For Quick Alerts
ALLOW NOTIFICATIONS  
For Daily Alerts

ನವರಾತ್ರಿ 2020: ದಸರಾ ಹಬ್ಬಕ್ಕೆ ಖರ್ಜೂರ ಹೋಳಿಗೆ ಸ್ಪೆಷಲ್

By Lekhaka
|

ಹಬ್ಬ ಯಾವುದೇ ಇರಲಿ ನನ್ನ ಅಕ್ಕನ ಮನೆಯಲ್ಲಿ ಮಾಡುವುದು ಹೂರಣದ ಹೋಳಿಗೆ ಮಾತ್ರ. ಯಾಕೆಂದರೆ ಆಕೆಗೆ ಚೆನ್ನಾಗಿ ಮಾಡಲು ಬರುವುದು ಅದೊಂದೇ ಸಿಹಿ ತಿನಿಸು. ಒಂದು ರೀತಿಯಲ್ಲಿ ಆಕೆ ಹೂರಣದ ಹೋಳಿಗೆ ಮಾಡುವ ಎಕ್ಸ್ ಪರ್ಟ್. ಪಾಪ, ಆಕೆಯ ಗಂಡ ಮತ್ತು ಮಕ್ಕಳನ್ನು ನೋಡಿ ಅಯ್ಯೋ ಪಾಪ ಅನ್ನಿಸುತ್ತದೆ!

Kharjur holige
ಪ್ರತಿಬಾರಿ ಅವಳ ಮನೆಗೆ ಹಬ್ಬಕ್ಕೆಂದು ಹೋದಾಗ 'ಏನಕ್ಕ, ಈ ಬಾರಿಯೂ ಹೂರಣದ ಹೋಳಿಗೆನಾ?' ಅನ್ನುತ್ತಲೇ ಮನೆಯೊಳಗೆ ಹೋಗುತ್ತೇವೆ. ತನ್ನಷ್ಟು ಚೆನ್ನಾಗಿ ಯಾರೂ ಮಾಡುವುದಿಲ್ಲ ಎಂಬ ಸಣ್ಣ ಅಹಂಕಾರವೂ ಅವಳಲ್ಲಿ ತುಂಬಿ ಹೋಗಿದೆ. ಹೀಗಾಗಿ ಈ ದಸರೆಗೆ ಬೇರೆ ಸಿಹಿ ತಿನಿಸು ಮಾಡಿದರೆ ಮಾತ್ರ ಬರುತ್ತೇವೆಂದು ಮನೆಯಲ್ಲಿ ಹೇಳಿದ್ದೇವೆ. ಆಶ್ಚರ್ಯಕರ ಸಂಗತಿಯೆಂಬಂತೆ, ಗಣೇಶನ ಚತುರ್ಥಿಗೆ ಬೇರೆ ಬಗೆಯ ಹೋಳಿಗೆ ತಯಾರಿಸಿದ್ದಳಂತೆ ನನ್ನ ಅಕ್ಕ. ಅದು, ಖರ್ಜೂರದ ಹೋಳಿಗೆ. ಚೆನ್ನಾಗೂ ಬಂದಿತ್ತಂತೆ. ನಾನೆಂದೂ ಈ ಬಗೆಯ ಹೋಳಿಗೆ ಕೇಳಿಲ್ಲ ಎಂದಿದ್ದಕ್ಕೆ ಅದನ್ನು ತಯಾರಿಸುವ ರೀತಿಯನ್ನು ನನಗೆ ತಿಳಿಸಿದ್ದಾರೆ.

ಹೋಳಿ, ಯುಗಾದಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ನಾನಾ ಬಗೆಯ ಹೋಳಿಗೆಗಳನ್ನು ಮಾಡುತ್ತಾರೆ. ಹೂರಣದ ಹೋಳಿಗೆ, ಸಕ್ಕರೆ ಹೋಳಿಗೆ, ಶೇಂಗಾ ಹೋಳಿಗೆ, ತುಪ್ಪದ ಹೋಳಿಗೆ, ಸಕ್ಕರೆ ಕೊಬ್ಬರಿ ಹೋಳಿಗೆ, ಬೆಲ್ಲ ಕೊಬ್ಬರಿ ಹೋಳಿಗೆ ಎಟ್ಸಿಟ್ರಾ ಎಟ್ಸಿಟ್ರಾ. ಅಕ್ಕ ಕಳಿಸಿದ ರೆಸಿಪಿಯನ್ನು ನಿಮಗೂ ತಿಳಿಸಿದ್ದೇನೆ. ಮಾಡಿ ನೋಡಿ. ನಾನೂ ಖಂಡಿತ ನಾಳೆ ದಸರಾ ಹಬ್ಬದಂದು ತಯಾರಿಸಿ ನೋಡುತ್ತೇನೆ. ಓದುಗರಿಗೆಲ್ಲ ದಸರಾ ಹಬ್ಬದ ಶುಭಾಶಯಗಳು.

ಬೇಕಾಗುವ ಪದಾರ್ಥಗಳ ಪಟ್ಟಿ : ಖರ್ಜೂರ 1 ಬಟ್ಟಲು (ಬೀಜ ತೆಗೆದಿದ್ದು) | ಗೋಧಿ ಹಿಟ್ಟು 2 ಬಟ್ಟಲು | ಮೈದಾ ಹಿಟ್ಟು 1 ಚಮಚ | ಬೆಲ್ಲ ಕಾಲು ಬಟ್ಟಲು | ತುಪ್ಪ | ಏಲಕ್ಕಿ ಪುಡಿ

ತಯಾರಿಸುವ ವಿಧಾನ

* ಬೀಜ ತೆಗೆದ ಖರ್ಜೂರವನ್ನು ಸ್ವಲ್ಪ ಬಿಸಿ ಮಾಡಿರಿ. ಅದಕ್ಕೆ ಹೆರೆದುಕೊಂಡ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಜಾಸ್ತಿ ಸಿಹಿ ಬೇಕಿಲ್ಲದಿದ್ದರೆ ಬೆಲ್ಲ ಇನ್ನೂ ಕಡಿಮೆ ಹಾಕಬಹುದು ಅಥವಾ ಬಿಡಬಹುದು. ಏಕೆಂದರೆ ಖರ್ಜೂರವೇ ಸಾಕಷ್ಟು ಸಿಹಿಯಾಗಿರುತ್ತದೆ.

* ನಂತರ ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟಿಗೆ ನೀರು ಮತ್ತು ಸ್ವಲ್ಪ ತುಪ್ಪ ಸೇರಿಸಿ ಚಪಾತಿ ಹಿಟ್ಟಿನಂತೆ ಕಲಿಸಿಕೊಳ್ಳಿ ಮತ್ತು ಸ್ವಲ್ಪ ಸಮಯ ಹಾಗೇ ಬಿಡಿ.

* ಹಿಟ್ಟನ್ನು ಪೂರಿಗಿಂತ ಚಿಕ್ಕದಾಗಿ ಲಟ್ಟಿಸಿಕೊಂಡು ಅದಕ್ಕೆ ಖರ್ಜೂರ ಮತ್ತು ಬೆಲ್ಲದ ಮಿಶ್ರಣವನ್ನು ಉಂಡೆ ಮಾಡಿ ಮಧ್ಯದಲ್ಲಿಟ್ಟು ಹಿಟ್ಟಿನಿಂದ ಮುಚ್ಚಿರಿ. ಕೈಯಿಂದ ತಟ್ಟಿಕೊಂಡು ಮತ್ತೆ ದೊಡ್ಡದಾಗಿ ಮತ್ತ ದಪ್ಪಗೆ ಲಟ್ಟಿಸಿಕೊಳ್ಳಿರಿ.

* ಎರಡೂ ಬದಿಗೆ ತುಪ್ಪ ಸವರಿ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿರಿ. ಖರ್ಜೂರ ಹೋಳಿಗೆ ತಯಾರ್. ಊಟದ ಜೊತೆಗೆ ಬಿಸಿಬಿಸಿ ಹೋಳಿಗೆಗಳನ್ನು ಇನ್ನೊಂದೆರಡು ಚಮಚ ತುಪ್ಪ ಹಾಕಿಕೊಂಡು ಜಮಾಯಿಸಿ.

English summary

Navarathri 2020: Kharjur holige recipe | Dates | Dasara | Sweet recipe | Festivals of Karnataka | ಖರ್ಜೂರ ಹೋಳಿಗೆ | ಸಿಹಿ ತಿನಿಸು | ದಸರಾ

Kharjur holige recipe for dasara festival.
X
Desktop Bottom Promotion