For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯ ಹೊಟ್ಟೆ ಗಾತ್ರಕ್ಕೂ ಮಗುವಿನ ತೂಕಕ್ಕೂ ಸಂಬಂಧವೇ ಇಲ್ಲ

|

ಗರ್ಭಾವಸ್ಥೆಯ ಅಷ್ಟೂ ದಿನಗಳಲ್ಲಿ ನಿಮ್ಮ ಒಡಲಲ್ಲಿ ಬೆಳೆಯುತ್ತಿರುವ ಮಗು ನಿಮ್ಮ ಹೊಟ್ಟೆಯ ಗಾತ್ರ ಹೆಚ್ಚಿಸುತ್ತಾ ಹೆರಿಗೆಯ ದಿನ ಸಮೀಪಿಸುತ್ತಿದ್ದಂತೆ ನಿಮ್ಮೊಂದಿಗೆ ಭಾವನಾ ಸಂಬಂಧವನ್ನು ಪಡೆದು ಬಿಟ್ಟಿರುತ್ತದೆ. ಎರಡನೇ ತ್ರೈಮಾಸಿಕದ ಸಮಯದಲ್ಲಿ ಗಮನಕ್ಕೆ ಬರುವಷ್ಟು ದೊಡ್ಡದಾಗಿರುವ ನಿಮ್ಮ ಹೊಟ್ಟೆ ಮೂರನೆಯ ತ್ರೈಮಾಸಿಕದ ಸಮಯದಲ್ಲಿ ಇನ್ನಷ್ಟು ಮುಂದೆ ಬಂದು ನಿಮಗೆ ನಿಲ್ಲುವಾಗ ಮತ್ತು ನಡೆಯುವಾಗ ಅನಿವಾರ್ಯವಾಗಿ ಕೊಂಚ ಹಿಂದಕ್ಕೆ ಬಾಗುವುದನ್ನು ಅನಿವಾರ್ಯವಾಗಿಸುತ್ತದೆ.

Bump Size And Baby Size: What You Need To Know

ಸಾಮಾನ್ಯ ನಂಬಿಕೆ ಎಂದರೆ ನಿಮ್ಮ ಉಬ್ಬಿರುವ ಹೊಟ್ಟೆಯ ಪರಿಪೂರ್ಣ ಭಾಗವನ್ನು ಮಗುವಿನ ದೇಹವೇ ಆವರಿಸಿಕೊಂಡಿದೆ ಎಂಬುದಾಗಿದೆ. ನೀವು ಸಹಾ ಹೀಗೇ ತಿಳಿದಿರಬಹುದು. ವಾಸ್ತವದಲ್ಲಿ ಇದು ನಿಜವಲ್ಲ! ನಿಮ್ಮ ಉಬ್ಬಿರುವ ಹೊಟ್ಟೆಯ ಗಾತ್ರವೂ ನಿಮ್ಮ ಒಡಲಲ್ಲಿ ಬೆಳೆಯುತ್ತಿರುವ ಮಗುವಿನ ದೇಹದ ಗಾತ್ರವೂ ಏಕಸಮಾನವಲ್ಲ.

ಏಕೆಂದರೆ ಉಬ್ಬಿರುವ ಹೊಟ್ಟೆಗೆ ಮಗುವಿನ ದೇಹ ಮಾತ್ರವಲ್ಲ, ಮಗುವಿಗೆ ಪೋಷಣೆ ನೀಡುವ ಇತರ ಹಲವಾರು ವ್ಯವಸ್ಥೆಗಳೂ ಅಡಕಗೊಂಡಿರುತ್ತವೆ. ಇವುಗಳನ್ನು ವೈದ್ಯ ವಿಜ್ಞಾನ ಆರು ವಿಧಗಳಾಗಿ ವಿಂಗಡಿಸಿದೆ. ಗರ್ಭವತಿಯ ಪರೀಕ್ಷೆ ನಡೆಸುವ ವೈದ್ಯರು ಈ ಆರು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಹಾಗಾಗಿ ಈ ಬಗ್ಗೆ ನೀವು ಅರಿತುಕೊಂಡಿರುವುದು ಅವಶ್ಯವಾಗಿದೆ.

1. ಎರಡನೇ ಮಗುವಾಗಿದ್ದರೆ

1. ಎರಡನೇ ಮಗುವಾಗಿದ್ದರೆ

ನಿಮ್ಮ ಮೊದಲ ಗರ್ಭಾವಸ್ಥೆಯಲ್ಲಿ ನಿಮ್ಮ ಹೊಟ್ಟೆಯ ಸ್ನಾಯುಗಳು ಗರ್ಭಕೋಶವನ್ನು ಹಿಡಿದಿಟ್ಟಿರಲು ಹೆಚ್ಚು ಬಲಯುತವಾಗಿರುತ್ತವೆ. ಮೊದಲ ಹೆರಿಗೆಯ ಬಳಿಕ ಈ ಸ್ನಾಯುಗಳು ತಮ್ಮ ಮೊದಲ ಸೆಳೆತವನ್ನು ಕೊಂಚ ಕಳೆದುಕೊಂಡಿದ್ದು ಎರಡನೆಯ ಗರ್ಭಾವಸ್ಥೆಯಲ್ಲಿ ಹಿಂದಿನಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಮೊದಲ ಗರ್ಭಾವಸ್ಥೆಗಿಂತಲೂ ನಂತರದ ಗರ್ಭಾವಸ್ಥೆಗಳ ಹೊಟ್ಟೆಯ ಗಾತ್ರ ದೊಡ್ಡದಾಗಿರುತ್ತದೆ. ಹಾಗಾಗಿ, ಮಹಿಳೆಯ ಎಷ್ಟನೆಯ ಮಗು ಎಂಬ ಮಾಹಿತಿ ವೈದ್ಯರಿಗೆ ಅತಿ ಅಗತ್ಯವಾಗಿರುತ್ತದೆ.

2. ಆಮ್ನಿನಿಯೋಟಿಕ್ ದ್ರವದ ಪ್ರಮಾಣ

ಗರ್ಭಾಶಯದಲ್ಲಿ ಮಗುವನ್ನು ಒಂದು ಬಗೆಯ ಸ್ನಿಗ್ಧ ದ್ರವ ಪೂರ್ಣವಾಗಿ ತನ್ನಲ್ಲಿ ಮುಳುಗಿಸಿಟ್ಟುಕೊಂಡಿರುತ್ತದೆ. ಈ ದ್ರವವೇ ಆಮ್ನಿಯಾಟಿಕ್ ದ್ರವ (amniotic fluid). ಕನ್ನಡ ಭಾಷೆಯಲ್ಲಿ ಈ ದ್ರವಕ್ಕೆ ಸೂಕ್ತ ಪದ ಇದ್ದಂತಿಲ್ಲ. ಫಲವತ್ತಾದ ಅಂಡಾಣು ಗರ್ಭಾಶಯದೊಳಗೆ ಬಂದು ಗರ್ಭಕೋಶದ ಒಳಪದರ (ಪ್ಲಾಸೆಂಟಾ ಅಥವಾ ಮಾಸು) ದಲ್ಲಿ ಆಶ್ರಯ ಪಡೆದ ಕ್ಷಣದಿಂದಲೇ ಈ ದ್ರವ ಗರ್ಭಕೋಶದೊಳಗೆ ಸಂಗ್ರಹವಾಗತೊಡಗುತ್ತದೆ.

ಮಗುವಿನ ಬೆಳವಣಿಗೆಯ ಹಂತದೊಂದಿಗೇ ಈ ದ್ರವದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ, ಉಬ್ಬಿರುವ ಹೊಟ್ಟೆಯಲ್ಲಿರುವುದು ಬಹುತೇಕವಾಗಿ ಈ ದ್ರವದ ಪ್ರಮಾಣ! ಈ ದ್ರವ ತಾಯಿಯ ದೇಹದ ತಾಪಮಾನವನ್ನೇ ಹೊಂದಿದ್ದು ಮಗುವಿನ ಬೆಳವಣಿಗೆಗೆ ಹಲವು ವಿಧದಲ್ಲಿ ನೆರವಾಗುತ್ತದೆ. ಮಗುವಿನ ಶ್ವಾಸಕೋಶದಿಂದ ಹೊರಬರುವ ಕಲ್ಮಶಗಳು ಹಾಗೂ ದೇಹದಿಂದ ವಿಸರ್ಜಿಲ್ಪಡುವ ಕಲ್ಮಶಗಳೂ ಈ ದ್ರವದಲ್ಲಿ ಕರಗುತ್ತಾ ಹೋಗುತ್ತವೆ.

ಹಾಗಾಗಿ ಪ್ರಾರಂಭಿಕ ದಿನಗಳಲ್ಲಿ ಪಾರದರ್ಶಕವಾಗಿರುವ ಈ ದ್ರವ ದಿನಗಳೆದಂತೆ ಹೆಚ್ಚು ಹೆಚ್ಚು ಹಳದಿ ಬಣ್ಣ ಪಡೆಯುತ್ತಾ ಹೋಗುತ್ತದೆ. ಹೆರಿಗೆಯ ಸಮಯದಲ್ಲಿ ಸರಾಗವಾಗಿ ಮಗು ಹೊರಬರಲೂ ಈ ದ್ರವ ಜಾರುಕದಂತೆ ಕಾರ್ಯನಿರ್ವಹಿಸುತ್ತದೆ.

3. ಗರ್ಭವತಿಯ ಎತ್ತರ

3. ಗರ್ಭವತಿಯ ಎತ್ತರ

ಗರ್ಭವತಿಯ ಎತ್ತರವೂ ಆಕೆಯ ಹೊಟ್ಟೆಯ ಗಾತ್ರದ ಮೇಲೆ ಪ್ರಭಾವ ಬೀರುತ್ತದೆ. ಎತ್ತರ ಹೆಚ್ಚಿದ್ದರೆ ಹೆಚ್ಚಿನ ಸ್ಥಳಾವಕಾಶ ಇರುವ ಕಾರಣ ಆಕೆಯ ಗರ್ಭಕೋಶ ಮುಂದೆ ಬರುವ ಬದಲು ಕೊಂಚ ಎತ್ತರಕ್ಕೆ ಏರಲು ಅವಕಾಶವಿರುತ್ತದೆ. ಹಾಗಾಗಿ ಎತ್ತರ ಇರುವ ಗರ್ಭವತಿಯರ ಹೊಟ್ಟೆ ಕುಳ್ಳಗಿರುವ ಗರ್ಭವತಿಯರಷ್ಟು ಮುಂದೆ ಬಂದಿರುವುದಿಲ್ಲ.

ಕುಳ್ಳಗಿನ ಮಹಿಳೆಯರ ಸೊಂಟದ ಮೂಳೆ ಮತ್ತು ಎದೆಗೂಡಿನ ಅತಿ ಕೆಳಗಿನ ಮೂಳೆಗಳ ನಡುವೆ ಎತ್ತರ ಮಹಿಳೆಗಿಂತಲೂ ಕಡಿಮೆ ಸ್ಥಳಾವಕಾಶ ಇರುವುದರಿಂದ ಅನಿವಾರ್ಯವಾಗಿ ಗರ್ಭಕೋಶ ಮುಂದಕ್ಕೇ ದೂಡಬೇಕಾಗುತ್ತದೆ. ಹಾಗಾಗಿ ಕುಳ್ಳಗಿನ ಮಹಿಳೆಯ ಹೊಟ್ಟೆ ಎತ್ತರದ ಮಹಿಳೆಯ ಗರ್ಭಕ್ಕಿಂತಲೂ ಹೆಚ್ಚು ದೊಡ್ಡದಾಗಿ ಕಾಣಿಸುತ್ತದೆ.

4. ಮಗುವಿನ ಸ್ಥಾನ

ಗರ್ಭದಲ್ಲಿರುವ ಮಗು ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕೊಂಚ ಚಲನೆಯನ್ನು ನೀಡುತ್ತದಾದರೂ ಇದರ ಅನುಭವ ಗರ್ಭವತಿಗೆ ಸಾಮಾನ್ಯವಾಗಿ ಏಳನೆಯ ತಿಂಗಳ ಬಳಿಕವೇ ಅನುಭವಕ್ಕೆ ಬರುತ್ತದೆ. ಸಾಮಾನ್ಯವಾಗಿ ಏಳನೆಯ ತಿಂಗಳಲ್ಲಿ ಮಗುವಿನ ತಲೆ ಕೆಳಗಿನ ಸ್ಥಾನಕ್ಕೆ ಬರುವಂತೆ ದೇಹ ತಿರುಗುತ್ತದೆ. ಹಾಗಾಗಿ ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಮಗುವಿನ ಸ್ಥಾನ ಬದಲಾಗುತ್ತಾ ಇರುತ್ತದೆ. ಈ ಬದಲಾವಣೆಗೆ ತಕ್ಕಂತೆ ಗರ್ಭವತಿಯ ಹೊಟ್ಟೆಯ ಗಾತ್ರವೂ ಬದಲಾವಣೆ ಪಡೆಯುತ್ತಿರುತ್ತದೆ.

5. ಉಳಿದ ಅಂಗಗಳಿಗೆ ಅಗತ್ಯವಿರುವ ಸ್ಥಳಾವಕಾಶ

5. ಉಳಿದ ಅಂಗಗಳಿಗೆ ಅಗತ್ಯವಿರುವ ಸ್ಥಳಾವಕಾಶ

ಗರ್ಭಕೋಶ ಬೆಳೆಯುತ್ತಿದ್ದಂತೆಯೇ ಹೊಟ್ಟೆಯ ಹೆಚ್ಚಿನ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಮೂಲಕ ಗರ್ಭವತಿಯ ಇತರ ಅಂಗಗಳಿಗೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಆದರೆ ಇವುಗಳೂ ತಮ್ಮ ಕೆಲಸವನ್ನು ನಿರ್ವಹಿಸಲೇಬೇಕಲ್ಲ, ಹಾಗಾಗಿ ಉಳಿದ ಎಲ್ಲಾ ಅಂಗಗಳಿಗೆ ಅಗತ್ಯವಿರುವ ಸ್ಥಳಾವಕಾಶಾವನ್ನು ಕೊಟ್ಟು ಗರ್ಭಕೋಶ ಆದಷ್ಟೂ ಮುಂದಕ್ಕೆ ಬರುತ್ತದೆ. ಈ ಅಂಗಗಳೆಲ್ಲಾ ಗರ್ಭಕೋಶದ ಹಿಂದೆ ಅಥವಾ ಪಕ್ಕಕ್ಕೆ ಸರಿದು ತಮ್ಮ ಕಾರ್ಯವನ್ನು ನಿರ್ವಹಿಸತೊಡಗುತ್ತವೆ. ಈ ಸ್ಥಾನಪಲ್ಲಟವೂ ಹೊಟ್ಟೆಯ ಗಾತ್ರವನ್ನು ಬದಲಿಸಬಹುದು.

6. ನಿಮ್ಮ ಮಗುವಿನ ದೇಹದ ಗಾತ್ರ

6. ನಿಮ್ಮ ಮಗುವಿನ ದೇಹದ ಗಾತ್ರ

ಗರ್ಭಕೋಶದಲ್ಲಿರುವ ಮಗುವಿನ ನಿಜವಾದ ಗಾತ್ರ ನೀವು ಮತ್ತು ಎಲ್ಲರೂ ಎಣಿಸಿದಂತೆ ಮುಂದೆ ಬಂದಿರುವ ಹೊಟ್ಟೆಯ ಗಾತ್ರಕ್ಕೆ, ಸ್ವಾಭಾವಿಕವಾಗಿ, ನೇರವಾದ ಸಂಬಂಧ ಹೊಂದಿದೆ. ಮಗುವಿನ ಗಾತ್ರ ತಂದೆ ಮತ್ತು ತಾಯಿಯರ ವಂಶವಾಹಿನಿಯನ್ನು ಅವಲಂಬಿಸಿರುವ ಕಾರಣ ಒಂದು ವೇಳೆ ತಂದೆ ತಾಯಿ ಇಬ್ಬರೂ ಎತ್ತರವಾಗಿದ್ದರೆ ಮಗು ಸಹಾ ಕೊಂಚ ಹೆಚ್ಚಿನ ಎತ್ತರವನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಇಬ್ಬರೂ ಕುಳ್ಳಕ್ಕಿದ್ದರೆ ಮಗುವಿನ ದೇಹವೂ ಕೊಂಚ ಚಿಕ್ಕದಿರಬಹುದು.

ಹಾಗಾಗಿ ಗರ್ಭವತಿಯ ಹೊಟ್ಟೆಯ ಗಾತ್ರಕ್ಕೂ ಮಗುವಿನ ಗಾತ್ರಕ್ಕೂ ನೇರವಾಗಿ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಎಂದಿಗೂ ನಿಮ್ಮ ಹೊಟ್ಟೆಯ ಗಾತ್ರವನ್ನು ಇನ್ನೊಬ್ಬರಿಗೆ ಹೋಲಿಸದಿರಿ. ನಿಮ್ಮ ಹೊಟ್ಟೆಯ ಗಾತ್ರಕ್ಕೆ ಮೇಲಿನ ಆರು ಕಾರಣಗಳ ಹೊರತಾಗಿ ಇತರ ಕಾರಣಗಳೂ, ನಿಮ್ಮ ಆರೋಗ್ಯದ ಪ್ರಭಾವವೂ ಇರಬಹುದು.

ನಿಮಗೆ ಚಿಕಿತ್ಸೆ ನೀಡುವ ವೈದ್ಯರು ಈ ವಿಷಯಗಳನ್ನೆಲ್ಲಾ ಪರಿಗಣಿಸಿಯೇ ನಿಮಗೆ ಸೂಕ್ತ ಮಾಹಿತಿ ನೀಡುತ್ತಾರೆ. ಆದ್ದರಿಂದ ನೀವು ನಿರಾಳರಾಗಿದ್ದು ನಿಮ್ಮ ವೈದ್ಯರು ಹಾಗೂ ದಾದಿಯರು ನೀಡುವ ಸಲಹೆ, ಔಷಧಿಗಳನ್ನು ಸರಿಯಾಗಿ ಪಾಲಿಸಬೇಕು ಮತ್ತು ಮುಖ್ಯವಾಗಿ ಗರ್ಭಾವಸ್ಥೆಯ ಅಷ್ಟೂ ದಿನಗಳಲ್ಲಿ ನೀವು ಮಾನಸಿಕವಾಗಿ ನಿರಾಳರಾಗಿರಬೇಕು.

English summary

Bump Size And Baby Size: What You Need To Know

Here we are discussing about bump Size And Baby Size: What You Need To Know. be assured your bump size is not always equal to your babyrsquo;s size. Read more.
X
Desktop Bottom Promotion