For Quick Alerts
ALLOW NOTIFICATIONS  
For Daily Alerts

ಜುಲೈ 16 ಹಾಗೂ 17 ರಂದು ಭಾರತದಲ್ಲಿ ಚಂದ್ರ ಗ್ರಹಣ ಗೋಚರಿಸುವುದು

|

ಹಿಂದೂ ಧರ್ಮ ಹಾಗೂ ಪಂಚಾಂಗದಲ್ಲಿ ಗ್ರಹಣ ಎನ್ನುವುದು ಸೂತಕ ಮತ್ತು ಅಪಶಕುನದ ಸಂಕೇತ. ಭೂಮಿಯ ಮೇಲಿರುವ ಜೀವಿಗಳ ಅದೃಷ್ಟ ಹಾಗೂ ಬದುಕು ನಿಂತಿರುವುದು ಗ್ರಹಗಳ ಸಂಚಾರದ ಮೇಲೆ. ಪ್ರತಿಯೊಬ್ಬರ ರಾಶಿಚಕ್ರಗಳಿಗೆ ಅನುಗುಣವಾಗಿ ಗ್ರಹಗಳು ಯಾವ ಪ್ರಭಾವ ಬೀರುವುದು? ಎನ್ನುವುದರ ಅನುಸಾರ ಕಷ್ಟ-ಸುಖಗಳು ಹಾಗೂ ಅದೃಷ್ಟಗಳು ನಿಂತಿರುತ್ತವೆ. ಉತ್ತಮ ಪ್ರಭಾವ ಅಂದರೆ ಧನಾತ್ಮಕ ಪ್ರಭಾವ ಉಂಟಾದರೆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಹಾಗೂ ಸಂತೋಷದ ಜೀವನವನ್ನು ಕಾಣುತ್ತಾನೆ.

ಜೊತೆಗೆ ಅಂದುಕೊಂಡ ಕೆಲಸ ಕಾರ್ಯ ಹಾಗೂ ವಿಷಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಅದೇ ಗ್ರಹಗಳ ಪ್ರಭಾವ ಋಣಾತ್ಮಕವಾಗಿದೆ ಎಂದಾದಾಗ ಕಷ್ಟ, ನೋವು ಹಾಗೂ ಅನುಚಿತ ಸಂಗತಿಗಳೇ ಸಂಭವಿಸುತ್ತವೆ. ಪರಿಸರದಲ್ಲಿ ಹಾಗೂ ವ್ಯಕ್ತಿಯ ಅದೃಷ್ಟದಲ್ಲಿ ಸೂರ್ಯ, ಚಂದ್ರ ಹಾಗೂ ಪರಿಸರ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿ ಯಾವುದಾದರೂ ಒಂದು ಸಂಗತಿಗೆ ಅನುಚಿತ ಸ್ಥಿತಿ ಉಂಟಾಯಿತು ಎಂದರೆ ಸಾಕಷ್ಟು ಅನುಚಿತ ಘಟನೆಗಳು ಸಂಭವಿಸುತ್ತವೆ ಎನ್ನಲಾಗುವುದು. ಅದರಲ್ಲೂ ಸೂರ್ಯ ಮತ್ತು ಚಂದ್ರ ಗ್ರಹಣವು ಪರಿಸರದ ಮೇಲೆ ಅತ್ಯಂತ ಋಣಾತ್ಮಕ ಪ್ರಭಾವವನ್ನು ಬೀರುತ್ತವೆ.

Lunar Eclipse

ಅವುಗಳ ಪ್ರಭಾವದಿಂದ ಮನುಷ್ಯರ ಜೀವನದಲ್ಲೂ ಎಡರು ತೊಡರುಗಳು ಕಾಣಿಸಿಕೊಳ್ಳುತ್ತವೆ. ಗ್ರಹಣದಲ್ಲಿಯೂ ಅರೆ ನೆರಳಿನ ಗ್ರಹಣ, ಪಾಶ್ರ್ವ ಗ್ರಹಣ, ಪೂರ್ಣ ಗ್ರಹಣ ಎನ್ನುವ ವಿಭಿನ್ನತೆ ಇರುವುದರಿಂದ ಅವುಗಳ ಆಧಾರದ ಮೇಲೆಯೇ ಪ್ರಭಾವ ಹೇಗಿರುತ್ತದೆ ಎನ್ನುವುದು ನಿರ್ಧಾರವಾಗುವುದು.

ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಸಂಚರಿಸುವಾಗ ಭೂಮಿಯ ನೆರಳಿನೊಳಕ್ಕೆ ಬಂದರೆ ಆಗ ಚಂದ್ರಗ್ರಹಣವಾಗುತ್ತದೆ. ಈ ಗ್ರಹಣವಾಗಬೇಕಾದರೆ ಸೂರ್ಯ ಭೂಮಿ ಮತ್ತು ಚಂದ್ರ ಇವು ಮೂರೂ ಸುಮಾರಾಗಿ ಒಂದೇ ಸರಳ ರೇಖೆಯಲ್ಲಿರಬೇಕು. ಚಂದ್ರ ತನ್ನ ಪಥದ ಒಂದು ಪಾತಬಿಂದುವಿನಲ್ಲೋ (ರಾಹು ಇಲ್ಲವೆ ಕೇತು) ಇಲ್ಲವೇ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ವಿಯುತಿಯಲ್ಲಿದ್ದರೆ (ಅಪೊಸಿಷನ್) ಅಂದರೆ ಹುಣ್ಣಿಮೆಯಾಗಿದ್ದರೆ ಆಗ ಚಂದ್ರ ಗ್ರಹಣವಾಗುತ್ತದೆ. ಚಂದ್ರಪಥ ನೇರವಾಗಿ ದಟ್ಟ ನೆರಳಿನ ಮಧ್ಯೆ ಹಾದು ಹೋಗಬಹುದು ಇಲ್ಲವೇ ಸ್ವಲ್ಪ ಮೇಲೆ ಅಥವಾ ಕೆಳಗೆ ಹೋಗಬಹುದು. ಇವು ಪಾತರೇಖೆಯ ವಿನ್ಯಾಸವನ್ನು ಅವಲಂಬಿಸಿರುತ್ತವೆ.

ಅರೆನೆರಳಿನ ಮೂಲಕ ಚಂದ್ರ ಹಾದು ಹೋಗುವಾಗ ಚಂದ್ರ ಬಿಂಬಿಸುವ ಬೆಳಕು ಸ್ವಲ್ಪ ಮಂಕಾಗಬಹುದು. ದಟ್ಟ ನೆರಳಿನ ಹತ್ತಿರ ಹೋದ ಹಾಗೆಲ್ಲ ಈ ಬೆಳಕು ಕಡಿಮೆಯಾಗುತ್ತ ಹೋಗಿ ಆ ಭಾಗವನ್ನು ಪ್ರವೇಶಿಸುತ್ತಿರುವಾಗ ಚಂದ್ರನ ಸ್ವಲ್ಪ ಭಾಗಕ್ಕೆ ಬೆಳಕು ಕಡಿದುಹೋದ ಹಾಗಾಗುತ್ತದೆ. ಇದಕ್ಕೆ ಚಂದ್ರನ ಪಾಶ್ರ್ವಗ್ರಹಣ ಎಂದು ಹೆಸರು. ದಟ್ಟ ನೆರಳಿನ ಭಾಗದಲ್ಲಿ ಪೂರ್ತಿ ಮುಳುಗಿದರೆ ಚಂದ್ರನ

ಪೂರ್ಣಗ್ರಹಣವಾಗುತ್ತದೆ. ಚಂದ್ರ ತನ್ನ ಪಥದಲ್ಲಿ ಮುಂದುವರಿದಂತೆ ಪೂರ್ಣ ಗ್ರಹಣವು ಪಾಶ್ರ್ವಗ್ರಹಣವಾಗಿ ಮೋಕ್ಷಗೊಂಡು ಅರೆನೆರಳಿನ ಭಾಗದಲ್ಲಿ ಮುಳುಗಿ ಹೊರಬರುತ್ತದೆ. ಪೂರ್ಣಗ್ರಹಣವಾಗುವುದಕ್ಕೆ ಮುಂಚೆ ಮತ್ತು ಆದ ಮೇಲೆ ಪಾಶ್ರ್ವಗ್ರಹಣವಾಗುತ್ತದೆ ಎಂಬುದನ್ನು ಗಮನಿಸಬೇಕು. ಭೂಮಿಯ ದಟ್ಟ ನೆರಳಿನ ಭಾಗವನ್ನು ಚಂದ್ರ ಸ್ಪರ್ಶಿಸಿ ಮುಂದಕ್ಕೆ ಸರಿದಾಗ ಮಾತ್ರ ಚಂದ್ರಗ್ರಹಣವಾಗಿದೆ ಎನ್ನುತ್ತಾರೆ. ಅರೆ ನೆರಳಿನ ಭಾಗದಲ್ಲಿದ್ದಾಗ ಆಗುವ ಗ್ರಹಣಕ್ಕೆ ಜನರು ಅಷ್ಟೇನೂ ಪ್ರಾಮುಖ್ಯ ನೀಡುವುದಿಲ್ಲ. ಅದನ್ನು ಆಸಕ್ತಿಯಿಂದ ವೀಕ್ಷಿಸುವುದೂ ಇಲ್ಲ.

ಭೂಮಿಯನ್ನು ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿರುವುದರಿಂದ ಗ್ರಹಣವಾಗುವಾಗ ಚಂದ್ರನ ಪೂರ್ವಭಾಗದಲ್ಲಿ ಸ್ಪರ್ಶವೂ ಪಶ್ಚಿಮ ಭಾಗದಲ್ಲಿ ಮೋಕ್ಷವೂ ಆಗುತ್ತವೆ. ಭೂಮಿಯಿಂದಾದ ನೆರಳಿನ ಸೀಳ್ನೋಟವನ್ನು ಮತ್ತು ಗ್ರಹಣವಾಗುವಾಗ ಚಂದ್ರ ವಿವಿಧ ಭಾಗಗಳಲ್ಲಿರುವುದನ್ನು ಚಿತ್ರ(5)ರಲ್ಲಿ ತೋರಿಸಿದೆ. ಚಂದ್ರ ಕ್ಷಿತಿಜಕ್ಕಿಂತ ಮೇಲಿದ್ದಾಗ ಗ್ರಹಣವಾದರೆ ಅದನ್ನು ನೋಡಲು ಸಾಧ್ಯವಾಗುವ ಭೂಮಿಯ ಮೇಲಿನ ಭಾಗ ಹೆಚ್ಚು. ಇದು ಭೂಮಿಯ ಮೇಲ್ಮೈಯ ಸುಮಾರು ಅರ್ಧಕ್ಕಿಂತ ಹೆಚ್ಚು ಭಾಗಗಳಿಂದ ಕಾಣಿಸುತ್ತದೆ. ಅದೂ ಅಲ್ಲದೆ ಎಲ್ಲ ಕಡೆಗಳಿಂದಲೂ ಒಂದೇ ತರಹ ಗ್ರಹಣ ಕಾಣಿಸುತ್ತದೆ.

ಇದೀಗ ಅಂದರೆ 2019ನೇ ಸಾಲಿನ ಜುಲೈ 16 ಮತ್ತು 17ರಂದು ದೀರ್ಘಾವಧಿಯ ಚಂದ್ರಗ್ರಹಣ ಕಾಣಿಸಿಕೊಳ್ಳುತ್ತಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುತ್ತಿರುವುದರಿಂದ ನಮ್ಮ ಹಿಂದೂ ಪಂಚಾಂಗದ ಅನುಸಾರ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರುವುದು ಎಂದು ಅಂದಾಜಿಸಲಾಗಿದೆ. ಕೇತುವಿನಿಂದ ಚಂದ್ರ ಗ್ರಹಣ ಉಂಟಾಗುತ್ತಿದೆ. ಗ್ರಹಣವು ಉತ್ತರಾಷಾಢ ನಕ್ಷತ್ರದ ಮೇಲೆ ಹಿಡಿಯುತ್ತಿದೆ. ಹಾಗಾಗಿ ಕೆಲವು ರಾಶಿಯವರ ಮೇಲೆ ಸಾಕಷ್ಟು ಪ್ರಭಾವ ಬೀರುವುದು ಎನ್ನಲಾಗುತ್ತದೆ. ಧನು ಮತ್ತು ಮಕರ ರಾಶಿಯವರ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುವುದರಿಂದ ಅವರು ಗ್ರಹ ಶಾಂತಿಯನ್ನು ಮಾಡಿಸುವುದು ಉತ್ತಮ ಎಂದು ಹೇಳಲಾಗುತ್ತಿದೆ.

ಗ್ರಹಣದ ಸಂದರ್ಭದಲ್ಲಿ ಪರಿಸರದಲ್ಲೂ ಮಾಲಿನ್ಯತೆ ಹೆಚ್ಚುವುದು. ಜೊತೆಗೆ ಚಂದ್ರನು ಅಶಕ್ತನಾಗಿರುತ್ತಾನೆ. ಆ ಸಂದರ್ಭದಲ್ಲಿ ಅಹಿತಕರವಾದ ಸಂಗತಿಗಳು ಹೆಚ್ಚಾಗಿ ನಡೆಯುತ್ತವೆ. ಹಾಗಾಗಿಯೇ ಯಾವ ರಾಶಿ ಚಕ್ರದ ಮೇಲೆ ಹೆಚ್ಚಿನ ಪ್ರಭಾವ ಬೀರಿರುತ್ತದೆಯೋ ಆ ರಾಶಿಯವರು ಗ್ರಹ ಶಾಂತಿಯನ್ನು ಮಾಡಿಸಬೇಕು. ಆಗ ಗ್ರಹಣದಿಂದ ಉಂಟಾಗುವ ದೊಡ್ಡ ಅನಾಹುತಗಳನ್ನು ತಡೆಯಬಹುದು ಎನ್ನುವ ನಂಬಿಕೆ ಇದೆ. ಈ ಬಾರಿಯ ಚಂದ್ರ ಗ್ರಹಣವು ಕೇತುವಿನಿಂದ ಸಂಭವಿಸುತ್ತಿರುವುದರಿಂದ ಕೆಲವು ರಾಶಿಯವರಿಗೆ ಭಿನ್ನ ರೀತಿಯ ಪ್ರಭಾವವನ್ನು ಬೀರುವುದು ಎನ್ನಲಾಗುತ್ತಿದೆ. ಗ್ರಹಣದ ಅನುಸಾರ ಕೆಲವು ರಾಶಿಚಕ್ರದವರಲ್ಲಿ ಉಂಟಾಗುವ ಬದಲಾವಣೆ ಅಥವಾ ಪ್ರಭಾವವು ಈ ರೀತಿ ಇದೆ ಎಂದು ಹಿಂದೂ

ಪಂಚಾಂಗ ಹೇಳುವುದು
*ಮೇಷ ರಾಶಿ: ಕೋಪ ಹೆಚ್ಚು
*ವೃಷಭ: ಸ್ತ್ರೀಯರಿಂದ ಅಥವಾ ಪುರುಷರಿಂದ ನಷ್ಟ
*ಮಿಥುನ: ಸೌಖ್ಯ
*ಕಟಕ: ಸುಖ
*ಸಿಂಹ: ರೋಗನಾಶ
*ಕನ್ಯಾ: ಮಾನ ಹಾನಿ
*ತುಲಾ: ಸುಖಿ
*ವೃಶ್ಚಿಕ: ಲಾಭ
*ಧನಸ್ಸು: ನಷ್ಟ
ಮಕರ: ಮನಸ್ಸಿಗೆ ಅಶಾಂತಿ
ಕುಂಭ: ಆರೋಗ್ಯ ಚೇತರಿಕೆ
ಮೀನ: ಧನ ಪ್ರಾಪ್ತಿ

ಗ್ರಹಣದ ದಿನ ಆಹಾರ ಸೇವಿಸುವ ಬಗ್ಗೆಯೂ ಕೆಲವು ನಿಯಮ ಪಾಲಿಸಬೇಕು. ಗ್ರಹಣ ಆರಂಭಕ್ಕೆ ಮೂರು ಗಂಟೆಗಳಿಗೂ ಮುನ್ನವೇ ಭೋಜನ ಸೇವಿಸುವುದು ಒಳಿತು. ಚಿಣ್ಣರು, ವೃದ್ಧರು, ರೋಗಿಗಳು, ಅಶಕ್ತರಿಗೆ ವಿನಾಯಿತಿ ಇರುತ್ತದೆ. ತೀರಾ ಹಸಿವು ತಡೆಯದೇ ಇರುವವರು ಬೇಕಿದ್ದರೆ ದ್ರವ ರೂಪದ ಆಹಾರ ಮತ್ತು ಪಾನೀಯಗಳನ್ನು ಸೇವಿಸಬಹುದು.

ಗ್ರಹಣ ದಿನಾಂಕ : 16-7-2019 (ಮಂಗಳವಾರ)
*ಗ್ರಹಣ ಸ್ಪರ್ಶ ಕಾಲ: ರಾತ್ರಿ 1.30
*ಮಧ್ಯಕಾಲ: ರಾತ್ರಿ 3.00
*ಮೋಕ್ಷಕಾಲ: ಬೆಳಗಿನ ಜಾವ 4. 29
*ಗ್ರಹಣದ ಅವಧಿ: 2 ಗಂಟೆ 59 ನಿಮಿಷ

ಗ್ರಹಣವು ಮಳೆಗಾಲದಲ್ಲಿ ಸಂಭವಿಸುತ್ತಿರುವುದರಿಂದ ಮೋಡಗಳಿಂದ ಗ್ರಹಣಗಳ ಗೋಚರ ಅಸ್ಪಷ್ಟವಾಗಿ ಕಾಣಬಹುದು. ಬರಿ ಕಣ್ಣಿನಿಂದ ಗ್ರಹಣವನ್ನು ನೋಡಬಾರದು. ಜೊತೆಗೆ ಗ್ರಹಣದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗುವಾಗ ಸಾಕಷ್ಟು ಕಾಳಜಿ ಹಾಗೂ ಎಚ್ಚರಿಕೆ ವಹಿಸುವುದು ಒಳಿತು. ಗ್ರಹಣದ ಸಂದರ್ಭದಲ್ಲಿ ದೇವರ ಧ್ಯಾನ ಹಾಗೂ ಜಪ ಮಾಡುವುದರಿಂದ ಹೆಚ್ಚಿನ ಪುಣ್ಯ ಬರುವುದು. ಜೊತೆಗೆ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುವುದು. ಪರಿಸರ ಪ್ರೇಮಿಗಳು ಹಾಗೂ ಖಗೋಳದಲ್ಲಿ ಆಸಕ್ತಿ ಹೊಂದಿರುವವರು ಚಂದ್ರನ ಸೂಕ್ತ ಅಧ್ಯಯನ ಹಾಗೂ ವಿಶೇಷ ಗ್ರಹಣವನ್ನು ವೀಕ್ಷಿಸಲು ಸಾಕಷ್ಟು ಸಮಯ ದೊರೆಯುತ್ತಿದೆ. ಗ್ರಹಣವು ಹೆಚ್ಚು ಸಮಯ ಇರುವುದರಿಂದ ಆಸಕ್ತರಿಗೆ ವಿವಿಧ ವಿಷಯಗಳ ವೀಕ್ಷಣೆಗೆ ಅನುಕೂಲ ಉಂಟಾಗುವುದು.

English summary

Lunar Eclipse 2019:In India it visible july 16 and 17

2019 lunar eclipse will be visible from india on 16 and 17
X
Desktop Bottom Promotion