For Quick Alerts
ALLOW NOTIFICATIONS  
For Daily Alerts

ಪ್ರಸವ ನಂತರ ಬಾಣಂತಿಯರನ್ನು ಸಾಮಾನ್ಯವಾಗಿ ಕಾಡುವ ಗಂಭೀರ ಸಮಸ್ಯೆಗಳಿವು

|

ಗರ್ಭಾವಸ್ಥೆ ಹೇಳಲು ಒಂಥರಾ ಸುಂದರ ಅನುಭವ, ಜೊತೆಗೆ ಪ್ರಯಾಸದಾಯಕ ಅನುಭವವೂ ಹೌದು. ಹೆರಿಗೆಯಾದ ಮೇಲಂತೂ ಇನ್ನಷ್ಟು ಅನುಭವಗಳು ಹೆಣ್ಣಿಗೆ ಆಗತೊಡಗುತ್ತದೆ. ಹೆರಿಗೆಯಾದ ಮೇಲೆ ಬೆನ್ನು ಸೊಂಟ ನೋವಿನ ಜೊತೆಗೆ ಆಗತಾನೆ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟ ನವಜಾತ ಶಿಶುವನ್ನು ನೋಡಿಕೊಳ್ಳುವ ಜವಾಬ್ದಾರಿ, ಎದೆಹಾಲುಣಿಸಲು ಸಮಸ್ಯೆಗಳು, ನಿದ್ದೆ ಕೆಡುವುದು ಹೀಗೆ ಒಂದೊಂದೇ ಸಮಸ್ಯೆಗಳು ಆರಂಭವಾಗುತ್ತೆ.

ಆದರೆ ಮಗುವಿನೊಂದಿಗೆ ಬಾಣಂತಿಯ ಆರೋಗ್ಯವೂ ಮುಖ್ಯ ಎನ್ನುವುದನ್ನು ಮಗುವಿನ ತಾಯಿ ಮಾತ್ರವಲ್ಲ, ಆಕೆಯನ್ನು ನೋಡಿಕೊಳ್ಳುವವರೂ ನೆನಪಿಟ್ಟುಕೊಳ್ಳಬೇಕು. ಹೆರಿಯಾದ ನಂತರದಲ್ಲಿ ಬಾಣಂತಿಯರಲ್ಲಿ ಕೆಲವೊಂದು ಸಮಸ್ಯೆಗಳು ಕಂಡು ಬರುತ್ತೆ, ಅವು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ..

1. ಮೂತ್ರದಲ್ಲಿ ನಿಯಂತ್ರಣವಿಲ್ಲದಿರುವುದು

1. ಮೂತ್ರದಲ್ಲಿ ನಿಯಂತ್ರಣವಿಲ್ಲದಿರುವುದು

ಹೆರಿಗೆಯಾದ ನಂತರ ಪೆಲ್ವಿಕ್‌ ಸ್ನಾಯುಗಳು ಅಂದರೆ ಶ್ರೋಣಿಯ ಸ್ನಾಯುಗಳು ಮತ್ತು ಅಂಗಾಂಶಗಳಾದ ಮೂತ್ರಕೋಶ, ಕರುಳು ಮತ್ತು ಗರ್ಭಾಶಯವು ವಿಸ್ತರಿಸಲ್ಪಡುತ್ತದೆ. ಸ್ವಲ್ಪ ಅವಧಿಯವರೆಗೂ ಅದು ಹಾಗೆಯೇ ಸಡಿಲವಾಗಿಯೇ ಇರುವುದರಿಂದ ಮೂತ್ರಕೋಶವು ದುರ್ಬಲಗೊಳ್ಳುತ್ತದೆ ಮತ್ತು ಮೂತ್ರದಲ್ಲಿ ನಿಯಂತ್ರಣವಿರದು. ಸೀನುವಾಗ, ಕೆಮ್ಮುವಾಗ ಮೂತ್ರ ಸೋರಿಕೆಯಾಗುತ್ತದೆ. ಹೆರಿಗೆಯಾದ ನಂತರದಲ್ಲಿ ಈ ಸಮಸ್ಯೆ ಸಾಮಾನ್ಯ. ಹೀಗಿದ್ದಾಗ ವೈದ್ಯರ ಸಲಹೆ ಪಡೆದು ಪೆಲ್ವಿಕ್‌ ಸ್ನಾಯುಗಳನ್ನು ಬಲಪಡಿಸುವಂತಹ ವ್ಯಾಯಾಮವನ್ನು ಮಾಡಬೇಕು.

2. ಸ್ತನಗಳಲ್ಲಿ ನೋವು

2. ಸ್ತನಗಳಲ್ಲಿ ನೋವು

ಹೆರಿಯಾದ ನಂತರ ಮಗುವಿಗೆ ಹಾಲುಡಿಸುವುದು ಸಾಮಾನ್ಯ ಪ್ರಕ್ರಿಯೆ. ಮೊದಲ ಬಾರಿ ತಾಯಿಯಾದವಳಿಗೆ ಇದು ಹೊಸ ಅನುಭವ. ಮಗುವಿಗೆ ಎಷ್ಟು ಬೇಕೋ ಅಷ್ಟು ಹಾಲು ಉತ್ಪಾದನೆಯಾಗುತ್ತಾ ಇರುತ್ತೆ. ಆದರೆ ಕೆಲವೊಮ್ಮೆ ಮಗುವಿಗೆ ಹಾಲುಡಿಸುವುದು ತಡವಾದಾಗ, ಹೆಚ್ಚು ಹಾಲಿನಿಂದಾಗಿ ಸ್ತನದಲ್ಲಿ ಹಾಲು ಹೆಚ್ಚಾಗಿ ಊತ, ನೋವು ಕಂಡುಬರುತ್ತದೆ. ಇದಕ್ಕೆ ಬಿಸಿನೀರಿನಲ್ಲಿ ಬಟ್ಟೆಯನ್ನು ಅದ್ದಿ ಶಾಖ ಕೊಡುವ ಮೂಲಕ ಅಥವಾ ಹೀಟ್‌ ಪ್ಯಾಕ್‌ ಇಡುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಈ ನೋವು ಮುಂದುವರಿದರೆ ಲ್ಯಾಕ್ಟೇಷನ್‌ ಪರಿಣಿತರ ಸಹಾಯ ಪಡೆಯಿರಿ.ಕೆಲವೊಮ್ಮೆ ಎದೆಹಾಲುಡಿಸುವಾಗ ಸರಿಯಾದ ವಿಧಾನದಲ್ಲಿ ಹಾಲುಡಿಸದಿದ್ದರೆ ಸ್ತನದ ತೊಟ್ಟುಗಳು ಬಿರುಕು ಬಿಟ್ಟು ನೋವು ಕಾಣಿಸಿಕೊಳ್ಳಬಹುದು. ಹೀಗಿದ್ದಾಗ ಪರಿಣಿತ ಲಾಕ್ಟೇಷನ್‌ ತಜ್ಞರ ಸಲಹೆ ಪಡೆದು ಹಾಲುಡಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿ.

3. ಸೋಂಕುಗಳು

3. ಸೋಂಕುಗಳು

ಹೆರಿಯ ನಂತರ ಸೋಂಕುಗಳು ಉಂಟಾಗುವುದು ಹೆಚ್ಚು. ಸಹಜ ಹೆರಿಗೆಯಲ್ಲಿ ಕೆಲವೊಮ್ಮೆ ಉಂಟಾಗುವ ದೀರ್ಘಾವಧಿಯ ನೋವು ಹಾಗೂ ಯೋನಿ ಪೊರೆಯು ಛಿದ್ರವಾಗುವುದರಿಂದ ನಂತರದಲ್ಲಿ ಸೋಂಕು ಉಂಟಾಗಬಹುದು. ನಾರ್ಮಲ್‌ ಡೆಲಿವರಿ ಸಂದರ್ಭದಲ್ಲಿ ಪೆರಿನಿಯಂ ಹರಿಯುವುದರಿಂದ ಅಥವಾ ಸಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾದಲ್ಲಿ ಆ ಜಾಗದಲ್ಲಿ ಸೋಂಕುಗಳಾಗುವ ಸಂಭವ ಹೆಚ್ಚು. ಈ ಜಾಗದಲ್ಲಿ ಅತಿಯಾದ ನೋವು ಅಥವಾ ಜ್ವರ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ಜ್ವರವು ಸೋಂಕಿನ ಲಕ್ಷಣವಾದುದರಿಂದ ಈ ಸಮಯದಲ್ಲಿ ಆಂಟಿಬಯೋಟಿಕ್‌ಗಳನ್ನು ನೀಡುವ ಮೂಲಕ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಹೆರಿಗೆಯಾದ ನಂತರ ಶಸ್ತ್ರಚಿಕಿತ್ಸೆಯಾದ ಜಾಗ ಅಥವಾ ನಾರ್ಮಲ್‌ ಹೆರಿಗೆಯಾದಲ್ಲಿ ಪೆರಿನಿಯಂ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕೆರೆಯುವುದು, ಉಜ್ಜುವುದು ಮಾಡಬೇಡಿ. ವೈದ್ಯರು ಹೇಳಿದ ಸೂಚನೆಗಳನ್ನು ತಪ್ಪದೇ ಪಾಲಿಸಿ. ಹೆರಿಗೆಯಾದ ನಂತರವೂ ನೈರ್ಮಲ್ಯವನ್ನು ಕಾಪಾಡುವುದು ತಾಯಿ, ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು.

4. ಆಯಾಸ

4. ಆಯಾಸ

ಹೆರಿಗೆಯಾದ ನಂತರ ಬಾಣಂತಿಯರಲ್ಲಿ ಆಯಾಸ ಸಾಮಾನ್ಯ. ಮಗು ಜನಿಸಿದ ಮೇಲೆ ಮಗುವಿನ ಕಡೆಯೇ ಹೆಚ್ಚು ಗಮನ ವಹಿಸಬೇಕಾದುದರಿಂದ ಸ್ವ ಆರೈಕೆಯನ್ನು ಹೆಚ್ಚಿನವರು ಮರೆತುಬಿಡುತ್ತೇವೆ. ಆಹಾರ ತಿನ್ನುವ ವೇಳಾಪಟ್ಟಿಯೂ ಬದಲಾಗುತ್ತದೆ ಜೊತೆಗೆ ನಿದ್ದೆಯೂ ಕೂಡಾ. ರಾತ್ರಿಯ ಸಮಯದಲ್ಲಿ ಮಗುವಿಗೆ ಎಚ್ಚರವಾದಾಗಲೆಲ್ಲಾ ಹಾಲುಡಿಸಲು ಎದ್ದೇಳಬೇಕಾಗುತ್ತದೆ. ಹೀಗಾಗಿ ಸರಿ ನಿದ್ದೆಯೂ ಇರುವುದಿಲ್ಲ. ನಿದ್ದೆ ಕೆಡುವುದರಿಂದ ಸಣ್ಣಪುಟ್ಟ ಕಾರಣಕ್ಕೂ ಕೋಪ ಬರುವುದು ಸಾಮಾನ್ಯ. ಅಲ್ಲದೇ ಮಗು ಮಲಗುವಾಗ ಮಾತ್ರ ಗಬಗಬನೇ ಆಹಾರ ಸೇವಿಸಬೇಕಾದ ಪರಿಸ್ಥಿತಿ ಕೆಲವರಿಗಿರುತ್ತದೆ, ಕೆಲವರಿಗೆ ಊಟದ ಮಧ್ಯದಲ್ಲೇ ಏಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಎದೆಹಾಲುಣಿಸುವ ತಾಯಂದಿರಿಗೆ ಅತ್ಯವಶ್ಯಕವಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಬೇಕೇ ಬೇಕು. ಆದರೆ ಇದರ ಕೊರತೆಯಾದಲ್ಲಿ ಎದೆಹಾಲುಣಿಸುವ ತಾಯಂದಿರಲ್ಲಿ ಡಿಹೈಡ್ರೇಷನ್‌ನಿಂದ ಸುಸ್ತಾಗುವುದು ಸಹಜ. ಹಾಗಾಗಿ ಬಾಣಂತನದ ಸಮಯದಲ್ಲಿ ಮನೆಯವರ ಸಹಾಯವನ್ನು ಪಡೆಯುವುದು ಅವಶ್ಯಕ. ನೀವು ಮಲಗಿದ್ದಾಗ ಮನೆಯವರು ಮಗುವನ್ನು ನೋಡಿಕೊಳ್ಳುವುದು ಮಾಡಿದಾಗ ಸ್ವಲ್ಪಮಟ್ಟಿಗಾದರೂ ನಿದ್ದೆಯನ್ನು ಮಾಡಬಹುದು. ಹಾಲುಡಿಸಿದ ನಂತರ ನೀರು ಕುಡಿಯಿರಿ, ಉತ್ತಮ ಪೌಷ್ಟಿಕಾಂಶವಿರುವ ಆಹಾರ ಸೇವನೆ ಮಾಡುವುದು ಮರೆಯಬೇಡಿ.

5. ಖಿನ್ನತೆ

5. ಖಿನ್ನತೆ

ಪ್ರಸವನಂತರ ಖಿನ್ನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮಗುವಾದ ಮೇಲೆ ಹೆಚ್ಚುವರಿ ಜವಾಬ್ದಾರಿಗಳ ಜೊತೆಗೆ ದೈಹಿಕವಾಗಿ ಆಗುವಂತಹ ಬದಲಾವಣೆಗಳು ತಾಯಂದಿರನ್ನು ಮಾನಸಿಕ ಖಿನ್ನತೆಗೆ ತಳ್ಳುತ್ತದೆ. ಹೆರಿಗೆಯಾದ ನಂತರ ಹಾರ್ಮೋನ್‌ ಅಸಮತೋಲನ ಉಂಟಾಗುತ್ತದೆ, ಈ ಸಮಯದಲ್ಲಿ ಒಂದು ರೀತಿಯ ಆತಂಕ, ದುಃಖ ಬಾಣಂತಿಯರನ್ನು ಕಾಡುತ್ತದೆ. ಈ ಸಮಯದಲ್ಲಿ ಮನೆಯವರ ಸಹಕಾರ ಅತ್ಯಂತ ಮುಖ್ಯ. ಕೆಲವೊಮ್ಮೆ ಈ ಖಿನ್ನತೆಗಳು ಹೆಚ್ಚಾಗಿ ಪ್ರಾಣವನ್ನು ಕಳೆದುಕೊಳ್ಳುವ ನಿರ್ಧಾರಗಳೂ ತೆಗೆದುಕೊಳ್ಳಬಹುದು. ಈ ಸ್ಥಿತಿಯನ್ನು ಬಾಣಂತಿ ಸನ್ನಿ ಎಂದೂ ಕರೆಯುತ್ತಾರೆ.

ಕೆಲವೊಮ್ಮೆ ತಾನೇ ಮಗುವನ್ನು ನೋಡಿಕೊಳ್ಳಬೇಕು, ಬೇರೆಯವರು ಯಾರೂ ತನ್ನ ಸಹಾಯಕ್ಕೆ ಬರುತ್ತಿಲ್ಲ ಎನ್ನುವ ಭಾವನೆ, ತನ್ನ ಹಾಗೂ ಮಗುವಿನ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ, ಮಗುವಿನ ಆರೈಕೆಯ ಬಗ್ಗೆ ಭಯ, ಮಗುವಿನ ಬಗ್ಗೆ ಇತರರು ಮಾಡುವ ಟೀಕೆಗಳು ಈ ಎಲ್ಲಾ ಕಾರಣಗಳು ಬಾಣಂತಿಯರಲ್ಲಿ ಖಿನ್ನತೆಗೆ ಕಾರಣವಾಗುತ್ತದೆ. ಇದರಿಂದಾಗಿ ಮನಸ್ಸು ಹಾಳಾಗಿ ಮಗುವಿಗೆ ಹಾನಿ ಮಾಡುವುದೋ, ಅಥವಾ ತಮಗೆ ಹಾನಿ ಮಾಡಿಕೊಳ್ಳುವ ಅಪಾಯಕಾರಿ ವರ್ತನೆಗಳನ್ನು ತೋರಬಹುದು. ಈ ರೀತಿ ಆದಲ್ಲಿ ಆಪ್ತ ಸಲಹೆಗಾರರು ಅಥವಾ ಕೌನ್ಸಿಲಿಂಗ್‌ ಪಡೆಯುವುದು ಅತ್ಯವಶ್ಯಕ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯವರು ಹಾಗೂ ಸಂಗಾತಿ ಮಾನಸಿಕವಾಗಿ ಬೆಂಬಲವನ್ನು ನೀಡುವುದು ಮುಖ್ಯ.

ತಾಯ್ತನವು ಹೆಣ್ಣಿನ ಜೀವನದ ಸುಂದರವಾದ ಪ್ರಯಾಣ. ಈ ಪ್ರಯಾಣದಲ್ಲಿ ತನ್ನ ಹಾಗೂ ಮಗುವಿನ ಆರೋಗ್ಯವನ್ನು ನೋಡಿಕೊಳ್ಳುವುದು ಅತೀ ಮುಖ್ಯ. ಇದರ ಜೊತೆಗೆ ಮನೆಯಲ್ಲೂ ತಾಯಿ ಮಗುವಿಗೆ ಪೂರಕವಾದ ವಾತಾವರಣವಿರಬೇಕು. ಹೆರಿಗೆಯಾದ ನಂತರದಲ್ಲಿ ಆರೋಗ್ಯ ಸಮಸ್ಯೆಗಳೇನಾದರು ಕಂಡುಬಂದಲ್ಲಿ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಲು ಮರೆಯಬೇಡಿ. ಗರ್ಭಾವಸ್ಥೆಯಲ್ಲಿ ತಾಯಿಯ ಮನೋಸ್ಥಿತಿ ಹೇಗೆ ಮಗುವಿನ ಮೇಲೆ ಪರಿಣಾಮ ಬೀರುತ್ತದೋ ಅದೇ ರೀತಿ ಹೆರಿಗೆಯಾದ ಮೇಲೂ ತಾಯಿಯ ಮನೋಸ್ಥಿತಿ ತಾಯಿಯ ಆರೋಗ್ಯ ಮಗುವಿನ ಮೇಲೂ ಸಕಾರಾತ್ಮಕ ಅಥವಾ ನಕಾರತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರಸವನಂತರ ತಾಯಿಯ ಆರೋಗ್ಯದ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ಮಾಡಬೇಡಿ.

English summary

Common Health Issues Every New Mother Should Know in kannada

These are the common health problem every new mother have to face , read on...
X
Desktop Bottom Promotion