For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್‌ಡೌನ್‌ ಹೀಗೆ ಕಳೆದರೆ ತುಂಬಾ ಲಾಭಗಳಿವೆ

|

ಕರೋನ ವೈರಸ್ ಎಂಬ ಹೆಸರು ಕೇಳಿದರೆ ಸಾಕು!! ಎಂತಹ ಘಟಾನುಘಟಿಗಳ ಜೀವ ಕೂಡ ಒಮ್ಮೆಲೆ ನಡುಗಿ ಹೋಗುವಂತಹ ಭಯಾನಕ ಹೆಸರು. ಕೇವಲ ತಾನು ಹುಟ್ಟಿದ ಪ್ರದೇಶಕ್ಕೆ ಅಥವಾ ತನ್ನ ದೇಶಕ್ಕೆ ಮಾತ್ರ ಸೀಮಿತವಾಗಿರದೆ ಜಗತ್ತಿನ 195 ದೇಶಗಳಲ್ಲಿ ತನ್ನದೇ ಆದ ಪ್ರಾಬಲ್ಯ ಮೆರೆದು ಎಲ್ಲರನ್ನೂ ಸದ್ದಿಲ್ಲದೆ ಯಮಲೋಕಕ್ಕೆ ಮೂಟೆ ಕಟ್ಟಿ ಕಳಿಸಲು ಹಪಹಪಿಸುತ್ತಿರುವ ಕಣ್ಣಿಗೆ ಕಾಣದ ಒಂದು ಸಾಂಕ್ರಾಮಿಕ ಕ್ರಿಮಿ.

ಇಷ್ಟೇ ಅಲ್ಲದೆ ತಾನು ಆಕ್ರಮಿಸಿದ ಜನರ ದೇಹದಲ್ಲಿ ತನ್ನ ಕುಚೇಷ್ಟೆಯಿಂದ ದಿನಕ್ಕೊಂದು ಗುಣ ಬದಲಾಯಿಸಿ ವೈದ್ಯರನ್ನು, ಸಂಶೋಧಕರನ್ನು ಮತ್ತು ವಿಜ್ಞಾನಿಗಳನ್ನು ಇದುವರೆಗೂ ಇನ್ನೂ ಸರಿಯಾದ ಔಷಧ ಕಂಡು ಹಿಡಿಯಲು ಸಾಧ್ಯವಾಗದೆ ಇರುವಂತೆ ಮಾಡುತ್ತಿರುವ ಪರಮಪಾಪಿ ವೈರಸ್ ಇದು ಎಂದರೆ ತಪ್ಪಾಗಲಾರದು. ಇದರ ಮಧ್ಯೆ ಸಾವಿನ ಸಂಖ್ಯೆಯಲ್ಲಿ ನಾವೇನು ಕಮ್ಮಿ ಇಲ್ಲ ಎಂಬಂತೆ ಒಂದು ದೇಶ ಮತ್ತೊಂದು ದೇಶವನ್ನು ಮೀರಿಸುವಂತೆ ಕ್ಷಣಕ್ಷಣವೂ ಸೋಂಕಿನ ಹಾಗೂ ಸಾವಿನ ಲೆಕ್ಕಾಚಾರ ಏರಿಕೆಯಾಗುತ್ತಲೇ ಇದೆ.

How To Utilise The Covid 19 Lockdown Period

ಈ ವೈರಸ್ ಸೋಂಕು ಹರಡುವ ಮುಂಚೆ ಒಂದು ದೇಶಕ್ಕೆ ಇನ್ನೊಂದು ದೇಶವೇ ಬದ್ಧವೈರಿಯಾಗಿದ್ದ ಸಂದರ್ಭವನ್ನು ಬದಲಾಯಿಸಿ ಎಲ್ಲಾ ದೇಶಗಳಿಗೂ ಒಬ್ಬನೇ ಮಹಾ ವೈರಿ ಅದುವೇ ಕರೋನ ಕ್ರಿಮಿ ಎಂಬಂತೆ ದೇಶಗಳ ಮನಸ್ಥಿತಿಯನ್ನು ಬದಲಾಯಿಸಿದ ಮಹಾಮಾರಿ.

ಇನ್ನು ದೇಶಗಳ ಆರ್ಥಿಕ ಲೆಕ್ಕಾಚಾರದ ವಿಷಯಕ್ಕೆ ಬರುವುದಾದರೆ ಯಾವ ಲೆಕ್ಕವೂ ಕೈಗೆಟುಕದಷ್ಟು ಪಾತಾಳಕ್ಕೆ ಹೋಗಿ ಕಚ್ಚಿಕೊಂಡಿದೆ. ಆದರೂ ವಿಶ್ವದ ಹಲವು ದೇಶಗಳು ಬೇರೆಯವರಿಗೆ ಆಗಿದ್ದು ನಮಗೂ ಆಗುತ್ತದೆ ಎಂದು ಇದನ್ನು ಗಣನೆಗೆ ತೆಗೆದುಕೊಳ್ಳದೇ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ತಮ್ಮ ದೇಶದ ನಾಗರೀಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಲಾಕ್ಡೌನ್ ಆದೇಶವನ್ನು ಕಟ್ಟಪ್ಪಣೆಯಂತೆ ಕಟ್ಟುನಿಟ್ಟಾಗಿ ಹೊರಡಿಸಿವೆ. ಮನೆಯಿಂದ ಹೊರ ಬಂದರೂ ಸಹ ಒಬ್ಬರಿಗೊಬ್ಬರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂಬ ನಿಯಮವಿದೆ.

ಆದರೆ ಪ್ರತಿ ದಿನ ಬೆಳಗಿನಿಂದ ಸಂಜೆಯವರೆಗೂ ಮನೆಯ ಹೊರಗೆ ನಮ್ಮ ಜೊತೆ ಕೆಲಸ ಮಾಡುತ್ತಿದ್ದವರ ಜೊತೆ ಕಾಲ ಕಳೆಯುತ್ತಿದ್ದ ನಮಗೆ ಇದೊಂದು ರೀತಿಯ ಸೆರೆಮನೆ ವಾಸವೇ ಸರಿ. ಆದರೂ ನಮ್ಮ ಹಾಗೂ ನಮ್ಮ ಕುಟುಂಬದವರ ಆರೋಗ್ಯವನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರ ಹೊರಡಿಸಿರುವ ಈ ಆದೇಶವನ್ನು ನಾವು ನೀವು ಪಾಲನೆ ಮಾಡಲೇಬೇಕು. ಕರೋನ ವೈರಸ್ ದೇಶ ವಿದೇಶಗಳಲ್ಲಿ ನಡೆಸುತ್ತಿರುವ ಉಪಟಳದ ಮುಂದೆ ಈ ನಮ್ಮ ತ್ಯಾಗ ಅಷ್ಟೇನೂ ದೊಡ್ಡದಲ್ಲ. ಆದರೂ ಒಮ್ಮಿಂದೊಮ್ಮೆಲೆ ಹಲವು ದಿನಗಳು ಮನೆಯಲ್ಲೇ ಇರಬೇಕು ಎಂದರೆ ಯಾರಿಗೇ ಆದರೂ ಸ್ವಲ್ಪ ಕಷ್ಟ ಅನ್ನಿಸುತ್ತದೆ. ಸಾಮಾಜಿಕ ಜೀವಿಯಾದ ಮನುಷ್ಯನಿಗೆ ಸಾಮಾಜಿಕ ಚಟುವಟಿಕೆಗಳ ಮಧ್ಯೆ ಜೀವಿಸುವುದನ್ನು ಬಿಟ್ಟು ಇನ್ನು ಮುಂದೆ ಕೇವಲ ನಿನ್ನ ಕುಟುಂಬದೊಂದಿಗೆ ಮಾತ್ರ ವಾಸಿಸು ಎಂದರೆ ದಿಗ್ಬ್ರಮೆ ಆಗುವುದು ಖಂಡಿತ. ಏನೂ ಮಾಡಲು ಸಾಧ್ಯವಿಲ್ಲದೆ ಇರುವುದರಿಂದ ಇರುವ ಸಂದರ್ಭವನ್ನೇ ನಮಗೆ ಬೇಕಾದ ಹಾಗೆ ಅಡ್ಜಸ್ಟ್ ಮಾಡಿಕೊಂಡು ಬದುಕಬೇಕು ಅಷ್ಟೇ. ಹಾಗಾದರೆ ಲಾಕ್ಡೌನ್ ಸಮಯವನ್ನು ನಾವಿರುವ ಜಾಗದಿಂದ ಸಂತೋಷವಾಗಿ ಕಳೆಯುವುದು ಹೇಗೆ? ಬೇಸರ ಕಳೆಯಲು ಏನು ಮಾಡಬೇಕು? ಎಂಬೆಲ್ಲ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆ ತುಂಬಾ ಗುಯ್ಗುಡುತ್ತಿರಬಹುದು.

ಈ ಲೇಖನದಲ್ಲಿ ಇಂತಹ ಹಲವಾರು ಸಲಹೆಗಳನ್ನು ಕೊಡಲಾಗಿದೆ. ಇವುಗಳನ್ನು ನೀವು ಲಾಕ್ಡೌನ್ ಟಿಪ್ಸ್ ಎಂದುಕೊಂಡರೂ ಪರವಾಗಿಲ್ಲ. ಆದರೆ ನಿಮ್ಮ ಕುಟುಂಬದೊಂದಿಗೆ ಮನೆಯಲ್ಲಿರಿ, ಸುರಕ್ಷಿತವಾಗಿರಿ ಮತ್ತು ಆರೋಗ್ಯದಿಂದಿರಿ.

ಹಳೆಯ ಗೆಳೆತನ ಮೆಲುಕು ಹಾಕಲು ಸುವರ್ಣಾವಕಾಶ: -

ಹಳೆಯ ಗೆಳೆತನ ಮೆಲುಕು ಹಾಕಲು ಸುವರ್ಣಾವಕಾಶ: -

ಇಷ್ಟು ದಿನಗಳವರೆಗೆ ಪ್ರತಿದಿನ ಬರೀ ದುಡಿಯುವುದೇ ಆಗಿತ್ತು. ಬೆಳಗ್ಗೆ ಏಳುವುದು, ತಿಂಡಿ ತಿನ್ನುವುದು. ನಂತರ ಕುರಿಗಳ ಗುಂಪಿನಲ್ಲಿ ಹೋದಂತೆ ಎಲ್ಲರ ರೀತಿ ಆಫೀಸ್ ಕಡೆ ಮುಖ ಮಾಡುವುದು. ಆ ಕೆಲಸ ಈ ಕೆಲಸ ಎಂದು ಒತ್ತಡಕ್ಕೊಳಗಾಗಿ ನಮ್ಮನ್ನೇ ನಾವು ಮರೆತು ಮೇಲಿನವರ ಆಣತಿಯಂತೆ ಕಷ್ಟಪಟ್ಟು ದುಡಿದು ಅಷ್ಟೋ ಇಷ್ಟೋ ಕಿವಿ ತಂಪಾಗುವಂತೆ ಬೈಗುಳ ಕೇಳಿಕೊಂಡು ಕೊನೆಗೆ ಸಂಜೆಯಾಗುತ್ತಲೇ ನಮ್ಮ ಮನೆಯಿರುವ ಸ್ಥಳವನ್ನು ಜ್ಞಾಪಿಸಿಕೊಂಡು ಮತ್ತದೇ ಕುರಿಗಳ ಹಿಂಡಿನಲ್ಲಿ ಸುಸ್ತಾಗಿ ಮನೆ ಸೇರಿ ಸಿಕ್ಕಿದ್ದನ್ನು ತಿಂದು ಹಾಸಿಗೆ ಮೇಲೆ ತಲೆನೋವು ಎಂದು ಮಲಗುವುದೇ ಆಗಿತ್ತು.

ಆದರೆ ಈಗ ಕರೋನ ವೈರಸ್ ಎಂಬ ಕಿರಿಕ್ ಜೀವಿ ಮನಸ್ಸಿಗೆ ಸ್ವಲ್ಪ ನಿರಾಳತೆಯನ್ನು ಕೊಟ್ಟು ಆರಾಮವಾಗಿ ರೆಸ್ಟ್ ಮಾಡುವಂತೆ ಮಾಡಿದೆ. ದೂರದ ನಗರಗಳಲ್ಲಿ ಮತ್ತು ದೇಶಗಳಲ್ಲಿ ನೆಲೆಸಿರುವ ನಮ್ಮ ಸ್ನೇಹಿತರದ್ದು ಇದೇ ಪರಿಸ್ಥಿತಿ ಆಗಿರುತ್ತದೆ. ಇಷ್ಟು ದಿನ ಭೇಟಿ ಮಾಡಲು, ಮಾತನಾಡಲು ಕೆಲಸ ಕಾರ್ಯಗಳು ಅಡ್ಡ ಬರುತ್ತಿದ್ದವು. ಆದರೆ ಈಗ ಆ ಸಂದರ್ಭ ತಾನಾಗಿಯೇ ಒದಗಿ ಬಂದಿದೆ. ಈಗಿನ ಸ್ಮಾರ್ಟ್ ಫೋನ್ ಗಳ ಅತ್ಯಾಧುನಿಕ ತಂತ್ರಜ್ಞಾನದಿಂದ ಕುಳಿತಿರುವ ಜಾಗದಿಂದಲೇ ದೂರದವರನ್ನು ವಿಡಿಯೋ ಕಾಲ್ ಮುಖಾಂತರ ನೇರವಾಗಿಯೇ ಮಾತನಾಡಿಸಬಹುದು. ಲಾಕ್ಡೌನ್ ನ ಈ ಸಮಯದಲ್ಲಿ ಈ ಒಂದು ಪ್ರಯತ್ನ ಮಾಡಿದರೆ ಬೇಸರವೂ ಕಳೆಯುತ್ತದೆ. ಜೊತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಂತೆ ಇರುತ್ತದೆ.

ಹೊಸದೊಂದು ಆನ್ಲೈನ್ ಕೋರ್ಸ್ ಕಲಿಯಬಹುದು : -

ಹೊಸದೊಂದು ಆನ್ಲೈನ್ ಕೋರ್ಸ್ ಕಲಿಯಬಹುದು : -

ಕೆಲವೊಂದು ಐಟಿ-ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ ಎಂಬುದು ನಿಮಗೂ ಗೊತ್ತು. ಆದರೆ ಇನ್ನಿತರ ಕಂಪನಿಗಳ ಉದ್ಯೋಗಿಗಳು ಆರಾಮವಾಗಿ ಮನೆಯಲ್ಲಿರಬಹುದು. ಹೇಗೂ ಸರ್ಕಾರ ಸೂಚಿಸಿದಂತೆ ತಿಂಗಳ ಸಂಬಳ ಬಂದೇ ಬರುತ್ತದೆ. ಕುಟುಂಬದ ಜೊತೆ ಸುತ್ತಾಡಲು ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಮನೆಯಲ್ಲಿ ಸುಮ್ಮನೆ ಕುಳಿತು ಕಾಲಹರಣ ಮಾಡುವ ಬದಲು ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವ ಕಡೆಗೆ ಗಮನಹರಿಸಬಹುದು.

ಬಹಳ ದಿನಗಳಿಂದ ನೀವು ಕಲಿಯಬೇಕು ಎಂದುಕೊಂಡಿದ್ದ ನಿಮಗೆ ಇಷ್ಟವಾದ ಆನ್ಲೈನ್ ಕೋರ್ಸ್ ಅನ್ನು ಈ ಸಮಯದಲ್ಲಿ ಆರಾಮವಾಗಿ ಮನೆಯಲ್ಲಿ ಕುಳಿತು ಕಲಿಯಬಹುದು. ಈಗಂತೂ ಹಲವಾರು ಜಾಲತಾಣಗಳು ಉದಾಹರಣೆಗೆ Udemy ಅಥವಾ Edx.com ನಂತಹ ತಾಣಗಳು ಅತ್ಯಾಕರ್ಷಕ ಬೆಲೆಗಳಲ್ಲಿ ಕಲಿಕೆಗಳನ್ನು ಒದಗಿಸಲು ಮುಂದಾಗಿವೆ. ಈ ಒಂದು ಆಕರ್ಷಕ ಕೊಡುಗೆಯನ್ನು ನೀವೇಕೆ ಬಳಸಿಕೊಳ್ಳಬಾರದು? ಹೇಗೂ ಲಾಕ್ಡೌನ್ ಮುಗಿದ ಮೇಲೆ ಮತ್ತದೇ ಕೆಲಸದ ಒತ್ತಡ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಕಲಿತುಕೊಂಡರೆ ಬುದ್ಧಿಯ ಜೊತೆಗೆ ಭವಿಷ್ಯದಲ್ಲಿ ಮುಂದೊಂದು ದಿನ ಹಣಕಾಸಿಗೂ ಉಪಯೋಗವಾಗುತ್ತದೆ.

ನೀವೇ ಮಾಡಿ ತಿನ್ನುವ ಅಡುಗೆ ಎಷ್ಟು ರುಚಿ ಗೊತ್ತೇ?

ನೀವೇ ಮಾಡಿ ತಿನ್ನುವ ಅಡುಗೆ ಎಷ್ಟು ರುಚಿ ಗೊತ್ತೇ?

ಇಷ್ಟು ದಿನಗಳ ಕಾಲ ಅತೀವ ಕೆಲಸದ ಒತ್ತಡದಿಂದ ನಿಮ್ಮ ಮನೆಯ ಅಡುಗೆ ಮನೆಯನ್ನು ನೀವೇ ಸರಿಯಾಗಿ ಗಮನಿಸಿರಲು ಸಾಧ್ಯವಿರಲಿಲ್ಲ. ಇಡೀ ದೇಶದ ತುಂಬಾ ಲಾಕ್ಡೌನ್ ಆದೇಶ ಹೇರಿರುವುದರಿಂದ ನಿಮಗೆ ಇಷ್ಟವಾದ ಆಹಾರವನ್ನು ಹುಡುಕಿಕೊಂಡು ಯಾವುದೇ ರೆಸ್ಟೋರೆಂಟ್ ಗೂ ಹೋಗಲು ಸಾಧ್ಯವಿಲ್ಲ. ಆನ್ಲೈನ್ ಫುಡ್ ಡೆಲಿವರಿ ಮೇಲೆ ನಂಬಿಕೆ ಇಲ್ಲ. ಏಕೆಂದರೆ ಕರೋನಾಸುರನ ಅಟ್ಟಹಾಸ.

ಆದರೆ ನಿಮ್ಮ ಕೆಲಸಕ್ಕೆ ಈಗ ಪೂರ್ಣ ವಿರಾಮ ಬಿದ್ದಿರುವುದರಿಂದ ಮತ್ತು ಅಡುಗೆ ಮಾಡಲು ಪೂರ್ಣ ಸ್ವಾತಂತ್ರ್ಯ ನಿಮಗೆ ದೊರಕಿರುವ ಕಾರಣ ಸ್ವತಃ ನೀವೇ ನಿಮ್ಮ ಅಡುಗೆ ಮನೆಗೆ ಪ್ರವೇಶ ಮಾಡಿ ನಿಮಗೆ ಬೇಕಾದ ರುಚಿ ರುಚಿಯಾದ ಅಡುಗೆಗಳನ್ನು ಮಾಡಿ ತಿನ್ನಬಹುದು ಇತರರಿಗೂ ತಿನ್ನಿಸಬಹುದು. ನಿಮ್ಮ ಅಡುಗೆಯ ಕುಶಲತೆ ತೋರಿಸಿ ಎಲ್ಲರಿಂದ ಸೈ ಎನಿಸಿಕೊಳ್ಳಲು ಇದೊಂದು ಹೇಳಿ ಮಾಡಿಸಿದ ಸಮಯ. ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ನೀವೇಕೆ ಅಡುಗೆ ಭಟ್ಟರಾಗಬಾರದು?

ಮನೆಯಲ್ಲಿನ ಹೆಣ್ಣುಮಕ್ಕಳಿಗೆ ಸಹಾಯ ಮಾಡಿ : -

ಮನೆಯಲ್ಲಿನ ಹೆಣ್ಣುಮಕ್ಕಳಿಗೆ ಸಹಾಯ ಮಾಡಿ : -

ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿರುತ್ತಾಳೆ ಎಂಬುದು ನಿಜಕ್ಕೂ ಸತ್ಯ. ಏಕೆಂದರೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಹೆಣ್ಣು ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ ಕಾಲಿಡುತ್ತಾಳೆ. ಮನೆಯಿಂದ ಹೊರಗಡೆ ದುಡಿಯಲು ಹೋಗುವ ಗಂಡಸರಿಗೆ ಹೆಣ್ಣಿನ ಈ ರೂಪಗಳು ಬೆನ್ನೆಲುಬಾಗಿ ನಿಂತು ಪ್ರತಿ ದಿನ ಬಿಡುವಿಲ್ಲದೆ ಕೆಲಸ ಮಾಡುತ್ತವೆ. ಮನೆಯ ಶ್ರೇಯಸ್ಸಿಗೆ ದುಡಿಯುವ ವ್ಯಕ್ತಿಗೆ ಯಾವುದೇ ತೊಂದರೆ ಆಗಬಾರದು ಎಂದು ಕಾಲಕಾಲಕ್ಕೆ ಅಡುಗೆ ಮಾಡುವುದರಿಂದ ಹಿಡಿದು ಸಂಪೂರ್ಣ ಮನೆ ಕೆಲಸದ ಜವಾಬ್ದಾರಿಯನ್ನು ತಮ್ಮ ಮೇಲೆಯೇ ಹಾಕಿಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ನಿಸ್ವಾರ್ಥ ಸೇವೆ ಮಾಡುತ್ತಾರೆ.

ಅಂತಹವರಿಗೆ ಒಂದು ನಿಜವಾದ ಸಲಾಂ ಹೇಳಲೇಬೇಕು ಎನಿಸಿದರೆ ಈ ಸಮಯ ನಿಮಗಾಗಿ ಒದಗಿಬಂದಿದೆ. ಅಡುಗೆಯ ಕೆಲಸಗಳಿಂದ ಹಿಡಿದು ಮನೆಯನ್ನು ಸ್ವಚ್ಛ ಮಾಡುವ ಅವರ ಕೆಲಸ ಕಾರ್ಯಗಳಲ್ಲಿ ನೀವೂ ಕೈಜೋಡಿಸಿ ಅವರ ಜೊತೆ ನಿಂತರೆ ಅವರ ಮನಸ್ಸಿಗೂ ಖುಷಿಯಾಗುತ್ತದೆ ಜೊತೆಗೆ ನಿಮ್ಮ ಸಂಬಂಧದ ಮಧ್ಯೆ ಪ್ರೀತಿ ಹೆಚ್ಚಾಗಿ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳುತ್ತದೆ.

ಈಗ ಮನೆಯೇ ಮೊದಲ ಪಾಠಶಾಲೆಯಲ್ಲ, ಅದೇ ವ್ಯಾಯಾಮಶಾಲೆ : -

ಈಗ ಮನೆಯೇ ಮೊದಲ ಪಾಠಶಾಲೆಯಲ್ಲ, ಅದೇ ವ್ಯಾಯಾಮಶಾಲೆ : -

ನಿಮ್ಮ ಕೆಲಸ ಕಾರ್ಯಗಳ ಮಧ್ಯೆ ಬಿಡುವು ಮಾಡಿಕೊಂಡು ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ಜಿಮ್ ಗೆ ಹೋಗುವ ಹವ್ಯಾಸ ಇಷ್ಟು ದಿನ ನಿಮ್ಮದಾಗಿತ್ತು. ಆದರೆ ಈಗ ಪ್ರತಿಯೊಂದು ಅಂಗಡಿ - ಮುಂಗಟ್ಟುಗಳು, ಶಾಲಾ ಕಾಲೇಜುಗಳು, ವ್ಯಾಯಾಮ ಶಾಲೆಗಳು ಎಲ್ಲವೂ ಬೀಗ ಜಡಿದಿರುವುದರಿಂದ ವ್ಯಾಯಾಮವನ್ನು ಮನೆಯಲ್ಲೇ ಮಾಡಬೇಕಾದ ಅನಿವಾರ್ಯತೆ ಇದೆ. ಆರಾಮವಾಗಿ ಮನೆಯಲ್ಲಿ ಇದ್ದು ಕಣ್ಣಿಗೆ ಬೇಕಾದ ತಿಂಡಿ ತಿನಿಸುಗಳನ್ನು ತಿನ್ನಬಹುದು ಮತ್ತು ಕಣ್ತುಂಬ ನಿದ್ದೆ ಮಾಡಬಹುದು ಎಂಬ ಆಲೋಚನೆ ತಲೆಯಲ್ಲಿ ಸ್ವಲ್ಪ ಬಂದರೆ ಸಾಕು ನಮ್ಮನ್ನು ಶುದ್ಧ ಸೋಮಾರಿಗಳನ್ನಾಗಿ ಮಾಡಿಬಿಡುತ್ತದೆ.

ಆದ್ದರಿಂದ ನಮ್ಮ ದೇಹಕ್ಕೆ ಸ್ವಲ್ಪವಾದರೂ ಕಸರತ್ತಿನ ಕೆಲಸ ಕೊಟ್ಟು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳುವ ಕಡೆಗೆ ಮನಸ್ಸು ಮಾಡಬೇಕು. ವ್ಯಾಯಾಮ ಶಾಲೆಯಲ್ಲಿ ಎಲ್ಲರ ಜೊತೆ ಬೆರೆತು ವ್ಯಾಯಾಮ ಮಾಡುತ್ತಿದ್ದ ನಿಮಗೆ ಮನೆಯಲ್ಲಿ ಒಬ್ಬರೇ ವ್ಯಾಯಾಮ ಮಾಡಲು ಬೇಸರವಾದರೆ ನೀವು ಕಲಿತ ವ್ಯಾಯಾಮವನ್ನು ಮನೆಯವರೆಗೂ ಹೇಳಿಕೊಟ್ಟು ಅವರನ್ನು ನಿಮ್ಮ ಜೊತೆ ವ್ಯಾಯಾಮ ಮಾಡಲು ಸೇರಿಸಿಕೊಳ್ಳಿ. ಇದರಿಂದ ನಿಮ್ಮ ಕುಟುಂಬದ ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ.

ನೆಮ್ಮದಿಯಾಗಿ ಮಲಗಿ ನಿದ್ರಿಸಲು ಇದು ಸಕಾಲ : -

ನೆಮ್ಮದಿಯಾಗಿ ಮಲಗಿ ನಿದ್ರಿಸಲು ಇದು ಸಕಾಲ : -

ಮನುಷ್ಯನ ದೇಹಕ್ಕೆ ನಿದ್ರೆ ಬಹಳ ಅವಶ್ಯಕ. ಇಷ್ಟು ದಿನಗಳ ಕಾಲ ನಿದ್ರೆ ಮಾಡಬೇಕು ಎಂದರೂ ಅದು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ನಿಮ್ಮ ಕೆಲಸದ ಒತ್ತಡ, ಸಂಸಾರದ ತಾಪತ್ರಯಗಳು ಇತ್ಯಾದಿ. ಆದರೆ ಈಗ ಹೇಗೂ ಕೆಲಸದಿಂದ ಬಿಡುವು ಸಿಕ್ಕಿದೆ. ಈಗಲಾದರೂ ವೈದ್ಯರ ನಿರ್ದೇಶನದಂತೆ ಒಬ್ಬ ಆರೋಗ್ಯವಂತ ಮನುಷ್ಯನಾಗಿ ಬಾಳಲು ದಿನದಲ್ಲಿ ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಮಾಡಲು ಪ್ರಯತ್ನಿಸಿ. ನೀವು ನಿದ್ರೆ ಹೆಚ್ಚು ಮಾಡಿದಷ್ಟೂ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಮಾನಸಿಕ ಒತ್ತಡ ದೂರವಾಗುತ್ತದೆ. ಉತ್ತಮ ಆಲೋಚನೆಗಳು ತಲೆಯಲ್ಲಿ ಬರಲು ಪ್ರಾರಂಭವಾಗುತ್ತವೆ. ಒಂದು ಸಂಶೋಧನೆಯ ಪ್ರಕಾರ ಉತ್ತಮ ನಿದ್ರೆ ಮನುಷ್ಯನನ್ನು ಯುವಕನನ್ನಾಗಿ ಮಾಡುತ್ತದಂತೆ!!!

ಕುಟುಂಬದೊಂದಿಗೆ ಕಾಲಕಳೆಯಲು ಇದಕ್ಕಿಂತ ಬೇರೆ ಸಮಯ ಬೇಕೇ?

ಕುಟುಂಬದೊಂದಿಗೆ ಕಾಲಕಳೆಯಲು ಇದಕ್ಕಿಂತ ಬೇರೆ ಸಮಯ ಬೇಕೇ?

ಮನೆಯಲ್ಲಿ ನಿಮ್ಮ ಹೆಂಡತಿ ಇದುವರೆಗೂ "ಕಚೇರಿ ಕೆಲಸ ಒಂದಿದ್ದರೆ ಸಾಕು ನಿಮಗೆ ಮನೆ, ಹೆಂಡತಿ, ಮಕ್ಕಳು ಏನು ಬೇಡ" ಎಂದು ವಾರವಾರವೂ ಅಷ್ಟಾರ್ಚನೆ ಮಾಡುತ್ತಿದ್ದುದನ್ನು ನೆನೆಸಿಕೊಳ್ಳಿ. ಏಕೆಂದರೆ ಈಗ ಅದಕ್ಕೆ ಫುಲ್ ಸ್ಟಾಪ್ ಹಾಕುವ ಕಾಲ ಬಂದಿದೆ. ಮನೆಯ ಸದಸ್ಯರಿಗೆ ಅವರಿಗಾಗಿ ದುಡಿಯುವ ನಿಮ್ಮ ಜೊತೆ ಸಂತೋಷವಾಗಿ ಕಾಲ ಕಳೆಯಬೇಕು ಎನ್ನುವ ಬಯಕೆ ಇದ್ದೇ ಇರುತ್ತದೆ. ಪೋಷಕರಿಗೂ ಸಹ ನಮ್ಮ ಮಗ ಅಥವಾ ಮಗಳು ನಮ್ಮ ಜೊತೆಗೆ ಇರಬೇಕು ಎಂಬ ಹೆಬ್ಬಯಕೆ ಇರುತ್ತದೆ. ಆದರೆ ಸಮಯ ಸಂದರ್ಭಗಳ ಅಭಾವದಿಂದ ಇದು ಸಾಧ್ಯವೇ ಆಗಿರುವುದಿಲ್ಲ.

ಆದರೆ ಈಗ ಅದಕ್ಕೆ ಒಳ್ಳೆಯ ಸಮಯ. ನಿಮ್ಮ ಕುಟುಂಬದವರ ಜೊತೆ ಸಂತೋಷವಾಗಿ ಕಾಲ ಕಳೆಯಲು ಕರೋನ ವೈರಸ್ ನಿಮ್ಮನ್ನು ನಿಮ್ಮ ಮನೆಯೊಳಗೆ ಲಾಕ್ಡೌನ್ ಮಾಡಿ ಅನುವು ಮಾಡಿಕೊಟ್ಟಿದೆ. ಹಾಗಿದ್ದ ಮೇಲೆ ಇನ್ನೇಕೆ ಚಿಂತೆ? ಮನೆಯವರ ಜೊತೆ ಬೆರೆಯಲು, ಆಟವಾಡಲು, ಒಟ್ಟಿಗೆ ಕುಳಿತು ಟಿವಿ ನೋಡಲು ಇದು ಅತ್ಯದ್ಭುತ ಸಮಯ.

ನೀವು ಸುರದ್ರೂಪಿಯಾಗುವ ಸಮಯ : -

ನೀವು ಸುರದ್ರೂಪಿಯಾಗುವ ಸಮಯ : -

ನಮ್ಮ ಮನಸ್ಥಿತಿ ಹೇಗಿದೆ ಎಂದರೆ ನಾವು ನಮಗಿಂತ ಹೆಚ್ಚಾಗಿ ಕೇವಲ ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಜಾಸ್ತಿ. ಇತರರ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವುದು ನಮ್ಮ ಹವ್ಯಾಸ. ಆದರೆ ನಾವು ಬೇರೆಯವರ ಬಗ್ಗೆ ಮಾಡಿದ್ದನ್ನೇ ನಮ್ಮ ಬಗ್ಗೆ ಇನ್ನೊಬ್ಬರು ನಮ್ಮ ಬೆನ್ನ ಹಿಂದೆ ಮಾಡುತ್ತಿರುತ್ತಾರೆ ಎಂಬುದನ್ನು ಮಾತ್ರ ಮರೆತಿರುತ್ತೇವೆ. ಅದು ನಮ್ಮ ಅಂದ ಚಂದ ಆಗಿರಬಹುದು ಅಥವಾ ನಮಗೆ ಸಂಬಂಧಪಟ್ಟ ಬೇರೆ ಯಾವುದೇ ವಿಚಾರ ಇರಬಹುದು. ಅಂದ ಚಂದ ಎಂದ ತಕ್ಷಣ ಒಂದು ವಿಷಯ ನೆನಪಿಗೆ ಬರುತ್ತದೆ. ನಮ್ಮ ಬಿಡುವಿಲ್ಲದ ದುಡಿಮೆಯ ದಿನಗಳಲ್ಲಿ ಕೇವಲ ವಾರಕ್ಕೆ ಒಂದು ಬಾರಿ ಅಂದರೆ ಭಾನುವಾರದಂದು ಮಾತ್ರ ನಮ್ಮ ಬಗ್ಗೆ ನಾವು ಕಾಳಜಿ ವಹಿಸಲು ಸಮಯ ಸಿಗುತ್ತಿತ್ತು. ಆದರೆ ಈಗ ಎಲ್ಲಾ ಸಮಯವೂ ನಮ್ಮದೇ.

ಹಾಗಾಗಿ ನಮ್ಮ ಅಂದ ಚಂದವನ್ನು ಹೆಚ್ಚಿಸಿಕೊಳ್ಳುವಂತಹ ಹಲವಾರು ಪ್ರಯೋಗಗಳನ್ನು ನಾವು ಮನೆಯಲ್ಲಿ ಮಾಡಿಕೊಳ್ಳಬಹುದು. ಹಲವು ಬಗೆಯ ಫೇಸ್ ಪ್ಯಾಕ್, ಫೇಸ್ ಮಾಸ್ಕ್, ಸ್ಕಿನ್ ಕೇರ್ ಉತ್ಪನ್ನಗಳ ಬಳಕೆ ಹೀಗೆ ಹಲವಾರು ರೀತಿ ನಮಗೆ ಸಿಕ್ಕಿರುವ ಈ ಸಮಯವನ್ನು ಉಪಯೋಗಿಸಿಕೊಂಡು ಲಾಕ್ಡೌನ್ ಮುಗಿಯುವ ಹೊತ್ತಿಗೆ ಒಬ್ಬ ಸುರದ್ರೂಪಿ ವ್ಯಕ್ತಿಯಾಗಿ ಮನೆಯಿಂದ ಹೊರ ಬರಬಹುದು. ಹಾಗಾಗಿ ಇಂತಹ ಸಮಯ ಬಿಟ್ಟರೆ ಮತ್ತೆ ಸಿಗುವುದಿಲ್ಲ. ಯೋಚಿಸಿ ನೋಡಿ.

ಮುಂದಿನ ಕಾರ್ಯ ವೈಖರಿಯ ಬಗ್ಗೆ ಆಲೋಚಿಸಿ : -

ಮುಂದಿನ ಕಾರ್ಯ ವೈಖರಿಯ ಬಗ್ಗೆ ಆಲೋಚಿಸಿ : -

ಲಾಕ್ ಡೌನ್ ಎಂದಾಕ್ಷಣ ನಮ್ಮ ಜೀವನದ ಮುಂದಿನ ಎಲ್ಲಾ ದಿನಗಳು ಹೀಗೇ ಉರುಳುತ್ತವೆ ಎಂದೇನಿಲ್ಲ. ಕೆಲವು ದಿನಗಳ ಬಳಿಕ ಎಲ್ಲವೂ ಮತ್ತೊಮ್ಮೆ ನಿಧಾನವಾಗಿ ಸರಿದಾರಿಗೆ ಬರುತ್ತದೆ. ಆಗ ನಾವು ಮನೆಯಿಂದ ಹೊರ ಬರಲೇಬೇಕು. ನಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲೇಬೇಕು. ಆದರೆ ಇಷ್ಟು ದಿನ ಜಡವಾಗಿದ್ದ ನಮ್ಮ ಜೀವನ ಪುನಶ್ಚೇತನಗೊಳ್ಳಲು ಆರಂಭವಾಗುವ ಕ್ಷಣಗಳಲ್ಲಿ ಮತ್ತೊಮ್ಮೆ ಒತ್ತಡ ಉಂಟಾಗಿ ಎಲ್ಲೆಲ್ಲೂ ತಡವರಿಕೆ ಆರಂಭವಾಗುತ್ತದೆ. ಆರ್ಥಿಕವಾಗಿ ಸಹ ಬಹಳಷ್ಟು ಸಂಕಷ್ಟಗಳು ಎದುರಾಗುತ್ತವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಹಾಗಾಗಿ ಸಿಕ್ಕಿರುವ ಈ ಒಳ್ಳೆಯ ಸಮಯದಲ್ಲಿ ಇವುಗಳ ಬಗ್ಗೆ ಈಗಿನಿಂದಲೇ ಆಲೋಚಿಸಿ ಮುಂದಿನ ಭವಿಷ್ಯಕ್ಕೆ ಯಾವ ರೀತಿ ನಿಮ್ಮ ಹಾಗೂ ನಿಮ್ಮ ಕುಟುಂಬವನ್ನು ಸಜ್ಜುಗೊಳಿಸಬೇಕು ಎಂದು ಒಂದು ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ಈಗಿನ ನಿಮ್ಮ ಆಲೋಚನೆ ನಿಮ್ಮ ಭವಿಷ್ಯಕ್ಕೆ ಒಂದು ದಾರಿ ಆಗುವುದಂತೂ ಖಂಡಿತ.

ಸಂಶೋಧನೆಯ ಮನಸ್ಥಿತಿ ನಿಮಗೆ ಬರಬೇಕು : -

ಸಂಶೋಧನೆಯ ಮನಸ್ಥಿತಿ ನಿಮಗೆ ಬರಬೇಕು : -

ಲಾಕ್ಡೌನ್ ನಂತರದ ದಿನಗಳಲ್ಲಿ ಎದುರಿಸಬೇಕಾದ ಕಣ್ಣಿಗೆ ಕಾಣದ ಸವಾಲುಗಳು ಇದ್ದಕ್ಕಿದ್ದಂತೆ ಎದುರಾಗುವುದಂತೂ ಖಂಡಿತ. ಬಡವರಿಂದ ಹಿಡಿದು ಶ್ರೀಮಂತರವರೆಗೂ ಎಲ್ಲರೂ ಆರ್ಥಿಕವಾಗಿ ಏಟು ತಿಂದಿರುತ್ತಾರೆ. ಮುಂದಿನ ಭವಿಷ್ಯ ಸುಗಮವಾಗಿ ನಡೆಯಬೇಕಾದರೆ ಇಂದಿನ ನಿಮ್ಮ ಯೋಜನೆ ಬಹಳ ಗಟ್ಟಿಯಾಗಿರಬೇಕು. ಅದಕ್ಕಾಗಿ ನಿಮಗೆ ತರಾವರಿಯ ಸಂಶೋಧನೆಗಳನ್ನು ಈ ವಿಚಾರವಾಗಿ ಮಾಡುವ ಮನಸ್ಥಿತಿ ಬರಬೇಕು.

ಕೇವಲ ಇದಕ್ಕಾಗಿ ಗೂಗಲ್ ನ ಮೊರೆ ಹೋಗಬೇಕು ಎಂದೇನಿಲ್ಲ. ನಿಮ್ಮ ಮನೆಯವರ ಜೊತೆ ಕುಳಿತು ಚರ್ಚಿಸಿ, ಅಥವಾ ಆರ್ಥಿಕ ತಜ್ಞರ ಸಲಹೆ ಪಡೆಯಿರಿ, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ, ಈಗ ಮಾಡುತ್ತಿರುವ ನಿಮ್ಮ ಕೆಲಸ ಮುಂದಿನ ದಿನಗಳಲ್ಲಿ ನಿಮ್ಮ ಕೈ ಹಿಡಿಯ ಬಲ್ಲದೆ ಅಥವಾ ಇದಕ್ಕಿಂತ ಒಳ್ಳೆಯ ಕೆಲಸವನ್ನು ಹುಡುಕಿದರೆ ಒಳ್ಳೆಯದೇ ಎಂಬುದರ ಬಗ್ಗೆ ಈಗಿನಿಂದಲೇ ತಯಾರಿ ನಡೆಸಿಕೊಳ್ಳಿ. ಇದು ನಿಮಗೆ ಮುಂಬರುವ ದಿನಗಳಲ್ಲಿ ಭದ್ರವಾಗಿ ಬೇರೂರಿ ನಿಲ್ಲಲು ಸಹಾಯವಾಗುತ್ತದೆ.

ಮನೆ ಅಡುಗೆ ರುಚಿಯ ಮುಂದೆ ಬೇರೆಲ್ಲವೂ ಶೂನ್ಯ : -

ಮನೆ ಅಡುಗೆ ರುಚಿಯ ಮುಂದೆ ಬೇರೆಲ್ಲವೂ ಶೂನ್ಯ : -

ಸಮಯದ ಅಭಾವದಿಂದ ವಾರದಲ್ಲಿ ಕನಿಷ್ಠ ಐದರಿಂದ ಆರು ದಿನಗಳು ಕೇವಲ ಹೋಟೆಲ್ ಅಡುಗೆಯ ಮೇಲೆ ನಡೆಯುತ್ತಿದ್ದ ನಿಮ್ಮ ಜೀವನ ಈಗ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದೆ. ಅಂದರೆ ನೀವೇ ಸ್ವತಃ ಅಡುಗೆ ಮಾಡಿ ತಿನ್ನುವಂತಹ ಕಾಲ ಬಂದಾಗಿದೆ. ಅಂದ ಮೇಲೆ ಇನ್ನೇಕೆ ಬೇಸರ? ಮನೆಯಲ್ಲಿ ಅಮ್ಮನ ಕೈರುಚಿ ತಿಂದು ಎಷ್ಟೋ ದಿನಗಳಾದವು ಎನ್ನುವವರಿಗಂತೂ ಮತ್ತೊಮ್ಮೆ ಅಮ್ಮನ ಕೈ ತುತ್ತು ತಿನ್ನಲು ಇದು ಸಕಾಲ.

ಕೆಲಸದ ದಿನಗಳಲ್ಲಿ ಕೆಲವೊಂದು ಬಾರಿ ಮಧ್ಯಾಹ್ನದ ಊಟ ಮಿಸ್ ಆಗುತ್ತಿರುತ್ತದೆ. ಆದರೆ ಈಗ ಮನೆಯಲ್ಲೇ ಇರುವ ಕಾರಣ ಕಣ್ಣಿಗೆ ಬೇಕಾದ ಆಹಾರಗಳನ್ನು ಎಲ್ಲರೂ ಒಟ್ಟುಗೂಡಿ ತಯಾರು ಮಾಡಿ ಸಂತೋಷವಾಗಿ ತಿಂದು ಆರೋಗ್ಯವಾಗಿರಬಹುದು. ಹೊರಗಿನ ಜಂಕ್ ಫುಡ್ ಗಿಂತಲೂ ಮನೆಯ ಅಡುಗೆ ಸಾವಿರ ಪಾಲು ಮೇಲು. ಶುಚಿತ್ವ, ರುಚಿ ಎಲ್ಲದರಲ್ಲೂ ಸೈ ಎನಿಸಿಕೊಳ್ಳುವ ಮನೆ ಅಡುಗೆ ಈಗ ನಿಮ್ಮ ಮುಂದೆ ಊಟದ ತಟ್ಟೆಯಲ್ಲಿ !!

ಮನೆಯ ವಾತಾವರಣದ ಸ್ವಚ್ಛತೆಗೆ ಆದ್ಯತೆ ನೀಡಿ : -

ಮನೆಯ ವಾತಾವರಣದ ಸ್ವಚ್ಛತೆಗೆ ಆದ್ಯತೆ ನೀಡಿ : -

ಬಿಡುವಿಲ್ಲದ ಕೆಲಸದ ಸಮಯದಲ್ಲಿ ಇದುವರೆಗೂ ಮನೆಯನ್ನು ಸ್ವಚ್ಛ ಮಾಡುವುದಿರಲಿ ನಿಮ್ಮನ್ನು ನೀವು ಸ್ವಚ್ಛ ಮಾಡಿಕೊಳ್ಳಲು ಒಂದು ದಿನ ರಜೆ ಹಾಕಬೇಕಾಗಿತ್ತು. ಸಮಯದ ಅಭಾವದಿಂದ ಮಾಡಬೇಕಾದ ಎಲ್ಲಾ ಕೆಲಸಗಳು ಇಷ್ಟು ದಿನ ಹಾಗೇ ಉಳಿದಿದ್ದವು. ನಿಮ್ಮ ಫೋನ್, ಕಂಪ್ಯೂಟರ್ ನಲ್ಲಿ ಬೇಡವಾದ ಫೈಲ್ಗಳನ್ನು ಡಿಲೀಟ್ ಮಾಡುವುದರಿಂದ ಹಿಡಿದು ಮನೆಯಲ್ಲಿನ ರೆಫ್ರಿಜರೇಟರ್ ಅನ್ನು ಸ್ವಚ್ಛಗೊಳಿಸುವ ತನಕ ಯಾವ ಕೆಲಸಗಳನ್ನು ಸರಿಯಾಗಿ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ.

ಆದರೆ ಈಗ ಅದಕ್ಕೆಲ್ಲ ಸಮಯ ಬಂದಿದೆ. ನಿಮ್ಮ ಮನೆಯನ್ನು, ನಿಮ್ಮ ವಸ್ತುಗಳನ್ನು ನಿಮಗೆ ಹೇಗೆ ಬೇಕೋ ಹಾಗೆ ತಯಾರು ಮಾಡಿಕೊಳ್ಳಲು ಮತ್ತು ಜೋಡಿಸಿ ಇಟ್ಟುಕೊಳ್ಳಲು ಇದು ಒಳ್ಳೆಯ ಸಮಯ. ಆರಂಭದಲ್ಲಿ ಒಮ್ಮೆಲೆ ಏಕಾಏಕಿ ಇದನ್ನು ಮಾಡಲು ಸ್ವಲ್ಪ ಕಷ್ಟ ಎನಿಸಿದರೂ ಅಭ್ಯಾಸವಾದ ಬಳಿಕ ಎಲ್ಲವೂ ಸರಾಗವಾಗಿ ಸಾಗುತ್ತದೆ. ನಿಮಗೆ ಒಬ್ಬರೇ ಇದನ್ನೆಲ್ಲ ಮಾಡಲು ಕಷ್ಟವಾದರೆ ಮನೆಯ ಇತರ ಸದಸ್ಯರನ್ನು ನಿಮ್ಮ ಜೊತೆ ಸೇರಿಸಿಕೊಂಡು ಕೆಲಸವನ್ನು ಸುಗಮವಾಗಿ ಮಾಡಿಕೊಳ್ಳಿ.

ಕಿರುಚಿತ್ರಗಳನ್ನು ನೋಡುವ ಅಭ್ಯಾಸ ಮಾಡಿಕೊಳ್ಳಿ : -

ಕಿರುಚಿತ್ರಗಳನ್ನು ನೋಡುವ ಅಭ್ಯಾಸ ಮಾಡಿಕೊಳ್ಳಿ : -

ಸಿಕ್ಕಿರುವ ಎಲ್ಲಾ ಸಮಯವನ್ನು ಕೇವಲ ಮನೆಯ ಸ್ವಚ್ಛತೆಗೆ, ಕುಟುಂಬದವರ ಜೊತೆಯಿರಲು ಅಥವಾ ಯೋಚನೆ ಮಾಡಲು ಉಪಯೋಗಿಸಿಕೊಳ್ಳುವ ಇರಾದೆ ಬೇಡ. ಪ್ರತಿಯೊಬ್ಬರಿಗೂ ಅವರದೇ ಆದ ಒಂದು ಪ್ರೈವೇಟ್ ಸ್ಪೇಸ್ ಇರುತ್ತದೆ. ಹಾಗೆ ನಿಮಗೂ ಕೂಡ. ನೀವು ಸಂತೋಷವಾಗಿ, ಒಬ್ಬಂಟಿಯಾಗಿ, ನೆಮ್ಮದಿಯಾಗಿ ದಿನದ ಸ್ವಲ್ಪ ಹೊತ್ತಾದರೂ ಕಾಲ ಕಳೆಯಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಾಗಾಗಿ ಕೆಲಕಾಲ ಯೂಟ್ಯೂಬ್ನಲ್ಲಿ ಅಥವಾ ನೆಟ್ಫ್ಲಿಕ್ಸ್ ನಲ್ಲಿ ಅರ್ಥಗರ್ಭಿತವಾದ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ಮುಂದಾಗಿ. ಇವುಗಳು ನಿಮ್ಮ ಮನಸ್ಸಿಗೆ ಮುದ ನೀಡುವುದರ ಜೊತೆಗೆ ನಿಮಗೆ ಭರವಸೆಯನ್ನು ತುಂಬುತ್ತವೆ.

ನಿಮ್ಮ ಗುರಿಗಳನ್ನು ಸೆಟ್ ಮಾಡಿಕೊಳ್ಳಿ : -

ನಿಮ್ಮ ಗುರಿಗಳನ್ನು ಸೆಟ್ ಮಾಡಿಕೊಳ್ಳಿ : -

ಯಾರಿಗೇ ಆದರೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇರುತ್ತದೆ. ನನ್ನ ಭವಿಷ್ಯ ಹೀಗೇ ಇರಬೇಕು ಎಂದು ಹಲವಾರು ಮಂದಿ ಕನಸು ಕಂಡಿರುತ್ತಾರೆ. ಮುಂದಿನ ಇಷ್ಟು ವರ್ಷಗಳಲ್ಲಿ ನಾನು ಇದನ್ನು ಸಾಧನೆ ಮಾಡಿಯೇ ತೀರುತ್ತೇನೆ ಎಂಬ ಆಶಾಕಿರಣದೊಂದಿಗೆ ಜೀವನ ಸಾಗಿಸುತ್ತಿರುತ್ತಾರೆ. ಅಂತಹವರು ಈ ಸಂದರ್ಭವನ್ನು ಸರಿಯಾದ ಆಲೋಚನೆ ಮಾಡಿ ನಿರ್ದಿಷ್ಟ ಗುರಿಯನ್ನು ತಲುಪುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳಬಹುದು. ವೈಯಕ್ತಿಕವಾಗಿ, ತಮ್ಮ ಕೆಲಸದಲ್ಲಿ, ಆರೋಗ್ಯದಲ್ಲಿ, ಹಣಕಾಸಿನ ವಿಚಾರದಲ್ಲಿ, ಸಂಬಂಧದಲ್ಲಿ, ದೇವರಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಹ ಸಮಯಗಳ ಬಗ್ಗೆ ಯೋಚನೆ ಮಾಡಬಹುದು.

ಪುಸ್ತಕ ಓದುವ ಹವ್ಯಾಸ ಮರೆತಿಲ್ಲ ತಾನೇ?

ಪುಸ್ತಕ ಓದುವ ಹವ್ಯಾಸ ಮರೆತಿಲ್ಲ ತಾನೇ?

ಓದುವ ಹವ್ಯಾಸ ಹೊಂದಿರುವವರಿಗೆ ಈ ಸಮಯದಲ್ಲಿ ಇನ್ನಷ್ಟು ಪುಸ್ತಕಗಳನ್ನು ಒಟ್ಟುಗೂಡಿಸಿಕೊಂಡು ಜ್ಞಾನಾಭಿವೃದ್ಧಿ ಮಾಡಿಕೊಳ್ಳಲು ಇದು ಸುಸಮಯ. ಓದಿನಿಂದ ಜ್ಞಾನ ಬೆಳೆಯುವುದರ ಜೊತೆಗೆ ಮಾನಸಿಕ ವಿಕಸನ ಉತ್ತೇಜನಗೊಳ್ಳುತ್ತದೆ. ಹಲವು ದಿನಗಳಿಂದ ಧೂಳು ಹಿಡಿದು ಕುಳಿತಿದ್ದ ಪುಸ್ತಕಗಳನ್ನು ಒಮ್ಮೆಲೆ ಕೊಡವಿ ಒಂದು ಕಪ್ ಕಾಫಿ ಜೊತೆ ನಿಮ್ಮ ಚೇರ್ ಮತ್ತು ಟೇಬಲ್ ರೆಡಿ ಮಾಡಿಕೊಂಡು ಓದಲು ಪ್ರಾರಂಭ ಮಾಡಿ. ನಾವು ಇಂದಿಗೂ ನೋಡುತ್ತಿರುವ ಪ್ರಪಂಚದ ಹಲವಾರು ಶ್ರೀಮಂತರು ಸಮಯ ಸಿಕ್ಕಾಗಲೆಲ್ಲ ಪುಸ್ತಕಗಳನ್ನು ಅಭ್ಯಾಸ ಮಾಡುವ ಒಳ್ಳೆಯ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರುಗಳಿಗೆ ಸಮಯ ಸಿಗುವುದೇ ಕಡಿಮೆ. ಆದರೂ ಕೂಡ ಸಿಕ್ಕ ಸಮಯವನ್ನು ಪುಸ್ತಕದ ಅಭ್ಯಾಸಕ್ಕಾಗಿ ಮೀಸಲಿಟ್ಟಿದ್ದಾರೆ. ಈ ಸಮಯದಲ್ಲಿ ಅವರೇ ನಮಗೆ ಸ್ಪೂರ್ತಿ. ಪ್ರಸಿದ್ಧ ಲೇಖಕರ ಹಲವಾರು ಕಾವ್ಯ ಕಾದಂಬರಿಗಳನ್ನು ಓದಿ ವಿಚಾರಗಳನ್ನು ತಿಳಿದುಕೊಳ್ಳಲು ಇದಕ್ಕಿಂತ ಇನ್ನೊಂದು ಸಮಯ ಬೇಕಾಗಿಲ್ಲ.

ಎಲೆಮರೆಕಾಯಿಯಾಗದಿರಿ: -

ಎಲೆಮರೆಕಾಯಿಯಾಗದಿರಿ: -

ಮನುಷ್ಯ ಎಂದ ಮೇಲೆ ಹಲವಾರು ಹವ್ಯಾಸಗಳು, ಚಟಗಳು ಆತನ ಬೆನ್ನು ಬಿದ್ದಿರುತ್ತವೆ. ಕೆಟ್ಟ ಚಟಗಳು ಆತನನ್ನು ಹಾಳು ಮಾಡಿದರೆ, ಒಳ್ಳೆಯ ಹವ್ಯಾಸಗಳು ಮುಂದೊಂದು ದಿನ ಆತನ ಬಾಳಿಗೆ ಬೆಳಕಾಗುತ್ತವೆ. ಕೇವಲ ಮನಸ್ಸಿನ ಖುಷಿಗಾಗಿ ಆರಂಭ ಮಾಡಿದ ಯಾವುದೋ ಒಂದು ಹವ್ಯಾಸ ಒಬ್ಬ ಮನುಷ್ಯನನ್ನು ಎಲ್ಲಿಗೋ ಹೋಗಿ ಮುಟ್ಟಿಸುವ ಅದ್ಭುತ ಶಕ್ತಿ ಹೊಂದಿರುತ್ತದೆ. ಹಾಗಾಗಿ ನಿಮ್ಮ ಪ್ರತಿದಿನದ ದುಡಿಮೆಯ ಜೀವನದ ಜೊತೆಗೆ ನಿಮಗೆ ಒಲಿದು ಬಂದಿರುವ ಕಲೆಯನ್ನು ನೀವೇ ಕೈಯಾರೆ ಹೊಸಕಿ ಹಾಕಬೇಡಿ. ಇಷ್ಟು ದಿನ ಸಮಯದ ಅಭಾವದಿಂದ ನಿಮ್ಮ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯವಾಗದೇ ಹೋಗಿರಬಹುದು. ಆದರೆ ಈಗ ನಿಮ್ಮಲ್ಲಿರುವ ಕಲೆಯನ್ನು ಅದು ಚಿತ್ರಕಲೆಯಾಗಿರಲಿ, ಹಾಡುಗಾರಿಕೆಯಾಗಿರಲಿ, ಕವಿತೆ ಬರೆಯುವುದಾಗಿರಲಿ, ಅಥವಾ ವಸ್ತುಗಳನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರು ಮಾಡುವುದು ಆಗಿರಲಿ ಪ್ರಸ್ತುತಪಡಿಸಲು ಇದು ಅನುಕೂಲವಾದ ಸಮಯವೇ ಸರಿ.

ಹಳೆಯ ನೆನಪುಗಳನ್ನು ಒಮ್ಮೆ ಮೆಲುಕು ಹಾಕಿ : -

ಹಳೆಯ ನೆನಪುಗಳನ್ನು ಒಮ್ಮೆ ಮೆಲುಕು ಹಾಕಿ : -

ನಮ್ಮ ಜೀವನದಲ್ಲಿ ನಾವು ಏನನ್ನೇ ಮರೆತರೂ ನಮ್ಮ ಹಳೆಯ ಸವಿನೆನಪುಗಳು ಮಾತ್ರ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಇರುತ್ತವೆ. ಇವು ಕೇವಲ ಮನಸ್ಸಿಗೆ ಸಂಬಂಧಪಟ್ಟ ವಿಚಾರಗಳೇ ಆಗಿರಬೇಕು ಎಂದೇನಿಲ್ಲ. ನಮಗೆ ಚಿಕ್ಕವಯಸ್ಸಿನಲ್ಲಿ ಸಿಕ್ಕಿದಂತಹ ನವಿಲುಗರಿಯೇ ಆಗಿರಬಹುದು, ಹಳೆಯ ಚಿತ್ರಪಟಗಳು, ನಾವು ಆಟವಾಡುತ್ತಿದ್ದ ಆಟಿಕೆಗಳು, ಚಿಕ್ಕ ಟೇಪ್ ರೆಕಾರ್ಡರ್, ಕುಟುಂಬದ ಜೊತೆ ಕಳೆದ ಸಂದರ್ಭಗಳು ಹೀಗೇ ಇನ್ನೂ ಹತ್ತು ಹಲವಾರು ವಿಷಯಗಳು ನಮಗೆ ಸವಿನೆನಪಾಗಿ ನಮ್ಮ ಮನಸ್ಸಿಗೆ ಖುಷಿಯನ್ನು ಕೊಡುವ ವಿಚಾರಗಳಾಗಿ ನಮ್ಮ ಜೀವನದ ಒಂದು ಭಾಗವಾಗಿರುತ್ತವೆ. ಕೇವಲ ದಿನವಿಡೀ ಟಿವಿ ನೋಡುವುದನ್ನು ಬಿಟ್ಟು ಸುಮ್ಮನೆ ಒಂದು ಕಡೆ ಕುಳಿತು ಅವುಗಳನ್ನೆಲ್ಲಾ ಒಮ್ಮೆ ಮೆಲುಕು ಹಾಕಿದರೆ ನಮ್ಮ ಜೀವನವೆಂಬ ಇದುವರೆಗಿನ ಧಾರವಾಹಿ ನಮ್ಮ ಕಣ್ಣ ಮುಂದೆ ಹಾಗೇ ಒಂದು ಬಾರಿ ಹಾದು ಹೋಗುತ್ತದೆ.

ನಿಮಗೆ ಗೊತ್ತಿರುವ ವಿದ್ಯೆಗಳನ್ನು ಇತರರಿಗೂ ತಿಳಿಸಿ : -

ನಿಮಗೆ ಗೊತ್ತಿರುವ ವಿದ್ಯೆಗಳನ್ನು ಇತರರಿಗೂ ತಿಳಿಸಿ : -

ಈಗಿನ ಆಧುನಿಕ ಯುಗದಲ್ಲಿ ಇಡೀ ಪ್ರಪಂಚವೇ ನಮ್ಮ ಅಂಗೈಯಲ್ಲಿ ಇರುತ್ತದೆ. ಹಾಗಿದ್ದ ಮೇಲೆ ನಾವು ನಮಗೆ ಬೇಕಾದ ವಿಷಯಗಳನ್ನು ಕಲಿಯಲು ಅಥವಾ ನಮಗೆ ತಿಳಿದ ವಿಷಯಗಳನ್ನು ಇನ್ನೊಬ್ಬರಿಗೆ ತಿಳಿಸಿಕೊಡಲು ಲಾಕ್ಡೌನ್ ಆದೇಶವನ್ನು ಮೀರಿ ಮನೆಯ ಹೊರಗಡೆ ಹೋಗಲೇಬೇಕು ಎಂದೇನಿಲ್ಲ. ನಮಗೆ ಚೆನ್ನಾಗಿ ಪರಿಣಿತಿ ಇರುವ ಯಾವುದೇ ವಿಷಯಗಳನ್ನು ಯೂಟ್ಯೂಬ್ ಮುಖಾಂತರ, ವಾಟ್ಸಾಪ್, ಸ್ಕೈಪ್ ತರಹದ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಂಡು ಇತರರಿಗೆ ನೆರವಾಗಬಹುದು.

ನಿಮ್ಮ ಪ್ರೀತಿಪಾತ್ರರೊಡನೆ ನಂಬಿಕೆ ಗಟ್ಟಿಗೊಳಿಸಿಕೊಳ್ಳಿ : -

ನಿಮ್ಮ ಪ್ರೀತಿಪಾತ್ರರೊಡನೆ ನಂಬಿಕೆ ಗಟ್ಟಿಗೊಳಿಸಿಕೊಳ್ಳಿ : -

ದೊಡ್ಡವರ ಒಂದು ಮಾತಿನಂತೆ ಬಂದು ಹೋಗುತ್ತಿದ್ದರೆ ಮಾತ್ರ ಪ್ರೀತಿ, ವಿಶ್ವಾಸ, ಸಂಬಂಧ ಎಲ್ಲವೂ ಉಳಿಯುತ್ತದೆ ಎಂಬ ನಂಬಿಕೆ ಈಗಲೂ ಹಲವರಲ್ಲಿದೆ. ಆದರೆ ಮನೆಯಿಂದ ಹೊರಗೆ ಹೋಗಲಾರದ ಈ ಸಂದರ್ಭದಲ್ಲಿ ನಮ್ಮ ಮನಸ್ಸಿಗೆ ಹತ್ತಿರವಾದವರನ್ನು ಅವರ ಬಳಿಯೇ ಹೋಗಿ ಅವರನ್ನು ಮಾತನಾಡಿಸಬೇಕು ಎಂಬ ಪ್ರಮೇಯವೇ ಇಲ್ಲ. ಫೋನ್ ಮಾಡುವ ಮುಖಾಂತರ, ವಿಡಿಯೋ ಕಾಲ್ ಮಾಡುವ ಮುಖಾಂತರ ಅವರ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಅಥವಾ ಅವರು ಎದುರಿಸುತ್ತಿರುವ ಸಂದರ್ಭಗಳನ್ನು ವಿಚಾರಿಸುವಂತಹ ಮನಸ್ಸು ಮಾಡಿ. ಇದರಿಂದ ಅವರಿಗೂ ನೀವು ಅವರ ಪರ ವಹಿಸುತ್ತಿರುವ ಕಾಳಜಿಯ ಅರಿವಾಗುತ್ತದೆ. ನಿಮ್ಮ ಜೊತೆ ಮಾತನಾಡಿದ ಈ ಸಂದರ್ಭವನ್ನು ಅವರು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಇದರಿಂದ ನಿಮ್ಮ ಮಧ್ಯೆ ಪ್ರೀತಿ ವಿಶ್ವಾಸ ಹೆಚ್ಚಾಗಿ ನಂಬಿಕೆ ಬಲಗೊಳ್ಳುತ್ತದೆ.

ಲಾಕ್ಡೌನ್ ಸಂದರ್ಭವನ್ನು ಡೈರಿಯಲ್ಲಿ ಬರೆಯಿರಿ : -

ಲಾಕ್ಡೌನ್ ಸಂದರ್ಭವನ್ನು ಡೈರಿಯಲ್ಲಿ ಬರೆಯಿರಿ : -

ಕರೋನ ವೈರಸ್ ಉಂಟು ಮಾಡಿದ ಅವಾಂತರ ಹೇಗಿದೆ ಎಂದರೆ ಜಗತ್ತಿನ ಯಾವ ವ್ಯಕ್ತಿಯೂ ಸಹ ಮರೆಯಲೇಬಾರದು ಮತ್ತು ತಾನು ಸಾಯುವವರೆಗೂ ತನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಹೇಳಿಕೊಳ್ಳುವಂತಹ ಸಂದರ್ಭವನ್ನು ಸೃಷ್ಟಿ ಮಾಡಿ ಬಿಟ್ಟಿದೆ. ಏಕೆಂದರೆ ಯಾರೂ ಕೂಡ ಇಂತಹ ದಿನಗಳು ನಮ್ಮ ಜೀವನದಲ್ಲಿ ಎದುರಾಗುತ್ತವೆ ಎಂದು ಅಂದುಕೊಂಡೇ ಇರಲಿಲ್ಲ. ಹಾಗಾಗಿ ಇದೊಂದು ನೆನಪಿಟ್ಟುಕೊಳ್ಳುವಂತಹ ಸಂದರ್ಭ ಆಗಿರುವುದರಿಂದ ಇದರ ಸಂಪೂರ್ಣ ಚಿತ್ರಣವನ್ನು ನಿಮ್ಮ ಪುಟ್ಟ ಡೈರಿಯಲ್ಲಿ ದಾಖಲಿಸಿ ಮುಂದೊಂದು ದಿನ ಯಾವಾಗಲಾದರೂ ನಿಮ್ಮ ಡೈರಿ ಹಾಳೆಗಳನ್ನು ತಿರುವಿ ಹಾಕಿದಾಗ ಮನಸ್ಸಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ.

ಹೆಣ್ಣುಮಕ್ಕಳು ವಿಶೇಷವಾದ ಮೇಕಪ್ ಮಾಡಿಕೊಳ್ಳಬಹುದು : -

ಹೆಣ್ಣುಮಕ್ಕಳು ವಿಶೇಷವಾದ ಮೇಕಪ್ ಮಾಡಿಕೊಳ್ಳಬಹುದು : -

ಇಷ್ಟು ದಿನ ಯಾವುದಾದರೂ ಪಾರ್ಟಿ ಕಾರ್ಯಕ್ರಮಗಳಿಗೆ ಹೊರಡುವ ಮುಂಚೆ ಆತುರಾತುರವಾಗಿ ಮೇಕಪ್ ಮಾಡಿಕೊಂಡು ಹೊರಡುತ್ತಿದ್ದ ನಮ್ಮ ಹೆಣ್ಣುಮಕ್ಕಳಿಗೆ ಈಗ ಸಿಕ್ಕಿರುವ ಸಂಪೂರ್ಣ ಸಮಯ ನಾವು ಇಂತಹ ಮೇಕಪ್ ಅನ್ನು ಇದುವರೆಗೂ ಮಾಡಿಕೊಂಡಿಲ್ಲ ಎನ್ನುವ ಹಾಗೆ ಇಲ್ಲ. ತಮಗೆ ಇಷ್ಟವಾದ, ತಾವು ಯೂಟ್ಯೂಬ್ನಲ್ಲಿ ನೋಡಿದ ಎಂತಹದೇ ಮೇಕಪ್ ಅನ್ನು ಈಗ ಒಮ್ಮೆ ಟ್ರೈ ಮಾಡಬಹುದು. ಯಾವುದೇ ಸಿನಿಮಾ ತಾರೆಗಿಂತ ನಾನೇನು ಕಮ್ಮಿ ಇಲ್ಲ ಎಂಬಂತೆ ಸುಂದರವಾಗಿ ಕಾಣಲು ಬೇಕಾದ ತಯಾರಿ ಮಾಡಿಕೊಳ್ಳಬಹುದು.

ನೋಡಿದಿರಲ್ಲ!! ಮೇಲಿನ ಎಲ್ಲಾ ಬಗೆಯಲ್ಲಿ ನಿಮಗೆ ಸಿಕ್ಕಿರುವ ಈ ಸುದೀರ್ಘ ಆರಾಮದಾಯಕ ಸಮಯವನ್ನು ಹೇಗೆಲ್ಲಾ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು. ಮತ್ತೊಮ್ಮೆ ನಿಮ್ಮ ಇಡೀ ಜೀವಮಾನದಲ್ಲಿ ಎಂದಿಗೂ ಇಂತಹ ಸಮಯ ಬರಲಾರದು. ಆದ್ದರಿಂದ ಮನೆಯಲ್ಲಿದ್ದು ಏನು ಮಾಡುವುದು ಎನ್ನುತ್ತಿದ್ದವರು ಹೀಗೆ ಅವರ ಸಮಯವನ್ನು ಉಪಯೋಗಿಸಿಕೊಂಡರೆ ಬಹಳ ಉತ್ತಮ. ಮತ್ತೊಮ್ಮೆ ಹೇಳುತ್ತಿದ್ದೇವೆ ಮನೆಯಲ್ಲಿರಿ, ಸುರಕ್ಷಿತವಾಗಿರಿ ಮತ್ತು ಆರೋಗ್ಯದಿಂದಿರಿ.

English summary

How To Utilise The Covid 19 Lockdown Period

During this corona lockdowntime people feel very hard to spend time at home, But here are some tips, if you follow this this lockdown time will be wonerfull for you. Read on...
Story first published: Saturday, April 25, 2020, 15:39 [IST]
X
Desktop Bottom Promotion