For Quick Alerts
ALLOW NOTIFICATIONS  
For Daily Alerts

ಯಾವ ವಯಸ್ಸಿನಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚು

|

ದಾಂಪತ್ಯ ಜೀವನ ಅನ್ನೋದು ಸಾರ್ಥಕವಾಗೋದೇ ಆ ದಂಪತಿಗಳಿಗೆ ಕನಿಷ್ಟ ಒಂದಾದರೂ ಮಗು ಹುಟ್ಟಿದಾಗ. ಆದರೆ ಕಾಲದ ಮಹಿಮೇನೋ ಏನೋ, ಇಂದಿನ ಜನರು; ಅದರಲ್ಲೂ ವಿಶೇಷವಾಗಿ ಸ್ತ್ರೀಯರು ನಾನಾ ಕಾರಣಗಳಿಗಾಗಿ ಮದುವೇನಾ ಮುಂದೂಡ್ತಾನೇ ಬರ್ತಿದ್ದಾರೆ. ಸ್ತ್ರೀಯರಿಗೆ 40 ವರ್ಷಗಳು ದಾಟಿದ ಮೇಲೆ ಮಕ್ಕಳಾಗೋದು ತುಂಬಾನೇ ಕಷ್ಟ. ಬರೇ ಮಗೂನ ಹಡೆದುಬಿಟ್ರೆ ಸಾಕಾ ? ಆ ಮಗು ಆರೋಗ್ಯವಾಗಿರೋದು ಬೇಡ್ವಾ ?

ಹಾಗಾದರೆ ಅಂತಹಾ ಆರೋಗ್ಯವಂತ ಮಗೂನಾ ಪಡ್ಕೊಳ್ಳೋಕೆ, ವಿಶೇಷವಾಗಿ ಸ್ತ್ರೀಯರಿಗೆ ಯಾವ ವಯಸ್ಸು ಸೂಕ್ತ ? ಯಾವ ಯಾವ ವಯಸ್ಸುಗಳಲ್ಲಿ ಸ್ತ್ರೀಯೋರ್ವಳ ದೇಹಸ್ಥಿತಿ ಯಾವ ಯಾವ ರೀತಿ ಇರುತ್ತೆ ಅನ್ನೋ ವಿಚಾರಗಳನ್ನೆಲ್ಲ ವಿವರವಾಗಿ ತಿಳಿಸೋ ಲೇಖನ ಇದು. ಹಾಗಾಗಿ ತಾಯಾಗೋ ಕನಸು ಕಾಣ್ತಾ ಇರೋ ಎಲ್ಲ ಸ್ತ್ರೀಯರು ಅಗತ್ಯವಾಗಿ ಈ ಲೇಖನಾನಾ ಓದ್ಲೇ ಬೇಕು!!

 Age Wise Fertility Timeline

ಬಹುತೇಕ ಸ್ತ್ರೀಯರು ತಾವು ಹುಟ್ಟೋವಾಗಲೇ ಸರಿಸುಮಾರು 1 ರಿಂದ 2 ಮಿಲಿಯನ್ ಗಳಷ್ಟು ಪಕ್ವವಾಗದ ಅಂಡಾಣುಗಳನ್ನು ಹೊಂದಿರ್ತಾರೆ. ಈ ಸ್ತ್ರೀಯರಲ್ಲಿ ಮುಟ್ಟು ಅಥವಾ ಋತುಚಕ್ರ ಆರಂಭ ಆಗೋ ಹೊತ್ತಿಗೆ ಅವುಗಳ ಪೈಕಿ ಕೇವಲ 400,000 ಅಂಡಾಣುಗಳಷ್ಟೇ ಉಳಿದುಕೊಂಡಿರುತ್ತವೆ. ಅವರಲ್ಲಿ ಮೊದಲು ಮುಟ್ಟು ಕಾಣಿಸಿಕೊಳ್ಳೋದು ಅವರು ಸುಮಾರು 12 ವರ್ಷ ವಯಸ್ಸಿನವರಾದಾಗ.

ಮುಂದೆ ಆಕೆ ಜೀವನದಲ್ಲಿ ಪ್ರತೀ ಬಾರಿ ಮುಟ್ಟಾದಾಗಲೂ ನೂರಾರು ಅಂಡಾಣುಗಳು ನಷ್ಟವಾಗುತ್ತವೆ. ಅವುಗಳಲ್ಲಿ ಅತ್ಯಂತ ಆರೋಗ್ಯವಾಗಿರೋ ಅಂಡಾಣುಗಳು ಮಾತ್ರ ಪರಿಪಕ್ವ ಮೊಟ್ಟೆಗಳಾಗುತ್ತವೆ. ಪುರುಷರ ವಿಚಾರದಲ್ಲಿ ಹೇಳೋದಾದರೆ, ತಮ್ಮ ವಯಸ್ಕ ಜೀವನದ ಬಹುಕಾಲದವರೆಗೂ ಅವರಲ್ಲಿ ಹೊಸ ವೀರ್ಯಾಣುಗಳು ಉತ್ಪತ್ತಿಯಾಗುತ್ತಲೇ ಇರುತ್ತವೆ.

ಶರೀರಕ್ಕೆ ವಯಸ್ಸಾದ ಹಾಗೆಲ್ಲ, ಅದು ಒಳಗೊಂಡಿರೋ ಅಂಡಾಣುಗಳ ಸಂಖ್ಯೆಯೂ ಕಡಿಮೆ ಆಗುತ್ತದೆ. ಇದರರ್ಥ, ಫಲವತ್ತತೆಗೆ (ಗರ್ಭಿಣಿ ಆಗೋದಕ್ಕೆ) ಬೇಕಾದ ಆರೋಗ್ಯಯುತ, ಪ್ರಬಲ ಮೊಟ್ಟೆಗಳನ್ನ ಉತ್ಪತ್ತಿ ಮಾಡೋದಕ್ಕೆ ಅಂಡಾಣುಗಳಿಗೆ ಇರೋ ಅವಕಾಶಾನೂ ಕಡಿಮೆ ಆಗ್ತಾ ಹೋಗತ್ತೆ. ಹದಿಹರೆಯದ ತರುಣಿಯರಲ್ಲಿ ಅಂಡಾಣುಗಳ ಪೂರೈಕೆ ಸಾಕಷ್ಟಿರುತ್ತದೆ, ಆದರೆ ಸ್ತ್ರೀಯರಿಗೆ 30 ಅಥವಾ 40 ವರ್ಷಗಳಾದಾಗ ಈ ಪೂರೈಕೆಯು ತೀರಾ ಕುಂಠಿತವಾಗುತ್ತದೆ. ವಿಪರ್ಯಾಸವೇನೆಂದರೆ, ಬಹುತೇಕ ಮಂದಿ ಸಂಸಾರ ಜೀವನ ಆರಂಭಿಸೋದರ ಬಗ್ಗೆ ಯೋಚ್ನೇ ಮಾಡೋದಕ್ಕೆ ಶುರು ಮಾಡೋವಾಗಲೇ ಅವರಿಗೆ ಅಷ್ಟು ವಯಸ್ಸು ಆಗೋಗಿರತ್ತೆ!

ಇವತ್ತಿನ ದಿನ, ಮೊದಲ್ನೇ ಸಾರಿ ಗರ್ಭಿಣಿಯಾಗೋರ ಸರಾಸರಿ ವಯೋಮಾನ 26.6 ವರ್ಷಗಳು. ಈ ವಯಸ್ಸು ಕೂಡ ಒಂದೇ ಸಮನೇ ಜಾಸ್ತಿಯಾಗ್ತಾನೇ ಇದೆ. ಯಾಕೇಂದ್ರೆ, ಇವತ್ತಿನ ದಿನಗಳಲ್ಲಿ, ತಂದೆತಾಯಿಯಾಗೋ ವಿಚಾರವನ್ನೇ ದಂಪತಿಗಳು ಮುಂದೂಡ್ತಾ ಬರ್ತಿದ್ದಾರೆ.

ಹೀಗೇ ಈ ಮುಂದೂಡೋ ಅಭ್ಯಾಸ, ಗರ್ಭಿಣಿಯಾಗೋ ಸಾಧ್ಯತೆಯ ಮೇಲೆ ಏನೆಲ್ಲ ಪರಿಣಾಮವನ್ನ ಉಂಟು ಮಾಡತ್ತೆ ಅನ್ನೋದನ್ನ ನಾವೀಗ ನೋಡೋಣ:

18 ರಿಂದ 24 ವರ್ಷಗಳವರೆಗೆ:

18 ರಿಂದ 24 ವರ್ಷಗಳವರೆಗೆ:

ಸ್ತ್ರೀಯ ದೇಹಾರೋಗ್ಯ ಪರಿಸ್ಥಿತೀನಾ ಗಮನದಲ್ಲಿಟ್ಟುಕೊಂಡು ಹೇಳೋದಾದ್ರೆ, ಗರ್ಭಿಣಿಯಾಗೋದಕ್ಕೆ 18 ರಿಂದ 24 ವರ್ಷಗಳವರೆಗಿನ ವಯಸ್ಸಿನಷ್ಟು ಅತ್ಯುತ್ತಮವಾಗಿರೋ ವಯಸ್ಸು ಇನ್ನೊಂದಿರೋದಕ್ಕೆ ಸಾಧ್ಯಾನೇ ಇಲ್ಲ!

ಈ ವಯೋಮಾನದವರಲ್ಲಿ, ಗರ್ಭಿಣಿಯಾಗೋದಕ್ಕೋಸ್ಕರ ಅತ್ಯಂತ ಆರೋಗ್ಯಯುತವಾಗಿರೋ ಅಂಡಾಣುಗಳೇ ಮೊದಲು ಪಕ್ವಗೊಳ್ಳೋದಕ್ಕೆ ಮುಂದೆ ಬರ್ತಾವೆ. ಹೀಗಾಗಿ, ಹದಿಹರೆಯರದ ಸ್ತ್ರೀಯರಲ್ಲಿ ಉತ್ಪತ್ತಿಯಾಗೋ ಅಂಡಾಣುಗಳು ತುಂಬಾ ಒಳ್ಳೆಯ ಗುಣಮಟ್ಟದವುಗಳಾಗಿರೋ ಸಾಧ್ಯತೇನೇ ಜಾಸ್ತಿ.

ಈ ವಯಸ್ಸಿನಲ್ಲಿ ಸ್ತ್ರೀಯು ಗರ್ಭಿಣಿಯಾದ್ರೆ, ಈ ಕೆಳಗೆ ಪಟ್ಟಿ ಮಾಡಿರೋ ಅಪಾಯಗಳು ತೀರಾ ಕಡಿಮೆ ಆಗುತ್ವೆ:

1) ಮಗುವಿನಲ್ಲಿ ಹುಟ್ತಾನೇ ಕಾಣಿಸಿಕೊಳ್ಳೋ ದೋಷಗಳು

2) ವಂಶವಾಹಿಯ ಸಮಸ್ಯೆಗಳು

3) ಕೆಲಬಗೆಯ ಫಲವತ್ತತೆಯ ತೊಂದರೆಗಳು

ಆದ್ರೂನೂ ಒಂದು ವಿಚಾರ: 18 ರಿಂದ 24 ವರ್ಷದವರಾಗಿದ್ದಾಗ ಮಗುವನ್ನ ಹಡೆಯೋದ್ರಿಂದ ಅಪಾಯ ಕಡಿಮೆ ಅಂತಾದ್ರೂ ಕೂಡ, ಏನೇನೂ ಅಪಾಯನೇ ಇರೋದಿಲ್ಲ ಅಂತೇನೂ ಅಲ್ಲ. ಆದರೆ ಪ್ರಮಾಣ, ಸಾಧ್ಯತೆ ಕಡಿಮೆ ಅಷ್ಟೇ.

ಫಲವತ್ತತೆಯ ಸಾಧ್ಯತೆ (ಗರ್ಭವತಿಯಾಗೋದರ ದರ) ಜೀವನದ ಗತಿಯಲ್ಲಿ ಏರುಪೇರಾಗ್ತಾ ಇರುತ್ತೆ. ಸ್ತ್ರೀಯೋರ್ವಳು 18 ರಿಂದ 24 ರ ಹರೆಯದವಳಾಗಿದ್ದಾಗ ಆಕೆ ಗರ್ಭಿಣಿಯಾಗೋ ಸಾಧ್ಯತೆ ಅತ್ಯಂತ ಪ್ರಬಲವಾಗಿರುತ್ತೆ. 20 ರಿಂದ 30 ರ ಹರೆಯದ ನಡುವೆ ಈ ನೈಸರ್ಗಿಕ ಫಲವತ್ತತೆಯ ದರ ಅನ್ನೋದು ಪ್ರತೀ ತಿಂಗಳು ಶೇ. 25% ರಷ್ಟು ಕುಂಠಿತಗೊಳ್ಳುತ್ತಾ ಸಾಗುತ್ತೆ. ಸ್ತ್ರೀಯ ವಯಸ್ಸು 35 ದಾಟಿದ ಮೇಲೆ ಫಲವತ್ತತೆಯ ದರ ಅನ್ನೋದು ಶೇ. 10% ಕ್ಕಿಂತಲೂ ಕಡಿಮೆ ಆಗುತ್ತೆ.

ಈಗೀಗಂತೂ 18 ರಿಂದ 24 ರ ವಯಸ್ಸಿನ ಸ್ತ್ರೀಯರಲ್ಲೂ ಗರ್ಭಿಣಿಯಾಗೋ ಸಾಧ್ಯತೆ ಕ್ಷೀಣವಾಗೋಕೆ ಶುರು ಆಗಿದೆ. ಈವತ್ತು ಹೆಚ್ಚುಕಡಿಮೆ ಎಲ್ಲ ಹೆಣ್ಣುಮಕ್ಕಳೂ ಉದ್ಯೋಗಸ್ಥರೇ. ಹಾಗಾಗಿ ಬಹಳ ಮಂದಿ ಸ್ತ್ರೀಯರು ತಾವು ವೃತ್ತಿಜೀವನದಲ್ಲಿ ಮುಂದೆ ಹೋಗಬೇಕೆನ್ನೋ ಯೋಚನೆಯಲ್ಲಿ, ಮದುವೆ ವಿಚಾರಾನಾ ಅವರಿಗೆ 30 ರಿಂದ 40 ವರ್ಷಗಳಾಗೋವರೆಗೂ ಮುಂದಕ್ಕೆ ಹಾಕ್ತಾನೇ ಬರ್ತಿದ್ದಾರೆ.

25 ರಿಂದ 30 ವರ್ಷಗಳವರೆಗೆ:

25 ರಿಂದ 30 ವರ್ಷಗಳವರೆಗೆ:

ವರ್ಷ, ವರ್ಷಗಳು ಉರುಳುತ್ತಾ ಹೋದ ಹಾಗೆ, ಸ್ತ್ರೀಯೋರ್ವಳು ನೈಸರ್ಗಿಕವಾಗಿ ಗರ್ಭಿಣಿಯಾಗೋ ಸಾಧ್ಯತೇನೂ ಕ್ಷೀಣವಾಗ್ತಾ ಹೋಗತ್ತೆ. ಆದರೂ ಕೂಡ 20 ವರ್ಷ ವಯಸ್ಸಾಗಿ 25 ವರ್ಷ ಆಗೋವರೆಗೂ, ಯಾವುದೇ ನೆರವಿಲ್ಲದೇ ಹೆಣ್ಣೋರ್ವಳು ಗರ್ಭಿಣಿಯಾಗೋ ಸಾಧ್ಯತೆ ಸುಮಾರು ಮಟ್ಟಿಗೆ ಚೆನ್ನಾಗೇ ಇರುತ್ತೆ.

ನಿಜ ಹೇಳಬೇಕೆಂದರೆ, 30 ವರ್ಷಗಳಿಗಿಂತ ಕೆಳ ವಯಸ್ಸಿನ ಆರೋಗ್ಯವಂತ ದಂಪತಿಗಳು, ತಮ್ಮ ಮೊದಲ ಮೂರು ತಿಂಗಳುಗಳ ಅವಧಿಯಲ್ಲಿ ಪ್ರಯತ್ನ ಪಟ್ಟರೆ, ತಂದೆತಾಯಿಗಳಾಗೋ ಸಾಧ್ಯತೆ ಶೇ. 40% ರಿಂದ ಶೇ. 60% ರಷ್ಟಿರುತ್ತದೆ. ಆದರೆ 30 ವರ್ಷಗಳು ದಾಟಿದ ಮೇಲೆ, ಗರ್ಭ ಧರಿಸೋ ಸಾಧ್ಯತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗ್ತಾ ಹೋಗೋಕೆ ಶುರುವಿಟ್ಟುಕೊಳ್ಳುತ್ತೆ.

"ಅಯ್ಯೋ! ನಾನಿನ್ನೂ ಸಂಸಾರ ಜೀವನ ಆರಂಭಾನೇ ಮಾಡಿಲ್ವಲ್ಲ ?!!" ಅಂತಾ ಗಾಬರಿಯಾಗ್ಬೇಡಿ. ಸಕಾಲದಲ್ಲಿ ಪೂರೈಕೆ ಮಾಡೋದಕ್ಕೆ ನಿಮ್ಮ ಶರೀರದಲ್ಲಿ ಮೊಟ್ಟೆಗಳ ಪೂರೈಕೆ ಇನ್ನೂ ಸಾಕಷ್ಟಿದೆ, ಯೋಚಿಸ್ಬೇಡಿ...

ಆದರೆ, ಒಂದು ವೇಳೆ ನೀವು ಗರ್ಭಿಣಿಯಾಗೋದಕ್ಕೆ ಪ್ರಯತ್ನ ಮಾಡ್ತಾ ಇದ್ದು, ಕನಿಷ್ಟ ಮೊದಲ ಮೂರು ತಿಂಗಳುಗಳವರೆಗೂ ಫಲ ಕಾಣ್ಲಿಲ್ಲ ಅಂತಾದ್ರೆ, ನಿಮ್ಮ ವೈದ್ಯರನ್ನ ಕಾಣಿ. ಈ ವಯಸ್ಸಿನ ಬಹಳಷ್ಟು ದಂಪತಿಗಳಿಗೆ ಯಾವುದೇ ಸಹಕಾರದ ಅಗತ್ಯ ಇಲ್ದೇನೇ ತಂದೆತಾಯಿಗಳಾಗೋಕೆ ಸಾಧ್ಯ ಇದೆ. ವೈದ್ಯರನ್ನ ಕಾಣೋಕೆ ಯಾಕ್ ಹೇಳಿದ್ವಿ ಅಂದ್ರೆ, ಅವರು ಕೊಡೋ ಸಲಹೆ, ಸೂಚನೆ ನಿಮಗೆ ಈ ವಿಚಾರ್ದಲ್ಲಿ ಸ್ವಲ್ಪ ನೆರವಾಗ್ಬೋದೂ ಅಂತಾ.

31 ರಿಂದ 35 ವರ್ಷಗಳವರೆಗೆ:

31 ರಿಂದ 35 ವರ್ಷಗಳವರೆಗೆ:

30 ರ ವಯೋಮಾನದ ಆರಂಭದ ವರ್ಷಗಳಲ್ಲಿ, ನೀವು ತಾಯಿಯಾಗೋ ಸಾಧ್ಯತೆ ಇನ್ನೂ ಜಾಸ್ತಿಯಾಗೇ ಇರುತ್ತೆ.

ಗರ್ಭಿಣಿಯಾಗೋದಕ್ಕೆ ಅಗತ್ಯ ಇರೋ ಆ ಉತ್ತಮ ಗುಣಮಟ್ಟದ ತತ್ತಿಗಳನ್ನ ಕೊಡೋ ತಾಕತ್ತು ಇನ್ನೂ ನಿಮ್ಮ ದೇಹಕ್ಕಿದೆ. ಆದರೆ, ಈ ವರ್ಷದ ಆರಂಭದಿಂದ ಅಂತಹಾ ತಾಕತ್ತು ವರ್ಷದಿಂದ ವರ್ಷಕ್ಕೆ ಒಂದೇ ಸಮನೆ ಕಡಿಮೆಯಾಗ್ತಾ ಹೋಗುತ್ತೆ. ಗರ್ಭಧಾರಣೆಯ ಸಾಧ್ಯತೆ 32 ವರ್ಷ ಆಗೋವರೆಗೆ ಕ್ರಮೇಣವಾಗಿ ಕಡಿಮೆಯಾಗ್ತಾ ಹೋಗುತ್ತೆ. ಆದರೆ ವಯಸ್ಸು 37 ಆದಾಗ, ಆ ಸಾಧ್ಯತೆ ಜರ್ರನೇ ಇಳಿದೋಗುತ್ತೆ. 30 ವರ್ಷಗಳಾದಾಗ ನೀವು ಗರ್ಭಧರಿಸೋ ಸಾಧ್ಯತೆ, ನೀವು 20 ವರ್ಷದವರಾಗಿದ್ದಾಗಿನ ಸಾಧ್ಯತೆಯ ಸುಮಾರು ಅರ್ಧದಷ್ಟಕ್ಕೆ ಇಳಿಯುತ್ತೆ.

ಹಾಗಾದರೆ, ನೀವೊಂದು ವೇಳೆ 30 ವರ್ಷ ವಯಸ್ಸಿನವರಾಗಿದ್ರೇ ನೀವು ಗರ್ಭಿಣಿಯಾಗೋದಕ್ಕೆ ಸಾಧ್ಯಾನೇ ಇಲ್ಲ ಅಂತಾ ಇದರರ್ಥನಾ ?! ಖಂಡಿತ ಹಾಗೇನೂ ಅಲ್ಲ.....

ವಿಷಯ ಏನಪ್ಪಾ ಅಂದ್ರೆ, ದೇಶದಾದ್ಯಂತ ಪ್ರತೀ ಐವರಲ್ಲಿ ಒಬ್ಬಳು ಸ್ತ್ರೀ 35 ವರ್ಷಗಳಾದ ಬಳಿಕ ತನ್ನ ಪ್ರಥಮ ಮಗುವನ್ನ ಪಡೀತಾಳೆ. ಹಾಗಂತ ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ಼್ ಹೆಲ್ತ್ ಹೇಳಿದೆ. ಆದ್ರೂನೂ, 30 ವರ್ಷ ವಯಸ್ಸಿನ ಮೂರು ದಂಪತಿಗಳಲ್ಲಿ ಒಂದು ದಂಪತಿ, ಒಂದಲ್ಲ ಒಂದು ಥರದ ಬಂಜೆತನದ ಸಮಸ್ಯೆ ಅನುಭವಿಸ್ತಾರೆ.

35 ರಿಂದ 40 ವರ್ಷಗಳವರೆಗೆ:

35 ರಿಂದ 40 ವರ್ಷಗಳವರೆಗೆ:

ಫಲವಂತಿಕೆ ಅನ್ನೋದು ವಿಪರೀತ ಕಡಿಮೆ ಆಗೋದು ಸ್ತ್ರೀಯರ 30 ರ ಹರೆಯದ ಉತ್ತರಾರ್ಧದಲ್ಲಿ ಹಾಗೂ 40 ರ ಹರೆಯದ ಪೂರ್ವಾರ್ಧದಲ್ಲಿ. 30 ರ ಹರೆಯದ ಉತ್ತರಾರ್ಧದಲ್ಲಿ ಸ್ತ್ರೀಯೋರ್ವಳು ಸರಾಗವಾಗಿ ಮಗುವಿಗೆ ಜನ್ಮ ನೀಡೋ ಸಾಧ್ಯತೆ, ಆಕೆಯ 20 ರ ಹರೆಯದ ಪೂರ್ವಾರ್ಧದಲ್ಲಿನ ಸಾಧ್ಯತೆಯ ಅರ್ಧದಷ್ಟಾಗಿರುತ್ತೆ.

2003 ನೇ ಇಸವಿಯಲ್ಲಿ ಕೈಗೊಂಡ ಒಂದು ಸಮೀಕ್ಷೆ ಹೇಳೋ ಪ್ರಕಾರ, ಈ ವಯೋಮಾನದ ಶೇಖಡಾ 60 ರಷ್ಟು ದಂಪತಿಗಳು, ಪ್ರಯತ್ನಿಸಲಾರಂಭಿಸಿದ ವರ್ಷದೊಳಗಾಗಿ ನೈಸರ್ಗಿಕವಾಗಿ ಮಗುವನ್ನ ಪಡೆಯೋದಕ್ಕೆ ಸಮರ್ಥರಾಗಿರುತ್ತಾರೆ. ಅದೇ ವೇಳೆಗೆ ಶೇ. 85% ರಷ್ಟು ದಂಪತಿಗಳು ಎರಡು ವರ್ಷಗಳೊಳಗಾಗಿ ಮಗುವನ್ನ ಪಡೆಯೋದಕ್ಕೆ ಸಮರ್ಥರಾಗಿರುತ್ತಾರೆ.

ಆದ್ರೂ ಕೂಡ, ಈ ವಯಸ್ಸಲ್ಲಿ, ತತ್ತಿಗಳಲ್ಲಿ ವಂಶವಾಹಿಗಳ ತೊಂದರೆಗಳು ಕಾಣಿಸಿಕೊಳ್ಳೋ ಅಪಾಯಾನೂ ಜಾಸ್ತಿಯಾಗಿರುತ್ತೆ. ಮುಂದೆ ಒಂದೊಂದು ವರ್ಷ ಕಳೆದಾಗಲೂ ಈ ಅಪಾಯ ಜಾಸ್ತಿಯಾಗ್ತಾನೇ ಹೋಗತ್ತೆ. ಇದರರ್ಥ ಏನಂದ್ರೆ, ಗರ್ಭಪಾತ ಅಥವಾ ಅಸಹಜ ಗರ್ಭಧಾರಣೆಯ ಸಾಧ್ಯತೆ ಜಾಸ್ತಿಯಾಗುತ್ತೆ.

ಕಳೆದೊಂದು ದಶಕದಲ್ಲಿ ಫಲವತ್ತತೆಯ ದರ ತುಂಬಾನೇ ಇಳಿಮುಖವಾಗಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಗರ್ಭಿಣಿಯಾಗೋದಕ್ಕೆ ಪ್ರಯತ್ನ ಪಡ್ತಿದ್ದಾರೆ.

ಇಸವಿ 2011 ರಿಂದ 2016 ರವರೆಗೆ, 35 ರಿಂದ 39 ರವರೆಗಿನ ಸ್ತ್ರೀಯರಲ್ಲಿ ಪ್ರತೀ ವರ್ಷ ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತಾ ಹೋಯಿತು, ಇಸವಿ 2017 ರಲ್ಲಿ ಶೇ. 1% ರಷ್ಟು ಇಳಿಮುಖವಾಯ್ತು. ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಹಾಗಂತ ವರದಿ ಮಾಡಿದೆ. 39 ಕ್ಕಿಂತಲೂ ಹೆಚ್ಚಿನ ವಯೋಮಾನದ ಸ್ತ್ರೀಯರಲ್ಲಿ ಗರ್ಭಧಾರಣೆ ಸಾಧ್ಯತೆ ಇನ್ನೂ ಹೆಚ್ಚಾಯ್ತು.

41 ರಿಂದ 45 ಕ್ಕಿಂತಲೂ ಅಧಿಕ ವರ್ಷಗಳವರೆಗೆ:

41 ರಿಂದ 45 ಕ್ಕಿಂತಲೂ ಅಧಿಕ ವರ್ಷಗಳವರೆಗೆ:

ಸಿಡಿಸಿ ವರದಿ ಮಾಡಿರೋ ಪ್ರಕಾರ, 40 ರಿಂದ 44 ರ ಹರೆಯದ ಸ್ತ್ರೀಯರಲ್ಲಿ ಜನನ ಪ್ರಮಾಣಗಳು ಇಸವಿ 2016 ಮತ್ತು 2017 ರ ಮಧ್ಯೆ ಶೇ. 2% ರಷ್ಟು ಹೆಚ್ಚಾಯಿತು. ಅದೇ ಅವಧಿಯಲ್ಲಿ, 45 ರಿಂದ 49 ರ ಹರೆಯದ ಸ್ತ್ರೀಯರಲ್ಲಿ ಜನನ ಪ್ರಮಾಣಗಳು ಶೇ. 3% ರಷ್ಟು ಹೆಚ್ಚಾಯಿತು. ನಿಜ ಹೇಳಬೇಕೆಂದರೆ, ಗರ್ಭಧಾರಣೆಯ ಸಾಮರ್ಥ್ಯ ಅನ್ನೋದು 40 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಸ್ತ್ರೀಯರಲ್ಲಿ ಅತ್ಯಧಿಕವಾಗಿ ಹೆಚ್ಚಳವಾಗ್ತಿರೋದು ಕಂಡು ಬರುತ್ತಿದೆ.

ಚೆನ್ನಾಗಿ ನೆನಪಲ್ಲಿಟ್ಟುಕೊಂಡಿರಬೇಕಾದ ಒಂದು ವಿಚಾರ ಯಾವ್ದಪ್ಪಾ ಅಂತಂದ್ರೆ, ಈ ವಯಸ್ಸುಗಳಲ್ಲಿ ಹೆಚ್ಚು ಹೆಚ್ಚು ಸ್ತ್ರೀಯರು ಗರ್ಭವನ್ನ ಧರಿಸ್ತಾ ಇದ್ರೂ ಕೂಡ, ವಯಸ್ಸಾದ ದಂಪತಿಗಳ ಮಗೂನ ಪಡೆಯೋ ಒಟ್ಟಾರೆ ಸಾಮರ್ಥ್ಯ ಇವತ್ತಿಗೂ ಕೂಡ ಯುವ ದಂಪತಿಗಳದ್ದಕ್ಕಿಂತ ತುಂಬಾನೇ ಕಡಿಮೆ ಇದೆ. ಅದಕ್ಕೆ ಕಾರಣ ಏನೂಂತಂದ್ರೆ, 40 ಕ್ಕೂ ಜಾಸ್ತಿ ವಯಸ್ಸಾದ್ಮೇಲೆ ಗರ್ಭಧಾರಣೆಯಾಗೋದು ತುಂಬಾನೇ ಕಷ್ಟ.

ಈ ವಯಸ್ಸಿಗಾಗಲೇ ನಿಮ್ಮ ದೇಹ ಋತುಚಕ್ರಾನಾ ಅರ್ಥಾತ್ ಮುಟ್ಟಾಗೋದನ್ನ ನಿಲ್ಲಿಸೋಕೆ ತಯಾರೀನಾ ನಡೆಸೋಕೆ ಶುರುವಿಟ್ಟುಕೊಳ್ಳುತ್ತೆ. ನಿಮ್ಮ ಅಂಡಾಶಯಗಳಲ್ಲಿ ಬಹುಶ: ಅಂಡಾಣುಗಳ ಪೂರೈಕೆ ಅನ್ನೋದು ಮುಕ್ತಾಯದ ಹಂತಾನಾ ತಲುಪಿರುತ್ತೆ. ಮುಂದೆ ಪ್ರತಿಬಾರಿ ಋತುಮತಿಯಾದಂತೆಲ್ಲ ಅಂಡಾಣುಗಳ ದಾಸ್ತಾನು ಇನ್ನಷ್ಟು ಕಡಿಮೆಯಾಗುತ್ತೆ. ಸ್ತ್ರೀಯು 50 ರ ಹರೆಯದ ಪೂರ್ವಾರ್ಧವನ್ನ ತಲುಪುವಷ್ಟರಲ್ಲೇ ಆಕೆಯ ಅಂಡಾಶಯದಲ್ಲಿ ಬಹುತೇಕ ಅಂಡಾಣುಗಳೇ ಇರೋದಿಲ್ಲ.

ಈ ವಯೋಮಾನದ ಸ್ತ್ರೀಯರಿಗೆ ಹುಟ್ಟಿದ ಮಕ್ಕಳಲ್ಲಿ ಹಲವಾರು ಜನನದೋಷಗಳು ಹಾಗೂ ಪ್ರಸವ ತೊಂದರೆಗಳು (ಹುಟ್ಟಿನಿಂದಾನೇ ಬರೋ ತೊಂದರೆಗಳು) ಕಾಣಿಸಿಕೊಳ್ಳೋ ಅಪಾಯ ತುಂಬಾನೇ ಹೆಚ್ಚು.

 ವಯಸ್ಸು ಮೀರಿದ ಸ್ತ್ರೀಯರಿಗೆ ಮಕ್ಕಳಾದರೆ

ವಯಸ್ಸು ಮೀರಿದ ಸ್ತ್ರೀಯರಿಗೆ ಮಕ್ಕಳಾದರೆ

ವಯಸ್ಸು ಮೀರಿದ ಸ್ತ್ರೀಯರಿಗೆ ಮಕ್ಕಳಾದರೆ ಅಂತಹ ಸ್ತ್ರೀಯರಲ್ಲಿ ಈ ಕೆಳಗೆ ಕಾಣಿಸಿರುವ ತೊಡಕುಗಳ ಅಪಾಯಾನೂ ಜಾಸ್ತಿಯಾಗುತ್ತೆ:

1) ಮಧುಮೇಹ

2) ಅಧಿಕ ರಕ್ತದೊತ್ತಡ

3) ಪ್ರೀಕ್ಲಾಂಪ್ಸಿಯಾ

ಇಂದಿನ ದಿನಗಳಲ್ಲಿ, ಜನರು ಸಂಸಾರ ಜೀವನಕ್ಕೆ ಕಾಲಿಡೋಕೆ ಮೀನಮೇಷ ಎಣಿಸ್ತಾ ಇದ್ದಾರೆ. ಆದ್ರೂನೂ ಒಂದು ಸಮಾಧಾನದ ಸಂಗತಿ ಏನಪ್ಪಾ ಅಂತಂದ್ರೆ, ಇವತ್ತು ವೈದ್ಯವಿಜ್ಞಾನಾನೂ ಸಾಕಷ್ಟು ಮುಂದುವರೆದಿದೆ. ಹಾಗಾಗಿ ಲೇಟಾಗಿ ಮದುವೆಯಾಗಿ, ತಂದೆತಾಯಿಗಳಾಗೋಕೆ ಪ್ರಯಾಸ ಪಡ್ತಾ ಇರೋ ದಂಪತಿಗಳ ಪಾಲಿಗೆ ಪ್ರನಾಳ ಶಿಶುವಿನಂತಹ ಫ಼ಲವಂತಿಕೆಯ ಚಿಕಿತ್ಸೆಗಳು ಇವತ್ತಿಗೆ ವರದಾನ ಆಗಿವೆ.

English summary

A Look Into the Age Wise Fertility Timeline

If you want to know which age is best to have baby look in to this age wise fertility timeline...
X
Desktop Bottom Promotion