For Quick Alerts
ALLOW NOTIFICATIONS  
For Daily Alerts

ಮಕ್ಕಳ ದಿನಾಚರಣೆ 2020: ಮಕ್ಕಳನ್ನು ಕಾಡುವ 8 ಕಾಯಿಲೆಗಳಿವು

|

ತಂದೆತಾಯಂದಿರಿಗೆ ಅವರ ಮಕ್ಕಳೇ ಅವರ ಸರ್ವಸ್ವ. ಮಕ್ಕಳ ಸಂತೋಷಕ್ಕಾಗಿ ಅವರ ಏಳಿಗೆಗಾಗಿ ತಂದೆ ತಾಯಂದಿರು ಮಾಡದೇ ಇರೋ ಕಸರತ್ತುಗಳೇ ಇಲ್ಲ. ತಮ್ಮ ಮುದ್ದಿನ ಕಣ್ಮಣಿಗಳನ್ನ ಕಣ್ರೆಪ್ಪೆಗಳಂತೆ ಬಲು ಜಾಗರೂಕತೆಯಿಂದ ಸಾಕಿಸಲಹುತ್ತಾರೆ ಹೆತ್ತವರು.

ಇಷ್ಟೆಲ್ಲ ಆದರೂ ಕೂಡ, ನಾವೆಷ್ಟೇ ಎಚ್ಚರವಹಿಸಿದರೂ ಕೂಡ, ದೈನಂದಿನ ಬದುಕಿನ ಧಾವಂತದಲ್ಲಿ, ನಮಗರಿವಿಲ್ಲದಂತೆಯೇ ನಮ್ಮ ಮುದ್ದಿನ ಕಣ್ಮಣಿಗಳು ನಾನಾ ಸೋಂಕುಗಳಿಗೆ ತುತ್ತಾಗೋದನ್ನ ನಾವು ಕಾಣ್ತಾನೇ ಇರ್ತೀವಿ. ನಮ್ಮ ಮಕ್ಕಳು ಅಸ್ವಸ್ಥರಾದಾಗ ನಾವೇ ಅಸ್ವಸ್ಥರಾದೆವೇನೋ ಎಂಬಷ್ಟರಮಟ್ಟಿಗೆ ಒದ್ದಾಡಿಬಿಡ್ತೀವಿ.

ಮಕ್ಕಳನ್ನ ಕಾಡೋವಂತಹ ಎಂಟು ಸಾಮಾನ್ಯ ಸೋಂಕು ರೋಗಗಳ ಪಟ್ಟಿಯನ್ನ ಮಾಡಿದ್ದೀವಿ. ಓದಿ, ಅವುಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಸಾಧ್ಯವಾದಷ್ಟರ ಮಟ್ಟಿಗೆ ಅವುಗಳಿಂದ ನಿಮ್ಮ ಮಕ್ಕಳನ್ನ ಹೇಗೆ ಕಾಪಾಡಿಕೊಳ್ಳೋದು ಅನ್ನೋದರ ಬಗ್ಗೆಯೂ ಅರಿತುಕೊಳ್ಳಿರಿ.

1. ರೆಸ್ಪಿರೇಟರಿ ಸಿನ್ಸೈಷಿಯಲ್ ವೈರಸ್

1. ರೆಸ್ಪಿರೇಟರಿ ಸಿನ್ಸೈಷಿಯಲ್ ವೈರಸ್

ಮಕ್ಕಳ ಶ್ವಾಸಕೋಶಗಳಿಗೆ ತಗಲುವ ಸೋಂಕುಗಳಿಗೆ ಅತೀ ಸಾಮಾನ್ಯ ಕಾರಣ ಅಂದ್ರೆ ಅದು ಈ ರೆಸ್ಪಿರೇಟರಿ ಸಿನ್ಸೈಷಿಯಲ್ ವೈರಸ್ ಅಥವಾ ಸಂಕ್ಷಿಪ್ತವಾಗಿ ಆರ್.ಎಸ್.ವಿ. ಅಂತಾ ಕರೆಯಲ್ಪಡೋ ವೈರಾಣು. ಈ ವೈರಾಣು ಮಕ್ಕಳ ಶ್ವಾಸಕೋಶಗಳಲ್ಲಿ ಮತ್ತು ಶ್ವಾಸನಾಳಗಳಲ್ಲಿ ಸೋಂಕನ್ನುಂಟು ಮಾಡುತ್ತದೆ.

ನಿಮ್ಮ ಮಗುವಿಗೇನಾದರೂ ಈ ಆರ್.ಎಸ್.ವಿ. ವೈರಾಣುವಿನ ಸೋಂಕು ತಗುಲಿದ್ದೇ ಆದಲ್ಲಿ, ಮೂಗಿನಲ್ಲಿ ಸದಾ ಸಿಂಬಳ ಸುರಿತಾನೇ ಇರೋದು, ಕೆಮ್ಮು ಮತ್ತು ಜ್ವರದಂತಹ ಶೀತವನ್ನ ಹೋಲುವಂತಹ ರೋಗಲಕ್ಷಣಗಳನ್ನ ಮಗು ತೋರ್ಸೋದಕ್ಕೆ ಶುರುವಿಟ್ಟುಕೊಳ್ಳುತ್ತೆ. ಮನೆಯಲ್ಲೇ ಇದ್ದು ವಿಶ್ರಾಂತಿ ತಗೊಳ್ಳೋದು, ಆಮೇಲೆ ಸಣ್ಣ ಸಣ್ಣ ಪ್ರಮಾಣದಲ್ಲಿ ದ್ರವಾಹಾರವನ್ನ ನಿಯಮಿತವಾಗಿ ಕುಡೀತಾ ಇರೋದು ಇವಿಷ್ಟನ್ನೇ ಮಾಡೋದ್ರಿಂದ್ಲೇ ಬಹಳಷ್ಟು ಸಾರಿ ಈ ತೊಂದರೆ ನಿವಾರಣೆಯಾಗತ್ತೆ.

ಆದರೆ, ಈ ಮೇಲಿನ ರೋಗಲಕ್ಷಣಗಳನ್ನ ಹೊರತುಪಡಿಸಿ, ಒಂದು ವೇಳೆ ನಿಮ್ಮ ಮಗುವಿಗೇನಾದರೂ ಸಿಕ್ಕಾಪಟ್ಟೆ ಜ್ವರ ಇದ್ರೆ, ಗಟ್ಟಿ ಸಿಂಬಳ ತುಂಬಿಕೊಂಡು, ಮೂಗು ಕಟ್ಕೊಂಡಿದ್ರೆ, ಮಗುವಿಗೆ ತಿನ್ನೋದಕ್ಕೆ ಅಥವಾ ಕುಡಿಯೋದಕ್ಕೆ ತುಂಬಾನೇ ಕಷ್ಟ ಆಗ್ತಾ ಇದ್ರೆ, ಇಲ್ಲಾ ಕಫವನ್ನೇ ಕೆಮ್ಮೋದಕ್ಕೆ ಆರಂಭಿಸಿದ್ರೆ ನೀವು ನಿಮ್ಮ ಮಗುವನ್ನ ಡಾಕ್ಟರ್ ಹತ್ರ ಕರ್ಕೋಂಡು ಹೋಗ್ಬೇಕು. ಮಗುವಿನ ಶರೀರದಲ್ಲಿ ನೀರಿನ ಅಂಶಾನೇ ಬತ್ತಿ ಹೋದ್ರೆ ಆವಾಗ್ಲೂ ತಕ್ಷಣ ಮಗುವನ್ನ ಡಾಕ್ಟ್ರಿಗೆ ತೋರಿಸ್ಬೇಕು.

ಇಷ್ಟೇ ಅಲ್ಲದೇ ನಾವು ಇಲ್ಲಿ ಕೆಳಗೆ ಪಟ್ಟಿ ಮಾಡಿರೋ ಯಾವುದಾದರೊಂದು ರೋಗಲಕ್ಷಣ ಮಗುವಿನಲ್ಲಿ ಕಂಡುಬಂದ್ರೂ ತಕ್ಷಣ ನೀವು ಆ್ಯಂಬುಲೆನ್ಸ್ ಗೆ ಕರೆಮಾಡಬೇಕು:

1) ಉಸಿರಾಡಲು ಮಗುವು ಕಷ್ಟಪಡುತ್ತಿದ್ದರೆ

2) ಚರ್ಮ ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿದರೆ

3) ಜೋರಾಗಿ ಉಸಿರಾಡಲಾರಂಭಿಸಿದರೆ

ಆರ್.ಎಸ್.ವಿ. ವೈರಾಣು ಹರಡೋದನ್ನ ತಡೆಯೋದು ಕಷ್ಟ, ಆದರೆ ಆ ವೈರಾಣುವಿನಿಂದಾಗೋ ಅಪಾಯನಾ ತಗ್ಗಿಸೋದಕ್ಕೆ ಉತ್ತಮ ನೈರ್ಮಲ್ಯವನ್ನ ಕಾಪಾಡ್ಕೊಳ್ಳೋದು ತುಂಬಾನೇ ಮುಖ್ಯ. ಹಾಗಾಗಿ ಮಕ್ಕಳು ಚೆನ್ನಾಗಿ ಕೈಗಳನ್ನ ತೊಳೆದುಕೊಳ್ಳೋದನ್ನ ಖಾತ್ರಿ ಮಾಡ್ಕೋಬೇಕು ಮತ್ತೆ ಹಾಗೇನೇ ಮಕ್ಳು ತಮ್ಮ ಪಾನೀಯಗಳನ್ನ, ತಟ್ಟೆ, ಲೋಟಗಳನ್ನ ಅಥವಾ ಗೊಂಬೆಗಳನ್ನ ಹಂಚ್ಕೊಳ್ಳೋದಕ್ಕೆ ಬಿಡಬಾರದು. ಪ್ರತಿಬಾರಿ ನಿಮ್ಮ ಮಗು ಮೂಗಿನ ಮೂಲಕ ಸೀನಿದಾಗ ಅಥವಾ ಕೆಮ್ಮಿದಾಗ, ಅವನು ಅಥವಾ ಅವಳು ತನ್ನ ಕೈಗಳನ್ನ ಚೆನ್ನಾಗಿ ತೊಳ್ಕೋಬೇಕು. ಹೀಗೆ ಮಾಡೋದ್ರಿಂದ ರೋಗಾಣುಗಳು ಹರಡೋದನ್ನ ತಡೆಗಟ್ಬೋದು.

2. ಕಿವಿಗಳಿಗೆ ತಗಲೋ ಸೋಂಕುಗಳು

2. ಕಿವಿಗಳಿಗೆ ತಗಲೋ ಸೋಂಕುಗಳು

ಮಕ್ಕಳ ಕಿವಿಗಳಿಗೆ ಸೋಂಕು ತಗಲೋದು ತೀರಾ ಸಾಮಾನ್ಯ ಮತ್ತು ಸರ್ವೇಸಾಮಾನ್ಯವಾಗಿ ಈ ಸೋಂಕು ಒಂದು ಅಥವಾ ಎರಡು ವಾರಗಳೊಳಗೆ ತಾನೇ ತಾನಾಗಿ ವಾಸಿಯಾಗತ್ತೆ. ಕಿವಿಗಳಿಗೆ ತಗಲೋ ಸೋಂಕು ಕಿವಿ ನೋವನ್ನ ಉಂಟು ಮಾಡ್ಬೋದು ಇಲ್ಲಾ ತಾತ್ಕಾಲಿಕ ಕಿವುಡಿಗೆ ಕಾರಣ ಆಗ್ಲೂಬಹುದು. ಪುಟ್ಟ ಮಕ್ಕಳಲ್ಲಿ ಕಿವಿಯ ಹೊರಭಾಗದ ಹಾಗೂ ಕಿವಿಯ ಮಧ್ಯಭಾಗದ ಸೋಂಕುಗಳು ಸರ್ವೇಸಾಮಾನ್ಯವಾಗಿದ್ದು, ಇವು ಒಂದು ಬ್ಯಾಕ್ಟೀರಿಯಾಗಳಿಂದಲೋ ಅಥವಾ ವೈರಾಣುಗಳಿಂದಲೋ ಉಂಟಾಗುತ್ವೆ.

ಒಂದು ವೇಳೆ ಮಗುವಿಗೆ ಸಿಕ್ಕಾಪಟ್ಟೆ ಕಿವಿ ನೋವಿದ್ದರೆ ಅಥವಾ ರೋಗಲಕ್ಷಣಗಳು ಕಡಿಮೆ ಆಗ್ದೇ ಹೋದ್ರೆ, ಇಲ್ಲಾ ಅವರ ಕಿವಿಯಿಂದ ಕೀವು ಅಥವಾ ದ್ರವ ಏನಾದರೂ ಒಸರ್ತಾ ಇದ್ರೆ ನಿಮ್ಮ ಮಗೂನಾ ತಕ್ಷಣ ಡಾಕ್ಟ್ರಿಗೆ ತೋರಿಸ್ಬೇಕು.

ಎರಡರಿಂದ ಹನ್ನೆರಡು ವರ್ಷಗಳ ಒಳಗಿನ ಮಕ್ಕಳು "ಹುಶಾರಿಲ್ಲ" ಅನ್ನೋ ರೀತಿಯ ಲಕ್ಷಣಗಳನ್ನ ತೋರಿಸಿಕೊಳ್ಳದ ಹೊರತು, ಅವರ ಕಿವಿಯ ಮಧ್ಯಭಾಗದ ಸೋಂಕುಗಳನ್ನ ಆರೈಕೆ ಮಾಡೋದಕ್ಕೆ ಆ್ಯಂಟಿಬಯಾಟಿಕ್ ಗಳನ್ನ ಬಳಸಬಾರದು ಅಂತಾ ಆರ್.ಎ.ಸಿ.ಜಿ.ಪಿ (ದ ರಾಯಲ್ ಆಸ್ಟ್ರೇಲಿಯಾ ಕಾಲೇಜ್ ಆಫ಼್ ಜನರಲ್ ಪ್ರ್ಯಾಕ್ಟೀಷನರ್ಸ್) ಸಲಹೆ ಮಾಡಿದೆ.

ಮಕ್ಕಳು ಕಿವಿಗಳ ಸೋಂಕಿಗೆ ಒಳಗಾಗೋ ಅಪಾಯಾನಾ ತಗ್ಗಿಸಬೇಕೂಂದ್ರೇ ಮಕ್ಕಳು ತಮ್ಮ ಕಿವಿಗಳೊಳಗೆ ಏನನ್ನೂ ಹಾಕ್ಕೋಬಾರ್ದು. ಒಂದು ವೇಳೆ ಕಿವಿ ಕಟ್ಟಿದ ಹಾಗಿದೆ ಅಂತ ಅನ್ಸುದ್ರೂನೂ ಅವ್ರು ಕಿವಿಗಳೊಳಗೆ ಏನನ್ನೂ ಹಾಕ್ಕೊಳ್ಳೋಕೆ ಹೋಗ್ಬಾರ್ದು. ಡಾಕ್ಟ್ರು ಅಥವಾ ಜೌಷಧದ ಅಂಗಡಿಯವರು ಸಲಹೆ ಮಾಡದ ಹೊರತು ಅವರಾಗವರೇ ಯಾವುದೇ ಇಯರ್ ಡ್ರಾಪ್ ಗಳನ್ನೂ ಕಿವಿಗಳಿಗೆ ಹಾಕ್ಕೋಬಾರ್ದು.

3. ಗ್ಯಾಸ್ಟ್ರೋಯೆಂಟೆರೈಟಿಸ್

3. ಗ್ಯಾಸ್ಟ್ರೋಯೆಂಟೆರೈಟಿಸ್

ಗ್ಯಾಸ್ಟ್ರೋಯೆಂಟೆರೈಟಿಸ್ (ಗ್ಯಾಸ್ಟ್ರೋ ಅಂದ್ರೆ ಹೊಟ್ಟೆ, ಎಂಟೆರೋ ಅಂದ್ರೆ ಕರುಳು, ಐಟಿಸ್ ಅಂದ್ರೆ ಉರಿ) ಕರುಳಿನ ಒಂದು ಸೋಂಕಾಗಿದ್ದು, ಇದು ಹೊಟ್ಟೆ ಮತ್ತು ಕರುಳುಗಳಲ್ಲಿ ಉರಿಯನ್ನ ಉಂಟು ಮಾಡತ್ತೆ. ಇದು ಅತಿಸಾರಕ್ಕೂ ಮತ್ತೆ ಕೆಲವೊಮ್ಮೆ ವಾಂತಿಗೂ ದಾರಿ ಮಾಡಿಕೊಡುತ್ತೆ. ವಾಂತಿಯೇನೋ ಸ್ವಲ್ಪದರಲ್ಲೇ ನಿಂತುಬಿಡುತ್ತೆ, ಆದ್ರೆ ಈ ಅತಿಸಾರ 10 ದಿನಗಳವರೆಗೂ ಮುಂದುವರೆಯೋ ಸಾಧ್ಯತೆ ಇರುತ್ತೆ. ಬೇರೆ ಬೇರೆ ರೀತಿಯ ರೋಗಾಣುಗಳು ಗ್ಯಾಸ್ಟ್ರೋಯೆಂಟೆರೈಟಿಸ್ ಗೆ ಕಾರಣ ಆಗಿರ್ಬೋದಾದ್ರೂ ಕೂಡ, ಅತೀ ಸಾಮಾನ್ಯ ಕಾರಣ ಒಂದೋ ವೈರಾಣುವಿನ ಇಲ್ಲವೇ ಬ್ಯಾಕ್ಟೀರಿಯಾದ ಸೋಂಕು ಆಗಿರುತ್ತೆ.

ಗ್ಯಾಸ್ಟ್ರೋಯೆಂಟೆರೈಟಿಸ್ ನಿಂದ ನಿಮ್ಮ ಮಗು ಬಳಲ್ತಾ ಇದ್ರೆ ಮಗುವಿನಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳೋ ಸಾಧ್ಯತೆ ಇರುತ್ತೆ:

1) ವಾಕರಿಕೆ

2) ತಲೆನೋವು

3) ಮೊದಲ 24 ರಿಂದ 48 ಘಂಟೆಗಳ ಕಾಲ ವಾಂತಿ

4) ಹಸಿವಿಲ್ಲದಿರುವುದು

5) ಹೊಟ್ಟೆನೋವು

6) ಜ್ವರ

ಗ್ಯಾಸ್ಟ್ರೋಯೆಂಟೆರೈಟಿಸ್ ಅನ್ನ ತಡೆಗಟ್ಟೋದಕ್ಕೆ, ಬಾತ್ರೂಮನ್ನ ಬಳಸಿದ ಅಥವಾ ನ್ಯಾಪ್ಕಿನ್ ಗಳನ್ನ ಬದಲಾಯಿಸಿದ ಬಳಿಕ, ಹಾಗೂ ಆಹಾರವನ್ನ ಮುಟ್ಟೋದಕ್ಕೆ ಮೊದಲು ಕೈಗಳನ್ನ ಬಲು ಸ್ವಚ್ಚವಾಗಿ ತೊಳೆದುಕೊಳ್ಳೋದು ತುಂಬಾನೇ ಅಗತ್ಯ.

4. ರೊಸೆಯೋಲಾ

4. ರೊಸೆಯೋಲಾ

ರೊಸೆಯೋಲಾ ಇನ್ಫ಼ಾಂಟಮ್ ಒಂದು ವೈರಾಣು ಸೋಂಕಾಗಿದ್ದು, ಇದು ಸಾಮಾನ್ಯವಾಗಿ 6 ತಿಂಗಳಿನಿಂದ ಎರಡರ ಹರೆಯದೊಳಗಿನ ಮಕ್ಕಳನ್ನು ಕಾಡುತ್ತದೆ. ಅತೀ ಜ್ವರಕ್ಕೆ ಕಾರಣವಾಗುತ್ತದೆ ಈ ಸೋಂಕು.

ರೊಸೆಯೋಲಾ ಸೋಂಕಿಗೀಡಾದ ಮಗು ತೋರಿಸುವ ಸಾಮಾನ್ಯ ರೋಗಲಕ್ಷಣಗಳು ಈ ಕೆಳಗಿನವು:

1) ಮಧ್ಯಮ ಪ್ರಮಾಣದ ಗಂಟಲು ನೋವು

2) ಏಕಾಏಕಿ ವಿಪರೀತ ಜ್ವರ

3) ಊದಿಕೊಂಡ ಗಂಟಲ ಗ್ರಂಥಿಗಳು

4) ಎದೆ, ಹೊಟ್ಟೆ, ಮತ್ತು ಬೆನ್ನಿನ ಮೇಲೆ ಗುಲಾಬಿ ವರ್ಣದ ಕಲೆಗಳು

ರೊಸೆಯೋಲಾ ಸೋಂಕಿನಿಂದ ಉಂಟಾಗಬಹುದಾದ ಗಂಭೀರ ಸ್ವರೂಪದ ಸಮಸ್ಯೆಯೆಂದರೆ ಮಗುವಿನಲ್ಲಿ ಮಗುವಿಗೆ ಜ್ವರದೊಂದಿಗೆ ಬವಳಿ (ಫಿಟ್ಸ್) ಕಾಣಿಸಿಕೊಳ್ಳುವುದು

1) ಮೂರ್ಛೆ ತಪ್ಪುವುದು

2) ತೋಳುಗಳು, ಕಾಲುಗಳು, ಅಥವಾ ಮುಖ ಹಲವಾರು ನಿಮಿಷಗಳವರೆಗೆ ತೀವ್ರವಾಗಿ ನಡುಗುವುದು ಅಥವಾ ಅವುಗಳ ವಿಪರೀತ ಚಲನೆ (ಫಿಟ್ಸ್)

3) ಅನೈಚ್ಛಿಕ ಅಥವಾ ಅನಿಯಂತ್ರಿತ ಮಲ ಅಥವಾ ಮೂತ್ರ ವಿಸರ್ಜನೆ

ಒಂದು ವೇಳೆ ಐದು ನಿಮಿಷಗಳಿಗೂ ಹೆಚ್ಚಿನ ಅವಧಿಯವರೆಗೆ ನಿಮ್ಮ ಮಗುವಿನಲ್ಲಿ ಫಿಟ್ಸ್ ಕಾಣಿಸಿಕೊಂಡಲ್ಲಿ ಅಥವಾ ಫಿಟ್ಸ್ ನ ನಂತರ ಮಗು ಎಚ್ಚರಗೊಳ್ಳದೇ ಹೋದಲ್ಲಿ, ನೀವು ತುರ್ತಾಗಿ ವೈದ್ಯಕೀಯ ನೆರವನ್ನ ಪಡೆಯಬೇಕು.

ಐದು ನಿಮಿಷಗಳಿಗೂ ಕಡಿಮೆ ಅವಧಿಯ ಫಿಟ್ಸ್ ನಿಮ್ಮ ಮಗುವಿನಲ್ಲಿ ಕಾಣಿಸಿಕೊಂಡು, ಅದಾದ ಬಳಿಕ ಮಗುವು ತೀರಾ ಬಸವಳಿದು ನಿದ್ರೆ ಮಂಪರು ಮಗುವನ್ನು ಆವರಿಸಿಕೊಂಡರೆ ಅಥವಾ ಮಗುವು ತೀರಾ ಗಲಿಬಿಲಿಗೊಳಗಾದಂತೆ ಕಂಡುಬಂದರೆ, ಸಿಕ್ಕಾಪಟ್ಟೆ ತಲೆನೋವು ಕಾಣಿಸಿಕೊಂಡರೆ, ಅಥವಾ ತಲೆನೋವಿನೊಂದಿಗೆ ಕುತ್ತಿಗೆ ಸೆಟೆದುಕೊಂಡರೆ, ಅಥವಾ ದೇಹದ ಕೆಲವೆಡೆ ತಿಳಿನೇರಳೆ ಬಣ್ಣದ ಕಲೆಗಳು ತಲೆದೋರಿದರೆ ನೀವು ವೈದ್ಯರನ್ನ ಕಾಣಬೇಕು. ಮಗುವು ವಿಪರೀತ ಜ್ವರದಿಂದ ಬಳಲುತ್ತಿದ್ದರೆ ಅಥವಾ ಕುಡಿಯಲು ನಿರಾಕರಿಸುತ್ತಿದ್ದರೆ ಆಗಲೂ ಮಗುವನ್ನು ವೈದ್ಯರಲ್ಲಿ ಕರೆದೊಯ್ಯಬೇಕು.

ಆಗಾಗ್ಗೆ ಚೆನ್ನಾಗಿ ಕೈಗಳನ್ನ ತೊಳೆದುಕೊಳ್ಳೋದರ ಮೂಲಕ ಹಾಗೂ ಒಳ್ಳೆಯ ನೈರ್ಮಲ್ಯ ಹವ್ಯಾಸಗಳನ್ನ ರೂಢಿಸಿಕೊಳ್ಳೋದರ ಮೂಲಕ ರೊಸೆಯೋಲಾಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಬಹುದು. ಈ ಸೋಂಕನ್ನ ತಡೆಗಟ್ಟೋದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ.

5. ಕಂಜೆಕ್ಟಿವೈಟಿಸ್ (ಗುಲಾಬಿ ಕಣ್ಣು)

5. ಕಂಜೆಕ್ಟಿವೈಟಿಸ್ (ಗುಲಾಬಿ ಕಣ್ಣು)

ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಣ್ಣಿನ ಸೋಂಕು. ಇದು ಅತ್ಯಂತ ಸಾಂಕ್ರಾಮಿಕವಾಗಿದ್ದು (ಒಬ್ಬರಿಂದ ಇನ್ನೊಬ್ಬರಿಗೆ ಹರಡಿಕೊಳ್ಳೋವಂತಹದ್ದು) ಸೋಂಕಿಗೀಡಾದವರಲ್ಲಿ ಈ ಕೆಳಗಿನ ರೋಗಲಕ್ಷಣಗಳು ಕಾಣಿಸಿಕೊಂಡಾವು:

1) ಕಣ್ಣಿನಲ್ಲಿ ಉರಿ

2) ಕಣ್ಣಿನ ಬಿಳಿಭಾಗವನ್ನು ಆವರಿಸಿರುವ ಪಾರದರ್ಶಕ ಪೊರೆ ಹಾಗೂ ಕಣ್ರೆಪ್ಪೆಗಳ ಒಳಮೇಲ್ಮೈಗಳು ಕೆಂಪಗಾಗುವುದು

3) ಕಣ್ಣಿನಿಂದ ಹಳದಿ ಅಥವಾ ಹಸಿರು ದ್ರವ ಒಸರುವುದು

4) ತುರಿಸುತ್ತಿರುವ ಅಥವಾ ಉರಿಯುತ್ತಿರುವ ಕಣ್ಣುಗಳು

ಕೆಲವೇ ಘಂಟೆಗಳಲ್ಲಿ ಈ ಮೇಲಿನ ಲಕ್ಷಣಗಳು ಸುಧಾರಣೆ ಕಾಣದಿದ್ದಲ್ಲಿ, ನೀವು ನಿಮ್ಮ ಮಗುವನ್ನು ವೈದ್ಯರಲ್ಲಿಗೆ ಕರೆದೊಯ್ಯಬೇಕು. ಒಂದು ವೇಳೆ ಅದು ವೈರಾಣುವಿನ ಸೋಂಕಾಗಿದ್ದಲ್ಲಿ, ಅದು ಯಾವುದೇ ಚಿಕಿತ್ಸೆಯಿಲ್ಲದೇ ಗುಣವಾಗುತ್ತದೆ. ಆದರೆ, ಅದು ಬ್ಯಾಕ್ಟೀರಿಯಾದಿಂದಾದ ಸೋಂಕಾಗಿದ್ದಲ್ಲಿ, ಅದಕ್ಕೆ ಆ್ಯಂಟಿಬಯಾಟಿಕ್ ಐ ಡ್ರಾಪ್ ಚಿಕಿತ್ಸೆಯ ಅಗತ್ಯವಿರುತ್ತದೆ.

ಮಗುವಿಗೆ ಕಾಂಜೆಕ್ಟಿವೈಟಿಸ್ ಇದ್ದಲ್ಲಿ, ಮಗುವು ಆದಷ್ಟು ಕಣ್ಣುಗಳನ್ನು ಮುಟ್ಟದಿದ್ದರೆ ಒಳ್ಳೆಯದು. ಅದು ಹರಡದಂತೆ ತಡೆಯಲು ಮಗುವು ಆಗಾಗ್ಗೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುತ್ತಿರಬೇಕು.

6. ಉಬ್ಬಸ

6. ಉಬ್ಬಸ

ಮಕ್ಕಳನ್ನು ಕಾಡುವ ಮಹಾಮಾರಿಗಳ ಪೈಕಿ ಉಬ್ಬಸವೂ ಒಂದು. ನಿಮ್ಮ ಮಗುವಿಗೆ ಅಸ್ತಮಾ ಇದ್ದಲ್ಲಿ, ಮಗುವು ಈ ಕೆಳಗಿನ ಲಕ್ಷಣಗಳನ್ನು ತೋರ್ಪಡಿಸುವ ಸಾಧ್ಯತೆ ಇರುತ್ತದೆ:

1) ಉಸಿರಾಡುವಾಗ ಹೊರಹೊಮ್ಮುವ ಕೀರಲು (ವ್ಹೀಸಿಂಗ್) ಶಬ್ದ.

2) ಉಸಿರಾಟ ಕ್ರಿಯೆಯೇ ಇಲ್ಲದಂತಿರುವುದು (ಬ್ರೆಥ್ಲೆಸ್ನೆಸ್)

3) ಎದೆ ಬಿಗಿದುಕೊಂಡಂತಾಗುವುದು

4) ವಿಶೇಷವಾಗಿ ರಾತ್ರಿ ವೇಳೆ ಅಥವಾ ನಸುಕಿನ ವೇಳೆ ಕೆಮ್ಮುತ್ತಾ ಇರುವುದು

ನಿಮ್ಮ ಮಗುವಿಗೆ ಉಬ್ಬಸವಿದೆಯೆಂದು ನಿಮಗನಿಸಿದರೆ, ವೈದ್ಯರನ್ನ ಕಾಣುವುದು ಬಹಳ ಮುಖ್ಯ. ವೈದ್ಯರು ನಿಮ್ಮ ಮಗುವಿನ ವೈದ್ಯಕೀಯ ಹಿನ್ನೆಲೆಯನ್ನು ಪರಿಶೀಲಿಸಿ, ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ಪರೀಕ್ಷೆಗಳನ್ನು ಕೈಗೊಂಡಾರು.

ಉಬ್ಬಸವನ್ನ ತಡೆಗಟ್ಟಬಹುದು, ಆದರೆ ರೋಗಲಕ್ಷಣಗಳನ್ನ ತಗ್ಗಿಸುವಲ್ಲಿ ನಿಮ್ಮ ಮಗುವು ಕೆಲವು ಕ್ರಮಗಳನ್ನ ಅನುಸರಿಸಬೇಕಾಗುತ್ತದೆ. ಉಬ್ಬಸವನ್ನ ಪ್ರೇರೇಪಿಸುವ ಧೂಳು, ವ್ಯಾಯಾಮ, ಮನೆಯ ಧೂಳು, ಕ್ರಿಮಿಗಳು, ಸಾಕುಪ್ರಾಣಿಗಳನ್ನ ಗುರುತಿಸಲು ವೈದ್ಯರು ನಿಮಗೆ ನೆರವಾಗುವರು. ಉಬ್ಬಸವನ್ನ ತಡೆಗಟ್ಟುವ ಜೌಷಧ ಹಾಗೂ ಆಸ್ತಮಾ ಆಕ್ಷನ್ ಪ್ಲಾನ್ ಗಳಂತಹ ಚಿಕಿತ್ಸಾ ವಿಧಾನಗಳನ್ನ ವೈದ್ಯರು ಸಲಹೆ ಮಾಡಿಯಾರು.

7. ಕೈ, ಕಾಲು, ಮತ್ತು ಬಾಯಿ ರೋಗ

7. ಕೈ, ಕಾಲು, ಮತ್ತು ಬಾಯಿ ರೋಗ

ಇದೊಂದು ವೈರಾಣುವಿನ ಸೋಂಕಾಗಿದ್ದು, ಕೈಗಳು, ಪಾದಗಳು, ಮತ್ತು ಬಾಯಿಯಲ್ಲಿ ಬೊಕ್ಕೆಗಳು ಉಂಟಾಗುತ್ತವೆ. ಪ್ರಾಣಿಗಳನ್ನು ಕಾಡುವ ಕಾಲುಬಾಯಿ ರೋಗಕ್ಕಿಂತ ವಿಭಿನ್ನವಾದದ್ದು ಇದು.

ಕೈ, ಕಾಲು, ಮತ್ತು ಬಾಯಿ ರೋಗದ ರೋಗಲಕ್ಷಣಗಳು ಸಾಮಾನ್ಯವಾಗಿ ಒಂದು ವಾರದವರೆಗೆ ಇರುತ್ತವೆ. ಆ ಲಕ್ಷಣಗಳು ಈ ಕೆಳಗಿನವುಗಳಾಗಿವೆ:

1) ಜ್ವರ

2) ಕೆನ್ನೆಗಳು, ವಸಡುಗಳು, ಮತ್ತು ಬಾಯಿಯ ಪಾರ್ಶ್ವಗಳಲ್ಲಿ ಚಿಕ್ಕ ಚಿಕ್ಕ ಬೊಕ್ಕೆಗಳು/ಗುಳ್ಳೆಗಳು

3) ಕೈಗಳು, ಪಾದಗಳು, ಮತ್ತು ಗುಪ್ತಾಂಗಗಳ ಮೇಲೆ ಚಿಕ್ಕ ಚಿಕ್ಕ ಬೊಕ್ಕೆಗಳು/ಗುಳ್ಳೆಗಳು

4) ಗಂಟಲು ನೋವು

ಈ ಸೋಂಕು ರೋಗಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ನೀವು ನಿಮ್ಮ ಮಗುವಿಗೆ ಧಾರಾಳವಾಗಿ ನೀರು ಕುಡಿಯಲು ಮತ್ತು ಎಷ್ಟು ಸಾಧ್ಯವೋ ಅಷ್ಟು ವಿಶ್ರಾಂತಿ ಪಡೆಯಲು ಉತ್ತೇಜಿಸಬೇಕು. ಆ ಬೊಕ್ಕೆಗಳು ಸಹಜವಾಗಿಯೇ ಒಣಗಲು ಬಿಡಬೇಕು ಮತ್ತು ಅವುಗಳನ್ನು ಹಿಂಡಲು ಪ್ರಯತ್ನಿಸಬಾರದು.

ಈ ಸೋಂಕಿನ ಅಪಾಯದಿಂದ ಪಾರಾಗಲು ನಿಮ್ಮ ಮಗುವು ಆಗಾಗ್ಗೆ ಕೈಗಳನ್ನ ಬಲು ಸ್ವಚ್ಚವಾಗಿ ತೊಳೆದುಕೊಳ್ಳುತ್ತಾ ಇರೋದು ಅತ್ಯಂತ ಅಗತ್ಯ. ನಿಮ್ಮ ಮಗುವಿನ ಮೈಮೇಲಿನ ಬೊಕ್ಕೆಯ ದ್ರವ ನಿಮ್ಮ ಕೈಗೇನಾದರೂ ತಗುಲಿದರೆ, ನೀವೂ ಕೂಡ ನಿಮ್ಮ ಕೈಗಳನ್ನ ಬಹಳ ಸ್ವಚ್ಛವಾಗಿ ತೊಳೆದುಕೊಳ್ಳಬೇಕಾದದ್ದು ಅಷ್ಟೇ ಮುಖ್ಯ. ಊಟದ ತಟ್ಟೆ, ಲೋಟ ಮೊದಲಾದವುಗಳನ್ನ ನಿಮ್ಮ ಮಗುವು ಯಾರೊಡನೆಯೂ ಹಂಚಿಕೊಳ್ಳಬಾರದು. ಮಗುವಿನ ಮೈಮೇಲೆ ಎದ್ದಿರೋ ಎಲ್ಲ ಬೊಕ್ಕೆಗಳಲ್ಲಿ ನೀರು ಪೂರ್ತಿ ಇಂಗಿ ಹೋಗೋವರೆಗೂ ಮಗೂನಾ ಶಾಲೆಗೆ ಕಳಿಸೋದು ಬೇಡ.

8. ಲಾಡಿಹುಳು ಅಥವಾ ಸೂಜಿಹುಳು

8. ಲಾಡಿಹುಳು ಅಥವಾ ಸೂಜಿಹುಳು

ಮುಖ್ಯವಾಗಿ ಮಕ್ಕಳನ್ನ ಕಾಡೋ ಈ ಲಾಡಿಹುಳು ಅಥವಾ ಸೂಜಿಹುಳದ ಸೋಂಕು ತೀರಾ ಸಾಂಕ್ರಾಮಿಕವಾದದ್ದು. ಲಾಡಿಹುಳುವಿನ ಮೊಟ್ಟೆಗಳು ಮಗುವಿನ ಕೈಗಳ ಸಂಪರ್ಕಕ್ಕೆ ಬಂದು, ಅವೇ ಕೈಗಳನ್ನ ಮಗುವು ಬಾಯೊಳಗೆ ಹಾಕಿಕೊಂಡಾಗ ಈ ಸೋಂಕು ಸರ್ವೇಸಾಮಾನ್ಯವಾಗಿ ಮಗುವನ್ನ ಕಾಡುತ್ತದೆ. ಈ ಮೊಟ್ಟೆಗಳು ಕರುಳುಗಳೊಳಗೆ ಸೇರಿಕೊಂಡು ಅಲ್ಲಿಯೇ ಮರಿಗಳಾಗಿ ಬೆಳವಣಿಗೆ ಹೊಂದುತ್ತವೆ.

ಈ ಸೋಂಕಿನ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿರುತ್ತವೆ ನೋಡಿ:

1) ಗುದದ್ವಾರದ ಬಳಿ ತುರಿಕೆ

2) ಮಕ್ಕಳಲ್ಲಿ ಒಳ-ಉಡುಪಿನಲ್ಲಿ ಹುಳುಗಳು ಕಾಣಿಸಿಕೊಳ್ಳೋದು

3) ಹೆಣ್ಣುಮಕ್ಕಳ ಯೋನಿಯ ಸುತ್ತ ಕೆಂಪು ಮತ್ತು ನವೆ

ಹೊಟ್ಟೆಯೊಳಗೆ ಸೇರಿಕೊಂಡಿರೋ ಲಾಡಿಹುಳಗಳನ್ನ ಒದ್ದೋಡಿಸೋದಕ್ಕೆ ನಿಮ್ಮ ಮಗುವಿಗೆ ಜೌಷಧದ ಅಗತ್ಯ ಇರುತ್ತೆ. ಈ ಜೌಷಧ ವೈದ್ಯರ ಬಳಿ ಇಲ್ಲವೇ ಮೆಡಿಕಲ್ ಶಾಪ್ ನಲ್ಲಿ ಸಿಗುತ್ತೆ. ಈ ಸೋಂಕು ಅತ್ಯಂತ ಸಾಂಕ್ರಾಮಿಕವಾಗಿರೋದ್ರಿಂದ ಮಗುವಿನ ಜೊತೆಗೆ ಇಡೀ ಕುಟುಂಬವೇ ಚಿಕಿತ್ಸೆ ಪಡೆದುಕೊಳ್ಳೋದು ತುಂಬಾನೇ ಮುಖ್ಯ. ಟವಲ್ ಗಳನ್ನ ಹಂಚಿಕೊಳ್ಳಲೇ ಬಾರದು ಮತ್ತು ಮನೆಯ ಪ್ರತಿಯೊಬ್ಬರೂ ಪ್ರತೀ ದಿನವೂ ಒಳ-ಉಡುಪಗಳನ್ನ ಬದಲಾಯಿಸಲೇ ಬೇಕು. ನವೆಯಾದರೂ ತುರಿಸಿಕೊಳ್ಳಬಾರದೆಂದು ನಿಮ್ಮ ಮಗುವಿಗೆ ತಿಳಿಹೇಳಬೇಕು. ಶೌಚಾಲಯಕ್ಕೆ ಹೋಗಿ ಬಂದ ಮೇಲೆ, ಬೆಚ್ಚಗಿನ ಸಾಬೂನಿನ ನೀರಿನಿಂದ ಕನಿಷ್ಟ 10 ನಿಮಿಷಗಳವರೆಗಾದರೂ ಕೈಗಳನ್ನ ಸ್ವಚ್ಚವಾಗಿ ತೊಳೆದುಕೊಳ್ಳಬೇಕೆಂದು ನೀವು ನಿಮ್ಮ ಮಗುವಿಗೆ ತಿಳಿಹೇಳಬೇಕು.

English summary

Children's day 2020: common children’s health problems

Here are common children’s health problems and how to prvent it, read on,
X
Desktop Bottom Promotion