For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್‌ಡೌನ್: ಮನೆಯಲ್ಲಿ ಮಕ್ಕಳ ಕಲಿಕೆಗೆ ಪೋಷಕರು ಪಾಲಿಸಬೇಕಾದ 5 ಸೂತ್ರಗಳಿವು

|

ವಿದ್ಯಾಭ್ಯಾಸಕ್ಕೆ ಪರಿಣತ ಶಿಕ್ಷಕರು ಅಗತ್ಯ. ಅದರಲ್ಲೂ ಮಕ್ಕಳಿಗೆ ಪಾಠ ಹೇಳಿಕೊಡುವುದು ಒಂದು ಕಲೆ. ಅದಕ್ಕಾಗಿ ಸಣ್ಣವಯಸ್ಸಿನ ಶಿಕ್ಷಣ ಬಹಳ ಅಗತ್ಯ. ಇದಕ್ಕಾಗಿಯೇ ನುರಿತ ಅಧ್ಯಾಪಕರು ಇರುವ ಶಾಲೆಗಳನ್ನೇ ಹೆತ್ತವರು ಹುಡುಕುತ್ತಾ ಇರುತ್ತಾರೆ.

ಆದರೆ ಈಗ ಸನ್ನಿವೇಶ ಬದಲಾಗಿದೆ. ಕೊರೋನಾ ಎಂಬ ಮಹಾ ಮಾರಿ ಮಕ್ಕಳು ಶಾಲೆಗೆ ಹೋಗದಂತೆ ಮಾಡಿದೆ. ಈ ವೈರಸ್ ಹರಡುವ ರೀತಿ ಬಹಳ ಅಪಾಯಕಾರಿ ಆದ ಕಾರಣ ಒಂದೇ ಕೊಠಡಿಯಲ್ಲಿ ಹತ್ತಾರು ವಿದ್ಯಾರ್ಥಿಗಳು ಸೇರುವುದು ಈಗ ಸಾಧ್ಯವಿಲ್ಲ. ಮಕ್ಕಳು ಮನೆಯಲ್ಲೇ ಇರಬೇಕಾದ ಈ ಅನಿವಾರ್ಯತೆಯಲ್ಲಿ ಅವರ ಶಿಕ್ಷಣವೂ ಅಗತ್ಯ. ಶಾಲೆಯಂತಹ ಸನ್ನಿವೇಶ ಮನೆಯಲ್ಲೇ ನಿರ್ಮಾಣವಾಗಬೇಕಾಗಿದೆ.

Kids Teaching During Coronavirus lock down

ಕೊರೊನಾ ವೈರಸ್ ಪ್ರಮಾಣ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ವೈರಸ್ ನ ಹರಡುವಿಕೆಯನ್ನು ಸ್ಥಗಿತಗೊಳಿಸಲು ಅಥವಾ ಅದರ ಗತಿಯನ್ನು ಕಡಿಮೆ ಮಾಡಲು ಲಾಕ್ ಡೌನ್ ನಂತಹ ಕ್ರಮಗಳನ್ನು ಅನುಸರಿಸುತ್ತಿರುವ ಕಾರಣದಿಂದಾಗಿ ಜನಜೀವನ ಯಥಾಸ್ಥಿತಿಯಲ್ಲಿಲ್ಲ. ಜಗತ್ತಿನಾದ್ಯಂತ ಕೋವಿಡ್ –19 ವೈರಸ್ ನಹರಡುವಿಕೆ ತಡೆಯಲು ಈ ಕ್ರಮಗಳು ಅನ್ವಯವಾಗಿವೆ.

ಈ ಸ್ಥಿತಿಯು ಮಕ್ಕಳ ವಿದ್ಯಾಭ್ಯಾಸದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾದ ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಕೇವಲ ಪರೀಕ್ಷೆಗಳನ್ನು ಮುಂದಕ್ಕೆ ಹಾಕಿರುವುದು ಅಷ್ಟೇ ಅಲ್ಲದೇ ಶಾಲೆಗಳ ಆರಂಭವನ್ನೂ ಮುಂದೂಡಲಾಗಿದೆ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಬರೆ ಎಳೆದಂತೆಯೇ.

ಇಂತಹ ಸನ್ನಿವೇಶದಲ್ಲಿ ಮನೆಯಲ್ಲೇ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಮನೆಯಲ್ಲೇ ಮಕ್ಕಳ ಬೆಳವಣಿಗೆಗಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜಗತ್ತಿನ ಎಲ್ಲಾ ಕಡೆ ಈ ನಿಟ್ಟಿನಲ್ಲಿ ತಂದೆ ತಾಯಿ ಮಕ್ಕಳ ಬುದ್ಧಿಶಕ್ತಿಯನ್ನು ಚುರುಕಾಗಿಡಲು ಹಲವು ಚಟುವಟಿಕೆಗಳ ಮೊರೆ ಹೋಗಿದ್ದಾರೆ. ಶಾಲೆಗೆ ಬಹಳ ದಿನಗಳ ಕಾಲ ಹೋಗಲಾಗದ ಈ ಸನ್ನಿವೇಶದಲ್ಲಿ ಇದು ಬಹಳ ಅಗತ್ಯ.

ಮಕ್ಕಳು ಮನೆಯಲ್ಲೇ ಶಾಲೆಯ ಚಟುವಟಿಕೆಗಳನ್ನು ಮಾಡುವಂತಹ ಹಾಗೂ ಮಕ್ಕಳ ಸಮಯವನ್ನು ಮೋಜಿನಿಂದ ಕಳೆಯುವಂತೆ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

೧. ಮಕ್ಕಳ ದಿನಚರಿಯನ್ನು ನಿಗದಿ ಪಡಿಸಿ.

೧. ಮಕ್ಕಳ ದಿನಚರಿಯನ್ನು ನಿಗದಿ ಪಡಿಸಿ.

ಮಕ್ಕಳು ಶಾಲೆಗೆ ನಿಯಮಿತವಾಗಿ ಹೋಗುವ ಸಂದರ್ಭದಲ್ಲಿ ಅವರ ದಿನಚರಿಯು ನಿರ್ದಿಷ್ಟವಾಗಿರುತ್ತದೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಹೋಗಲು ಆಗದೇ ಇರುವ ಕಾರಣ ನಿಗದಿತ ಚಟುವಟಿಕೆಯನ್ನು ಪಾಲಿಸುತ್ತಿಲ್ಲ. ಇಂತಹ ಸಮಯದಲ್ಲಿ ತಂದೆ ತಾಯಿಯು ಮಕ್ಕಳೊಂದಿಗೆ ಕುಳಿತು ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು. ಇದರ ಪ್ರಕಾರ ಮಕ್ಕಳು ನಡೆಯುವಂತೆ ಮಾಡಬೇಕು. ಈ ವೇಳಾಪಟ್ಟಿ ಮಕ್ಕಳಿಗೆ ಬೇಜಾರಾದರೆ ಒಂದು ವಾರದ ಬಳಿಕ ಮತ್ತೆ ಅದನ್ನು ಬದಲಾಯಿಸಿ. ವೇಳಾಪಟ್ಟಿಯನ್ನು ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ, ಆಹಾರ ಸೇವನೆ, ಆಟ ಆಡುವ ಸಮಯ, ನಿದ್ದೆ ಎಲ್ಲವೂ ನಿರ್ದಿಷ್ಟ ಅವಧಿಯಲ್ಲಿ ಆಗುವಂತೆ ನೋಡಿಕೊಳ್ಳಬಹುದು. ಮಕ್ಕಳು ಶಾಲೆಗೆ ಹೋಗುವಾಗ ಇರುವಂತಹ ವಾತಾವರಣವನ್ನೇ ಮನೆಯಲ್ಲೂ ಸೃಷ್ಟಿಸಿದರೆ ಬಹಳ ಒಳ್ಳೆಯದು. ಅದೇ ಮಾದರಿಯಲ್ಲಿ ಮಕ್ಕಳು ಸಮಯ ಕಳೆದರೆ ಎಲ್ಲವೂ ಸರಿಯಾದ ಸಮಯದಲ್ಲಿ ನಡೆಯುತ್ತಿರುತ್ತದೆ. ಒಂದು ವಾರದ ದಿನಚರಿಯನ್ನು ಸಿದ್ಧಪಡಿಸಿ ಬರೆದು ಅದನ್ನು ಗೋಡೆಯ ಮೇಲೋ ಅಥವಾ ಫ್ರಿಜ್ ನ ಮೇಲೋ ಬರೆದಿಟ್ಟರೆ ಆಗ ಮಕ್ಕಳು ಖುಷಿಯಿಂದ ಆ ದಿನಚರಿಯನ್ನು ಪಾಲಿಸುತ್ತಾರೆ.

೨. ಸರಿಯಾದ ಅಭ್ಯಾಸದ ಜಾಗವನ್ನು ನಿಗದಿ ಪಡಿಸಿ.

೨. ಸರಿಯಾದ ಅಭ್ಯಾಸದ ಜಾಗವನ್ನು ನಿಗದಿ ಪಡಿಸಿ.

ಮಕ್ಕಳು ತಮ್ಮದು ಎಂದಾದ ಜಾಗದಲ್ಲಿ ಓದಲು - ಬರೆಯಲು ಕೂತರೆ ಅವರಿಗೆ ಆ ಜಾಗ ತನ್ನ ಶಿಕ್ಷಣಾಭ್ಯಾಸದ್ದು ಎಂಬ ಕಲ್ಪನೆ ಬರುತ್ತದೆ. ಚಿಕ್ಕ ಮಕ್ಕಳಿಗೆ ತಮ್ಮದೇ ಆದ ಕೊಠಡಿ ಇರದೇ ಇರಬಹುದು ಆದರೆ ತಂದೆ ತಾಯಿ ಮಕ್ಕಳಿಗೆ ಒಂದು ನಿರ್ದಿಷ್ಟ ಜಾಗವನ್ನು ನೀಡಿ ಅಲ್ಲಿ ಶಾಲೆಯ ತರಹದ ವಾತಾವರಣ ಸೃಷ್ಟಿಮಾಡುವುದು ಖಂಡಿತ ಸಾಧ್ಯ. ನಿಮ್ಮ ಮಗುವಿನ ಬಳಿ ಈಗಾಗಲೇ ಓದುವ ಡೆಸ್ಕ್ ಇದ್ದಲ್ಲಿ ಅದನ್ನು ಇನ್ನೂ ಆಕರ್ಷಕ ಗೊಳಿಸಿ ಮಗು ಅಲ್ಲೇ ಕುಳಿತು ದಿನದ ಹೆಚ್ಚಿನ ಸಮಯ ಕಳೆಯುವಂತೆ ಮಾಡಿ. ಆ ಸ್ಥಳ ದೂರದರ್ಶನ ಮತ್ತು ವೀಡಿಯೋ ಗೇಮ್ ಗಳಿಂದ ದೂರವಿರಬೇಕು ಹಾಗೂ ಮೊಬೈಲ್ ಕೂಡ ಆ ಸಮಯದಲ್ಲಿ ಮಕ್ಕಳ ಕೈಯಲ್ಲಿ ಕೊಡಬಾರದು. ಓದುವ ಜಾಗಕ್ಕೆ ಹೋಗುತ್ತಿದ್ದಂತೆ ಆ ಜಾಗ ಕೇವಲ ತನ್ನ ಶಿಕ್ಷಣಾಭ್ಯಾಸಕ್ಕಾಗಿ ಮಾತ್ರ ಮೀಸಲು ಎಂಬ ಕಲ್ಪನೆ ಮಗುವಲ್ಲಿ ಬರಬೇಕು. ಕೊರೋನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಮಾಡಿದ ಈ ಓದುವ ಸ್ಥಳ ಈ ಸಮಯದಲ್ಲಿ ಖಂಡಿತ ಪರಿಣಾಮಕಾರಿ ಜೊತೆಗೆ ಮುಂದೆ ಸ್ಥಿತಿ ಸಾಮಾನ್ಯ ವಾದಾಗಲೂ ಬಹಳ ಸಹಕಾರಿಯಾಗಬಹುದು. ಎಲ್ಲಾ ಮಕ್ಕಳಿಗೂ ಒಂದೇ ತರಹದ ಓದುವ ಜಾಗ ಇಷ್ಟವಾಗದೇ ಹೋಗಬಹುದು ನೀವು ಮತ್ತು ನಿಮ್ಮ ಮಕ್ಕಳು ಸೇರಿ ಈ ಜಾಗವನ್ನು ನಿರ್ಧರಿಸಿ ಅದನ್ನು ಸಜ್ಜುಗೊಳಿಸಿ.

೩. ಓದುವಾಗ ನಿಮ್ಮ ಮೇಲೆ ಹೆಚ್ಚಿನ ಅವಲಂಬನೆ ಬೇಡ.

೩. ಓದುವಾಗ ನಿಮ್ಮ ಮೇಲೆ ಹೆಚ್ಚಿನ ಅವಲಂಬನೆ ಬೇಡ.

ಹೆಚ್ಚಿನ ಸಂದರ್ಭದಲ್ಲಿ ಪಾಲಕರು ತರಬೇತಿ ಹೊಂದಿದ ಶಿಕ್ಷಕರಾಗಿರದೇ ಇರುವುದರಿಂದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕಲಿಸುವ ತಾಳ್ಮೆ ಅವರಲ್ಲಿ ಇರದೇ ಹೋಗಬಹುದು. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ಸಮಯವನ್ನು ಉಳಿಸಲು ಮಕ್ಕಳ ಪುಸ್ತಕದಲ್ಲಿ ತಂದೆ ತಾಯಿಗಳೇ ಉತ್ತರವನ್ನು ಬರೆದು ನಂತರ ಅದನ್ನು ಕಲಿಯಲು ಹೇಳುವುದು ಸಹಜ. ಆದರೆ ಇದು ನಿಮ್ಮ ಮಕ್ಕಳ ಶಿಕ್ಷಣದಲ್ಲಿ ಸ್ವಲ್ಪವೂ ನೆರವಾಗುವುದಿಲ್ಲ. ಹೀಗೆ ಕಲಿಯಲು ಇರುವ ಮೋಜನ್ನು ನಿಮ್ಮ ಮಗುವುನಿಂದ ದೂರ ಮಾಡಬೇಡಿ. ಯಾವುದೇ ಸಮಸ್ಯೆಗೆ ಮಕ್ಕಳು ತಾವೇ ಉತ್ತರ ಹುಡುಕಬೇಕು. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಮೂಡುತ್ತದೆ ಮತ್ತು ಚಿಂತನಾ ಮನೋಭಾವ ಹೆಚ್ಚುತ್ತದೆ. ಹೀಗೆ ಮಾಡುವ ಬದಲು ಮಕ್ಕಳಿಗೆ ಯೋಚಿಸಲು ಅವಕಾಶವೇ ಕೊಡದೆ ತಾವೇ ಉತ್ತರಗಳನ್ನು ಸುಲಭವಾಗಿ ಕೊಡಲು ಆರಂಭಿಸಿದರೆ ಅವರ ಮನೋ ವಿಕಾಸ ಕುಂಠಿತಗೊಳುವುದಷ್ಟೇ ಅಲ್ಲದೇ ಓದಿನಲ್ಲಿ ಅವರ ಆಸಕ್ತಿಯೂ ಕಡಿಮೆಯಾಗುತ್ತದೆ.

೪. ಶಾಲೆಯ ಪಠ್ಯಕ್ರಮವನ್ನು ಪಾಲಿಸಿ.

೪. ಶಾಲೆಯ ಪಠ್ಯಕ್ರಮವನ್ನು ಪಾಲಿಸಿ.

ಮಕ್ಕಳಿಗೆ ಓದಲು ಹೇಳಿಕೊಡುವಾಗ ಅವರ ಶಾಲೆಯ ಪಠ್ಯಕ್ರಮವನ್ನೇ ಪಾಲಿಸಿ. ಅವರಿಗೆ ಆ ವಯಸ್ಸಿನಲ್ಲಿ ಬೇಕಾಗದೇ ಇರುವುದನ್ನು ಬೋಧಿಸುವುದು ಇದರಿಂದ ತಪ್ಪುತ್ತದೆ. ಯಾವುದೇ ಹೊಸ ವಿಷಯವನ್ನು ಕಲಿಯುವುದು ಒಳ್ಳೆಯದೇ ಆದರೆ ಈ ಲಾಕ್ ಡೌನ್ ಸಮಯದಲ್ಲಿ ಶಾಲೆಯ ಪಠ್ಯಕ್ರಮದ ಅನುಸಾರ ವಿಚಾರಗಳನ್ನು ಬೋಧಿಸಿದರೆ ಶಾಲೆ ಆರಂಭವಾದಾಗ ಬಹಳ ಸುಲಭವಾಗುತ್ತದೆ. ತಮ್ಮ ಮಕ್ಕಳ ಸಹಪಾಠಿಗಳ ಪಾಲಕರೊಂದಿಗೆ ಮಾತನಾಡಿ ಅವರು ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡು ಕಲಿಸುತ್ತಿದ್ದಾರೆ ಎಂಬುದನ್ನು ಕೇಳಿಕೊಳ್ಳಬಹುದು ಇದರಿಂದ ಹೊಸ ಯೋಚನೆಗಳು ಬರುತ್ತವೆ ಮತ್ತು ಯಾವ ವಿಷಯಗಳು ಮುಖ್ಯ ಮತ್ತು ಯಾವುದನ್ನು ಹೆಚ್ಚು ಗಮನಕೊಟ್ಟು ಕಲಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಬರುತ್ತದೆ. ಇದರ ಜೊತೆಗೆ ಮಕ್ಕಳ ಶಿಕ್ಷಕರ ಜೊತೆ ಮಾತನಾಡಿ ಯಾವ ವಿಷಯಗಳನ್ನು ಬೋಧಿಸಬೇಕು ಎಂದು ಕೇಳಿ ಅದರಂತೆ ನಡೆದರೆ ಕೊರೋನಾ ವೈರಸ್ ದೂರವಾಗಿ ಶಾಲೆಗಳು ಪುನರಾರಂಭವಾದಾಗ ಬಹಳ ನೆರವಾಗುತ್ತದೆ.

೫. ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಕೊಡಿ

೫. ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಕೊಡಿ

ನಿಗದಿತ ವೇಳೆಯಲ್ಲಿ ಯಾವ ವಿಷಯವನ್ನು ಅಭ್ಯಾಸ ಮಾಡಬೇಕು ಎಂಬ ಆಯ್ಕೆಯ ಸ್ವಾತಂತ್ರ್ಯ ಮಕ್ಕಳಿಗೆ ಕೊಟ್ಟರೆ ಅವರನ್ನು ಉತ್ತೇಜಿಸಿದಂತೆ ಆಗುತ್ತದೆ. ಒಂದು ನಿಗದಿತ ವೇಳಾಪಟ್ಟಿಯನ್ನು ಮಾಡಿ ಅದರಂತೆ ಓದುವುದು ಒಳ್ಳೆಯದೇ ಆದರೆ ಎಲ್ಲಾ ಸಂದರ್ಭದಲ್ಲಿ ಹಾಗೆಯೇ ನಡೆದುಕೊಳ್ಳಲು ಆಗುವುದಿಲ್ಲ. ಮನೆಯಲ್ಲಿ ಶಾಲೆಯ ಸನ್ನಿವೇಶ ನಿರ್ಮಿಸಬಹುದು ಬದಲಾಗಿ ಶಾಲೆಯನ್ನೇ ಅಲ್ಲ. ಒಂದು ಶಾಲೆಯ ಕೊಠಡಿಯಲ್ಲಿ ಹಲವು ಮಕ್ಕಳನ್ನು ಸೇರಿಸಿ ಒಂದು ಪಾಠ ಮಾಡುವುದು ಸುಲಭ ಆಗ ಮಕ್ಕಳು ಕಲಿಯಲೂ ಸುಲಭ. ಅಲ್ಲಿ ಪ್ರತಿಯೊಂದು ವಿದ್ಯಾರ್ಥಿ ಬೇರೆ ವಿಷಯ ಬೇಕು ಎಂದರೆ ಹಾಗೆ ಮಾಡುವುದು ಸಾಧ್ಯ ಆಗುವುದಿಲ್ಲ. ಆದರೆ ಮನೆಯ ಸನ್ನಿವೇಶ ಹಾಗಲ್ಲ. ಇಲ್ಲಿ ಪಾಲಕರು ಕೇವಲ ತಮ್ಮ ಮಗುವಿಗೆ ಮಾತ್ರ ಬೋಧಿಸುವುದರಿಂದ ಯಾವ ವಿಷಯದ ಬಗ್ಗೆ ಮಗುವಿನ ಆಸಕ್ತಿ ಜಾಸ್ತಿ ಇದೆ ಎಂದು ತಿಳಿದು ಅದೇ ವಿಷಯವನ್ನು ಬೋಧಿಸಬಹುದು. ತಾನು ಬಯಸಿದ ಪಾಠ ತನಗೆ ಸಿಗುತ್ತಿದೆ ಎಂದಾಗ ಮಗುವಿನ ಆಸಕ್ತಿ ದುಪ್ಪಟ್ಟಾಗುವುದರಲ್ಲಿ ಸಂದೇಹವೇ ಇಲ್ಲ.

ಒಂದು ವಾರ ಸರಿಯಾಗಿ ಓದಿದಲ್ಲಿ ವಾರದ ಅಂತ್ಯದಲ್ಲಿ ಏನಾದರೂ ಉಡುಗೊರೆ ಕೊಡುವ ರೂಢಿಯನ್ನೂ ಬೆಳೆಸಬಹುದು. ಆದರೆ ಕೇವಲ ವಾರಾಂತ್ಯದ ಉಡುಗೊರೆಗಾಗಿ ಮಗು ಓದುತ್ತಿಲ್ಲ ಎಂಬುದರ ಬಗ್ಗೆ ಗಮನ ಕೊಡಿ. ಶಾಲೆ ಆರಂಭವಾದ ಮೇಲೆ ಸನ್ನಿವೇಶ ಬದಲಾಗುತ್ತದೆ. ಶಾಲೆಯಲ್ಲಿ ಆ ತರಹದ ಉಡುಗೊರೆಗಳು ಸಿಗುವುದಿಲ್ಲ. ಆಗ ಮಗುವಿನ ಆಸಕ್ತಿ ಕಡಿಮೆ ಆಗಬಾರದು.

ಮನೆಯಲ್ಲೇ ಶಾಲೆ ಮಕ್ಕಳು ಪ್ರತೀದಿನ ಬೆಳಗ್ಗೆ ಬೇಗನೇ ತಯಾರಾಗಿ ಶಾಲೆಗೆ ಧಾವಿಸುವ ಸನ್ನಿವೇಶವನ್ನು ದೂರ ಮಾಡುತ್ತದೆ ಹೀಗಾಗಿ ಮಕ್ಕಳು ನಿರಾಳವಾಗಿ ಓದಬಹುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಮನೆಯಲ್ಲೇ ಓದುವಾಗ ಶಾಲೆಯಲ್ಲಿ ಸಿಗುವ ವಿರಾಮಗಳಿಗಿಂತ ಹೆಚ್ಚಿನ ವಿರಾಮದ ಅವಧಿಯೂ ಸಿಗುತ್ತದೆ.

ಪಾಲಕರು ಈ ಮೇಲಿನ ಚಟುವಟಿಕೆಗಳನ್ನು ಪಾಲಿಸಿ ಮಕ್ಕಳ ಮನೆಯಲ್ಲೇ ಬೋಧನೆಯ ಅವಧಿಯನ್ನು ಆಕರ್ಷಕವಾಗಿಸಬಹುದು. ಕೊರೋನಾ ವೈರಸ್ ಅವಧಿಯು ಮಕ್ಕಳಲ್ಲಿ ಮೋಜುಭರಿತ ಅಧ್ಯಯನದ ಅವಧಿಯನ್ನಾಗಿಸಬಹುದು. ಅವರಿಗೆ ಆಯ್ಕೆಯ ಸ್ವಾತಂತ್ರ್ಯ ಕೊಡಿ, ಅವರ ಬೆಳವಣಿಗೆಯನ್ನು ಕುಂಠಿತ ಮಾಡಬೇಡಿ. ಇದರ ಜೊತೆಗೆ ಕೊರೊನಾ ವೈರಸ್ ಹರಡುವ ರೀತಿಯನ್ನೂ ಅವರ ಜೊತೆಗೆ ಚರ್ಚಿಸಿ. ಆದರೆ ಇದು ಅವರಲ್ಲಿ ಭಯ ಹುಟ್ಟಿಸುವಂತೆ ಇಲ್ಲದಿರಲಿ.

English summary

Tips For Parents To Teach Kids At Home During Coronavirus Lockdown

Here tips for parents how you can engage your kids in study during coronavirus lockdown time, have a look...
X
Desktop Bottom Promotion