For Quick Alerts
ALLOW NOTIFICATIONS  
For Daily Alerts

ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ವಾರ್ಷಿಕೋತ್ಸವ: ಜೀವನ ಇತಿಹಾಸ, ಸಂಗತಿಗಳು ಮತ್ತು ಸಾಧನೆಗಳು

|

ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವತಂತ್ರ ಭಾರತದ ಎರಡನೆಯ ಪ್ರಧಾನಮಂತ್ರಿಗಳಾಗಿದ್ದವರು. ದೇಶದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಹಠಾತ್ ನಿಧನದ ಬಳಿಕ ಲಾಲ್ ಬಹದ್ದೂರ್ ಅವರು ಪ್ರಮಾಣವಚನ ಸ್ವೀಕರಿಸಿದರು. ಇತರರಿಗೆ ಹೋಲಿಸಿದರೆ, ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಹೊಸಬರಾಗಿದ್ದರೂ ಸಹ, 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಯುದ್ಧದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಶಾಸ್ತ್ರಿಯವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಒಂದು ಸದೃಢ ರಾಷ್ಟ್ರ ನಿರ್ಮಾಣದ ದಿಶೆಯಲ್ಲಿ, ಸ್ವಪೋಷಣೆ ಮತ್ತು ಸ್ವಾವಲಂಬನೆಗಳನ್ನು ಆಧಾರಸ್ತಂಭಗಳೆಂದು ಭಾವಿಸುವ ಅವಶ್ಯಕತೆಯನ್ನು ಮನಗಂಡು ಶಾಸ್ತ್ರಿಯವರು "ಜೈ ಜವಾನ್ ಜೈ ಕಿಸಾನ್"ಎಂಬ ಘೋಷವಾಕ್ಯವನ್ನು ಜನಪ್ರಿಯಗೊಳಿಸಿದರು. ತೆಳ್ಳಗಿನ ವಾಮನಾಕೃತಿಯ ಶರೀರವನ್ನೂ ಮತ್ತು ಮೃದುಮಾತಿನ ಶೈಲಿಯನ್ನೂ ಮೀರಿ ಶಾಸ್ತ್ರಿಗಳು ಅಮೋಘ ಕರ್ತೃತ್ವ ಶಕ್ತಿಯ ವ್ಯಕ್ತಿತ್ವವುಳ್ಳವಾಗಿದ್ದರು. ಪೊಳ್ಳು ಭರವಸೆಗಳನ್ನೊಳಗೊಂಡ, ಚೆನ್ನಾಗಿ ಅಭ್ಯಸಿಸಿ ಮಾಡಿದ ಭಾಷಣಗಳ ರೂಪದಲ್ಲಿ ತನ್ನನ್ನು ನೆನಪಿನಲ್ಲಿರಿಸಿಕೊಳ್ಳುವುದಕ್ಕಿಂತಲೂ ತನ್ನ ಕೆಲಸದ ಮೂಲಕವೇ ತನ್ನನ್ನು ಸ್ಮರಿಸಿಕೊಳ್ಳಬೇಕೆಂದು ಬಯಸಿದ್ದವರು ಅವರಾಗಿದ್ದರು.

ಇಂದು ಪಂಡಿತ್ ಲಾಲ್ ಬಹದ್ದೂರ್ ಶಾಸ್ತ್ರಿಯವರ 116ನೇ ಜನ್ಮದಿನ. ಈ ಹಿನ್ನೆಲೆ ಶಾಸ್ತ್ರಿ ಅವರ ಕುರಿತು ವೈಯಕ್ತಿಕ, ರಾಜಕೀಯ ಹಾಗೂ ಕೆಲವು ಸತ್ಯಸಂಗತಿಗಳನ್ನು ತಿಳಿಯೋಣ.

ಬಾಲ್ಯಜೀವನ ಮತ್ತು ಶಿಕ್ಷಣ

ಬಾಲ್ಯಜೀವನ ಮತ್ತು ಶಿಕ್ಷಣ

ಲಾಲ್ ಬಹದ್ದೂರ್ ಶಾಸ್ತ್ರಿಯವರು ಅಕ್ಟೋಬರ್ 2, 1904 ರಂದು ರಾಮ್ದುಲಾರಿ ದೇವಿ ಮತ್ತು ಶಾರದಾ ಪ್ರಸಾದ್ ಶ್ರೀವಾಸ್ತವ ಅವರಿಗೆ ಮುಘಲ್ ಸರಾಯಿ (ಇಂದಿನ ಉತ್ತರಪ್ರದೇಶ) ಯಲ್ಲಿ ಜನಿಸಿದರು. ಶಾಸ್ತ್ರಿಯವರು ತಮ್ಮ ಜನ್ಮದಿನವನ್ನು ರಾಷ್ಟ್ರಪಿತ ಮಹಾತ್ಮಾಗಾಂಧಿಯವರೊಂದಿಗೆ ಹಂಚಿಕೊಂಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ವ್ಯಾಪಕವಾಗಿ ಪ್ರಚಲಿತದಲ್ಲಿದ್ದ ಜಾತಿ ವ್ಯವಸ್ಥೆಯ ವಿರೋಧಿಯಾಗಿದ್ದುದರಿಂದ, ತನ್ನ ಉಪನಾಮ "ಶಾಸ್ತ್ರಿ" ಯನ್ನು ಕೈಬಿಡಲು ನಿರ್ಧರಿಸಿದ್ದರು. ಇಸವಿ 1925 ರಲ್ಲಿ ವಾರಣಾಸಿಯ ಕಾಶಿ ವಿದ್ಯಾಪೀಠದಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಬಳಿಕ ಅವರಿಗೆ "ಶಾಸ್ತ್ರಿ" ಎಂಬ ಬಿರುದನ್ನು ನೀಡಲಾಯಿತು. "ಹಿಂದೂ ಪುರಾಣಶಾಸ್ತ್ರ" ಗಳ ಪ್ರಕಾರ "ಶಾಸ್ತ್ರಿ" ಎಂಬ ಶಬ್ದದ ಅರ್ಥವು "ವಿದ್ವಾಂಸ" ಎಂದಾಗಿರುತ್ತದೆ.

ಶಾಸ್ತ್ರಿಯವರು ಕೇವಲ ಎರಡು ವರ್ಷದ ಮಗುವಾಗಿದ್ದಾಗಲೇ, ವೃತ್ತಿಯಲ್ಲಿ ಶಾಲಾ ಮಾಸ್ತರರಾಗಿದ್ದ ಶಾಸ್ತ್ರಿಯವರ ತಂದೆ ಶಾರದಾ ಪ್ರಸಾದ್ ಅವರು ಇಹಲೋಕವನ್ನು ತ್ಯಜಿಸಿದ್ದರು. ಅವರ ತಾಯಿ ರಾಮ್ದುಲಾರಿ ದೇವಿಯವರು ಶಾಸ್ತ್ರಿಯವರೊಂದಿಗೆ ಅವರ ಇಬ್ಬರು ಸಹೋದರಿಯರನ್ನೂ ಜೊತೆಗೂಡಿಸಿಕೊಂಡು ತನ್ನ ತಾಯಿಯ ತಂದೆ ಹಜಾರಿ ಲಾಲ್ ಅವರ ಮನೆ ಸೇರಿಕೊಂಡರು. ಲಾಲ್ ಬಹದ್ದೂರ್ ಅವರು ಎಳವೆಯಲ್ಲಿಯೇ ಧೈರ್ಯ, ಸಾಹಸಪ್ರೇಮ, ತಾಳ್ಮೆ, ಸ್ವನಿಯಂತ್ರಣ, ಸೌಜನ್ಯ, ಮತ್ತು ನಿಸ್ವಾರ್ಥದಂತಹ ಸದ್ಗುಣಗಳನ್ನು ಮೈಗೂಡಿಸಿಕೊಂಡಿದ್ದರು.

ಮಿರ್ಜಾಪುರ್ ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಬಳಿಕ, ಅವರು ವಾರಣಾಸಿಗೆ ಕಳುಹಿಸಲ್ಪಟ್ಟು ಅಲ್ಲಿ ಅವರು ತಮ್ಮ ಸೋದರಮಾವನ ಮನೆಯಲ್ಲಿ ಉಳಿದುಕೊಂಡಿದ್ದರು. ಇಸವಿ 1928 ರಲ್ಲಿ, ಶಾಸ್ತ್ರಿಗಳು ಗಣೇಶ್ ಪ್ರಸಾದ್ ಅವರ ಕಿರಿಯ ಪುತ್ರಿ ಲಲಿತಾದೇವಿ ಅವರನ್ನು ವಿವಾಹವಾದರು. ಆಗ ಪ್ರಚಲಿತದಲ್ಲಿದ್ದ ವರದಕ್ಷಿಣೆ ಪದ್ಧತಿಗೆ ಶಾಸ್ತ್ರಿಗಳು ವಿರೋಧಿಯಾಗಿದ್ದುದರಿಂದ ಅವರು ವರದಕ್ಷಿಣೆಯನ್ನು ಪಡೆಯಲು ನಿರಾಕರಿಸಿದರು. ಆದಾಗ್ಯೂ, ಅವರ ಮಾವನು ಪದೇ ಪದೇ ಒತ್ತಾಯಿಸಿದ್ದರಿಂದಾಗಿ, ಶಾಸ್ತ್ರಿಗಳು ವರದಕ್ಷಿಣೆಯ ರೂಪದಲ್ಲಿ ಕೇವಲ ಐದು ಗಜಗಳಷ್ಟು ಖಾದಿಬಟ್ಟೆಯನ್ನು (ಕೈಯಲ್ಲಿ ನೇಯಲಾದ ಹತ್ತಿಬಟ್ಟೆ) ಖಾದಿಯನ್ನು ಸ್ವೀಕರಿಸಲು ಒಪ್ಪಿಕೊಂಡರು. ಈ ದಂಪತಿಗಳಿಗೆ 6 ಮಕ್ಕಳಿದ್ದರು.

ರಾಜಕೀಯ ಜೀವನ

ರಾಜಕೀಯ ಜೀವನ

ಸ್ವಾತಂತ್ರ್ಯ-ಪೂರ್ವ ಚಟುವಟಿಕೆಗಳು

ರಾಷ್ಟ್ರ ನಾಯಕರುಗಳ ಕಥೆಗಳು ಮತ್ತು ಭಾಷಣಗಳಿಂದ ಸ್ಪೂರ್ತಿ ಪಡೆದ ಯುವ ಶಾಸ್ತ್ರೀಜಿಯವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವ ಉತ್ಸಾಹವನ್ನು ಬೆಳೆಸಿಕೊಂಡರು. ಮಾರ್ಕ್ಸ್, ರಸ್ಸೆಲ್ ಮತ್ತು ಲೆನಿನ್ ಅವರಂತಹ ವಿದೇಶೀ ಲೇಖಕರ ಕೃತಿಗಳನ್ನೋದುತ್ತಾ ಸಮಯ ಕಳೆಯುತ್ತಿದ್ದರು. 1915 ರಲ್ಲಿ, ತಾನು ಆಲಿಸಿದ ಮಹಾತ್ಮಾ ಗಾಂಧಿಯವರ ಭಾಷಣವೊಂದು ಶಾಸ್ತ್ರೀಜಿಯವರ ಜೀವನದ ಗತಿಯನ್ನೇ ಬದಲಾಯಿಸಿತು ಮತ್ತು ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಂಕಲ್ಪ ತೊಟ್ಟರು.

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಕ್ಕಾಗಿ ಶಾಸ್ತ್ರೀಜಿಯವರು ತಮ್ಮ ಶಿಕ್ಷಣದೊಂದಿಗೂ ರಾಜಿ ಮಾಡಿಕೊಂಡರು. 1921 ರ ಅಸಹಕಾರ ಚಳವಳಿಯ ಅವಧಿಯಲ್ಲಿ ನಿಷೇಧಾಜ್ಞೆಯ ವಿರುದ್ಧ ಧಿಕ್ಕಾರವನ್ನು ಪ್ರದರ್ಶಿಸುತ್ತಿದ್ದಾಗ ಶಾಸ್ತ್ರೀಜಿಯವರು ಬಂಧನಕ್ಕೊಳಗಾದರು. ಆದರೆ ಆಗ ಅವರು ಅಪ್ರಾಪ್ತ ವಯಸ್ಕರಾಗಿದ್ದುದರಿಂದ ಅಧಿಕಾರಿಗಳು ಅವರನ್ನು ಬಿಡುಗಡೆಗೊಳಿಸಬೇಕಾಯಿತು. 1930 ರಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿಗಳು ಕಾಂಗ್ರೆಸ್ ಪಕ್ಷದ ಸ್ಥಳೀಯ ಘಟಕದ ಕಾರ್ಯದರ್ಶಿಗಳಾದರು ಹಾಗೂ ಬಳಿಕ ಅಲಹಾಬಾದ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆದರು. ಗಾಂಧೀಜಿಯವರ 'ಉಪ್ಪಿನ ಸತ್ಯಾಗ್ರಹ' ದ ಅವಧಿಯಲ್ಲಿ ಶಾಸ್ತ್ರೀಜಿಯವರು ಬಹು ಮಹತ್ವದ ಭೂಮಿಕೆಯನ್ನು ನಿಭಾಯಿಸಿದ್ದರು. ಭೂಕಂದಾಯ ಮತ್ತು ತೆರಿಗೆಗಳನ್ನು ಬ್ರಿಟೀಷರಿಗೆ ಪಾವತಿಸದಂತೆ ಜನರನ್ನು ಆಗ್ರಹಿಸುತ್ತಾ ಶಾಸ್ತ್ರೀಜಿಯವರು ಮನೆ ಮನೆಗೆ ತೆರಳಿ ಪ್ರಚಾರಾಂದೋಲನವನ್ನು ನಡೆಸಿದರು. 1942 ರಲ್ಲಿ ಬ್ರಿಟೀಷ್ ಸರಕಾರದಿಂದ ಜೈಲಿಗಟ್ಟಲ್ಪಟ್ಟಿದ್ದ ಪ್ರಮುಖ ಕಾಂಗ್ರೆಸ್ ನಾಯಕರುಗಳ ಪೈಕಿ ಶಾಸ್ತ್ರಿಗಳೂ ಓರ್ವರು. ಬಂಧನದ ಸುದೀರ್ಘಾವಧಿಯಲ್ಲಿ ಶಾಸ್ತ್ರಿಗಳು ಸಮಾಜ ಸುಧಾರಕರ ಮತ್ತು ಪಾಶ್ಚಾತ್ಯ ತತ್ವಜ್ಞಾನಿಗಳ ಕೃತಿಗಳನ್ನು ಓದುತ್ತಾ ಕಾಲ ಕಳೆದರು. ಇಸವಿ 1937 ರಲ್ಲಿ, ಶಾಸ್ತ್ರಿಗಳು ಉತ್ತರಪ್ರದೇಶದ ಶಾಸಕಾಂಗದ ಸಭೆಗೆ ಆಯ್ಕೆಯಾದರು.

ಸ್ವಾತಂತ್ರ್ಯದ ಬಳಿಕ

ಸ್ವಾತಂತ್ರ್ಯದ ಬಳಿಕ

ಭಾರತದ ಪ್ರಧಾನ ಮಂತ್ರಿಯಾಗುವುದಕ್ಕೂ ಮುನ್ನ, ಶಾಸ್ತ್ರಿಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯದ ಬಳಿಕ, ಉತ್ತರಪ್ರದೇಶದಲ್ಲಿ, ಗೋವಿಂದ್ ವಲ್ಲಭ್ ಪಂತ್ ಅವರ ಸರಕಾರದಲ್ಲಿ ಶಾಸ್ತ್ರಿಗಳು ಆರಕ್ಷಕ ಸಚಿವರಾಗಿದ್ದರು. ಗಲಭೆಕೋರರ ಗುಂಪನ್ನು ಚದುರಿಸಲು ಲಾಠಿಗಳ ಬದಲು "ವಾಟರ್-ಜೆಟ್" ಗಳನ್ನು ಬಳಸುವಂತಹ ಅನೇಕ ಸಲಹೆಗಳನ್ನು ಶಾಸ್ತ್ರಿಗಳು ಮಾಡಿದ್ದರು. ರಾಜ್ಯದ ಆರಕ್ಷಕ ಇಲಾಖೆಯ ಸುಧಾರಣೆಯ ವಿಚಾರದಲ್ಲಿ ಶಾಸ್ತ್ರಿಗಳ ಪ್ರಯತ್ನಗಳನ್ನು ಮೆಚ್ಚಿದ ಜವಹರಲಾಲ್ ನೆಹರೂ ಅವರು, ರೈಲ್ವೆ ಸಚಿವರಾಗಿ ಕೇಂದ್ರ ಸಚಿವ ಸಂಪುಟವನ್ನು ಸೇರಿಕೊಳ್ಳುವಂತೆ ಶಾಸ್ತ್ರಿಗಳನ್ನು ಆಹ್ವಾನಿಸಿದರು. ಶಾಸ್ತ್ರಿಗಳು ತಮ್ಮ ಉನ್ನತ ನಡವಳಿಕೆ ಮತ್ತು ನೈತಿಕ ಜೌನ್ನತ್ಯಕ್ಕಾಗಿ ವ್ಯಾಪಕವಾಗಿ ಖ್ಯಾತಿವೆತ್ತವರಾಗಿದ್ದರು. 1956 ರಲ್ಲಿ, ತಮಿಳುನಾಡಿನಲ್ಲಿ ಅರಿಯಲೂರ್ ನ ಸಮೀಪ ಸರಿಸುಮಾರು 150 ಪ್ರಯಾಣಿಕರನ್ನು ಬಲಿ ಪಡೆದ ಭೀಕರ ರೈಲು ಅಪಘಾತವೊಂದರ ಹೊಣೆಹೊತ್ತು ಶಾಸ್ತ್ರಿಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. "ಅತ್ಯಂತ ಪ್ರಾಮಾಣಿಕತೆಯ ಮತ್ತು ತನ್ನ ಆದರ್ಶಗಳಿಗೆ ಅತ್ಯಂತ ಬದ್ಧನಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿಗಳಿಗಿಂತಲೂ ಉತ್ತಮ ಜೊತೆಗಾರರನ್ನು ಯಾರೂ ಬಯಸಲಾರರು" ಎಂದು ನೆಹರೂ ಅವರು ಒಮ್ಮೆ ಹೇಳಿದ್ದರು.

1957 ರಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಮೊದಲು ಸಾರಿಗೆ ಮತ್ತು ಸಂಪರ್ಕಗಳ ಸಚಿವ ಹಾಗೂ ಬಳಿಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸಂಪುಟಕ್ಕೆ ಮರಳಿದರು. 1961 ರಲ್ಲಿ, ಅವರು ಗೃಹಮಂತ್ರಿಗಳಾದರು ಮತ್ತು ಬಳಿಕ ಕೆ. ಶಾಂತಾರಾಂ ಅವರ ನೇತೃತ್ವದಲ್ಲಿ "ಭ್ರಷ್ಟಾಚಾರ ತಡೆಯ ಸಮಿತಿ" ಯನ್ನು ರಚಿಸಿದರು.

ಭಾರತದ ಪ್ರಧಾನ ಮಂತ್ರಿಯಾಗಿ

ಭಾರತದ ಪ್ರಧಾನ ಮಂತ್ರಿಯಾಗಿ

ಜೂನ್ 9, 1964 ರಂದು, ಮಾತು-ನಡೆವಳಿಕೆಗಳಲ್ಲಿ ಹಿತಮಿತವಾಗಿದ್ದ ಹಾಗೂ ಮೃದುಭಾಷಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ನೆಹರೂ ಅವರ ಉತ್ತರಾಧಿಕಾರಿಯಾದರು. ನೆಹರೂ ಅವರ ನಿಧನದ ಬಳಿಕ, ಕಾಂಗ್ರೆಸ್ ಪಕ್ಷದೊಳಗೆ ಇನ್ನಷ್ಟು ಪ್ರಭಾವಿ ನಾಯಕರುಗಳಿದ್ದಾಗ್ಯೂ, ಶಾಸ್ತ್ರೀಜಿಯವರು ಪ್ರಧಾನ ಮಂತ್ರಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಶಾಸ್ತ್ರಿಯವರು ನೆಹರೂ ಸಮಾಜವಾದದ ಅನುಯಾಯಿಯೇ ಆಗಿದ್ದರು ಮತ್ತು ಸಂಧಿಗ್ಧ ಪರಿಸ್ಥಿತಿಗಳಲ್ಲಿ ಅಮೋಘವೆನಿಸುವಂತಹ ಮನೋಸ್ಥೈರ್ಯವನ್ನು ಪ್ರದರ್ಶಿಸಿದ್ದರು.

ಶಾಸ್ತ್ರಿಗಳು ಆಹಾರದ ಅಭಾವ, ನಿರುದ್ಯೋಗ ಮತ್ತು ಬಡತನಗಳಂತಹ ಅನೇಕ ಪ್ರಾಥಮಿಕ ಸಮಸ್ಯೆಗಳನ್ನು ನಿವಾರಿಸಿದರು. ಆಹಾರದ ತೀಕ್ಷ್ಣ ಅಭಾವವನ್ನು ಹೋಗಲಾಡಿಸುವುದಕ್ಕಾಗಿ ಶಾಸ್ತ್ರಿಗಳು ಒಂದು ದೀರ್ಘಕಾಲೀನ ಕಾರ್ಯತಂತ್ರವನ್ನು ವಿನ್ಯಾಸಗೊಳಿಸುವಂತೆ ತಜ್ಞರನ್ನು ಕೇಳಿಕೊಂಡರು. ಇದು ಸುಪ್ರಸಿದ್ಧ "ಹಸಿರು ಕ್ರಾಂತಿ" ಗೆ ನಾಂದಿಯಾಯಿತು. ಹಸಿರು ಕ್ರಾಂತಿಯನ್ನೂ ಹೊರತುಪಡಿಸಿ, "ಕ್ಷೀರಕ್ರಾಂತಿ" ಯನ್ನು ಉತ್ತೇಜಿಸುವುದರಲ್ಲಿಯೂ ಶಾಸ್ತ್ರೀಜಿಯವರ ಪಾತ್ರವು ನಿರ್ಣಾಯಕವಾಗಿದ್ದಿತು. 1965 ರಲ್ಲಿ, ಶಾಸ್ತ್ರಿಗಳು ಪ್ರಧಾನಿಯಾಗಿದ್ದಾಗ, ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯು ರೂಪಿಸಲ್ಪಟ್ಟಿತು.

1962 ರಲ್ಲಿ ಚೀನಾ ದೇಶದ ದುರಾಕ್ರಮಣದ ಬಳಿಕ ಇಸವಿ 1965 ರಲ್ಲಿ, ಶಾಸ್ತ್ರಿಯವರ ಅಧಿಕಾರಾವಧಿಯಲ್ಲಿ ಮತ್ತೊಂದು ದುರಾಕ್ರಮಣವನ್ನು ಭಾರತವು ಪಾಕಿಸ್ತಾನದಿಂದ ಎದುರಿಸಬೇಕಾಯಿತು. ತನ್ನ ಮುತ್ಸದ್ಧಿತನವನ್ನು ತೋರುವ ದಿಶೆಯಲ್ಲಿ, ಭಾರತವು ಸುಮ್ಮನೇ ನೋಡುತ್ತಾ ಕೂರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಶಾಸ್ತ್ರಿಗಳು ಪಾಕಿಸ್ತಾನಕ್ಕೆ ತೋರಿಸಿಕೊಟ್ಟರು. ಪ್ರತೀಕಾರವನ್ನು ಕೈಗೊಳ್ಳುವುದಕ್ಕಾಗಿ ಸಶಸ್ತ್ರಪಡೆಗಳಿಗೆ ಸ್ವಾತಂತ್ರ್ಯವನ್ನು ಕೊಡುವಾಗ, "ಬಲಪ್ರಯೋಗವನ್ನು ಬಲಪ್ರಯೋಗದಿಂದಲೇ ಹತ್ತಿಕ್ಕಲಾಗುವುದು" ಎಂದು ಹೇಳಿದರು. ವಿಶ್ವಸಂಸ್ಥೆಯು ಕದನವಿರಾಮವನ್ನು ಕೋರಿ ನಿರ್ಣಯವನ್ನು ಕೈಗೊಂಡ ಬಳಿಕ, ಭಾರತ-ಪಾಕಿಸ್ತಾನ ಯುದ್ಧವು ಸೆಪ್ಟೆಂಬರ್ 23, 1965 ರಂದು ಕೊನೆಗೊಂಡಿತು. ರಷ್ಯಾದ ಪ್ರಧಾನ ಮಂತ್ರಿ ಕೊಸಿಗಿನ್ ಅವರಿಗೆ ಮಧ್ಯಸ್ಥಿಕೆ ವಹಿಸಲಾಯಿತು ಮತ್ತು ಜನವರಿ 10, 1966 ರಂದು, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಅವರ ಪಾಕಿಸ್ತಾನೀ ಎದುರಾಳಿ ಅಯೂಬ್ ಖಾನ್ ಅವರು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು.

ಶಾಸ್ತ್ರಿಯವರ ಮರಣ

ಶಾಸ್ತ್ರಿಯವರ ಮರಣ

ಹಿಂದೆ ಎರಡು ಹೃದಯಾಘಾತಗಳಿಂದ ನರಳಿದ್ದ ಶಾಸ್ತ್ರಿಯವರು ಜನವರಿ 11, 1966 ರಂದು ಮೂರನೆಯ ಬಾರಿಯ ಹೃದಯ ಸ್ತಂಭನದಿಂದ ಸಾವಿಗೀಡಾದರು. ವಿದೇಶೀ ನೆಲದಲ್ಲಿ ನಿಧನರಾದ ಏಕೈಕ ಭಾರತೀಯ ಪ್ರಧಾನ ಮಂತ್ರಿಗಳು ಲಾಲ್ ಬಹದ್ದೂರ್ ಶಾಸ್ತ್ರಿಯವರು. 1966ರಲ್ಲಿ ಶಾಸ್ತ್ರೀಜಿಯವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಶಾಸ್ತ್ರಿಯವರ ನಿಗೂಢ ಅಂತ್ಯದ ಸುತ್ತ

ಶಾಸ್ತ್ರಿಯವರ ನಿಗೂಢ ಅಂತ್ಯದ ಸುತ್ತ

ಪಾಕಿಸ್ತಾನದೊಂದಿಗೆ ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಿದ ಕೂಡಲೇ ಶಾಸ್ತ್ರಿಯವರ ಧಿಡೀರ್ ನಿಧನವು ಅನೇಕ ಗುಮಾನಿಗಳನ್ನೆಬ್ಬಿಸಿತು. ಶಾಸ್ತ್ರಿಯವರಿಗೆ ವಿಷಪ್ರಾಶನ ಮಾಡಲಾಗಿತ್ತು ಎಂದು ಶಾಸ್ತ್ರಿಯವರ ಪತ್ನಿ ಲಲಿತಾದೇವಿಯವರು ಆಪಾದಿಸಿದರು ಹಾಗೂ ಪ್ರಧಾನಿ ಶಾಸ್ತ್ರಿಯವರ ಸೇವೆಯಲ್ಲಿದ್ದ ರಷ್ಯಾದ ಅಡುಗೆಯವನನ್ನು ಬಂಧಿಸಲಾಯಿತು. ಆದರೆ, ತರುವಾಯ ಶಾಸ್ತ್ರಿಗಳು ಹೃದಯಸ್ತಂಭನದಿಂದಲೇ ನಿಧನರಾದರೆಂದು ವೈದ್ಯರುಗಳು ಪ್ರಮಾಣೀಕರಿಸಿದ ಬಳಿಕ ಆತನನ್ನು ಬಿಡುಗಡೆಗೊಳಿಸಲಾಯಿತು. ಶಾಸ್ತ್ರಿಯವರ ಮರಣದ ವಿಚಾರದಲ್ಲಿ ಸಿ.ಐ.ಎ. ಯ ಶಂಕಿತ ಕೈವಾಡವಿರುವ ಸುಳಿವು ನೀಡುವ ಒಳಸಂಚೊಂದನ್ನು ಮಾಧ್ಯಮಗಳು ಹಬ್ಬಿಸಿದವು. ಅಮೆರಿಕದೊಂದಿಗಿನ ವಿದೇಶಾಂಗ ಸಂಬಂಧವು ಹಾಳಾಗುವ ಸಾಧ್ಯತೆಯ ನೆಪವೊಡ್ಡಿ ಲೇಖಕ ಅನುಜ್ ಧರ್ ಅವರಿಂದ ಪೋಸ್ಟ್ ಮಾಡಲ್ಪಟ್ಟಿದ್ದ ಆರ್.ಟಿ.ಐ. ವಿಚಾರಣೆಯನ್ನು ಪ್ರಧಾನಮಂತ್ರಿ ಕಚೇರಿ ತಳ್ಳಿಹಾಕಿತ್ತು.

English summary

Lal Bahadur Shastri Birth Anniversary: Life History, Facts and Achivements

Lal Bahadur Shastri was the second Prime Minister of independent India. He took oath after the sudden demise of Jawaharlal Nehru, the first Prime Minister. Relatively new to the high office, he led the country successfully through Indo-Pakistan War in 1965. He popularized the slogan ‘Jai Jawan Jai Kisan’, recognizing the need for self-sustenance and self-reliance as the pillars to build a strong nation. He was a man of exceptional will power that was belied by his small frail stature and soft-spoken manner. He wished to be remembered by his work rather than well-rehearsed speeches proclaiming lofty promises
Story first published: Wednesday, October 2, 2019, 8:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more