For Quick Alerts
ALLOW NOTIFICATIONS  
For Daily Alerts

ಫಿಟ್ನೆಸ್‌ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳಿಗೂ ಅತ್ಯಗತ್ಯ...

By Manu
|

ಇಂದು ಆರೋಗ್ಯದ ಬಗ್ಗೆ ಜನತೆಯಲ್ಲಿ ಅರಿವು ಹಿಂದಿನ ದಿನಕ್ಕಿಂತಲೂ ಹೆಚ್ಚು ಮೂಡಿರುವುದನ್ನು ಗಮನಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆರೋಗ್ಯ ಕೇಂದ್ರ, ವ್ಯಾಯಾಮ ಶಾಲೆ, ಜಿಮ್‌ಗಳತ್ತ ಧಾವಿಸುತ್ತಿರುವುದನ್ನೂ, ತಮ್ಮ ನಿತ್ಯದ ಚಟುವಟಿಕೆಗಳಲ್ಲಿ ವ್ಯಾಯಾಮಕ್ಕೆ ಸಮಯ ಮೀಸಲಿಡುವುದನ್ನೂ ಗಮನಿಸಬಹುದು. ಇದು ನಿಜಕ್ಕೂ ಉತ್ತಮ ನಡೆಯಾಗಿದ್ದು ಆರೋಗ್ಯದ ಜೊತೆಗೇ ಉತ್ತಮ ದೇಹದಾರ್ಢ್ಯತೆ ಪಡೆಯಲೂ ನೆರವಾಗುತ್ತದೆ.

Expert Tips To Make Your Kids Stay Fit And Healthy

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಎಂಬ ಒಂದೇ ಕಾರಣ ನೀಡಿ ಹೆಚ್ಚಿನ ತಂದೆತಾಯಿಯರು ತಮ್ಮ ಮಕ್ಕಳಿಗೆ ಅಗತ್ಯ ವ್ಯಾಯಾಮದ ಬಗ್ಗೆ ಹೆಚ್ಚಿನ ಕಾಳಜಿ ತೋರುವುದೇ ಇಲ್ಲ. ವಾಸ್ತವವಾಗಿ ಮಕ್ಕಳಿಗೂ ವ್ಯಾಯಾಮ ಮತ್ತು ಉತ್ತಮ ದೇಹದಾರ್ಢತೆಗಾಗಿ ಶ್ರಮವಹಿಸುವ ಅಗತ್ಯವಿದೆ. ಮಕ್ಕಳಲ್ಲಿ ವ್ಯಾಯಾಮದ ಕೊರತೆಯಿಂದ ಬೆಳವಣಿಗೆ ಕ್ಷೀಣಿಸುವ ಜೊತೆಗೇ ಸ್ಥೂಲಕಾಯಕ್ಕೆ ಒಳಗಾಗುವ ಸ್ಥಿತಿಯ ಸಾಧ್ಯತೆಯೂ ಹೆಚ್ಚುತ್ತದೆ.

ಅದರಲ್ಲೂ ಇಂದಿನ ಮಕ್ಕಳ ಕೈಗೆ ಸಿಕ್ಕಿರುವ ವೀಡಿಯೋ ಗೇಮ್, ಫೋನ್ ಮತ್ತು ಕಂಪ್ಯೂಟರ್ ಗೇಮ್‌ಗಳ ಕಾರಣದಿಂದ ಶಾರೀರಿಕ ಚಟುವಟಿಕೆ ಕಡಿಮೆಯಾಗಿದೆ. ಅಲ್ಲದೇ ಸಿದ್ಧರೂಪದಲ್ಲಿ ಸಿಗುತ್ತಿರುವ ಅನಾರೋಗ್ಯಕರ ಆಹಾರಗಳು ಕೊಬ್ಬನ್ನು ಅಪಾರವಾಗಿ ತುಂಬಿಸಿ ಸ್ಥೂಲಕಾಯಕ್ಕೆ ನೆರವಾಗುತ್ತಿವೆ.

ಆದ್ದರಿಂದ ಮಕ್ಕಳಿಗೆ ಇಷ್ಟವಾಗದಿದ್ದರೂ ಬಲವಂತವಾಗಿಯಾದರೂ ದೈಹಿಕ ಚಟುವಟಿಕೆ ಪಾಲಿಸಲು ತಜ್ಞರು ಸಲಹೆ ನೀಡುತ್ತಾರೆ. ಆದರೆ ಮಕ್ಕಳನ್ನು ಇದಕ್ಕಾಗಿ ಒಲಿಸುವುದು ಅಷ್ಟು ಸುಲಭವಲ್ಲ. ಹಾಗಾದರೆ ನಾವು ಏನು ಮಾಡಬೇಕು? ಎಂದೇ ಕೇಳುವ ಹೆಚ್ಚಿನ ತಾಯಂದಿರ ಪ್ರಶ್ನೆಗಳಿಗೆ ತಜ್ಞರು ಏನು ಉತ್ತರ ನೀಡುತ್ತಾರೆ ಎಂಬುದನ್ನು ಮುಂದೆ ಒದಿ...

ಸಲಹೆ #1
ಪ್ರತಿ ವಾರದಲ್ಲಿ ಕೆಲವು ದಿನಗಳಾದರೂ ನಿಮ್ಮ ಮಕ್ಕಳು ಯಾವುದಾದರೊಂದು ದೈಹಿಕ ಚಟುವಟಿಕೆಯಲ್ಲಿ ಅನಿವಾರ್ಯವಾಗಿ ಭಾಗಿಯಾಗುವಂತೆ ನೋಡಿಕೊಳ್ಳಿ. ಮಕ್ಕಳಿಗೆ ಇಷ್ಟವಾಗುವ ಕರಾಟೆ, ಈಜು, ವಿವಿಧ ಆಟಗಳು, ಮಕ್ಕಳ ಜಿಮ್, ಮೊದಲಾಗಿ ಇಂದು ಹತ್ತು ಹಲವು ಆಯ್ಕೆಗಳಿವೆ. ಇವಕ್ಕೆಲ್ಲಾ ಹಣ ಪೋಲು ಮಾಡಲು ಇಷ್ಟವಿಲ್ಲದಿದ್ದರೆ ನಿಮ್ಮೊಂದಿಗೆ ಸೈಕ್ಲಿಂಗ್, ಮುಜಾವಿನ ನಡಿಗೆ, ಕೊಂಚ ದೂರದ ಓಟ, ಹಳ್ಳಿಯ ಆಟಗಳು (ಉದಾಹರಣೆಗೆ ಜೂಟಾಟ, ಕುಂಟಾಟ ಇತ್ಯಾದಿ) ಮೊದಲಾದವುಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ. ಇವು ಮಕ್ಕಳಿಗೂ ಇಷ್ಟವಾಗುತ್ತವೆ ಹಾಗೂ ದೇಹದಾರ್ಢ್ಯತೆ ಉತ್ತಮಗೊಳ್ಳಲೂ ಸಾಧ್ಯವಾಗುತ್ತದೆ.

ಸಲಹೆ #2
ಮಕ್ಕಳನ್ನು ಸುಮ್ಮನೇ ಆಡಿಕೊಳ್ಳಿ ಎಂದು ಅವರ ಪಾಲಿಗೆ ಬಿಟ್ಟು ಬಿಡುವ ಬದಲು ಅವರ ಆಟದಲ್ಲಿ ಒಬ್ಬ ಆಟಗಾರನಾಗಿ ಪಾಲಕರು ಪಾಲ್ಗೊಳ್ಳುವ ಮೂಲಕ ಮಕ್ಕಳಲ್ಲಿ ಭಾವನಾತ್ಮಕ ಸಂಬಂಧ ಹೊಂದುವ ಜೊತೆಜೊತೆಗೇ ದೇಹದಾರ್ಢ್ಯತೆ ಹೆಚ್ಚಲೂ ಸಾಧ್ಯವಾಗುತ್ತದೆ. ಪರೋಕ್ಷವಾಗಿ ಈ ಚಟುವಟಿಕೆಗಳು ಪೋಷಕರಿಗೂ ಅಗತ್ಯ ವ್ಯಾಯಾಮ ಒದಗಿಸುತ್ತವೆ.

ಸಲಹೆ#3
ನಿಮ್ಮ ಮಕ್ಕಳು ವೀಡಿಯೋ ಗೇಮ್‌ಗಳನ್ನು ಆಡುತ್ತಿದ್ದರೆ ವ್ಯಸನದ ಹಂತಕ್ಕೆ ದಾಟಲು ಹೆಚ್ಚಿನ ಸಮಯ ಬೇಕಾಗಿಲ್ಲ. ಆದ್ದರಿಂದ ಯಾವುದೇ ಗ್ಯಾಜೆಟ್ ನೀಡುವ ಮುನ್ನ ಇದಕ್ಕೆ ಸಮಯಾವಧಿಯನ್ನು ನಿಗದಿಪಡಿಸಿ. ಆಟದ ಹುಚ್ಚು ಹಿಡಿದ ಮಕ್ಕಳು ಕೆಲವೇ ನಿಮಿಷ, ಇನ್ನೈದೇ ನಿಮಿಷ ಎಂದು ಈ ಗಡುವನ್ನು ವಿಸ್ತರಿಸಿಕೊಳ್ಳಲು ರಚ್ಚೆ ಹಿಡಿಯುವುದುಂಟು. ಯಾವುದೇ ಕಾರಣಕ್ಕೂ ಈ ಮಿತಿಗೆ ರಿಯಾಯಿತಿ ನೀಡದೇ ಅವರಿಗೆ ಮನೆಯ ಹೊರಗೆ ಆಡುವ ಆಟಗಳನ್ನು ಹೆಚ್ಚು ಆಡುವಂತೆ ಪ್ರೋತ್ಸಾಹಿಸಿ.

ಸಲಹೆ #4
ನಿಮ್ಮ ಮಕ್ಕಳ ಸ್ನೇಹಿತರ ಪೋಷಕರು ತಮ್ಮ ಮಕ್ಕಳಿಗಾಗಿ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ವಿಚಾರಿಸಿ. ಈ ಚಟುವಟಿಕೆಯನ್ನು ನಿಮ್ಮ ಮಕ್ಕಳೂ ಅನುಸರಿಸುವ ಬಗ್ಗೆ ಪರಾಮರ್ಶಿಸಿ. ವಾಸ್ತವವಾಗಿ ಮಕ್ಕಳು ಸ್ವತಃ ಒಲ್ಲದ ಚಟುವಟಿಕೆಗಳನ್ನು ತಮ್ಮ ಸ್ನೇಹಿತರೂ ಅನುಸರಿಸುತ್ತಿದ್ದಾರೆ ಎಂದು ಅರಿತ ಬಳಿಕ ತಮ್ಮ ಮನಸ್ಸು ಬದಲಾಯಿಸಿರುವುದನ್ನು ತಜ್ಞರು ಗಮನಿಸಿದ್ದಾರೆ.

ಸಲಹೆ#5
ಸ್ಥೂಲಕಾಯ ಎಷ್ಟು ಹಾನಿಕರ ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಮಕ್ಕಳಿಗೆ ನೀಡುವ ಮೂಲಕ ಮಕ್ಕಳನ್ನು ಅಟೋಟದ ಚಟುವಟಿಕೆಗೆ ಪ್ರೇರೇಪಿಸುವುದು ಪೋಷಕರ ಜವಾಬ್ದಾರಿಯೂ ಆಗಿದೆ. ಅಲ್ಲದೇ ಕಂಪ್ಯೂಟರ್ ಇಂದಿನ ಅಗತ್ಯವಾದರೂ ಇದಕ್ಕಿಂತಲೂ ನಿಮ್ಮ ಆರೋಗ್ಯ ಮತ್ತು ವಿಶೇಷವಾಗಿ ಕಣ್ಣುಗಳನ್ನು ಹೆಚ್ಚಿನ ಒತ್ತಡಕ್ಕೆ ಮಣಿಯದಂತೆ ಉಳಿಸಿಕೊಳ್ಳುವುದೇ ಜಾಣತನ ಎಂದು ಒಪ್ಪಿಸುವುದು ಉತ್ತಮ.

English summary

Expert Tips To Make Your Kids Stay Fit And Healthy

Most adults, these days, give a lot of importance to fitness. More and more people are making fitness routine a part of their day, in order to stay healthy with a toned body. However, many a times, parents tend to ignore the fact that even children need to stay fit, in order to remain healthy and strong. Parents tend to focus more on their kid's school work and extracurricular activities and so, fitness often takes the back seat.
Story first published: Friday, June 24, 2016, 11:58 [IST]
X
Desktop Bottom Promotion