For Quick Alerts
ALLOW NOTIFICATIONS  
For Daily Alerts

ಬಾಯಿಯ ಭಾಗದಲ್ಲಿ ಆವರಿಸಬಹುದಾದ ಪ್ರಮುಖ ಕಾಯಿಲೆಗಳು

|

ಮಾನವನ ಆರೋಗ್ಯದ ಅತೀ ಮುಖ್ಯ ಭಾಗ ನಮ್ಮ ಬಾಯಿಯ ಆರೋಗ್ಯ. ಆದರೆ ಇದು ಅತೀ ನಿರ್ಲಕ್ಷಿತ ಭಾಗವೂ ಹೌದು. ಈಗಲೂ ಹೆಚ್ಚಿನ ಜನ ಬಾಯಿಯ ಆರೋಗ್ಯದ ಪ್ರಾಮುಖ್ಯತೆಯನ್ನು ಸರಿಯಾಗಿ ಅರಿತಿಲ್ಲದಿರುವುದೇ ಈ ಉದಾಸೀನತೆಗೆ ಕಾರಣವಿರಬಹುದು. ಪ್ರಾಮುಖ್ಯತೆ ತಿಳಿದ ಕೆಲವರಿಗೆ ಆರೈಕೆಯ ಸರಿಯಾದ ಮಾರ್ಗದ ಅರಿವಿರುವದಿಲ್ಲ.

ಹಾಗಾಗಿ ಅವರು ಬಾಯಿಯ ಆರೋಗ್ಯವನ್ನು ರಕ್ಷಿಸುವಲ್ಲಿ ವಿಫಲರಾಗಬಹುದು. ಇದು ಬಹು ಸುಲಭದಲ್ಲಿ ತಿಳಿದು-ಪಾಲಿಸಬಹುದಾದ ವಿದ್ಯೆಯಾಗಿದ್ದರೂ ಸಾಮಾನ್ಯವಾಗಿ ಅನೇಕರು ತಮ್ಮ ಬಾಯಿಯ ಆರೋಗ್ಯ ಕಾಪಾಡುವಲ್ಲಿ ಎಡವುತ್ತಾರೆ, ಆದರೆ ಇದರಿಂದಾಗುವ ಪರಿಣಾಮಗಳ ಬಗ್ಗೆ ಕೇಳಿದರೆ ಮಾತ್ರ ನೀವು ಆಶ್ಚಾರ್ಯಚಕಿತವಾಗುವಿರಿ! ಹೌದು ಬಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಯಾಮಾರಿದರೂ ಕೆಲವೊಂದು ಖತರ್ನಾಕ್ ಕಾಯಿಲೆಗಳು ನಿಮ್ಮನ್ನು ಆವರಿಸಿಬಿಡಬಹುದು! ಮುಂದೆ ಓದಿ..

ಶೀತದ ವ್ರಣ (Cold Sores)

ಶೀತದ ವ್ರಣ (Cold Sores)

ಜ್ವರದ ವ್ರಣಗಳು ಎಂದೂ ಕರೆಯುವ ಈ ವ್ರಣಗಳು ಜ್ವರದಿಂದಾಗಲೀ ಶೀತದಿಂದಾಗಲೀ ಬರುವುದಿಲ್ಲ. ವಾಸ್ತವವಾಗಿ ಇದು ವೈರಸ್ ಮೂಲಕ ಎದುರಾಗುವ ವ್ರಣಗಳಾಗಿದ್ದು ಒಬ್ಬರಿಂದೊಬ್ಬರಿಗೆ ಸ್ಪರ್ಶದ ಮೂಲಕ ಹರಡುತ್ತವೆ. ಚುಂಬನ, ಒಬ್ಬರು ಬಳಸಿದ ವಸ್ತುಗಳನ್ನು ಇನ್ನೊಬ್ಬರು ಬಳಸುವುದು ಅಥವಾ ಇತರ ಬಗೆಯ ಸ್ಪರ್ಶಗಳಿಂದಲೂ ಹರಡಬಹುದು. ಈ ತೊಂದರೆ ನಿವಾರಿಸಲು ಯಾವುದೇ ಔಷಧಿ ಅಂಗಡಿಯಲ್ಲಿ ಹಚ್ಚಿಕೊಳ್ಳಲು ಮುಲಾಮುಗಳು ಸುಲಭವಾಗಿ ದೊರಕುತ್ತವೆ. ಆದರೆ ಈ ವ್ರಣಗಳು ಸತತವಾಗಿ ಮರುಕಳಿಸುತ್ತಿದ್ದರೆ ಮಾತ್ರ ವೈದ್ಯಕೀಯ ಸಲಹೆ ಅಗತ್ಯವಾಗುತ್ತದೆ. ಆಲಸಿತನದಿಂದ ಹಾಗೇ ಗುಣವಾಗುತ್ತದೆ ಎಂದು ಬಿಟ್ಟರೆ ಇದು ಮುಂದೆ ಉಲ್ಬಣಗೊಂಡು ಕ್ಯಾಂಕರ್ ವ್ರಣ, ಟಿಎಂಜೆ, ಬಾಯಿಯ ದುರ್ವಾಸನೆ ಹಾಗೂ ಬಾಯಿಯ ಕ್ಯಾನ್ಸರ್ ಗೆ ಪರಿವರ್ತಿತಗೊಳ್ಳಬಹುದು.

ಥ್ರಶ್ (Thrush)- ಒಂದು ಬಗೆಯ ಊದಿಕೊಳ್ಳುವ ರೋಗ

ಥ್ರಶ್ (Thrush)- ಒಂದು ಬಗೆಯ ಊದಿಕೊಳ್ಳುವ ರೋಗ

ಕ್ಯಾಂಡಿಯಾ ಯೀಸ್ಟ್ (candida yeast) ಎಂಬ ಶಿಲೀಂಧ್ರದ ಮೂಲಕ ಬಾಧಿಸುವ ತೊಂದರೆ ಚಿಕ್ಕ ಮಕ್ಕಳಿಗೆ ಮತ್ತು ವೃದ್ದರಿಗೇ ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಉಡುಗಿರುವ ವ್ಯಕ್ತಿಗಳು, ಮಧುಮೇಹ, ಪ್ರತಿಜೀವಕ ಔಷಧಿಗಳನ್ನು ಸೇವಿಸುತ್ತಿರುವ ಅಥವಾ ಬೇರಾವುದೋ ಔಷಧಿಯನ್ನು ಸೇವಿಸುತ್ತಿರುವವರು ಅಥವಾ inhaled corticosteroids (ಅಸ್ತಮಾ ರೋಗಕ್ಕೆ ಉಸಿರಿನ ಮೂಲಕ ನೀಡಲಾಗುವ ಔಷಧಿ) ಎಂಬ ಚಿಕಿತ್ಸೆ ಪಡೆಯುವವರಲ್ಲಿಯೂ ಕಾಣಿಸಿಕೊಳ್ಳಬಹುದು. ಈ ಸ್ಥಿತಿಯಲ್ಲಿ ಶಿಲೀಂಧ್ರ ವೃದ್ದಿಗೊಳ್ಳಲು ಸೂಕ್ತ ವಾತಾವರಣ ವಿರುತ್ತದೆ. ಪರಿಣಾಮವಾಗಿ ಇವು ಅಪಾರವಾಗಿ ವೃದ್ದಿಸಿ ಬಾಯಿಯ ಭಾಗದಲ್ಲಿ ವಿಸ್ತರಿಸುತ್ತವೆ. ತಕ್ಷಣವೇ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ಅಗತ್ಯ.

ನಾಲಿಗೆಯಲ್ಲಿ ಕಪ್ಪು ಕೂದಲು (Black Hairy Tongue)

ನಾಲಿಗೆಯಲ್ಲಿ ಕಪ್ಪು ಕೂದಲು (Black Hairy Tongue)

ಈ ಸ್ಥಿತಿ ಎದುರಾದಾಗ ನಾಲಿಗೆಯ ಮೇಲೆ, ಹಿಂಭಾಗದಲ್ಲಿ ಚಿಕ್ಕ ಚಿಕ್ಕ ಕೂದಲಿನಂತಹ ಭಾಗ ಮೇಲೇಳುತ್ತವೆ ಹಾಗೂ ಇವುಗಳಲ್ಲಿ ನೋವಿರುವುದಿಲ್ಲ ಮತ್ತು ಈ ಭಾಗಗಳ ನಡುವೆ ಬ್ಯಾಕ್ಟೀರಿಯಾಗಳು ಅಡಕಿ ಕೂತು ವೃದ್ದಿಗೊಳ್ಳಲು ಸೂಕ್ತವಾದ ಪರಿಸರ ಏರ್ಪಾಟಾಗುತ್ತದೆ. ನಾಲಿಗೆಯನ್ನು ಹೊರಚಾಚಿಚಾದ ಈ ಬೆಳವಣಿಗೆ ನಾಲಿಗೆಯ ಮೇಲೆ ಕೂದಲು ಬೆಳೆದಂತೆ ಕಾಣಿಸುತ್ತದೆ. ಇದಕ್ಕೆ ಅತಿಯಾದ ಪ್ರತಿಜೀವಕ ಔಷಧಿಯ ಸೇವನೆ, ಬಾಯಿಯ ಸ್ವಚ್ಛತೆಗೆ ಕಾಳಜಿ ವಹಿಸದೇ ಇರುವುದು, ಧೂಮಪಾನ, ಟೀ ಅಥವಾ ಕಾಫಿಯನ್ನು ಅತಿಯಾಗಿ ಕುಡಿಯುವುದು ಹಾಗೂ ಬಾಯಿಯಲ್ಲಿ ಅಗತ್ಯ ಪ್ರಮಾಣದ ಲಾಲಾರಸ ಉತ್ಪತ್ತಿಯಾಗದೇ ಇರುವುದು ಕಾರಣಗಳಾಗಿವೆ. ಇದಕ್ಕೆ ಪ್ರಥಮ ಚಿಕಿತ್ಸೆ ಎಂದರೆ ನಿತ್ಯವೂ ಹಲ್ಲುಜ್ಜಿಕೊಂಡ ಬಳಿಕ ನಾಲಿಗೆಯನ್ನು ಸ್ವಚ್ಛಗೊಳಿಸುವ ಉಪಕರಣವನ್ನು ಉಪಯೋಗಿಸಿ ನಾಲಿಗೆಯನ್ನೂ ಕೆರೆದು ಸ್ವಚ್ಛಗೊಳಿಸುವುದು. ಒಂದು ವೇಳೆ ಈಗಾಗಲೇ ಈ ಬೆಳವಣಿಗೆ ಹೆಚ್ಚಾಗಿದ್ದು ನಾಲಿಗೆಯ ಬಣ್ಣ ಗಾಢವಾಗಿದ್ದರೆ ವೈದ್ಯರ ಸಲಹೆ ಪಡೆಯಬೇಕು.

Most Read: ಪುರುಷರು ಕಡೆಗಣಿಸಬಾರದ ಕೆಲವು ಆರೋಗ್ಯ ಸಮಸ್ಯೆಗಳ ಲಕ್ಷಣಗಳು

ಕ್ಯಾಂಕರ್ ವ್ರಣ

ಕ್ಯಾಂಕರ್ ವ್ರಣ

ಬಾಯಿಯ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಈ ಚಿಕ್ಕ ಆದರೆ ಭಾರೀ ನೋವು ತರುವ ಗುಳ್ಳೆಗಳು ಏಕೆ ಬರುತ್ತವೆ ಎಂದು ಸರಿಯಾಗಿ ವಿವರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಈ ಗುಳ್ಳೆಗಳೆದ್ದರೆ ಬಾಯಿ ಅತಿ ಸಂವೇದಿಯಾಗಿ ಕೊಂಚವೂ ಬಿಸಿ, ತಣ್ಣಗೆ, ಕಾರ, ಉಪ್ಪು ಯಾವುದನ್ನೂ ಸಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕೆಲವು ಬಗೆಯ ಸೋಂಕು, ರಸದೂತಗಳು, ಮಾನಸಿಕ ಒತ್ತಡ, ಹಾಗೂ ಕೆಲವು ವಿಟಮಿನ್ನುಗಳು ಆಹಾರದ ಮೂಲಕ ದೊರಕದೇ ಹೋಗುವುದು ಮೊದಲಾದವು ಕಾರಣವಾಗಿವೆ. aphthous ulcers ಎಂದೂ ಕರೆಯಲ್ಪಡುವ ಈ ವ್ರಣಗಳು ನಾಲಿಗೆ, ಕೆನ್ನೆಯ ಒಳಭಾಗ ಹಾಗೂ ಒಸಡುಗಳ ಮೇಲೂ ಕಾಣಿಸಿಕೊಳ್ಳಬಹುದು. ಸಾಮಾನ್ಯ ವಾಗಿ ಇವು ಒಂದರಿಂದ ಎರಡು ವಾರದವರೆಗೆ ಇದ್ದು ತಾವಾಗಿಯೇ ಮಾಯವಾಗುತ್ತವೆ. ಆದರೆ ಇದು ಸತತವಾಗಿ ಮರುಕಳಿಸುತ್ತಿದ್ದರೆ ಇದಕ್ಕೆ ಸ್ಥಳೀಯ ಅರವಳಿಕೆ ಮುಲಾಮು ಗಳನ್ನು ಹಚ್ಚುವ ಮೂಲಕ, ಔಷಧಿಗಳ ಮೂಲಕ ಅಥವಾ ದಂತ ವೈದ್ಯಕೀಯ ಲೇಸರ್ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು.

ಲ್ಯೂಕೋಪ್ಲೇಕಿಯಾ

ಲ್ಯೂಕೋಪ್ಲೇಕಿಯಾ

ಒಂದು ವೇಳೆ ಯಾವುದಾದರೊಂದು ಭಾಗಕ್ಕೆ ಸತತವಾಗಿ ತಗಲುವ ಮೂಲಕ ಎದುರಾಗುವ ಪ್ರತಿಕ್ರಿಯೆಯಿಂದಾಗಿ ಈ ಸ್ಥಿತಿ ಎದುರಾಗುತ್ತದೆ. ಉದಾಹರಣೆಗೆ ಹಲ್ಲೊಂದು ತುಂಡಾಗಿದ್ದರೆ ಈ ಭಾಗಕ್ಕೆ ಸತತವಾಗಿ ತಗಲುವ ನಾಲಿಗೆಯ ಭಾಗದಲ್ಲಿಯೂ ಇದೇ ಆಕಾರದಲ್ಲಿ ಗುಳಿ ಬೀಳಬಹುದು. ವಕ್ರದಂತ ಸರಿಪಡಿಸಲು ಅಳವಡಿಸುವ ಕ್ಲಿಪ್ ಸರಿಯಾಗಿ ಕೂತಿರದಿದ್ದರೆ, ಧೂಮಪಾನ, ಹಾಗೂ ಹೊಗೆಯಿಲ್ಲದ ತಂಬಾಕಿನ ಸೇವನೆ ಮೊದಲಾದವು ಇದಕ್ಕೆ ಕಾರಣವಾಗಿವೆ. ಈ ಸ್ಥಿತಿ ಎದುರಾದಾಗ ಬಾಯಿಯ ಒಳಗಡೆ ಬಿಳಿಯ ತೇಪೆಗಳಂತೆ ಕಾಣುತ್ತವೆ ಹಾಗೂ ಸಾಮಾನ್ಯವಾಗಿ ನೋವು ಇರುವುದಿಲ್ಲ. ಆದರೆ ಇವನ್ನು ಕೆರೆದು ತೆಗೆಯಲೂ ಸಾಧ್ಯವಿಲ್ಲ. ಈ ಸ್ಥಿತಿ ಎದುರಾಗಲು ಮೇದೋಜೀರಕಾಂಗದ ಸ್ಥಿತಿಯೂ ಕಾರಣವಿರಬಹುದು. ಒಂದು ವೇಳೆ ಈ ತೇಪೆಗಳು ಸತತವಾಗಿ ಮರುಕಳಿಸುತ್ತಿದ್ದರೆ ಅಥವಾ ಬಾಯಿಯ ಒಳಭಾಗದಲ್ಲಿ ಏನಾದರೂ ಅಸಹಜವಾದುದು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಕಾಣಬೇಕು.

ಲೈಖೆನ್ ಪ್ಲೇನಸ್ (Lichen Planus)

ಲೈಖೆನ್ ಪ್ಲೇನಸ್ (Lichen Planus)

ಇದೊಂದು ಅಪರೂಪವಾಗಿ ಕಾಣಬರುವ ಕಾಯಿಲೆಯಾಗಿದ್ದು ಕೆನ್ನೆಯ ಒಳಭಾಗ ಅಥವಾ ನಾಲಿಗೆಯ ಮೇಲೆ ದಪ್ಪನೆಯ ನೂಲೊಂದು ಆವರಿಸಿದಂತೆ ಅಥವಾ ಬಿಳಿಯ ತೇಪೆಯಂತೆ ಅಥವಾ ಹೊಳೆಹೊಳೆಯುವ ಉಬ್ಬುಗಳಂತೆ ತೋರುತ್ತವೆ. ಇದಕ್ಕೆ ಕಾರಣ ಏನು ಎಂದು ಇದುವರೆಗೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಂದು ವೇಳೆ ಇದು ಕ್ಷೀಣಮಟ್ಟದ ವ್ರಣವಾಗಿದ್ದರೆ ಚಿಂತೆಗೆ ಕಾರಣವಿಲ್ಲ. ಒಂದು ವೇಳೆ ಇದರಲ್ಲಿ ನೋವಿದ್ದರೆ ಇದಕ್ಕೆ ಹಚ್ಚಿಕೊಳ್ಳಬಹುದಾದ ಮತ್ತು ಸೇವಿಸಬಹುದಾದ ಔಷಧಿಗಳ ಅಗತ್ಯವಿದೆ. ಒಂದು ವೇಳೆ ಇವು ಹರಡುತ್ತಾ ಉಲ್ಬಣಗೊಂಡರೆ ಮಾತ್ರ ಅಪಾಯಕಾರಿಯಾಗಿದ್ದು ಬಾಯಿಯ ಕ್ಯಾನ್ಸರ್ ಗೂ ಕಾರಣವಾಗಬಹುದು. ಈ ಸ್ಥಿತಿ ಕೇವಲ ಒಳಗೆನ್ನೆಗೆ ಮಾತ್ರವಲ್ಲ, ದೇಹದ ಹೊರಭಾಗದ ತ್ವಚೆ, ನೆತ್ತಿಯ ಚರ್ಮ, ಉಗುರುಗಳ ಅಡಿಭಾಗ ಹಾಗೂ ಜನನಾಂಗಳ ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು.

Most Read: ಬಾಯಿಯ ಕ್ಯಾನ್ಸರ್‌ ನಿಯಂತ್ರಿಸುವ ಪವರ್ ಇಂತಹ ಆಹಾರಗಳಲ್ಲಿದೆ!

ಭೂಪಟದಂತಹ ನಾಲಿಗೆ (Geographic Tongue)

ಭೂಪಟದಂತಹ ನಾಲಿಗೆ (Geographic Tongue)

ಒಂದು ವೇಳೆ ನಾಲಿಗೆಯನ್ನು ಹೊರಚಾಚಿದಾಗ ಅಲ್ಲಲ್ಲಿ ಚಿಕ್ಕ ಚಿಕ್ಕದಾಗಿ ಉಬ್ಬಿದ್ದು ಕೆಲವೆಡೆ ತಗ್ಗಾಗಿದ್ದು ಭೂಪಟದಂತೆ ತೋರಿದ್ದರೆ ಈ ವ್ರಣ ಎದುರಾಗಿದೆ ಎಂದು ತಿಳಿದು ಕೊಳ್ಳಬೇಕು. ಈ ಭಾಗಗಳು ಒಂದೇ ಆಕಾರದಲ್ಲಿರದೇ ವಿವಿಧ ಆಕಾರಗಳನ್ನು ಪಡೆಯುತ್ತಾ ತನ್ನ ಗಾತ್ರ ಮತು ಸ್ಥಾನವನ್ನು ಬದಲಿಸುತ್ತಾ ಇರುತ್ತವೆ. ಈ ಬದಲಾವಣೆ ಕೆಲವು ನಿಮಿಷಗಳಿಂದ ಹಿಡಿದು ಕೆಲವು ಘಂಟೆಗಳ ಅವಧಿಯಲ್ಲಿ ಜರುಗಬಹುದು. ಸಾಮಾನ್ಯವಾಗಿ ಈ ಸ್ಥಿತಿ ನಿರಪಾಯಕಾರಿಯಾಗಿದ್ದು ಯಾವುದೇ ಚಿಕಿತ್ಸೆಯಿಲ್ಲದೇ ತನ್ನಿಂತಾನೇ ಗುಣವಾಗುತ್ತದೆ. ಒಂದು ವೇಳೆ ಇಲ್ಲಿ ನೋವಿದ್ದರೆ ಉರಿಯೂತ ನಿವಾರಕ ಗುಳಿಗೆಗಳು ಮತ್ತು ನೋವು ನಿವಾರಕ ಗುಳಿಗೆಗಳೇ ಸಕಾಗುತ್ತವೆ.

ಬಾಯಿಯ ಕ್ಯಾನ್ಸರ್

ಬಾಯಿಯ ಕ್ಯಾನ್ಸರ್

ಒಂದು ವೇಳೆ ಬಾಯಿಯೊಳಗಿನ ವ್ರವಣವೊಂದು ಗುಣವಾಗುವ ಮಾತೇ ಎತ್ತದಲ್ಲಿ, ವಿವರಿಸಲಾಗದೇ ಇರುವ ಮುಖ, ಬಾಯಿ ಅಥವಾ ಕುತ್ತಿಗೆಯ ಜೋಮುಕಟ್ಟುವಿಕೆ, ಅಗಿಯಲು ಕಷ್ಟ ವಾಗುವುದು, ಮಾತನಾಡಲು ಸುಲಭವಾಗದೇ ಇರುವುದು, ನುಂಗಲು ಕಷ್ಟವಾಗುವುದು ಇವೆಲ್ಲಾ ಬಾಯಿಯ ಕ್ಯಾನ್ಸರ್ ನ ಕೆಲವು ಲಕ್ಷಣಗಳಾಗಿವೆ. ಈ ಕ್ಯಾನ್ಸರ್ ಗೆ ನೇರವಾದ ಕಾರಣವೆಂದರೆ ಧೂಮಪಾನ ಹಾಗೂ ಹೊಗೆರಹಿತ ತಂಬಾಕಿನ ಸೇವನೆ. ಉಳಿದಂತೆ ಅತಿಯಾದ ಮದ್ಯಪಾನ, ಸೂರ್ಯನ ಬೆಳಕಿಗೆ ಅತಿಯಾಗಿ ಒಡ್ಡಿಕೊಳ್ಳುವುದು ಹಾಗೂ ಕುಟುಂಬದಲ್ಲಿ ಕ್ಯಾನ್ಸರ್ ನ ಇತಿಹಾಸ ವಿರುವುದು ಸಹಾ ಈ ಕ್ಯಾನ್ಸರ್ ಗೆ ಕಾರಣಗಳಾಗಿವೆ. ಈ ಕ್ಯಾನ್ಸರ್ ಗೆ ಎಚ್ ಪಿ ವಿ (human papillomavirus, HPV) ಎಂಬ ವೈರಸ್ ಕಾರಣ. ಒಂದು ವೇಳೆ ಈ ಲಕ್ಷಣಗಳಲ್ಲಿ ಒಂದಾದರೂ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಕ್ಯಾನ್ಸರ್ ಇನ್ನೂ ಪ್ರಾರಂಭಿಕ ಅವಸ್ಥೆಯಲ್ಲಿದ್ದರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಶೀಘ್ರವೇ ಗುಣವಾಗುತ್ತದೆ.

ಟಿ ಎಂ ಜೆ (TMJ)

ಟಿ ಎಂ ಜೆ (TMJ)

temporomandibular joint syndrome ಎಂಬ ಪದದ ಹೃಸ್ವರೂಪದ ಈ ಟಿ ಎಂ ಜೆ ಹೆಸರೇ ತಿಳಿಸುವಂತೆ ದವಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ತೊಂದರೆಯಾಗಿದೆ. ಈ ಮೂಲಕ ದವಡೆ, ಬಾಯಿ, ಕಿವಿ ಅಥವಾ ಕುತ್ತಿಗೆಯ ಎಡಬಲ ಭಾಗಗಳಲ್ಲಿ ಭಾರೀ ನೋವು ಕಂಡುಬರುತ್ತದೆ. ಬಲವಾಗಿ ಹಲ್ಲು ಕಡಿಯುವ ಅಭ್ಯಾಸ, ಹಲ್ಲು ಅರೆಯುವುದು ಅಥವಾ ಯಾವುದಾದ ರೂ ಅಪಘಾತ ಅಥವಾ ಪೆಟ್ಟಿನಿಂದಾಗಿ ಈ ತೊಂದರೆ ಕಂಡು ಬರುತ್ತದೆ. ಕಾರಣವೇನೇ ಇದ್ದರೂ ಇದರ ಲಕ್ಷಣಗಳು ಮಾತ್ರ ಸಮಾನವಾಗಿರುತ್ತವೆ. ನೋವು, ತಲೆನೋವು, ತಲೆಭಾರವಾಗುವುದು ಹಾಗೂ ಆಹಾರವನ್ನು ಜಗಿಯಲು ಅಥವಾ ನುಂಗಲು ಕಷ್ಟಕರ ವಾಗುತ್ತದೆ. ಇದರ ಚಿಕಿತ್ಸೆಗೆ ಸಾಕಷ್ಟು ವಿಶ್ರಾಂತಿ, ಆವಿಯ ಶಾಖ, ಮುಖ ಅಲ್ಲಾಡದಂತೆ ತಡೆಯುವ ಸಾಧನ, ಔಷಧಿಗಳು ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವೂ ಬೀಳಬಹುದು.

ಸೀಳಿದ ಹಲ್ಲುಗಳು

ಸೀಳಿದ ಹಲ್ಲುಗಳು

ಒಂದು ವೇಳೆ ಅತಿಯಾದ ತಣ್ಣನೆಯ ಆಹಾರಗಳನ್ನು ಅಥವಾ ಅತಿ ಗಟ್ಟಿಯಾದ ಆಹಾರಗಳನ್ನ್ ಕಚ್ಚಿ ತಿನ್ನುವ ಅಭ್ಯಾಸವಿದ್ದರೆ, ಹಲ್ಲು ಕಡಿಯುವ ಅಥವಾ ಮಸೆಯುವ ಅಭ್ಯಾಸವಿದ್ದರೆ ಅಥವಾ ಅತಿ ಬಿಸಿ ಅಥವಾ ತಣ್ಣನೆಯ ವಾತಾವರಣಕ್ಕೆ ಹಲ್ಲುಗಳನ್ನು ಒಡ್ಡಿಕೊಳ್ಳುವುದು ಮೊದಲಾದವು ಹಲ್ಲುಗಳು ಸೀಳುಬಿಡಲು ಮತ್ತು ಬಿರುಕುಂಟಾಗಿ ತುಂಡಾಗಲು ಕಾರಣವಾಗುತ್ತವೆ. ಸಾಮಾನ್ಯವಾಗಿ ಎಲ್ಲರ ಹಲ್ಲುಗಳಲ್ಲಿಯೂ ಅತಿ ಸೂಕ್ಷ್ಮವಾದ ಗೀರುಗಳು ಬಿರುಕುಗಳು ಇದ್ದೇ ಇರುತ್ತವೆ. ಆದರೆ ಒಂದು ವೇಳೆ ಈ ಹಲ್ಲುಗಳಿಂದ ಆಹಾರವನ್ನು ಕತ್ತರಿಸುವಾಗ ನೋವು ಕಾಣಿಸಿಕೊಂಡರೆ, ಬಿರುವು ಸ್ಪಷ್ಟವಾಗಿ ಕಾಣಿಸ ತೊಡಗಿದರೆ ಮಾತ್ರ ಇದು ಕಾಳಜಿಯ ವಿಷಯವಾಗಿದೆ. ಈ ತೊಂದರೆಗಳನ್ನು ಸರಿಪಡಿಸಲು ದಂತವೈದ್ಯರ ಬಳಿ ಸೂಕ್ತ ವಿಧಾನಗಳಿವೆ. dental bonding, tooth contouring, porcelain veneers ಅಥವಾ ಹಲ್ಲು ತೀರಾ ಹಾಳಾಗಿದ್ದರೆ ಹೊರಗಿನಿಂದತೊಡಿಸುವ ಹೊರಕವಚ ಮೊದಲಾದ ವಿಧಾನಗಳಿಂದ ದಂತವೈದ್ಯರು ಈ ತೊಂದರೆಯನ್ನು ಸರಿ ಪಡಿಸಬಲ್ಲರು.

ಕೆನ್ನೆಯ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಹೊಳೆಯುವ ಹಚ್ಚೆ

ಕೆನ್ನೆಯ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಹೊಳೆಯುವ ಹಚ್ಚೆ

ಒಂದು ವೇಳೆ ಇತ್ತೀಚೆಗೆ ದಂತವೈದ್ಯರಲ್ಲಿ ಭೇಟಿ ನೀಡಿ ಹಲ್ಲಿಗೇನಾದರೂ ಚಿಕಿತ್ಸೆ ಪಡೆದುಕೊಂಡಿದ್ದರೆ ಕೆಲವು ದಿನಗಳ ಬಳಿಕ ಕೆನ್ನೆಯ ಒಳಭಾಗದಲ್ಲಿ ಹೊಳೆಹೊಳೆಯುವ ಬೆಳ್ಳಿಯ ಹಚ್ಚೆಯೊಂದನ್ನು ಹಾಕಿಸಿಕೊಂಡಂತೆ ಕಾಣುತ್ತಿದೆಯೇ? ಇದಕ್ಕೆ amalgam tattoos ಎಂದು ಕರೆಯುತ್ತಾರೆ. ಹಲ್ಲಿನ ಹುಳುಕನ್ನು ಮುಚ್ಚಲು ಬಳಸುವ ಹಲ್ಲಿನ ಸಿಮೆಂಟ್ ಎಂದು ಕರೆಯುವ ವಸ್ತುವಿನಲ್ಲಿ ಬೆಳ್ಳಿ ಬೆರೆತಿರುತ್ತದೆ. ಹಾಗೂ ಕ್ರಮೇಣ ಈ ಬೆಳ್ಳಿ ನಿಧಾನವಾಗಿ ಕೆನ್ನೆಯ ಒಳಭಾಗಕ್ಕೆ ಅಂಟಿಕೊಳ್ಳಲು ತೊಡಗುತ್ತದೆ. ಸಾಮಾನ್ಯವಾಗಿ ಈ ಹಚ್ಚೆಗಳಿಂದ ಏನೂ ತೊಂದರೆಯಿಲ್ಲ. ಒಂದು ವೇಳೆ ಈ ಚುಕ್ಕೆ ದೊಡ್ಡದಾಗುತ್ತಾ ಸಾಗಿದರೆ ಅಥವಾ ಬಣ್ಣವನ್ನು ಬದಲಿಸಿಕೊಂದರೆ ಇದು ಅಮಾಲ್ಗಮ್ ಟ್ಯಾಟೂ ಆಗಿರಲಿಕ್ಕೆ ಸಾಧ್ಯವಿಲ್ಲ. ತಕ್ಷಣವೇ ನಿಮ್ಮ ದಂತವೈದ್ಯರಲ್ಲಿ ಭೇಟಿ ನೀಡಿ ಪರಿಶೀಲನೆಗೊಳಪಡಬೇಕು.

ಒಸಡುಗಳ ಕಾಯಿಲೆ

ಒಸಡುಗಳ ಕಾಯಿಲೆ

ಒಂದು ವೇಳೆ ಒಸಡುಗಳ ಸಂಧುಗಳಲ್ಲಿ ಆಹಾರದ ಕೂಳೆ ಸಂಗ್ರಹವಾಗಿದ್ದು ಸ್ವಚ್ಛತೆಗೆ ಆದ್ಯತೆ ನೀಡದೇ ಇದ್ದಾಗ ಇಲ್ಲಿ ಭ್ಯಾಕ್ಟೀರಿಯಾಗಳು ವೃದ್ದಿಯಾಗತೊಡಗುತ್ತವೆ. ಯಾವಾಗ ಸಂಖ್ಯೆ ವೃದ್ದಿಗೊಂಡು ಸೋಂಕು ನೀಡಲು ಸಿದ್ದವಾಯಿತೋ ಆಗ ಮೊದಲ ಆಕ್ರಮಣ ಎಸಗುತ್ತವೆ ಇದನ್ನೇ ಜಿಂಜಿವೈಟಿಸ್ ಎಂದು ಕರೆಯುತ್ತೇವೆ. ಈ ಸ್ಥಿತಿಯಲ್ಲಿ ಒಸಡುಗಳು ಕೆಂಪಗಾಗಿ ಊದಿಕೊಂಡು ಹಲ್ಲು ಮತ್ತು ಒಸಡುಗಳು ಸೇರುವಲ್ಲಿ ರಸ ಜಿನುಗತೊಡಗುತ್ತದೆ. ಈ ಸ್ಥಿತಿ ಬಾರದೇ ಇರಲು ಹಲ್ಲುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಲೇ ಇರುವುದು ಅಗತ್ಯವಾಗಿದೆ. ಇದರ ಜೊತೆಗೇ ಧೂಮಪಾನ, ಪೌಷ್ಟಿಕ ಆಹಾರದ ಕೊರತೆ, ಮಾನಸಿಕ ಒತ್ತಡ ಮೊದಲಾದವು ಈ ಸ್ಥಿತಿಯನ್ನು ಇನ್ನಷ್ಟು ಉಲ್ಬಣಿಸಬಹುದು.

ಪೀರಿಯೋಡಾಂಟಿಸ್ (Periodontitis)

ಪೀರಿಯೋಡಾಂಟಿಸ್ (Periodontitis)

ಜಿಂಜಿವೈಟಿಸ್ ಸ್ಥಿತಿಯನ್ನು ತಂದೊಡ್ಡಿದ ಮೇಲೆ ಈ ಬ್ಯಾಕ್ಟೀರಿಯಾಗಳು ನಿವೃತ್ತಿಯೇನೂ ಪಡೆದುಕೊಳ್ಳುವುದಿಲ್ಲ. ಬದಲಿಗೆ ತಮ್ಮ ಸೋಂಕನ್ನು ಇನ್ನಷ್ಟು ಮುಂದುವರೆಸಿ ಪೀರಿಯೋಡಾಂಟಿಸ್ ಅಥವಾ ಒಸಡಿನ ತೀವ್ರ ಸೋಂಕನ್ನು ತರುತ್ತವೆ. ಪರಿಣಾಮವಾಗಿ ಒಸಡುಗಳು ತೀವ್ರವಾಗಿ ತೆಳ್ಳಗಾಗುತ್ತವೆ ಹಾಗೂ ಹಲ್ಲು ಮತ್ತು ಒಸಡುಗಳ ನಡುವೆ ಆಳವಾದ ಗುಂಡಿ ಮೂಡುವಂತೆ ಮಾಡುತ್ತವೆ. ಈ ಗುಂಡಿಗಳಲ್ಲಿ ಇನ್ನಷ್ಟು ಆಹಾರದ ಕೂಳೆ ತುಂಬಿಕೊಳ್ಳುತ್ತದೆ ಹಾಗೂ ಇನ್ನಷ್ಟು ಹೆಚ್ಚು ಬ್ಯಾಕ್ಟೀರಿಯಾಗಳಿಗೆ ಆಶ್ರಯ ತಾಣವಾಗುತ್ತದೆ. ಈ ಸೋಂಕು ಒಳಗಿನಿಂದ ಕೀವು ಮೂಡುವಂತೆ ಮಾಡುತ್ತದೆ. ಒಂದು ವೇಳೆ ಈ ಸ್ಥಿತಿ ಇನ್ನೂ ಉಲ್ಬಣಗೊಂಡರೆ ಇದು ಮೂಳೆ ಮತ್ತು ದವಡೆಯನ್ನು ಹಿಡಿದಿರುವ ದವಡೆಯ ಮೂಳೆಯನ್ನೇ ಘಾಸಿಗೊಳಿಸಬಹುದು. ಯಾವಾಗ ಈ ಮೂಳೆ ಶಿಥಿಲವಾಗಲು ತೊಡಗಿತೋ ಆಗ ಹಲ್ಲುಗಳು ಸುಲಭವಾಗಿ ಉದುರಲು ತೊಡಗುತ್ತವೆ. ಈ ಸ್ಥಿತಿ ವೃದ್ದರಲ್ಲಿಯೇ ಹೆಚ್ಚಾಗಿ ಕಾಣಬರುತ್ತದೆ. ಒಂದು ವೇಳೆ ಒಸಡುಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಾಣಬೇಕು.

ಆಸ್ಪಿರಿನ್ ಸುಟ್ಟಗಾಯ (Aspirin Burn)

ಆಸ್ಪಿರಿನ್ ಸುಟ್ಟಗಾಯ (Aspirin Burn)

ಕೆಲವರಿಗೆ ಹಲ್ಲುನೋವಾದರೆ ಈ ಭಾಗದಲ್ಲಿ ಆಸ್ಪಿರಿನ್ ಗುಳಿಗೆಯನ್ನಿರಿಸಿಕೊಳ್ಳುವ ಅಭ್ಯಾಸವಿರುತ್ತದೆ. ಯಾವ ವೈದ್ಯರೂ ಶಿಫಾರಸ್ಸು ಮಾಡದ ಈ ವಿಧಾನದಿಂದ ತಾತ್ಕಾಲಿಕ ಉಪಶಮನ ದೊರಕಬಹುದೇ ವಿನಃ ಇದು ಸರಿಯಾದ ವಿಧಾನವಲ್ಲ. ಆದರೆ ಈ ಭಾಗದಲ್ಲಿ ಗುಳಿಗೆಯಿಂದ ಕರಗಿ ಸುರಿದ ಆಮ್ಲ ಕೆನ್ನೆಯ ಒಳಭಾಗ ಅಥವಾ ಒಸಡುಗಳ ಮೇಲೆ ಹಾದು ಭಾರೀ ಉರಿ ತರಿಸಬಹುದು. ಇದನ್ನೇ ಆಸ್ಪಿರಿನ್ ಬರ್ನ್ ಎಂದು ಕರೆಯುತ್ತಾರೆ. ಈ ಸ್ಥಿತಿ ಬರದೇ ಇರಲಿಕ್ಕೆ ಮಾತ್ರೆಯನ್ನು ನುಂಗಿಬಿಡುವುದೇ ಸರಿಯಾದ ಕ್ರಮವಾಗಿದೆ. ಈ ಸ್ಥಿತಿ ಎದುರಾದ ಬಳಿಕ ಇದನ್ನು ಸರಿಪಡಿಸಲು ಏನೂ ಮಾಡುವ ಅಗತ್ಯವಿಲ್ಲ, ಹಾಗೇ ಬಿಟ್ಟರೆ ಸುಮಾರು ಎರಡು ವಾರಗಳಲ್ಲಿ ಇದು ಮೊದಲಿನ ಸ್ಥಿತಿಗೆ ಬರುತ್ತದೆ.

ದಂತಕುಳಿ, ಕೀವುಗುಳ್ಳೆ ಹಾಗೂ ಬಣ್ಣಗೆಡುವಿಕೆ

ದಂತಕುಳಿ, ಕೀವುಗುಳ್ಳೆ ಹಾಗೂ ಬಣ್ಣಗೆಡುವಿಕೆ

ದಂತಗಳಲ್ಲಿ ಕಾಣಿಸಿಕೊಳ್ಳುವ ಈ ತೊಂದರೆಗಳು ಬಾರದೇ ಇರಲು ನಿತ್ಯವೂ ಹಲ್ಲುಗಳನ್ನು ಸ್ವಚ್ಛಗೊಳಿಸುವುದು, ನಿಯಮಿತವಾಗಿ ದಂತವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳುವುದು ಹಾಗೂ ಹಲ್ಲುಗಳಲ್ಲಿ ಕೊಳೆ ಉಳಿಯದಂತೆ ಫ್ಲಾಸ್ ವಿಧಾನದಿಂದ ಸ್ವಚ್ಛಗೊಳಿಸುವುದು ಮೊದಲಾದವುಗಳನ್ನು ಅನುಸರಿಸುತ್ತಾ ಬರಬೇಕು. ಒಂದು ವೇಳೆ ಹಲ್ಲು ನೋವು ತೀವ್ರವಾಗಿದ್ದರೆ ನೀವಾಗಿಯೇ ಏನನ್ನೂ ಮಾಡದೇ ದಂತವೈದ್ಯರ ಸಲಹೆ ಪಡೆಯಬೇಕು. ದಂತದ ಸೋಂಕನ್ನು ಲಘುವಾಗಿ ಪರಿಗಣಿಸು ವಂತಿಲ್ಲ. ಇದು ಮುಖ, ತಲೆಗೂ ಆವರಿಸಬಹುದು ಹಾಗೂ ರಕ್ತದ ಮೂಲಕವೂ ಇತರ ಭಾಗಕ್ಕೆ ಹರಡಬಹುದು. ಒಂದು ವೇಳೆ ಹಲ್ಲುನೋವು ಜ್ವರ, ಕಿವಿನೋವು, ಬಾಯಿಯನ್ನು ಆಕಳಿಸಿದಾಗ ನೋವು ಎದುರಾಗುವುದು ಮೊದಲಾದ ಯಾವುದೇ ಸೂಚನೆ ಕಂಡುಬಂದರೂ ತಕ್ಷಣವೇ ವೈದ್ಯರನ್ನು ಕಾಣಬೇಕು.

ಉಸಿರಿನ ದುರ್ವಾಸನೆ

ಉಸಿರಿನ ದುರ್ವಾಸನೆ

ಹಲ್ಲುಗಳನ್ನು ಆಗಾಗ ಸ್ವಚ್ಛಗೊಳಿಸದಿರುವುದರಿಂದ ಹಲ್ಲುಗಳ ಸಂಧುಗಳಲ್ಲಿ ಆಹಾರಕಣಗಳು ಹಾಗೇ ಉಳಿದುಕೊಳ್ಳುತ್ತವೆ ಹಾಗೂ ಇಲ್ಲಿ ಬ್ಯಾಕ್ಟೀರಿಯಾಗಳು ಈ ಆಹಾರವನ್ನು ಕೊಳೆಸಿ ದುರ್ವಾಸನೆ ಬರುವಂತೆ ಮಾಡುತ್ತವೆ. ಒಂದು ವೇಳೆ ಈ ದುರ್ವಾಸನೆ ಸತತವಾಗಿ ಮುಂದವರೆದರೆ, ಬಾಯಿ ಒಣಗಿಯೇ ಇದ್ದರೆ, ಹಲ್ಲುಗಳು ಕೊಳೆಯಲು ಪ್ರಾರಂಭಿಸಿದರೆ ಇವೆಲ್ಲವೂ ಒಸಡುಗಳ ಕಾಯಿಲೆಯ ಅಥವಾ ಮಧುಮೇಹದ ಲಕ್ಷಣಗಳಾಗಿವೆ. ಹಾಗಾಗಿ ನಿತ್ಯವೂ ಹಲ್ಲು ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸುವ ಮೂಲಕ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಅಲ್ಲದೇ ಹಲ್ಲುಗಳ ನಡುವಣ ಭಾಗವನ್ನು ಫ್ಲಾಸ್ ಮೂಲಕ ಸ್ವಚ್ಛಗೊಳಿಸುವುದು ಹಾಗೂ ಬಾಯಿಯನ್ನು ಪ್ರತಿಜೀವಕ ಗುಣವಿರುವ ಮೌತ್ ವಾಶ್ ದ್ರಾವಣದಿಂದ ತೊಳೆದುಕೊಳ್ಳುವುದು ಅಗತ್ಯ. ಅಲ್ಲದೇ ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿರುವುದು, ಬಾಯಿಯ ದುರ್ವಾಸನೆಗೆ ಕಾರಣವಾಗುವ ಆಹಾರಗಳನ್ನು ಸೇವಿಸದಿರುವುದು ಸಹಾ ಅಗತ್ಯ.

ಸುಳ್ಳುಗುಳ್ಳೆಗಳು (

ಸುಳ್ಳುಗುಳ್ಳೆಗಳು ("Lie" Bumps)

ಹಳೆಯ ಕಥೊಂದರೆ ಪ್ರಕಾರ ಒಂದು ವೇಳೆ ಸುಳ್ಳು ಹೇಳಿದರೆ ಆ ವ್ಯಕ್ತಿಯ ನಾಲಿಗೆಯ ಮೇಲೆ ಗುಳ್ಳೆಯೊಂದು ಮೂಡುತ್ತದೆ. ಇದೇ ಸುಳ್ಳುಗುಳ್ಳೆಗಳು. transient lingual papillitis ಎಂದು ಕರೆಯಲ್ಪಡುವ ಈ ಗುಳ್ಳೆಗಳು ಚಿಕ್ಕದಾಗಿದ್ದು ನಿರಪಾಯಕಾರಿ ಯಾಗಿರುತ್ತವೆ ಹಾಗೂ ಕೆಲವೇ ದಿನಗಳಲ್ಲಿ ತನ್ನಿಂತಾನೇ ಮಾಯವಾಗುತ್ತವೆ. ಆದರೆ ಇವು ಹೋಗುವವರೆಗೂ ಚಡಪಡಿಕೆ ಇದ್ದೇ ಇರುತ್ತದೆ. ಇದು ಏಕೆ ಬರುತ್ತವೆ ಎಂದು ಇದುವರೆಗೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಆಹಾರದ ಯಾವುದೋ ಪ್ರತಿಕ್ರಿಯೆ, ಹಲ್ಲುಗಳ ನಡುವೆ ನಾಲಿಗೆ ಕಚ್ಚಿಕೊಳ್ಳುವುದರಿಂದಲೂ ಎದುರಾಗಬಹುದು ಎಂದು ಅನುಮಾನಿಸಲಾಗಿದೆ. ಇವು ಹೇಗಿದ್ದರೂ ತನ್ನಿಂತಾನೇ ಗುಣವಾಗುವುದರಿಂದ ಹೆಚ್ಚಿನ ಚಿಕಿತ್ಸೆಯೇನೂ ಬೇಕಾಗಿಲ್ಲ. ಆದರೂ ಬಾಯಿಯ ಒಣಭಾಗದಲ್ಲಿ ನೀಡಬಹುದಾದ ಅರವಳಿಕೆಯ ಚಿಕಿತ್ಸೆಯಿಂದ ಈ ಚಡಪಡಿಕೆಯನ್ನು ಮಾತ್ರ ದೂರಾಗಿಸಬಹುದು.

English summary

Diseases that will occur in Your Mouth!

Did you know that your oral health offers clues about your overall health — or that problems in your mouth can affect the rest of your body? Protect yourself by learning more about the connection between your oral health and overall health.
X
Desktop Bottom Promotion