For Quick Alerts
ALLOW NOTIFICATIONS  
For Daily Alerts

ಮಕ್ಕಳ ಮುಂದೆ ವಾಗ್ವಾದ ಮಾಡುವ ಮುನ್ನ ಸ್ವಲ್ಪ ಯೋಚಿಸಿ

By Arshad
|

ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಯಂತೆ ಪ್ರತಿ ದಂಪತಿಗಳ ನಡುವೆಯೂ ಕೊಂಚವಾದರೂ ಜಗಳ ಅಥವಾ ಕಲಹವಿರಲೇಬೇಕು. ಆಗಲೇ ಸಂಸಾರದಲ್ಲಿ ಸಾಮರಸ್ಯವಿರುವುದು. ಆದರೆ ಕೆಲವೊಮ್ಮೆ ಚಿಕ್ಕಪುಟ್ಟ ಕಲಹಗಳು ವಾಗ್ವಾದದ ರೂಪ ಪಡೆದು ಕದನದವರೆಗೂ ಮುಂದುವರೆಯಬಹುದು. ಆದರೆ ಇವು ಮಕ್ಕಳ ಎದುರಲ್ಲಿ ಆದರೆ ಅವರ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

ಏಕೆಂದರೆ ಮಕ್ಕಳು ತಮ್ಮೆಲ್ಲಾ ಚಟುವಟಿಕೆಗಳನ್ನು ತಮ್ಮ ಹಿರಿಯರಿಂದಲೇ ಕಲಿತುಕೊಳ್ಳುತ್ತಾರೆ. ಭಾಷೆ, ನಡೆನುಡಿ, ಆಹಾರಕ್ರಮ, ಇತರರನ್ನು ಗೌರವಿಸುವ, ಅಥವಾ ಕಡೆಗಣಿಸುವ ಬುದ್ದಿ, ಬಡವರ ಬಗ್ಗೆ ಕಾಳಜಿ, ಅನುಕಂಪ, ಹೊಟ್ಟೆಕಿಚ್ಚು ಮೊದಲಾದ ಎಲ್ಲಾ ನಡೆಗಳಿಗೆ ಪಾಲಕರು ಮೊದಲಾಗಿ ಪ್ರೇರಣೆಯಾಗುತ್ತಾರೆ. ಅಂತೆಯೇ ಮಕ್ಕಳ ಎದುರಿಗೆ ನಡೆಸುವ ಜಗಳವೂ ಅವರಲ್ಲಿ ಜಗಳತನದ ಮತ್ತು ಕೆಟ್ಟ ಪದಗಳ ಉಪಯೋಗ ಹುಟ್ಟುಹಾಕುತ್ತದೆ. ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!

ಅಪರೂಪಕ್ಕೊಮ್ಮೆ ಗಂಡ ಹೆಂಡಿರ ನಡುವೆ ಯಾವುದೋ ವಿಷಯದಲ್ಲಿ ಅಪಶೃತಿ ಮೀಟಿ ಇಬ್ಬರ ನಡುವೆ ಸಿಟ್ಟಿನ ಹೊಗೆ ತಾಂಡವವಾಡುತ್ತದೆ. ಪರಿಣಾಮವಾಗಿ ಇಬ್ಬರೂ ತಮ್ಮ ದನಿಗಳನ್ನು ತಾರಕಕ್ಕೇರಿಸಿ ಇನ್ನೊಬ್ಬರ ಮೇಲೆ ಆರೋಪ, ದೂಷಣೆಗಳನ್ನು ಹೇರಲು ತೊಡಗುತ್ತಾರೆ. ಈ ಸಮಯದಲ್ಲಿ ಮಕ್ಕಳು ಅಕ್ಕಪಕ್ಕ ಇದ್ದರೂ ಆಗ ಈ ಪದಗಳನ್ನು ಉಪಯೋಗಿಸಬಾರದು ಎಂಬ ಮನಃಸ್ಥಿತಿಯಲ್ಲಿ ಇಬ್ಬರೂ ಇರುವುದಿಲ್ಲ.

ಮಕ್ಕಳಂತೂ ಬೆರಗಾಗಿ ಬಿಟ್ಟಕಣ್ಣುಗಳಿಂದ ಮೈಯೆಲ್ಲಾ ಕಿವಿಯಾಗಿ ನಿಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ. ಹೆಚ್ಚಿನ ಸಮಯದಲ್ಲಿ ಗಂಡಹೆಂಡಿರು ಕೋಣೆಯೊಳಕ್ಕೆ ಜಗಳವಾಡುತ್ತಿದ್ದರೂ ಹೊರಗಿರುವ ಮಕ್ಕಳಿಗೆ ಆ ಮಾತುಗಳೆಲ್ಲಾ ಸ್ಪಷ್ಟವಾಗಿ ಕೇಳುತ್ತಿರುತ್ತವೆ. ಅಲ್ಲದೇ ಈ ಸಮಯದಲ್ಲಿ ಮಕ್ಕಳು ಬಾಗಿಲಿಗೆ ಕಿವಿಯಾನಿಸಿ ಕೇಳುವುದನ್ನೂ ಪ್ರತಿ ಮನೆಯಲ್ಲಿಯೂ ಗಮನಿಸಬಹುದು! ಮಕ್ಕಳ ಕುತೂಹಲವೇ ಅಂತಹದ್ದು!

ಆದ್ದರಿಂದ ಮುಚ್ಚಿರುವ ಕೋಣೆಯೊಳಗೆ ವಾಗ್ವಾದ ನಡೆಸಿದರೂ ನೀವು ನಿಮ್ಮ ಮಕ್ಕಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಮಾತುಗಳಲ್ಲಿರುವ ಕಟುಪದಗಳನ್ನು ನಿಮ್ಮ ಮಕ್ಕಳು ಕಲಿಯುವುದು ನಿಮಗಿಷ್ಟವಿಲ್ಲ. ಈ ಪರಿಸ್ಥಿತಿಯಲ್ಲಿ ಏನು ಮಾಡುವಿರಿ? ಮೊತ್ತ ಮೊದಲನೆಯದಾಗಿ ಈ ಪರಿಸ್ಥಿತಿಗೆ ಬರದೇ ಇರದಂತೆ ನೋಡಿಕೊಳ್ಳುವುದು ಜಾಣರ ಲಕ್ಷಣ. ಆದರೆ ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ವಾಗ್ವಾದವಾಗಿಯೇ ಆಗುತ್ತದೆ? ಈಗ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ನಿವಾರಿಸಲಿದೆ. ಮಕ್ಕಳಿಗೆ ಆಟ-ಪಾಠದ ಜೊತೆಗೆ ತಾಳ್ಮೆ ಕೂಡ ಅತ್ಯಗತ್ಯ

ನಿಮ್ಮ ಮಾತುಗಳನ್ನು ನಿಯಮಿತಗೊಳಿಸಿ

ನಿಮ್ಮ ಮಾತುಗಳನ್ನು ನಿಯಮಿತಗೊಳಿಸಿ

ಒಂದು ವೇಳೆ ಪರಿಸ್ಥಿತಿ ಕೈಮೀರುತ್ತಿದೆ ಎಂದಾಕ್ಷಣ ಮಕ್ಕಳನ್ನು ನೆಪವಾಗಿಸಿ ಈ ಕಲಹವನ್ನು ಮುಗಿಸಲು ಯತ್ನಿಸಿ. ಇಬ್ಬರಲ್ಲೊಬ್ಬರು ಕೊಂಚ ಕರಗಿದ ತಕ್ಷಣ ಇನ್ನೊಬ್ಬರೂ ಕರಗುವುದನ್ನು ಮನಃಶಾಸ್ತ್ರಜ್ಞರು ಕಂಡುಕೊಂಡ ಸತ್ಯ. ಆದರೆ ಶೇ 99 ಪ್ರಸಂಗಗಳಲ್ಲಿ ಇಬ್ಬರೂ ತಮ್ಮ ಅಹಮ್ಮಿಕೆ ಬಿಡಲು ತಯಾರಿರದೇ ಇರುವುದೇ ಕಲಹಕ್ಕೆ ಶೇ 99 ಕಾರಣ. ಮನಃಶಾಸ್ತ್ರಜ್ಞರ ಅಭಿಪ್ರಾಯಕ್ಕೆ ಬೆಲೆನೀಡಿ ಒಮ್ಮೆ ಈ ನಿಟ್ಟಿನಲ್ಲಿ ಪ್ರಯತ್ನಿಸಿ. "ಮಕ್ಕಳು ಆಲಿಸುತ್ತಿದ್ದಾರೆ ದಯವಿಟ್ಟು ಹೀಗೆಲ್ಲಾ ಮಾತನಾಡಬೇಡಿ, ಸರಿ ನಾನೇ ಸೋತೆ, ನೀವು ಹೇಳಿದ ಹಾಗೇ ಆಗಲಿ" ಎಂದು ನಿಮ್ಮ ಸಂಗಾತಿಗೆ ಶರಣಾಗಿಬಿಡಿ. ನಂತರ ಆಗುವ ಪವಾಡವನ್ನು ನೀವೇ ಕಾಣುವಿರಂತೆ.

ಮಕ್ಕಳೆದುರು ಸೌಮ್ಯ ಪದಗಳನ್ನು ಉಪಯೋಗಿಸಿ

ಮಕ್ಕಳೆದುರು ಸೌಮ್ಯ ಪದಗಳನ್ನು ಉಪಯೋಗಿಸಿ

ನಿಮ್ಮ ಕಲಹವನ್ನು ಎಂದಿಗೂ ಮಕ್ಕಳು ಕೇಳಿಸಿಕೊಳ್ಳುತ್ತಿದ್ದಾರೆ ಎಂದೇ ಪರಿಗಣಿಸಿ ನಿಮ್ಮ ಪದಗಳನ್ನು ಉಪಯೋಗಿಸಿ. ಸಾಧ್ಯವಾದಷ್ಟು ಸೌಮ್ಯ ಪದಗಳನ್ನೇ ಉಪಯೋಗಿಸಿ. ನಿಮ್ಮ ಜಗಳವನ್ನು ನಿಮ್ಮ ಮಕ್ಕಳು ನೋಡುವುದು ನಿಮಗಿಷ್ಟವಿಲ್ಲ ಸರಿ, ಆದರೆ ಕೆಲವೊಮ್ಮೆ ಅನಿವಾರ್ಯವಾದಾಗ ಮಕ್ಕಳೆದುರು ನಯವಾಗಿಯೇ ಗದರಿಸಿ. ಇದು ನಿಮ್ಮ ಮಕ್ಕಳಿಗೆ ಒಂದು ಪಾಠದಂತಿರಲಿ. ಇದರಿಂದ ಮಕ್ಕಳು ಸಹಾ ವಾಸ್ತವಕ್ಕೆ ಹೆಚ್ಚು ತೆರೆದುಕೊಂಡಂತಾಗುತ್ತದೆ.

ಜಗಳ ತಾತ್ಕಾಲಿಕ ಎಂದು ಮನವರಿಕೆ ಮಾಡಿ

ಜಗಳ ತಾತ್ಕಾಲಿಕ ಎಂದು ಮನವರಿಕೆ ಮಾಡಿ

ಯಾವುದೇ ಜಗಳ ಉಂಡು ಮಲಗುವವರೆಗೇ ಆದರೂ ಮಲಗುವ ಮುನ್ನ ನಿಮ್ಮ ಜಗಳ ಮುಗಿದಿದೆ ಎಂದು ನಿಮ್ಮ ಮಕ್ಕಳಿಗೆ ಮನವರಿಕೆ ಮಾಡುವುದು ಅಗತ್ಯ. ಇದು ನಿಮ್ಮ ಮಾತು ಅಥವಾ ಕೃತಿಯಲ್ಲಿ ಸ್ಪಷ್ಟವಾಗಿ ಪ್ರಕಟವಾಗಬೇಕು. ಇದನ್ನು ಮಕ್ಕಳು ಅತ್ಯಂತ ಧನಾತ್ಮಕ ರೀತಿಯಲ್ಲಿ ಪರಿಗಣಿಸುತ್ತಾರೆ. ಅಂದರೆ ತಮ್ಮ ತಂದೆತಾಯಿಯರು ಜಗಳವಾಡಿದರೂ ಅದಕ್ಕೊಂದು ಕಾರಣವಿದ್ದು ಇದು ಅವರ ನಡುವಣ ಪ್ರೀತಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದು, ನಮಗೆ ತಂದೆತಾಯಿಯರ ಪ್ರೀತಿಯಲ್ಲಿ ಯಾವುದೇ ಕೊರತೆಯುಂಟಾಗದು ಎಂಬ ಸುರಕ್ಷಿತ ಭಾವನೆ ಮೂಡುತ್ತದೆ.

ಮಾತನಾಡುವುದನ್ನು ನಿಲ್ಲಿಸಬೇಡಿ

ಮಾತನಾಡುವುದನ್ನು ನಿಲ್ಲಿಸಬೇಡಿ

ಒಂದು ವೇಳೆ ಜಗಳವಾಗಿ ಯಾವುದೇ ತೀರ್ಮಾನಕ್ಕೆ ಬರದೇ ಇದ್ದರೂ ಸಹಾ ನಿಮ್ಮ ಸಂಗಾತಿಯೊಂದಿಗೆ ಸಂವಾದ ನಡೆಸುವುದನ್ನು ನಿಲ್ಲಿಸಬೇಡಿ. ಏಕೆಂದರೆ ಒಂದು ವೇಳೆ ನೀವಿಬ್ಬರೂ ಮಾತನಾಡುತ್ತಿಲ್ಲವೆಂದು ಮಕ್ಕಳಿಗೆ ಗೊತ್ತಾದರೆ ಅವರು ಈ ಪರಿಯನ್ನು ಋಣಾತ್ಮಕವಾಗಿ ಪರಿಗಣಿಸಿ ಅನ್ಯಮನಸ್ಕರಾಗುತ್ತಾರೆ. ಈಗ ನಮ್ಮ ತಂದೆ ತಾಯಿಯರು ಮಾತನಾಡುತ್ತಿಲ್ಲ, ಇನ್ನು ನಮಗಾರು ದಿಕ್ಕು? ನಾಳೆ ನನ್ನನ್ನು ಯಾರು ಸಾಕುತ್ತಾರೆ ಎಂಬ ನಿಟ್ಟಿನಲ್ಲಿ ಅವರ ಚಿಂತನೆಗಳು ಮುಂದುವರೆಯುತ್ತವೆ.

ಮಾತನಾಡುವುದನ್ನು ನಿಲ್ಲಿಸಬೇಡಿ

ಮಾತನಾಡುವುದನ್ನು ನಿಲ್ಲಿಸಬೇಡಿ

ಇದು ಅತ್ಯಂತ ಅಪಾಯಕಾರಿ ಘಟ್ಟವಾಗಿದ್ದು ಮಕ್ಕಳು ಮನೆಬಿಟ್ಟು ಹೋಗಲು ಕಾರಣವಾಗುತ್ತವೆ. ಮನೆಬಿಟ್ಟು ಹೋದ ಮಕ್ಕಳ ಬಗ್ಗೆ ವಿಚಾರಿಸಿದವರಲ್ಲಿ ಶೇ 38ರಷ್ಟು ಪ್ರಕರಣಗಳಲ್ಲಿ ಮನೆಯ ಜಗಳ ಕಾರಣವಾಗಿರುವುದು ಕಂಡುಬಂದಿದೆ. ಆದ್ದರಿಂದ ನಿಮ್ಮ ನಡುವೆ ವಿರಸ ಇನ್ನೂ ಹೊಗೆಯಾಡುತ್ತಾ ಇದ್ದರೂ ನಿತ್ಯದ ಕೆಲಸಗಳಲ್ಲಿ ನೀವಿಬ್ಬರೂ ಒಬ್ಬರಿಗೊಬ್ಬರು ಮಾತನಾಡುತ್ತಾ ಇರುವುದು ಮಕ್ಕಳಿಗಾಗಿಯಾದರೂ ಅಗತ್ಯವಾಗಿದೆ. ಈ ಬಗ್ಗೆ ನಿಮ್ಮಲ್ಲಿ ಉಪಯುಕ್ತವಾದ ಮಾಹಿತಿಗಳಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ನೆನಪಿರಲಿ! ಇದು ಬೇರೊಂದು ಸಂಸಾರವನ್ನು ಹಾಳಾಗುವುದರಿಂದ ಉಳಿಸಬಹುದು!

English summary

How To Handle Arguments In Front Of Kids

Fighting in front of your child isn't healthy at all. It is better to keep your kids far away from violence and other negative elements till they grow up. But one fine day, you may lose temper. You may get upset. You may get terribly disappointed and may feel like shouting at your partner.
X
Desktop Bottom Promotion