For Quick Alerts
ALLOW NOTIFICATIONS  
For Daily Alerts

ಅಪೆಂಡಿಸೈಟಿಸ್: ಕಾರಣಗಳು, ಲಕ್ಷಣಗಳು, ಪತ್ತೆಹಚ್ಚುವಿಕೆ ಹಾಗೂ ಚಿಕಿತ್ಸೆ

|

ಒಂದು ವೇಳೆ ಕೆಳಹೊಟ್ಟೆಯ ಬಲಭಾಗದಲ್ಲಿ, ಸೊಂಟದ ಹಿಂಬದಿಯ ಒಳಗೆ ಸೂಜಿಯಲ್ಲಿ ಚುಚ್ಚಿದಂತೆ ತೀವ್ರವಾದ ನೋವು ಕಾಣಿಸಿಕೊಂಡರೆ ಇದು ಅಪೆಂಡಿಸೈಟಿಸ್ ಅಥವಾ ಕರಳುವಾಲ (ಕರುಳಿನ ಬಾಲ) ದ ಲಕ್ಷಣವಾಗಿರಬಹುದು. ಸಣ್ಣ ಕರುಳು ದೊಡ್ಡ ಕರುಳನ್ನು ಸಂಪರ್ಕಿಸಿದ ಭಾಗದಲ್ಲಿ ದೊಡ್ಡ ಕರುಳಿನ ತುದಿಯಲ್ಲಿ ಬಾಲದಂತಹ ಚಿಕ್ಕ ಕೊಳವೆ ಇರುತ್ತದೆ. ಬೆಲೂನನ್ನು ಹಿಗ್ಗಿಸಿ ಒಳಗಿನಿಂದ ಬೆರಳನ್ನು ತೂರಿಸಿದರೆ ಹೇಗೆ ಕಾಣುತ್ತದೋ ಹೆಚ್ಚೂ ಕಡಿಮೆ ಈ ಕರುಳುವಾಲ ಹಾಗೇ ಕಾಣುತ್ತದೆ. ವಾಸ್ತವವಾಗಿ ಇದೊಂದು ಅನಗತ್ಯ ಅಂಗವಾಗಿದ್ದು ಸಣ್ಣ ಕರುಳಿನ ಮೂಲಕ ಬರುವ ಘನ ತ್ಯಾಜ್ಯಗಳು ಇಲ್ಲಿ ಸಂಗ್ರಹಗೊಳ್ಳುತ್ತವೆ.

ವಿಶೇಷವಾಗಿ ನಾವು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಚಿಕ್ಕ ಕಲ್ಲುಗಳು, ಮೂಳೆ ಚೂರುಗಳು, ಲೋಹದ ವಸ್ತುಗಳು, ಗಾಜು, ಮರಳು, ಮಣ್ಣು ಇತ್ಯಾದಿಗಳೆಲ್ಲಾ ಇಲ್ಲಿ ನಿಧಾನವಾಗಿ ಸಂಗ್ರಹವಾಗುತ್ತಾ ಇರುತ್ತದೆ. ಎಲ್ಲಿಯವರೆಗೆ ಇದು ತುಂಬುವುದಿಲ್ಲವೋ ಅದುವರೆಗೂ ಯಾವುದೇ ಲಕ್ಷಣವನ್ನು ತೋರುವುದಿಲ್ಲ. ಆದರೆ ತುಂಬಿದ ಬಳಿಕ ಒಳಗಿನ ಘನವಸ್ತುಗಳು ಕರುಳಿನ ಒಳಗೋಡೆಯ ಮೇಲೆ ಒತ್ತಡ ಹೇರುತ್ತವೆ ಹಾಗೂ ಇದು ಅಪಾರ ನೋವಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಹತ್ತರಿಂದ ಮೂವತ್ತು ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಂಗ್ರಹಗೊಂಡ ಘನವಸ್ತುಗಳ ಮೊನಚು ಮತ್ತು ಸಾಂದ್ರತೆಯನ್ನು ಅನುಸರಿಸಿ ನೋವು ಸಾಮಾನ್ಯದಿಂದ ತೀವ್ರವಾಗಿರುತ್ತದೆ.

Appendicitis

ಅಪೆಂಡಿಸೈಟಿಸ್ ಎದುರಾಗಲು ಏನು ಕಾರಣ

ಈ ಘನ ವಸ್ತುಗಳ ಸಂಗ್ರಹದೊಂದಿಗೇ ಸೋಂಕುಕಾರಕ ಕ್ರಿಮಿಗಳೂ ಈ ಕರುಳುವಾಲದಲ್ಲಿ ಆಶ್ರಯ ಪಡೆಯುತ್ತವೆ. ಹಾಗೂ ಇವು ಸಂಖ್ಯಾಭಿವೃದ್ದಿಗೊಂಡು ಸೋಂಕು ಉಂಟುಮಾಡುತ್ತವೆ. ಪರಿಣಾಮವಾಗಿ ಕರುಳುವಾಲ ಕೀವಿನಿಂದ ಕೂಡಿದ್ದು ಊದಿಕೊಳ್ಳುತ್ತದೆ. ಕರುಳುವಾಲದಲ್ಲಿ ಘನವಸ್ತುಗಳ ಹೊರತಾಗಿ ಗಟ್ಟಿಯಾದ ಮಲ, ಗಡ್ಡೆಗಳು, ಕರುಳಿನಲ್ಲಿ ಆಶ್ರಯ ಪಡೆದಿದ್ದ ಪರಾವಲಂಬಿ ಕ್ರಿಮಿಗಳು ಸಹಾ ಸಂಗ್ರಹಗೊಳ್ಳಬಹುದು. ಇದರ ಹೊರತಾಗಿ ಈ ಭಾಗಕ್ಕೆ ಬಿದ್ದ ಪೆಟ್ಟು, ಊದಿಕೊಂಡ ದುಗ್ಧಗ್ರಂಥಿಗಳೂ ಈ ಕರುಳುವಾಲ ಒಳಗಿನಿಂದ ತುಂಬಿಕೊಳ್ಳಲು ಕಾರಣವಾಗಬಹುದು.

ಅಪೆಂಡಿಸೈಟಿಸ್ ಎದುರಾಗಿರುವ ಲಕ್ಷಣಗಳು:

ಹಸಿವಿಲ್ಲದಿರುವಿಕೆ, ವಾಕರಿಕೆ, ವಾಂತಿ, ಹೊಟ್ಟೆಯುಬ್ಬರಿಕೆ, ಜ್ವರ, ಮಲಬದ್ದತೆ ಅಥವಾ ಅತಿಸಾರ, ಹೊಟ್ಟೆಯ ಬಲಬದಿ, ಸೊಂಟದ ಒಳಭಾಗದಲ್ಲಿ ತೀವ್ರವಾದ ನೋವು ಒಂದೇ ಕಡೆ ಕೇಂದ್ರೀಕೃತವಾಗಿರುವುದು. ಕೆಲವೊಮ್ಮೆ ಹೊಕ್ಕುಳ ಹತ್ತಿರ ಪ್ರಾರಂಭವಾಗಿ ಬಲಬದಿ ಸಾಗಿದಂತೆ ಅನ್ನಿಸುವುದು, ಮೂತ್ರ ವಿಸರ್ಜಿಸುವಾಗ ನೋವು ಎದುರಾಗುವುದು ಇತ್ಯಾದಿಗಳು.

ಅಪೆಂಡಿಸೈಟಿಸ್ ಎದುರಾಗಲು ಸಾಧ್ಯತೆಗಳ ಅಂಕಿ ಅಂಶಗಳು

ವಯಸ್ಸು: ಸಾಮಾನ್ಯವಾಗಿ ಹದಿನೈದರಿಂದ ಮೂವತ್ತು ವಯಸ್ಸಿನ ವ್ಯಕ್ತಿಗಳಲ್ಲಿಯೇ ಈ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಲಿಂಗ: ಮಹಿಳೆಯರಿಗಿಂತಲೂ ಪುರುಷರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಕುಟುಂಬ ಇತಿಹಾಸ: ಕುಟುಂಬದಲ್ಲಿ ಈ ತೊಂದರೆ ಇದ್ದವರಿಗೆ ಈ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು

Most Read: ಖತರ್ನಾಕ್ 'ಅಪೆಂಡಿಕ್ಸ್‌' ರೋಗವನ್ನು ನಿಯಂತ್ರಿಸುವ ಮನೆಮದ್ದುಗಳು

ಅಪೆಂಡಿಸೈಟಿಸ್ ನ ಉಲ್ಬಣಾವಸ್ಥೆಯ ಪರಿಣಾಮಗಳು:

ಪೆರಿಟೋನೈಟಿಸ್ (Peritonitis) ಒಳಗಿನ ಒತ್ತಡ ತಾಳಲಾರದೇ ಈ ಕರುಳುವಾಲ ಒಡೆದರೆ ಇದರ ಸೋಂಕು ಹೊಟ್ಟೆಯ ಒಳಗಿನ ಎಲ್ಲಾ ಅಂಗಗಳಿಗೆ ಹರಡಬಹುದು. ಈ ತೊಂದರೆಯನ್ನು ಪೆರಿಟೋನೈಟಿಸ್ ಎನ್ನುತ್ತಾರೆ. ತಕ್ಷಣ ಕರುಳಿನ ಕಾರ್ಯಗಳೆಲ್ಲವೂ ಸ್ತಬ್ಧಗೊಳ್ಳುತ್ತವೆ.
ಕೀವು: ಒಡೆದ ಕರುಳುವಾಲದ ಸೋಂಕು ಹೊಟ್ಟೆಯೊಳಗಿನ ಇತರ ಅಂಗಗಳಿಗೂ ಹರಡಿ ಸೋಂಕನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಈ ಕೀವು ಕರುಳುವಾಲದ ಗೋಡೆಯನ್ನು ಶಿಥಿಲಗೊಳಿಸಿ ಸುಲಭವಾಗಿ ಒಡೆಯಲು ಕಾರಣವಾಗುತ್ತದೆ. ಹಾಗಾಗಿ ಕೀವು ಎದುರಾದ ತಕ್ಷಣ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಕರುಳುವಾಲ ಒಡೆಯುವ ಸಾಧ್ಯತೆ ಹೆಚ್ಚು.

ಅಪೆಂಡಿಸೈಟಿಸ್ ಪತ್ತೆಹಚ್ಚುವಿಕೆ:

ಕರುಳುವಾಲದ ಸೋಂಕು ಉಂಟಾದಾಗ ದೇಹದಲ್ಲಿ ಇತರ ಲಕ್ಷಣಗಳೂ ಕಾಣಿಸತೊಡಗುತ್ತವೆ. ಇವುಗಳಲ್ಲಿ ಮೂತ್ರನಾಳದ ಸೋಂಕು, ವಾಯುಪ್ರಕೋಪ, ಕರುಳಿನಲ್ಲಿ ಸೋಂಕು, ಮೂತ್ರಕೋಶದ ತೊಂದರೆಗಳೂ ಹಾಗೂ ಮಹಿಳೆಯರಲ್ಲಿ ಗರ್ಭಾಶಯದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಹೊಟ್ಟೆನೋವು ಬಂದಾಗ ಇದು ಅಪೆಂಡಿಸೈಟಿಸ್ ನಿಂದಲೇ ಎದುರಾಗಿದೆ ಎಂದು ಖಚಿತವಾಗಿ ಹೇಳಲು ಕಷ್ಟವಾಗುತ್ತದೆ. ಹಾಗಾಗಿ ವೈದ್ಯರಿಗೆ ಕೆಲವಾರು ಪರೀಕ್ಷೆಗಳ ನೆರವು ಪಡೆಯಬೇಕಾಗುತ್ತದೆ. ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ರೋಗಿಯ ದೇಹದ ತಪಾಸಣೆ ಹಾಗೂ ಆಂತರಿಕ ಛಾಯಾಚಿತ್ರಗಳ ಪರೀಕ್ಷೆಗಳನ್ನು ನಡೆಸಬಹುದು.

ಅಪೆಂಡಿಸೈಟಿಸ್ ಗೆ ಚಿಕಿತ್ಸೆ

ಅಪೆಂಡೆಕ್ಟೋಮಿ (Appendectomy):ಸೋಂಕಿಗೊಳಗಾದ ಕರುಳುವಾಲವನ್ನು ಬುಡಸಹಿತ ಕತ್ತರಿಸಿ ತೆಗೆದು ತೆರೆದ ಭಾಗವನ್ನು ಹೊಲಿಗೆ ಹಾಕಿ ಮುಚ್ಚುವುದು ಅತಿ ಸರಳವಾದ ಶಸ್ತ್ರಚಿಕಿತ್ಸೆಯಾಗಿದ್ದು ಇದಕ್ಕೆ ಕೇವಲ ಮೂರು ಚಿಕ್ಕ ಕೊಯ್ತಗಳು (ಕಾಲು ಇಂಚಿನಿಂದ ಹಿಡಿದು ಅರ್ಧ ಇಂಚಿನವರೆಗೆನಷ್ಟೆ ಚಿಕ್ಕ ಕೊಯ್ತ) ಸಾಕಾಗುತ್ತವೆ. ಈ ವಿಧಾನಕ್ಕೆ ಲ್ಯಾಪರಾಸ್ಕೋಪಿ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಸರ್ಜನ್ ವೈದ್ಯರು ಈ ಕೊಯ್ತದ ಮೂಲಕ ಪುಟ್ಟ ವೀಡೀಯೋ ಕ್ಯಾಮೆರಾವೊಂದನ್ನು ತೂರಿಸಿ ಇನ್ನೊಂದು ನಳಿಕೆಯ ಮೂಲಕ ಸೂಕ್ಷ್ಮ ಸಲಕರಣಗಳನ್ನು ಬಳಸಿ ಕತ್ತರಿಸಿದ ಕರುಳುವಾಲವನ್ನು ನಿವಾರಿಸುತ್ತಾರೆ.ಈ ಶಸ್ತಚಿಕಿತ್ಸೆಯ ಬಳಿಕ ರೋಗಿ ಶೀಘ್ರವೇ ಚೇತರಿಸಿಕೊಳ್ಳುತ್ತಾನೆ ಹಾಗೂ ಎರಡರಿಂದ ಮೂರು ವಾರಗಳಲ್ಲಿಯೇ ಸಹಜ ಜೀವನಕ್ಕೆ ಮರಳಲು ಸಾಧ್ಯವಾಗುತ್ತದೆ. ಆದರೆ ಪರಿಶ್ರಮದ ಕೆಲಸಗಳನ್ನು ಮಾಡಲು ನಾಲ್ಕರಿಂದ ಆರು ವಾರಗಳಾದರೂ ಬೇಕಾಗುತ್ತದೆ. ಒಂದು ವೇಳೆ ಕರುಳುವಾಲ ಸಿಡಿದು ಒಳಭಾಗದಲ್ಲಿ ಸೋಂಕು ಎದುರಾಗಿದ್ದರೆ ಇದರ ತೀವ್ರತೆಯನ್ನು ಅನುಸರಿಸಿ ವೈದ್ಯರು ಹೆಚ್ಚಿನ ಕೊಯ್ತದ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಈ ಪರಿಸ್ಥಿತಿ ಎದುರಾಗಿದ್ದರೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳಲು ಇನ್ನಷ್ಟು ಹೆಚ್ಚು ದಿನಗಳು ಬೇಕಾಗಬಹುದು.

Most Read: ಅಪೆಂಡಿಕ್ಸ್‌ನ ಲಕ್ಷಣಗಳು ನಿಮಗೆ ತಿಳಿದಿದೆಯೇ?

ಶೀಘ್ರ ಚೇತರಿಕೆಗೆ ಬದಲಿಸಿಕೊಳ್ಳಬೇಕಾದ ಜೀವನಕ್ರಮಗಳು

ಹತ್ತರಿಂದ ಹದಿನಾಲ್ಕು ದಿನಗಳವರೆಗಾದರೂ ಪರಿಶ್ರಮದ ಕೆಲಸಗಳನ್ನು ಮಾಡಬಾರದು.

  • ನಿದ್ದೆ: ಯಾವಾಗ ಬಳಲಿಕೆ ಆವರಿಸಿತೋ, ಆಗೆಲ್ಲಾ ಸಾಕಷ್ಟು ನಿದ್ದೆ ಮಾಡಬೇಕು
  • ನೀರು: ಸಾಕಷ್ಟು ನೀರನ್ನು ಇಡಿಯ ದಿನ ಕುಡಿಯುತ್ತಿರಬೇಕು
  • ನಡಿಗೆ: ನಿತ್ಯವೂ ಸಾಧ್ಯವಾದಷ್ಟು ನಡೆಯಬೇಕು.

ಅಪೆಂಡಿಸೈಟಿಸ್ ಬಾರದಂತೆ ತಡೆಯಲು ಕ್ರಮಗಳು

ಅಪೆಂಡಿಸೈಟಿಸ್ ಜೀವನದ ಯಾವುದೇ ಹಂತದಲ್ಲಿ ಬರುವ ಸಾಧ್ಯತೆ ಇರುವ ಕಾರಣ ನಮ್ಮ ಅಹಾರದಲ್ಲಿ ಆದಷ್ಟೂ ಹೆಚ್ಚು ನಾರಿನಂಶವಿರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಆಹಾರದಲ್ಲಿ ಯಾವುದೇ ಘನವಸ್ತುಗಳಾದ ಕಲ್ಲು, ಲೋಹ, ಮೂಳೆ ಮೊದಲಾದವು ಇರದಂತೆ ನೋಡಿಕೊಳ್ಳಬೇಕು.

English summary

Appendicitis: Causes, Symptoms, Diagnosis & Treatment

Appendicitis is the inflammation of the appendix, a long tissue projecting from your colon or large intestine on the right side of your abdomen. Appendicitis occurs when there is a blockage in the lining of the appendix, resulting in infection due to the multiplying of bacteria, causing the appendix to become inflamed, swollen and filled with pus.
X
Desktop Bottom Promotion