For Quick Alerts
ALLOW NOTIFICATIONS  
For Daily Alerts

ದುರ್ಗಾ ಮಾತೆಯ ಒಂಬತ್ತು ಅವತಾರದ ವೈಶಿಷ್ಟ್ಯ

By manu
|

ಭಾರತದಲ್ಲಿರುವ ಅಸಂಖ್ಯಾತ ಸಂಸ್ಕೃತಿಗಳ ಕಾರಣ ವರ್ಷದ ಪ್ರತಿದಿನವೂ ಒಂದಲ್ಲಾ ಒಂದು ಹಬ್ಬ ಅಥವಾ ವಿಶೇಷವಿದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾದ ಹಬ್ಬಗಳು ಬಂತೆಂದರೆ ಇಡಿಯ ದೇಶದ ಚಿತ್ರಣವೇ ಬದಲಾಗುತ್ತದೆ. ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮೆರೆಯಲು ಹಿಂದೂ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಚಳಿಗಾಲದ ಆಗಮನದೊಡನೆಯೇ ಒಂದರ ಹಿಂದೊಂದು ಹಬ್ಬಗಳು ಸಾಲಾಗಿ ಬರುವುದರಿಂದ ಮನೆಯಿಂದ ದೂರವಿದ್ದವರು ತಮ್ಮ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿ ಎಲ್ಲರೊಡನೆ ಬೆರೆತು ಹಬ್ಬ ಆಚರಿಸುವ ಕಾರಣ ಪ್ರತಿ ಮನೆಯಲ್ಲಿ ಸಂಭ್ರಮ ಮತ್ತು ಸಂತೋಷ ತುಂಬಿ ತುಳುಕುತ್ತದೆ.

ದೀಪಾವಳಿ, ದಸರಾ, ಲಕ್ಷೀಪೂಜೆ ಮತ್ತು ನವರಾತ್ರಿ ಹಬ್ಬಗಳು ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಒಂಬತ್ತು ದಿನಗಳ ಕಾಲ ಆಚರಿಸಲ್ಪಡುವ ನವರಾತ್ರಿ ಎಲ್ಲಾ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಆದರೆ ಹಚ್ಚಿನವರಿಗೆ ಈ ಒಂಬತ್ತೂ ದಿನಗಳ ಮಹತ್ವ ಬೇರೆ ಬೇರೆ ಎಂದು ಗೊತ್ತಿರುವುದಿಲ್ಲ. ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ

ವಾಸ್ತವವಾಗಿ ನವರಾತ್ರಿಯನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮೊದಲನೆಯದು ಚೈತ್ರಮಾಸದಲ್ಲಿ (ಸುಮಾರು ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ) ಮತ್ತು ಎರಡನೆಯದಾಗಿ ಅಶ್ವಿನಿ ಮಾಸದಂದು (ಸೆಪ್ಟೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ) ಆಚರಿಸಲಾಗುತ್ತದೆ. ನವರಾತ್ರಿ ಹಬ್ಬ ದುರ್ಗಾಮಾತೆಗೆ ಮೀಸಲಾದ ಹಬ್ಬವಾಗಿದೆ. ಸಾಮಾನ್ಯವಾಗಿ ದುರ್ಗೆ ಎಂದರೆ ಹೆಚ್ಚಿನವರ ಮನಸ್ಸಿನಲ್ಲಿ ಆಕೆಯ ಉಗ್ರರೂಪವೇ ಪ್ರಮುಖವಾಗಿ ಪ್ರಕಟವಾಗುತ್ತದೆ. ಆದರೆ ಇದು ಆಕೆಯ ಒಂದು ರೂಪ ಮಾತ್ರವಾಗಿದ್ದು ಪುರಾಣಗಳಲ್ಲಿ ಒಂಬತ್ತು ರೂಪಗಳನ್ನು ಬಿಂಬಿಸಲಾಗಿದೆ. ದುರ್ಗಾ ಪೂಜೆ ಆಚರಣೆ; ಹಿನ್ನಲೆ, ಐತಿಹ್ಯವೇನು?

ಆಕೆಯ ಪ್ರತಿಯ ಒಂದು ರೂಪವನ್ನು ನವರಾತ್ರಿಯ ಒಂದೊಂದು ದಿನಕ್ಕಾಗಿ ಮೀಸಲಿಡಲಾಗಿದೆ. ಈ ಒಂಬತ್ತು ರೂಪಗಳನ್ನು ಧರಿಸಿದ ದುರ್ಗೆಗೆ ಪ್ರತಿ ರೂಪಕ್ಕೂ ಪ್ರತ್ಯೇಕವಾದ ಹೆಸರಿದ್ದು ಆ ಹೆಸರುಗಳ ಮೂಲಕವೇ ನವರಾತ್ರಿಯ ಒಂಬತ್ತೂ ದಿನಗಳನ್ನು ಆಚರಿಸಲಾಗುತ್ತದೆ. ಈ ಒಂಬತ್ತೂ ದಿನಗಳಲ್ಲಿ ದುರ್ಗಾಮಾತೆಯ ಆಯಾ ದಿನದ ರೂಪದಲ್ಲಿ ಸಿಂಗರಿಸಿ ಪೂಜಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಬನ್ನಿ, ನವರಾತ್ರಿಯ ಪ್ರತಿದಿನದ ಮಹತ್ವ ಏನು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ.... ನವರಾತ್ರಿ ಸ್ಪೆಷಲ್: ಘಮ್ಮೆನ್ನುವ ಪಾಲಕ್ ಪಲಾವ್

ನವರಾತ್ರಿಯ ಮೊದಲ ದಿನ

ನವರಾತ್ರಿಯ ಮೊದಲ ದಿನ

ಪ್ರಥಮ ದಿನದಂದು ದುರ್ಗಾಮಾತೆ 'ಶೈಲಪುತ್ರಿ'ಯ ರೂಪ ಧರಿಸುತ್ತಾಳೆ. ಶೈಲಪುತ್ರಿ ಎಂದರೆ ಹಿಮಾಲಯದ ಮಗಳು ಎಂಬ ಅರ್ಥ ಬರುತ್ತದೆ. ಇದು 'ಶಕ್ತಿ'ಯಾಗಿ ಶಿವನ ಸತಿಯಾಗಿರುವ ರೂಪವೂ ಆಗಿದೆ. ಪರ್ವತ ರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಈಕೆ ಶೈಲಪುತ್ರಿಯಾಗಿದ್ದಾಳೆ.

Image courtesy- Girish Gee

ನವರಾತ್ರಿಯ ಎರಡನೆಯ ದಿನ

ನವರಾತ್ರಿಯ ಎರಡನೆಯ ದಿನ

ಎರಡನೆಯ ದಿನದಂದು ದುರ್ಗಾಮಾತೆ 'ಬ್ರಹ್ಮಚಾರಿಣಿ'ಯ ರೂಪ ಧರಿಸುತ್ತಾಳೆ. ಈ ಹೆಸರು ಬ್ರಹ್ಮ ನಿಂದ ಬಂದಿದ್ದಾಗಿದೆ. ತನ್ನ ತಪ್ಪಿಗಾಗಿ ಪ್ರಾಯಶ್ಚಿತ ಪಡುವ ಈ ರೂಪ ಶಿವನ ಸತಿಯಾದ ಪಾರ್ವತಿ (ಅಥವಾ ಶಕ್ತಿ)ಯ ಇನ್ನೊಂದು ರೂಪವೂ ಆಗಿದೆ. ಇವಳ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತದೆ.

Image courtesy- Girish Gee

ನವರಾತ್ರಿಯ ಮೂರನೆಯ ದಿನ

ನವರಾತ್ರಿಯ ಮೂರನೆಯ ದಿನ

ಮೂರನೆಯ ದಿನದಂದು ದುರ್ಗಾಮಾತೆ "ಚಂದ್ರಘಂಟಾ" ರೂಪವನ್ನು ಧರಿಸುತ್ತಾಳೆ. ಈ ರೂಪ ಸೌಂದರ್ಯ ಮತ್ತು ಧೈರ್ಯವನ್ನು ಬಿಂಬಿಸುತ್ತದೆ. ಇವಳ ಸ್ವರೂಪ ಪರಮ ಶಾಂತಿದಾಯಕ ಹಾಗೂ ಶ್ರೇಯಸ್ಕರ. ದಶಹಸ್ತಗಳುಳ್ಳ ದೇವಿಯು ಶಸ್ತ್ರ ಸಜ್ಜಿತಳಾಗಿ, ಯುದ್ಧ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ.

ನವರಾತ್ರಿಯ ನಾಲ್ಕನೆಯ ದಿನ

ನವರಾತ್ರಿಯ ನಾಲ್ಕನೆಯ ದಿನ

ನಾಲ್ಕನೆಯ ದಿನ ದುರ್ಗಾಮಾತ್ರೆ 'ಕೂಷ್ಮಾಂಡ' ಅಥವಾ ಅಷ್ಟಭುಜಾದೇವಿಯ ರೂಪ ಧರಿಸುತ್ತಾಳೆ. ಪುರಾಣಗಳ ಪ್ರಕಾರ ತನ್ನ ಕಿಲ ಕಿಲ ನಗೆಯಿಂದಲೇ ಈಕೆ ವಿಶ್ವವನ್ನು ನಿರ್ಮಿಸಿದ ಕಾರಣ ವಿಶ್ವದ ಸೃಷ್ಟಿಕರ್ತನ ರೂಪದಲ್ಲಿ ಆರಾಧಿಸಲಾಗುತ್ತದೆ. ಈ ದಿನ ಆಕೆಗೆ ಪ್ರಿಯವಾದ ಬೂದುಗುಂಬಳಕ್ಕೆ ಹೆಚ್ಚಿನ ಮಹತ್ವವಿದೆ. ಆಕೆ ತನ್ನ ಎಂಟು ಕೈಗಳಲ್ಲಿ ಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದ್ದಾಳೆ.

Image courtesy -Girish Gee

ನವರಾತ್ರಿಯ ಐದನೆಯ ದಿನ

ನವರಾತ್ರಿಯ ಐದನೆಯ ದಿನ

ಈ ದಿನ ದುರ್ಗಾಮಾತೆಯು ನಾಲ್ಕು ಕೈಗಳ, ಸಿಂಹದ ಮೇಲೆ ಕುಳಿತಿರುವ 'ಸ್ಕಂದ ಮಾತಾ' ರೂಪವನ್ನು ಪಡೆಯುತ್ತಾಳೆ. ದೇವತೆಗಳ ಸೈನ್ಯದ ಸೇನಾಪತಿಯಾಗಿರುವ ಷಣ್ಮುಖ ಸ್ಕಂದನ ತಾಯಿಯಾಗಿರುವ ಕಾರಣ ಈ ಹೆಸರು ಬಂದಿದೆ.

Image courtesy- Girish Gee

ನವರಾತ್ರಿಯ ಆರನೆಯ ದಿನ

ನವರಾತ್ರಿಯ ಆರನೆಯ ದಿನ

ಆರನೆಯ ದಿನದಂದು ದುರ್ಗೆಯು 'ಕಾತ್ಯಾಯನಿ' ಯ ರೂಪ ಧರಿಸುತ್ತಾಳೆ. ನಾಲ್ಕು ಭುಜಗಳುಳ್ಳ ದುರ್ಗೆ ಇಂದೂ ಸಿಂಹದ ಮೇಲೆ ಕುಳಿತಿದ್ದು ಆಕೆಯ ವರ್ಣ ಬಂಗಾರದ್ದಾಗಿರುತ್ತದೆ. ಮುಖದಲ್ಲಿ ಮಂದಹಾಸವಿದ್ದು ಮೂರು ಕಣ್ಣುಗಳಿವೆ. ಎಡಬದಿಯ ಎರಡು ಕೈಗಳಲ್ಲಿ ಕಮಲ ಮತ್ತು ಖಡ್ಗ ಹಿಡಿದಿದ್ದು ಬಲ ಎರಡೂ ಕೈಗಳು ಅಭಯವನ್ನು ಸೂಚಿಸುತ್ತವೆ.

ನವರಾತ್ರಿಯ ಏಳನೆಯ ದಿನ

ನವರಾತ್ರಿಯ ಏಳನೆಯ ದಿನ

ಈ ದಿನ ದುರ್ಗೆಯು ತನ್ನ ಉಗ್ರರೂಪವಾದ 'ಕಾಲರಾತ್ರಿ' ಯ ರೂಪವನ್ನು ಧರಿಸುತ್ತಾಳೆ. ಅತ್ಯಂತ ಭಯಂಕರವಾದ ಸ್ವರೂಪವುಳ್ಳವಳಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭ ಫಲವನ್ನೇ ಕರುಣಿಸುತ್ತಾಳೆ. ಆದ್ದರಿಂದಲೇ ಇವಳನ್ನು ಶುಭಂಕರೀ ಎಂದೂ ಕರೆಯುತ್ತಾರೆ. ಈ ರೂಪದಲ್ಲಿ ಆಕೆಯ ಬಣ್ಣ ಕಪ್ಪಾಗಿದ್ದು ಕೆದರಿದ ನೀಳವಾದ ಕೂದಲು, ಹೊರಬಂದ ನಾಲಿಗೆ, ನಾಲ್ಕು ಕೈಗಳಲ್ಲಿ ಬಲಗೈಯಲ್ಲಿ ಕಸಾಯಿ ಕತ್ತಿ ಮತ್ತು ದೀಪವನ್ನು ಹಿಡಿದಿದ್ದರೆ ಎಡಗೈಗಳು ಮುದ್ರೆಯ ರೂಪದಲ್ಲಿದ್ದು ಅಭಯವನ್ನು ಸೂಚಿಸುತ್ತವೆ. ಈ ರೂಪದಲ್ಲಿ ಆಕೆ ನಿಧಾನಗತಿಯ ಕತ್ತೆಯ ಮೇಲೆ ಆಸೀನಳಾಗಿದ್ದಾಳೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆಯನ್ನು ಧರಿಸಿದ್ದಾಳೆ. ಮೂರೂ ಕಣ್ಣುಗಳು ತೆರೆದಿದ್ದು ಪ್ರಖರವಾಗಿವೆ.

ನವರಾತ್ರಿಯ ಎಂಟನೆಯ ದಿನ

ನವರಾತ್ರಿಯ ಎಂಟನೆಯ ದಿನ

ಎಂಟನೆಯ ದಿನದಂದು ದುರ್ಗಾಮಾತೆ 'ಮಹಾಗೌರಿ'ಯ ರೂಪ ಧರಿಸುತ್ತಾಳೆ. ಇದು ಆಕೆಯು ಅತ್ಯಂತ ಸೌಂದರ್ಯವತಿಯಾಗಿರುವ ರೂಪವಾಗಿದೆ. ಆಕೆಯ ಬಣ್ಣ ಹಿಮದಷ್ಟು ಬೆಳ್ಳಗಾಗಿದ್ದು ಬಿಳಿಯ ಅಥವಾ ಹಸಿರು ಸೀರೆಯುಟ್ಟು ಎತ್ತಿನ ಮೇಲೆ ಆಸೀನಳಾಗಿದ್ದಾಳೆ. ನಾಲ್ಕು ಕೈ ಮತ್ತು ಮೂರು ಕಣ್ಣುಗಳಿರುವ ಈಕೆಯ ರೂಪದಲ್ಲಿ ಶಾಂತಿ ಮತ್ತು ಜ್ಞಾನವನ್ನು ಕಂಡುಕೊಳ್ಳಲಾಗುತ್ತದೆ. ಎಡಕೈಗಳಲ್ಲಿ ಡಮರುಗ ಮತ್ತು ವರದಮುದ್ರೆ ಇದ್ದರೆ ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ, ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ. ಇವಳ ಆರಾಧನೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿದೆ

ನವರಾತ್ರಿಯ ಒಂಬತ್ತನೆಯ ದಿನ

ನವರಾತ್ರಿಯ ಒಂಬತ್ತನೆಯ ದಿನ

ಈ ದಿನ ದುರ್ಗೆಯನ್ನು 'ಸಿದ್ಧಿದಾತ್ರಿ' ರೂಪದಲ್ಲಿ ಪೂಜಿಸಲಾಗುತ್ತದೆ. ಸಾಧಕರಿಗೆ ಎಲ್ಲ ರೀತಿಯ ಸಿದ್ಧಿಗಳನ್ನೂ ಕರುಣಿಸುವವಳಾದ್ದರಿಂದ ಈ ಹೆಸರು ಬಂದಿದೆ. ಮಾರ್ಕಂಡೇಯ ಪುರಾಣದಲ್ಲಿ ತಿಳಿಸಿರುವಂತೆ ಅಷ್ಟ ಸಿದ್ಧಿಗಳಾದ `ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಹಾಗೂ ವಶಿತ್ವ ಮುಂತಾದ ಎಲ್ಲಾ ಸಿದ್ಧಿಗಳನ್ನೂ ದಯಪಾಲಿಸುವವಳಾಗಿದ್ದಾಳೆ. ಸಿದ್ಧಿದಾತ್ರಿಗೆ ನಾಲ್ಕು ಕೈಗಳಿವೆ. ಕಮಲ ಪುಷ್ಪದ ಮೇಲೆ ಕುಳಿತಿದ್ದು. ಚಕ್ರ, ಶಂಖ, ಗದೆ ಹಾಗೂ ಕಮಲ ಪುಷ್ಪವನ್ನು ಕೈಗಳಲ್ಲಿ ಹಿಡಿದಿದ್ದಾಳೆ. ಈ ದಿನ ಆಕೆಯನ್ನು ದೇವ, ಗಾಂದರ್ವ, ಅಸುರ, ಯಕ್ಷ ಮತ್ತು ಸಿದ್ಧಿಯೋಗಿಗಳೂ ಪೂಜಿಸುತ್ತಾರೆ. ಈ ರೂಪದಲ್ಲಿ ಆಕೆ ಕೇವಲ ಕೆಂಪು ಬಣ್ಣದ ಸೀರೆಯುಟ್ಟುಕೊಳ್ಳುವುದು ವಿಶೇಷವಾಗಿದೆ.

Girish Gee

ನವರಾತ್ರಿಯ ಒಂಬತ್ತನೆಯ ದಿನ

ನವರಾತ್ರಿಯ ಒಂಬತ್ತನೆಯ ದಿನ

ಸಾಮಾನ್ಯವಾಗಿ ನವರಾತ್ರಿಯ ಪ್ರಥಮ ಆರು ದಿನಗಳಂದು ಆಯಾ ಮನೆಗಳಲ್ಲಿ ಪ್ರತ್ಯೇಕವಾಗಿ ಆಚರಿಸಲಾಗುತ್ತದೆ. ಆದರೆ ಏಳನೆಯ ದಿನದಿಂದ ಒಂಬತ್ತನೆಯ ದಿನದವರೆಗೆ ಮೂರು ದಿನಗಳ ಕಾಲ ಈ ಉತ್ಸವ ಸಾರ್ವಜನಿಕವಾಗುತ್ತದೆ. ಇದು ಊರಿನ ಹಬ್ಬವಾಗಿದ್ದು ಇಡಿಯ ಊರೇ ಈ ಮೂರೂ ದಿನಗಳಂದು ಸಂಭ್ರಮದಲ್ಲಿ ಮುಳುಗುತ್ತದೆ. ಇದರ ಮರುದಿನ, ಅಂದರೆ ಹತ್ತನೆಯ ದಿನವೇ ವಿಜಯದಶಮಿ ಅಥವಾ ದಸರಾ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ದಸರಾ ಹಬ್ಬವನ್ನು ಕರ್ನಾಟಕ ಸರ್ಕಾರವೇ ಸಾರ್ವಜನಿಕ ಹಬ್ಬದ ರೂಪದಲ್ಲಿ ಆಚರಿಸಿಕೊಂಡು ಬರುತ್ತಿದೆ.

English summary

Significance Of Each Day In Navratri

India is a nation which boasts of celebrations and festivals throughout the year. Hindu festivals fortify the rich culture and history of this country. There is a proper reason, meaning and significance behind each Hindu festival. Navratri happens to be one of the most significant Hindu festivals of India. Navratri is rejoiced for 9 days and it is believed that there is a significance of each day in navratri.
X
Desktop Bottom Promotion