For Quick Alerts
ALLOW NOTIFICATIONS  
For Daily Alerts

ಸೋಲು ಮತ್ತು ಗೆಲುವು: ನೀವು ತಿಳಿಯಲೇಬೇಕಾದ ಸಂಗತಿಗಳು

|

ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದರ ಹಿಂದೆ ಒಂದು ಸದಾ ಹಿಂಬಾಲಿಸುತ್ತಲೇ ಇರುತ್ತದೆ . ಕೆಲವು ದಿನ , ತಿಂಗಳು ಅಥವಾ ವರ್ಷಗಳ ಕಾಲ ಸೋಲನ್ನುಂಡ ಮನುಷ್ಯ ಹಲವು ವರ್ಷಗಳ ಕಾಲ ತನ್ನ ಜೀವನದಲ್ಲಿ ಗೆಲುವನ್ನೇ ಕಾಣುತ್ತಾ ಹೋಗುತ್ತಾನೆ . ಆದರೆ ಎರಡೂ ಸಮಯದಲ್ಲೂ ಹಿಗ್ಗದೇ ಕುಗ್ಗದೆ ಸಮಾನ ಅಂತರದಿಂದ ಬದುಕನ್ನು ಕಟ್ಟಿಕೊಳ್ಳುವ ಆಲೋಚನೆ ಮಾಡಬೇಕು . ಎಲ್ಲರೂ ಅಷ್ಟೇ ಬದುಕಿನಲ್ಲಿ ನನಗೆ ಬರೀ ಯಶಸ್ವಿ ದಿನಗಳನ್ನು ಮಾತ್ರ ಕೊಡು ದೇವರೇ ಎಂದು ಭಗವಂತನ ಬಳಿ ಪ್ರಾರ್ಥಿಸುತ್ತಾರೆ . ಆದರೆ ಯಾವಾಗಲೂ ಸುಖದ ಸುಪ್ಪತ್ತಿಗೆಯಲ್ಲೇ ತೇಲಾಡಿದರೆ ಕಷ್ಟದ ಮಹತ್ವ ಗೊತ್ತಾಗುವುದಾದರೂ ಹೇಗೆ ? ಎಲ್ಲರೂ ಅಷ್ಟೇ , ಕಷ್ಟ ಬಂದರೆ ಹೆದರಿಕೊಂಡು ಓಡುತ್ತಾರೆ .

ಇಲ್ಲವೇ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ . ಅದೇ ಸುಖ ಬಂದರೆ ಅದನ್ನು ಪ್ರೀತಿ ಆದರದಿಂದ ಸ್ವಾಗತಿಸುತ್ತಾರೆ ಮತ್ತು ತಾವು ಬಂದ ದಾರಿಯನ್ನೇ ಮರೆತು ಸಂಬಂಧಗಳನ್ನು ಲೆಕ್ಕಿಸದೆ ತಮಗೆ ಯಾರಿಂದ ಏನು ಎಂಬ ಮನಸ್ಥಿತಿಗೆ ಬಂದು ತಮಗಿಷ್ಟ ಬಂದಂತೆ ಜೀವನ ನಡೆಸಲು ಶುರು ಮಾಡುತ್ತಾರೆ . ಅದಕ್ಕೆ ದೇವರು ಬಡವ ಶ್ರೀಮಂತ ಎನ್ನದೆ ಎಲ್ಲರ ಬಾಳಿನಲ್ಲೂ ಎರಡೂ ತರನಾದ ಸುಖ ದುಃಖ ಗಳ ಮಿಶ್ರಣದ ಹೂರಣವನ್ನು ತುಂಬಿರುತ್ತಾನೆ . ಕೆಲವರು ಯಾವುದಕ್ಕೂ ಯೋಚಿಸದೆ ಬದುಕಿನಲ್ಲಿ ಬೇಕಾದ ಹಾಗೆ ಬದುಕಿ ಕೊನೆಗೊಂದು ದಿನ ಎಲ್ಲವನ್ನೂ ಕಳೆದುಕೊಂಡು ನಿಜವಾದ ಜೀವನದ ಅರ್ಥ ಕಂಡುಕೊಳ್ಳುತ್ತಾರೆ .ಇನ್ನೂ ಕೆಲವರು ಮೊದಲಿನಿಂದಲೂ ಬುದ್ಧಿವಂತಿಕೆಯಿಂದ ಮತ್ತು ಬಹಳ ಎಚ್ಚರಿಕೆಯಿಂದ ಜೀವನ ನಡೆಸಿ ಅಭಿವೃದ್ಧಿ ಹೊಂದುತ್ತಾ ಹೋಗುತ್ತಾರೆ . ಗೆಲುವು ನಮ್ಮ ಜೀವನದ ಸಂಭ್ರಮವನ್ನು ಆಚರಿಸಲು ನೆರವಾದರೆ ಸೋಲು ನಮಗೆ ಜೀವನದಲ್ಲಿ ಒಳ್ಳೆಯ ಪಾಠ ಕಲಿಸುತ್ತದೆ ಮತ್ತು ನಮ್ಮ ಅನುಭವವನ್ನು ಹೆಚ್ಚು ಮಾಡುತ್ತದೆ . ಹಾಗಾಗಿ ನಾವು ಇನ್ನಷ್ಟು ಬುದ್ಧಿವಂತರಾಗಿ ನಮ್ಮ ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶಕರಾಗುತ್ತೇವೆ.

Success And Failure

*ಏನೇ ಬಂದರೂ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ

ಇದು ಎಲ್ಲರಿಗೂ ಅನ್ವಯಿಸುವ ತತ್ವ . ಏಕೆಂದರೆ ಮೊದಲೇ ಹೇಳಿದಂತೆ ಮನುಷ್ಯ ಕಷ್ಟ ಬಂದರೆ ಕುಗ್ಗುತ್ತಾನೆ . ಸುಖ ಬಂದರೆ ಹಿಗ್ಗುತ್ತಾನೆ . ಆದರೆ ನಾವು ಇಲ್ಲಿ ಒಂದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು . ಕೈ ಕೆಸರಾದರೆ ಬಾಯಿ ಮೊಸರು ಎಂಬ ಹಿರಿಯರ ನಾಣ್ಣುಡಿಯಂತೆ ಬಿಸಿಲಿನಲ್ಲಿ ಬೆವರಿದರೆ ಮಾತ್ರ ತಣ್ಣನೆಯ ಗಾಳಿಯ ಅನುಭವ ಚೆನ್ನಾಗಿ ಆಗುವುದು . ಅದಕ್ಕೆ ಎಂದಿಗೂ ಅಷ್ಟೇ . ಕಷ್ಟ ಎನ್ನುವುದು ಚಲಿಸುವ ಮೋಡಗಳಿದ್ದಂತೆ . ಸ್ವಲ್ಪ ಗಾಳಿ ಬೀಸಿದರೂ ತನಗರಿವಿಲ್ಲದಂತೆ ಮುಂದಕ್ಕೆ ಸಾಗುತ್ತದೆ . ಹಾಗಿದ್ದ ಮೇಲೆ ನಮ್ಮ ಜೀವನ ಎಂಬ ಈ ಕಾಲ ಚಕ್ರದಲ್ಲಿ ಕೆಟ್ಟ ದಿನಗಳು ಉರುಳಿದ ಮೇಲೆ ಒಳ್ಳೆಯ ದಿನ ಬರಲೇ ಬೇಕಲ್ಲವೇ?

Most Read: ಜೀವನದಲ್ಲಿ ಗುರಿ ಸಾಧಿಸಲು ಈ 4 ಅಸ್ತ್ರಗಳು ಸಾಕು!

*ಸತತವಾಗಿ ಸೋಲನ್ನೇ ನೋಡುತ್ತಿದ್ದರೆ , ಗೆಲುವಿಗಾಗಿ ಹೋರಾಡುವುದನ್ನು ಮೊದಲು ರೂಡಿಸಿಕೊಳ್ಳಿ ಮತ್ತು ಅದಕ್ಕಾಗಿ ನಿಮ್ಮ ಜೀವನವನ್ನೇ ತ್ಯಾಗ ಮಾಡಿ

ಕೆಲವು ದಿನ ಅಥವಾ ತಿಂಗಳು ಅಥವಾ ವರ್ಷಗಳ ಸಮಯವೇ ಹಾಗಿರುತ್ತದೆ . ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಾವುದೂ ಕೈ ಗೂಡುವುದಿಲ್ಲ. ಎಲ್ಲವೂ ನಷ್ಟವಾಗುತ್ತಾ ಹೋಗುತ್ತದೆ . ಒಂದರ ಮೇಲೊಂದು ಕಷ್ಟಗಳ ಸರಮಾಲೆಯೇ ಬಂದು ಬಿಡುತ್ತದೆ . ದುಡ್ಡು , ಕಾಸು , ಆಸ್ತಿ , ಪಾಸ್ತಿ , ಮಾನ , ಮರ್ಯಾದೆ ಎಲ್ಲವೂ ಕೈ ತಪ್ಪಿ ಹೋಗುತ್ತದೆ . ಆಗ ಎಲ್ಲರ ತಲೆಯಲ್ಲಿ ಮೊದಲು ಬರುವುದೇ ನಾನೇಕೆ ಬದುಕಬೇಕು ? ಎಂಬ ಯೋಚನೆ . ಆದರೆ ಇಲ್ಲಿಯೇ ನಿಜವಾಗಿಯೂ ನೀವು ಎಡವುವುದು . ಏಕೆಂದರೆ ಅದು ದೇವರು ಇರುವ ಅಷ್ಟೂ ಜನರಲ್ಲಿ ನಿಮ್ಮನ್ನೇ ಆಯ್ದುಕೊಂಡು ಕಷ್ಟಗಳ ಸರಮಾಲೆಯ ಪರೀಕ್ಷೆಯನ್ನೇ ಕೊಟ್ಟು ನೀವು ಇದರಲ್ಲಿ ಬುದ್ಧಿವಂತಿಕೆಯಿಂದ ಜಯಶೀಲರಾಗಲಿ ಎಂದು ಕಾಯುತ್ತಿರುತ್ತಾನೆ . ನೀವು ಆ ಸಮಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸ್ವಲ್ಪ ತಲೆ ಓಡಿಸಿದರೆ ಸಾಕು . ಖಂಡಿತ ನಿಮಗೆ ಬಂದಿರುವ ಕಷ್ಟ ಮಂಜಿನಂತೆ ಕರಗಿ ಹೋಗುತ್ತದೆ ಮತ್ತು ಜೀವನ ನಿಮ್ಮನ್ನು ಮೊದಲಿಗಿಂತ ಚೆನ್ನಾಗಿ ಬದುಕುವಂತೆ ಮಾಡುತ್ತದೆ . ಅದಕ್ಕೆ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ " ನಿಮ್ಮ ತ್ಯಾಗ ದೇವರಿಗೆ ಪ್ರಿಯ . ಆಗ ದೇವರು ನಿಮ್ಮ ಇಷ್ಟಗಳನ್ನು ಪೂರೈಸುತ್ತಾನೆ ಮತ್ತು ನಿಮಗೆ ಒಳ್ಳೆಯ ಜೀವನ ಲಭಿಸುತ್ತದೆ " ಎಂದು ಹೇಳಿದ್ದಾನೆ .

*ಜೀವನದಲ್ಲಿನ ಸೋಲುಗಳು ನಿಮ್ಮನ್ನು ಇನ್ನಷ್ಟು ಜೀವನದ ಸತ್ಯಗಳನ್ನು ತಿಳಿದುಕೊಳ್ಳಲು ಪ್ರೇರೇಪಿಸುತ್ತವೆ

ಅಲೆಕ್ಸಾಂಡರ್ ಗ್ರಹಾಂ ಬೆಲ್ ರವರ ಹೇಳಿಕೆಯಂತೆ ನಮ್ಮ ಜೀವನದಲ್ಲಿ ಒಂದು ಬಾಗಿಲು ಮುಚ್ಚಿಕೊಂಡರೆ ಮತ್ತೊಂದು ನಮಗೇ ಗೊತ್ತಿಲ್ಲದಂತೆ ನಮ್ಮ ಹಿಂದೆಯೇ ತೆರೆದುಕೊಂಡಿರುತ್ತದೆ . ನಾವು ಸ್ವಲ್ಪ ಹಿಂದೆ ತಿರುಗಿ ನೋಡಬೇಕಷ್ಟೆ . ಆದರೆ ನಾವು ಆ ಕ್ಷಣದ ಗಾಬರಿಯಿಂದ ನಮ್ಮ ಜೀವನದಲ್ಲಿ ಮುಚ್ಚಿ ಹೋದ ಬಾಗಿಲನ್ನೇ ನೋಡುತ್ತಾ , ಅದೇ ಮತ್ತೊಮ್ಮೆ ನಮಗಾಗಿ ತೆರೆಯುತ್ತದೆ ಎಂಬ ಆಸೆಯಲ್ಲಿ ಅದೇ ನೆನಪಿನಲ್ಲಿ ಕೊರಗುತ್ತಾ , ಬಾಕಿ ಇರುವ ಅಮೂಲ್ಯವಾದ ಸಮಯವನ್ನು ಮತ್ತು ನಮಗಾಗಿ ಕಾದಿರುವ ಮುಂದಿನ ಒಳ್ಳೆಯ ಜೀವನವನ್ನು ನಮ್ಮ ಕೈಯ್ಯಾರೆ ನಾವೇ ಹಾಳು ಮಾಡಿಕೊಂಡು ಬಿಡುತ್ತೇವೆ . ಆದ್ದರಿಂದ ಕಷ್ಟಗಳು ಅಥವಾ ಸೋಲುಗಳು ಎದುರಾದಾಗ ಆದಷ್ಟು ತಾಳ್ಮೆಯಿಂದ ಇರಬೇಕು ಮತ್ತು ಇದು ನಮಗಾಗಿಯೇ ಬಂದಿರುವ ನಮ್ಮ ಭವಿಷ್ಯದ ಜೀವನಕ್ಕೆ ನಾಂದಿ ಎಂದು ತಿಳಿದುಕೊಂಡು ಜೀವನ ನಡೆಸಬೇಕು .

*ಸದಾ ಆಶಾವಾದಿಯಾಗಿರಿ , ಗೆಲುವು ನಿಮ್ಮದಾಗುತ್ತದೆ

ನಿಮಗೆ ಎದುರಾದ ಅತ್ಯಂತ ಕೆಟ್ಟ ದಿನಗಳೆಂದು ನೀವು ಭಾವಿಸುವ ದಿನಗಳು ನಿಮ್ಮಿಂದ ಏನನ್ನೋ ನಿರೀಕ್ಷಿಸುತ್ತಾ ಇರುವುದಂತೂ ಸತ್ಯ . ಅದಕ್ಕೆ ಎಂದಿಗೂ ಅಷ್ಟೇ ನಿಮಗೆ ಸಿಗಬೇಕೆಂದಿರುವ ವಸ್ತು ಅಗಲೀ ಅಥವಾ ದುಡ್ಡು , ಕಾಸು , ಆಸ್ತಿ , ಪಾಸ್ತಿ ಅಥವಾ ಇನ್ನೇನೇ ಆಗಲಿ ನಿಮಗೆ ಸಿಗಲೇ ಬೇಕೆಂದಿದ್ದರೆ ಅದನ್ನು ಯಾರೂ ತಪ್ಪಿಸುವುದಕ್ಕೆ ಆಗುವುದಿಲ್ಲ . ಒಂದಲ್ಲಾ ಒಂದು ಸಮಯದಲ್ಲಿ , ಒಂದಲ್ಲಾ ಒಂದು ರೀತಿಯಲ್ಲಿ ಅದು ನಿಮಗೆ ಸಿಕ್ಕೇ ಸಿಗುತ್ತದೆ . ಆದ್ದರಿಂದ ಆದಷ್ಟು ನೀವು ಒಬ್ಬರಿಗೆ ಕೆಟ್ಟದ್ದನ್ನು ಬಯಸದೆ ಯಾರಿಗೂ ಕೇಡನ್ನು ಮಾಡದೇ ಎದೆಗುಂದದೆ ಆತ್ಮವಿಶ್ವಾಸದಿಂದ ಆಶಾವಾದಿಯಾಗಿದ್ದರೆ ನಿಮ್ಮ ಬದುಕು ನಿಮ್ಮ ಚಿತ್ರಣವನ್ನೇ ಒಂದು ಒಳ್ಳೆಯ ರೀತಿಯಲ್ಲಿ ಬದಲಾಯಿಸಿ ಬಿಡುತ್ತದೆ .

Success And Failure

*ನಿಮ್ಮ ಬುದ್ಧಿ ನಿಮ್ಮ ಸ್ತಿಮಿತದಲ್ಲಿರಲಿ

ಹಲವಾರು ಜನರಿಗೆ ತಮಗೆ ಕಷ್ಟ ಬಂದ ತಕ್ಷಣ ಅಥವಾ ಮುಂದೆ ಕಷ್ಟ ಬರುತ್ತದೆ ಎಂದು ಗೊತ್ತಾದರೆ ಸಾಕು , ಅದರಿಂದ ಪಾರಾಗುವ ಆಲೋಚನೆ ಮಾಡದೆ ಆತುರ ಪಟ್ಟು ಸಾವಿನ ದಾರಿ ಹುಡುಕಿ ಕೊಂಡು ಬಿಡುತ್ತಾರೆ . ಇದಕ್ಕೆ ಕಾರಣ ಆ ಸಮಯದಲ್ಲಿ ನಿಮ್ಮ ಬುದ್ಧಿ ನಿಮಗೆ ಕೈ ಕೊಟ್ಟಿರುತ್ತದೆ . ಮನಸ್ಸಿಗೆ ಬರೀ ಇಲ್ಲ ಸಲ್ಲದ ಯೋಚನೆಗಳೇ ಬರುತ್ತಿರುತ್ತವೆ . ಅಂತಹ ಕ್ಷಣದಲ್ಲಿ ಯಾವತ್ತೂ ಅಷ್ಟೇ ನಿಮ್ಮನ್ನೇ ನಂಬಿಕೊಂಡಿರುವ ನಿಮ್ಮ ತಂದೆ ತಾಯಿಯರಾಗಲೀ , ಗಂಡ ಹೆಂಡತಿಯಾಗಲೀ ಅಥವಾ ನಿಮ್ಮ ಅವಶ್ಯಕತೆ ಇರುವ ಇನ್ನಾವುದೇ ಸಂಬಂಧ ಆಗಲೀ , ಅವರುಗಳ ಬಗ್ಗೆ ಒಂದು ಬಾರಿ ಯೋಚನೆ ಮಾಡಿ ನೋಡಿ . ಖಂಡಿತ ನಿಮ್ಮ ಮನಸ್ಸಿನಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಮುದುಡಿ ಕುಳಿತಿರುವ ಕರುಣೆ , ಕಾಳಜಿ ಎಂಬ ಅಂಶಗಳು ತಾವಾಗಿಯೇ ಚಿಗುರೊಡೆಯುತ್ತವೆ ಮತ್ತು ನಿಮ್ಮ ಹಿಂದಿನ ಸುಖದ ಕ್ಷಣಗಳನ್ನು ಮತ್ತು ಅನುಭವವನ್ನು ನೆನಪಿಗೆ ತಂದು ಮುಂದೆಯೂ ಇಂತಹದೇ ಕ್ಷಣಗಳು ನಮಗಾಗಿ ಕಾದಿರಬಹುದು ಎಂಬ ಹೊಸ ಭರವಸೆಯನ್ನು ಹುಟ್ಟು ಹಾಕುತ್ತವೆ.

Success And Failure

*ನೀವು ಇಷ್ಟು ದಿನ ಶ್ರಮಿಸಿದ ಅನುಭವವೇ ನಿಮಗೆ ದಾರಿ ದೀಪ:

ಒಳ್ಳೆಯ ದಿನಗಳು ಮನುಷ್ಯನಿಗೆ ಸುಖವನ್ನೇ ಕೊಟ್ಟು ಅವನ ಸೋಮಾರಿತನವನ್ನು ಹೆಚ್ಚು ಮಾಡಿದರೆ , ಕೆಟ್ಟ ಮತ್ತು ಸೋಲಿನ ದಿನಗಳು ಅವನ ಬುದ್ಧಿವಂತಿಕೆಯನ್ನು ಹೆಚ್ಚು ಮಾಡಿ ಅವನನ್ನು ತನ್ನ ಸುತ್ತಮುತ್ತಲಿನ ಸಮಾಜದ ಮಧ್ಯದಲ್ಲಿ ಒಬ್ಬ ಶ್ರಮಜೀವಿಯನ್ನಾಗಿ ಮಾಡುತ್ತದೆ . ಅವನು ಅನೇಕ ರೀತಿಯ ಪಾಠಗಳನ್ನು ಕಲಿಯುತ್ತಾನೆ . ಅನುಭವವನ್ನು ರೂಢಿ ಮಾಡಿಕೊಳ್ಳುತ್ತಾನೆ . ಮುಂದಿನ ಜೀವನದ ಬಗ್ಗೆ ತನ್ನದೇ ಆದ ಒಂದು ಭವಿಷ್ಯದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾನೆ . ಏಕೆಂದರೆ ಅವನಿಗೆ ಎದುರಾದ ಎಲ್ಲಾ ಸಿಹಿ ಕಹಿ ಅನುಭವಗಳೇ ಅವನಿಗೆ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳುವ ಅವಕಾಶ ಒದಗಿಸಿರುತ್ತವೆ ಮತ್ತು ಜೀವನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ತುಂಬುತ್ತದೆ.

English summary

Success And Failure: Things You must Know

In the event of failure, performing your duties no matter how tough the path, paves the way to success. For this path is the path of sacrifice, you have undertaken. This road of focused vision on the path, fulfills your desire to succeed. Shri Krishna in B. Gita advices, " Your sacrifice will satisfy Gods. The Gods in turn will satisfy your needs. This mutual arrangement will get you the greatest good."Alexander Graham Bell states, " When one door closes, another opens; but we often look so long and so regretfully upon the closed door that we do not see the one which has opened for us."
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X