For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕಾಡುವ ಸ್ತನಗಳ ಅಹಿತರಕ ಅನುಭವ ತಡೆಯಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

|

ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಅನಿತಾ ಎಂಬುವವರ ಅನುಭವ ಹೀಗಿದೆ: "ಗರ್ಭಾವಸ್ಥೆಗೂ ಮುನ್ನ ತನ್ನ ಸ್ತನಗಳು ಚಿಕ್ಕವೂ ಕೊಂಚ ಮೊನಚೂ ಇದ್ದಂತಿದ್ದವು. ಆದರೆ ಗರ್ಭ ಧರಿಸಿದ ಬಳಿಕ ಕೆಲವು ವಾರಗಳಲ್ಲಿಯೇ ಸ್ತನಗಳ ಗಾತ್ರ ಹೆಚ್ಚಾಗಿದ್ದು ಮಾತ್ರವಲ್ಲ, ಅಲ್ಲಲ್ಲಿ ಕೊಂಚ ಸೆಳೆತದ ಗುರುತುಗಳೂ ಕಾಣಿಸಿಕೊಂಡಿವೆ. ಚರ್ಮದಿಂದ ಒಳಗಿನ ನರಗಳು ಹೆಚ್ಚು ಗಾಢವಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ಕಾಣತೊಡಗಿದವು. ಕೆಲವು ದಿನಗಳ ಬಳಿಕ ಸ್ತನತೊಟ್ಟಿನಿಂದ ಕೊಂಚ ದ್ರವವೂ ಒಸರಲು ಪ್ರಾರಂಭವಾಯಿತು".

pregnancy chest pain

ಇದು ಕೇವಲ ಅನಿತಾ ಒಬ್ಬರ ಮಾತ್ರ ಅನುಭವವಲ್ಲ, ಪ್ರತಿ ಗರ್ಭಿಣಿಯ ಅನುಭವವೂ ಆಗಿದೆ. ಗರ್ಭಾವಸ್ಥೆಯ ಪ್ರತಿ ಹಂತದಲ್ಲಿಯೂ ಗರ್ಭಿಣಿಯ ದೇಹದಲ್ಲಿ ಹಲವಾರು ರಸದೂತಗಳು ತಮ್ಮ ಪ್ರಭಾವ ಬೀರುತ್ತದೆ ಮತ್ತು ಮಗುವಿನ ಬೆಳವಣಿಗೆ ಮತ್ತು ಜನನಕ್ಕಾಗಿ ಎಲ್ಲಾ ತಯಾರಿಗಳನ್ನು ನಡೆಸುತ್ತವೆ. ಮೊದಲ ದಿನದಿಂದ ಹೆರಿಗೆಯವರೆಗೂ ನಿಮ್ಮ ದೇಹದಲ್ಲಿ ನೂರಾರು ಬದಲಾವಣೆಗಳು ಕಂಡುಬರುತ್ತವೆ.

ಕೇವಲ ದೈಹಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಕೆಲವಾರು ಬದಲಾವಣೆಗಳು, ಮನೋಭಾವದ ಏರುಪೇರು ಮೊದಲಾದವು ಕಂಡು ಬರುತ್ತವೆ. ದೇಹದಲ್ಲಿ ಪ್ರಮುಖವಾಗಿ ಕಂಡುಬರುವ ಬದಲಾವಣೆಗಳಲ್ಲಿ ಸ್ತನಗಳ ಬದಲಾವಣೆಯೂ ಮಹತ್ತರವೇ ಆಗಿದೆ. ಇಂದಿನ ಲೇಖನದಲ್ಲಿ ಈ ಬಗ್ಗೆ ಕೆಲವಾರು ಮಹತ್ವದ ಸಂಗತಿಗಳನ್ನು ವಿವರಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ಸ್ತನಗಳ ಬದಲಾವಣೆ ಏಕೆ ಕಾಣಿಸಿಕೊಳ್ಳುತ್ತದೆ?

ಗರ್ಭಾವಸ್ಥೆಯಲ್ಲಿ ಸ್ತನಗಳ ಬದಲಾವಣೆ ಏಕೆ ಕಾಣಿಸಿಕೊಳ್ಳುತ್ತದೆ?

ಗರ್ಭಾವಸ್ಥೆಯಲ್ಲಿ ಕೆಲವು ರಸದೂತಗಳು ತಮ್ಮ ಪ್ರಭಾವ ಬೀರುವ ಮೂಲಕ ಸ್ತನಗಳಿಗೆ ಪ್ರವಹಿಸುವ ರಕ್ತದ ಪ್ರಮಾಣ ಹೆಚ್ಚುತ್ತದೆ ಹಾಗೂ ಸ್ತನಗಳ ಅಂಗಾಂಶವನ್ನು ಹಿಗ್ಗಿಸುತ್ತವೆ. ಪರಿಣಾಮವಾಗಿ ಸ್ತನಗಳ ಗಾತ್ರ ಹೆಚ್ಚುತ್ತದೆ. ಅಷ್ಟೇ ಅಲ್ಲ, ಮುಟ್ಟಲೂ ಆಗದಷ್ಟು ಸೂಕ್ಷ್ಮ ಸಂವೇದಿ ಮತ್ತು ಕಚಗುಳಿ ಇಡುವಂತಾಗುತ್ತದೆ. ಕೆಲವು ಮಹಿಳೆಯರಿಗೆ ಮಾಸಿಕ ದಿನಗಳಿಗೂ ಮುನ್ನ ಸ್ತನಗಳ ಸೂಕ್ಷ್ಮಸಂವೇದನಾ ಅನುಭವ ಆಗುವಂತಹ ಅನುಭವ ಗರ್ಭಾವಸ್ಥೆಯಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಪ್ರತಿ ತ್ರೈಮಾಸಿಕದಲ್ಲಿಯೂ ಯಾವ ಬಗೆಯ ಬದಲಾವಣೆಗಳು ಸ್ತನಗಳಲ್ಲಿ ಕಾಣಿಸಿಕೊಳ್ಳುತ್ತವೆ?

ಪ್ರತಿ ತ್ರೈಮಾಸಿಕದಲ್ಲಿಯೂ ಯಾವ ಬಗೆಯ ಬದಲಾವಣೆಗಳು ಸ್ತನಗಳಲ್ಲಿ ಕಾಣಿಸಿಕೊಳ್ಳುತ್ತವೆ?

ಸ್ತನಗಳ ಮುಖ್ಯ ಕಾರ್ಯವಾದ ಹಾಲೂಡಿಸುವಿಕೆ ಏನಿದ್ದರೂ ಹೆರಿಗೆಯ ಬಳಿಕವೇ ಅಗತ್ಯವಿರುವ ಕಾರಣ ಗರ್ಭಾವಸ್ಥೆಯ ಮೊದಲ ದಿನಗಳಲ್ಲಿ ಅತಿ ಹೆಚ್ಚು ಎನ್ನುವಂತಹ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಮೊದಲ ದಿನಗಳಲ್ಲಿ ಇನ್ನೂ ಜೀವ ತಳೆಯುತ್ತಿರುವ ಹೊಸ ಅಂಕುರದ ಪೋಷಣೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ಬನ್ನಿ, ಪ್ರತಿ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳು ಯಾವುವು ಎಂದು ನೋಡೋಣ:

ಮೊದಲ ತ್ರೈಮಾಸಿಕ

ಮೊದಲ ತ್ರೈಮಾಸಿಕ

ಈ ಅವಧಿಯಲ್ಲಿ, ಅಂದರೆ ಮೊದಲ ವಾರದಿಂದ ಹನ್ನೆರಡನೆಯ ವಾರದವರೆಗೆ ನೀವು ನಿಮ್ಮ ಸ್ತನಗಳು ಉಬ್ಬಿಕೊಳುವ ಮತ್ತು ಹೆಚ್ಚು ಮೃದುವಾಗುವುದನ್ನು ಗಮನಿಸುತ್ತೀರಿ. ಇದುವರೆಗೆ ಮುರುಟಿಕೊಂಡಿದ್ದ ಸ್ತನತೊಟ್ಟುಗಳು ಈಗ ಒಳಗಿನಿಂದ ಊದಿದಂತೆ ಹೊರಪುಟಿದು ಸಾಮಾನ್ಯಕ್ಕಿಂತಲೂ ಹೆಚ್ಚು ಮುಂದೆ ಬರುತ್ತವೆ. ಅಲ್ಲದೇ ಕಚಗುಳಿ ಆಗುವ ಅನುಭವವೂ ನಿಮಗಾಗುತ್ತದೆ. ದಿನಗಳೆದಂತೆ ಗಾತ್ರವೂ ಕೊಂಚ ಕೊಂಚವಾಗಿ ಹೆಚ್ಚುತ್ತಾ ಹೋಗುವುದನ್ನೂ ನೀವು ಗಮನಿಸಬಹುದು.

ಮೊದಲ ವಾರದಿಂದ ಮೂರನೆಯ ವಾರದವರೆಗೆ

ಮೊದಲ ವಾರದಿಂದ ಮೂರನೆಯ ವಾರದವರೆಗೆ

ಈ ಅವಧಿಯಲ್ಲಿ ಸ್ತನಗಳಲ್ಲಿರುವ ಹಾಲಿನ ಗ್ರಂಥಿಗಳು ಮತ್ತು ಸ್ತನತೊಟ್ಟಿನ ಅಂಗಾಂಶ (alveolar bud) ಶೀಘ್ರವಾಗಿ ಬೆಳೆಯತೊಡಗುತ್ತವೆ. ಎರಡನೆಯ ವಾರದಲ್ಲಿ, ಫಲಿತಗೊಂಡ ಅಂಡಾಣು ಗರ್ಭಾಶಯದಲ್ಲಿ ಸ್ಥಾಪನೆಗೊಳ್ಳುವ ಸಮಯವಾಗಿದೆ. ಅಂಡಾಣು ಫಲಿತಗೊಳ್ಳುವ ದಿನಗಳಲ್ಲಿ ಸ್ತನಗಳು ಅತಿ ಸೂಕ್ಷ್ಮ ಸಂವೇದಿಯಾಗುವುದನ್ನೂ ನೀವು ಗಮನಿಸಬಹುದು. ಅದರಲ್ಲೂ ಸ್ತನಗಳ ನಡುಭಾಗದಲ್ಲಿ (ಎದೆಯ ಸೀಳು ಇರುವ ಭಾಗ) ಹೆಚ್ಚಿನ ಸಂವೇದನೆ ಕಾಣಿಸಿಕೊಳ್ಳುತ್ತದೆ. ಹಾಲಿನ ಪೂರೈಕೆ ಒದಗಿಸುವ ನಾಳಗಳ ಕೇಂದ್ರ ಈ ಭಾಗದಲ್ಲಿದ್ದು ಎಲ್ಲೆಡೆ ಕವಲಾಗಿರುವುದೇ ಇದಕ್ಕೆ ಕಾರಣ.

ನಾಲ್ಕನೆಯ ವಾರದಿಂದ ಆರನೆಯ ವಾರದವರೆಗೆ

ನಾಲ್ಕನೆಯ ವಾರದಿಂದ ಆರನೆಯ ವಾರದವರೆಗೆ

ನಾಲ್ಕನೆಯ ವಾರ ಪ್ರಾರಂಭವಾಗುತ್ತಿದ್ದಂತೆಯೇ ನಿಮಗೆ ಸ್ತನತೊಟ್ಟುಗಳ ಸುತ್ತ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಅನುಭವ ಎದುರಾಗುತ್ತದೆ. ಈ ಸಮಯದಲ್ಲಿ ಸ್ತನಗಳಲ್ಲಿ ರಕ್ತ ಪರಿಚಲನೆ ಹೆಚ್ಚುವುದೇ ಇದಕ್ಕೆ ಕಾರಣ. ಕೆಲವರಲ್ಲಿ ಈ ಚುಚ್ಚಿದಂತಹ ಅನುಭವದ ಜೊತೆಗೇ ದೇಹದ ತಾಪಮಾನದಲ್ಲಿಯೂ ಕೊಂಚ ಏರು ಪೇರು ಕಾಣಿಸಿಕೊಳ್ಳಬಹುದು.

ಆರನೆಯ ವಾರದಲ್ಲಿ ಸ್ತನತೊಟ್ಟುಗಳು ಹೆಚ್ಚು ತುಂಬಿಕೊಂಡು ಸ್ಪಷ್ಟರೂಪ ಪಡೆಯತೊಡಗುತ್ತವೆ ಮತ್ತು ಸ್ತನತೊಟ್ಟಿನ ವೃತ್ತಾಕಾರದ ಭಾವ ಹೆಚ್ಚು ಹೆಚ್ಚು ಗಾಢಗೊಳ್ಳುತ್ತದೆ. ಈ ಭಾಗದ ಚರ್ಮದ ವರ್ಣತಂತುಗಳು ಹೆಚ್ಚುವುದೇ ಇದಕ್ಕೆ ಕಾರಣ. ಈಸ್ಟ್ರೋಜೆನ್, ಪ್ರೊಜೆಸ್ಟರಾನ್ ಮತ್ತು ಮಾಸುವಿನ ಲ್ಯಾಕ್ಟೋಜೆನ್ ( placental lactogen) ರಸದೂತಗಳು ಹೆಚ್ಚು ಪ್ರಭಾವಶಾಲಿಯಾಗಿರುವ ಕಾರಣ ಸ್ತನಗಳು ಇನ್ನಷ್ಟು ತುಂಬಿಕೊಳ್ಳುತ್ತವೆ. ಅಲ್ಲದೇ ಹಾಲಿನ ಗ್ರಂಥಿಗಳೂ ತಮ್ಮ ಮುಂದಿನ ದಿನಗಳ ಕರ್ತವ್ಯಕ್ಕಾಗಿ ಸಜ್ಜುಗೊಳ್ಳುತ್ತಿರುವುದನ್ನು ಸೂಚಿಸುತ್ತವೆ.

ಏಳನೆಯ ವಾರದಿಂದ ಒಂಭತ್ತನೆಯ ವಾರದವರೆಗೆ

ಏಳನೆಯ ವಾರದಿಂದ ಒಂಭತ್ತನೆಯ ವಾರದವರೆಗೆ

ಏಳನೆಯ ವಾರದಲ್ಲಿ ನಿಮ್ಮ ದೇಹದ ತೂಕ ಹೆಚ್ಚತೊಡಗುತ್ತದೆ. ಪ್ರತಿ ಸ್ತನಗಳ ಭಾರವೇ ಸುಮಾರು 0.68 ಕೆಜಿಯಷ್ಟು ಹೆಚ್ಚಬಹುದು.

ಗರ್ಭಾವಸ್ಥೆಯ ರಸದೂತಗಳು ಹೆಚ್ಚು ಹೆಚ್ಚು ಪ್ರಭಾವ ಬೀರುತ್ತಿದ್ದಂತೆಯೇ ದೇಹದ ಬದಲಾವಣೆಯ ಜೊತೆಗೇ ಸ್ತನಗಳಲ್ಲಿ ಹಾಲಿನ ಗ್ರಂಥಿಗಳ ಬೆಳವಣಿಗೆ ಮತ್ತು ಕೊಬ್ಬನ್ನು ತುಂಬಿಕೊಳ್ಳುವಂತೆ ಮಾಡುತ್ತವೆ. ಏಳನೆಯ ವಾರದಲ್ಲಿ ಹಾಲಿನ ಗ್ರಂಥಿಗಳ ನಾಳಗಳ ತುದಿಗಳು ಕಿರುವಾಲೆ (breast lobules)ಗಳಾಗಿ ಮಾರ್ಪಾಡು ಹೊಂದುತ್ತವೆ.

ಎಂಟನೆಯ ವಾರದಲ್ಲಿ ಸ್ತನಗಳು ಹೆಚ್ಚು ಮೃದುವಾಗುತ್ತವೆ. ಅಲ್ಲದೇ ಹೆಚ್ಚು ಚೂಪಾಗಿರುವಂತೆ ಮತ್ತು ಒಳಭಾಗದ ನರಗಳು ಸ್ಪಷ್ಟವಾಗಿ ಕಾಣಿಸತೊಡಗುತ್ತವೆ. ಇದರ ಜೊತೆಗೇ ಸ್ತನತೊಟ್ಟಿನ ಸುತ್ತಲ ಚರ್ಮದ ಮೇಲೆ ಚಿಕ್ಕ ಚಿಕ್ಕ ಮೊಡವೆಗಳಂತಹ ಗುಳ್ಳೆಗಳೂ ಕಾಣಿಸಿಕೊಳ್ಳಬಹುದು. ಇವುಗಳನ್ನು Montgomery's tubercles ಎಂದು ಕರೆಯುತ್ತಾರೆ.

ಒಂಭತ್ತನೆಯ ವಾರದಲ್ಲಿ ಸ್ತನತೊಟ್ಟಿನ ವೃತ್ತಾಕಾರದ ಭಾಗ ಇನ್ನಷ್ಟು ಗಾಢಗೊಳ್ಳುತ್ತದೆ ಮತ್ತು ಈ ಗಾಢವೃತ್ತಾಕಾರದ ಹೊರಭಾಗದಲ್ಲಿ ಇನ್ನೊಂದು ತಿಳಿವರ್ಣದ ವೃತ್ತಾಕಾರ ರೂಪುಗೊಳ್ಳುತ್ತದೆ. ಒಂದು ವೇಳೆ ಇದುವರೆಗೆ ಸ್ತನತೊಟ್ತುಗಳು ಹೊರ ಪುಟಿದಿರದೇ ಇದ್ದರೆ ಈ ವಾರದಲ್ಲಿ ಹೊರಚಾಚಿ ಒಳಗಿನಿಂದ ಊದಿದಂತೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.

ಹತ್ತನೆಯ ವಾರದಿಂದ ಹನ್ನೆರಡನೆಯ ವಾರದವರೆಗೆ

ಹತ್ತನೆಯ ವಾರದಿಂದ ಹನ್ನೆರಡನೆಯ ವಾರದವರೆಗೆ

ಸ್ತನತೊಟ್ಟುಗಳ ಸುತ್ತ ಹಿಂದಿನ ವಾರದಲ್ಲಿ ಎದ್ದಿದ್ದ ಚಿಕ್ಕ ಚುಕ್ಕೆಗಳಂತಿದ್ದ ಮೊಡವೆಗಳು ಈ ವಾರದಲ್ಲಿ ಕೊಂಚ ದೊಡ್ಡದಾಗತೊಡಗುತ್ತವೆ. ಒಂದು ವೇಳೆ ಇದು ನಿಮ್ಮ ಮೊದಲ ಹೆರಿಗೆಯಾಗಿದ್ದರೆ ಹನ್ನೆರಡನೆಯ ವಾರದಲ್ಲಿ ಸ್ತನತೊಟ್ಟುಗಳು ಪೂರ್ಣವಾಗಿ ಹೊರಬೀಳುತ್ತವೆ.

ಶಸ್ತ್ರಕ್ರಿಯೆಯ ಮೂಲಕ ಸ್ತನಗಳ ಗಾತ್ರಗಳನ್ನು ಹೆಚ್ಚಿಸಿಕೊಂಡಿದ್ದ ಮಹಿಳೆಯರು ಸ್ತನಗಳು ಹೆಚ್ಚು ಸೂಕ್ಷ್ಮಸಂವೇದಿಯಾಗುವುದನ್ನು ಕಾಣಬಹುದು. ಸುಮಾರು ಹನ್ನೆರಡನೆ ವಾರದಲ್ಲಿ ಸ್ತನಗಳ ಒಳಗಿನ ಗ್ರಂಥಿಗಳೂ ತಮ್ಮ ಕಾರ್ಯವನ್ನು ಪ್ರಾರಂಭಿಸಿ ಸ್ತನತೊಟ್ಟಿನಿಂದ ಎದೆಹಾಲು ಅಲ್ಲದ ದ್ರವವನ್ನು (Colostrum) ಸೂಸತೊಡಗುತ್ತವೆ. ಸ್ತನವನ್ನು ಹಿಂಡಿದರೆ ಈ ರಸ ಹೆಚ್ಚು ಸೂಸುವುದನ್ನು ಗಮನಿಸಬಹುದು.

ಎರಡನೇ ತ್ರೈಮಾಸಿಕ

ಎರಡನೇ ತ್ರೈಮಾಸಿಕ

ಎರಡನೆಯ ತ್ರೈಮಾಸಿಕ, ಅಂದರೆ ಹದಿಮೂರರಿಂದ ಇಪ್ಪತ್ತೇಳನೇ ವಾರದಲ್ಲಿ ನಿಮ್ಮ ಸ್ತನಗಳು ಹೆಚ್ಚು ಬೆಳವಣಿಗೆ ಪಡೆಯುವುದು ಮಾತ್ರವಲ್ಲ, ಹೆಚ್ಚು ಭಾರವೂ ಆಗಿ ಕೆಳಮುಖ ಜೋಲತೊಡಗುತ್ತವೆ. ಹಿಂದಿನ ವಾರಗಳಲ್ಲಿ ಸ್ತನಗಳ ಗಾತ್ರ ಕೊಂಚ ಹೆಚ್ಚಿದಂತೆ ಅನ್ನಿಸಿದ್ದರೂ ನಿಮ್ಮ ಎಂದಿನ ಕಂಚುಕವನ್ನು ಧರಿಸಲು ಆಗದಷ್ಟೇನೂ ಬದಲಾಗಿರುವುದಿಲ್ಲ.

ಆದರೆ ಈ ಅವಧಿಯಲ್ಲಿ ಸುಮಾರು ಎರಡು ಕಪ್ ಗಾತ್ರದಷ್ಟು (two cup sizes) ಬೆಳೆಯುವ ಕಾರಣ ನಿಮ್ಮ ನಿತ್ಯದ ಕಂಚುಕ ಈಗ ಧರಿಸಲು ಸಾಧ್ಯವಾಗುವುದಿಲ್ಲ. ನಿಮಗೆ ಎರಡು ಕಪ್ ಗಾತ್ರ ದೊಡ್ಡ ಕಂಚುಕ ಖರೀದಿಸಬೇಕಾಗುತ್ತದೆ.

ಹಿಂದಿನ ವಾರಗಳಲ್ಲಿ ಎದುರಾಗಿದ್ದ ಚುಚ್ಚುವಿಕೆಯ ಅನುಭವ ಈಗ ಕಡಿಮೆಯಾಗುತ್ತದೆ. ಸ್ತನತೊಟ್ಟು ಮತ್ತು ಸ್ತನತೊಟ್ಟಿನ ವೃತ್ತಾಕಾರದ ಭಾಗ ಇನ್ನಷ್ಟು ಹೆಚ್ಚು ವಿಸ್ತಾರಗೊಳ್ಳುತ್ತವೆ ಮತ್ತು ಹೆಚ್ಚು ಗಾಢಗೊಳ್ಳುತ್ತವೆ. ಅಲ್ಲದೇ ಈ ವೃತ್ತಾಕಾರದ ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಂತೆ ಚರ್ಮ ಎದ್ದಿರುವುದನ್ನೂ ಗಮನಿಸಬಹುದು. ಇವು ಹೆರಿಗೆಯವರೆಗೂ ಇದ್ದು ಬಾಣಂತನದ ಅವಧಿಯಲ್ಲಿ ಹಿಂದಿನಂತಾಗುತ್ತವೆ.

ಸ್ತನದ ಚರ್ಮದಲ್ಲಿ ಸೆಳೆತದ ಗುರುತುಗಳು ಹೆಚ್ಚು ಸ್ಪಷ್ಟವಾಗತೊಡಗುತ್ತವೆ. ಹದಿನಾರರಿಂದ ಹತ್ತೊಂಭತ್ತನೆಯ ವಾರದಲ್ಲಿ ಸ್ತನಗಳನ್ನು ಹಿಂಡದೆಯೇ ಎದೆ ಹಾಲಲ್ಲದ ಕೋಲ್ಸ್ಟ್ರಂ ದ್ರವ ತಾನಾಗಿ ಒಸರ ತೊಡಗುತ್ತದೆ. ಇದು ಸುಮಾರು ಹಳದಿ ಬಣ್ಣದ ಸ್ನಿಗ್ಧ ದ್ರವವಾಗಿದ್ದು ಕಂಚುಕವನ್ನು ತೋಯಿಸುತ್ತದೆ.

ಸ್ತನಗಳಲ್ಲಿ ಹಾಲಿನ ಉತ್ಪಾದನೆ ಪ್ರಾರಂಭವಾಗಿದೆ ಎಂದು ಸೂಚಿಸುವ ಸೂಚನೆ ಇದು. ಮುಜುಗರಕ್ಕೆ ಒಳಗಾಗದೇ ಇರಲು ಸ್ತನತೊಟ್ಟುಗಳ ಮುಂದೆ ಹತ್ತಿಯ ಪ್ಯಾಡ್ ಇರಿಸಿಕೊಳ್ಳುವುದನ್ನು ವೈದ್ಯರು ಸೂಚಿಸುತ್ತಾರೆ. ಈ ದ್ರವ ಮಗುವಿನ ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ ಹಾಗೂ ಇದು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಹಾಗಾಗಿ, ಈ ದ್ರವವನ್ನು ಅನಾವಶ್ಯಕವಾಗಿ ವ್ಯರ್ಥವಾಗಲು ಬಿಡಬಾರದು. ಇದುವರೆಗೆ ಮಗುವಿಗೆ ಸ್ತನಪಾನ ಮಾಡಿಸದ ಮಹಿಳೆಯಲ್ಲಿ ಈ ಸೂಚನೆ ಬರುವುದು ಅಗತ್ಯವಾಗಿದೆ ಹಾಗೂ ಬಾಣಂತನದ ದಿನಗಳಲ್ಲಿ ಮಗುವಿಗೆ ಅಗತ್ಯ ಪ್ರಮಾಣದ ಹಾಲಿನ ಪೂರೈಕೆ ಮಾಡಲು ಸಾಧ್ಯ ಎಂದು ಖಚಿತವಾಗುತ್ತದೆ.

ಮೂರನೇ ತ್ರೈಮಾಸಿಕ

ಮೂರನೇ ತ್ರೈಮಾಸಿಕ

ಈ ಅವಧಿಯಲ್ಲಂತೂ ಸ್ತನಗಳು ಹಿಂದೆಂದೂ ಇಲ್ಲದಷ್ಟು ಬೆಳೆಯುತ್ತವೆ ಮತ್ತು ಭಾರದಿಂದ ಇನ್ನಷ್ಟು ಜೋಲತೊಡಗುತ್ತವೆ. ಈ ಜೋಲುವಿಕೆಯನ್ನು ತಡೆಯಲು ನಿಮಗೆ ದೊಡ್ಡ ಗಾತ್ರದ ಕಂಚುಕ ಅಥವಾ ವೈದ್ಯರು ಸೂಚಿಸುವ maternity braದ ಅಗತ್ಯವಿರುತ್ತದೆ. ಅಲ್ಲದೇ ಅನೈಚ್ಛಿಕವಾಗಿ ಎದೆಹಾಲಿನ ಮುನ್ನಾ ಸ್ರವಿಸುವ ಕೋಲ್ಸ್ಟ್ರಂ ದ್ರವ ಆಗಾಗ ಸ್ರವಿಸಬಹುದು. ಉಳಿದಂತೆ ಹೆರಿಗೆಯ ವರೆಗೂ ಇದೇ ಕ್ರಮ ಇರುತ್ತದೆ ಹಾಗೂ ಹೆಚ್ಚು ಗಮನಾರ್ಹ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ.

ವೈದ್ಯರ ಸಲಹೆ ಯಾವಾಗ ಪಡೆಯಬೇಕು?

ವೈದ್ಯರ ಸಲಹೆ ಯಾವಾಗ ಪಡೆಯಬೇಕು?

ಗರ್ಭಾವಸ್ಥೆಯಲ್ಲಿ ದೇಹದ ಜೊತೆಗೇ ಸ್ತನಗಳೂ ಕೆಲವಾರು ಬದಲಾವಣೆಗಳನ್ನು ಪಡೆಯುತ್ತವೆ. ಹಾಗಾಗಿ, ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ ಈ ಬದಲಾವಣೆಯ ಜೊತೆಯಲ್ಲಿ ಸ್ತನಗಳ ಕ್ಯಾನ್ಸರ್ ಅಥವಾ ಗಡ್ಡೆಗಳು ಬೆಳೆಯುವ ಸಾಧ್ಯತೆಯೂ ಇಲ್ಲದೇ ಇರುವುದಿಲ್ಲ.

ಹಾಗಾಗಿ, ಗರ್ಭಾವಸ್ಥೆಯಲ್ಲಿ ಆಗಾಗ ಸ್ತನಗಳನ್ನು ಸ್ವಪರೀಕ್ಷೆ ಮಾಡಿಕೊಂಡು ಒಳಭಾಗದಲ್ಲಿ ಗಟ್ಟಿಯಾಗಿ ಇರುವಂತಹ ಗಡ್ಡೆಗಳು ಇವೆಯೇ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ಇದೆ ಎಂಬ ಕೊಂಚ ಅನುಮಾನ ಎದುರಾದರೂ ವೈದ್ಯರ ಸಲಹೆ ಪಡೆಯಬೇಕು ಹಾಗೂ ಪೂರ್ಣ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು.

ಒಂದು ವೇಳೆ ಸ್ತನಗಳಲ್ಲಿ ನೋವು ಎದುರಾದರೆ ಮತ್ತು ಅಹಿತಕರ ಭಾವನೆ ಎದುರಾದರೆ ಏನು ಮಾಡಬೇಕು?

ಒಂದು ವೇಳೆ ಸ್ತನಗಳಲ್ಲಿ ನೋವು ಎದುರಾದರೆ ಮತ್ತು ಅಹಿತಕರ ಭಾವನೆ ಎದುರಾದರೆ ಏನು ಮಾಡಬೇಕು?

ಗರ್ಭಾವಸ್ಥೆಯಲ್ಲಿ ಎದುರಾಗುವ ಯಾವುದೇ ಅಹಿತಕರ ಭಾವನೆ ಎದುರಾದರೆ ಈ ಕ್ರಮಗಳನ್ನು ಕೈಗೊಳ್ಳಿ

ಅತಿ ಸೂಕ್ಜ್ಮ ಸಂವೇದಿ ಮತ್ತು ಮೃದುವಾಗಿರುವ ಸ್ತನಗಳಿಗೆ

ಹಗಲಿನ ಸಮಯದಲ್ಲಿ ನಿಮ್ಮ ಬೆನ್ನಿಗೆ ಮತ್ತು ಪಕ್ಕೆಗಳಿಗೆ ಹೆಚ್ಚು ಬೆಂಬಲ ನೀಡುವ ಕಂಚುಕ ಧರಿಸಿ. ಅಲ್ಲದೇ ಹತ್ತಿಯ ಮೆತ್ತೆ ಇರುವ (padded) ಮತ್ತು ಮೆತ್ತೆಯ ಪಟ್ಟಿ ಇರುವ ಕಂಚುಕಗಳನ್ನು ಧರಿಸಿ, ಇವು ಹೆಚ್ಚು ಆರಾಮದಾಯಕವಾಗಿವೆ.

ರಾತ್ರಿಯ ಸಮಯದಲ್ಲಿ ಸಡಿಲವಾದ ರಾತ್ರಿ ಕಂಚುಕ ಧರಿಸಿ. ಇವು ಹಗುರವೂ ಆಗಿದ್ದು ನಿದ್ದೆಯ ಸಮಯದಲ್ಲಿ ಸ್ತನಗಳಿಗೆ ಬೆಂಬಲವನ್ನು ನೀಡುತ್ತವೆ.

ಸ್ತನತೊಟ್ಟಿನ ಸುತ್ತಲ ಭಾಗದಲ್ಲಿ ಸೋಪು ಹಚ್ಚಿ ಸ್ವಚ್ಛಗೊಳಿಸದಿರಿ. ಏಕೆಂದರೆ ಈ ಭಾಗದಲ್ಲಿ ಸೋಪು ಹಚ್ಚುವ ಮೂಲಕ ಚರ್ಮ ಅತೀವವಾಗಿ ಒಣಗುತ್ತದೆ. ಈ ಭಾಗವನ್ನು ಕೇವಲ ಬೆಚ್ಚಗಿನ ನೀರು ಬಳಸಿ ತೊಳೆದುಕೊಳ್ಳಿ.

ಒಂದು ವೇಳೆ ಸ್ತನಗಳ ಚರ್ಮದಲ್ಲಿ ತುರಿಕೆ ಎದುರಾದರೆ

ಒಂದು ವೇಳೆ ಸ್ತನಗಳ ಚರ್ಮದಲ್ಲಿ ತುರಿಕೆ ಎದುರಾದರೆ

ಬಿಸಿನೀರಿನ ಸ್ನಾನ ಬೇಡ, ಆದಷ್ಟೂ ತಣ್ಣಿಗಿರುವ ನೀರಿನಿಂದ ಸ್ನಾನ ಮಾಡಿ.

ಸ್ನಾನದ ಬಳಿಕ ಟವೆಲ್ಲಿನಿಂದ ಉಜ್ಜಿಕೊಳ್ಳದಿರಿ. ಬದಲಿಗೆ ದಪ್ಪಟವೆಲ್ಲನ್ನು ಒತ್ತಿ ಒರೆಸಿಕೊಳ್ಳಿ. ಬಳಿಕ ತೇವಕಾರಕ (ಮಾಯಿಶ್ಚರೈಸರ್) ದ್ರವ ಹಚ್ಚಿಕೊಂಡು ತಕ್ಷಣವೇ ಬಟ್ಟೆ ಧರಿಸದೇ ಇವು ಒಣಗಿದ ಬಳಿಕವೇ ಧರಿಸಿ. ಈ ಮಾಯಿಶ್ಚರೈಸರ್ ಹಚ್ಚಿಕೊಳ್ಳುವ ಮುನ್ನ ಫ್ರಿಜ್ಜಿನಲ್ಲಿಸಿರಿ ತಣ್ಣಗಾಗಿಸಿದ್ದರೆ ಹೆಚ್ಚಿನ ಆರಾಮ ದೊರಕುತ್ತದೆ.

ಆಲ್ಕೋಹಾಲ್ ಅಂಶ ಇರುವ ಯಾವುದೇ ಚರ್ಮದ ಉತ್ಪನ್ನಗಳನ್ನು ಕೊಳ್ಳದಿರಿ. ಅಲ್ಲದೇ ಚರ್ಮವನ್ನು ಒಣಗಿಸುವ ಸಾಬೂನು, ಅಥವಾ ಕ್ಲೋರೀನ್ ಅಂಶ ಇರುವ ನೀರನ್ನು ಬಳಸದಿರಿ (ಈಜುಕೊಳದ ನೀರು)

ಮನೆಯ ವಾತಾವರಣ ಆಹ್ಲಾದಕರವಾಗಿರಲು ತೇವಾಂಶ ಹೆಚ್ಚಿಸುವ ಉಪಕರಣ (ಹ್ಯೂಮಿಡಿಫೈಯರ್) ಬಳಸಬಹುದು.

ಒಂದು ವೇಳೆ ತುರಿಕೆ ಕಡಿಮೆಯಾಗದೇ ಇದ್ದರೆ ವೈದ್ಯರನ್ನು ಕಾಣಿ.

ಒಂದು ವೇಳೆ ಸ್ತನಗಳಿಂದ ಹೆಚ್ಚು ಕೋಲ್ಸ್ಟ್ರಂ ದ್ರವ ಸೋರುತ್ತಿದ್ದರೆ

ಒಂದು ವೇಳೆ ಸ್ತನಗಳಿಂದ ಹೆಚ್ಚು ಕೋಲ್ಸ್ಟ್ರಂ ದ್ರವ ಸೋರುತ್ತಿದ್ದರೆ

  • ಎಂದಿಗೂ ಇದನ್ನು ತಡೆಯಲು ಯತ್ನಿಸದಿರಿ.
  • ಒಂದು ಬಾರಿ ಬಳಸುವ ಸ್ತನಗಳ ಪ್ಯಾಡ್ ಬಳಸಿ ಈ ದ್ರವನ್ನು ಹೀರಿಕೊಳ್ಳುವಂತೆ ಮಾಡಿ.
  • ಸ್ನಾನದ ಬಳಿಕ ತಕ್ಷಣವೇ ಬಟ್ಟೆ ಧರಿಸದೇ ಸ್ತನಗಳು ಪೂರ್ಣ ಒಣಗಿದ ಬಳಿಕವೇ ಧರಿಸಿ.
  • ಸೂಕ್ತ ಕಂಚುಕ ಆಯ್ಕೆ ಹೀಗಿರಲಿ

    ಸೂಕ್ತ ಕಂಚುಕ ಆಯ್ಕೆ ಹೀಗಿರಲಿ

    ನಿಮ್ಮ ಗಾತ್ರದ ಕಂಚುಕದಲ್ಲಿ ಕಪ್ ಸೈಜ್‌ ಎರಡು ಹೆಚ್ಚಿರುವಂತೆ ನೋಡಿಕೊಳ್ಳಿ. ಇದರಿಂದ ಸ್ತನಗಳನ್ನು ಪೂರ್ಣವಾಗಿ ಆವರಿಸಬಹುದು.

    ಪಟ್ಟಿಗಳು ನಿಮ್ಮ ದೇಹವನ್ನು ಹೆಚ್ಚಿನ ಒತ್ತಡವಿಲ್ಲದೇ ಅಪ್ಪಿ ಹಿಡಿಯುವಂತಿರಬೇಕು ಮತ್ತು ಜಾರದಂತಿರಬೇಕು.

    ಕಂಚುಕದ ಪಟ್ಟಿ ಹೆಚ್ಚು ಅಗಲವಾಗಿರಬೇಕು ಮತ್ತು ಕಂಚುಕದ ಅಡ್ಡಪಟ್ಟಿಯನ್ನು ಬಂಧಿಸಿರುವಲ್ಲಿ ಹೆಚ್ಚು ಅಗಲವಾಗಿರಬೇಕು. ಈ ಮೂಲಕ ಬೆನ್ನಿನ ಭಾಗದಲ್ಲಿ ಮತ್ತು ಸ್ತನಗಳ ಭಾಗದಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಬಂಧಿಸಿಡಲು ಸಾಧ್ಯವಾಗುತ್ತದೆ.

    ಸ್ತನಗಳ ಗಾತ್ರ ಬದಲಾಗುವುದು ಸಾಮಾನ್ಯ

    ಸ್ತನಗಳ ಗಾತ್ರ ಬದಲಾಗುವುದು ಸಾಮಾನ್ಯ

    ಸ್ತನಗಳ ಗಾತ್ರ ಗರ್ಭಾವಸ್ಥೆಯಲ್ಲಿ ಬದಲಾಗುವುದು ಸಾಮಾನ್ಯ ಹಾಗೂ ಅನಿವಾರ್ಯ. ಆದರೆ ಪ್ರತಿ ಬದಲಾವಣೆಗಳೂ ಎಲ್ಲಾ ಗರ್ಭವತಿಯರಲ್ಲಿ ಏಕಪ್ರಕಾರವಾಗಿ ಇರದೇ ಇರಬಹುದು. ಯಾವುದೇ ಬದಲಾವಣೆಗೆ ಗರ್ಭವತಿ ಹೆದರಬೇಕಾಗಿಲ್ಲ. ಏಕಾಏಕಿ ಎದುರಾಗುವ ಬದಲಾವಣೆಗೆ ಗಾಬರಿಯಾಗುವ ಅಗತ್ಯವೂ ಇಲ್ಲ. ಈ ಬಗ್ಗೆ ನಿಮಗೆ ಮಾಹಿತಿ ಇರುವುದು ಅಗತ್ಯವಾಗಿದೆ ಹಾಗೂ ಕಾಲ ಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ಸೇವಿಸುತ್ತಿರಬೇಕು.

    ಈ ಲೇಖನದಿಂದ ನಿಮ್ಮ ದುಗುಡ ಕೊಂಚ ಕಡಿಮೆಯಾದರೆ ಈ ಬಗ್ಗೆ ನಮಗೆ ಕಮೆಂಟ್‌ ಮಾಡಿ ತಿಳಿಸಿ. ನಿಮ್ಮ ಗರ್ಭಾವಸ್ಥೆ ಆರೋಗ್ಯಕರವಾಗಿರಲಿ ಎಂದು ಹಾರೈಸುತ್ತೇವೆ.

English summary

Breast Changes During Pregnancy: Ways To Ease Discomfort

Here we are discussing about breast changes during pregnancy what all you need and simple ways to ease discomfort. Breast changes during pregnancy may surprise you but that’s the reality as you travel through this crucial phase. Read more
X
Desktop Bottom Promotion