For Quick Alerts
ALLOW NOTIFICATIONS  
For Daily Alerts

ಪರೀಕ್ಷೆಯಲ್ಲಿ ನಕಲು ಮಾಡಲು, ಪೋಷಕರ ಒತ್ತಡ ಕಾರಣವೇ?

By Manu
|

ಮಕ್ಕಳು ಉತ್ತಮ ಫಲಿತಾಂಶವನ್ನು ತರಬೇಕೆಂದು ಪ್ರತಿ ತಂದೆತಾಯಿಯರೂ ಅಪೇಕ್ಷಿಸುತ್ತಾರೆ. ಇದರಿಂದ ಓದು ಮತ್ತು ಇನ್ನೂ ಹೆಚ್ಚು ಓದು ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ನಿಜವಾದ ಕಲಿಕೆಗಿಂತ ಗಳಿಸಿದ ಅಂಕಗಳನ್ನೇ ಪ್ರಮುಖವಾಗಿ ಚರ್ಚಿಸಲಾಗುತ್ತದೆ. ಅಷ್ಟೇ ಆದರೆ ಚಿಂತೆಯಿಲ್ಲ, ಈ ಅಂಕಗಳನ್ನು ಇತರರ ಅಂಕಗಳೊಂದಿಗೆ ಹೋಲಿಸಿ ಹೀಯಾಳಿಸಿ ಓದಿದ್ದು ಕಡಿಮೆಯಾಯಿತು ಎಂಬಂತೆ ವರ್ತಿಸುತ್ತಾರೆ.

Does Parental Pressure Make Kids Copy-Cats?

ಆದರೆ ಇವೆಲ್ಲವೂ ಮಕ್ಕಳನ್ನು ಅಂಕತರುವ ಯಂತ್ರವನಾಗಿಸುತ್ತದೆಯೇ ಹೊರತು ಮಾನವೀಯ ಗುಣವಿರುವ ವ್ಯಕ್ತಿಗಳನ್ನಲ್ಲ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಪಾಲಕರ ಒತ್ತಡವನ್ನು ಸಹಿಸಲಾರದೇ ಹೆಚ್ಚಿನ ಮಕ್ಕಳು ಅನಿವಾರ್ಯವಾಗಿ ಕಾಪಿ ಹೊಡೆಯುವ ಅಥವಾ ನಕಲು ಹೊಡೆಯುವ ಚಾಳಿಗೆ ಸಿಕ್ಕಿಕೊಳ್ಳುತ್ತಾರೆ. ಪಾಲಕರ ಒತ್ತಡ ಕಾರಣ ಮಕ್ಕಳು ತಮ್ಮ ನೆಚ್ಚಿನ ಹವ್ಯಾಸ ಅಥವಾ ಆಟೋಟಗಳಿಗೂ ತಪ್ಪಿಸಿಕೊಳ್ಳುವ ಸಂಭವವಿರುವ ಕಾರಣ ಇದರಿಂದ ಹೊರಬರಲು ಕೊಂಚ ಕಾಪಿಹೊಡೆದರೆ ತೊಂದರೆಯಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಈ ವಿಷಯದಲ್ಲಿ ನಡೆದ ಅಧ್ಯಯನಗಳಲ್ಲಿ ಕಂಡುಬಂದ ವಿವರಗಳು ಆಘಾತಕಾರಿಯಾಗಿವೆ.

ಕೆಲವು ಮಕ್ಕಳು ದಿನದ ಪಾಠಗಳಲ್ಲಿ ಮತ್ತು ಮಧ್ಯಂತರ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರದಿದ್ದವರು ಆತಂಕಕ್ಕೆ ಒಳಗಾಗಿ ಅಂತಿಮ ಪರೀಕ್ಷೆಯಲ್ಲಿಯೂ ನಕಲು ಹೊಡೆಯುವ ನಿರ್ಧಾರ ಮತ್ತು ಅದಕ್ಕಾಗಿ ಕುಟಿಲ ಉಪಾಯಗಳನ್ನು ಯೋಜಿಸುವವರಾಗಿರುತ್ತಾರೆ. ಹೆಚ್ಚಿನವರು ಈ ಕಾಪಿ ಹೊಡೆಯುವ ತಂತ್ರಗಳನ್ನೂ ಇತರರಿಂದ ಕಾಪಿ ಮಾಡುತ್ತಾರೆ.

ಒಂದು ಸಮೀಕ್ಷೆಯಲ್ಲಿ ವಿದಿಧ ಪರೀಕ್ಷಾ ಸಂದರ್ಭಗಳಲ್ಲಿ ಕಾಪಿ ಹೊಡೆದು ಸಿಕ್ಕಿಹಾಕಿಕೊಂಡ ಎರಡು ಸಾವಿರಕ್ಕೂ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಅವರ ಮನಸ್ಸಿನ ಯೋಚನೆಗಳನ್ನು ಮತ್ತು ಕಾಪಿ ಹೊಡೆಯಲು ಕಾರಣವನ್ನು ಕೇಳಲಾಯ್ತು. ಕಾಪಿ ಹೊಡೆಯಲು ಕಾರಣ ಮತ್ತು ಪ್ರೇರಣೆ ಏನು ಎಂಬ ಪ್ರಶ್ನೆಗೆ ಸರಿಸುಮಾರು ಎಲ್ಲರೂ ಹೆಚ್ಚಿನ ಶ್ರಮವಿಲ್ಲದೇ ಪರೀಕ್ಷೆ ಪಾಸು ಮಾಡುವ ಹಂಬಲ ಎಂದು ಉತ್ತರ ನೀಡಿದರು.

ಇಂದಿನ ದಿನಗಳು ಅತಿ ಸ್ಮರ್ಧಾತ್ಮಕವಾಗಿದ್ದು ಅಂಕಗಳಿಂದಲೇ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಏನೇ ಮಾಡಿಯಾದರೂ ಉತ್ತಮ ಅಂಕಗಳನ್ನು ಪಡೆಯಬೇಕು ಎಂದು ಪ್ರತಿಯೊಬ್ಬರೂ ಹಂಬಲಿಸುತ್ತಾರೆ. ಇನ್ನೊಂದು ಕಡೆಯಲ್ಲಿ ಜನರಿಗೂ ಯಾವುದೇ ಶ್ರಮವಿಲ್ಲದೇ ಸುಲಭವಾಗಿ ಹಣ ಮಾಡುವುದೇ ಚಿಂತೆಯಾಗಿರುತ್ತದೆ. ಅಂತೆಯೇ ಪರಿಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ದೊಡ್ಡ ವೇತನ ತರುವ ಉದ್ಯೋಗ ಪಡೆಯಲೆಂದೇ ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಾರೆ.

ಒಂದು ವೇಳೆ ಈ ಒತ್ತಡ ಮಕ್ಕಳ ಸಾಮರ್ಥ್ಯಕ್ಕೂ ಮೀರಿದ ಬೇಡಿಕೆಯಾಗಿದ್ದರೆ ಮಕ್ಕಳಿಗೆ ಏನು ಮಾಡುವುದೆಂದೇ ತೋರುವುದಿಲ್ಲ. ಕಡೆಗೆ ಸೋತ ಮನಸ್ಸು ಕಾಪಿ ಹೊಡೆಯುವತ್ತ ತಿರುಗುತ್ತದೆ. ಪ್ರಾರಂಭದಲ್ಲಿ ಒಳಮನಸ್ಸು ಇದು ತಪ್ಪು ಎಂದು ಹೇಳಿದರೂ ಒಂದು ಪ್ರಶ್ನೆ ಮಾತ್ರವೇ ಅಲ್ಲವೇ ಇದರಿಂದೇನಾಯಿತು ಎಂಬ ನಿರ್ಧಾರ ಒಂದು ಕಡೆಯಿಂದ ವಿವೇಕಕ್ಕೆ ಬಿರುಕು ನೀಡುತ್ತದೆ. ಈ ಬಿರುಕು ದೊಡ್ಡದಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ.

ಇಂದು ಸಮಾಜದಲ್ಲಿ ಗಣ್ಯರಾಗಿರುವವರೆಲ್ಲಾ ಶಾಲಾ ಕಾಲೇಜುಗಳಲ್ಲಿ ರ್‍ಯಾಂಕ್ ಪಡೆದವರೇ ಅಲ್ಲ. ಯಶಸ್ವಿಯಾಗಿ, ಹೆಚ್ಚಿನ ಧನ ಸಂಪಾದನೆ ಮಾಡಿರುವವರೂ ಹೆಚ್ಚು ಅಂಕಗಳಿಸಿದವರಲ್ಲ. ಹೆಚ್ಚು ಅಂಕ ಗಳಿಸಿದವರೆಲ್ಲಾ ಉತ್ತಮ ವ್ಯಕ್ತಿಗಳಾಗಿಲ್ಲ. ಆದ್ದರಿಂದ ಮಕ್ಕಳ ನೈಜ ಸಾಮರ್ಥ್ಯವನ್ನು ಅರಿತು ಅವರ ಇಷ್ಟದ ವೃತ್ತಿಯನ್ನು ಪಡೆಯಲು ನೆರವಾಗುವ ಮೂಲಕ ಪಾಲಕರು ಮತ್ತು ಶಿಕ್ಷಕರು ಹೆಚ್ಚಿನ ಒಲವು ತೋರುವುದೇ ಸಂತೃಪ್ತ ಜೀವನಕ್ಕೆ ನಾಂದಿಯಾಗಿದೆ.

English summary

Does Parental Pressure Make Kids Copy-Cats?

A new study claims that parental pressure could be one of the reasons that could make kids copy in their exams. When parents force their kids to excel all the time without even bothering about their individual interests or capacities, children might develop a mindset where they try to win by hook or crook to escape the pressure.
Story first published: Thursday, March 17, 2016, 10:15 [IST]
X
Desktop Bottom Promotion