For Quick Alerts
ALLOW NOTIFICATIONS  
For Daily Alerts

ಇಂದು ಭೂಮಿ ಹುಣ್ಣಿಮೆ: ಆ ಆಚರಣೆಯ ವೈಶಿಷ್ಟ್ಯತೆ ಏನು?

|

ನಾವು ಆಚರಿಸುವ ಅನೇಕ ಹಬ್ಬಗಳಿಗೆ ಭೂಮಿ ತಾಯಿ ಜೊತೆ ಸಂಬಂಧವಿರುತ್ತದೆ. ಬಹುತೇಕ ಹಬ್ಬಗಳಲ್ಲಿ ಒಂದಲ್ಲಾ ಒಂದು ವಿಧಾನದಲ್ಲಿ ಭೂಮಿಗೆ ಪೂಜೆ ಸಲ್ಲಿಸುತ್ತೇವೆ. ಅದೇ ರೀತಿ ಇಂದು ಅಂದ್ರೆ ಅಕ್ಟೋಬರ್ 20ರಂದು ಮಲ್ನಾಡ್ ಕಡೆ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ.

ಈ ಹಬ್ಬವನ್ನು ರಾಜರ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಮಲ್ನಾಡ್‌ನ ಗ್ರಾಮಗಳಲ್ಲಿ ಈ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಲಾಗುವುದು. ಈ ದಿನ ಗರ್ಭಿಣಿ ಮಹಿಳೆಗೆ ಸೀಮಂತ ಶಾಸ್ತ್ರ ಮಾಡುವಂತೆಯೇ ಭೂಮಿ ತಾಯಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಈ ಹಬ್ಬದ ವೈಶಿಷ್ಟ್ಯವೇನು, ಆಚರಣೆ ಹೇಗೆ ಎಂದು ನೋಡೋಣ ಬನ್ನಿ:

ಭೂ ತಾಯಿಗೆ ಪೂಜೆ

ಭೂ ತಾಯಿಗೆ ಪೂಜೆ

ಗರ್ಭಿಣಿಯರಿಗೆ ಸೀಮಂತ ಮಾಡುವಂತೆಯೇ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುವುದು. ಈ ಹಬ್ಬದಲ್ಲಿ ಭೂಮಿ ತಾಯಿಗೆ ಪೂಜೆ ಮಾಡಲು ತಿನಿಸುಗಳು ಹಾಗೂ ಹೊಲದಲ್ಲಿ ಬೆಳೆದ ಬುಟ್ಟಿಯನ್ನು ತುಂಬಿ ತೆಗೆದುಕೊಂಡು ಹೋಗಲಾಗುವುದು. ಈ ಬುಟ್ಟಿಗಳನ್ನು ಮಹಿಳೆಯರು ಕೆಲವು ವಾರಗಳಿಗೆ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿರುತ್ತಾರೆ.

ಬುಟ್ಟಿಗೆ ಸೆಗಣಿ, ಕೆಮ್ಮಣ್ಣು ಹಚ್ಚಿ ಒಣಗಿಸಲಾಗುವುದು. ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುವುದು.

ನಂತರ ಹಬ್ಬದ ಹಿಂದಿನ ದಿನವೇ ಬುಟ್ಟಿಗೆ ಹೊಲದಲ್ಲಿ ಬೆಳೆದ ತರಕಾರಿಗಳನ್ನು ತುಂಬಲಾಗುವುದು. ಕೆಲವೊಂದು ಬಗೆಯ ಸಿಹಿ ತಿನಿಸುಗಳನ್ನು ಕೂಡ ತಯಾರಿಸಲಾಗುವುದು.

ತಾಳಿಸರವನ್ನೇ ಬಿಚ್ಚಿ ತೋರಣವಾಗಿ ಕಟ್ಟಿ ಪೂಜೆ

ತಾಳಿಸರವನ್ನೇ ಬಿಚ್ಚಿ ತೋರಣವಾಗಿ ಕಟ್ಟಿ ಪೂಜೆ

ಅಡುಗೆಯನ್ನು ಬುಟ್ಟಿಯಲ್ಲಿ ತುಂಬಾ ಕುಟುಂಬದ ಸದಸ್ಯರೆಲ್ಲರೂ ಜಮೀನಿಗೆ ಹೋಗಿ, ಮುತ್ತೈದೆಯರು ತಮ್ಮ ತಾಳಿಯನ್ನು ಬಿಚ್ಚಿ ಭತ್ತಕ್ಕೆ ಕಟ್ಟಿ ಪೂಜೆಯನ್ನು ಮಾಡುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ತಾಳಿಯನ್ನು ದೇವರ ಸಮಾನವಾಗಿ ಪೂಜಿಸಲಾಗುತ್ತದೆ. ತುಂಬಾ ಸಂಪ್ರದಾಯಸ್ಥ ಹೆಣ್ಮಕ್ಕಳು ಯಾವುದೇ ಕಾರಣಕ್ಕೆ ಕುತ್ತಿಗೆಯಿಂದ ತಾಳಿಯನ್ನು ಬಿಚ್ಚುವುದಿಲ್ಲ, ಆದರೆ ಈ ಸಂದರ್ಭದಲ್ಲಿ ತಮ್ಮ ತಾಳಿಯಿಂದಲೇ ಭೂ ತಾಯಿಗೆ ಅಲಂಕರಿಸಿ ಪೂಜೆ ಮಾಡುವುದೇ ವಿಶೇಷತೆ.

ಈ ದಿನ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಗಿಡದ ಮಂಟಪ ಮಾಡಿ, ಮಾವಿನೆಲೆಯ ತೋರಣ ಕಟ್ಟಿ ದೇವರಿಗೆ ಪೂಜೆ ಮಾಡಲಾಗುವುದು. ಭೂ ತಾಯಿಗೆ ಬಗೆ-ಬಗೆಯ ತಿಂಡಿಗಳನ್ನು ಅರ್ಪಿಸಿ, ಬಾಗಿನ ನೀಡಿ ನಮ್ಮನ್ನು ಹರಿಸುವಂತೆ ಪ್ರಾರ್ಥಿಸಲಾಗುವುದು. ಹೋಳಿಗೆ, ಸಜ್ಜೆರೊಟ್ಟಿ, ಶೇಂಗಾ ಉಂಡೆ ಮುಂತಾದ ವಿಶೇಷ ಖಾದ್ಯಗಳನ್ನು ಈ ಹಬ್ಬದಲ್ಲಿ ತಯಾರಿಸಲಾಗುವುದು.

ಕಾಗೆ, ಇಲಿಗಳಿಗೆ ಆಹಾರ ನೀಡಲಾಗುವುದು

ಪೈರಿಗೆ ಪೂಜೆ ಸಲ್ಲಿಸಿದ ಬಳಿಕ ಆಹಾರದ ಎಡೆಯನ್ನು ಕಾಗೆಗೆ ನೀಡಲಾಗುವುದು. ಸ್ವರ್ಗಸ್ಥರಾದ ಹಿರಿಯರು ಕಾಗೆಯ ರೂಪದಲ್ಲಿ ಬಂದು ತಿಂದು ನಮ್ಮನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆ.

ಇಲಿಗೂ ಆಹಾರವನ್ನು ಇಡಲಾಗುವುದು. ಬೆಳೆದ ಬೆಳೆಗಳನ್ನು ಇಲಿಗಳು ನಾಶ ಮಾಡುವುದು,ಈ ದಿನ ಇಲಿಗೂ ಎಡೆ ಇಟ್ಟು ನಮಗೆ ತೊಂದರೆ ಕೊಡಬೇಡಪ್ಪಾ ಎಂದು ಬೇಡಲಾಗುವುದು.

ಮನೆ ಮಂದಿಯೆಲ್ಲಾ ಕುಳಿತು ಹಬ್ಬದ ಅಡುಗೆ ಸವಿಯಲಾಗುವುದು

ಮನೆ ಮಂದಿಯೆಲ್ಲಾ ಕುಳಿತು ಹಬ್ಬದ ಅಡುಗೆ ಸವಿಯಲಾಗುವುದು

ಭೂಮಿ ಹುಣ್ಣಿಮೆಯಂದು ಭೂ ತಾಯಿಗೆ ಪೂಜೆ ಸಲ್ಲಿಸಿ ನಂತರ ತಂದ ಹಬ್ಬದ ಅಡುಗೆಯನ್ನು ಮನೆಮಂದಿಯೆಲ್ಲಾ ಕೂತು ಸಂತೋಷದಿಂದ ಸವಿಯಲಾಗುವುದು. ಈ ಆಚರಣೆ ನಿಸರ್ಗಕ್ಕೆ ಹತ್ತಿರವಾಗಿದ್ದು, ಈ ಹಬ್ಬ ನಿಸರ್ಗದಲ್ಲಿ ದೇವರನ್ನು ಕಾಣುವ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.

English summary

Bhoomi Hunnime 2021: Date, History, Rituals, Significance and Why we celebrate

karnataka Farming community in Malnad region celebrated Bhoomi Hunnime. The festival is celebrated by the natives of the region, to worship mother earth. Read on to know Bhoomi Hunnime History, Rituals and Significance in Kannada.
Story first published: Wednesday, October 20, 2021, 12:00 [IST]
X
Desktop Bottom Promotion