For Quick Alerts
ALLOW NOTIFICATIONS  
For Daily Alerts

ಕೊರೊನಾ ಸಂಕಷ್ಟದಲ್ಲಿ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಏನು ಮಾಡಬೇಕು?

|

ಇಸವಿ 2020!! ಮನುಕುಲವು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ ವರ್ಷವಿದು. ಅದಕ್ಕೆ ಕಾರಣ ಚೀನಾದ ವುಹಾನ್ ನಗರದಲ್ಲಿ ಜನ್ಮತಾಳಿ, ಮುಂದೆ ಜಗದಾದ್ಯಂತ ಹಬ್ಬಿ, ವಿಶ್ವದಾದ್ಯಂತ ಸಮಸ್ತ ಜನತೆಯ ಜೀವನವನ್ನೇ ಬುಡಮೇಲು ಮಾಡಿದ ಕೊರೋನಾ ವೈರಸ್!! ಬರಿಗಣ್ಣಿಗೆ ಕಾಣಿಸದಷ್ಟು ಅತೀ ಸೂಕ್ಷ್ಮವಾಗಿರೋ ಈ ಕೊರೋನಾ ವೈರಸ್ ಮಾಡಿದ ಅವಾಂತರಗಳು ಒಂದಾ ಎರಡಾ ?!! ಅದೆಷ್ಟೋ ವ್ಯಾಪಾರ ವಹಿವಾಟುಗಳು ಮಕಾಡೆ ಮಲಗಿದವು, ಮಠ ಮಂದಿರಗಳು ಬಹುದಿನಗಳ ಕಾಲ ಬೀಗ ಜಡಿಯಲ್ಪಟ್ಟವು.

ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಂತೂ ಈ ಶೈಕ್ಷಣಿಕ ವರ್ಷದಲ್ಲಿ ತಾವು ಕಲಿಯುತ್ತಿರುವ ವಿದ್ಯಾಸಂಸ್ಥೆಗಳ ಮುಖವನ್ನೇ ನೋಡದಂತೆ ಮಾಡಿಬಿಟ್ಟಿತು ಈ ಕೊರೋನಾ ವೈರಸ್!! ಹೆಚ್ಚು-ಕಡಿಮೆ ಜನಜೀವನದ ಎಲ್ಲ ಸ್ತರಗಳನ್ನೂ ಕೊರೊನಾ ಬುಡಮೇಲಾಗಿಸಿದೆ ಎಂದರೆ ಅದು ಅತಿಶಯೋಕ್ತಿಯಾಗದೇನೋ ?!! ನಮ್ಮ ದೇಹಾರೋಗ್ಯ, ನಮ್ಮ ಆರ್ಥಿಕ ಸ್ಥಿತಿಗತಿ, ಹಾಗೂ ನಮ್ಮ ಕುಟುಂಬವರ್ಗದವರ ಸುರಕ್ಷತೆಯ ಕುರಿತು ನಮ್ಮಲ್ಲಿ ಬಹುತೇಕರು ಕಳವಳ ಮತ್ತು ಉದ್ವೇಗಕ್ಕೊಳಗಾಗಿರೋ ಈ ಪರಿಸ್ಥಿತಿಯಲ್ಲಿ, ಮಾನಸಿಕ ಒತ್ತಡವನ್ನ ತಗ್ಗಿಸಿಕೊಳ್ಳೋಕೆ ಪ್ರಯತ್ನಿಸೋದು ತೀರ ಸಹಜ.

ನೀವು ಮಕ್ಕಳ ಹೆತ್ತವರಾಗಿದ್ದಲ್ಲಿ, ನಿಮ್ಮ ಮಕ್ಕಳನ್ನ ಸುರಕ್ಷಿತವಾಗಿ ಹಾಗೂ ಸಂತೋಷವಾಗಿ ಇರಿಸಿಕೊಳ್ಳುವುದು ಹೇಗೆಂದು ನೀವು ಚಿಂತಿತರಾಗಿರಬಹುದು. ಸಂಕಟದ ಈ ಪರಿಸ್ಥಿತಿಯಲ್ಲಿ ನಿಮ್ಮ ಮಕ್ಕಳ ಮಾನಸಿಕ ಆರೋಗ್ಯವನ್ನ ಕಾಪಾಡೋಕೆ ಹಲವಾರು ಮಾರ್ಗೋಪಾಯಗಳನ್ನ ನಾವಿಲ್ಲಿ ನಿಮಗಾಗಿ ಸಾದರಪಡಿಸುತ್ತಿದ್ದೇವೆ:

ಯೋಗ್ಯವಾದ ದೈನಂದಿನ ಜೀವನಶೈಲಿಯೊಂದನ್ನ ಅಳವಡಿಸಿಕೊಂಡು ಅದಕ್ಕೆ ಬದ್ಧರಾಗಿರಿ

ಯೋಗ್ಯವಾದ ದೈನಂದಿನ ಜೀವನಶೈಲಿಯೊಂದನ್ನ ಅಳವಡಿಸಿಕೊಂಡು ಅದಕ್ಕೆ ಬದ್ಧರಾಗಿರಿ

ಇವತ್ತಿನ ಈ ಲಾಕ್ಡೌನ್ ಸನ್ನಿವೇಶದಲ್ಲಿ ಮಕ್ಕಳಿಗೆ ಮನೆಯೇ ಪಾಠಶಾಲೆಯಂತಾಗಿಬಿಟ್ಟಿದೆ! ಹಾಗಾಗಿ ಮಕ್ಕಳ ಶಾಲಾದಿನಗಳು, ಮಕ್ಕಳ ಆರೈಕೆಯ ಸಮಯಗಳು, ಮತ್ತು ಪಠ್ಯೇತರ ಚಟುವಟಿಕೆಗಳೆಲ್ಲವೂ ಬದಲಾಗಿವೆ. ಪ್ರತಿದಿನವೂ ಒಂದು ಗೊತ್ತಾದ ಸಮಯದಲ್ಲಿ ಏಳುವುದು ಅಥವಾ ಆಹಾರಸೇವನೆಯ ಸಮಯಗಳು, ಇವೇ ಮೊದಲಾದ ಮಾಮೂಲೀ ಚಟುವಟಿಕೆಗಳೂ ಲಯ ತಪ್ಪಿರೋ ಸಾಧ್ಯತೆಗಳೇ ಹೆಚ್ಚು. ಹಾಗಾಗಿಯೇ ನಾವಿಲ್ಲಿ ಹೇಳಬಯಸುವುದೇನೆಂದರೆ ಯೋಗ್ಯವಾದ ದಿನನಿತ್ಯದ ಜೀವನಶೈಲಿಯೊಂದನ್ನ ಅಳವಡಿಸಿಕೊಂಡು ಅದಕ್ಕೆ ಬದ್ಧರಾಗಿದ್ದರೆ, ಪುನ: ಎಲ್ಲವೂ ಮೊದಲಿನಂತಾಗುತ್ತವೆ. ಒಂದು ಗೊತ್ತಾದ ದೈನಂದಿನ ಜೀವನಶೈಲಿಯನ್ನ ಅಳವಡಿಸಿಕೊಳ್ಳೋದ್ರಿಂದ, "ಇದಾದ ಮೇಲೆ ಇನ್ನು ಮುಂದೇನು ಮಾಡ್ಬೇಕು ?" ಅನ್ನೋ ರೀತಿಯ ಮಕ್ಕಳ ಮಾನಸಿಕ ಒತ್ತಡ ಹಾಗೂ ಉದ್ವೇಗಗಳು ಕಡಿಮೆಯಾಗಲು ಸಹಕಾರಿಯಾಗುತ್ತದೆ. ಏನು ಮಾಡಬೇಕೆಂದು ತೋಚದ ಇಂತಹ ಸನ್ನಿವೇಶದಲ್ಲಿ ಹೀಗೆ ಒಂದು ನಿಖರವಾದ ನಿತ್ಯ ಜೀವನಶೈಲಿಗೆ ಬದ್ಧರಾದರೆ ಅದು ಮಕ್ಕಳಲ್ಲಿ ಒಂದು ರೀತಿಯ ಸ್ವಯಂ-ನಿಯಂತ್ರಣದ ಭಾವವನ್ನ ಹುಟ್ಟುಹಾಕುತ್ತದೆ.

ಮಕ್ಕಳೊಂದಿಗೆ ನೀವೂ ವ್ಯಾಯಾಮ ಮಾಡಿರಿ

ಮಕ್ಕಳೊಂದಿಗೆ ನೀವೂ ವ್ಯಾಯಾಮ ಮಾಡಿರಿ

ಮಕ್ಕಳಿಗೂ ಹಾಗೂ ವಯಸ್ಕರಿಗೂ ವ್ಯಾಯಾಮದಿಂದ ಹತ್ತುಹಲವು ದೈಹಿಕ ಲಾಭಗಳಿವೆ ಅನ್ನೋದೇನೋ ನಮಗೆಲ್ಲ ಗೊತ್ತಿರೋ ವಿಚಾರಾನೇ. ಆದರೆ ನಿಯಮಿತ ವ್ಯಾಯಾಮ ಮಾಡೋದ್ರಿಂದ ಮಾನಸಿಕ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳಿವೆ ಅನ್ನೋ ಅಂಶ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ!!! ವ್ಯಾಯಾಮವು ಒತ್ತಡವನ್ನ ತಗ್ಗಿಸಿಕೊಳ್ಳೋಕೆ ನೆರವಾಗುತ್ತೆ ಹಾಗೂ ಹಿತಕರ ಭಾವನೆಯನ್ನ ಮೂಡಿಸೋವಂತಹ ಎಂಡೋಫ್ರೀನ್ ಗಳ ಉತ್ಪತ್ತಿಯನ್ನ ಹೆಚ್ಚು ಮಾಡುತ್ತೆ.

ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಒಡನಾಡಲಿ, ಆದರೆ ವೀಡಿಯೋ ಕಾಲಿಂಗ್ ನ ಮೂಲಕ ಮಾತ್ರ!!

ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಒಡನಾಡಲಿ, ಆದರೆ ವೀಡಿಯೋ ಕಾಲಿಂಗ್ ನ ಮೂಲಕ ಮಾತ್ರ!!

ಮಗುವಿನ ಮನಸ್ಸು ಸ್ವಸ್ಥವಾಗಿರಬೇಕಾದರೆ, ಮಗುವು ತನ್ನ ಓರಗೆಯವರೊಂದಿಗೆ ಉತ್ತಮ ಬಾಂಧವ್ಯವನ್ನ ಹೊಂದಿರಬೇಕಾದುದು ತುಂಬಾನೇ ಅಗತ್ಯ. ಆದರೆ ಈ ಹಿಂದೆ ಮೈದಾನದಲ್ಲಿ ಒಟ್ಟಿಗೆ ಸೇರಿ ಆಟವಾಡುತ್ತಿದ್ದ ರೀತಿಯಲ್ಲಿ ಅಥವಾ ಮಾಲ್ ಗಳಲ್ಲಿ ಭೇಟಿಯಾಗಿ ಒಟ್ಟಿಗೆ ಓಡಾಡುತ್ತಿದ್ದ ರೀತಿಯಲ್ಲಿ ಈಗಿನ ಪರಿಸ್ಥಿತಿಯಲ್ಲಿ ಒಡನಾಟ ಸಾಧ್ಯವಾಗೋಲ್ಲ; ಕಾರಣ ಸಾಮಾಜಿಕ ಅಂತರಾನಾ ಪಾಲಿಸಬೇಕಾಗಿರೋದು. ಹಾಗಂತ ನಿಮ್ಮ ಮಗು ತನ್ನ ನೆಚ್ಚಿನ ಒಡನಾಡಿಗಳನ್ನ ಮರೆತೇ ಬಿಡಬೇಕೆಂದೇನಿಲ್ಲ! ಕಾರಣ, ಸುದೈವವಶಾತ್ ತಂತ್ರಜ್ಞಾನ ಇದೆಯಲ್ಲ! ಹಾಗಾಗಿ, ಬದಲಾದ ಈ ಪರಿಸ್ಥಿತೀಲಿ ನಿಮ್ಮ ಮಗು ತನ್ನ ಒಡನಾಡಿಗಳೊಂದಿಗೆ ವೀಡಿಯೋ ಕಾಲಿಂಗ್ ನಂತಹ ತಂತ್ರಜ್ಞಾನಾಧಾರಿತ ಸಾಧನಗಳ ಮೂಲಕ ಸಂಪರ್ಕದಲ್ಲಿರಲಿ!! (ಆದರೆ ಅದು ನಿಮ್ಮ ಮೇಲುಸ್ತುವಾರಿಯಲ್ಲಿ ನಡೆಯಲಿ)

ನಿಮ್ಮ ಮಕ್ಕಳೊಡನೆ ಆಟವಾಡಿರಿ

ನಿಮ್ಮ ಮಕ್ಕಳೊಡನೆ ಆಟವಾಡಿರಿ

ಮಕ್ಕಳೊಂದಿಗೆ ಆಟವಾಡೋದು, ಹಾಗೂ ಅವರ ಕಲ್ಪನಾಶಕ್ತಿಯನ್ನು ಉತ್ತೇಜಿಸಲು ಅವರಿಗೆ ಪ್ರೇರೇಪಿಸುವುದೇ ಅವರೊಂದಿಗೆ ಬೆರೆಯಲು ಇರುವ ಹೆದ್ದಾರಿಗಳು. ಇಂದಿನ ಮನಶ್ಯಾಸ್ತ್ರದ ಪ್ರಕಾರ, ಮಕ್ಕಳೊಡನೆ ಆಟವಾಡೋದ್ರಿಂದ ಅವರ ಗ್ರಹಿಕೆಯ ಕೌಶಲ್ಯಗಳನ್ನ ಹೆಚ್ಚಿಸೋದಕ್ಕೆ ಸಹಾಯ ಮಾಡಿದ ಹಾಗಾಗುತ್ತೆ. ಅದೇ ವೇಳೆಗೆ ಅವರ ಭಾವನೆಗಳನ್ನ ನಿಯಾಮಕಗೊಳಿಸೋದಕ್ಕೆ ಉತ್ತೇಜನ ಕೊಟ್ಟ ಹಾಗಾಗುತ್ತೆ ಹಾಗೂ ಆ ಮೂಲಕ ಅವರ ಶರೀರದಲ್ಲಿ ಬಿಡುಗಡೆಯಾಗೋ ಒತ್ತಡದ ರಾಸಾಯನಿಕಗಳ ಪ್ರಮಾಣವನ್ನ ತಗ್ಗಿಸಿದಂತೆಯೂ ಆಗುತ್ತೆ.

ಮಕ್ಕಳ ಕಿವಿಗಳಿಗೆ ತಲುಪುವ ಅಂತೆಕಂತೆಗಳ ಪ್ರಮಾಣ ಕಡಿಮೆಯಾಗೋ ಹಾಗೆ ನೋಡಿಕೊಳ್ಳಿ

ಮಕ್ಕಳ ಕಿವಿಗಳಿಗೆ ತಲುಪುವ ಅಂತೆಕಂತೆಗಳ ಪ್ರಮಾಣ ಕಡಿಮೆಯಾಗೋ ಹಾಗೆ ನೋಡಿಕೊಳ್ಳಿ

ಜಗತ್ತಿನ ಎಲ್ಲ ಕೆಟ್ಟ ಸುದ್ದಿಗಳನ್ನೂ ನಿಮ್ಮ ಮಕ್ಕಳಿಂದ ಮುಚ್ಚಿಡೋದಕ್ಕೆ ಸಾಧ್ಯವಿಲ್ಲ. ದೂರದರ್ಶನ, ಮೊಬೈಲ್, ಅಕ್ಕಪಕ್ಕದವರೊಂದಿಗಿನ ಮಾತುಕತೆ ಮೊದಲಾದವುಗಳಿಂದ ಅಷ್ಟೋ ಇಷ್ಟೋ ಅಂತೆಕಂತೆಗಳು ಅವರ ಕಿವಿಗಳನ್ನ ತಲುಪಿಯೇ ತಲುಪುತ್ತವೆ. ಮನಶ್ಯಾಸ್ತ್ರಜ್ಞೆಯಾದ ಎಲೆನಾ ಜೆಫ್ರಿಸ್ ಅವರು ವಿವರಿಸುವ ಪ್ರಕಾರ, ತಮ್ಮ ಸುತ್ತಮುತ್ತಲೂ ಏನಾಗುತ್ತಿದೆ ಎಂಬುದರ ಸಾಮಾನ್ಯ ಅರ್ಥೈಸುವಿಕೆಯನ್ನ ಮಕ್ಕಳು ಹೊಂದಿರಬೇಕು ಆದರೆ ಇಲ್ಲಸಲ್ಲದ ಅಂತೆಕಂತೆಗಳ ಬೊಂತೆಗಳು ಅವರ ತಲೆಯನ್ನ ತಿನ್ನೋದಕ್ಕೆ ಬಿಡಬಾರದು. ಅವರು ವೀಕ್ಷಿಸುವ ಸುದ್ದಿ ಮಾಧ್ಯಮದ ಸ್ವರೂಪದತ್ತ ನಿಮ್ಮ ಗಮನವಿರಲಿ. ಯಾಕೇಂದ್ರೆ ಟಿವಿಯಲ್ಲಿ ಕಾಣಿಸಿಕೊಳ್ಳೋ ದೃಶ್ಯಗಳು ಬಹುತೇಕ ಗ್ರಾಫಿಕ್ಸ್ ಗಳಾಗಿದ್ದು ವಿಪತ್ಕಾರಕ ಸುದ್ದಿಗಳನ್ನ ಅವು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸುತ್ತವೆ. ಇವು ಮಕ್ಕಳ ಮನಸ್ಸನ್ನ ಕದಡುತ್ತವೆ. ಅವರು ಏನನ್ನು ನೋಡಲಿದ್ದಾರೆಯೋ, ಕೇಳಲಿದ್ದಾರೆಯೋ, ಅಥವಾ ಓದಲಿದ್ದಾರೆಯೋ ಅದರ ಕುರಿತು ಅವರನ್ನ ಮುಂಚಿತವಾಗಿಯೇ ಮಾನಸಿಕವಾಗಿ ತಯಾರು ಮಾಡಿಡಿ ಹಾಗೂ ಅವರ ಪರಿಸ್ಥಿತಿಗೆ ಆ ಸುದ್ದಿ ಅದೆಷ್ಟರಮಟ್ಟಿಗೆ ಸಂಬಂಧಿಸೀತು ಅನ್ನೋದನ್ನ ಅವರಿಗೆ ಉದಾಹರಣೆಗಳ ಮೂಲಕ ಮನದಟ್ಟು ಮಾಡಿ.

ಒತ್ತಡಭರಿತ ಸನ್ನಿವೇಶಗಳಲ್ಲಿ ಮಕ್ಕಳ ಗಮನವನ್ನು ಬೇರೆ ಉತ್ತಮ ವಿಚಾರಗಳತ್ತ ಸೆಳೆಯುವುದರ ಮೂಲಕ, ಅವರು ನಕಾರಾತ್ಮಕ ಸಂಗತಿಗಳನ್ನೇ ಮೆಲುಕು ಹಾಕೋವಂತಹ ಪ್ರಸಂಗವನ್ನ ತಪ್ಪಿಸಬಹುದು.

ನಿಮ್ಮ ಹಾಗೂ ನಿಮ್ಮ ಮಗುವಿನ ನಡುವಿನ ಸಂಭಾಷಣೆಯನ್ನ ನೀವೇ ನಿರ್ದೇಶಿಸಲು ಹೋಗಬೇಡಿ. ಅವರೇ ಮುಂದಾಗಿ ಮುಕ್ತವಾಗಿ ನಿಮ್ಮಲ್ಲಿ ಪ್ರಶ್ನೆಗಳನ್ನ ಕೇಳುವಂತಾಗಲಿ ಹಾಗೂ ಆ ಮೂಲಕ ಅವರ ಬೇಗುದಿಗಳನ್ನೆಲ್ಲ ಅವರು ಹೊರಹಾಕುವಂತಾಗಲಿ.

ಅದಕ್ಕೆ ಪ್ರತ್ಯುತ್ತರವಾಗಿ, ಸುರಕ್ಷಿತವಾಗಿರೋದಕ್ಕೆ ನೀವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಅವರಿಗೆ ಮನಮುಟ್ಟುವಂತೆ ವಿವರಿಸಿ ಹಾಗೂ ಆ ಮೂಲಕ ಅವರನ್ನ ನಿರಾಳವಾಗಿಸಿರಿ.

ಚೆನ್ನಾಗಿ ಕೈಗಳನ್ನ ತೊಳೆದುಕೊಳ್ಳೋದರ ಮಹತ್ವ ಏನು ಅಂತಾ ಬೋಧಿಸುವುದು, ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳೋದರ ಮಹತ್ವ ಹಾಗೂ ಅದರ ನಿಯಮಗಳನ್ನ ಅವರಿಗೆ ತಿಳಿಹೇಳುವುದು, ಜನರು ಯಾವಾಗ ಮತ್ತು ಯಾವ ಕಾರಣಕ್ಕಾಗಿ ಮಾಸ್ಕ್ ಗಳನ್ನ ಹಾಕ್ಕೋತ್ತಾರೆ ಅನ್ನೋದರ ಬಗ್ಗೆ ಅವರಿಗೆ ಅರ್ಥ ಆಗೋ ಹಾಗೆ ವಿವರಿಸೋದು; ಇವನ್ನೆಲ್ಲ ಮಾಡಿದರೆ ಕೊರೋನಾ ಪೆಡಂಭೂತ ಅವರಿಗೆ ಅಷ್ಟೇನೂ ಭಯಾನಕವಾಗಿ ಕಾಣೋಲ್ಲ!!

ನಿಮ್ಮ ಮಕ್ಕಳಿಗೆ ಧ್ಯಾನ ಮಾಡೋದನ್ನ ಕಲಿಸಿಕೊಡಿರಿ

ನಿಮ್ಮ ಮಕ್ಕಳಿಗೆ ಧ್ಯಾನ ಮಾಡೋದನ್ನ ಕಲಿಸಿಕೊಡಿರಿ

ಧ್ಯಾನವು ಮನಸ್ಸನ್ನ ನಿರಾಳವಾಗಿಟ್ಟುಕೊಳ್ಳೋಕೆ ಹಾಗೂ ಶರೀರದ ಒಟ್ಟಾರೆ ಆರೋಗ್ಯಾನಾ ಕಾಪಾಡಿಕೊಳ್ಳೋಕೆ ಎಷ್ಟೆಲ್ಲ ಪ್ರಯೋಜನಕಾರಿ ಅನ್ನೋದರ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಸಲಹಾರೂಪದ ಈ ಮಾತುಗಳು ಮಕ್ಕಳು ಹಾಗೂ ವಯಸ್ಕರು; ಇಬ್ಬರಿಗೂ ಅನ್ವಯವಾಗುತ್ತವೆ.

ಧಾರಾಳವಾಗಿ ನಿದ್ರೆ ಮಾಡಲು ಅವರನ್ನ ಪ್ರೇರೇಪಿಸಿರಿ

ಧಾರಾಳವಾಗಿ ನಿದ್ರೆ ಮಾಡಲು ಅವರನ್ನ ಪ್ರೇರೇಪಿಸಿರಿ

ಇದುವರೆಗೆ ಮಾಮೂಲಿಯಾಗಿದ್ದ ಶಾಲಾ ಸಮಯಗಳು ಹಾಗೂ ಕೆಲಸದ ಸಮಯಗಳು ಅಸ್ತವ್ಯಸ್ತಗೊಂಡಾಗ, ಅದು ಮಕ್ಕಳನ್ನ ತಡರಾತ್ರಿಯವರೆಗೂ ಎಚ್ಚರವಿರುವಂತೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಅರ್ಥಾತ್ ಅವರ ನಿದ್ರೆಯ ಚರ್ಯೆಗಳು ಬದಲಾವಣೆಗೊಳ್ಳುತ್ತವೆ. ಮಾನಸಿಕ ಆರೋಗ್ಯಾನಾ ಸುಸ್ಥಿತಿಯಲ್ಲಿಟ್ಟುಕೊಳ್ಳೋದಕ್ಕೆ ಚೆನ್ನಾಗಿ ನಿದ್ರೆ ಮಾಡೋದು, ವಿಶ್ರಾಂತಿ ತಗೊಳ್ಳೋದು ತುಂಬಾನೇ ಅಗತ್ಯ. ಮಕ್ಕಳು ಚೆನ್ನಾಗಿ ನಿದ್ದೆ ಮಾಡಿದ್ರೆ ಅವರು ಹಠ ಹಿಡಿಯೋದನ್ನ ಕಡಿಮೆ ಮಾಡ್ತಾರೆ, ಹುಚ್ಚುಹುಚ್ಚಾಗಿ ತಂಟೆ ಮಾಡೋದನ್ನ ಕಡಿಮೆ ಮಾಡ್ತಾರೆ, ಗಮನ ಕೇಂದ್ರೀಕರಿಸೋ ಶಕ್ತಿ ಅವರಲ್ಲಿ ಹೆಚ್ಚಾಗುತ್ತೆ, ಮತ್ತು ಅವರ ಖಿನ್ನತೆ ಹಾಗೂ ಉದ್ವಿಗ್ನತೆಗಳು ಕಡಿಮೆಯಾಗುತ್ವೆ.

ಆರೋಗ್ಯದಾಯಕ ಆಹಾರಪದ್ಧತಿಯನ್ನ ಮಕ್ಕಳು ಬೆಳೆಸಿಕೊಳ್ಳಲಿ

ಆರೋಗ್ಯದಾಯಕ ಆಹಾರಪದ್ಧತಿಯನ್ನ ಮಕ್ಕಳು ಬೆಳೆಸಿಕೊಳ್ಳಲಿ

ಮಕ್ಕಳು ಹೆಚ್ಚಾಗಿ ಹಣ್ಣು, ತರಕಾರಿಗಳನ್ನೇ ತಿನ್ನುವಂತೆ ಅವರನ್ನ ಪ್ರೋತ್ಸಾಹಿಸಿ. ಸಿಹಿ ಬಿಸ್ಕತ್ತುಗಳನ್ನ, ಕ್ಯಾಂಡಿಗಳನ್ನ ಸುಮ್ಮನೇ ನಾಲಗೆಯ ಚಪಲಕ್ಕಾಗಿ ಆಗೊಮ್ಮೆ ಈಗೊಮ್ಮೆ ಅಷ್ಟೇ ತಿಂದರೆ ಸಾಕು. ದೀರ್ಘಕಾಲದವರೆಗೆ ಇದೇ ಅಭ್ಯಾಸವನ್ನ ಮುಂದುವರೆಸಿದಲ್ಲಿ ಅದರ ಸತ್ಫಲವನ್ನು ಖಂಡಿತವಾಗಿಯೂ ಅದು ಮುಂದೆ ಅವರಿಗೆ ಕೊಡುತ್ತದೆ.

ಇತರ ಬಂಧುವರ್ಗದವರೊಡನೆಯೂ ನಿಮ್ಮ ಮಕ್ಕಳು ಬೆರೆಯಲಿ

ಇತರ ಬಂಧುವರ್ಗದವರೊಡನೆಯೂ ನಿಮ್ಮ ಮಕ್ಕಳು ಬೆರೆಯಲಿ

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಒಂದೇ ಛಾವಣಿಯಡಿಯಲ್ಲಿ ವಾಸಿಸದೇ ಇರೋವಂತಹ ಅಜ್ಜ-ಅಜ್ಜಿಯಂದಿರು, ಸೋದರತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಸೋದರಮಾವ, ಚಿಕ್ಕಪ್ಪ, ದೊಡ್ಡಪ್ಪ, ಹಾಗೂ ಇತರ ವಿಸ್ತೃತ ಕುಟುಂಬ ಸದಸ್ಯರೊಡನೆ ದೈಹಿಕ ಅಂತರವನ್ನ ಕಾಪಾಡಿಕೊಳ್ಳೋದು ಈಗಿನ ಪರಿಸ್ಥಿತೀಲಿ ಮುಖ್ಯವೇ ಹೌದು. ಆದರೆ, ಮಕ್ಕಳ ವಿಚಾರದಲ್ಲಿ ಇದು ಇನ್ನೂ ಕಷ್ಟಕರವಾದದ್ದು. ಮಕ್ಕಳು ತಮ್ಮ ಪ್ರೀತಿಪಾತ್ರರೊಡನೆ ದೈಹಿಕ ಅಂತರವನ್ನ ಕಾಯ್ದುಕೊಳ್ಳಬೇಕು ಅಂದ ಮಾತ್ರಕ್ಕೇ ಅವರಿಂದ ಸಾಮಾಜಿಕವಾಗಿಯೂ ದೂರವಾಗಿರಬೇಕು ಎಂದೇನೂ ಇಲ್ಲ! ಹಾಗಾಗಿ, ವೀಡಿಯೋ ಚಾಟ್ ಗಳ ಮೂಲಕ, ದೂರವಾಣಿ ಕರೆಗಳ ಮೂಲಕ, ಸಾಧ್ಯವಾದರೆ ಹಳೆ ಸಂಪ್ರದಾಯದ ಕಾಗದ ಬರೆಯೋ ವಿಧಾನದ ಮೂಲಕವಾದ್ರೂ ನಿಮ್ಮ ಮಕ್ಕಳು ಕುಟುಂಬವರ್ಗದವರೊಡನೆ ಸಂವಹನದಲ್ಲಿರಲು ಪ್ರೋತ್ಸಾಹಿಸಿರಿ.

ನಿಮ್ಮ ಮಕ್ಕಳ ಕುರಿತು ನಿಮಗೆ ತಾಳ್ಮೆಯಿರಲಿ

ನಿಮ್ಮ ಮಕ್ಕಳ ಕುರಿತು ನಿಮಗೆ ತಾಳ್ಮೆಯಿರಲಿ

ಮಕ್ಕಳು ಕಿರಿಕಿರಿಗೊಂಡಾಗ, ಉದ್ವಿಗ್ನದ ಪರಿಸ್ಥಿತಿಗೆ ಒಳಗಾದಾಗ ಅವರು ಕೋಪೋದ್ರಿಕ್ತರಾಗೋದು, ಅಳೋದು, ಹಾಗೂ ವಿಪರೀತ ತಂಟೆ ಮಾಡೋದು ಇವೆಲ್ಲ ಅವರ ಸಹಜ ಪ್ರತಿಕ್ರಿಯೆಗಳೇ ಆಗಿರುತ್ತವೆ. ಸ್ವತ: ಪೋಷಕರೇ ಒಂಟಿತನದ, ಅಭದ್ರತೆಯ, ಸಂಕಟದ ಪರಿಸ್ಥಿತಿಯನ್ನ ಎದುರಿಸುತ್ತಿರುವಾಗ ಜೊತೆಗೆ ಮಕ್ಕಳ ಈ ರೇಜಿಗೆ ಹುಟ್ಟಿಸೋ ಹಠಸ್ವಭಾವಾನಾ ನಿಭಾಯಿಸೋದು ಅವರಿಗೆ ಬಹಳ ಕಷ್ಟ ಎನಿಸಬಹುದು. ಆದರೂ ಕೂಡ, ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ನಿಮ್ಮ ಮಕ್ಕಳೊಂದಿಗೆ ತಾಳ್ಮೆ, ಸಂಯಮದಿಂದ ವರ್ತಿಸೋದನ್ನ ರೂಢಿಸಿಕೊಳ್ಳಿ. ಬಿಟ್ಟೂಬಿಡದೇ ನಿಮ್ಮ ಮಕ್ಕಳು ಯಾಕೆ ಹಠ ಹಿಡೀತಿದ್ದಾರೆ ಅನ್ನೋದರ ಮೂಲಕಾರಣಾನಾ ಪತ್ತೆ ಮಾಡೋಕೆ ಪ್ರಯತ್ನ ಮಾಡಿ, ಅದನ್ನ ಸರಿಯಾಗಿ ನಿಭಾಯಿಸಿ; ಅಥವಾ ಆ ಪರಿಸ್ಥಿತಿಯಿಂದಲೇ ಹೊರನಡೆಯಿರಿ, ಆಳವಾಗಿ ಉಸಿರಾಡೋದನ್ನ ಅಭ್ಯಾಸ ಮಾಡ್ಕೋಳ್ಳಿ, ಹಾಗೂ ಪರಿಸ್ಥಿತೀನಾ ತಿಳಿಯಾಗಿಸೋಕೆ ಶಾಂತವಾದ, ಸಮಾಧಾನ ಪಡಿಸೋವಂತಹ ನಡವಳಿಕೆಗಳನ್ನ ಪ್ರದರ್ಶಿಸಿ.

English summary

How To Protect Your Child's Mental Health During The Pandemic

How to Protect Your Child's Mental Health during the Pandemic, read on.
X