For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಸಿಹಿ ಕೊಡುವುದರಿಂದ ತೊಂದರೆಯಾಗುವುದೇ?

|

ಸಿಹಿಯನ್ನು ಇಷ್ಟಪಡದ ಮಗು ಯಾವುದಿದೆ ಹೇಳಿ ? ಎಷ್ಟೇ ರಮಿಸಿದರೂ ಹಿಡಿದ ಹಠವನ್ನು ಬಿಡದ ಮಗು ಕಟ್ಟಕಡೆಗೆ ಸಮಾಧಾನವಾಗುವುದು ಚಾಕೊಲೇಟ್ ಅನ್ನೋ ಇಲ್ಲವೇ ಇನ್ಯಾವುದೋ ಸಿಹಿತಿಂಡಿಯನ್ನೋ ಕೊಟ್ಟಾಗಲೇ! ಮಕ್ಕಳಿರುವ ಮನೆಗೆ ಬಂದಾಗ ನೆಂಟರಿಷ್ಟರೂ ಕೂಡ ಮಕ್ಕಳಿಗೆಂದು ತರುವುದು ಸಿಹಿತಿಂಡಿಯ ಪೊಟ್ಟಣವನ್ನೇ.

how much sugar good for kids

ಹೀಗೆ, ರಚ್ಚೆಹಿಡಿದು ಹಠ ಮಾಡುವ ಮಗುವನ್ನು ಸಮಾಧಾನ ಪಡಿಸುವಾಗಲೇ ಆಗಲೀ, ಇಲ್ಲವೇ ಮಗುವನ್ನು ಒಳ್ಳೆಯ ಕೆಲಸಕ್ಕೆಂದು ಪ್ರೋತ್ಸಾಹಿಸುವಾಗಲೇ ಆಗಲೀ, ಮಗುವಿನ ವಿಚಾರದಲ್ಲಿ ದೊಡ್ಡವರು ಕಂಡುಕೊಂಡಿರುವ ದಿವ್ಯಾಸ್ತ್ರವೆಂದರೆ ಅದು ಸಿಹಿತಿನಿಸಿನ ಪ್ರಯೋಗ. ಹಾಗಂತ ಎಲ್ಲ ಕಾಲದಲ್ಲಿಯೂ ನಿಮ್ಮ ಮಗುವು ಸಿಹಿಯನ್ನೇ ಸೇವಿಸುತ್ತಾ ಇರುವುದು ಸೂಕ್ತವೇ ? ನಿಮ್ಮ ಮಗುವಿನ ವಿಚಾರದಲ್ಲಿ, ಪ್ರತಿದಿನದ ಆತನ/ಆಕೆಯ ಸಿಹಿ ಸೇವನೆಯ ಮಿತಿ ಎಷ್ಟಿರಬೇಕು ? ಅತಿಯಾದರೆ ಆಗುವ ಪರಿಣಾಮವೇನು ? ಇವೆಲ್ಲವನ್ನೂ ವಿವರಿಸುವ ಬರಹವನ್ನು ನಿಮಗಾಗಿ ಇಲ್ಲಿ ಪ್ರಸ್ತುತಪಡಿಸಿದ್ದೇವೆ.

ಮಕ್ಕಳು ಎಷ್ಟು ಸಕ್ಕರೆಯನ್ನು ಸೇವಿಸಬೇಕು ?

ಮಕ್ಕಳು ಎಷ್ಟು ಸಕ್ಕರೆಯನ್ನು ಸೇವಿಸಬೇಕು ?

ಎರಡು ವರ್ಷ ಅಥವಾ ಅದಕ್ಕಿಂತ ದೊಡ್ಡ ವಯಸ್ಸಿನ ಅಂಬೆಗಾಲಿಡೋ ಮಕ್ಕಳು ಹೆಚ್ಚುವರಿಯಾಗಿ ಸೇರಿಸಿದ ಅಥವಾ "ಎಕ್ಸ್ ಟ್ರಾ" ಸಕ್ಕರೆಯ ಸೇವನೆಯನ್ನ, ದಿನವೊಂದಕ್ಕೆ 25 ಗ್ರಾಂ ಗಳಿಗೆ, ಅಥವಾ ಸುಮಾರು 6 ಟೀ ಚಮಚೆಗಳಿಗಷ್ಟೇ ಮಿತಿಗೊಳಿಸಬೇಕು.

"ಹೆಚ್ಚುವರಿಯಾಗಿ ಸೇರಿಸಿದ ಸಕ್ಕರೆ" ಅಂದರೆ, ಹಾಲಿನಂತಹ (ಲ್ಯಾಕ್ಟೋಸ್) ಆಹಾರವಸ್ತುಗಳಲ್ಲಿ ಅಥವಾ ಹಣ್ಣು ಮತ್ತು ತರಕಾರಿಗಳಲ್ಲಿ (ಫ಼್ರಕ್ಟೋಸ್) ಗಳಲ್ಲಿ ಕಂಡುಬರುವಂತಹ ನೈಸರ್ಗಿಕ ಸಕ್ಕರೆಯ ಅಂಶಕ್ಕೆ ವ್ಯತಿರಿಕ್ತವಾಗಿ, ಸಂಸ್ಕರಣೆಯ ಹಂತಗಳಲ್ಲಿ ಆಹಾರಪದಾರ್ಥಗಳಿಗೆ ಅಥವಾ ಪಾನೀಯಗಳಿಗೆ ಹೆಚ್ಚುವರಿಯಾಗಿ ಸೇರಿಸಲಾಗುವ ಸಕ್ಕರೆ ಅಥವಾ ಸಿರಪ್ ಗಳು. ತಮ್ಮಲ್ಲಿ ನೈಸರ್ಗಿಕ ಸಕ್ಕರೆಯನ್ನು ಅಡಕವಾಗಿಸಿಕೊಂಡಿರುವ ಆಹಾರವಸ್ತುಗಳು ಮಕ್ಕಳ ಬೆಳವಣಿಗೆಗೆ ಅತ್ಯಗತ್ಯವಾದ ಪ್ರೋಟೀನ್ ಮತ್ತು ಇತರ ಜೀವಸತ್ತ್ವಗಳಂತಹ ಪೋಷಕಾಂಶಗಳನ್ನೂ ಒಳಗೊಂಡಿರುತ್ತವೆ ಎಂಬುದು ಇಲ್ಲಿ ಗಮನಾರ್ಹ ಅಂಶ.

ಆದಾಗ್ಯೂ, ಯು.ಎಸ್. ನಲ್ಲಿ, ಅನೇಕ ಮಕ್ಕಳು ತೀರಾ ಎನಿಸುವಷ್ಟು ಸಿಹಿ ತಿನಿಸುಗಳನ್ನು ತಿನ್ನುತ್ತಾರೆ. ವರದಿಗಳು ತೋರಿಸಿಕೊಟ್ಟಿರೋ ಪ್ರಕಾರ, ಮಕ್ಕಳು ತಮ್ಮ ಕೊಬ್ಬಿನಾಂಶದ ಶೇ. 17 ರಷ್ಟು ಕ್ಯಾಲರಿಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾದ ಸಕ್ಕರೆಯಿಂದಲೇ ಪಡೆಯುತ್ತಾರೆ - ಹಾಗೂ ಅದರ ಅರ್ಧಾಂಶವು ಸಕ್ಕರೆ ಮಿಶ್ರಿತ ಪಾನೀಯಗಳಿಂದ ಬರುತ್ತದೆ.

ಮಕ್ಕಳ ಆರೋಗ್ಯದ ಮೇಲೆ ಸಕ್ಕರೆಯ ಪರಿಣಾಮಗಳು

ಮಕ್ಕಳ ಆರೋಗ್ಯದ ಮೇಲೆ ಸಕ್ಕರೆಯ ಪರಿಣಾಮಗಳು

ಸಕ್ಕರೆ ಬೆರೆತ ಪಾನೀಯಗಳನ್ನು, ಕೇಕ್ ಅನ್ನು, ಸಿಹಿಮಿಠಾಯಿಯನ್ನು, ಮತ್ತು ಬಿಸ್ಕತ್ತುಗಳನ್ನು ನಿಮ್ಮ ಪುಟ್ಟ ಮಗು ಹೆಚ್ಚು ಹೆಚ್ಚು ಸೇವಿಸಿದಂತೆಲ್ಲ, ಆತನ/ಆಕೆಯ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕಭರಿತ ಆಹಾರ ಪದಾರ್ಥಗಳನ್ನು ಸೇವಿಸಲು ಆತನ/ಆಕೆಯ ಹೊಟ್ಟೆಯಲ್ಲಿ ಜಾಗವೇ ಇರುವುದಿಲ್ಲ!! ನಿಜಾಂಶವೇನೆಂದರೆ, ಮಕ್ಕಳು ಮತ್ತು ಸಕ್ಕರೆಯ ವಿಚಾರಕ್ಕೆ ಬಂದಾಗ, ಮಕ್ಕಳು ಹೆಚ್ಚು ಹೆಚ್ಚು ಸಿಹಿತಿನಿಸುಗಳನ್ನು ತಿನ್ನಲಾರಂಭಿಸಿದಂತೆಲ್ಲ ಅವರು ಧಾನ್ಯಗಳನ್ನು, ಕಾಳುಗಳನ್ನು, ಮತ್ತು ಹೈನು ಉತ್ಪನ್ನಗಳನ್ನು ಕಡಿಮೆ ಸೇವಿಸತೊಡಗುತ್ತಾರೆ ಎಂದು ಸಂಶೋಧನೆಯು ತೋರಿಸಿಕೊಟ್ಟಿದೆ.

ಅತ್ಯವಶ್ಯಕವಾದ ಪೋಷಕಾಂಶಗಳಿಂದ ಮಕ್ಕಳು ವಂಚಿತರಾಗುತ್ತಾರೆಂದಷ್ಟೇ ಇದರರ್ಥವಲ್ಲ, ಜೊತೆಗೆ ಸಕ್ಕರೆಯುಕ್ತ ಸಿಹಿತಿಂಡಿಗಳನ್ನು ಹೆಚ್ಚು ಹೆಚ್ಚಾಗಿ ಅವರು ತಿನ್ನುವುದರಿಂದ ಕ್ರಮೇಣವಾಗಿ ಅವರು ದುರ್ಬಲ ಮೂಳೆ ಸಾಂದ್ರತೆ, ಅಧಿಕ ಎಲ್.ಡಿ.ಎಲ್ (ಕೆಟ್ಟ) ಕೊಲೆಸ್ಟೆರಾಲ್ ಮಟ್ಟಗಳು, ಬೊಜ್ಜು ಮೈ, ಮತ್ತು ಟೈಪ್ 2 ಮಧುಮೇಹದ ಅಪಾಯಗಳಿಗೆ ಗುರಿಯಾಗುತ್ತಾರೆ.

ಮತ್ತು ಖಂಡಿತವಾಗಿಯೂ, ಸಕ್ಕರೆಯುಕ್ತ ಆಹಾರ ಪದಾರ್ಥಗಳು ನಿಮ್ಮ ಮಕ್ಕಳ ಮುತ್ತಿನಂತಹ ಬಿಳಿ ಹಲ್ಲುಗಳನ್ನು ಇನ್ನಷ್ಟು ಬಿಳಿಯನ್ನಾಗೇನೂ ಮಾಡಲಾರವು! 2 ರಿಂದ 5 ರ ವರೆಗಿನ ವಯೋಮಾನದ 23% ದಷ್ಟು ಮಕ್ಕಳ ಹಾಲು ಹಲ್ಲುಗಳಲ್ಲೇ ದಂತಕುಳಿಗಳಿರಬೇಕಾದರೆ, ಅದಕ್ಕೆ ಕಾರಣಗಳಲ್ಲೊಂದು ಯಾವುದೆಂದರೆ ಅದು ಪುಟ್ಟ ಮಕ್ಕಳ ಆಹಾರಪದ್ಧತಿಯಲ್ಲಿರುವ ಹೆಚ್ಚುವರಿ ಸಕ್ಕರೆಯೇ ಎಂದು ಭಾವಿಸಲಾಗಿದೆ.

ನಿಮ್ಮ ಮಕ್ಕಳ ಸಕ್ಕರೆ ಸೇವನೆಯ ಪ್ರಮಾಣವನ್ನು ಹದ್ದುಬಸ್ತಿನಲ್ಲಿಡುವುದು ಹೇಗೆ ?

ನಿಮ್ಮ ಮಕ್ಕಳ ಸಕ್ಕರೆ ಸೇವನೆಯ ಪ್ರಮಾಣವನ್ನು ಹದ್ದುಬಸ್ತಿನಲ್ಲಿಡುವುದು ಹೇಗೆ ?

ಸಕ್ಕರೆಯುಕ್ತ ಪಾನೀಯಗಳನ್ನು ಕುಡಿಯುವುದು ಬೇಡ

ಮಕ್ಕಳ ಆಹಾರಪದ್ಧತಿಯಲ್ಲಿ ಸುಮಾರು ಅರ್ಧದಷ್ಟು ಹೆಚ್ಚುವರಿ ಸಕ್ಕರೆಯು ಬರುವುದೇ ಸಕ್ಕರೆಯನ್ನು ಹಾಕಿ ಸಿಹಿಗೊಳಿಸಲಾದ ವಿವಿಧ ಪಾನೀಯಗಳಿಂದ (ಸೋಡಾ, ಹಣ್ಣಿನ ರಸಗಳು, ಮತ್ತು ಸ್ಪೋರ್ಟ್ಸ್ ಡ್ರಿಂಕ್ಸ್). ಈ ಎಲ್ಲ ಪೇಯಗಳು ಮಗುವಿನ ಆಹಾರಪದ್ಧತಿಯಲ್ಲಿ ಸಂಸ್ಕರಿತ ಸಕ್ಕರೆಯ ಮತ್ತು ಶೂನ್ಯ ಕ್ಯಾಲರಿಯ ಅತ್ಯಂತ ದೊಡ್ಡ ಮೂಲಗಳು - ಹಾಗೂ ಜೊತೆಗೆ ಶೈಶವಾವಸ್ಥೆಯಲ್ಲಿಯೇ ಅವರಲ್ಲಿ ತಲೆದೋರುವ ಬೊಜ್ಜು ಮೈಗೂ ಮೂಲ ಕಾರಣ. ಇಂತಹ ಪಾನೀಯಗಳಿಗೆ ಬದಲಾಗಿ ನಿಮ್ಮ ಮಗುವಿಗೆ ಕುಡಿಯಲು ನೀರನ್ನು, ಹಸುವಿನ ಹಾಲನ್ನೋ, ಇಲ್ಲವೇ ಸೋಯಾ ಹಾಲನ್ನೋ ಕೊಡಿ.

ಈಗ ಹಣ್ಣಿನ ರಸದ ಕಥೆಯೇನು ? ಹಣ್ಣಿನ ರಸವನ್ನು ನಿಮ್ಮ ಮಗುವಿಗೆ ಕೊಡುವುದೇ ಆದಲ್ಲಿ, ಅದು 100% ದಷ್ಟು ಹಣ್ಣಿನ ರಸವೇ ಆಗಿರಲಿ ಹಾಗೂ 1 ರಿಂದ 3 ವರ್ಷಗಳ ಹರೆಯದ ಮಕ್ಕಳಿಗೆ ದಿನಕ್ಕೆ 4 ಜೌನ್ಸ್ ಗಳಿಗಿಂತಲೂ ಹೆಚ್ಚಿಗೆ ಕೊಡುವುದು ಬೇಡ. ಹಾಗೇನೇ 4 ರಿಂದ 6 ರ ವಯೋಮಾನದ ಮಕ್ಕಳಿಗೆ ದಿನಕ್ಕೆ 4 ರಿಂದ 6 ಜೌನ್ಸ್ ಗಳಿಗಿಂತಲೂ ಹೆಚ್ಚು ಕುಡಿಸುವುದು ಬೇಡ. ಅಂಬೆಗಾಲಿಡುವ ಆ ನಿಮ್ಮ ಪುಟ್ಟ ಮಗು ಜ್ಯೂಸ್ ಅನ್ನು ಹೀರಲು ಬಳಸುವ ಕಪ್ ಅನ್ನು ಇಡೀ ದಿನ ಕೈಯ್ಯಲ್ಲೇ ಹಿಡಿದುಕೊಂಡು ಓಡಾಡುವ ಅಭ್ಯಾಸವನ್ನು ತಪ್ಪಿಸಲು ಪ್ರಯತ್ನಿಸಿ.

ನೀರನ್ನು ಬೆರೆಸಿ ತೆಳುಗೊಳಿಸಲ್ಪಟ್ಟ ಜ್ಯೂಸ್ ಅನ್ನು ನಿಮ್ಮ ಮಗುವಿಗೆ ಕೊಡುವುದರ ಮೂಲಕವೂ ನೀವು ಹಣ್ಣಿನ ಜ್ಯೂಸ್ ನಲ್ಲಿರಬಹುದಾದ ಸಕ್ಕರೆಯ ಅಂಶವನ್ನು ತಗ್ಗಿಸಬಹುದು. ಸಾದಾ ನೀರಿಗೆ ಹಣ್ಣಿನ ತುಣುಕುಗಳನ್ನು ಸೇರಿಸಿ ಅದನ್ನು ಸಿಹಿಯಾಗಿಸಿದರೆ ಸಾಕು.

ಬಹುಮಾನದ ರೂಪದಲ್ಲಿ ಮಗುವಿಗೆ ಸಿಹಿಯ ಆಮಿಷ ತೋರಿಸಬೇಡಿ!

ಬಹುಮಾನದ ರೂಪದಲ್ಲಿ ಮಗುವಿಗೆ ಸಿಹಿಯ ಆಮಿಷ ತೋರಿಸಬೇಡಿ!

ನಿಮ್ಮ ಪುಟ್ಟ ಮಗುವು ಮಾಡುವ ಎಲ್ಲ ಸಾಧನೆಗಳಿಗೂ ಸಿಹಿತಿನಿಸನ್ನು ಬಹುಮಾನವಾಗಿ ಕೊಡುವುದು ವಾಡಿಕೆ, ಆದರೆ ದೀರ್ಘಾವಧಿಯಲ್ಲಿ ನಿಮ್ಮ ಮಗುವು ಇದನ್ನೇ ಅಭ್ಯಾಸ ಮಾಡಿಕೊಂಡು ಮುಂದೆ ತಾನು "ಸರಿಯಾಗಿ" ಮಾಡುವ ಎಲ್ಲ ಕೆಲಸಗಳಿಗೂ ಸಿಹಿತಿಂಡಿಯನ್ನೇ ಕೊಡಬೇಕೆಂದು ಹಠ ಹಿಡಿಯುವುದಕ್ಕೆ ನಿಮ್ಮ ಈ "ಸಿಹಿ ಬಹುಮಾನ" ದ ಆಮಿಷವೇ ಪ್ರೇರಕವಾದೀತು!!

ಅದೇ ರೀತಿ, ಪ್ರತಿಯೊಂದು ವಿಶೇಷ ಸಂದರ್ಭಗಳಲ್ಲೂ ನೀವು ನಿಮ್ಮ ಮಗುವಿಗೆ ಸಿಹಿಯನ್ನೇ ನೀಡಬೇಕೆಂದೇನಿಲ್ಲ. ಪ್ರತೀ ರಜಾದಿನದಂದೂ ಅಥವಾ ಬಿಡುವಿನ ಸಂದರ್ಭದಲ್ಲೂ ನಿಮ್ಮ ಮಗುವಿಗೆ ಕಪ್ ಕೇಕ್ ಗಳನ್ನೋ ಇಲ್ಲವೇ ಕೇಕ್ ಅನ್ನೋ ಕೊಡೋ ಬದಲು, ಹಣ್ಣುಗಳನ್ನೋ ಅಥವಾ ತರಕಾರಿಗಳನ್ನೋ ವಿನೋದಭರಿತವಾಗಿ, ಹಬ್ಬದ ರೀತಿಗಳಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿ - ಉದಾಹರಣೆಗೆ ಸ್ನೋಮ್ಯಾನ್ ನ ಮುಖದೊಂದಿಗೆ ಒಂದು ಬಟ್ಟಲಿನಷ್ಟು ಓಟ್ ಮೀಲ್ ಅಥವಾ ಸ್ಟ್ರಾಬೆರ್ರಿಯನ್ನೇ ಮೂಗನ್ನಾಗಿಸಿಕೊಂಡಿರುವ "ರೀಇಂಡಿಯರ್" ಪ್ಯಾನ್ ಕೇಕ್ ಅನ್ನೋ ತಿನ್ನಲು ನಿಮ್ಮ ಮಗುವಿಗೆ ಕೊಡಿ.

ಮಗುವಿನ ಸಮಾಧಾನವನ್ನು ಸಿಹಿಮಿಠಾಯಿಯೊಂದಿಗೆ ತಳುಕು ಹಾಕುವುದು ಬೇಡ

ಮಗುವಿನ ಸಮಾಧಾನವನ್ನು ಸಿಹಿಮಿಠಾಯಿಯೊಂದಿಗೆ ತಳುಕು ಹಾಕುವುದು ಬೇಡ

ನಿಮ್ಮ ಮಗುವು ಹಠ ಹಿಡಿಯಲು ಪ್ರಾರಂಭಿಸಿದೊಡನೆಯೇ, ಅವನನ್ನು/ಅವಳನ್ನು ಸಂತೋಷ ಪಡಿಸಲು ಅವನ/ಅವಳ ಇಷ್ಟದ ಸಿಹಿತಿಂಡಿಯತ್ತ ನಿಮ್ಮ ಕೈ ಹೊರಳದಿರಲಿ. ಹೀಗೆ ಮಾಡಿದಲ್ಲಿ, ಅದು ನಿಮ್ಮ ಮಗುವಿನ ಭಾವನೆಗಳ ಮತ್ತು ಹೆಚ್ಚಿನ ಕ್ಯಾಲರಿಯುಳ್ಳ ಆಹಾರ ಪದಾರ್ಥಗಳ ನಡುವೆ ಒಂದು ಅನಾರೋಗ್ಯಕರ ಸಂಬಂಧವನ್ನು ಹುಟ್ಟುಹಾಕುತ್ತದೆ.

ನಿಮ್ಮ ಮಗುವಿಗೆ ಸಾಂತ್ವನದ ಅಗತ್ಯವಿದ್ದಾಗ, ಅವನನ್ನು/ಅವಳನ್ನು ರಮಿಸಿ, ಮುದ್ದಾಡಿ. ನಿಮ್ಮ ಮಗುವು ತನ್ನ ಗೊಂಬೆಗಳೊಂದಿಗೆ ಆಡಲು ಮುಂದಾದಾಗ ಅಥವಾ ಪಾಟ್ಟಿಯನ್ನು ಬಳಸಲು ಮುಂದಾದಾಗ, ಅವನಿಗೆ/ಅವಳಿಗೆ ಒಂದು ಸ್ಟಿಕ್ಕರ್ ಅನ್ನೋ ಇಲ್ಲವೇ ಒಂದು ಅಪ್ಪುಗೆಯನ್ನೋ ಕೊಟ್ಟು ಪ್ರೋತ್ಸಾಹಿಸಬೇಕೇ ಹೊರತು ಸಿಹಿತಿನಿಸನ್ನಲ್ಲ. ನಿಜ ಹೇಳಬೇಕೆಂದರೆ, ನಿಮ್ಮ ಮಗುವಿನ ಪಾಲಿಗೆ ನಿಮ್ಮ ಪ್ರೀತಿಪೂರ್ವಕ ಅಪ್ಪುಗೆಗಿಂತಲೂ ಸಿಹಿಯಾದದ್ದು ಬೇರೆ ಇನ್ನೇನು ತಾನೇ ಇದ್ದೀತು ಹೇಳಿ ?!!

ನಿಮ್ಮ ಕಂದಮ್ಮನ ಸಿಹಿಯಾದ ಹಲ್ಲುಗಳಿಗೆ ಜಗಿಯಲು ಆರೋಗ್ಯಯುತವಾದದ್ದನ್ನೇ ಕೊಡಿ

ನಿಮ್ಮ ಕಂದಮ್ಮನ ಸಿಹಿಯಾದ ಹಲ್ಲುಗಳಿಗೆ ಜಗಿಯಲು ಆರೋಗ್ಯಯುತವಾದದ್ದನ್ನೇ ಕೊಡಿ

ನಿಮ್ಮ ಪುಟ್ಟ ಮಗು ತಿನ್ನಬೇಕೆಂದು ಹಾತೊರೆಯುವ ಸಿಹಿತಿನಿಸುಗಳು ಗಿಣ್ಣಿನೊಂದಿಗೆ ಬೆರೆಸಿದ ಕತ್ತರಿಸಿದ ಹಣ್ಣಿನ ತುಣುಕುಗಳ ರೂಪದಲ್ಲಿ ಆರೋಗ್ಯದಾಯಕವಾಗಿರಲಿ. ಈ ಮೂಲಕ ಅವನು/ಅವಳು ತನ್ನ ಸಿಹಿತಿನಿಸಿನ ಬಯಕೆಯನ್ನೂ ಈಡೇರಿಸಿಕೊಳ್ಳಬಹುದು ಹಾಗೂ ಜೊತೆಗೆ ತನ್ನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಅವಶ್ಯಕತೆಯನ್ನೂ ಪೂರೈಸಿಕೊಳ್ಳಬಹುದು. ನಿಮ್ಮ ಮಗುವಿಗೆ ನೀವು ಕೊಡಬಹುದಾದ ಇನ್ನಿತರ ಆರೋಗ್ಯದಾಯಕ ಸಿಹಿತಿನಿಸುಗಳೆಂದರೆ: ಹಣ್ಣಿನ ಸ್ಮೂಥಿಗಳು ಹಾಗೂ ಮನೆಯಲ್ಲೇ ತಯಾರಿಸಲಾದ ಹಣ್ಣಿನ ರಸದ ಘನೀಕೃತ ಪಾಪ್ ಗಳು.

ಸಿಹಿತಿನಿಸುಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರುವುದೂ ಬೇಡ!

ಸಿಹಿತಿನಿಸುಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರುವುದೂ ಬೇಡ!

ಹೀಗೆ ಮಾಡಿದರಂತೂ, ಆರೋಗ್ಯದ ದೃಷ್ಟಿಯಿಂದ ನಿಮ್ಮ ಮಗುವಿಗೆ ಹೆಚ್ಚು ಸಿಹಿ ತಿನ್ನಿಸಬಾರದೆನ್ನುವ ನಿಮ್ಮ ಉದ್ದೇಶವೇ ತಲೆಕೆಳಗಾದೀತು. ಆಗಾಗ್ಗೆ ಪಥ್ಯವನ್ನು ಪಾಲಿಸುವವರಿಗೆ ಚೆನ್ನಾಗಿ ಗೊತ್ತಿರುವ ಸಂಗತಿಯೇನೆಂದರೆ, ಸಾಮಾನ್ಯವಾಗಿ ನೀವು ಏನನ್ನು ತಿನ್ನಬಾರದೆಂದುಕೊಂಡಿರುತ್ತಿರೋ ನಿಮ್ಮ ಮನಸ್ಸು ಅದನ್ನೇ ಹೆಚ್ಚು ತಿನ್ನಬಯಸುವುದು - ಹಾಗೂ ಜೊತೆಗೆ ಪಥ್ಯ ಮಾಡುವಾಗಲೇ ಅದನ್ನು ಹಿಂದೆಂದಿಗಿಂತಲೂ ಇನ್ನಷ್ಟು ಹೆಚ್ಚು ತಿನ್ನಬೇಕೆಂದು ನೀವು ಬಯಸುವುದು! ಇದೇ ಮನಸ್ಥಿತಿ ನಿಮ್ಮ ಮಗುವಿನದ್ದೂ ಆಗಿರುತ್ತದೆ. ನಿಮ್ಮ ಮಗುವಿನ ವಿಚಾರದಲ್ಲಿ, ನೀವು ಸಿಹಿತಿನಿಸನ್ನು ಸಂಪೂರ್ಣವಾಗಿ ನಿಷೇಧಿಸಿದ್ದೇ ಆದರೆ (ಒಂದು ಒಳ್ಳೆಯ ಕಾರಣಕ್ಕೆಂದೇ ಇರಬಹುದಾದರೂ ಕೂಡ), ಅವಕಾಶ ಸಿಕ್ಕಾಗಲೆಲ್ಲ ಮಿಠಾಯಿಗಳನ್ನು ಮುಕ್ಕುವ ಮಗುವೊಂದನ್ನು ನಿಮ್ಮ ಮಗುವಿನಲ್ಲಿಯೇ ನೀವು ಕಾಣುವಂತಹ ಸನ್ನಿವೇಶ ಉಂಟಾದೀತು!!

ಹಾಗಾಗಿ, ನಿಮ್ಮ ಮಗುವನ್ನು ಸಿಹಿಯಿಂದ ಸಂಪೂರ್ಣ ವಂಚಿತನನ್ನಾಗಿಸುವುದು ಬೇಡ. ವಿಶೇಷ ಸಂದರ್ಭಗಳಲ್ಲಿ ಆತನ ಗಾತ್ರಕ್ಕೆ (ವಯೋಮಾನಕ್ಕೆ) ಅನುಗುಣವಾಗಿ ಹೈ-ಆಕ್ಟೇನ್ ಸಿಹಿತಿನಿಸುಗಳನ್ನು ಅಷ್ಟೋ ಇಷ್ಟೋ ತಿನ್ನುವುದಕ್ಕೆ ಅವಕಾಶ ನೀಡಿ.

ಸಕ್ಕರೆಯ ಇಂತಹ ಗುಪ್ತ ಮೂಲಗಳಿಂದ ನಿಮ್ಮ ಮಗುವನ್ನು ದೂರವಿಡಿ

ಸಕ್ಕರೆಯ ಇಂತಹ ಗುಪ್ತ ಮೂಲಗಳಿಂದ ನಿಮ್ಮ ಮಗುವನ್ನು ದೂರವಿಡಿ

ಅಂಬೆಗಾಲಿಡುವ ಮಕ್ಕಳಿಗೆಂದೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ತಿನಿಸುಗಳ ಪೈಕಿ ಕೆಲವು, ಅದರಲ್ಲೂ ಪೋಷಕಾಂಶಭರಿತ ಎಂದೇ ಘೋಷಿಸಿಕೊಳ್ಳುವ ಕೆಲವು ತಿನಿಸುಗಳು ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿರುತ್ತವೆ. ಹಾಗಾದರೆ ಯಾವ ತಿನಿಸು ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿದೆಯೆಂದು ಹೇಗೆ ತಿಳಿಯುವುದು ಎಂಬುದೇ ನಿಮ್ಮ ಪ್ರಶ್ನೆಯಾದಲ್ಲಿ ಅದಕ್ಕೆ ಉತ್ತರ, ಆ ಸಿಹಿತಿನಿಸಿನ ಡಬ್ಬಿಯ ಮುಂಭಾಗದಲ್ಲಿ ಮುದ್ರಿತವಾಗಿರುವ ಪದಗಳನ್ನು ಓದುವ ಬದಲು, ಅದರ ಮಗ್ಗುಲಲ್ಲಿ ಅಂಟಿಸಲಾಗಿರುವ ಘಟಕಗಳ ಪಟ್ಟಿಯನ್ನು ಓದಿ ಅದರಲ್ಲೇನೇನಿದೆ ಎಂದು ತಿಳಿದುಕೊಳ್ಳುವುದರ ಮೂಲಕ.

ಉತ್ಪನ್ನವೊಂದು ಒಳಗೊಂಡಿರಬಹುದಾದ ಎಲ್ಲ ಘಟಕಗಳನ್ನೂ, ಯಾವ್ಯಾವವು ಎಷ್ಟೆಷ್ಟು ಪ್ರಮಾಣಗಳಲ್ಲಿವೆ ಎಂಬುದರ ಆಧಾರದ ಮೇಲೆ ಒಂದರ ಕೆಳಗೊಂದನ್ನು ಪಟ್ಟಿಮಾಡಿ ಆ ಪಟ್ಟಿಯನ್ನು ಉತ್ಪನ್ನದ ಪೊಟ್ಟಣದ ಮೇಲೆ ಅಂಟಿಸಲಾಗಿರುತ್ತದೆ. ಯಾವ ಘಟಕವನ್ನು ಮೊದಲು ಹೆಸರಿಸಲಾಗಿದೆಯೋ ಅದು ಅತ್ಯಧಿಕ ಪ್ರಮಾಣದಲ್ಲಿರುತ್ತದೆಯೆಂದೂ ಹಾಗೂ ಯಾವುದನ್ನು ಕೊನೆಯಲ್ಲಿ ಹೆಸರಿಸಲಾಗಿದೆಯೋ ಅದು ಅತ್ಯಂತ ಕನಿಷ್ಟ ಪ್ರಮಾಣದಲ್ಲಿರುತ್ತದೆಯೆಂದೂ ತಿಳಿಯಬೇಕು. ಹಾಗಾಗಿ, "ಪೋಷಕಾಂಶಭರಿತ" ಹಣ್ಣಿನ ಬಾರ್ ನ ಪೊಟ್ಟಣದ ಮೇಲೆ ಮೊದಲ ಮೂರು ಘಟಕಗಳನ್ನು "ಸಕ್ಕರೆ, ಹೈ ಫ಼್ರಕ್ಟೋಸ್ ಕಾರ್ನ್ ಸಿರಪ್, ಮತ್ತು ಫ಼್ರುಟ್ ಜ್ಯೂಸ್ ಕಾನ್ಸಂಟ್ರೇಟ್" ಎಂಬುದಾಗಿ ಪಟ್ಟಿ ಮಾಡಿದ್ದಲ್ಲಿ, ಅದರರ್ಥವೇನೆಂದರೆ ನಿಶ್ಚಿತವಾಗಿಯೂ ಆ ಹಣ್ಣಿನ ಬಾರ್, ಅದೇ ಹಣ್ಣಿಗಿಂತಲೂ ಎಷ್ಟೋ ಪಾಲು ಅಧಿಕ ಸಕ್ಕರೆಯನ್ನು ಒಳಗೊಂಡಿದೆ ಎಂದೇ ಆಗಿರುತ್ತದೆ.

ಸಕ್ಕರೆಯು ನಾನಾ ಹೆಸರುಗಳಿಂದ ಕರೆಯಲ್ಪಡುತ್ತದೆ ಎಂಬ ಸಂಗತಿಯನ್ನು ನೆನಪಿಟ್ಟುಕೊಳ್ಳಿರಿ. ಹಾಗಾಗಿ, ಮಾರುಕಟ್ಟೆಯಲ್ಲಿ ತಿನಿಸುಗಳನ್ನು ಖರೀದಿಸುವಾಗ, ನಾವು ಈ ಕೆಳಗೆ ಪಟ್ಟಿ ಮಾಡಿರುವ, ಸಕ್ಕರೆಗಿರುವ ಇತರ ಕೆಲವು ಹೆಸರುಗಳ ಬಗ್ಗೆ ನಿಗಾ ಇರಲಿ:

ಹೈ-ಪ್ರಕ್ಟೋಸ್ ಕಾರ್ನ್ ಸಿರಪ್

ಫ್ರೂಟ್ ಜ್ಯೂಸ್-ಜ್ಯೂಸ್ ಕಾನ್ಸಂಟ್ರೇಟ್

ಲ್ಯಾಕ್ಟೋಸ್

ಮಾಲ್ಟೋಸ್

ಸುಕ್ರೋಸ್

ಗ್ಲುಕೋಸ್

ಡೆಕ್ಸ್ಟ್ರೋಸ್

ಇವಾಪೊರೇಟೆಡ್ ಕೇನ್ ಜ್ಯೂಸ್

ಮೊಲಾಸಿಸ್

ಬಾರ್ಲಿ ಮಾಲ್ಟ್

ಡಯಾಸ್ಟ್ಯಾಟಿಕ್ ಮಾಲ್ಟ್

ಈಥೈಲ್ ಮಾಲ್ಟಾಲ್

ಮಾಲ್ಟೋಡೆಕ್ಸ್ಟ್ರಿನ್

ಹನಿ

English summary

Kids And Sugar: How Much Sugar Is good for Children to Eat?

To know how much sugar is good for children to eat, read this...
X
Desktop Bottom Promotion