For Quick Alerts
ALLOW NOTIFICATIONS  
For Daily Alerts

ವೈದ್ಯರ ದಿನದ ವಿಶೇಷ: ಒಂದು ಹಲ್ಲಿನ ಕಥೆ..

|

ವೃತ್ತಿಯಲ್ಲಿ ನಾನೊಬ್ಬ ದಂತ ವೈದ್ಯ. ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಸರಕಾರಿ ವಿದ್ಯಾರ್ಥಿ ವೇತನದ ಸಹಾಯದಿಂದಲೇ ಕಷ್ಟಪಟ್ಟು ಬಿ.ಡಿ.ಯಸ್ ಪದವಿ ಪಡೆದಾಗ ವಿದ್ಯಾಭ್ಯಾಸ ಸಾಲ ದುಪ್ಪಟ್ಟಾಗಿತ್ತು. ಡಿಗ್ರಿ ಪಡೆದ ಕೂಡಲೇ ದಂತ ಚಿಕಿತ್ಸಾಲಯ ಆರಂಭಿಸಲೇಬೇಕಾದ ಅನಿವಾರ್ಯತೆಯೂ ನನಗಿತ್ತು. ಕರ್ನಾಟಕ ಕೇರಳದ ಗಡಿಭಾಗದಲ್ಲಿರುವ ಕಾಸರಗೋಡಿನ ಮಂಜೇಶ್ವರದ ಸಮೀಪದ ಹೊಸಂಗಡಿ ಎಂಬಲ್ಲಿ ರಾಷ್ಟ್ರೀಕಿತ ಬ್ಯಾಂಕ್‍ನಿಂದ ಸಾಲ ಮಾಡಿ ದಂತ ಚಿಕಿತ್ಸಾಲಯವನ್ನು 1997ರಲ್ಲಿ ತೆರೆದಿದ್ದೆ.

ಗ್ರಾಮೀಣ ಪ್ರದೇಶವಾದರೂ ಜನಸಂಖ್ಯೆಗೆ ಕೊರತೆ ಇರಲ್ಲಿಲ್ಲವಾದ್ದರಿಂದ ಗಿರಾಕಿ (ರೋಗಿಗಳು) ಸಾಕಷ್ಟು ಬರತೊಡಗಿದ್ದರು. ದಂತ ಚಿಕಿತ್ಸಾಲಯದ ಸಾಲದ ಹೊರೆ, ವಿದ್ಯಾಭ್ಯಾಸದ ಸಾಲವನ್ನು ತೀರಿಸಬೇಕೆಂಬ ಛಲ, ಸಂಬಂಧಿಕರ ಬಳಿಯಿಂದ ತೆಗೆದುಕೊಂಡ ಕೈ ಸಾಲವನ್ನು ಬೇಗನೆ ತೀರಿಸಿ ಋಣಮುಕ್ತನಾಗಬೇಕೆಂಬ ಆತುರ ಇವೆಲ್ಲದರ ಪರಿಣಾಮವಾಗಿ ಬೆಳಗ್ಗೆ 8ರಿಂದ ರಾತ್ರಿ 8.00ರ ವರೆಗೂ ವಾರದ ಏಳೂ ದಿನಗಳಲ್ಲಿ ಚಿಕಿತ್ಸಾಲಯದಲ್ಲಿ ಕುಳಿತು ಬಕಪಕ್ಷಿಯಂತೆ ರೋಗಿಗಳಿಗಾಗಿ ಕಾಯುತ್ತಿದ್ದೆ.

ನನ್ನ ನಿರೀಕ್ಷೆ ಹುಸಿಯಾಗಲೂ ಇಲ್ಲ. ದಿನವೊಂದಕ್ಕೆ ಏನಿಲ್ಲವೆಂದರೂ 20ರಿಂದ 30 ರೋಗಿಗಳು ಮೊದಲ ತಿಂಗಳಲ್ಲೆ ಬರತೊಡಗಿದ್ದರು. ಹೊಸ ಕ್ಲಿನಿಕ್, ಹಣದ ಅನಿವಾರ್ಯತೆ ಮತ್ತು ಆರಂಭಶೂರತ್ವದ ಹುರುಪಿನಿಂದಾಗಿ ಬಹಳ ಉತ್ಸಾಹದಿಂದಲೇ ದಂತವೈದ್ಯಕೀಯ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೆ. ಈ ಮೊದಲು ಹೊಸಂಗಡಿಯಲ್ಲಿ ಬೇರೆ ದಂತ ವೈದ್ಯರಿಲ್ಲದೆ ಜನರು ದೂರದ ಕಾಸರಗೋಡು ಅಥವಾ ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆಯೂ ಇತ್ತು.

ಈ ಕಾರಣದಿಂದಲೇ ಆರಂಭದ ದಿನದಿಂದಲೂ ಬಹಳ ಸಂಖ್ಯೆಯ ರೋಗಿಗಳು ಬರತೊಡಗಿದರು. ಆಗಿನ ದಿನಗಳಲ್ಲಿ ಕೇರಳದಲ್ಲಿ ಬಂದ್ (ಹರತಾಳ) ಬಹಳಷ್ಟು ಆಗುತ್ತಿತ್ತು. ಯಾರಾದರೂ ಪಕ್ಷದ ಕಾರ್ಯಕರ್ತರು ಕೊಲೆಯಾದ ಕೂಡಲೇ ಇಡೀ ಕೇರಳ ಸ್ತಬ್ಧವಾಗುತ್ತಿತ್ತು. ಅದೊಂದು ಸೋಮವಾರ ಎಂದಿನಂತೆ ಕ್ಲಿನಿಕ್‍ನಲ್ಲಿ ಕುಳಿತಿದ್ದೆ, ಆ ದಿನ ಹರತಾಳವಾಗಿದ್ದರೂ ಬಂದಷ್ಟು ಬರಲಿ ಎಂಬ ಆಸೆಯಿಂದ ಕ್ಲಿನಿಕ್‍ನಲ್ಲಿ ಬಕಪಕ್ಷಿಯಂತೆ ರೋಗಿಗಳಿಗಾಗಿ ಕಾಯುತ್ತಿದ್ದೆ.

ಬೆಳಗ್ಗೆ ಹನ್ನೊಂದರ ಹೊತ್ತಿಗೆ ನಡು ವಯಸ್ಸಿಯ ವ್ಯಕ್ತಿಯೊಬ್ಬರು ಅರೆ ಮನಸ್ಸಿನಿಂದಲೇ ಚಿಕಿತ್ಸಾಲಯಕ್ಕೆ ಬಂದರು. ಬರುವಾಗಲೇ ಎಡಗೈಯಿಂದ ಕೆಳಗಿನ ದವಡೆಯ ಬಲಭಾಗದ ದವಡೆ ಹಲ್ಲನ್ನು ಅಲ್ಲಾಡಿಸುತ್ತಾ ನೇರವಾಗಿ ನನ್ನ ದಂತ ಸಿಂಹಾಸನದಲ್ಲಿ ಕುಳಿತು ಬೇಗನೆ ಹಲ್ಲು ತೆಗೆದು ಬಿಡಿ ಡ್ವಾಕ್ಟ್ರೇ...... ಹಲ್ಲು ಒಂದು ತಿಂಗಳಿನಿಂದ ಅಲ್ಲಾಡುತ್ತಿದೆ ಹಾಗೂ ಊಟ ಮಾಡಲು ತೊಂದರೆ ನೀಡುತ್ತದೆ.

ಸುಲಭವಾಗಿ ಕೀಳಬಹುದು ಕಷ್ಟವೇನಿಲ್ಲ ಎಂದು ನನಗೆ ಧೈರ್ಯ ನೀಡುವ ಕೆಲಸವನ್ನೂ ಉಚಿತವಾಗಿ ಮಾಡಿದರು. ನಾನು ಮನಸ್ಸಿನಲ್ಲೆ ಅಂದು ಕೊಂಡೆ ಈ ಅಸಾಮಿ ಸಾಮಾನ್ಯದವನಲ್ಲ, ಸಾಕಷ್ಟು ಬುದ್ಧಿ ಉಪಯೋಗಿಸಿ ತೆಗೆಯಬೇಕೆಂದು ಯೋಚಿಸಿ ಒಂದು ಹತ್ತು ನಿಮಿಷ ಕುಳ್ಳಿರಿಸಿ ಉಭಯ ಕೋಶಲೋಪರಿ ಮಾತಾನಾಡಿಸಿದೆ. ಮಧುಮೇಹ, ರಕ್ತದೊತ್ತಡ ಮುಂತಾದ ದೊಡ್ಡ ದೊಡ್ಡ ರೋಗದ ಹೆಸರು ಹೇಳಿ ಅವರ ಮುಂದೆ ದೊಡ್ಡ ದಂತವೈದ್ಯ ಎಂದು ಪ್ರಮಾಣೀಕರಿಸಿದೆ. ಬೇಗನೆ ಅರಿವಳಿಕೆ ಚುಚ್ಚುಮದ್ದು ನೀಡಿ ಹಲ್ಲು ಸುಲಭದಲ್ಲಿ ಕಿತ್ತರೆ ಹಣ ನೀಡದೆ ಚೌಕಾಷಿ ಮಾಡಿದರೆ ಎಂಬ ಭಯದಿಂದ ಸಾಕಷ್ಟು ನಿಧಾನವಾಗಿ ಮಾತನಾಡುತ್ತಾ ಕೈ ಚೀಲ, ಮುಖದ ಮಾಸ್ಕ್ ಧರಿಸಿ ಒಂದಷ್ಟು ಹೊತ್ತು ಕಾಲಹರಣ ಮಾಡಿದೆ.

ನನ್ನ ಚಿಕಿತ್ಸಾಲಯದ ಆರಂಭದ ದಿನಗಳಲ್ಲಿ ಏಕೋಪಾಧ್ಯಾಯ ಶಾಲೆಯಂತೆ ನಾನೊಬ್ಬನೇ ಇದ್ದೆ ಮತ್ತು ಸವ್ಯಸಾಚಿ (ಆಲ್‍ರೌಂಡರ್) ಪಾತ್ರವನ್ನು ನಿಭಾಯಿಸುತ್ತಿದ್ದೆ. ಅಸಿಸ್ಟೆಂಟ್, ಶುಶ್ರೂಷಕಿ, ಪರಿಚಾರಕಿ ಮತ್ತು ದಂತ ವೈದ್ಯ ಪಾತ್ರವನ್ನು ಮುಲಾಜಿಲ್ಲದೇ ನಾನೊಬ್ಬನೇ ಮಾಡುತ್ತಿದ್ದೆ. ಆ ಮೂಲಕ ಸಹಾಯಕನಿಗೆ ನೀಡುವ 2000 ಉಳಿಸಿದಲ್ಲಿ ಸಾಲದ ಹೊರೆ ಬೇಗ ಕಡಿಮೆಯಾಗುತ್ತದೆ ಎಂಬ ದೂರಾಲೋಚನೆಯು ಅದರಲ್ಲಿ ಅಡಗಿತ್ತು. ನನ್ನ ರೋಗಿ ಕುಳಿತಲ್ಲಿ ಕುಳಿತುಕೊಳ್ಳಲಾಗದೆ ಚಡಪಡಿಸುತ್ತಿದ್ದ. ಬೇಗನೆ ತೆಗೆದು ಬಿಡಿ ಡಾಕ್ಟ್ರೆ ಎಂದು ದಂಬಾಲು ಬಿದ್ದ.

ಸ್ವಲ್ಪ ತಲೆ ಓಡಿಸಿ ಆತನನ್ನು ಅರಿವಳಿಕೆ ಚುಚ್ಚುಮದ್ದು ಕೊಟ್ಟ ಬಳಿಕ ಕ್ಲಿನಿಕ್‍ನ ಹೊರಗಿನ ರೂಮಿನಲ್ಲಿ ಕುಳಿತುಕೊಳ್ಳಿ ಎಂದು ಅತಿ ಬುದ್ಧಿವಂತಿಕೆ ಪ್ರದರ್ಶಿಸಿದೆ. ರೋಗಿಯನ್ನು ಹೊರಗೆ ರೂಮಿನಲ್ಲಿ ಕುಳ್ಳಿರಿಸಿ ಫ್ಯಾನ್ ಚಾಲನೆ ಮಾಡಿ, ದಿನಪತ್ರಿಕೆ ನೀಡಿ ಚೆನ್ನಾಗಿ ತುಟಿ ದಪ್ಪಗಾದ ಮೇಲೆ ಹಲ್ಲು ಕೀಳುವ ಎಂದು ವಿವರಣೆ ನೀಡಿ ಒಳಗೆ ಬಂದು ಕುಳಿತೆ. ಒಂದಷ್ಟು ಸಮಯ ಕುಳ್ಳಿರಿಸಿ ಮತ್ತು ನಾನು ವಿಪರೀತ ಬ್ಯುಸಿ ದಂತ ವೈದ್ಯ ಎಂದು ತೋರಿಸಬೇಕಲ್ಲ. ಈ ನಡುವೆ ಆತ ಬಾಗಿಲು ದೂಡಿ ಒಳಬರಲು ಯತ್ನಿಸಿದಾಗ ಹಲ್ಲು ಕೀಳುವ ಇಕ್ಕಳ ಇನ್ನೂ ಬಿಸಿಯಾಗಿಲ್ಲ (ಕ್ಲೀನ್ ಮಾಡಿ ತೊಳೆದು ಕುದಿಯುವ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ಕುದಿಸಿದ ಬಳಿಕ ಇಕ್ಕಳವನ್ನು ಆ ದಿನಗಳಲ್ಲಿ ಬಳಸಲಾಗುತ್ತಿತ್ತು) ಎಂದು ಮಗದೊಮ್ಮೆ ಕುಳ್ಳಿರಿಸಿ, ನಾನು ಗೆದ್ದೆ ಎಂಬ ಭಾವದಲ್ಲಿ ಮತ್ತೆ ಹತ್ತು ನಿಮಿಷ ಮುಂದೂಡಿದೆ. ಹರತಾಳದ ದಿನವಾದ್ದರಿಂದ ಬೇರೆ ರೋಗಿಗಳು ಬರುವ ಲಕ್ಷಣವೂ ಕಾಣಲಿಲ್ಲ.

ಕೇರಳದಲ್ಲಿ ಹರತಾಳ ಎಂದರೆ ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗುತ್ತದೆ. ದೂರದ ಮಂಗಳೂರಿನ ಮನೆಯಿಂದ ನಾನು ದಿನವೂ ಚಿಕಿತ್ಸಾಲಯಕ್ಕೆ ಬರುತ್ತಿದ್ದೆ. ಬಂದ ದಾರಿಯ ಖರ್ಚಿಗಾದರೂ ಒಬ್ಬ ರೋಗಿ ಸಿಕ್ಕಿದನಲ್ಲ ಎಂದು ಸಮಾಧಾನ ಮಾಡಿಕೊಂಡು, ಮಗದೊಮ್ಮೆ ಕೈಚೀಲ ಧರಿಸಿ ಹೊರಗಿನ ರೂಮಿಗೆ ಹೋಗಿ ನೋಡುವಾಗ ಈ ಅಸಾಮಿಯ ಪತ್ತೆಯೆ ಇಲ್ಲ. ಮನದ ಮೂಲೆಯಲ್ಲಿ ಎಲ್ಲಿಯಾದರೂ ರೋಗಿ ಹೋಗಿ ಬಿಟ್ಟನೇ ಎಂದು ಸಂಶಯ ಬಂದು, ಪಕ್ಕದ ಕೋಟಕಲ್ ಆರ್ಯವೈದ್ಯ ಶಾಲೆಯ ಪರಿಚಾರಕನಲ್ಲಿ ಮೆತ್ತಗೆ ವಿಚಾರಿಸಿದೆ. ಯಾರಾದರೂ ಈಗ ಇಲ್ಲಿಂದ ಹೊರ ಹೋದರೆ ಎಂದು. ಆತ ಹೌದು ಸಾರ್ ಒಬ್ಬ ಮಧ್ಯ ವಯಸ್ಸಿನ ಮನುಷ್ಯ ಒಂದಷ್ಟು ಕಾಟನ್(ಹತ್ತಿ) ತೆಗೆದುಕೊಂಡು ಹೋದ ಎಂದ.

ನನಗೆ ಆ ಕ್ಷಣ ನನ್ನ ಅತಿ ಬುದ್ಧಿವಂತಿಕೆಯೇ ತಿರುಗುಬಾಣವಾಗಿತ್ತು. ನನ್ನ ಮನದ ಮೂಲೆಯಲ್ಲಿ ಅಡಗಿದ್ದ ಸಂಶಯ ನಿಜವಾಗ ತೊಡಗಿತ್ತು. ನೇರವಾಗಿ ನನ್ನ ಕ್ಲಿನಿಕ್‍ನ ಹೊರಗಿನ ರೂಮಿನಲ್ಲಿರುವ ಕಸದ ಬುಟ್ಟಿಯ ಕಡೆಗೆ ನನ್ನ ದೃಷ್ಟಿ ಹಾಯಿಸಿದೆ. ಆ ವ್ಯಕ್ತಿಯ ಕೆಳಗಿನ ದವಡೆಯ ಬಲಭಾಗದ ದವಡೆ ಹಲ್ಲು ನನ್ನನ್ನು ನೋಡಿ ನಗುತ್ತಿತ್ತು. ಅಯ್ಯೋ ಅತಿ ಆಸೆ ಗತಿಗೇಡು, ಆ ವ್ಯಕ್ತಿಯನ್ನು ಆಗಲೇ ಒಳಗೆ ಕೂರಿಸಿ ಹಲ್ಲು ತೆಗೆದು ಕನಿಷ್ಠ ಫೀಸ್ ಆದರೂ ತೆಗೆದುಕೊಳ್ಳಬಹುದಿತ್ತು ಎಂದು ಮನಸ್ಸಿನಲ್ಲೆ ಅಂದುಕೊಂಡೆ.

ಅರಿವಳಿಕೆ ಕೊಟ್ಟ ಬಳಿಕ ಆ ಅಸಾಮಿ ತಾನೇ ಹಲ್ಲು ಕಿತ್ತು ಪಕ್ಕದ ಆರ್ಯವೈದ್ಯ ಶಾಲೆಯಿಂದ ಹತ್ತಿ ಪಡೆದು ಅಲ್ಲಿಂದ ಕಾಲು ಕಿತ್ತಿದ್ದ. ಬಂದ ದಾರಿಗೆ ಸುಂಕವಿಲ್ಲ (ಆಗಿನ ದಿನಗಳಲ್ಲಿ ಮಂಗಳೂರಿನ ಕಾಸರಗೋಡಿನ ರಸ್ತೆಯಲ್ಲಿ ಟೋಲ್ ಅಥವಾ ಸುಂಕ ಇರಲಿಲ್ಲ ಈಗ ಇದೆ) ಅಲುಗಾಡುವ ಹಲ್ಲಿಗೆ ದುಡ್ಡೂ ಇಲ್ಲ ಎಂದು ನನ್ನನ್ನು ನಾನು ಸಮಾಧಾನಿಸಿಕೊಂಡೆ. ಹರತಾಳದ ದಿನವಾದರೂ ಸಿಕ್ಕಿದ ಒಂದು ಗಿರಾಕಿಯನ್ನೂ ಕಳೆದುಕೊಂಡ ನೋವಿನಲ್ಲಿಯೇ ಚಿಕಿತ್ಸಾಲಯವನ್ನು ಬಂದ್ ಮಾಡಿ ಬೇಗನೆ ಮನೆಗೆ ಬಂದು ಪತ್ನಿಯ ಬಳಿ ದಂತ ರಾಮಾಯಣದ ಒಂದು ಹಲ್ಲಿನ ಕಥೆಯನ್ನು ಹೇಳಿ ನಕ್ಕು ಮನಸ್ಸು ಹಗುರಾಗಿಸಿಕೊಂಡೆ.

ಮರುದಿನವೇ ಕ್ಲಿನಿಕ್‍ಗೆ ಹೊಸ ಸಹಾಯಕನನ್ನು ನೇಮಿಸಿದೆ ಮತ್ತು ಅಲುಗಾಡುವ ಹಲ್ಲು ಕೀಳಿಸಲು ಬರುವ ರೋಗಿಗಳಿಗೆ ಅರಿವಳಿಕೆ ಚುಚ್ಚುಮದ್ದು ಕೊಟ್ಟು ಕೂಡಲೇ ಹಲ್ಲು ಕೀಳುವ ಅಭ್ಯಾಸ ಶುರು ಮಾಡಿಕೊಂಡೆ. ಈ ಅಭ್ಯಾಸ ಈಗಲೂ ನನ್ನ ಚಿಕಿತ್ಸಾಲಯದಲ್ಲಿ ಮುಂದುವರಿಯುತ್ತಿದೆ. ಒಮ್ಮೆ ಮಾಡಿದ ತಪ್ಪನ್ನು ಮಗದೊಮ್ಮೆ ಮಾಡಬಾರದು ಎಂಬ ತತ್ವವನ್ನು ನಿಯತ್ತಾಗಿ ಪರಿಪಾಲಿಸುತ್ತಿದ್ದೇನೆ.

ಡಾ|| ಮುರಲೀ ಮೋಹನ್ ಚೂಂತಾರು

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ - 671 323

English summary

Doctors Day Special: A Teeth Story From Dr. Murali Mohan Choontharu

Here are interesting story for doctors day shared by Dr Murali Mohan Choontharu, Read on.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X