For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಂಗಸರನ್ನು ಏಕೆ ಅಪವಿತ್ರ ಎಂದು ಪರಿಗಣಿಸಲಾಗುತ್ತದೆ?

By Deepu
|

ನಮ್ಮಲ್ಲಿ ಬಹುತೇಕ ಮಂದಿ ಒಂದಲ್ಲ ಒಂದು ದಿನ ಮುಟ್ಟಾದಾಗ ದೇವರ ಮನೆಗೆ ಹೋಗಿದ್ದಕ್ಕಾಗಿ ತಾಯಿಯಿಂದ ಬೈಗುಳಗಳನ್ನು ಕೇಳಿರುತ್ತೇವೆ. ಮುಟ್ಟಾಗುವುದು ಅತಿ ಕಿರಿಕಿರಿಯನ್ನುಂಟು ಮಾಡುವ ಪ್ರಕ್ರಿಯೆಯಾಗಿರುತ್ತದೆ. ಏಕೆಂದರೆ ಹಿಂದೂ ಧರ್ಮದ ಪ್ರಕಾರ ಮುಟ್ಟಾದ ಹೆಂಗಸರನ್ನು ಅಪವಿತ್ರ ಎಂದು ಪರಿಗಣಿಸುವ ಪರಿಪಾಠ ಬೆಳೆದು ಬಂದಿದೆ.

ಸಂಪ್ರದಾಯದ ಪ್ರಕಾರ ಮುಟ್ಟಾದ ಸ್ತ್ರೀಯು ಮನೆಯಲ್ಲಿನ ಪೂಜಾಗೃಹಕ್ಕೆ ಅಥವಾ ದೇವಾಲಯಕ್ಕೆ ಪ್ರವೇಶ ಮಾಡಬಾರದು. ಇದಲ್ಲದೆ ಆಕೆಯು ಕುಟುಂಬದ ಇತರ ಸದಸ್ಯರಿಂದ ದೂರವಿರಬೇಕು, ತನ್ನ ಕೂದಲನ್ನು ಬಾಚಿಕೊಳ್ಳಬಾರದು, ಉಪ್ಪಿನಕಾಯಿಯನ್ನು ಮುಟ್ಟಬಾರದು, ಯಾವುದೇ ತರಹದ ಕಾಡಿಗೆ ಅಥವಾ ಮೇಕಪ್ ಅನ್ನು ಬಳಸಬಾರದು. ಅಡುಗೆ ಮನೆಗೆ ಪ್ರವೇಶಿಸಬಾರದು. ಇನ್ನೂ ಸರಳವಾಗಿ ಹೇಳಬೇಕೆಂದರೆ ಮುಟ್ಟಾದ ಸ್ತ್ರೀಯು ಈ ಅವಧಿಯಲ್ಲಿ ತನ್ನ ದೈನಂದಿನ ಜೀವನವನ್ನು ಎಂದಿನಂತೆ ನಡೆಸಲು ಆಗುವುದಿಲ್ಲ. ಅಂತ್ಯ ಸಂಸ್ಕಾರದಲ್ಲಿ ಮಹಿಳೆಯರಿಗೆ ಮಾತ್ರ ನಿರ್ಬಂಧ ಸರಿಯೇ?

ಹಿಂದಿನ ಕಾಲದಲ್ಲಿ ಮಹಿಳೆಯರು ಮುಟ್ಟಾದ ಸಮಯದಲ್ಲಿ ಅವರನ್ನು ಅಕ್ಷರಶಃ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು. ಆ ಅವಧಿಯಲ್ಲಿ ಅವರು ಕೇವಲ ಒಂದು ಬಟ್ಟೆಯನ್ನು ಮಾತ್ರ ತೊಡಬೇಕಾಗಿತ್ತು. ಯಾರೊಂದಿಗೂ ಮಾತನಾಡದೆ, ತಲೆಯನ್ನು ಬಾಚದೆ, ಸರಳ ಆಹಾರವನ್ನು ಸೇವಿಸುತ್ತ, ನೆಲದ ಮೇಲೆ ಮಲಗಬೇಕಿತ್ತು. ಇವರು ಈ ಅವಧಿಯಲ್ಲಿ ಮುಟ್ಟಿದ್ದು ಅಪವಿತ್ರ ಎಂದು ಭಾವಿಸಾಲಾಗುತ್ತಿತ್ತು. ಹಾಗಾಗಿ ಇವರು ಯಾವುದನ್ನು ಮುಟ್ಟುತ್ತಿರಲಿಲ್ಲ. ಇದಕ್ಕಾಗಿಯೇ ಮುಟ್ಟಾದ ಹೆಂಗಸರನ್ನು ಪೂಜೆ ಪುನಸ್ಕಾರಗಳಿಂದ ಮತ್ತು ಮನೆಯ ಕೆಲಸಗಳಿಂದ ದೂರವಿಡುತ್ತಿದ್ದರು.ಆದರೆ ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಂಗಸರನ್ನು ಏಕೆ ಅಪವಿತ್ರವೆಂದು ಪರಿಗಣಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ನಿಮಗೆ ಅಚ್ಚರಿಯನ್ನುಂಟು ಮಾಡುವಂತಹ ಕೆಲವೊಂದು ಅಂಶಗಳು ಇಲ್ಲಿವೆ ಓದಿ.

ದ್ರೌಪದಿ ವಸ್ತ್ರಾಪಹರಣ

ದ್ರೌಪದಿ ವಸ್ತ್ರಾಪಹರಣ

ಮಹಾಭಾರತದಲ್ಲಿ ಯುಧಿಷ್ಟಿರನು ಪಗಡೆಯಾಟದಲ್ಲಿ ದ್ರೌಪದಿಯನ್ನು ಸೋತಾಗ, ದುಶ್ಯಾಸನನು ದ್ರೌಪದಿಯನ್ನು ಸಭೆಗೆ ಎಳೆದುಕೊಂಡು ಬರಲು ಹೋಗುತ್ತಾನೆ. ಆಗ ಆಕೆಯು ಮುಟ್ಟಾಗಿರುತ್ತಾಳೆ (ರಜಸ್ವಾಲೆ). ಆಗ ಆಕೆಯು ಏಕಾಂತವಾಗಿ ಒಂದು ಕೋಣೆಯಲ್ಲಿ ಏಕವಸ್ತ್ರಾಧಾರಿಯಾಗಿ ಕುಳಿತಿರುತ್ತಾಳೆ. ಇದು ಆ ಕಾಲದಲ್ಲಿ ಮುಟ್ಟಾದ ಹೆಂಗಸರಿಗೆ ಹಲವು ಕಟ್ಟುಪಾಡುಗಳು ಇದ್ದವು ಎಂಬುದನ್ನು ತೋರಿಸುತ್ತವೆ. ಇಂತಹ ಹೆಂಗಸರನ್ನು ಅವಮನಿಸುವುದು ಅತಿ ದೊಡ್ಡ ಪಾಪವೆಂದು ಪರಿಗಣಿಸಲ್ಪಡುತ್ತದೆ ಎಂದು ಈ ಕಥೆಯಿಂದ ನಾವು ತಿಳಿಯಬಹುದು.

ಇಂದ್ರನ ಪಾಪ

ಇಂದ್ರನ ಪಾಪ

ಒಂದು ದಿನ ಇಂದ್ರನ ಕೋಪಾವೇಶದಿಂದ ನೊಂದ ದೇವ ಗುರು ಬೃಹಸ್ಪತಿಯು ಸ್ವರ್ಗವನ್ನು ತೊರೆದು ಹೋದನು. ಇದರ ಪರಿಣಾಮವಾಗಿ ರಾಕ್ಷಸರು ಸ್ವರ್ಗಕ್ಕೆ ಮುತ್ತಿಗೆ ಹಾಕಿ, ಇಂದ್ರನ ಸಿಂಹಾಸನವನ್ನು ವಶಪಡಿಸಿಕೊಂಡರು. ತನ್ನ ಮೂರ್ಖತನಕ್ಕೆ ಪಶ್ಚಾತ್ತಾಪಪಟ್ಟ ಇಂದ್ರನು ಸಹಾಯಕ್ಕಾಗಿ ಬ್ರಹ್ಮನ ಮೊರೆ ಹೋದನು. ಆಗ ಬ್ರಹ್ಮನು ಇಂದ್ರನಿಗೆ ತನ್ನ ಗುರುವನ್ನು ಸಂತುಷ್ಟಗೊಳಿಸಬೇಕೆಂದರೆ ಯಾರಾದರು ಬ್ರಹ್ಮಜ್ಞಾನಿಗೆ ಸೇವೆಯನ್ನು ಮಾಡಬೇಕು ಎಂದು ಹೇಳಿದನು. ಆಗ ಇಂದ್ರನು ಬ್ರಹ್ಮಜ್ಞಾನಿಯನ್ನು ಹುಡುಕುತ್ತ ಹೋದನು. ಆಗ ಅವನಿಗೆ ತಿಳಿದುಬಂದಿದ್ದೇನೆಂದರೆ, ಆ ಬ್ರಹ್ಮ ಜ್ಞಾನಿಯು ಒಬ್ಬ ಅಸುರನ ಮಗನೆಂದು. ಆದರೂ ಇಂದ್ರ ಆತನಿಗೆ ಸೇವೆ ಮಾಡಿದನು. ಹಾಗಾಗಿ ಆತ ಯಜ್ಞದ ಹವಿಸ್ಸನ್ನು ದೇವತೆಗಳಿಗೆ ಅರ್ಪಿಸುವ ಬದಲು ರಾಕ್ಷಸರಿಗೆ ಅರ್ಪಿಸಿದನು. ಇದರಿಂದ ಕ್ರುದ್ಧನಾದ ಇಂದ್ರನು ಬ್ರಹ್ಮ ಜ್ಞಾನಿಯನ್ನು ಕೊಂದು ಹಾಕಿದನು.

ಹೂವಿನಲ್ಲಿ ಅವಿತುಕೊಂಡ ಇಂದ್ರ

ಹೂವಿನಲ್ಲಿ ಅವಿತುಕೊಂಡ ಇಂದ್ರ

ಬ್ರಹ್ಮ ಜ್ಞಾನಿಯನ್ನು ಕೊಂದದ್ದರಿಂದ ಇಂದ್ರನಿಗೆ ಬ್ರಾಹ್ಮಣನನ್ನು ಕೊಂದ ಬ್ರಹ್ಮ ಹತ್ಯಾದೋಷವು ಬಂದಿತು. ಈ ಪಾಪವು ಇಂದ್ರನು ಎಲ್ಲಿ ಹೋದರು ಎಡೆಬಿಡದೆ ಬ್ರಹ್ಮ ರಾಕ್ಷಸನಂತೆ ಬೆನ್ನತ್ತತೊಡಗಿತು. ಇದರಿಂದ ಬೇಸತ್ತ ಇಂದ್ರನು ಒಂದು ಹೂವಿನಲ್ಲಿ ತನ್ನನ್ನು ತಾನು ಅಡಗಿಸಿಕೊಂಡು ವಿಷ್ಣು ದೇವನನ್ನು ಸುಮಾರು ವರ್ಷಗಳ ಕಾಲ ಪ್ರಾರ್ಥಿಸಿದನು. ಈತನ ಪ್ರಾರ್ಥನೆಗೆ ಓಗೊಟ್ಟ ವಿಷ್ಣುವು ಪ್ರತ್ಯಕ್ಷನಾಗಿ ಈ ಬ್ರಹ್ಮ ರಾಕ್ಷಸನಿಂದ ಇಂದ್ರನನ್ನು ಬಿಡುಗಡೆ ಮಾಡಿದನು. ಆದರೆ ದೋಷ ಮಾತ್ರ ಇಂದ್ರನ ತಲೆಯ ಮೇಲೆ ಹಾಗೆಯೇ ಕುಳಿತು ಬಿಟ್ಟಿತು.

ಇಂದ್ರನ ಪಾಪದ ವಿಭಜನೆ

ಇಂದ್ರನ ಪಾಪದ ವಿಭಜನೆ

ತನ್ನ ಪಾಪದಿಂದ ಮುಕ್ತಿಯನ್ನು ಬಯಸಿದ ಇಂದ್ರನು ಮರಗಳನ್ನು, ಭೂಮಿಯನ್ನು, ನೀರನ್ನು ಮತ್ತು ಹೆಂಗಸರನ್ನು ತನ್ನ ಪಾಪದ ಪಾಲನ್ನು ಸ್ವೀಕರಿಸುವಂತೆ ಕೋರಿಕೊಂಡನು. ಇದಕ್ಕೆ ಬದಲಿಯಾಗಿ ಆತನು ಇವುಗಳಿಗೆ ವರವನ್ನು ಪ್ರಸಾದಿಸುವೆನೆಂದು ಆಶ್ವಾಸನೆಯನ್ನು ಇತ್ತನು. ಆಗ ಮರಗಳು ಇಂದ್ರನ ಪಾಪದ ನಾಲ್ಕನೆ ಒಂದು ಭಾಗವನ್ನು ಪಡೆದವು. ಆಗ ಇಂದ್ರನು ಅವುಗಳಿಗೆ ಬೇರಿನಿಂದ ಮತ್ತೆ ಬೆಳೆಯುವ ವರವನ್ನು ಕರುಣಿಸಿದನು. ಆನಂತರ ನೀರು ಪಾಪದ ಒಂದು ಭಾಗವನ್ನು ಪಡೆಯಿತು. ಅದಕ್ಕೆ ಇಂದ್ರನು ನೀರಿಗೆ ಸಕಲ ಪಾಪಗಳನ್ನು ನಿವಾರಿಸುವ ಶಕ್ತಿಯನ್ನು ವರವಾಗಿ ನೀಡಿದನು. ಮುಂದೆ ಭೂಮಿಯು ಮೂರನೆ ಪಾಪದ ಪಾಲನ್ನು ಪಡೆಯಿತು. ಆಗ ಇಂದ್ರನು ಭೂಮಿಯ ಮೇಲೆ ಸಂಭವಿಸುವ ಯಾವುದೇ ಅವಘಡಗಳು ತನ್ನಷ್ಟಕ್ಕೆ ತಾನೇ ಪರಿಹಾರವಾಗುವಂತಹ ವರವನ್ನು ನೀಡಿದನು.

ಹೆಂಗಸರು ಏಕೆ ದೇವಾಲಯಗಳಿಗೆ ಪ್ರವೇಶಿಸಬಾರದು?

ಹೆಂಗಸರು ಏಕೆ ದೇವಾಲಯಗಳಿಗೆ ಪ್ರವೇಶಿಸಬಾರದು?

ಕೊನೆಯದಾಗಿ ಹೆಂಗಸರು ಇಂದ್ರನ ಪಾಪದ ನಾಲ್ಕನೇ ಭಾಗವನ್ನು ಸ್ವೀಕರಿಸಿದರು. ಇದರಿಂದ ಅವರಿಗೆ ಋತುಚಕ್ರವು ಆರಂಭವಾಯಿತು. ಹಾಗಾಗಿ ಸ್ತ್ರೀಯರು ಮುಟ್ಟಾದಾಗ ಅಪವಿತ್ರರಾಗಿರುತ್ತಾರೆ. ಇದಕ್ಕೆ ಬದಲಿಯಾಗಿ ಇಂದ್ರನು ಸ್ತ್ರೀಯರಿಗೆ ಮಿಲನ ಸುಖದಲ್ಲಿ ಗಂಡಸರಿಗಿಂತ ದುಪ್ಪಟ್ಟು ಸಂತೋಷ ಸಿಗಲಿ ಎಂಬ ವರವನ್ನು ನೀಡಿದನು. ಅಂದಿನಿಂದ ಸ್ತ್ರೀಯರು ಇಂದ್ರನ ಪಾಪದ ಫಲವನ್ನು ತಿಂಗಳಿಗೆ ಒಂದು ಬಾರಿ ಮುಟ್ಟಿನ ರೂಪದಲ್ಲಿ ಪಡೆಯಲು ಶುರು ಮಾಡಿದರು. ಆಗ ಅವರು ಬ್ರಹ್ಮ ಹತ್ಯಾ ದೋಷಕ್ಕೆ ಗುರಿಯಾಗಿರುವ ಕಾರಣದಿಂದ ಅವರಿಗೆ ದೇವಾಲಯಗಳ ಪ್ರವೇಶ ನಿಷಿದ್ಧ.

ಏಕಾಂತ ವಾಸದ ಹಿಂದಿನ ಕಾರಣಗಳು

ಏಕಾಂತ ವಾಸದ ಹಿಂದಿನ ಕಾರಣಗಳು

ಮುಟ್ಟಾದ ಸ್ತ್ರೀಯರನ್ನು ಏಕಾಂತ ವಾಸದಲ್ಲಿ ಇಡುವ ಕಾರಣ ಇಂತಿದೆ. ಮೊದಲಿಗೆ ಮುಟ್ಟಾದ ಸ್ತ್ರೀಯರು ಇನ್‍ಫೆಕ್ಷನ್‍ಗೆ ಒಳಗಾಗುವ ಸಾಧ್ಯತೆ ತೀರಾ ಹೆಚ್ಚಿರುತ್ತದೆ. ಆದ್ದರಿಂದ ಆಕೆಯನ್ನುಇನ್‍ಫೆಕ್ಷನ್‍ನಿಂದ ದೂರವಿಡಲು ಏಕಾಂತವಾಸದ ವ್ಯವಸ್ಥೆ ಮಾಡುತ್ತಾರೆ. ಎರಡನೆಯದಾಗಿ ಈ ಅವಧಿಯಲ್ಲಿ ಹೆಂಗಸರು ನಿಶ್ಶಕ್ತಗೊಂಡಿರುತ್ತಾರೆ ಮತ್ತು ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ, ಹಾಗಾಗಿ ಅವರನ್ನು ಮನೆಯ ಕೆಲಸಗಳಲ್ಲಿ ತೊಡಗಿಸುವುದಿಲ್ಲ. ಜೊತೆಗೆ ಇವರನ್ನು ಇತರರಿಂದ ದೂರವಿಟ್ಟಿರುತ್ತಾರೆ. ಕಾರಣ ಮುಟ್ಟಾದ ಹೆಂಗಸರಲ್ಲಿ ಒಂದು ಬಗೆಯ ಋಣಾತ್ಮಕ ಶಕ್ತಿಯು ಹೊರಹೊಮ್ಮುತ್ತಿರುತ್ತದೆ. ಇದು ಇತರರಿಗೆ ಕೆಡಕನ್ನುಂಟು ಮಾಡದೆ ಇರಲಿ ಎಂದು ಅವರನ್ನು ದೂರವಿಡಲಾಗುತ್ತದೆ.

ತಿರುವು ಮರುವಾದ ಸಂಪ್ರದಾಯಗಳು?

ತಿರುವು ಮರುವಾದ ಸಂಪ್ರದಾಯಗಳು?

ಮುಟ್ಟಾದಾಗ ಪಾಲಿಸುವ ಕೆಲವೊಂದು ಸಂಪ್ರದಾಯಗಳು ಸ್ತ್ರೀಯರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಆದರೆ ಕೆಲವೊಂದು ಮಾತ್ರ ಕೇವಲ ಮೂಢನಂಬಿಕೆಗಳ ಆಧಾರದ ಮೇಲೆ ಜಾರಿಗೆ ಬಂದಿವೆ. ಉದಾಹರಣೆಗೆ ಮುಟ್ಟಾದ ಹೆಂಗಸರು ಉಪ್ಪಿನ ಕಾಯಿಯ ಜಾಡಿಯನ್ನು ಮುಟ್ಟಿದರೆ ಅದು ಹಾಳಾಗುತ್ತದೆ ಎಂದು. ಮುಟ್ಟಾದ ಹೆಂಗಸನ್ನು ಏಕಾಂತ ವಾಸದಲ್ಲಿ ಇಡುವುದರಿಂದ ಅವರನ್ನು ಅಸ್ಪೃಶ್ಯರಂತೆ ಕಾಣಬೇಕೆಂದು ಅರ್ಥವಲ್ಲ. ಋತು ಚಕ್ರವು ಹೆಣ್ಣಿನ ಆರೋಗ್ಯದ ಸಂಕೇತವಷ್ಟೇ. ಇದೇನು ಹೆಂಗಸರು ತಲೆ ತಗ್ಗಿಸುವಂತಹ ಮತ್ತು ಅವಮಾನಕಾರಿಯಾದ ಸಂಗತಿಯಲ್ಲ. ಸುಮ್ಮನೆ ಮೂಢನಂಬಿಕೆಗಳಿಗೆ ಬಲಿಯಾಗಿ ಮುಟ್ಟಾದ ಸ್ತ್ರೀಯರನ್ನು ಹೊರಗಿಡುವುದು ಮತ್ತು ಅವರ ಮನಸ್ಸಿಗೆ ಘಾಸಿಯಾಗುವಂತೆ ನಡೆದುಕೊಳ್ಳುವುದು ಮಾಡಬಾರದು.

ಮುಟ್ಟಾದಾಗ ಪ್ರಾರ್ಥನೆಯನ್ನು ಮಾಡಬಹುದೆ?

ಮುಟ್ಟಾದಾಗ ಪ್ರಾರ್ಥನೆಯನ್ನು ಮಾಡಬಹುದೆ?

ಇದಕ್ಕೆ ಉತ್ತರ ಸರಳ. ಒಳ್ಳೆಯದೋ ಅಥವಾ ಕೆಟ್ಟದೋ, ಮಾತು ಮಧುರವೊ ಅಥವಾ ಕೆಟ್ಟದ್ದೊ, ಸಂತೋಷವೋ ಅಥವಾ ದುಃಖವೋ ನಿಮಗೆ ತೋಚಿದ ಪ್ರತಿಕ್ರಿಯೆಯನ್ನು ನೀವು ತೋರುತ್ತಿರಲ್ಲವೆ. ಹಾಗೆಯೇ ನಿಮಗೆ ಇಷ್ಟವಾದಲ್ಲಿ ದೇವರನ್ನು ಪ್ರಾರ್ಥಿಸುವುದರಲ್ಲಿ ತಪ್ಪೇನಿಲ್ಲ. ಒಂದು ವೇಳೆ ನಿಮ್ಮ ಸಂಪ್ರದಾಯವು ನಿಮ್ಮನ್ನು ದೇವರನ್ನು ಮುಟ್ಟಲು ಬಿಡದಿದ್ದಲ್ಲಿ, ಮನಸ್ಸಿನಲ್ಲಿ ಭಗವಂತನ ಧ್ಯಾನ ಮಾಡಿ. ನಿಮ್ಮ ಆಧ್ಯಾತ್ಮಿಕತೆಯು ದೈಹಿಕ ಸ್ಥಿತಿಯಿಂದ ಯಾವುದೇ ರೀತಿಯಲ್ಲಿ ಮಲಿನವಾಗುವುದಿಲ್ಲ.

ಇಸ್ಲಾಂನಲ್ಲಿ ಮುಟ್ಟು

ಇಸ್ಲಾಂನಲ್ಲಿ ಮುಟ್ಟು

ಇಸ್ಲಾಂ ಧರ್ಮದಲ್ಲಿ ಸಹ ಮುಟ್ಟಾದ ಸ್ತ್ರೀಯರನ್ನು ತುಂಬಾ ಕಾಲದಿಂದ ಅಪವಿತ್ರವೆಂದು ಪರಿಗಣಿಸಲಾಗಿದೆ. ಮುಟ್ಟಾದ ಸ್ತ್ರೀಯರನ್ನು ನಮಾಜ್ ಮಾಡಲು ಅಥವಾ ಖುರಾನನ್ನು ಮುಟ್ಟಲು ಬಿಡಲಾಗುವುದಿಲ್ಲ. ಮುಟ್ಟಾದ ಸ್ತ್ರೀಗೆ ರಂಜಾನ್ ಮಾಸದಲ್ಲಿ ಉಪವಾಸ ಮಾಡಲು ಸಹ ನಿಷಿದ್ಧವಿದೆ. ಮುಟ್ಟಾದಾಗ ಆಕೆಯನ್ನು ಮನೆಯಿಂದ ಹೊರಗೆ ಸಹ ಕಳುಹಿಸಲಾಗುವುದಿಲ. ಏಳನೆ ದಿನ ಸ್ನಾನ ಮಾಡಿದ ನಂತರವಷ್ಟೇ ಆಕೆಯನ್ನು ಪವಿತ್ರಳೆಂದು ಪರಿಗಣಿಸಲಾಗುತ್ತದೆ.

ಕಾಲ ಬದಲಾದ ಹಾಗೆ

ಕಾಲ ಬದಲಾದ ಹಾಗೆ

ಆಧುನಿಕ ಜಗತ್ತಿನಲ್ಲಿ ಮುಟ್ಟಿಗೆ ಸಂಬಂಧಿಸಿದ ನಿಯಮಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಉದಾಹರಣೆಗೆ ಕೆಲಸಕ್ಕೆ ಹೋಗುವ ಹೆಣ್ಣು ಹೊರ ಜಗತ್ತಿಗೆ ಕಾಣದ ಹಾಗೆ ಏಕಾಂತವಾಗಿ ಕೋಣೆಯಲ್ಲಿ ಕಳೆಯಲು ಸಾಧ್ಯವಾಗುವುದಿಲ್ಲ. ಆದರೂ ಆಕೆಯನ್ನು ದೇವಾಲಯಗಳಿಗೆ ಪ್ರವೇಶಿಸಲು ಅಥವಾ ಪೂಜೆಗಳನ್ನು ಮಾಡಲು ಈಗಲೂ ನಿಷೇಧವಿದೆ. ಕನಿಷ್ಟ ಸಾಮಾಜಿಕ ಏಕಾಂತ ಮತ್ತು ಅವಮಾನವು ಈಗ ಚಾಲ್ತಿಯಲ್ಲಿಲ್ಲ. ಬಹುಶಃ ನಮ್ಮ ಮುಂದಿನ ತಲೆಮಾರಿನ ಹೆಣ್ಣು ಮಕ್ಕಳು ನಮಗಿಂತ ಒಳ್ಳೆಯ ದಿನಗಳನ್ನು ಪಡೆಯಬಹುದು. ಅವರು ಮುಟ್ಟಿನ ಕುರಿತು ಅವಮಾನವನ್ನು ಎದುರಿಸಬೇಕಾದಂತಹ ಪರಿಸ್ಥಿತಿ ಬರದಿರಬಹುದು. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಮುಟ್ಟು ಆರೋಗ್ಯವಂತ ಸ್ತ್ರೀಯ ಲಕ್ಷಣ ತಾನೇ.

English summary

Why Menstruating Women Are Considered Impure In Hinduism?

This is the reason why women on periods are exempted from performing any pooja or do any housework. But are you aware of the reasons why menstruating women are considered impure according to Hinduism? Read on to find out some amazing facts.
X
Desktop Bottom Promotion