For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮೂಲಂಗಿ ತಿನ್ನುವುದರಿಂದ ಈ 5 ಲಾಭಗಳಿವೆ

|

"ಆರೋಗ್ಯ ಚೆನ್ನಾಗಿರ್ಬೇಕಾದ್ರೆ, ಮೈಕೈ ಗಟ್ಟಿಮುಟ್ಟಾಗಿರ್ಬೇಕಾದ್ರೇ ಯಾವ ಥರದ ಆಹಾರಪದಾರ್ಥಾನಾ ತಿನ್ನಬೇಕು?" ಅಂತಾ ನಿಮ್ಮ ಫ಼್ಯಾಮಿಲಿ ಡಾಕ್ಟ್ರು ಹತ್ರ ಒಂದ್ಸಲ ಕೇಳ್ನೋಡಿ. ಅವರು ಮೊದಲು ನಿಮಗೆ ಸಲಹೆ ಮಾಡೋದೇ ಹಾಲು, ಹಣ್ಣುಗಳು, ಮತ್ತೆ ತರಕಾರಿಗಳನ್ನ. ಯಾಕೆ ಹೀಗೆ ಅಂದ್ರೆ, ಹಾಲು, ಹಣ್ಣುಗಳು, ಮತ್ತೆ ತರಕಾರಿಗಳಿಲ್ದೇ ಆರೋಗ್ಯಾನಾ ಕಲ್ಪಿಸಿಕೊಳ್ಳೋದಕ್ಕೂ ಆಗೋಲ್ಲ.

ಒಂದೊಂದು ಬಗೆಯ ಹಣ್ಣಿನಲ್ಲೂ, ಒಂದೊಂದು ಬಗೆಯ ತರಕಾರಿಯಲ್ಲೂ ಅದರದ್ದೇ ಆದ ಆರೋಗ್ಯದಾಯಕ ಅಂಶಗಳು ಹೇರಳವಾಗಿರುತ್ವೆ. ಈವಾಗಿನ ಈ ಲೇಖನದಲ್ಲಿ ನಾವು ಗುಣಗಾನ ಮಾಡೋಕೆ ಹೊರಟಿರೋದು ಮೂಲಂಗಿ ಅನ್ನೋ ತರಕಾರಿಯ ಬಗ್ಗೆ. "ಮೂಲಂಗಿ" ಅಂತಾ ಹೇಳಿದ್ರೆ ಕೆಲವರು ಮೂಗು ಮುರಿದಾರು. ಆದರೆ ಅದನ್ನ ಸೇವಿಸೋದ್ರಿಂದ ಎಷ್ಟೆಲ್ಲ ಪ್ರಯೋಜನಗಳಿದ್ದಾವೆ ಅಂತಾ ಗೊತ್ತಾದ್ರೆ ಹಾಗ್ ಮೂಗು ಮುರಿಯೋರು ತಮ್ಮ ಮನಸ್ಸನ್ನ ಬದ್ಲಾಯಿಸಿಕೊಂಡಾರು!!

ಹಾಗಾದ್ರೆ ಈ ಮೂಲಂಗಿ ಅನ್ನೋ ತರಕಾರಿಯಿಂದ ಏನೇನೆಲ್ಲ ಪ್ರಯೋಜನಗಳಿದ್ದಾವೆ ಅನ್ನೋದನ್ನ ತಿಳ್ಕೊಳ್ಳೋಣ, ಬನ್ನಿ:

ಸಮೃದ್ಧ ನಾರಿನಂಶ ಇರೋ ಮೂಲಂಗಿ ಪಚನಕ್ರಿಯೆಗಂತಾನೇ ಹೇಳಿಮಾಡಿಸಿದ್ದು!

ಸಮೃದ್ಧ ನಾರಿನಂಶ ಇರೋ ಮೂಲಂಗಿ ಪಚನಕ್ರಿಯೆಗಂತಾನೇ ಹೇಳಿಮಾಡಿಸಿದ್ದು!

ಸೇವನೆಗೆ ಯೋಗ್ಯವಾಗಿರೋ ನಾರಿನಂಶ ಮೂಲಂಗಿಯಲ್ಲಿ ಸಮೃದ್ಧ! ಇಂತಹ ನಾರಿನಂಶ ಯಾವುದ್ರಲ್ಲಿರುತ್ತೋ ಅಂತಹದ್ದು ಯಾವಾಗಲೂ ಜೀರ್ಣಕ್ರಿಯೆಗೆ ತುಂಬಾ ಒಳ್ಳೇದು ಅನ್ನೋದನ್ನ ಸದಾ ನೆನ್ಪಿಟ್ಕೋಳ್ಳಿ. ಪ್ರತಿದಿನಾನೂ ನೀವು ಸಾಕಷ್ಟು ಮೂಲಂಗಿ ಸಲಾಡ್ ಅನ್ನ ಸೇವಿಸ್ತಾ ಇದ್ರೆ, ನೀವು ಮಲವಿಸರ್ಜನೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ್ದೇ ಇಲ್ಲ. ಮೂಲವ್ಯಾಧಿಗೆ ಮೂಲಂಗೀನೇ ರಾಮಬಾಣ!! ಸಂತುಷ್ಟ ಮತ್ತು ಸಂತೃಪ್ತ ಹೊಟ್ಟೆಯ ರಹಸ್ಯ ಮೂಲಂಗೀನೇ ರೀ!!!

ಕೆಮ್ಮು, ನೆಗಡಿಗೂ ಒಳ್ಳೇದು

ಕೆಮ್ಮು, ನೆಗಡಿಗೂ ಒಳ್ಳೇದು

ಸಾಮಾನ್ಯ ನೆಗಡಿಗೆ ಯಾವುದೇ ಪರಿಹಾರ ಇಲ್ಲ ಅಂತ ಹೇಳಿದ್ರೂ ತಪ್ಪಿಲ್ಲ. ಚಳಿಗಾಲದಲ್ಲಿ ಎಲ್ಲರನ್ನೂ ಕಾಡೋವಂತ ಈ ಸಾಮಾನ್ಯ ನೆಗಡಿ ಮತ್ತು ಕೆಮ್ಮಿಗೆ ನಿಜವಾಗ್ಲೂ ಪರಿಹಾರ ಅಂತೇನಾದ್ರೂ ಇದ್ರೆ ಅದು ಮೂಲಂಗೀನೇ. ಯಾಕಂದ್ರೆ ಮೂಲಂಗಿಯಲ್ಲಿ ಕಟ್ಟಿದ ಮೂಗನ್ನ ನಿರಾಳವಾಗಿಸೋ ಗುಣಧರ್ಮಗಳಿವೆ. ಹಾಗಾಗಿ ಮೂಲಂಗಿ ನಿಮ್ಮ ಗಂಟಲು ಮತ್ತು ಶ್ವಾಸನಾಳಗಳಲ್ಲಿರೋ ಕಫ಼ನಾ ನಿವಾರಿಸಿಬಿಡುತ್ತೆ. ಅದಕ್ಕೇ ಹೇಳ್ತೀವಿ ಕೇಳಿ, ಮುಂದಿನ ಸಲ ನಿಮ್ಮ ಗಂಟಲು, ಮೂಗು ಕಟ್ಟಿದಾಗ ಯಾವುದೋ ಒಂದು ಡಿಕಂಜೆಸ್ಟೆಂಟ್ (ಕಟ್ಟಿದ ಮೂಗು, ಗಂಟಲು ನಿವಾರಕ) ಸಿರಪ್ ಅನ್ನೋ ತಗೋಳೋಕೆ ಹೋಗ್ಬೇಡಿ. ಅದು ನಿಮ್ಮನ್ನ ತೂಕಡಿಸೋ ಹಾಗೆ ಮಾಡುತ್ತೆ. ಅದಕ್ಕೆ ಬದಲು ಒಂದಿಷ್ಟು ಮೂಲಂಗಿಗಳನ್ನು ಸೇವಿಸಿ.

ದೇಹಕ್ಕೆ ರೋಗಗಳನ್ನೆದುರಿಸೋ ತಾಕತ್ತನ್ನ ಕೊಡೋದು ಮೂಲಂಗಿ

ದೇಹಕ್ಕೆ ರೋಗಗಳನ್ನೆದುರಿಸೋ ತಾಕತ್ತನ್ನ ಕೊಡೋದು ಮೂಲಂಗಿ

ವಿಟಮಿನ್ ಎ, ಸಿ, ಇ, ಬಿ6, ಪೊಟಾಷಿಯಂ, ಇತರ ಹಲವಾರು ಖನಿಜಗಳು; ಓಹ್! ಮೂಲಂಗಿಯಲ್ಲಿ ಏನಿದೆ ಏನಿಲ್ಲ ? ಇಷ್ಟೆಲ್ಲ ಸತ್ವಗಳನ್ನ ಹೊಂದಿರೋ ಮೂಲಂಗಿ ನಿಮ್ಮ ದೇಹಕ್ಕೆ ರೋಗಗಳನ್ನ ಎದುರಿಸೋ ತಾಕತ್ತನ್ನ ಕೊಡದೇ ಇರುತ್ತಾ ? ನಿಮ್ಮ ಇಡೀ ಶರೀರದ ರೋಗನಿರೋಧಕ ಶಕ್ತೀನಾ ಹೆಚ್ಸುತ್ತೆ ಮೂಲಂಗಿ. ಇಷ್ಟೇ ಅಲ್ಲದೇ ಮೂಲಂಗಿಯಲ್ಲಿ ಆ್ಯಂಟಿ-ಆಕ್ಸಿಡೆಂಟ್ ಗಳು, ಆ್ಯಂಥೋಸಯನಿನ್ ಗಳು ಭರಪೂರವಾಗಿವೆ. ಹೀಗಾಗಿ ಈ ಮೂಲಂಗಿ ಹೃದಯದ ಆರೋಗ್ಯಕ್ಕೂ ಒಳ್ಳೇದು. ಆದ್ರೆ ಒಂದು ವಿಚಾರ; ಮೂಲಂಗಿಯ ಈ ಎಲ್ಲ ಸದ್ಗುಣಗಳ ಪ್ರಯೋಜನ ನಿಮ್ಮ ದೇಹಕ್ಕೆ ಸರಿಯಾಗಿ ಸಿಗ್ಬೇಕಂದ್ರೆ ಬರೀ ಒಂದೋ ಎರಡೋ ದಿನಗಳಷ್ಟೇ ಇದನ್ನ ಸೇವಿಸಿದ್ರೆ ಸಾಕಾಗೋಲ್ಲ, ಬದಲಿಗೆ ದೀರ್ಘಾವಧಿಯವರೆಗೆ ಇದರ ಸೇವನೆ ಅಗತ್ಯ.

ರಕ್ತದೊತ್ತಡವನ್ನ ಆರೋಗ್ಯಯುತವಾಗಿ ಕಾಪಾಡುತ್ತೆ

ರಕ್ತದೊತ್ತಡವನ್ನ ಆರೋಗ್ಯಯುತವಾಗಿ ಕಾಪಾಡುತ್ತೆ

ಆಗ್ಲೇ ಹೇಳಿರೋ ಪ್ರಕಾರ, ಮೂಲಂಗಿಯಲ್ಲಿ ಪೊಟ್ಯಾಷಿಯಂನ ದಾಸ್ತಾನು ಯಥೇಚ್ಛವಾಗಿರುತ್ತೆ. ಹಾಗಾಗಿ, ಮೂಲಂಗಿ ದೇಹದ ಸೋಡಿಯಂ-ಪೊಟ್ಯಾಷಿಯಂ ನ ಮಟ್ಟವನ್ನ ಆರೋಗ್ಯ ರೀತಿಯಲ್ಲಿ ಇಟ್ಟುಕೊಳ್ಳೋದರ ಮೂಲಕ, ರಕ್ತದ ಒತ್ತಡಾನಾ ನಿಯಂತ್ರಣದಲ್ಲಿ ಇಡುತ್ತೆ. ಮೂಲಂಗಿಯ ಈ ಗುಣದ ಕಾರಣದಿಂದಾಗಿನೇ ವಿಶೇಷವಾಗಿ ಚಳಿಗಾಲದಲ್ಲಿ ಪ್ರತಿಯೊಬ್ಬರೂ ಮೂಲಂಗೀನಾ ಸಾಕಷ್ಟು ಸೇವಿಸಬೇಕು. ಯಾಕಂದ್ರೆ ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡದ ತೊಂದರೆಗಳು ಕಾಡೋಕೆ ಶುರುವಾಗೋದು.

ಚರ್ಮದ ಆರೋಗ್ಯಕ್ಕೂ ಒಳ್ಳೇದು

ಚರ್ಮದ ಆರೋಗ್ಯಕ್ಕೂ ಒಳ್ಳೇದು

ಎಲ್ಲ ಜೀವಸತ್ವಗಳ ಹೊರತಾಗಿ, ಮೂಲಂಗಿಯಲ್ಲಿ ರಂಜಕ ಮತ್ತು ಸತುವಿನಂಶಾನೂ ಹೇರಳವಾಗಿದೆ. ಈ ಎರಡರ ಸಂಯೋಜನೆ ಚರ್ಮದ ಶುಷ್ಕತೇನಾ (ಒಣ ಚರ್ಮ), ಮೊಡವೆಗಳನ್ನ ದದ್ದುಗಳನ್ನ ನಿವಾರಿಸೋದಕ್ಕೆ ತುಂಬಾ ಸಹಕಾರಿ. ಇವೆಲ್ಲದರ ಜೊತೆಗೆ ಮೂಲಂಗಿಯಲ್ಲಿ ಜಲಾಂಶವೂ ಅತ್ಯಧಿಕ. ಹಾಗಾಗಿ ನಿಮ್ಮ ದೇಹಾನಾ ನೈಸರ್ಗಿಕವಾಗಿ ಜಲಪೂರಣವಾಗಿರಿಸೋಕೆ ಮೂಲಂಗಿ ತುಂಬಾ ಉಪಕಾರಿ. ಚಳಿಗಾಲದಲ್ಲಿ ಸಾಕಷ್ಟು ಮೂಲಂಗಿ ಸೇವನೆಯ ಅಭ್ಯಾಸ ಇಟ್ಕೊಂಡಿದ್ರೆ, ಚಳಿಗಾಲದುದ್ದಕ್ಕೂ ನಿಮ್ಮ ಮೈಕಾಂತಿ ಸುಸ್ಥಿತಿಯಲ್ಲೇ ಉಳಿದುಕೊಂಡಿರುತ್ತೆ.

English summary

Mooli for Winters: Health Benefits of Radishes in Kannada

Mooi For Winters, Here are health benefits of radishes, read on.
X