For Quick Alerts
ALLOW NOTIFICATIONS  
For Daily Alerts

ಈ ಆಹಾರಗಳು ಮೆದುಳು ಚುರುಕಾಗಿಸುತ್ತೆ, ತಾರುಣ್ಯ ಕಾಪಾಡುತ್ತೆ

|

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಕನ್ನಡದ ಗಾದೆಯಲ್ಲಿ ಬಹಳ ಆಳವಾದ ಅರ್ಥವಿದೆ. ನಮ್ಮ ಆಹಾರ ಕೇವಲ ಹಸಿವನ್ನು ನೀಗಿಸುವ ಕೆಲಸವನ್ನಷ್ಟೇ ಮಾಡಿದರೆ ಸಾಲದು, ಬದಲಿಗೆ ಭಾವನಾತ್ಮಕ ಆರೋಗ್ಯಕ್ಕೂ ಪೂರಕವಾಗುವಂತಿರಬೇಕು. ಅಂದರೆ, ಮೆದುಳಿಗೆ ಸೂಕ್ತ ಪೋಷಕಾಂಶಗಳನ್ನು ಒದಗಿಸುವ ಮೂಲಕ ಆರೋಗ್ಯಕರ ರಸದೂತಗಳ ಸ್ರವಿಕೆಗೆ ನೆರವಾಗುವಂತಿರಬೇಕು. ಎಷ್ಟೋ ಬಾರಿ, ಕೆಲವು ಆಹಾರಗಳನ್ನು ನಾವು ಯಾವುದೋ ಕಾರಣದಿಂದ ಸೇವಿಸಲು ಹೋಗುವುದೇ ಇಲ್ಲ.

ಉತ್ತಮ ಉದಾಹರಣೆ ಎಂದರೆ ಹುರುಳಿ. ಇದನ್ನು ಎತ್ತುಗಳಿಗೆ ತಿನ್ನಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಈ ಪೌಷ್ಟಿಕ ದ್ವಿದಳ ಧಾನ್ಯದಿಂದ ನಾವು ವಂಚಿತರಾಗುತ್ತೇವೆ. ಆದರೆ ಈ ಪೂರ್ವಾಗ್ರಹ ನಂಬಿಕೆಗಳನ್ನು ಮೀರಿ ಮೆದುಳು ಮತ್ತು ಶರೀರದ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳನ್ನು ಆದಷ್ಟೂ ಮಟ್ಟಿಗೆ ಸೇವಿಸುವ ಮೂಲಕ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಶರೀರದ ಅಗತ್ಯತೆಗೆ ತಕ್ಕಂತೆ ಆಹಾರಗಳನ್ನು ಸೇವಿಸುತ್ತಾರೆ ಹಾಗೂ ಈ ಭರದಲ್ಲಿ ಮೆದುಳಿಗೆ ಅವಶ್ಯವಿರುವ ಆಹಾರಗಳನ್ನು ಮರೆತೇ ಬಿಡುತ್ತಾರೆ.

ಒಂದು ಸಾಮಾನ್ಯ ನಂಬಿಕೆಯ ಪ್ರಕಾರ, ಯಾವ ಆಹಾರ ನಮ್ಮ ಹೃದಯಕ್ಕೆ ಒಳ್ಳೆಯದಲ್ಲವೋ, ಅದು ಮೆದುಳಿಗೂ ಒಳ್ಳೆಯದಲ್ಲ. ಹಾಗಾಗಿ, ಇನ್ನು ಮುಂದೆ ನಿಮಗೆ ಇಷ್ಟ ಎಂದು ಅನಾರೋಗ್ಯಕರ ಸಿದ್ಧ ಆಹಾರಗಳಾದ ಬರ್ಗರುಗಳನ್ನು ತಿನ್ನುವ ಮುನ್ನ ಇನ್ನೊಮ್ಮೆ ಯೋಚಿಸಿ. ಏಕೆಂದರೆ ಇವುಗಳಲ್ಲಿ ಬಳಸಲಾಗಿರುವ ಎಣ್ಣೆಗಳು ಸಂತೃಪ್ತ ಕೊಬ್ಬುಗಳಿಂದ ಸಿದ್ಧಪಡಿಸಿದ್ದಾಗಿದ್ದು ನಿಮ್ಮ ಹಸಿವನ್ನು ತಣಿಸುವುದಕ್ಕೂ ಹೆಚ್ಚಾಗಿ ನಿಮ್ಮ ಕಣ್ಣುಗಳಿಗೆ ಚೆನ್ನಾಗಿ ಕಾಣಬೇಕೆಂಬ ಉದ್ದೇಶದಿಂದಲೇ ತಯಾರಿಸಲಾಗಿರುತ್ತದೆ. ಇದೇ ಕಾರಣಕ್ಕೆ ಸಿದ್ಧ ಆಹಾರ ಸಂಸ್ಥೆಗಳು ಬೇರೆ ಯಾವುದೇ ಉತ್ಪನ್ನಕ್ಕೂ ಇಲ್ಲದಷ್ಟು ಭರ್ಜರಿಯಾದ ಪ್ರಚಾರವನ್ನು ಇವುಗಳ ಅತಿ ಸುಂದರವಾದ ಚಿತ್ರಗಳ ಮೂಲಕ ನೀಡುತ್ತವೆ.

ಈ ಆಹಾರಗಳ ಸೇವನೆ ಹೆಚ್ಚಿದಷ್ಟೂ ಹೃದಯದ ಸ್ತಂಭನದ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ಭಾರತದಲ್ಲಿ ಪಾಮ್ ಆಯಿಲ್ ಅಥವಾ ತಾಳೆ ಎಣ್ಣೆಯನ್ನು ಸಿದ್ಧ ಆಹಾರ ಸಂಸ್ಥೆಗಳು ಬಳಸುತ್ತಿದ್ದು ಈ ಎಣ್ಣೆ ಅಪಾಯಕರ ಎಂಬ ಕಾರಣಕ್ಕೆ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿರುವ ಕಾರಣಕ್ಕೇ ತೃತೀಯ ದೇಶಗಳಲ್ಲಿ ಅಗ್ಗವಾಗಿ ಮಾರಲ್ಪಡುತ್ತಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇದರ ಬದಲಿಗೆ ಒಮೆಗಾ 3 ಕೊಬ್ಬಿನ ಆಮ್ಲಗಳಿರುವ ಆಹಾರಗಳು ರಕ್ತನಾಳಗಳನ್ನು ಶುದ್ದೀಕರಿಸಿ ರಕ್ತಪರಿಚಲನೆ ಉತ್ತಮವಾಗುವಂತೆ ಮಾಡುತ್ತವೆ ಹಾಗೂ ಖಿನ್ನತೆಯಿಂದಲೂ ತಡೆಯುತ್ತವೆ. ಇಂದಿನ ಲೇಖನದಲ್ಲಿ ಇಂತಹ ಗುಣವಿರುವ ಕೆಲವು ಆಹಾರಗಳನ್ನು ವಿವರಿಸಲಾಗಿದೆ:

1. ಒಣಫಲಗಳು ಮತ್ತು ಬೀಜಗಳು:

1. ಒಣಫಲಗಳು ಮತ್ತು ಬೀಜಗಳು:

ಇವುಗಳಲ್ಲಿ ಏಕ ಅಸಂತೃಪ್ತ ಕೊಬ್ಬುಗಳಿದ್ದು ರಕ್ತನಾಳಗಳಲ್ಲಿ ಜಿಡ್ದು ಉಂಟಾಗುವುದನ್ನು ತಡೆಯುತ್ತದೆ ಹಾಗೂ ಮನೋಭಾವವನ್ನು ಉತ್ತಮಗೊಳಿಸುವ ಸೆರೋಟೋನಿನ್ ರಸದೂತಗಳ ಸ್ರವಿಕೆಗೆ ನೆರವಾಗುತ್ತವೆ. ಅಲ್ಲದೇ ಇವುಗಳಲ್ಲಿ ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು ಜೀವಕೋಶಗಳನ್ನು ಉತ್ಕರ್ಷಣಶೀಲ ಒತ್ತಡದಿಂದ (oxidation stress) ರಕ್ಷಿಸುತ್ತವೆ. ಈ ಒತ್ತಡ ವಯಸ್ಸಾದಂತೆಯೇ ಹೆಚ್ಚುತ್ತಾ ಹೋಗುತ್ತದೆ ಹಾಗೂ ಸ್ಮರಣಶಕ್ತಿ ಕುಂದುತ್ತದೆ. ಈ ಕೊರತೆ ಎದುರಾಗದೇ ಇರಲು ವಿಟಮಿನ್ ಇ ಇರುವ ಒಣಫಲಗಳು ಮತ್ತು ಬೀಜಗಳು ಉತ್ತಮ ಆಯ್ಕೆಯಾಗಿವೆ.

ಉತ್ತಮ ಆಯ್ಕೆಗಳೆಂದರೆ:

ಬಾದಾಮಿ

ಸೂರ್ಯಕಾಂತಿ ಬೀಜಗಳು

ಹೇಜೆಲ್ ಬೀಜಗಳು

ಅಕ್ರೋಟು

2. ಮೀನು:

2. ಮೀನು:

ಇವು ಒಮೆಗಾ 3 ಕೊಬ್ಬಿನ ಆಮ್ಲಗಳ ಉತ್ತಮ ಮೂಲಗಳಾಗಿವೆ. ಇವು ಜೀವಕೋಶಗಳ ಹೊರಪದರದ ರಚನೆಗೆ ಅಗತ್ಯವಾಗಿವೆ. ವಿಶೇಷವಾಗಿ ಮೆದುಳಿನ ಜೀವಕೋಶಗಳಿಗೆ ಅಗತ್ಯವಾಗಿದ್ದು ಮೆದುಳಿನ ಕ್ಷಮತೆ ಹೆಚ್ಚಲು ನೆರವಾಗುತ್ತವೆ. ತೈಲಯುಕ್ತ ಮೀನುಗಳು ಉತ್ತಮ ಆಯ್ಕೆಯಾಗಿವೆ.

ನೀವು ಆಯ್ದುಕೊಳ್ಳಬೇಕಾದ ಮೀನುಗಳೆಂದರೆ:

ಸಾಲ್ಮನ್

ಬಂಗಡೆ

ಟ್ಯೂನಾ

ಹೆರ್‍ರಿಂಗ್

ಉಳಿದಂತೆ ಒಣಫಲಗಳು, ಅಗಸೆ ಬೀಜ ಮತ್ತು ಇತರ ಬೀಜಗಳಿಂದಲೂ ಒಮೆಗಾ 3 ಕೊಬ್ಬಿನ ಆಮ್ಲಗಳನ್ನು ಪಡೆಯಬಹುದು.

3. ಸೋಯಾ ಅವರೆ:

3. ಸೋಯಾ ಅವರೆ:

ಇವುಗಳಲ್ಲಿ ಸಸ್ಯಜನ್ಯ ಪ್ರೋಟೀನ್, ಕರಗುವ ನಾರು ಮತ್ತು ಕೊಬ್ಬುಗಳಿವೆ. ಮೆದುಳಿನ ಆರೋಗ್ಯಕ್ಕೆ ಇವು ಉತ್ತಮವಾಗಿವೆ ಹಾಗೂ ಮೆದುಳು ಶಾಂತವಾಗಿರಲು ಹಾಗೂ ಆರೋಗ್ಯಕರ ಬೆಳವಣಿಗೆ ಪಡೆಯಲು ನೆರವಾಗುತ್ತವೆ.

ನಿತ್ಯವೂ ಒಂದು ಕಪ್ ನಷ್ಟು ಸೋಯಾ ಅವರೆಗಳನ್ನು ಸೇವಿಸಿದರೆ ಮೆದುಳಿನ ಆರೋಗ್ಯವೂ ಚೆನ್ನಾಗಿಯೇ ಇರುತ್ತದೆ.

4. ಬೆಣ್ಣೆ ಹಣ್ಣು:

4. ಬೆಣ್ಣೆ ಹಣ್ಣು:

ಇದು ಕೇವಲ ರುಚಿಕರ ಮಾತ್ರವಲ್ಲ, ಅಸಂತೃಪ್ತ ಕೊಬ್ಬುಗಳಿಂದ ಸಮೃದ್ಧವಾಗಿದ್ದು ಮೆದುಳಿಗೂ ಉತ್ತಮ ಆಹಾರವಾಗಬಲ್ಲುದು. ಈ ಕೊಬ್ಬುಗಳು ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಶೀಘ್ರ ಗುಣಮುಖವಾಗಲು ಹಾಗೂ ಕ್ಷಮತೆ ಹೆಚ್ಚಲೂ ನೆರವಾಗುತ್ತದೆ.

ಅಸಂತೃಪ್ತ ಕೊಬ್ಬುಗಳ ಇತರ ಮೂಲಗಳೆಂದರೆ:

ಬಾದಾಮಿ, ಗೋಡಂಬಿ, ಶೇಂಗಾಬೀಜ, ಅಗಸೆ ಬೀಜ, ಚಿಯಾ ಬೀಜಗಳು, ಸೋಯಾ ಅವರೆ, ಸೂರ್ಯಕಾಂತಿ ಮತ್ತು ಕನೋಲಾ ಬೀಜಗಳು ಹಾಗೂ ಮೀನು

5. ಡಾರ್ಕ್ ಚಾಕಲೇಟು

5. ಡಾರ್ಕ್ ಚಾಕಲೇಟು

ಇದರಲ್ಲಿರುವ ಕೋಕೋದಲ್ಲಿ ಫ್ಲೇವನಾಯ್ಡುಗಳಿದ್ದು ಒಂದು ಬಗೆಯ ಆಂಟಿ ಆಕ್ಸಿಡೆಂಟುಗಳೂ ಆಗಿವೆ. ಇವು ಮೆದುಳಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೂ ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತವೆ.

ಕೆಲವು ವರದಿಗಳ ಪ್ರಕಾರ ಮೆದುಳಿನ ಕ್ಷಮತೆಯನ್ನು ಡಾರ್ಕ್ ಚಾಕಲೇಟು ಹೆಚ್ಚಿಸುತ್ತದೆ. ಈ ಚಾಕಲೇಟು ತಿನ್ನುವ ಮೂಲಕ ಕಲಿಕಾ ಸಾಮರ್ಥ್ಯ ಉತ್ತಮಗೊಳ್ಳುತ್ತದೆ ಹಾಗೂ ಇತರ ಮೆದುಳಿಗೆ ಸಂಬಂಧಿಸಿದ ಪ್ರಯೋಜನಗಳನ್ನೂ ಪಡೆಯಬಹುದು.

6. ಧಾನ್ಯಗಳು:

6. ಧಾನ್ಯಗಳು:

ಧಾನ್ಯಗಳನ್ನು ಸೇವಿಸುವ ಮೂಲಕ ಇದರಲ್ಲಿರುವ ವಿಟಮಿನ್ ಇ ಪರಿಣಾಮಗಳ ಪ್ರಯೋಜನವನ್ನೂ ಪಡೆಯಬಹುದು. ಈ ಧಾನ್ಯಗಳು ವಿಟಮಿನ್‌ನ ಉತ್ತಮ ಮೂಲವಾಗಿದೆ.

ಉತ್ತಮ ಆಯ್ಕೆಗಳೆಂದರೆ:

ಕಂದು ಅಕ್ಕಿ, ಬಾರ್ಲಿ, ಬಲ್ಗರ್ ಗೋಧಿ (ಚಿಕ್ಕ ಗೋಧಿ), ಓಟ್ಸ್ ರವೆ, ಇಡಿಯ-ಧಾನ್ಯಗಳ ಪಾಸ್ತಾ ಇತ್ಯಾದಿ.

English summary

Brain Boosting Super Foods To Your Diet And Stay Young Forever

Here are brain boosting super foods diet and stay young forever, read on.
X