ್ಪೆಕ್ಟ್ರಮ್ ಸನ್-ಸ್ಕ್ರೀನ್ ಅನ್ನ ಬಳಸಿ. ಆಗಾಗ್ಗೆ ಸನ್-ಸ್ಕ್ರೀನ್ ಅನ್ನ ಪುನ: ಪುನ: ಹಚ್ಚಿಕೊಳ್ತಾ ಇರಿ. ಹೊರಾಂಗಣದ ಈಜುಕೊಳಗಳಲ್ಲಿ ಬೆಳಗ್ಗೆ 10 ಘಂಟೆಯಿಂದ ಸಂಜೆ 4 ಘಂಟೆಯ ಈಜೋದು ಬೇಡ. ಯಾಕೆಂದ್ರೆ ಈ ಅವಧಿಯಲ್ಲಿ ಬಿಸಿಲು ಸಿಕ್ಕಾಪಟ್ಟೆ ಇರುತ್ತೆ.

ದೇಹ ಯಾವಾಗಲೂ ನೀರಿನಂಶಾನಾ ಕಳ್ಕೊಳ್ಳೋಕೆ ಬಿಡ್ಬೇಡಿ. ನಿಮಗೆ ಬಾಯಾರಿಕೆ ಆಗ್ದಿದ್ರೂ ಕೂಡ, ಈಜೋವಾಗ ನಿಮ್ಮ ದೇಹ ನೀರಿನಂಶಾನಾ ಕಳ್ಕೊಳ್ಳೋ ಸಾಧ್ಯತೆ ಇರುತ್ತೆ. ಈಜ್ತಿರೋವಾಗ, ನೀರಿನ ಸಂಪರ್ಕದಲ್ಲಿರೋ ಮೈ ತಂಪಾಗಿರುತ್ತಾದ್ದರಿಂದ, "ನನ್ನ ದೇಹದೊಳಗೆ ಸಾಕಷ್ಟು ನೀರಿನಂಶ ಇದೆ" ಅಂತಾ ನೀವು ಭ್ರಮೆಗೀಡಾಗೋ ಸಾಧ್ಯತೇನೇ ಜಾಸ್ತಿ. ಆದರೆ, ನಡುನಡುವೆ ನೀವು ಈಜುಕೊಳದಿಂದ ಮೇಲೆ ಬಂದು ಸಾಕಷ್ಟು ನೀರನ್ನ ಹೊಟ್ಟೆಯೊಳಗೂ ಇಳಿಸ್ಕೋಬೇಕು. ಮದ್ಯಸೇವನೆ ಮಾಡ್ಬೇಡಿ, ಕೆಫೀನ್ ಅಂಶವನ್ನ ಜಾಸ್ತಿ ಒಳಗೊಂಡಿರೋ ಪಾನೀಯಗಳನ್ನ ಕುಡಿಯಬೇಡಿ. ಅವು ದೇಹದ ಜಲಾಂಶಾನಾ ಹಿಂಗಿಸಿಬಿಡುತ್ವೆ.

ನೀವು ಈಜಾಡುವಾಗ ಜೊತೆಗೆ ಯಾರಾದರೊಬ್ಬರಿರಲಿ. ಜೀವರಕ್ಷಕ ವ್ಯಕ್ತಿಗಳಾರೂ ಇಲ್ದೇ ಇರೋ ಜಾಗದಲ್ಲಿ ನೀವು ಈಜ್ತಿದ್ದೀರಿ ಅಂತಾದ್ರೆ, ನಿಮ್ಮ ಗೆಳೆತಿಯನ್ನೂ ಸಂಗಡ ಕರೆತನ್ನಿ....

English summary

Swimming During Pregnancy - Benefits, Tips, Precautions in Kannada

Here Are Swimming During Pregnancy - Benefits, Tips, Precautions read on,
X
Desktop Bottom Promotion