For Quick Alerts
ALLOW NOTIFICATIONS  
For Daily Alerts

ಕೊರೊನಾ ಭಯ ಹೋಗಲು ಮುಖ್ಯವಾಗಿ ಬೇಕಾಗಿರುವುದು ಏನು ಗೊತ್ತಾ?

By ಲವಕುಮಾರ್ ಬಿ ಎಂ
|

ಇವತ್ತಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಭಯದಿಂದಲೇ ಬದುಕುತ್ತಿದ್ದೇವೆ. ಇದಕ್ಕೆ ಕಾರಣ ಕೊರೋನಾ ಸೋಂಕು ಎಂದರೆ ತಪ್ಪಾಗಲಾರದು. ಈ ರೋಗ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಇಂತಹ ಸಂದರ್ಭದಲ್ಲಿ ಒಂದಷ್ಟು ಮುಂಜಾಗ್ರತೆಯೊಂದಿಗೆ ಧೈರ್ಯ ಜತೆಗೆ ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಕೊರೋನಾ ನಮ್ಮನ್ನು ಬಾಧಿಸಿದೆ ಎಂದಾಕ್ಷಣವೇ ನಮ್ಮ ಸುತ್ತಮುತ್ತಲಿನ ಜನ ಭಯಗೊಳ್ಳುತ್ತಾರೆ. ಅವರು ನಮ್ಮಿಂದ ದೂರವಿರುವ ಪ್ರಯತ್ನ ಮಾಡುತ್ತಾರೆ. ಅವರು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ದಿಢೀರ್ ಆಗಿ ಎದುರಾಗುವ ಈ ಸನ್ನಿವೇಶಗಳು ರೋಗಿಗಳ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ.

ಚಿಕಿತ್ಸೆ ಕೇವಲ ದೇಹಕ್ಕೆ ಮಾತ್ರವಲ್ಲ

ಚಿಕಿತ್ಸೆ ಕೇವಲ ದೇಹಕ್ಕೆ ಮಾತ್ರವಲ್ಲ

ಅದರಲ್ಲೂ ನಾಲ್ಕು ಗೋಡೆಗಳ ನಡುವೆ ಎಲ್ಲರಿಂದ ದೂರವಾಗಿ ಬದುಕುವುದು ಅಷ್ಟು ಸುಲಭವಲ್ಲ. ಈ ವೇಳೆ ರೋಗಿಗಳಿಗೆ ಎಲ್ಲವನ್ನು ಎದುರಿಸುವ ಮಾನಸಿಕ ಸ್ಥೈರ್ಯ ಬೇಕಾಗುತ್ತದೆ. ಆ ಸಂದರ್ಭದಲ್ಲಿ ನಮ್ಮವರು ಎನ್ನುವರೇ ಹೆದರಿ ದೂರದಲ್ಲಿರುತ್ತಾರೆ. ಈ ವೇಳೆ ತಮ್ಮ ರೋಗವನ್ನು ವಾಸಿ ಮಾಡಿಕೊಳ್ಳುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ವೈದ್ಯಕೀಯ ಚಿಕಿತ್ಸೆ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಮರೆಯಬಾರದು. ಸಾಮಾನ್ಯವಾಗಿ ದೇಹದಲ್ಲಿ ಏನಾದರೊಂದು ಸಮಸ್ಯೆ ಕಾಣಿಸಿಕೊಂಡಾಗ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುತ್ತೇವೆ. ಆದರೆ ಕೊರೋನಾ ಹಾಗಿಲ್ಲ ಅದು ಕೇವಲ ದೇಹಕ್ಕೆ ಮಾತ್ರವಲ್ಲದೆ, ಮಾನಸಿಕವಾಗಿಯೂ ರೋಗಿಗಳನ್ನು ಜರ್ಜರಿತರನ್ನಾಗಿ ಮಾಡಿ ಬಿಡುತ್ತದೆ.

ರೋಗವನ್ನು ಮರೆತು ಬದುಕಬೇಕು

ರೋಗವನ್ನು ಮರೆತು ಬದುಕಬೇಕು

ಕಾಯಿಲೆಗಳು ಮನುಷ್ಯನಿಗೆ ಬಂದೇ ಬರುತ್ತದೆ. ಇದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಕಾಯಿಲೆ ಬಂದಾಗ ನಾವೆಲ್ಲರೂ ಹೆದರುತ್ತೇವೆ. ಅದರಲ್ಲೂ ಇದೀಗ ಕಾಡುತ್ತಿರುವ ಕೊರೋನಾವಂತು ಕೇವಲ ರೋಗಿಗಳನ್ನು ಮಾತ್ರವಲ್ಲ. ಅವರ ಸುತ್ತಮುತ್ತ ಇರುವವರನ್ನು ಕೂಡ ಭಯಭೀತರನ್ನಾಗಿಸಿ ಬಿಡುತ್ತದೆ. ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ, ಕಾಯಿಲೆ ಬಂತೆಂದು ತಲೆಕೆಡಿಸಿಕೊಳ್ಳದೆ ಅದಕ್ಕೆ ಚಿಕಿತ್ಸೆ ಪಡೆಯುತ್ತಾ ಕಾಯಿಲೆಯನ್ನು ಮರೆತು ಖುಷಿಯಾಗಿ ಬದುಕೋದನ್ನು ರೂಢಿಸಿಕೊಳ್ಳಬೇಕು. ಆಗ ಸ್ವಲ್ಪ ಮಟ್ಟಿಗೆ ರೋಗದ ನೋವನ್ನು ಮರೆಯಲು ಸಾಧ್ಯವಿದೆ.

ನಮ್ಮಲ್ಲಿ ಹೆಚ್ಚು ಜನ ದೇಹಕ್ಕೆ ಅನಾರೋಗ್ಯ ಬಾಧಿಸಿದರೆ ಮಾನಸಿಕವಾಗಿ ಜರ್ಜರಿತರಾಗಿ ಬಿಡುತ್ತಾರೆ. ಕಾಯಿಲೆಗಳು ವಾಸಿಯಾಗಬೇಕಾದರೆ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ಮರೆಯುತ್ತಾರೆ. ಅನಗತ್ಯ ಆಲೋಚನೆ ಮಾಡುತ್ತಾ ಇನ್ನಷ್ಟು ನೋವುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ಮಾನಸಿಕ ಖಿನ್ನತೆವುಂಟಾಗುವ ಭಯ

ಮಾನಸಿಕ ಖಿನ್ನತೆವುಂಟಾಗುವ ಭಯ

ಕಾಯಿಲೆ ಯಾವುದೇ ಇರಲಿ ಅದರ ಬಗ್ಗೆ ಯೋಚಿಸುತ್ತಾ ಕುಳಿತುಕೊಂಡರೆ ಮಾನಸಿಕ ಖಿನ್ನತೆವುಂಟಾಗಿ ನಮ್ಮ ಮೇಲೆ ನಮಗೆ ಜಿಗುಪ್ಸೆ ಬಂದು ಅದರಿಂದ ಅನಾಹುತವೇ ಜಾಸ್ತಿ. ಆದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ನಮ್ಮಲ್ಲಿ ಖಿನ್ನತೆ ಆವರಿಸಲು ಬಿಡಬಾರದು. ಸದಾ ನಮ್ಮಲ್ಲೊಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಇದು ನಮ್ಮಿಂದ ನಾವೇ ಮಾಡಿಕೊಳ್ಳಬೇಕಾದ ಕ್ರಿಯೆ ಆಗಿರುವುದರಿಂದ ಏನೇ ಆಗಲಿ ನಾನು ಖುಷಿಯಾಗಿಯೇ ಇರುತ್ತೇನೆ ಎಂಬ ಸಂಕಲ್ಪ ಮಾಡಬೇಕು. ನಾನು ಅನುಭವಿಸುತ್ತಿರುವ ಸಮಸ್ಯೆ ನನ್ನದೊಬ್ಬನದಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆಯನ್ನು ಇನ್ನೆಷ್ಟೋ ಮಂದಿ ಎದುರಿಸುತ್ತಿಲ್ಲವೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಸಮಾಧಾನವನ್ನು ನಮಗೆ ನಾವೇ ಮಾಡಿಕೊಂಡರೆ ನಮ್ಮದು ಸಮಸ್ಯೆ ಎನಿಸುವುದೇ ಇಲ್ಲ.

ಇವತ್ತಿನ ಪರಿಸ್ಥಿತಿಯಲ್ಲಿ ಕೆಲವರು ತುತ್ತು ಅನ್ನಕ್ಕೂ ಯೋಚಿಸುವ ಪರಿಸ್ಥಿತಿಯಲ್ಲಿದ್ದರೆ, ಮತ್ತೆ ಕೆಲವರಿಗೆ ಐಷಾರಾಮಿ ಜೀವನವಿದ್ದರೂ ಅದನ್ನು ನೆಮ್ಮದಿಯಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಅವರಲ್ಲಿ ಮಾನಸಿಕ ನೆಮ್ಮದಿಯೇ ಇಲ್ಲದಾಗಿದೆ. ಹೀಗಾಗಿ ಒಂದಷ್ಟು ಸಮಯವನ್ನು ಖುಷಿಯಾಗಿ ಕಳೆಯಲು ಕೂಡ ಸಾಧ್ಯವಾಗುತ್ತಿಲ್ಲ. ರೋಗದ ಭಯದಿಂದಾಗಿ ಇವತ್ತು ನಮ್ಮಲ್ಲಿ, ನಮ್ಮ ಕುಟುಂಬಗಳಲ್ಲಿ ಆಹ್ಲಾದಕರ ವಾತಾವರಣವೇ ನಿರ್ಮಾಣವಾಗುತ್ತಿಲ್ಲ. ನಾವು ಯಾರೊಂದಿಗೂ ಬೆರೆಯುತ್ತಿಲ್ಲ. ಸಂತಸ ದೂರವಾಗಿದೆ. ಸುತ್ತು ಬಳಸಿ ಮತ್ತೆ ರೋಗದ ಬಗ್ಗೆಯೇ ಯೋಚಿಸುವಂತಾಗಿದೆ.

ಸಂಬಂಧಗಳಲ್ಲಿ ಕಂದಕದ ಸೃಷ್ಠಿಸಿದ ಕೊರೋನಾ

ಸಂಬಂಧಗಳಲ್ಲಿ ಕಂದಕದ ಸೃಷ್ಠಿಸಿದ ಕೊರೋನಾ

ಕೊರೋನಾದಂತಹ ಮಹಾಮಾರಿ ನಮ್ಮ ಸಂಬಂಧಗಳ ನಡುವೆ ಅಂತರ ಸೃಷ್ಟಿಸಿ ಕಂದಕ ನಿರ್ಮಾಣ ಮಾಡಿದೆ. ಇದರಿಂದ ನಮಗೆ ಏಕಾಂಗಿತನ ಕಾಡುತ್ತಿದೆ. ನಾವು ಸಂಪಾದಿಸಿದ ಒಂದೊಳ್ಳೆಯ ಸಂಬಂಧ, ಸ್ನೇಹ, ಒಳ್ಳೆತನವೂ ಎಲ್ಲೋ ಒಂದು ಕಡೆ ಕಳೆದು ಹೋಗಿದೆ ಎಂದೆನಿಸಲು ಆರಂಭಿಸಿದೆ.

ಇದಕ್ಕಿಂತ ಮೊದಲು ನಾವು ನಮ್ಮ ಸುತ್ತಲೂ ನಾನು, ನನ್ನದು, ಆಸ್ತಿ, ಅಂತಸ್ತು, ಅಧಿಕಾರ ಎಂಬ ಗೋಡೆಗಳನ್ನು ನಿರ್ಮಿಸಿಕೊಂಡು ಎಲ್ಲರೊಂದಿಗೆ ಬೆರೆತು ಬದುಕುವುದನ್ನು ಮರೆತಿದ್ದೆವು. ಆದರೆ ಈಗ ರೋಗದ ಭಯದಿಂದ ಬಂಧಿವಾಗಿರುವ ಕಾಲದಲ್ಲಿ ಸಂಬಂಧದ ಮೌಲ್ಯವೇನು ಎಂಬುದು ಅರಿವಾಗುತ್ತಿದೆ.

ಎಲ್ಲವನ್ನು ಸಂತಸದಿಂದಲೇ ಎದುರಿಸೋಣ

ಎಲ್ಲವನ್ನು ಸಂತಸದಿಂದಲೇ ಎದುರಿಸೋಣ

ನಮ್ಮ ದೇಹಕ್ಕೆ ಆವರಿಸುವ ಕಾಯಿಲೆಗೆ ವೈದ್ಯರು ಚಿಕಿತ್ಸೆ ನೀಡಬಹುದು. ಆದರೆ ಮಾನಸಿಕ ಆರೋಗ್ಯಕ್ಕೆ ಕೆಲವೊಮ್ಮೆ ನಾವೇ ಚಿಕಿತ್ಸೆ ಮಾಡಿಕೊಳ್ಳಬೇಕಾಗುತ್ತದೆ. ಕೆಟ್ಟ ಆಲೋಚನೆಗಳಿಂದ ದೂರವಾಗ ಬೇಕಾದರೆ ಮೊದಲಿಗೆ ಒಳ್ಳೆಯ ವಿಚಾರಗಳತ್ತ ಮನಸ್ಸನ್ನು ಕೊಂಡೊಯ್ಯಬೇಕು. ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹರಿಸುವುದು, ಓದುವುದು, ಸಂಗೀತ ಕೇಳುವುದು ಹೀಗೆ ತಮಗೆ ಹಿತವೆನಿಸುವುದನ್ನು ಮಾಡುತ್ತಾ ನಮ್ಮ ಸುತ್ತಲೂ ಒಂದು ಆಹ್ಲಾದಕರ ವಾತಾವರಣವನ್ನು ಬೆಳೆಸಿಕೊಳ್ಳಬೇಕು. ಇದು ನಮಗೆ ನಮ್ಮಲ್ಲಿ ಮಾನಸಿಕ ಶಕ್ತಿಯನ್ನು ತುಂಬುವುದರೊಂದಿಗೆ ಎಲ್ಲವನ್ನೂ ಸಂತಸದಿಂದ ಎದುರಿಸುವ ಧೈರ್ಯ ತುಂಬುತ್ತದೆ. ಇದಕ್ಕಿಂತ ಇನ್ನೇನು ಬೇಕು ಅಲ್ಲವೆ?

English summary

Need Mental Courage to Fight Against Coronavirus

People are living with coronafear, Need mental courage to fight against coronavirus, read on...
Story first published: Saturday, October 3, 2020, 9:22 [IST]
X
Desktop Bottom Promotion