For Quick Alerts
ALLOW NOTIFICATIONS  
For Daily Alerts

ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು

|

ನಿಮ್ಮ ಮಗು ಶಾಲೆಗೆ ಹೋಗತೊಡಗಿದ ಬಳಿಕ ಪ್ರಥಮ ದಿನಗಳಲ್ಲಿ ಅಕ್ಷರಗಳನ್ನು ನಂತರದ ದಿನಗಳಲ್ಲಿ ಪದಗಳನ್ನೂ ಕಲಿಯಲು ತೊಡಗುತ್ತದೆ. ದಿನಕಳೆದಂತೆ ಹೆಚ್ಚು ಹೆಚ್ಚು ಪದಗಳನ್ನು ಕಲಿಯಬೇಕಾಗಿ ಬಂದು ಪ್ರತಿ ಪದದ ಅಕ್ಷರಗಳನ್ನು ಸರಿಯಾಗಿ ಸಂಯೋಜಿಸಲು ಕೊಂಚ ಹಿಂದೇಟು ಹಾಕಬಹುದು. ಈಗ ಮಗುವಿನ ಶಿಕ್ಷಕರು ಹಾಗೂ ಪಾಲಕರು ಪದ ಉಚ್ಛಾರವನ್ನು (spelling) ಉತ್ತಮಗೊಳಿಸಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಏಕೆಂದರೆ ಇಂಗ್ಲಿಷಿನ ಎಲ್ಲಾ ಪದಗಳು ನೋಡಲು ಒಂದೇ ವಿಧವಾದ ಅಕ್ಷರಗಳ ಸಂಯೋಜನೆ ಹೊಂದಿದ್ದರೂ ಉಚ್ಛಾರಣೆಯಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ rough ಅನ್ನು ರಫ್ ಎಂದೂ plough ಅನ್ನು ಪ್ಲವ್ ಎಂದೂ ಉಚ್ಛರಿಸಲಾಗುತ್ತದೆ. ಹಾಗಾಗಿ ಮಗುವಿಗೆ ಪ್ರತಿ ಪದವನ್ನೂ ಅದರ ಅರ್ಥ ಅಥವಾ ತಾತ್ಪರ್ಯದೊಂದಿಗೆ ತಿಳಿಸಿಕೊಡುವುದು ಅಗತ್ಯವಾಗಿದೆ. ಬಳಿಕ ಈ ಪದಗಳನ್ನು ಬಳಸಿ ವಾಕ್ಯಗಳನ್ನು ರಚಿಸುವಲ್ಲಿ ಕ್ರಿಯಾತ್ಮಕತೆಯನ್ನು ಮೂಡಿಸುವ ಮೂಲಕ ಕಲಿಕೆಯನ್ನು ಒಂದು ಆಟದಂತೆ ಭಾಸವಾಗುವಂತೆ ಮಾಡುವುದು ಒಂದು ಕಲೆ.

ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಈ ವಿಧಾನಗಳನ್ನು ತಿಳಿಸಿಕೊಡುತ್ತಾರಾದರೂ ಮನೆಯಲ್ಲಿ ಪಾಲಕರು ಕೂಡಾ ಈ ಕಲಿಕೆಯಲ್ಲಿ ಭಾಗಿಯಾಗುವ ಮೂಲಕ ಮಗು ಪದಗಳನ್ನು ಶೀಘ್ರವಾಗಿ ಕಲಿಯುತ್ತದೆ. ಅಲ್ಲದೇ ಮಗು ಯಾವ ಅಕ್ಷರ ಅಥವಾ ಪದವನ್ನು ಕಲಿಯುವಲ್ಲಿ ಕಷ್ಟಪಡುತ್ತಿದೆ ಎಂಬುದನ್ನು ಸಮಯದ ಆಭಾವದಿಂದ ಶಿಕ್ಷಕರು ಗಮನಿಸದಿದ್ದನ್ನು ನೀವು ಗಮನಿಸಿ ಆ ವಿಷಯದಲ್ಲಿ ಹೆಚ್ಚಿನ ಅಸ್ಥೆ ವಹಿಸಬಹುದು.

ನಿಮ್ಮ ಮಗುವಿಗೆ ಪಾಠ ಹೇಳಿಕೊಡುವಾಗ ಕೆಲವು ಸಂಗತಿಗಳನ್ನು ನೆನಪಿಡಬೇಕಾಗುತ್ತದೆ. ಇಂಗ್ಲಿಷ್ ಪದಗಳಲ್ಲಿ ಕೆಲವು ಅಕ್ಷರಗಳು ಸ್ಪಷ್ಟ ಉಚ್ಛಾರ ಹೊಂದಿರುವುದು (phonogram) ಹಾಗೂ ಕೆಲವು ಮೌನವಾಗಿರುವುದು (silent), ಉಚ್ಛಾರ ನಿಯಮಗಳು ಹಾಗೂ ಅಕ್ಷರಗಳನ್ನು ಜೋಡಿಸುವಾಗ ಪಾಲಿಸಬೇಕಾದ ತರ್ಕ ಮೊದಲಾದವುಗಳನ್ನು ಉದಾಹರಣೆಗಳೊಂದಿಗೆ ಕಲಿಸಬೇಕು. ಉದಾಹರಣೆಗೆ boy ಪದದಲ್ಲಿ oy ಎಂಬುವುದು ಒಯ್ ಎಂಬ ಸ್ಪಷ್ಟ ಉಚ್ಛಾರವನ್ನು ನೀಡುವುದರಿಂದ ಅದು phonogram ಆಗಿದೆ. ಅಂತೆಯೇ know ಪದದಲ್ಲಿ k ಅಕ್ಷರವನ್ನು ಉಚ್ಛರಿಸದ ಕಾರಣ ಅದು ಮೌನವಾಗಿದೆ(silent).

ಆದರೆ ಈ ವಿಷಯಗಳನ್ನು ಮಕ್ಕಳ ಎಳೆಯ ಮನದಲ್ಲಿ ಸ್ಪಷ್ಟವಾಗಿ ಮೂಡಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಕೆಲವು ಚಟುವಟಿಕೆಗಳನ್ನು ಆಟದ ರೂಪದಲ್ಲಿ ಪ್ರಸ್ತುತಪಡಿಸಿದರೆ ಮಕ್ಕಳು ಅದನ್ನು ಇಷ್ಟಪಡುವುದಷ್ಟೇ ಅಲ್ಲ, ಬೇಗನೇ ಹೊಸ ಹೊಸ ವಿಷಯಗಳನ್ನು ಕಲಿಯಲು ಉತ್ಸುಕರೂ ಆಗುತ್ತಾರೆ. ಅತ್ಯುತ್ತಮವೆಂದು ಕೆಲವು ಚಟುವಟಿಕೆಗಳನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಮಗು ಯಾವ ಚಟುವಟಿಕೆಯನ್ನು ಹೆಚ್ಚು ಇಷ್ಟ ಪಡುತ್ತದೆಯೋ ಅದನ್ನು ಹೆಚ್ಚು ಆಚರಿಸುವ ಮೂಲಕ ಅವರ ಕಲಿಕೆಯನ್ನು ಸುಲಭವಾಗಿಸಬಹುದು. ಮಕ್ಕಳನ್ನು ಟ್ಯೂಷನ್ ಗೆ ಕಳಿಸುತ್ತಿದ್ದೀರಾ?

ನೋಡಿ ಕಲಿ
ಕೆಲವು ಪದಗಳನ್ನು ಪೋಸ್ಟ್ ಕಾರ್ಡ್ ಗಾತ್ರದ ಕೆಲವು ದಪ್ಪ ಕಾಗದಗಳ ಮೇಲೆ ಬರೆದು ಮಗುಚಿಡಿ. ಈಗ ಮಗು ತನಗಿಷ್ಟವಾದ ಯಾವುದೇ ಒಂದು ಕಾರ್ಡನ್ನು ನೋಡಿ ಪುನಃ ಮಗುಚಿಡಲಿ ಹಾಗೂ ಅದೇ ಪದವನ್ನು ತನ್ನ ನೆನಪಿನಿಂದ ಬರೆಯಲಿ. ಎಷ್ಟು ಕಾರ್ಡುಗಳನ್ನು ಸರಿಯಾಗಿ ಬರೆಯುತ್ತದೆ ಎಂದು ಗಮನಿಸಿ. ಇದರಿಂದ ಮಗುವಿನ ಸ್ಮರಣಶಕ್ತಿ ಹೆಚ್ಚುವುದಷ್ಟೇ ಅಲ್ಲ, ತನ್ನ ಶ್ರಮದ ಬಗ್ಗೆ ಅಭಿಮಾನವನ್ನೂ ಪಡೆಯುತ್ತದೆ.

ಕಣ್ಣಾಮುಚ್ಚಾಲೆ ಆಡಿ
ಮೇಲಿನ ಚಟುವಟಿಕೆಯಲ್ಲಿ ಉಪಯೋಗಿಸಿದ ಕಾರ್ಡುಗಳನ್ನೇ ಇಲ್ಲಿಯೂ ಉಪಯೋಗಿಸಬಹುದು. ಈ ಕಾರ್ಡುಗಳನ್ನು ಕೋಣೆಯಲ್ಲಿ ಅಲ್ಲಲ್ಲಿ, ಮಗು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಅಡಗಿಸಿಡಿ. ಬಳಿಕ ಈ ಕಾರ್ಡುಗಳು ಎಲ್ಲೆಲ್ಲಿವೆ ಎಂದು ಮಗು ಹುಡುಕಲು ಕೆಲವು ಸುಳಿವುಗಳನ್ನು ನೀಡಿ. ಎಲ್ಲಾ ಕಾರ್ಡುಗಳನ್ನು ಹುಡುಕಿಯಾದ ಬಳಿಕ ಆ ಕಾರ್ಡುಗಳಲ್ಲಿನ ಪದಗಳನ್ನು ಉಚ್ಛರಿಸಿ ಅವುಗಳನ್ನು ಬರೆಯಲು ತಿಳಿಸಿ. ಈ ಚಟುವಟಿಕೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಇನ್ನೂ ಚೆನ್ನ. ಮಕ್ಕಳು ಅಡಗಿಸಿಟ್ಟ ಕಾರ್ಡುಗಳನ್ನು ಹುಡುಕಿ ತೆಗೆಯುವ ಆಟದ ಮೂಲಕ ಪದಉಚ್ಛಾರವನ್ನು ಚೆನ್ನಾಗಿ ಕಲಿಯುತ್ತಾರೆ.

ಗಡಿಯಾರದೊಂದಿಗೆ ಸ್ಪರ್ಧಿಸಿ
ಸಾಧಾರಣವಾಗಿ ಮಕ್ಕಳು ಸ್ಪರ್ಧೆಯನ್ನು ಇಷ್ಟಪಡುತ್ತಾರೆ. ತುತ್ತು ಉಣ್ಣಿಸುವಾಗ ಇನ್ನೂ ಹಾಲುಹಲ್ಲು ಮೂಡದ ಮಗುವಿಗೂ ತಾಯಿ 'ಬೇಗ ತಿನ್ನಬೇಕು, ಮೊದಲು ಬರಬೇಕು' ಎಂದು ಪುಸಲಾಯಿಸುವುದನ್ನು ಕಾಣಬಹುದು. ಮೊದಲು ಬರಬೇಕಾದರೆ ಈ ತುತ್ತು ತಿನ್ನಬೇಕು ಎಂದು ಆ ಮಗುವಿನ ಮನದಲ್ಲಿ ಮೂಡಿ ತುತ್ತು ಹೊಟ್ಟೆ ಸೇರುತ್ತದೆ. ಈ ಆಟದಲ್ಲಿಯೂ ಮಕ್ಕಳ ಸುಪ್ತಮನದಲ್ಲಿ ಅಡಗಿರುವ ಈ ಸ್ಪರ್ಧೆಯನ್ನು ಹೊರತರುವುದಾಗಿದೆ. ನಿಮ್ಮ ಮಗುವನ್ನು ಎದುರಿಗೆ ಕೂರಿಸಿ ಒಂದು ಗಡಿಯಾರವನ್ನು ಇಬ್ಬರೂ ಕಾಣುವಂತೆ ಎದುರಿಗಿಡಿ. ಈಗ ಒಂದೊಂದಾಗಿ ಪದಗಳನ್ನು ಹೇಳುತ್ತಾ ಹೋಗಿ. ಹತ್ತು ಪದಗಳು ಮುಗಿಯುವಾಗ ಎಷ್ಟು ಸಮಯ ಹಿಡಿಯಿತು ಎಂದು ಆ ಕಾಗದದ ಮೇಲೆ ಬರೆಯಿರಿ. ಮಗುವಿನ ಹೆಬ್ಬೆರಳು ಚೀಪುವ ಅಭ್ಯಾಸ ಬಿಡಿಸುವುದು ಹೇಗೆ?

ಬಳಿಕ ಇದೇ ಪದಗಳನ್ನು ಮತ್ತೊಮ್ಮೆ ಹೇಳುತ್ತೇನೆ, ಈಗ ಮೊದಲಿಗಿಂತ ಎಷ್ಟು ಕಡಿಮೆ ಸಮಯದಲ್ಲಿ ಬರೆಯಲು ಸಾಧ್ಯ ಎಂದು ಮಗುವನ್ನು ಸ್ಪರ್ಧೆಗೆಳಿಯಿರಿ. ತನ್ನದೇ ಸಾಧನೆಯನ್ನು ಮುರಿಯುವ ಹುಮ್ಮಸ್ಸಿನಲ್ಲಿ ಮಗು ನಿಮಗೇ ಬೇಗ ಬೇಗ ಪದಗಳನ್ನು ಹೇಳುವಂತೆ ತನ್ನ ಹುಮ್ಮಸ್ಸು ತೋರಿಸುತ್ತದೆ. ಎಲ್ಲ ಪದಗಳು ಮುಗಿದ ಬಳಿಕ ಮತ್ತೊಮ್ಮೆ ಈ ಸಮಯವನ್ನು ಬರೆದು ಹಿಂದಿನ ಸಮಯಕ್ಕಿಂತ ಈಗಿನ ವ್ಯತ್ಯಾಸವನ್ನು ಮನದಟ್ಟು ಮಾಡಿ. ಸಾಧ್ಯವಾದರೆ ಈ ಸಾಧನೆಗೆ ಚಾಕಲೇಟು ಅಥವಾ ಸಿಹಿಯ ಬಹುಮಾನವನ್ನೂ ನೀಡಬಹುದು. ನಂತರದ ಹಂತಗಳಲ್ಲಿ ಒಮ್ಮೆ ಹೇಳಿದ ಪದಗಳ ಬದಲಿಗೆ ಹೊಸ ಪದಗಳನ್ನು ಉಪಯೋಗಿಸಿ ಹಂತವನ್ನು ಕೊಂಚಕೊಂಚವಾಗಿ ಕ್ಲಿಷ್ಟವಾಗಿಸುತ್ತಾ ಬನ್ನಿ. ನಿಧಾನವಾಗಿ ಮಗು ಹೆಚ್ಚಿನ ಪದಗಳಲ್ಲಿ ಪದಬರಿಗೆಯ ಸಾಮರ್ಥ್ಯ ಪಡೆಯುತ್ತದೆ.

ಮಗುವಿನ ಪ್ರಗತಿಯನ್ನು ದಾಖಲಿಸಿ
ಯಾವುದೇ ಮಗುವಿಗೆ ತನ್ನ ಸಾಧನೆಯಲ್ಲಿ ಏರಿಕೆ ಇಷ್ಟವಾಗುತ್ತದೆ. ಆದರೆ ಹಿಂದಿನ ಸಾಧನೆಯನ್ನು ತಿಳಿಸದೇ ಇಂದು ಸಾಧಿಸಿದ ಸಾಧನೆಯ ಬಗ್ಗೆ ವ್ಯತ್ಯಾಸ ತಿಳಿಯದಿರುವುದರಿಂದ ಮುಂದಿನ ಹಂತಗಳಲ್ಲಿ ಹೆಚ್ಚು ಒಲವು ತೋರದಿರುವುದು ಕಂಡುಬಂದಿದೆ. ಅದಕ್ಕಾಗಿ ಯಾವುದೇ ಚಟುವಟಿಕೆ ಇದ್ದರೂ ಅದನ್ನು ನಿಮಗೆ ಅನುಕೂಲವೆನಿಸಿದ ಮಾಧ್ಯಮದಲ್ಲಿ ದಾಖಲಿಸಿ. ಕಾಗದದ ಮೇಲೆ, ಕಂಪ್ಯೂಟರ್ ಉಪಯೋಗಿಸಿ ಪೈ ಚಾರ್ಟ್, ಬಾರ್ ಗ್ರಾಫ್ ಮೊದಲಾದವುಗಳನ್ನು ಸಹಾ ಬಳಸಬಹುದು.

ಇದರಿಂದ ಮಗುವಿಗೆ ತನ್ನ ಕಲಿಕೆಯ ಮೇಲೆ ನಂಬಿಕೆ ಹುಟ್ಟುತ್ತದೆ ಹಾಗೂ ಇದನ್ನು ನಾನು ಸಾಧಿಸಬಲ್ಲೆನಾದರೆ ಮುಂದಿನದನ್ನೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಪಡೆಯುತ್ತದೆ. ಉದಾಹರಣೆಗೆ ಪ್ರತಿದಿನ ಹತ್ತು ಪದಗಳ ಉಕ್ತಲೇಖನದಲ್ಲಿ ಎಷ್ಟು ಸರಿ ಎಷ್ಟು ತಪ್ಪು ಎಂಬುವುದನ್ನು ದಾಖಲಿಸಿದರೆ ಹತ್ತು ದಿನಗಳ ಬಳಿಕ ಮಗು ಸಾಧಿಸಿದ ಬಗ್ಗೆ ಒಂದು ರೇಖಾಚಿತ್ರದ ಮೂಲಕ ತಿಳಿಸಿದರೆ ಈ ಏರಿಕೆಯನ್ನು ಮಗು ಗಮನಿಸುತ್ತದೆ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಪೆನ್ನು ಪೆನ್ಸಿಲ್ಲುಗಳ ಜೊತೆ ಇತರ ವಸ್ತುಗಳಿಂಗಲೂ ಅಕ್ಷರ ಮೂಡಿಸುವ ಕ್ರಿಯಾತ್ಮಕತೆ ಪದಗಳನ್ನು ಮೂಡಿಸುವಲ್ಲಿ ಪ್ರತಿಬಾರಿ ಕೇವಲ ಪೆನ್ನು ಪೆನ್ಸಿಲ್ ಬಳಸಿದಾಗ ಒಂದು ರೀತಿಯ ಏಕತಾನತೆ ಮೂಡಿದಂತಾಗಿ ಮಗು ಬೇಸರಿಸುತ್ತದೆ. ಬದಲಿಗೆ ಪದಗಳನ್ನು ಅದರ ಆಟದ ವಸ್ತುಗಳಿಂದಲೂ ಮೂಡಿಸಬಹುದು ಎಂದು ತೋರಿಸಿ ಕೊಡಿ. ಉದಾಹರಣೆಗೆ ಕ್ರೇಯಾನ್, ಜೇಡಿ, ಶೇವಿಂಗ್ ಕ್ರೀಂ ನ ನೊರೆ ಮೊದಲಾದವು. ಒಂದರ ಮೇಲೆ ಒಂದು ಕುಳಿತುಕೊಳ್ಳುವ ಲೇಗೋ ಎಂಬ ಪ್ಲಾಸ್ಟಿಕ್ಕಿನ ಆಯತಾಕಾರದ ಫಲಕಗಳನ್ನೂ ಅಕ್ಷರಗಳಂತೆ ಜೋಡಿಸಲು ಪ್ರೇರಣೆ ನೀಡಿ. ಸುಲಭವಾಗಿ ತೊಳೆಯಲು ಅಸಾಧ್ಯವಾದ ಪೇಂಟ್ ಮೊದಲಾದ ಬಣ್ಣಗಳ ಬಳಕೆ ಬೇಡ. ಈ ಆಟವನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.

English summary

Teaching Your Kid How To Spell: Tips

Teaching kid how to spell is a difficult, but important task. You need to consider different methods when teaching spellings to kids. There is a very traditional method, where you can make them write the word 4-5 times or make them use the word many times in a sentence. 
Story first published: Saturday, November 8, 2014, 16:00 [IST]
X
Desktop Bottom Promotion