For Quick Alerts
ALLOW NOTIFICATIONS  
For Daily Alerts

2019 ಆಷಾಢ ಮಾಸದ ಮಹತ್ವ ಹಾಗೂ ನೀವು ತಿಳಿಯಲೇಬೇಕಾದ ಸಂಗತಿಗಳು

|

ಆಷಾಢ ಮಾಸ ಎಂದಾಕ್ಷಣ ಬಹುತೇಕ ಜನರ ಮನಸ್ಸಿನಲ್ಲಿ ಹಾಗೂ ನಂಬಿಕೆಯಲ್ಲಿ ಅಶುಭ ಹಾಗೂ ಶೂನ್ಯ ಎನ್ನುವ ಭಾವವಿದೆ. ಆಷಾಢ ಮಾಸವನ್ನು ಸಾಮಾನ್ಯವಾಗಿ ಶೂನ್ಯ ಮಾಸ ಎಂದು ಪರಿಗಣಿಸುತ್ತಾರೆ. ಏಕೆಂದರೆ ಈ ಮಾಸದಲ್ಲಿ ಮಳೆಯು ವಿಪರೀತವಾಗಿರುತ್ತದೆ. ಮನುಕುಲಕ್ಕೆ ಯಾವುದೇ ವಿವಾಹ ಕಾರ್ಯ ಅಥವಾ ಶುಭ ಸಮಾರಂಭ ಕೈಗೊಳ್ಳಲು ಅನಾನುಕೂಲ ಸೃಷ್ಟಿಯಾಗುವುದು ಎನ್ನುವ ಉದ್ದೇಶದಿಂದ ಅಷ್ಟೆ. ಆದರೆ ಈ ಕಾಲವು ದೇವಾನು ದೇವತೆಗಳಿಗೆ ಅತ್ಯಂತ ಶುಭ ಸಮಯ. ದೇವರ ಪ್ರಾರ್ಥನೆ, ವ್ರತ ಹಾಗೂ ಜಪ-ತಪಗಳನ್ನು ಕೈಗೊಳ್ಳಲು ಯೋಗ್ಯವಾದ ತಿಂಗಳು ಎಂದು ಪರಿಗಣಿಸಲಾಗುವುದು.

ಆಷಾಢ ಮಾಸದಲ್ಲಿ ಸಾಕಷ್ಟು ದೇವತೆಗಳು ತಮ್ಮ ಒಳಿತನ್ನು ಕಂಡುಕೊಂಡರು ಎನ್ನಲಾಗುವುದು. ಆಷಾಢ ಅತ್ಯಂತ ಪವಿತ್ರ ಹಾಗೂ ಮಹತ್ವವಾದ ಮಾಸ. ಈ ತಿಂಗಳಲ್ಲಿ ಬಹಳಷ್ಟು ಉತ್ತಮ ಸಂಗತಿಗಳು ಸಂಭವಿಸಿದವು ಎಂದು ಪುರಾಣ ಇತಿಹಾಸಗಳು ಸಾರುತ್ತವೆ. ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಈ ಮಾಸದಲ್ಲೇ. ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು , ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದು. ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು, ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢ ಮಾಸದಲ್ಲೇ. ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು.ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಈ ಆಚರಣೆ ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು. ಇಲ್ಲಿಯ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸುವರು.

Ashada Masam-things

ಚೈತ್ರದಿಂದ ಆರಂಭವಾಗುವ ಹನ್ನೆರಡು ಚಾಂದ್ರಮಾನ ತಿಂಗಳುಗಳ ಪೈಕಿ ಐದನೇ ಮಾಸ. ಇದರಲ್ಲಿ ಸಂಭವಿಸುವ ಹುಣ್ಣಿಮೆಯೊಡನೆ ಪೂರ್ವಾಷಾಢಾ ಅಥವಾ ಉತ್ತರಾಷಾಢಾ ನಕ್ಷತ್ರ ಕೂಡುವುದರಿಂದ ಈ ಹೆಸರು ಬಂದಿದೆ. ಸೂರ್ಯ ಮಿಥುನರಾಶಿಯಲ್ಲಿರುವಾಗ ಆಷಾಢ ಪ್ರಾರಂಭವಾಗಿ ಕರ್ಕಾಟಕರಾಶಿಯಲ್ಲಿರುವಾಗ ಮುಗಿಯುತ್ತದೆ.

ಹಲವು ವರ್ಷಗಳಿಗೊಮ್ಮೆ ಸೂರ್ಯ ಮಿಥುನರಾಶಿಯಲ್ಲಿರುವಾಗಲೇ ಮಾಸಮಧ್ಯದಲ್ಲಿ ಸೂರ್ಯಸಂಕ್ರಮಣವಿಲ್ಲದ ಚಾಂದ್ರಮಾಸ ಬರುತ್ತದೆ. ಆ ತಿಂಗಳಿಗೆ ಅಧಿಕಾಷಾಢವೆಂದು ಹೆಸರು. ಇದು ಚೈತ್ರಾದಿ ಮಾಸಗಣನೆಯಲ್ಲಿ ಐದನೆಯದಾಗುತ್ತದೆ. ಮುಂದಿನ ತಿಂಗಳೇ ನಿಜವಾದ ಆಷಾಢ.

ಅಧಿಕಾಷಾಢದಲ್ಲಿ ನಿತ್ಯವಿಧಿಗಳನ್ನು ಬಿಟ್ಟು ಯಾವ ವಿಶೇಷ ಕಾರ್ಯಗಳನ್ನೂ ಮಾಡಕೂಡದು. ವಿಶೇಷವಾಗಿ ಈ ಮಾಸಕ್ಕೆಂದೇ ವಿಹಿತವಾದ ವ್ರತಾದಿಗಳನ್ನು ನಿಜಾಷಾಢ ಮಾಸದಲ್ಲೇ ಮಾಡಬೇಕು. ಆಷಾಢದಲ್ಲಿ ಕರ್ಕಾಟಕರಾಶಿಯಲ್ಲಿ ಸೂರ್ಯನಿರುವ ಕಾಲವನ್ನು ಶೂನ್ಯಮಾಸವೆಂದು ಪರಿಗಣಿಸುತ್ತಾರೆ. ಈ ತಿಂಗಳಿನ ಶುಕ್ಲಪಕ್ಷದ ಏಕಾದಶಿಯಂದು ದಕ್ಷಿಣಾಯನ ಪ್ರಾರಂಭದ ಕುರುಹಾಗಿ ದೇವಾಲಯಗಳಲ್ಲಿ ಭಗವಂತನಿಗೆ ಡೋಲೋತ್ಸವ ನಡೆಯುತ್ತದೆ. ದಿನಿಂದ ಚಾತುರ್ಮಾಸ್ಯವ್ರತ ಪ್ರಾರಂಭವಾಗುವುದು.

ಆಷಾಢ ಮಾಸದಲ್ಲಿ ಕೆಲವು ವಿಶೇಷ ವ್ರತ ಹಾಗೂ ಪೂಜೆಗಳನ್ನು ಕೈಗೊಳ್ಳಲಾಗುವುದು. ಅವುಗಳು ಅತ್ಯಂತ ಮಹತ್ವ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿವೆ. ದೇವರ ಈ ಶುಭ ಕಾರ್ಯವನ್ನು ಕೈಗೊಳ್ಳುವುದರಿಂದ ಅನೇಕ ಉತ್ತಮ ಫಲಗಳು ದೊರೆಯುತ್ತವೆ. ಜೀವನವೂ ಸುಂದರವಾಗಿರುತ್ತದೆ ಎಂದು ಹೇಳಲಾಗುವುದು. ಈ ಮಾಸದಲ್ಲೇ ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ.
ಇಂದ್ರನು ಗೌತಮರಿಂದ ಸಹಸ್ರಾಕ್ಷನಾಗು ಎಂಬ ಶಾಪ ಪಡೆದ, ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ 'ಸೋಮೇಶ್ವರ ಜಯಂತಿ' ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.

ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ 'ಜ್ಯೋತಿರ್ಭೀಮೇಶ್ವರ ವ್ರತ'ವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆ ದಿನ 'ಗುರು ಪೂರ್ಣಿಮೆ'ಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.

ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು 'ಅಮೃತ ಲಕ್ಷ್ಮೀ ವ್ರತ'ವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ 'ಚಾಮುಂಡೇಶ್ವರಿ ದೇವಿಯ ಜನ್ಮ ದಿನ' ಬರುವುದು ಈ ಮಾಸದಲ್ಲೇ.

ಹಿಂದೂ ಶಾಸ್ತ್ರ ಹಾಗೂ ಪುರಾಣ ಇತಿಹಾಸಗಳ ಪ್ರಕಾರ ಆಷಾಢ ಮಾಸವು ದೇವಾನು-ದೇವತೆಗಳಿಗೆ ಪ್ರಸಿದ್ಧವಾದ ತಿಂಗಳು. ಆ ಮಾಸದಲ್ಲಿ ಜನರು ತಮ್ಮ ಶುಭ ಕಾರ್ಯಗಳನ್ನು ಕೈಗೊಳ್ಳಬಾರದು. ಬದಲಿಗೆ ದೇವರ ಆರಾಧನೆಗೆ ಮೀಸಲಾಗಿ ಇಡಬೇಕು ಎಂದು ಹೇಳುತ್ತದೆ. ಈ ಮಾಸದಲ್ಲಿ ದೇವರ ಆರಾಧನೆ ಮಾಡದೆ ಹೋದರೆ ಪುಣ್ಯ ಪ್ರಾಪ್ತಿಯಾಗದು. ಜೊತೆಗೆ ಜೀವನದಲ್ಲಿ ಸಾಕಷ್ಟು ಕಷ್ಟ-ನಷ್ಟಗಳು ಸಂಭವಿಸುತ್ತವೆ. ಅದರಿಂದ ನಮ್ಮ ಮಾನಸಿಕ ನೆಮ್ಮದಿ ಹಾಗೂ ಮನೆಯಲ್ಲಿ ಸಂತೋಷವು ದೂರವಾಗುವುದು ಎನ್ನುವ ನಂಬಿಕೆಯಿದೆ. ಇದಕ್ಕೆ ಕೆಲವು ವಾಸ್ತವಿಕ ಉದಾಹರಣೆಗಳು ಅಥವಾ ವಿಚಾರಗಳು ಕೆಲವೊಂದಿಷ್ಟು ಇವೆ. ಅವುಗಳ ಬಗ್ಗೆ ತಿಳಿಯಲು ಮುಂದಿನ ವಿವರಣೆ ಪರಿಶೀಲಿಸಿ.

ಮಹಿಳೆ ಗರ್ಭಧರಿಸಿದರೆ

ಮಹಿಳೆ ಆಷಾಢದ ಸಮಯದಲ್ಲಿ ಗರ್ಭಧರಿಸಿದರೆ, ಅವಳು ಬೇಸಿಗೆಯಲ್ಲಿರುವ ಚೈತ್ರ ತಿಂಗಳಲ್ಲಿ ಜನ್ಮ ನೀಡುತ್ತಾಳೆ. ಬೇಸಿಗೆಯ ಕಾರಣದಿಂದಾಗಿ ಅವಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು. ಅತಿಯಾದ ಬಿಸಿಲ ಉರಿ ನವಜಾತ ಮಗುವಿಗೆ ಹಾಗೂ ತಾಯಿಯ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಉಂಟುಮಾಡುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಈ ಸಮಯದಲ್ಲಿ ಪತಿ-ಪತ್ನಿ ಪರಸ್ಪರ ದೂರವಿದ್ದರೆ ಒಳ್ಳೆಯದು. ಜೊತೆಗೆ ದೇವರ ಆರಾಧನೆ ಕೈಗೊಂಡರೆ ಉತ್ತಮ ಫಲ ದೊರೆಯುವುದು ಎನ್ನುವ ನಂಬಿಕೆಯನ್ನು ನಂಬಿದರು.

ಅತ್ತೆ-ಸೊಸೆ ದೂರ ಉಳಿಯುವುದು

ವಿವಾಹಿತ ಮಹಿಳೆ ಆಷಾಢ ಮಾಸದಲ್ಲಿ ತವರು ಮನೆಗೆ ಬರುತ್ತಾಳೆ. ಇದಕ್ಕೆ ಕಾರಣ ಪತಿ-ಪತ್ನಿ ಪರಸ್ಪರ ದೂರ ಉಳಿಯಬೇಕು ಎನ್ನುವ ಕಾರಣ. ಅದೇ ರೀತಿ ಅತ್ತೆ ಸೊಸೆಯು ಸಹ ಪರಸ್ಪರ ದೂರ ಉಳಿಯಬೇಕು. ಈ ಸಮಯದಲ್ಲಿ ಇಬ್ಬರ ನಡುವೆ ವೈಮನಸ್ಸು ಹೆಚ್ಚಾಗಬಹುದು, ಅವಮಾನ, ಪ್ರತಿಷ್ಠೆಗಳ ವಿಚಾರವಾಗಿ ಜಗಳ ಉದ್ಭ ಆಗಬಹುದು ಎನ್ನುವ ಕಾರಣಕ್ಕೆ ಪತಿಯಿಂದ ದೂರ ಉಳಿಯುವ ಸೊಸೆಯು ಅತ್ತೆಯ ಬಳಿಯು ಇರಬಾರದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

ಮಹಿಳೆಯರು ಮದರಂಗಿ ಹಚ್ಚಿಕೊಳ್ಳುವುದು

ಹುಡುಗಿಯರು ಮತ್ತು ಮಹಿಳೆಯರು ತಮ್ಮ ಅಂಗೈ ಮತ್ತು ಕಾಲುಗಳಿಗೆ ಮೆಹಂದಿ ಹಚ್ಚುತ್ತಾರೆ. ಸುಂದರ ಡಿಸೈನರ್ ಮೆಹಂದಿಗಳು ಮಹಿಳೆಯರನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಆಷಾಢ ಮಾಸದಲ್ಲಿ ಇದನ್ನು ಹಚ್ಚಿಕೊಳ್ಳುವ ರೂಢಿ ಅಥವಾ ಪದ್ಧತಿಯಿದೆ. ಏಕೆಂದರೆ ವಾತಾವರಣದ ಬದಲಾವಣೆಯಿಂದ ಮಹಿಳೆಯರ ಸೂಕ್ಷ್ಮ ಚರ್ಮಗಳ ಮೇಲೆ ಪರಿಣಾಮ ಉಂಟಾಗುವುದು. ಮದರಂಗಿ ಹಚ್ಚುವುದರಿಂದ ಚರ್ಮದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೊತೆಗೆ ಅಲ್ಲದೆ ಇದರಲ್ಲಿ ತಂಪಾದ ಅನುಭವ ಹಾಘೂ ಚರ್ಮದ ಆರೋಗ್ಯ ಕಾಪಾಡುವ ಶಕ್ತಿ ಇರುವುದರಿಂದ ಇದನ್ನು ಹಚ್ಚಿಕೊಳ್ಳುವ ನಿಯಮವನ್ನು ಹೊಂದಿದೆ. ಆದ್ದರಿಂದ ಆಷಾಢ ಮಾಸದಲ್ಲಿ ಇದನ್ನು ಹಚ್ಚಿಕೊಳ್ಳುವ ರೂಢಿ ಇಟ್ಟುಕೊಂಡರೆ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಪೂಜೆಗಳು ಮತ್ತು ವ್ರತ ಆಚರಣೆ

ವರ್ಷ ಪೂರ್ತಿ ನಮ್ಮ ಜೀವನದ ಬಗ್ಗೆ ಸಾಕಷ್ಟು ಕನಸು ಹಾಗೂ ಅದರ ಗುಂಗಿನಲ್ಲಿಯೇ ಇರುತ್ತೇವೆ. ವರ್ಷದ ಒಂದು ಸಮಯವಾದರೂ ನಮ್ಮ ಒಳಿತಿಗಾಗಿ ಇರುವ ದೇವತೆಗಳ ಆರಾಧನೆ ಮಾಡಬೇಕು. ಒಂದು ತಿಂಗಳನ್ನು ದೇವರಿಗಾಗಿ ಮೀಸಲಾಗಿಟ್ಟರೆ, ಎಲ್ಲರೂ ತಮ್ಮ ಸ್ವಾರ್ಥಗಳನ್ನು ತೊರೆದು, ದೇವರ ನಾಮವನ್ನು ಸ್ಮರಿಸುತ್ತಾ ಪೂಜೆ, ವ್ರತ ಹಾಗೂ ಹವನಗಳನ್ನು ಕೈಗೊಳ್ಳುತ್ತಾರೆ. ಇದರಿಂದ ದೇವಾನು ದೇವತೆಗಳು ಸಂತೃಪ್ತರಾಗುತ್ತಾರೆ. ಮನುಕುಲಕ್ಕೂ ಕಲ್ಯಾಣವಾಗುವುದು. ಹೊಸ ಹೊಸ ಬದಲಾವಣೆಗಳಿಂದ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವರು ಎಂದು ಹೇಳಲಾಗುವುದು. ಹಾಗಾಗಿಯೇ ಆಷಾಢ ಮಾಸದಲ್ಲಿ ರಥಯಾತ್ರೆ, ಚತುರ್ಮಾಸ, ವ್ರತ ಆಚರಣೆ, ಜಪ-ತಪ ಹೀಗೆ ಮೊದಲಾದ ದೇವರ ಕೆಲಸವನ್ನು ಮಾಡುವುದರ ಮೂಲಕ ಆಷಾಢವನ್ನು ಭಕ್ತಿಗೆ ಹಾಗೂ ಸಮರ್ಪಣೆಗೆ ಮೀಸಲಿಡಲಾಗಿದೆ.

ಮಳೆಗಾಲದ ಆರಂಭ ಅಥವಾ ಮಳೆಯ ರಭಸವನ್ನು ತಿಳಿಸುವುದು

ಆಷಾಢದ ಆರಂಭವು ಪರಿಸರದಲ್ಲಿ ಅತಿಯಾದ ಗಾಳಿ ಮತ್ತು ಮಳೆಯನ್ನು ಸೂಚಿಸುತ್ತದೆ. ಭೂ ತಾಯಿಯು ಸಮೃದ್ಧವಾದ ಮಳೆಯಲ್ಲಿ ತೋಯ್ದು ಶುದ್ಧವಾಗುವಳು. ಅಂತೆಯೇ ಎಲ್ಲೆಲ್ಲೂ ಹಸಿರು ಗಿಡಗಳ ಮೂಲಕ ಕಂಗೊಳಿಸುವಳು. ಈ ಸಂದರ್ಭದಲ್ಲಿ ಶುಭ ಕಾರ್ಯಗಳನ್ನು ಕೈಗೊಳ್ಳುವುದು ಅಥವಾ ಆಚರಿಸುವ ಕೆಲಸ ಮಾಡಿದರೆ ಎಲ್ಲರಿಗೂ ಸಮಸ್ಯೆ ಆಗುವುದು. ಕಾರ್ಯಕ್ರಮದ ತಯಾರಿ, ಕಾರ್ಯಕ್ರಮಕ್ಕೆ ಹಾಜರಿ, ಅಗತ್ಯ ಅವಲತ್ತುಗಳ ಪೂರೈಕೆ ಮಾಡಲು ಕಷ್ಟವಾಗುವುದು. ಹಾಗಾಗಿ ಈ ತಿಂಗಳನ್ನು ಕೆಲವು ಸಂಗತಿಗಳಿಗೆ ನಿಬರ್ಂಧ ವಿಧಿಸುವ ಮಾಸ ಎನ್ನುತ್ತಾರೆ. ಅಂತೆಯೇ ಮನೆಯಿಂದ ಆಚೆ ಬರಲು ಸಾಧ್ಯವಾಗದಂತಹ ಮಳೆ ಬರುವುದರಿಂದ ಆದಷ್ಟು ದೇವರ ಜಪ-ತಪಗಳನ್ನು ಮಾಡುವುದರ ಮೂಲಕ ದೇವತೆಗಳ ಕೃಪೆಗೆ ಪಾಲುದಾರರಾಗಬಹುದು ಎಂದು ಹೇಳಲಾಗುವುದು. ಹಾಗಾಗಿಯೇ ಈ ಮಾಸವನ್ನು ದೇವತೆಗಳಿಗಾಗಿ ಮೀಸಲಿಡಲಾಗಿದೆ.

ತೊಲಿ ಏಕಾದಶಿ

ಆಷಾಢ ಮಾಸವನ್ನು ತೆಲುಗು ಭಾಷೆಯಲ್ಲಿ ತೊಲಿ ಏಕಾದಶಿ ಎಂದು ಕರೆಯುತ್ತಾರೆ. ಈ ಪವಿತ್ರ ದಿನವು ಹಿಂದೂ ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಇವರ ಪೂಜೆ ಮಾಡಲಾಗುತ್ತದೆ. ಇಡೀ ರಾತ್ರಿಯನ್ನು ಪ್ರಾರ್ಥನೆ, ಭಜನೆಗಳಲ್ಲಿ ಕಳೆಯುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ದ ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಇದು ಯಾವುದಾದರು ಆಹಾರಪದಾರ್ಥವನ್ನು ಬಿಡುವ ಬಗ್ಗೆ ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇರುತ್ತದೆ. ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆಗೆ ಈದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ. ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ. ಈ ಹೊತ್ತಿಗೆ ಮಳೆಗಾಲ ಇರುತ್ತದೆ. ಹೀಗಾಗಿ, ಶಯನಿ ಏಕಾದಶಿಯು ಚಾತುರ್ಮಾಸದ ಆರಂಭ. ಭಕ್ತರು ವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು ಈ ದಿನ ಆರಂಭಿಸುತ್ತರೆ. ಈ ದಿನ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ ಕೆಲವು ಅಹಾರಪದಾರ್ಥಗಳನ್ನು ಸೇವಿಸುವದಿಲ್ಲ.

ಆರ್ಥಿಕ ತೊಂದರೆ ಉಂಟಾಗುವುದು

ಆಷಾಢ ಮಾಸದಲ್ಲಿ ಗಾಳಿ ಹೆಚ್ಚು ಜೋರಾಗಿ ಬೀಸುತ್ತಿರುತ್ತದೆ. ಈ ಹಿನ್ನೆಲೆ, ಆ ವೇಳೆ ಬೆಳೆ ಕಟಾವು ಇರುವುದಿಲ್ಲ. ಈ ಹಿನ್ನೆಲೆ ಹಣದ ಕೊರತೆ ಇರುತ್ತದೆ. ಇನ್ನು, ಮೊದಲೆಲ್ಲ ಮದುವೆಗಳನ್ನು ತೆರೆದ ಜಾಗಗಳಲ್ಲಿ ಅಥವಾ ಮೈದಾನಗಳಲ್ಲಿ ಮಾಡಲಾಗುತ್ತಿತ್ತು. ಹೀಗಾಗಿ ಜೋರಾಗಿ ಬೀಸುವ ಗಾಳಿ ಹಾಗೂ ಹಣದ ಕೊರತೆಯಿಂದ ಮದುವೆ ಮುಂತಾದ ಶುಭ ಕಾರ್ಯಗಳನ್ನು ನಡೆಸುವುದು ಸವಾಲಿನಂತೆ ಎಂದು ಭಾವಿಸುತ್ತಾರೆ.

English summary

2019 Significance of Ashada Masam-things you must know

According to the Hindu astrology, this month is regarded as an inauspicious month. So, no holy occasions like marriages, entering into new houses, etc, are take place during this time.Though the actual reason of this is vague, may be it is because of the inconvenience caused by the rainy season...
X
Desktop Bottom Promotion