For Quick Alerts
ALLOW NOTIFICATIONS  
For Daily Alerts

  ಹೆಚ್ಚುವರಿ ಆಹಾರ ಪೋಲಾಗುತ್ತಿದೆ ಎಂಬ ಚಿಂತೆಯೇ?

  By Arshad
  |

  ಭಾರತೀಯ ಸಂಸ್ಕೃತಿಯಲ್ಲಿ ಆಹಾರಕ್ಕೆ ಪೂಜ್ಯ ಸ್ಥಾನವಿದೆ. ಆಹಾರವನ್ನು ವ್ಯರ್ಥವಾಗಿ ಪೋಲು ಮಾಡುವುದು ಹೆಚ್ಚಿನವರಿಗೆ ತುಂಬಾ ಬೇಸರದ ಸಂಗತಿ. ಆದರೆ ಕೆಲವೊಮ್ಮೆ ನಮ್ಮ ಪ್ರಯತ್ನ ಮೀರಿ ಆಹಾರ ವ್ಯರ್ಥವಾಗಿಯೇ ಹೋಗುತ್ತದೆ. ಉದಾಹರಣೆಗೆ ಕೆಲವು ಸ್ನೇಹಿತರು ಅಥವಾ ಅತಿಥಿಗಳು ಮನೆಗೆ ಬರುವವರಿದ್ದಾರೆಂದು ತಿಳಿದಿ ಅವರಿಗಾಗಿ ಅಡುಗೆ ಮಾಡಿಟ್ಟರೆ ಅವರು ಬಂದ ಬಳಿಕವೇ ಅವರು ಊಟ ಮುಗಿಸಿಯೇ ಬಂದಿದ್ದಾರೆ ಎಂದು ತಿಳಿದುಬಂದು ಅನಿವಾರ್ಯವಾಗಿ ಅಷ್ಟು ಆಹಾರ ಪೋಲಾಗುತ್ತದೆ.

  ಕೆಲವೊಮ್ಮೆ ಹೆಚ್ಚು ಅತಿಥಿಗಳು ಆಗಮಿಸಲಿದ್ದಾರೆಂದು ತಿಳಿದು ಹೆಚ್ಚು ಅಡುಗೆ ಮಾಡಿಟ್ಟು ಕಡಿಮೆ ಜನರು ಆಗಮಿಸಿದಾಗಲೂ ಆಹಾರ ಪೋಲಾಗುತ್ತದೆ. ಎಷ್ಟೋ ಜನರು ಒಂದು ಹೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿರುವಾಗ ಇಲ್ಲಿ ಈ ಪರಿಯ ಆಹಾರ ಪೋಲಾಗುತ್ತಿದೆಯೆಲ್ಲಾ ಎಂದು ಮನ ಮರುಗುತ್ತದೆ. ಜೊತೆಗೇ ಈ ಆಹಾರ ತಯಾರಿಸಲು ಖರ್ಚಾದ ಸಾಮಾಗ್ರಿ, ಅಮೂಲ್ಯವಾದ ಇಂಧನ, ಸಮಯ, ಶ್ರಮವೂ ವ್ಯರ್ಥವಾಗುತ್ತದೆ. ಮೇಲಾಗಿ ವ್ಯರ್ಥವಾದ ಆಹಾರವನ್ನು ಎಸೆದರೆ ಕೊಳೆತು ವಾಸನೆ ಬರುವ ಸಂಭವವೂ ಇದೆ.

  ಆದ್ದರಿಂದ ತ್ಯಾಜ್ಯವನ್ನು ವಿಲೇವಾರಿ ಮಾಡುವುದೂ ಇನ್ನೊಂದು ಶ್ರಮವಾಗಿದೆ. ಕೆಲವು ಸುಲಭ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಎಲ್ಲಾ ತೊಂದರೆಗಳಿಂದ ಪಾರಾಗಲು ಸಾಧ್ಯವಿದೆ. ಆಹಾರ ಪೋಲಾಗುವುದನ್ನು ತಪ್ಪಿಸಿ ಸದ್ಬಳಕೆ ಮಾಡಲು ಸಾಧ್ಯವಾಗುತ್ತದೆ. ಭೂದೇವಿಯ ಅಮೂಲ್ಯವಾದ ಕೊಡುಗೆಯನ್ನು ನಾವು ವ್ಯರ್ಥ ಮಾಡಲಿಲ್ಲ, ಸದ್ಬಳಕೆ ಮಾಡಿಕೊಂಡೆವು ಎಂಬ ಸಮಾಧಾನ ಮೂಡುತ್ತದೆ. ಇಂತಹ ಕ್ರಮಗಳ ಬಗ್ಗೆ ಕೆಲವು ವಿವರಗಳನ್ನು ಇಲ್ಲಿ ನೀಡಲಾಗಿದೆ...

  ನಿಮ್ಮ ಹೊರಗಿನ ಊಟವನ್ನು ಮೊದಲೇ ನಿರ್ಧರಿಸಿ

  ನಿಮ್ಮ ಹೊರಗಿನ ಊಟವನ್ನು ಮೊದಲೇ ನಿರ್ಧರಿಸಿ

  ಮನೆಯವರೆಲ್ಲರೂ ಕೂಡಿ ವಾರಾಂತ್ಯದಲ್ಲಿ ಅಥವಾ ಕೆಲವು ನಿರ್ಧಾರಿತ ದಿನಗಳಲ್ಲಿ ಹೊರಗೆ ಊಟ ಮಾಡುವುದು ಸಾಮಾನ್ಯ. ಇಂತಹ ಪರಿಸ್ಥಿತಿಯನ್ನು ಮೊದಲೇ ಊಹಿಸಿಕೊಂಡು ಆ ಪ್ರಕಾರ ಆ ಹೊತ್ತಿನ ಅಡುಗೆ ಮಾಡದೇ ಇರುವುದು ಮತ್ತು ಅದಕ್ಕೂ ಮುಂಚಿನ ಹೊತ್ತಿನ ಊಟವನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸುವುದು ಜಾಣತನ. ಒಂದು ವೇಳೆ ಅಡುಗೆ ಮಾಡಿಡಲೇಬೇಕಿದ್ದರೆ ಫ್ರಿಜ್ಜಿನ ಫ್ರೀಜರಿನಲ್ಲಿಟ್ಟು ಮರುದಿನದ ಅಡುಗೆಗೆ ಉಪಯೋಗಿಸಬಹುದಾದ ಅಡುಗೆಯನ್ನೇ ತಯಾರಿಸಿ.

  ಹೆಚ್ಚು ಹಣ್ಣಾದ ಹಣ್ಣುಗಳನ್ನು ಎಸೆಯಬೇಡಿ, ಜ್ಯಾಮ್ ಮಾಡಿ

  ಹೆಚ್ಚು ಹಣ್ಣಾದ ಹಣ್ಣುಗಳನ್ನು ಎಸೆಯಬೇಡಿ, ಜ್ಯಾಮ್ ಮಾಡಿ

  ಬಾಳೆಹಣ್ಣು ಅತಿಶೀಘ್ರವಾಗಿ ಹಣ್ಣಾಗುವ ಹಣ್ಣು.ಹಣ್ಣಾದ ಎರಡನೆಯ ದಿನದಲ್ಲಿಯೇ ಒಂದು ಕಡೆಯಿಂದ ಕೊಳೆಯಲು ಪ್ರಾರಂಭವಾಗುತ್ತದೆ.ವಾಸ್ತವವಾಗಿ ಈ ಭಾಗ ನೋಡಲು ಕೊಂಚ ಕಂದು ಬಣ್ಣ ಬಂದಿರುತ್ತದೆಯೇ ಹೊರತು ಇದನ್ನು ಯಾವುದೇ ಹಾನಿಯಿಲ್ಲದೇ ಸೇವಿಸಬಹುದು. ಆದರೆ ನಮಗೆ ಸ್ವಲ್ಪ ಗಟ್ಟಿಗಟ್ಟಿಯಾದ ಬಾಳೆಹಣ್ಣನ್ನು ತಿಂದು ಅಭ್ಯಾಸವೇ ಹೊರತು ಕರಗಿರುವ ಹಣ್ಣಲ್ಲ. ಆದ್ದರಿಂದ ಈ ಭಾಗವನ್ನು ಕತ್ತರಿಸಿ ತೆಗೆದು ಉಳಿದ ಭಾಗವನ್ನೇ ಸೇವಿಸುತ್ತೇವೆ. ಹೀಗ ಮಾಡುವ ಬದಲಿಗೆ ಬಾಳೆಹಣ್ಣನ್ನು ಹಾಗೇ ತಿನ್ನದೇ ಇಡಿಯ ಹಣ್ಣನ್ನು ಕಿವುಚಿ ಜ್ಯಾಮ್ ಅಥವಾ ರಾಸಾಯನ ಮಾಡಲು ಉಪಯೋಗಿಸಬಹುದು. ಅಥವಾ ಹಾಲಿನೊಂದಿಗೆ ಜ್ಯೂಸ್ ಮಾಡಿಕೊಂಡು ಕುಡಿಯಬಹುದು. ಹೀಗೆ ಮಾಡುವುದರಿಂದ ಹಣ್ಣಿನ ಸದ್ಬಳಕೆಯೂ ಆಯಿತು,ಸ್ವಚ್ಛತೆಯನ್ನೂ ಕಾಪಾಡಿದಂತೆಯೂ ಆಯಿತು, ಪೋಲಾಗುವುದನ್ನು ತಪ್ಪಿಸಿದಂತೆಯೂ ಆಯಿತು.

  ಒಣಗಿದ ಬ್ರೆಡ್ ಎಸೆಯಬೇಡಿ, ಟೋಸ್ಟ್ ಮಾಡಿ

  ಒಣಗಿದ ಬ್ರೆಡ್ ಎಸೆಯಬೇಡಿ, ಟೋಸ್ಟ್ ಮಾಡಿ

  ನಗರ ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲಡೆ ಬ್ರೆಡ್ ಅಂದರೆ ರೋಗಿಗಳ ಆಹಾರ ಎಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯಿಂದ ಹೆಚ್ಚಿನವರು ಮನೆಯಲ್ಲಿ ಬ್ರೆಡ್ ಇದ್ದರೂ ತಾನು ಆರೋಗ್ಯವಂತ, ತಾನೇಕೆ ಬ್ರೆಡ್ ತಿನ್ನಬೇಕು ಎಂಬ ಭಾವನೆಯಿಂದ ತಿನ್ನುವುದೇ ಇಲ್ಲ. ಹಾಗಾಗಿ ಹೆಚ್ಚಿನ ಬ್ರೆಡ್ ಹಾಗೇ ಉಳಿದು ಹೋಗುತ್ತದೆ. ಎರಡನೆಯ ದಿನ ದಾಟಿದರೆ ಬೂಸ್ಟು ಬರುವ ಸಂಭವಿರುವುದರಿಂದ ಅದಕ್ಕೂ ಮೊದಲೇ ಬ್ರೆಡ್ ನ ಹೋಳುಗಳನ್ನು ಓವನ್ನಿನಲ್ಲಿ ಅಥವಾ ಟೋಸ್ಟರಿನಲ್ಲಿ ಹದವಾಗಿ ಹುರಿದು ಗಟ್ಟಿಯಾದ ಟೋಸ್ಟ್ ಮಾಡಿಟ್ಟುಕೊಳ್ಳಿ. ಮರುದಿನದ ಚಹಾದೊಂದಿಗೆ ಈ ಟೋಸ್ಟ್ ತುಂಬಾ ರುಚಿಕರವಾಗಿರುತ್ತದೆ. ಮಕ್ಕಳು ಈ ಟೋಸ್ಟ್ ಗಳನ್ನು ತುಂಬಾ ಇಷ್ಟಪಡುತ್ತಾರೆ. ಇವನ್ನು ಜ್ಯಾಮ್ ಮತ್ತು ಜೇನಿನೊಂದಿಗೂ ಸವಿಯಬಹುದು.

  ಹೆಚ್ಚುವರಿ ತರಕಾರಿಗಳನ್ನು ಒಣಗಿಸಿ

  ಹೆಚ್ಚುವರಿ ತರಕಾರಿಗಳನ್ನು ಒಣಗಿಸಿ

  ಹಲವು ಬಾರಿ ತಂದ ತರಕಾರಿಗಳನ್ನು ಸಾರು ಮಾಡಲು ಅವಕಾಶವೇ ಇಲ್ಲದೇ ಅಥವಾ ತಂದ ಪ್ರಮಾಣದಲ್ಲಿ ಕೊಂಚ ಉಳಿದು ಹೋದರೆ ಅವುಗಳನ್ನು ಎಸೆಯಬೇಡಿ. ಬದಲಿಗೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮುಂದೆ ಉಪಯೋಗಿಸಬಹುದು. ಒಣಗಿಸಿದ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ಭದ್ರಪಡಿಸಿ ಫ್ರಿಜ್ಜಿನಲ್ಲಿಡಿ.

  ಒಡೆದು ಹೋದ ಹಾಲಿನಿಂದ ಪನ್ನೀರ್ ಮತ್ತು ಗಿಣ್ಣು ತಯಾರಿಸಿ

  ಒಡೆದು ಹೋದ ಹಾಲಿನಿಂದ ಪನ್ನೀರ್ ಮತ್ತು ಗಿಣ್ಣು ತಯಾರಿಸಿ

  ಹಾಲು ಒಡೆಯುವುದು ಅಂದರೆ ಹಾಲು ಮತ್ತು ನೀರು ಬೇರೆಬೇರೆಯಾಗುವುದೇ ಹೊರತು ಕೆಡುವುದಲ್ಲ. ಆದರೆ ಹೆಚ್ಚಿನವರು ಒಡೆದ ಹಾಲನ್ನು ಕೂಡಲೇ ಎಸೆದುಬಿಡುತ್ತಾರೆ. ಬದಲಿಗೆ ಇದಕ್ಕೆ ಹಾಲು ಹುಳಿಯಾಗಿದೆ, ಒಡೆಯುತ್ತದೆ ಎಂಬ ಅನುಮಾನ ಬಂದ ತಕ್ಷಣ ಕೊಂಚ ಶಿರ್ಕಾ ಅಥವಾ ಲಿಂಬೆರಸವನ್ನು ಹಾಕಿ ಕುದಿಸಿ. ಹಾಲು ಕೂಡಲೇ ಒಡೆಯುತ್ತದೆ. ನಂತರ ಸ್ವಚ್ಛವಾದ ಬಟ್ಟೆಯಲ್ಲಿ ಹಿಂಡಿ ಇದನ್ನು ಸೋಸಿ ಬಟ್ಟೆಯಲ್ಲಿದ್ದಂತೆಯೇ ಫ್ರಿಜ್ಜಿನಲ್ಲಿಡಿ. ಮರುದಿನ ಹೊರತೆಗೆದು ಚೌಕಾಕಾರದಲ್ಲಿ ಕತ್ತರಿಸಿದರೆ ರುಚಿಕರ ಪನೀರ್ ಲಭ್ಯ. ಇದನ್ನು ತುರಿದು ಗಿಣ್ಣು ಮೊದಲಾದ ಹಲವು ಸ್ವಾದಿಷ್ಟ ವ್ಯಂಜನಗಳನ್ನೂ ತಯಾರಿಸಬಹುದು.

  ನಿಮ್ಮ ಅಕ್ಕಪಕ್ಕದ ಸ್ವಯಂಸೇವಾ ಸಂಘಟನೆಗಳಿಗೆ ಕರೆಮಾಡಿ

  ನಿಮ್ಮ ಅಕ್ಕಪಕ್ಕದ ಸ್ವಯಂಸೇವಾ ಸಂಘಟನೆಗಳಿಗೆ ಕರೆಮಾಡಿ

  ಇತ್ತೀಚೆಗೆ ಎಲ್ಲಾ ನಗರಗಳಲ್ಲಿ ಹೆಚ್ಚುವರಿ ಊಟವನ್ನು ಅರ್ಹರಿಗೆ ನೀಡುವ ಯೋಜನೆಗಳು ಪ್ರಾರಂಭವಾಗಿವೆ. ಮುಂಬೈಯಲ್ಲಿನ ಡಬ್ಬಾ ವಿತರಿಸುವವರೂ ಹೊಸ ಯೋಜನೆ ಪ್ರಾರಂಭಿಸಿದ್ದಾರೆ. ಅದರಂತೆ ಊಟ ಉಳಿದಿದ್ದರೆ ಆ ಟಿಫಿನ್ ಮೇಲೆ ಒಂದು ಎಕ್ಸ್ ಬರೆದರಾಯಿತು, ಆ ಟಿಫಿನ್ನಿನಲ್ಲಿ ಉಳಿದಿದ್ದ ಊಟ ಹಸಿದವರಿಗೆ ಉಚಿತವಾಗಿ ನೀಡಲಾಗುತ್ತದೆ. ನಿಮ್ಮ ನೆರೆಹೊರೆಯಲ್ಲಿಯೂ ಇಂತಹ ಸ್ವಯಂಸೇವಾ ವ್ಯವಸ್ಥೆ ಇರಬಹುದು. ಆ ಬಗ್ಗೆ ವಿಚಾರಿಸಿ ನಿಮ್ಮ ಉಳಿದ ಊಟವನ್ನು ದಾನರೂಪದಲ್ಲಿ ನೀಡಬಹುದು ಅಥವಾ ಸ್ವಯಂಪ್ರೇರಿತರಾಗಿ ನೀವೇ ಅರ್ಹರಿಗೆ ನೀಡಬಹುದು. ಇದರಲ್ಲಿ ಕೊಂಚ ಸಮಯ ವ್ಯರ್ಥವಾದರೂ ಬಳಿಕ ಸಿಗುವ ನೆಮ್ಮದಿ ಮತ್ತು ಸಂಪನ್ನಭಾವನೆ ಹಣ ನೀಡಿದರೂ ಸಿಗದ ಸಂತೋಷವಾಗಿದೆ.

  English summary

  Tips To Stop Food Wastage

  Sometimes it becomes too difficult to stop the wastage of food. We are going out with friends and have already prepared meals, we don't have that much appetite for dinner but still prepare huge meals and sometimes we don't have idea how many guests will be visiting so we cook more. Have a look at simple tips to prevent food wastage.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more