Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಕೈಯಲ್ಲಿ ಹೆಚ್ಚು ಹಣ ಉಳಿತಾಯಕ್ಕೆ 7 ಸ್ಮಾರ್ಟ್ ಟಿಪ್ಸ್
ದೊಡ್ಡ ಬಂಗಲೆಯ ಮಾಲೀಕರಾಗುವುದು, ಉತ್ತಮ ಬ್ಯಾಂಕ್ ಬ್ಯಾಲೆನ್ಸ್ ಇಟ್ಟುಕೊಳ್ಳುವುದು ಅಥವಾ ನಮ್ಮ ಸ್ವಂತದ ವ್ಯವಹಾರ ಆರಂಭಿಸಿ ಯಶಸ್ವಿಯಾಗುವುದು ಹೀಗೆ ಎಲ್ಲರೂ ಜೀವನದಲ್ಲಿ ಒಂದಿಲ್ಲೊಂದು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಜೀವನದಲ್ಲಿ ಮಹತ್ವಾಕಾಂಕ್ಷೆಗಳು ಇರಲೇಬೇಕು. ಹಣ ಸಂಪಾದನೆ ಮಾಡಿ ಸಂಪತ್ತು ಸೃಷ್ಟಿಸುವ ಹಾಗೂ ಆ ಮೂಲಕ ಜೀವನವನ್ನು ಸುಖಮಯ ಹಾಗೂ ಅರ್ಥಪೂರ್ಣವಾಗಿ ಬದುಕುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಇದೆಲ್ಲವನ್ನು ಸಾಧಿಸಲು ಒಂದು ಪ್ರಮುಖ ಅಂಶವನ್ನು ಜೀವನದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು.
ಅದು ಉಳಿತಾಯ ಮಾಡುವ ಅಭ್ಯಾಸ. ಹಣ ಉಳಿತಾಯ ಮಾಡಲು ಒಂದಿಷ್ಟು ಜಾಣತನ ಬೇಕಾಗುತ್ತದೆ ಎಂಬುದು ನಿಜವಾದರೂ ಇದೇನೂ ಬ್ರಹ್ಮವಿದ್ಯೆಯಲ್ಲ. ಕಷ್ಟಪಟ್ಟು ದುಡಿದ ಹಣವನ್ನು ಒಂದಿಷ್ಟು ಸೂಕ್ತ ಯೋಜನೆ ಹಾಗೂ ಪರಿಶ್ರಮದಿಂದ ಉಳಿತಾಯ ಮಾಡಬಲ್ಲವರಾದರೆ ಸಾಕು. ಉಳಿತಾಯವೇ ಗಳಿಕೆ ಎಂಬ ಗಾದೆ ಮಾತೊಂದನ್ನು ನೀವು ಕೇಳಿರಬಹುದು. ಅಂದರೆ ಜೀವನದಲ್ಲಿ ವ್ಯಕ್ತಿ ಎಷ್ಟೇ ಶ್ರೀಮಂತನಾದರೂ ದುಂದು ವೆಚ್ಚ ಮಾಡುವಂತಿಲ್ಲ. ಹಾಗೆಯೇ ದುಂದು ವೆಚ್ಚ ಮಾಡುವವರು ಶ್ರೀಮಂತರಾಗುವುದು ತೀರಾ ಕಷ್ಟ. ಹೀಗಾಗಿ ನೀವು ಆರ್ಥಿಕವಾಗಿ ಮುನ್ನಡೆಯಬಯಸುವಿರಾದರೆ ಇಂದೇ ಹಣ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಲು ಆರಂಭಿಸಿ. ಯಾವೆಲ್ಲ ವಿಧಾನಗಳನ್ನು ಅನುಸರಿಸುವುದರಿಂದ ಹೆಚ್ಚು ಹಣ ಉಳಿತಾಯ ಮಾಡಬಹುದು ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ನೀವೂ ತಿಳಿದುಕೊಳ್ಳಿ.

ಬಜೆಟ್ ತಯಾರಿಸಿ, ಖರ್ಚು ವೆಚ್ಚಗಳ ನಿಗಾ ವಹಿಸಿ
ಉಳಿತಾಯ ಆರಂಭಿಸಲು ಮೊದಲಿಗೆ ನಿಮ್ಮ ಖರ್ಚು-ವೆಚ್ಚಗಳ ಪಟ್ಟಿ ತಯಾರಿಸಿ. ದಿನನಿತ್ಯ ಪ್ರಯಾಣ, ಕಾಫಿ, ಜಿಮ್, ಶಾಪಿಂಗ್, ಕಿರಾಣಿ ಸಾಮಾನು, ಬಾಡಿಗೆ, ಮನರಂಜನೆ ಹೀಗೆ ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಬರೆದುಕೊಳ್ಳಿ. ಈಗ ಈ ಖರ್ಚುಗಳಲ್ಲಿ ಯಾವುದು ಅನವಶ್ಯಕ ಹಾಗೂ ಯಾವುದನ್ನು ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಚಿಂತಿಸಿ. ನಂತರ ಸೂಕ್ತ ಹಾಗೂ ವಾಸ್ತವಿಕವಾದ ಬಜೆಟ್ ತಯಾರಿಸಿ ಅದರಂತೆ ನಡೆದುಕೊಳ್ಳಲು ಯತ್ನಿಸಿ.

ಗುರಿಯನ್ನು ನಿರ್ಧರಿಸಿ
ಹಣ ಗಳಿಸಿ ಯಾವ ಗುರಿಯನ್ನು ಸಾಧಿಸಲು ನೀವು ಬಯಸಿರುವಿರಿ ಎಂಬುದನ್ನು ತಿಳಿದುಕೊಳ್ಳದ ಹೊರತು ನಿರ್ದಿಷ್ಟ ಯೋಜನೆ ರೂಪಿಸಲು ಅಥವಾ ಜೀವನದಲ್ಲಿ ಮುಂದೆ ಬರುವ ಪ್ರೇರೇಪಣೆ ಪಡೆಯುವುದು ಸಾಧ್ಯವಿಲ್ಲ. ಸುಮ್ಮನೆ ಹಣ ಉಳಿಸುವುದು, ತಿಂಗಳಿಗೆ ಐದು ಸಾವಿರ ರೂಪಾಯಿ ಉಳಿಸುತ್ತೇನೆ ಎಂದುಕೊಳ್ಳುವುದು ಅಥವಾ ಮುಂದಿನ ಆರು ತಿಂಗಳಲ್ಲಿ ಉಳಿತಾಯ ಮಾಡಿ ತುರ್ತುನಿಧಿ ಸಂಗ್ರಹಿಸುತ್ತೇನೆ ಎಂಬ ಸಾಮಾನ್ಯ ಹಾಗೂ ಸುಲಭವಾಗಿ ಮುಟ್ಟಬಹುದಾದ ಗುರಿಗಳನ್ನು ಹಾಕಿಕೊಳ್ಳುವುದು ಎಲ್ಲರೂ ಮಾಡುತ್ತಾರೆ. ಆದರೆ ಅದಕ್ಕೂ ಮಿಗಿಲಾಗಿ ದೀರ್ಘಾವಧಿಯ ಸಾಲಗಳನ್ನು ಬೇಗ ತೀರಿಸುವುದು, ಮನೆ ಅಥವಾ ಕಾರು ಖರೀದಿಸುವುದು ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಮುಂತಾದ ದೂರಗಾಮಿ ಗುರಿಗಳನ್ನು ಇಟ್ಟುಕೊಂಡರೆ ಮಹತ್ತರವಾದುದನ್ನು ಸಾಧಿಸಬಹುದು.

ನೀವು ’72’ ಗಂಟೆಗಳ ಪರೀಕ್ಷೆ ಪಾಸು ಮಾಡಿದ್ದೀರಾ?
ತೀರಾ ಬಯಸಿ ಯಾವುದೋ ಒಂದು ವಸ್ತುವನ್ನು ಕೊಂಡು ತಂದ ನಂತರ ಕೆಲವೇ ಸಮಯದಲ್ಲಿ ಇದು ನನಗೆ ಬೇಡವಾಗಿತ್ತು ಅಥವಾ ಇಂಥದೇ ವಸ್ತು ನನ್ನ ಬಳಿ ಮೊದಲೇ ಇದೆಯಲ್ಲ ಎಂಬ ಅನುಭವ ಯಾವತ್ತಾದರೂ ನಿಮಗೆ ಆಗಿದೆಯೆ? ಬಹುತೇಕ ಜನರು ಈ ಅನುಭವ ಪಡೆದವರೇ ಆಗಿದ್ದಾರೆ. ಯಾವುದೋ ವಸ್ತುವಿನ ಬಗ್ಗೆ ತಕ್ಷಣದ ಆಸೆಗೆ ಬಿದ್ದು ಅಥವಾ ಆನ್ಲೈನ್‌ನಲ್ಲಿ ಕಾಣಿಸಿದ ವಸ್ತುವಿನ ಬಗ್ಗೆ ಮೋಹಗೊಂಡು ಅದನ್ನು ಕೊಳ್ಳಲು ದೊಡ್ಡ ಮೊತ್ತದ ಹಣ ಖರ್ಚು ಮಾಡಿ ನಂತರ ಪರಿತಪಿಸುವುದು ಸಾಮಾನ್ಯವಾಗಿದೆ. ಇಂಥ ಕೊಳ್ಳುಬಾಕ ಚಟವನ್ನು ತಪ್ಪಿಸಲು '72 ಗಂಟೆಗಳ' ಒಂದು ಪರೀಕ್ಷೆಗೆ ನಿಮ್ಮನ್ನು ಒಡ್ಡಿಕೊಳ್ಳಿ. ಯಾವಾಗಲಾದರೂ ಒಂದು ವಸ್ತುವನ್ನು ಕೊಳ್ಳಬೇಕು ಅನಿಸಿದಾಗ ಅದನ್ನು ಜಸ್ಟ್ ಶಾಪಿಂಗ್ ಕಾರ್ಟ್‌ನಲ್ಲಿ ಇಟ್ಟು 72 ಗಂಟೆಗಳವರೆಗೆ ತಾಳ್ಮೆಯಿಂದ ಕಾಯಿರಿ. ಈ ಅವಧಿಯ ನಂತರ ಆ ವಸ್ತುವಿನ ಮೇಲಿನ ಮೋಹ ಬಹುತೇಕ ಕಡಿಮೆಯಾಗಿರುವುದನ್ನು ನೀವೇ ಕಾಣುವಿರಿ. ಅಷ್ಟೆ ಏಕೆ ಇನ್ನೊಂದಿಷ್ಟು ದಿನ ಕಳೆದರೆ ಅಂಥದೊಂದು ವಸ್ತುವನ್ನು ನೀವು ಕೊಳ್ಳಲು ಬಯಸಿದ್ದೀರಿ ಎಂಬುದನ್ನೇ ಮರೆತು ಹೋಗಿರುತ್ತೀರಿ.
Most Read: ನಡೆದಾಡುವ ದೇವರು: ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಬಗ್ಗೆ ತಿಳಿದುಕೊಳ್ಳಬೇಕಾದ 10 ಸಂಗತಿಗಳು

ಉಳಿತಾಯ, ಉಳಿತಾಯ, ಉಳಿತಾಯ
ಸುಮ್ಮನೆ ಯಾವುದೋ ವಿಷಯಕ್ಕೆ ಖರ್ಚು ಮಾಡುವುದು, ಕಂಡ ಕಂಡಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವುದನ್ನು ಮೊದಲು ಬಿಟ್ಟು ಬಿಡಿ. ನಿಮ್ಮ ಆದಾಯದಲ್ಲಿನ ನಿರ್ದಿಷ್ಟ ಮೊತ್ತವನ್ನು ತಿಂಗಳ ಆರಂಭದಲ್ಲಿ ಉಳಿತಾಯದ ಮೊತ್ತವಾಗಿ ಎತ್ತಿಟ್ಟು ಬಿಡಿ. ಈ ಹಣವನ್ನು ಮುಟ್ಟಲೇಬೇಡಿ. ಏನೇ ಆದರೂ ಉಳಿದ ಹಣದಲ್ಲಿಯೇ ತಿಂಗಳ ಖರ್ಚನ್ನು ಸರಿದೂಗಿಸಲು ಯತ್ನಿಸಿ. ಉಳಿತಾಯದ ಬಗ್ಗೆ ಬಿಸಿನೆಸ್ ಟೈಕೂನ್ ವಾರೆನ್ ಬಫೆಟ್ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಮಾತೊಂದನ್ನು ಹೇಳಿದ್ದಾರೆ.. "ಖರ್ಚು ಮಾಡಿದ ನಂತರ ಉಳಿತಾಯ ಮಾಡಲು ಯತ್ನಿಸಬೇಡ, ಉಳಿತಾಯ ಮಾಡಿದ ನಂತರ ಮಿಕ್ಕಿದ್ದರಲ್ಲಿ ಖರ್ಚು ನಿಭಾಯಿಸು".

ಜಾಣತನದಿಂದ ಹೂಡಿಕೆ ಮಾಡಿ
ಉಳಿತಾಯದ ಹಣವನ್ನು ಸೇವಿಂಗ್ಸ್ ಅಕೌಂಟಿನಲ್ಲಿಟ್ಟರೆ ಅದು ದೊಡ್ಡದಾಗಿ ಬೆಳೆಯಲಾರದು. ನಿಮ್ಮ ಹಣಕಾಸು ಗುರಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಹೂಡಿಕೆ ಮಾಡಿ. ಶೇರು ಮಾರುಕಟ್ಟೆ, ಸಿಪ್ (ಯೋಜನಾಬದ್ಧ ಹೂಡಿಕೆ ಯೋಜನೆ), ಮ್ಯೂಚುವಲ್ ಫಂಡ್ಸ್, ರಿಯಲ್ ಎಸ್ಟೇಟ್ ಅಥವಾ ಹೊಸ ಉದ್ಯಮ ಹೀಗೆ ಯಾವುದಾದರೂ ನಿಮಗೆ ಸರಿ ಹೊಂದುವ ಕಡೆ ಹೂಡಿಕೆ ಮಾಡಬೇಕು. ಆದರೆ ಹೀಗೆ ಹಣ ಹೂಡುವ ಮುನ್ನ ಎಲ್ಲ ಸಾಧಕ ಬಾಧಕಗಳನ್ನು ಅಭ್ಯಾಸ ಮಾಡಿಯೇ ಮುಂದುವರಿಯಬೇಕು. ಅಲ್ಲದೆ ಇರುವ ಎಲ್ಲ ಮೊತ್ತವನ್ನು ಒಂದೇ ಕಡೆ ಹೂಡುವುದು ಸರಿಯಾದ ಕ್ರಮವಲ್ಲ.

ಗೆಳೆಯರನ್ನು ಮನೆಗೇ ಆಹ್ವಾನಿಸಿ
ವಾರದ ಕೊನೆಯಲ್ಲಿ ಗೆಳೆಯರೊಂದಿಗೆ ದುಬಾರಿ ಹೋಟೆಲ್‌ಗಳಿಗೆ ಹೋಗಿ ಆಹಾರ ಹಾಗೂ ಡ್ರಿಂಕ್ಸ್‌ಗಳ ಮೇಲೆ ದೊಡ್ಡ ಮೊತ್ತ ಖರ್ಚು ಮಾಡುವುದು, ಮಾಲ್‌ಗಳಲ್ಲಿ ಸಿನಿಮಾ ನೋಡಲು ಖರ್ಚು ಮಾಡುವುದು ಅಥವಾ ದುಬಾರಿ ಕಾಫಿ ಶಾಪ್‌ನಲ್ಲಿ ಕಾಫಿ ಹೀರುವುದು ಹೀಗೆ ಹಲವಾರು ರೀತಿಯಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇದರ ಬದಲು ಗೆಳೆಯರನ್ನು ಮನೆಗೆ ಆಹ್ವಾನಿಸಿ ಮನೆಯಲ್ಲೇ ಚಿಕ್ಕ ಪಾರ್ಟಿ ಮಾಡಿ. ಇದರಿಂದ ಖಂಡಿತವಾಗಿಯೂ ದೊಡ್ಡ ಮೊತ್ತದ ಹಣ ಉಳಿತಾಯ ಮಾಡಲು ಸಾಧ್ಯ.
Most Read: ಪರ್ಯಾಯವಾಗಿ ಕೈ ತುಂಬಾ ಹಣಗಳಿಸುವ 7 ಮಾರ್ಗಗಳು

ಇದನ್ನೂ ತಿಳಿದುಕೊಳ್ಳಿ
ಉಳಿತಾಯ ಮಾಡುವ ಹುಮ್ಮಸ್ಸಿಗೆ ಬಿದ್ದು ನಿಮಗೆ ನೀವು ತೀರಾ ಕಠಿಣವಾಗಬೇಡಿ. ಹೀಗೆ ಮಾಡಿದಲ್ಲಿ ಮುಂದಿನ ಕೆಲ ವಾರಗಳಲ್ಲಿ ಎಲ್ಲ ಯೋಜನೆಗಳೂ ಫ್ಲಾಪ್ ಆಗಬಹುದು. ಚಿಕ್ಕ ಚಿಕ್ಕ ಉಳಿತಾಯ ಮಾಡಲು ಸಾಧ್ಯವಾದಾಗ ಅದನ್ನು ಸಂಭ್ರಮಿಸಿ ಅಥವಾ ನಿಮಗೆ ನೀವೇ ಟ್ರೀಟ್ ಕೊಟ್ಟುಕೊಳ್ಳಿ. ಉಳಿತಾಯ ಮಾಡುವುದು ಎಂದರೆ ಜೀವನದ ಎಲ್ಲ ಖುಷಿಗಳನ್ನು ತ್ಯಾಗ ಮಾಡುವುದು ಎಂದರ್ಥವಲ್ಲ. ಜಾಣತನದಿಂದ ಖರ್ಚು ಮಾಡುವುದು ಹಾಗೂ ಕಷ್ಟದ ದಿನಗಳಿಗಾಗಿ ರೆಡಿಯಾಗಿರುವುದೇ ಉಳಿತಾಯದ ಮೂಲ ಉದ್ದೇಶವಾಗಿದೆ.