For Quick Alerts
ALLOW NOTIFICATIONS  
For Daily Alerts

ಭಗವಾನ್ ಶಿವನನ್ನು ಲಿಂಗರೂಪದಲ್ಲಿ ಏಕೆ ಆರಾಧಿಸುತ್ತಾರೆ?

By Super
|

ಪರಮಶಕ್ತನಾದ ಶಿವನಲ್ಲಿ ಎಲ್ಲಾ ಸಮಸ್ಯಗಳಿಗೆ ಪರಿಹಾರ ಸಿಗುತ್ತದೆಂದು ನಂಬಿದ್ದ ದೇವದೇವತೆಗಳು ಯಾವುದೇ ತೊಂದರೆ ಎದುರಾದರೆ ಶಿವನ ಬಳಿ ಓಡುತ್ತಿದ್ದರು. ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಡಿದ ಶಿವನನ್ನು ಭಕ್ತರು ಆತನ ನಿಜರೂಪದಲ್ಲಲ್ಲದೇ ಶಿವಲಿಂಗದ ರೂಪದಲ್ಲಿಯೇ ಪೂಜಿಸುತ್ತಾರೆ ಮತ್ತು ಸಂತರ್ಪಣೆ ನೀಡುತ್ತಾರೆ. ಅದರಲ್ಲೂ ಶಿವಲಿಂಗದ ಬಣ್ಣ ಕಪ್ಪಗಿದ್ದು ವಿವಿಧ ಗಾತ್ರಗಳಲ್ಲಿರುತ್ತವೆ.

ಶಿವನನ್ನು ಲಿಂಗರೂಪದಲ್ಲಿ ಆರಾಧಿಸುವುದೇಕೆ ಎಂಬ ಮಾಹಿತಿ ನಿಮಗಿದೆಯೇ? ಇದು ಎಂದಿನಿಂದ ಅಸ್ತಿತ್ವಕ್ಕೆ ಬಂದಿತು? ಈ ಆಕೃತಿಗೆ ಏನು ಕಾರಣ ಎಂದು ಗೊತ್ತಿದೆಯೇ? ಭಕ್ತರ ಪಾಲಿಗೆ ಈ ಶಿವಲಿಂಗ ದಿವ್ಯತೆ, ನಂಬಿಕೆ, ಶಕ್ತಿ ಮತ್ತು ಅನಂತತೆಯ ಸಂಕೇತವಾಗಿದೆ. ಪ್ರತಿ ನಂಬಿಕೆಗೂ ಅದರದ್ದೇ ಆದ ಕಥೆ ಅಥವಾ ಸಾಕ್ಷಿಗಳಿರುತ್ತವೆ. ಅಂತೆಯೇ ಶಿವಲಿಂಗಕ್ಕೂ ಒಂದಕ್ಕಿಂತ ಹೆಚ್ಚು ಕಥೆಗಳಿವೆ.

ವಿವಿಧ ಪುರಾಣಗಳಲ್ಲಿ ವಿವಿಧ ರೀತಿಯಿಂದ ಬಿಂಬಿಸಲ್ಪಟ್ಟ ಕಥಾನಕ ಒಂದಕ್ಕಿಂತ ಒಂದು ಭಿನ್ನವೂ ಆಗಿದೆ. ಇದನ್ನು ಆರಾಧಿಸುವವರು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಸುವಾಗ ಕಥೆಯಲ್ಲಿ ಕೊಂಚ ಬದಲಾವಣೆಯಾಗಿರಲೂ ಸಾಧ್ಯ. ಆದರೆ ಧಾರ್ಮಿಕ ಪಂಡಿತರು ಬಲವಾಗಿ ನಂಬುವ ಎರಡು ಕಥೆಗಳು ಶಿವಲಿಂಗದ ಮಹತ್ವವನ್ನು ಸಾರುತ್ತವೆ.

The Story Behind The Shiva Linga

ಮೊದಲ ಕಥೆ ಹೀಗಿದೆ:
ಪುರಾತನ ಕಾಲದಲ್ಲಿ ಅಂದರೆ ಈ ಬ್ರಹ್ಮಾಂಡದ ಸೃಷ್ಟಿಯ ಕಾಲದಲ್ಲಿ ಸೃಷ್ಟಿಕರ್ತರಾದ ಬ್ರಹ್ಮ ಮತ್ತು ವಿಷ್ಣು ರವರ ನಡುವೆ ತಮ್ಮಿಬ್ಬರಲ್ಲಿ ಬಲಾಢ್ಯರು ಯಾರು ಎಂಬ ವಿಷಯದ ಬಗ್ಗೆ ಚರ್ಚೆ ಏರ್ಪಟ್ಟಿತು. ಇವರಿಬ್ಬರ ನಡುವಣ ಕೋಳಿ ಜಗಳವನ್ನು ನೋಡಿದ ಶಿವ ಅವರೆದುರಿಗೆ ಒಂದು ಬೃಹದಾಕಾರದ ಕಂಭವನ್ನು ಸೃಷ್ಟಿಸಿದ. ಬೆಂಕಿಯ ಜ್ವಾಲೆ ಧಗಧಗಿಸುತ್ತಿದ್ದ ಆ ಕಂಭದ ತುದಿಗಳು ಎಲ್ಲಿವೆ ಎಂದು ಕಂಡುಹಿಡಿಯಲು ಇಬ್ಬರಿಗೂ ಆಜ್ಞಾಪಿಸಿದ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಕೂಡಲೇ ವಿಷ್ಣು ಒಂದು ಕಾಡುಹಂದಿಯ ರೂಪ ತಾಳಿ (ವರಾಹರೂಪ) ಕಂಭದ ಬುಡದಿಂದ ಪಾತಾಳದತ್ತ ನಡೆದರೆ ಬ್ರಹ್ಮ ಹಂಸವೊಂದರ ರೂಪ ತಾಳಿ ಆಗಸದತ್ತ ನೆಗೆದ. ಎಷ್ಟೋ ಕಾಲ ಎಡೆಬಿಡದೇ ಕೋಟ್ಯಂತರ ಮೈಲುಗಳ ದೂರವನ್ನು ಕ್ರಮಿಸಿದರೂ ತುದಿ ಅಥವಾ ಬುಡವನ್ನು ತಲುಪಲಾಗದೇ ಹತಾಶರಾಗಿ ಹಿಂದಿರುಗಿದರು. ಹಿಂದಿರುಗಿದ ಬಳಿಕ ಬ್ರಹ್ಮ ಸೋಲೊಪ್ಪಿಕೊಳ್ಳಲು ಸಿದ್ಧನಾಗದೇ ತಾನು ತುದಿಯನ್ನು ಕಂಡೆನೆಂದೂ ಅಲ್ಲಿ ಕೇತಕಿ ಎಂಬ ಹೂವಿತ್ತೆಂದೂ ತಿಳಿಸಿದ.

ಬ್ರಹ್ಮ ಹೇಳಿದ ಸುಳ್ಳನ್ನು ಕೇಳಿದಾಕ್ಷಣ ಬಿರಿದ ಬೆಂಕಿಯ ಕಂಭದ ಮೂಲಕ ಪ್ರಕಟನಾದ ಶಿವ ಅತ್ಯುಗ್ರ ಕೋಪ ತಾಳಿ ಬ್ರಹ್ಮನನ್ನು ಶಪಿಸಿದ. ಇನ್ನು ಮೇಲೆ ಯಾರೂ ಬ್ರಹ್ಮನನ್ನು ಪೂಜಿಸಕೂಡದೆಂದೂ ಬ್ರಹ್ಮ ವಿವರಿಸಿದ ಹೂವನ್ನು ಯಾವ ದೇವ ದೇವಿಯ ಪೂಜೆಗೂ ಉಪಯೋಗಿಸಕೂಡದೆಂದೂ ಶಾಪ ನೀಡಿದ.

ಅಂತೆಯೇ ಇಂದಿಗೂ ಈ ಭೂಮಿಯಲ್ಲಿ ಬ್ರಹ್ಮನಿಗಾಗಿ ಯಾವುದೇ ದೇವಾಲಯವಿಲ್ಲ, ಕೇತಕಿ ಹೂವನ್ನು ಪೂಜೆಗೆ ಬಳಸುವುದಿಲ್ಲ. ಆ ಬಳಿಕ ಶಿವನ ಆ ಬೆಂಕಿಯ ಕಂಭದ ಹೃಸ್ವರೂಪವಾದ ಶಿವಲಿಂಗವನ್ನೇ ಶಿವನ ರೂಪವೆಂದು ತಿಳಿದು ಪೂಜಿಸಲು ಪ್ರಾರಂಭವಾಯಿತು. ಈ ಶಿವಲಿಂಗ ಶಕ್ತಿ, ಸತ್ಯ, ಆತ್ಮಾಭಿಮಾನ ಮತ್ತು ಗೌರವದ ಸಂಕೇತವಾಗಿದೆ. ಶಿವಲಿಂಗದ ಮಹತ್ವ

ಎರಡನೆಯ ಕಥೆ ಹೀಗಿದೆ
ಸಹಸ್ರಾರು ವರ್ಷಗಳ ಹಿಂದೆ ಶಿವನನ್ನು ಸಾಧುಗಳ ಗುಂಪೊಂದು ದಾರುಕವೆಂಬ ಅರಣ್ಯದಲ್ಲಿ ಅತ್ಯಧಿಕವಾಗಿ ಆರಾಧಿಸುತ್ತಿತ್ತು. ಇವರ ಭಕ್ತಿ ಮತ್ತು ನಂಬಿಕೆಗಳನ್ನು ಪರಿಶೀಲಿಸಲು ಒಮ್ಮೆ ಶಿವ ಓರ್ವ ಅವಧೂತ (ನಗ್ನ ಸನ್ಯಾಸಿ)ಯ ರೂಪ ಧರಿಸಿ ಸಾಧುಗಳ ಗುಂಪಿನ ಬಳಿ ಬಂದ. ಅವಧೂತನ ನಗ್ನರೂಪವನ್ನು ಕಂಡ ಸಾಧುಗಳ ಪತ್ನಿಯರಲ್ಲಿ ಕೆಲವರು ನಾಚಿಕೆಯಿಂದ ಕುಟೀರಗಳ ಒಳಗೋಡಿದರೆ ಅವಧೂತನ ಕಟ್ಟುಮಸ್ತಾದ ಶರೀರದಿಂದ ಮೋಹಗೊಂಡ ಕೆಲವರು ಆತನೆಡೆಗೆ ಧಾವಿಸಿದರು.

ಇದನ್ನು ಕಂಡ ಸಾಧುಗಳು ಕುಪಿತರಾಗಿ ಅವಧೂತನ ಪುರುಷಾಂಗ ಕಳಚಿ ಹೋಗಲಿ ಎಂದು ಶಾಪ ನೀಡಿದರು. ಅಂತೆಯೇ ಅವಧೂತನ ಶರೀರದಿಂದ ಬೇರ್ಪಟ್ಟ ಲಿಂಗ ಕೆಳಗೆ ಬೀಳುತ್ತಲೇ ಬೆಂಕಿ ಹತ್ತಿಕೊಂಡು ಶೀಘ್ರವೇ ತ್ರಿಲೋಕಗಳಲ್ಲಿ ಬೆಂಕಿಯನ್ನು ವ್ಯಾಪಿಸಿತು.

ಭೂಲೋಕ, ಪಾತಾಳ ಮತ್ತು ಸ್ವರ್ಗದಲ್ಲೆಲ್ಲಾ ಸಕಲವೂ ಬೆಂಕಿಯಿಂದ ಹೊತ್ತಿ ಉರಿಯಲು ಪ್ರಾರಂಭವಾಯಿತು. ಕೂಡಲೇ ಇದರಿಂದ ಪಾರಾಗಲು ಸಾಧುಗಳು ಮತ್ತು ಎಲ್ಲಾ ದೇವತೆಗಳು ಬ್ರಹ್ಮನಲ್ಲಿ ಪರಿಹಾರ ಕೇಳಲು ಹೋದರು. ಇವರ ಅಹವಾಲನ್ನು ಕೇಳಿಸಿಕೊಂಡ ಬ್ರಹ್ಮ ಅವಧೂತನ ರೂಪದಲ್ಲಿ ಯಾರೇ ಬಂದರೂ ಆತನನ್ನು ಅತಿಥಿಯ ರೂಪದಲ್ಲಿ ನೋಡಬೇಕಾದುದು ಅವಶ್ಯವಾಗಿದೆ. ಈಗ ಉಗ್ರರೂಪ ಪಡೆದಿರುವ ಶಿವನನ್ನು ಶಾಂತಗೊಳಿಸಲು ದೇವತೆಯಾದ ಪಾರ್ವತಿಯೇ ಶಕ್ತಳು. ಭಾರತದಲ್ಲಿರುವ 10 ಪ್ರಸಿದ್ಧ ಶಿವನ ದೇವಾಲಯಗಳು

ಆಕೆ ಲಿಂಗವನ್ನು ಹಿಡಿದಿಟ್ಟುಕೊಂಡು ವೈದಿಕ ಮಂತ್ರದಿಂದ ಪಾವನವಾದ ನೀರನ್ನು ಚಿಮುಕಿಸುವ ಮೂಲಕ ಈ ಅಗ್ನಿಯನ್ನು ಶಮನಗೊಳಿಸಬಹುದು ಎಂದು ತಿಳಿಸಿದ. ಲೋಕಕಲ್ಯಾಣಕ್ಕಾಗಿ ಬ್ರಹ್ಮನ ಸಲಹೆಯನ್ನು ಯಥಾವತ್ತಾಗಿ ಪಾಲಿಸಿದ ಪಾರ್ವತಿ ಲಿಂಗವನ್ನು ಬಂಧಿಸಿಟ್ಟುಕೊಂಡು ಲೋಕವನ್ನು ಕಾಪಾಡಿದಳು. ಆದ್ದರಿಂದಲೇ ಜಗತ್ತಿನಲ್ಲಿ ಜೀವದ ಉದಯಕ್ಕಾಗಿ ಪುರುಷ ಮತ್ತು ಪ್ರಕೃತಿಯ ಮಿಲನದ ಸಂಕೇತವಾಗಿ ಶಿವಲಿಂಗವನ್ನು ಆರಾಧಿಸಲಾಗುತ್ತದೆ.

English summary

The Story Behind The Shiva Linga

Shivalinga is the symbol of spirituality, belief, energy and the extent of infinity. As we know, each belief or event has story about it in many forms. Shiva, the lord of ultimate spirituality and satisfactions, he is the ultimate answers to all critical and unsolved questions that arouse out in this universe. Today let's learn about the story behind shivalinga in this article today.
Story first published: Wednesday, July 22, 2015, 12:05 [IST]
X
Desktop Bottom Promotion