For Quick Alerts
ALLOW NOTIFICATIONS  
For Daily Alerts

ಹೆಮಟುರಿಯಾ ಅಥವಾ ಮೂತ್ರದಲ್ಲಿ ರಕ್ತ ಕಂಡುಬರುವ ಸ್ಥಿತಿಗೆ ಏನು ಕಾರಣ

|

ಮೂತ್ರದಲ್ಲಿ ರಕ್ತವೂ ವಿಸರ್ಜನೆಗೊಳ್ಳುವ ಸ್ಥಿತಿಗೆ ಹೆಮಟುರಿಯಾ (haematuria) ಎಂದು ಕರೆಯುತ್ತಾರೆ. ಈ ಸ್ಥಿತಿ ವಿವಿಧ ಕಾರಣಗಳು ಮತ್ತು ಅನಾರೋಗ್ಯಗಳ ಪರಿಣಾಮದಿಂದ ಎದುರಾಗಿರಬಹುದು. ಇವುಗಳಲ್ಲಿ ಪ್ರಮುಖವಾಗಿ ಕ್ಯಾನ್ಸರ್, ಮೂತ್ರಕೋಶದ ಕಾಯಿಲೆ, ಅಪರೂಪದ ರಕ್ತದ ತೊಂದರೆಗಳು ಮತ್ತು ಕೆಲವು ಸೋಂಕುಗಳು ಮೂತ್ರದಲ್ಲಿ ರಕ್ತ ಮಿಶ್ರಣಗೊಳ್ಳಲು ಕಾರಣವಾಗುತ್ತವೆ. ಮೂತ್ರದಲ್ಲಿ ಆಗಮಿಸಿರುವ ರಕ್ತ ಮೂತ್ರಪಿಂಡಗಳು, ಗರ್ಭಕೋಶ, ಮೂತ್ರಕೋಶ ಅಥವಾ ಮೂತ್ರನಾಳಗಳಿಂದಲೂ ಜಿನುಗಿರಬಹುದು. ಇಂದಿನ ಲೇಖನದಲ್ಲಿ ಈ ತೊಂದರೆಯ ವಿಧಗಳು, ಕಾರಣಗಳು ಹಾಗೂ ಇದರ ಲಕ್ಷಣಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ವಿವರಿಸಲಾಗಿದೆ:

ಹೆಮಟುರಿಯಾ ಕಾಯಿಲೆಯ ವಿಧಗಳು ಯಾವುವು?

*ಗ್ರಾಸ್ ಹೀಮಟೂರಿಯಾ (Gross haematuria)
ಒಂದು ವೇಳೆ ಮೂತ್ರ ತಿಳಿ ಗುಲಾಬಿ ಬಣ್ಣದಿಂದ ಕೂಡಿದ್ದು ನಡುನಡುವೆ ರಕ್ತದ ಹೆಪ್ಪುಗಟ್ಟಿದ ದಾರ ಅಥವಾ ಚುಕ್ಕೆಗಳು ಕಂಡುಬಂದರೆ ಇದಕ್ಕೆ ಗ್ರಾಸ್ ಹೆಮಟುರಿಯಾ ಎಂದು ಕರೆಯುತ್ತಾರೆ.

Haematuria causes

*ಮೈಕ್ರೋಸ್ಕೋಪಿಕ್ ಹೆಮಟುರಿಯಾ (Microscopic haematuria)

ಹೆಸರೇ ತಿಳಿಸುವಂತೆ ಇದರಲ್ಲಿ ರಕ್ತದ ಕಣಗಳು ಮಿಶ್ರಣಗೊಂಡಿದ್ದರೂ ಅಲ್ಪಪ್ರಮಾಣದಲ್ಲಿದ್ದು ಕೇವಲ ಸೂಕ್ಷ್ಮದರ್ಶಕದ ಮೂಲಕ ಮಾತ್ರವೇ ಕಾಣಲು ಸಾಧ್ಯ. ಹೀಮಟೂರಿಯಾ ಸ್ಥಿತಿಗೆ ಕಾರಣಗಳೇನು:

ಹೆಮಟುರಿಯಾ ಎಂದರೇನು? ಪ್ರತಿಯೊಬ್ಬರೂ ತಿಳಿದಿರಬೇಕಾದ ಮಾಹಿತಿಗಳು

*ಮೂತ್ರಪಿಂಡದ ಕಲ್ಲುಗಳು

ಮೂತ್ರಕೋಶದಲ್ಲಿ ಅಥವಾ ಮೂತ್ರಪಿಂಡದಲ್ಲಿ ಕಲ್ಲುಗಳು ಮೂಡಿದ್ದರೆ ಇದು ಮೂತ್ರದಲ್ಲಿ ರಕ್ತ ಮಿಶ್ರಣಗೊಳ್ಳಲು ಪ್ರಮುಖ ಕಾರಣವಾಗಿದೆ. ವಾಸ್ತವವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದನ್ನು ಈ ಸೂಚನೆಯೇ ಪ್ರಮುಖ ಸುಳಿವು ನೀಡುತ್ತವೆ. ಮೂತ್ರದಲ್ಲಿ ಶೇಖರವಾಗುವ ಕೆಲವು ಹರಳುಗಳ ಕಣಗಳು ಒಂದಕ್ಕೊಂದು ತಾಕಿ ನಿಧಾನವಾಗಿ ದೊಡ್ಡದಾಗುತ್ತಾ ಕ್ರಮೇಣ ಕಲ್ಲಿನ ರೂಪ ಪಡೆಯುತ್ತದೆ. ನಮ್ಮೆಲ್ಲರ ಮೂತ್ರಪಿಂಡಗಳಲ್ಲಿ ಈ ಚಿಕ್ಕಕಲ್ಲುಗಳು ಇದ್ದೇ ಇರುತ್ತವೆ. ಆದರೆ ಒಮ್ಮೆ ಈ ಕಲ್ಲುಗಳ ಗಾತ್ರ ದೊಡ್ಡದಾಯಿಯೋ ಆಗ ಮೂತ್ರನಾಳದೊಳದೆ ಇದು ದ್ರವದ ಹರಿವಿಗೆ ಅಡ್ಡಿಯಾಗುತ್ತದೆ ಹಾಗೂ ಇದರ ಅಂಚುಗಳು ನಾಳಗಳ ಹಾಗೂ ಮೂತ್ರಪಿಂಡ ಒಳಭಾಗವನ್ನು ಘರ್ಷಿಸಿ ಗೀರುವ ಮೂಲಕ ಆಂತರಿಕ ಗಾಯಮಾಡುತ್ತವೆ ಹಾಗೂ ಇಲ್ಲಿಂದ ಒಸರುವ ರಕ್ತ ಮೂತ್ರದ ಮೂಲಕ ಹೊರಬರುತ್ತದೆ. ಈ ಗಾಯ ಅಪಾರವಾರ ನೋವು ಮತ್ತು ಉರಿಯನ್ನುಂಟುಮಾಡುತ್ತದೆ.

*ಮೂತ್ರಪಿಂಡದ ಕಾಯಿಲೆಗಳು

ಹೆಮಟುರಿಯಾ ಆವರಿಸಲು ಕಡಿಮೆ ಪ್ರಮಾಣದ ಜನರಲ್ಲಿ ಕಂಡುಬರುವ ಇನ್ನೊಂದು ಕಾರಣವೆಂದರೆ ಮೂತ್ರಪಿಂಡದ ಕಾಯಿಲೆಗಳು. ಈ ಕಾಯಿಲೆ ನೇರವಾಗಿ ಮೂತ್ರಪಿಂಡಕ್ಕೇ ಸಂಬಂಧಿಸಿರಬಹುದು ಅಥವಾ ಮಧುಮೇಹದಂತಹ ಬೇರೆ ಯಾವುದೋ ಕಾಯಿಲೆಯ ಪ್ರಭಾವದಿಂದಲೂ ಆಗಿರಬಹುದು.

*ಮೂತ್ರಪಿಂಡ ಅಥವಾ ಮೂತ್ರಕೋಶದಲ್ಲಿ ಉಂಟಾಗಿರುವ ಸೋಂಕು

ಕೆಲವೊಮ್ಮೆ ಮೂತ್ರವನ್ನು ದೇಹದಿಂದ ಹೊರಹಾಕುವ ಮೂತ್ರನಾಳದ ಮೂಲಕ ಹಿಮ್ಮುಖವಾಗಿ ಚಲಿಸುವ ಬ್ಯಾಕ್ಟೀರಿಯಾಗಳು ಮೂತ್ರಪಿಂಡ ಅಥವಾ ಮೂತ್ರಕೋಶವನ್ನು ತಲುಪಿ ಅಲ್ಲಿ ತಮ್ಮ ಬೀಡು ಬಿಟ್ಟು ಸೋಂಕು ಹರಡಲು ಕಾರಣವಾಗುತ್ತವೆ. ಪರಿಣಾಮವಾಗಿ ಸತತವಾದ ಮೂತ್ರ ಹಾಗೂ ಮೂತ್ರದಲ್ಲಿ ರಕ್ತದ ಚಿಕ್ಕ ಚಿಕ್ಕ ಚುಕ್ಕೆಗಳು ಕಂಡುಬರುತ್ತದೆ.

*ಪ್ರಾಸ್ಟೇಟ್ ಗ್ರಂಥಿಯ ಊತ ಅಥವಾ ಕ್ಯಾನ್ಸರ್

ಸಾಧಾರಣವಾಗಿ ನಡುವಯಸ್ಸು ದಾಟಿದ ಪುರುಷರು ಅಥವಾ ವೃದ್ದರಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ಗ್ರಂಥಿ ಮೂತ್ರ ವಿಸರ್ಜನಾ ನಾಳದ ಕೊಂಚವೇ ಕೆಳಕ್ಕಿರುತ್ತದೆ. ಕ್ಯಾನ್ಸರ್ ಅಥವಾ ಇತರ ಕಾರಣಗಳಿಂದ ಈ ಗ್ರಂಥಿ ಊದಿಕೊಂಡಾಗ ಮೂತ್ರನಾಳವನ್ನು ಒತ್ತುತ್ತದೆ ಹಾಗೂ ಪರಿಣಾಮವಾಗಿ ಮೂತ್ರ ವಿಸರ್ಜನೆಗೆ ಹೆಚ್ಚಿನ ಒತ್ತಡ ಹೇರಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮೂತ್ರಕೋಶವನ್ನು ಪೂರ್ಣವಾಗಿ ಬರಿದು ಮಾಡಲೂ ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಮೂತ್ರನಾಳದ ಸೋಂಕು ಎದುರಾಗುತ್ತದೆ ಹಾಗೂ ಮೂತ್ರದಲ್ಲಿ ರಕ್ತವೂ ಕಂಡುಬರಬಹುದು.

*ಔಷಧಿಗಳು

ಕೆಲವು ಔಷಧಿಗಳ ಅಡ್ಡ ಪರಿಣಾಮದಿಂದಲೂ ಈ ಸ್ಥಿತಿ ಎದುರಾಗಬಹುದು. ಪೆನಿಸಿಲ್ಲಿನ್, ಆಸ್ಪಿರಿನ್, ಹೆಪಾರಿನ್, ವಾರ್ಫಾರಿನ್ ಹಾಗೂ ಸೈಕ್ಲೋಫೋಸ್ಫಾಮೈಡ್ ಮೊದಲಾದ ಔಷಧಿಗಳ ಅಡ್ಡಪರಿಣಾಮಗಳಿಂದ ಮೂತ್ರದಲ್ಲಿ ರಕ್ತ ಕಂಡುಬರುತ್ತದೆ.

*ಕ್ಯಾನ್ಸರ್

ಮೂತ್ರಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್ ಸಹಾ ಈ ಸ್ಥಿತಿಗೆ ಕಾರಣವಾಗಿವೆ. ಅಪರೂಪವಾಗಿ ಕಾಣಬರುವ ಇತರ ಕಾರಣಗಳೆಂದರೆ ಪ್ರಾಸ್ಟೇಟ್ ಗ್ರಂಥಿ, ಮೂತ್ರಪಿಂಡ ಅಥವಾ ಮೂತ್ರಕೋಶದಲ್ಲಿ ಗಡ್ಡೆ, ಅನುವಂಶಿಕವಾಗಿ ಆವರಿಸಿದ ಕಾಯಿಲೆಗಳು (ಉದಾಹರಣೆಗೆ ಸಿಕಲ್ ಸೆಲ್ ಅನೀಮಿಯಾ, ಸಿಸ್ಟಿಕ್ ಮೂತ್ರಪಿಂಡದ ಕಾಯಿಲೆ) ಅಪಘಾತದಿಂದ ಮೂತ್ರಪಿಂಡಕ್ಕೆ ಆದ ಪೆಟ್ಟು, ಅತಿಯಾದ ವ್ಯಾಯಾಮ ಮೊದಲಾದವು.

ಹೆಮಟುರಿಯಾ ಕಾಯಿಲೆಯ ಲಕ್ಷಣಗಳೇನು?

• ಮೊದಲ ಸ್ಪಷ್ಟ ಲಕ್ಷಣವೆಂದರೆ ಮೂತ್ರದಲ್ಲಿ ರಕ್ತ ಕಂಡುಬರುವುದು ಹಾಗೂ ಮೂತ್ರದ ಬಣ್ಣ ಎಂದಿನ ಹಳದಿ ಬಣ್ಣದಲ್ಲಿರದೇ ಬೇರೆ ಬಣ್ಣದಲ್ಲಿರುವುದು. ಇತರ ಬಣ್ಣಗಳೆಂದರೆ ಕೆಂಪು, ಗುಲಾಬಿ ಅಥವಾ ಕಂದುಮಿಶ್ರಿಯ ಕೆಂಪು.
• ಒಂದು ವೇಳೆ ನಿಮಗೆ ಮೂತ್ರಕೋಶದ ಸೋಂಕಿನ ತೊಂದರೆ ಇದ್ದರೆ ಇದರ ಲಕ್ಷಣಗಳಾದ ಜ್ವರ, ನಡುಕ ಹಾಗೂ ಕೆಳಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
• ಒಂದು ವೇಳೆ ಮೂತ್ರಪಿಂಡದ ಕಾಯಿಲೆಯಿಂದಾಗಿ ಹೆಮಟುರಿಯಾ ಆವರಿಸಿದ್ದರೆ ಇದರ ಲಕ್ಷಣಗಳಾಗಿ ಅತೀವ ಸುಸ್ತು, ದೇಹ ಊದಿಕೊಳ್ಳುವುದು ಹಾಗೂ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ.
• ಒಂದು ವೇಳೆ ಮೂತ್ರಪಿಂಡದ ಕಲ್ಲುಗಳ ಮೂಲಕ ಈ ಸ್ಥಿತಿ ಎದುರಾಗಿದ್ದರೆ ಇದಕ್ಕೆ ಕೆಳಹೊಟ್ಟೆಯ ಒಂದು ಭಾಗದಲ್ಲಿ ಸೂಜಿಯಲ್ಲಿ ಚುಚ್ಚಿದಂತೆ ನೋವಾಗುತ್ತದೆ.

ವೈದ್ಯರನ್ನು ಸಂಪರ್ಕಿಸಬೇಕಾದ ಸಮಯ?

ಯಾವಾಗ ಮೂತ್ರದ ಬಣ್ಣ ಬದಲಾಗಿರುವುದು ಅಥವಾ ಚಿಕ್ಕ ಚಿಕ್ಕ ಚುಕ್ಕೆ ಅಥವಾ ದಾರದಂತೆ ರಕ್ತದ ಇರುವಿಕೆ ಕಂಡುಬರುತ್ತದೆಯೋ, ಅದೇ ಕ್ಷಣದಲ್ಲಿ ವೈದ್ಯರ ಬಳಿ ಧಾವಿಸಬೇಕು. ಒಂದು ವೇಳೆ ಮೂತ್ರದಲ್ಲಿ ಯಾವುದೇ ವ್ಯತ್ಯಾಸ ಕಂಡುಬರದೇ ಮೂತ್ರ ವಿಸರ್ಜಿಸುವ ವೇಳೆ ಉರಿ, ಕೆಳಹೊಟ್ಟೆಯಲ್ಲಿ ನೋವು, ಒತ್ತಡ ನೀಡುವಾಗ ನೋವು ಕಾಣಿಸಿಕೊಂಡರೆ ಇದು ಸಹಾ ಹೀಮಟ್ಯೂರಿಯಾದ ಲಕ್ಷಣಗಳಾಗಿದ್ದು ತಕ್ಷಣವೇ ವೈದ್ಯರನ್ನು ಕಾಣಬೇಕು.

ಈ ಸ್ಥಿತಿಯ ಇರುವಿಕೆಯ ಪತ್ತೆಹಚ್ಚುವಿಕೆ:

ವೈದ್ಯರು ಮೊದಲಾಗಿ ರೋಗಿಯ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿ ಪ್ರಾಥಮಿಕ ತಪಾಸಣೆಯನ್ನು ನಡೆಸುತ್ತಾರೆ. ಬಳಿಕ ಮೂತ್ರಪರೀಕ್ಷೆಯನ್ನು ನಡೆಸಲಾಗುತ್ತದೆ ಹಾಗೂ ಮೂತ್ರಪಿಂಡ ಶೋಧಿಸಿ ವಿಸರ್ಜಿಸಿದ ಅಂಶಗಳ ವಿವರಗಳನ್ನು ಪರಿಗಣಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಇತರ ಪರೀಕ್ಷೆಗಳಾದ ಸಿಟಿ ಸ್ಕ್ಯಾನ್, ಎಂ.ಆರ್.ಐ. ಸ್ಕ್ಯಾನ್, ಅಲ್ಟ್ರಾಸೌಂಡ್ ಸ್ಕ್ಯಾನ್, ಸಿಸ್ಟೋಸ್ಕೋಪಿ ಹಾಗೂ ಕಿಡ್ನಿ ಬಯಾಪ್ಸಿ ಮೊದಲಾದ ಪರೀಕ್ಷೆಗಳನ್ನು ವೈದ್ಯರು ಸೂಚಿಸಬಹುದು.

ಮೂತ್ರದಲ್ಲಿ ರಕ್ತ ಕಂಡುಬಂದರೆ ಎದುರಾಗುವ ವಿಪರೀತ ಪರಿಣಾಮಗಳು ಯಾವುವು?

ಸಾಮಾನ್ಯವಾಗಿ ಮೂತ್ರದ ಬಣ್ಣ ಬದಲಾದರೆ ಇದಕ್ಕೆ ಹಿಂದಿನ ದಿನ ಸೇವಿಸಿದ ಆಹಾರ ಅಥವಾ ಪೇಯವೇ ಕಾರಣವಿರಬಹುದು ಎಂದು ಹೆಚ್ಚಿನವರು ಅಲಕ್ಷಿಸುತ್ತಾರೆ. ಆದರೆ ಪ್ರಾರಂಭದಲ್ಲಿ ನೋವನ್ನು ಪ್ರಕಟಿಸದ ಈ ಸ್ಥಿತಿ ನಿಧಾನವಾಗಿ ಉಲ್ಬಣಗೊಳ್ಳುತ್ತಾ ಹೋದಂತೆ ನೋವು ಸಹಾ ಹೆಚ್ಚತೊಡಗುತ್ತದೆ. ಒಂದು ವೇಳೆ ಈಗಲೂ ಉಪೇಕ್ಷಿಸಿದರೆ ಇದು ಮತ್ತೆ ಸರಿಪಡಿಸಲಾರದ ಹಂತಕ್ಕೆ ತಿರುಗಬಹುದು ಹಾಗೂ ಪರಿಣಾಮವಾಗಿ ಮೂತ್ರಪಿಂಡವೇ ವಿಫಲಗೊಳ್ಳಬಹುದು. ಹಾಗಾಗಿ ಎಷ್ಟು ಬೇಗನೇ ಚಿಕಿತ್ಸೆ ಪ್ರಾರಂಭಿಸಲು ಸಾಧ್ಯವೋ ಚೇತರಿಕೆಯ ಸಾಧ್ಯತೆಗಳೂ ಅಷ್ಟೇ ಹೆಚ್ಚುತ್ತವೆ.

ಯಾವ ಬಗೆಯ ಚಿಕಿತ್ಸೆಗಳು ಲಭ್ಯವಿವೆ?

ಹೆಮಟುರಿಯಾ ಈಗ ಯಾವ ಸ್ಥಿತಿ ತಲುಪಿದೆ ಎಂಬ ಅಂಶವನ್ನು ಪರಿಗಣಿಸಿ ವೈದ್ಯರೇ ಅಗತ್ಯ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಇದರಲ್ಲಿ ಪ್ರತಿಜೀವಕ ಅಥವ ಆಂಟಿಬಯೋಟಿಕ್ ಮಾತ್ರೆಗಳನ್ನು ಸೇವಿಸಲು ನೀಡಿ ಸೋಂಕನ್ನು ನಿವಾರಿಸುವುದು ಪ್ರಮುಖ ಕ್ರಮವಾಗಿದೆ. ಒಂದು ವೇಳೆ ಈ ಸ್ಥಿತಿ ಉಲ್ಬಣ ಸ್ಥಿತಿಗೆ ತಲುಪದೇ ಇದ್ದರೆ ಬೇರೆ ಚಿಕಿತ್ಸೆಯ ಅಗತ್ಯವಿಲ್ಲ. ಒಂದು ವೇಳೆ ಪರೋಕ್ಷ ಕಾರಣಗಳಿಂದ ಈ ತೊಂದರೆ ಎದುರಾಗಿದ್ದರೆ ಆ ಕಾರಣಕ್ಕೆ ಚಿಕಿತ್ಸೆಯನ್ನು ನೀಡಿ ಸರಿಪಡಿಸಿದಾಗ ಈ ತೊಂದರೆಯೂ ತನ್ನಿಂತಾನೇ ಇಲ್ಲವಾಗುತ್ತದೆ.

ಒಂದು ವೇಳೆ ಈ ಸ್ಥಿತಿ ಎದುರಾಗಿದ್ದು ಉಲ್ಬಣಗೊಳ್ಳದೇ ಇದ್ದರೆ ಹಾಗೂ ಸೂಕ್ತ ಕಾರಣ ಕಂಡುಬರದೇ ಇದ್ದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಮೂತ್ರಪರೀಕ್ಷೆಯನ್ನು ಮಾಡಿಸಿಕೊಂಡು ರಕ್ತದ ಒತ್ತಡವನ್ನೂ ದಾಖಲಿಸಿಕೊಂಡು ಪರಿಶೀಲಿಸುತ್ತಿರಬೇಕು.

ಇತರ ಕಾರಣಗಳಿಂದ ಎದುರಾದ ಹೀಮಟ್ಯೂರಿಯಾಕ್ಕೆ ಈ ಚಿಕಿತ್ಸೆಗಳನ್ನು ನೀಡಬಹುದು

*ಮೂತ್ರಪಿಂಡದ ಕಲ್ಲುಗಳು: ಒಂದು ವೇಳೆ ಕಲ್ಲುಗಳು ಚಿಕ್ಕದಾಗಿದ್ದರೆ ಇವನ್ನು ಹೆಚ್ಚಿನ ನೀರು ಕುಡಿದು ಮೂತ್ರವಿಸರ್ಜನೆಯನ್ನು ಹೆಚ್ಚಿಸುವ ಮೂಲಕ ಈ ಕಲ್ಲುಗಳು ನೈಸರ್ಗಿಕವಾಗಿ ದೇಹದಿಂದ ಹೊರಹೋಗುವಂತೆ ಮಾಡಬಹುದು. ಕಲ್ಲುಗಳು ದೊಡ್ಡದಾಗಿದ್ದರೆ ಶಸ್ತ್ರಚಿಕಿತ್ಸೆ ಅಥವಾ ಇತರ ವಿಧಾನಗಳಿಂದ ಇವನ್ನು ಒಡೆದು ಹೊರಬೀಳಿಸಬೇಕಾಗುತ್ತದೆ.
*ಮೂತ್ರಪಿಂಡ ಅಥವಾ ಮೂತ್ರಕೋಶದ ಕ್ಯಾನ್ಸರ್: ಈ ಕ್ಯಾನ್ಸರ್ ಯಾವ ಬೆಳವಣಿಗೆಯನ್ನು ಪಡೆದಿದೆ ಎಂಬ ಅಂಶವನ್ನು ಪರಿಗಣಿಸಿ ವೈದ್ಯರೇ ಚಿಕಿತ್ಸೆಯನ್ನು ಸೂಚಿಸುತ್ತಾರೆ.
*ಮೂತ್ರದ ಪ್ರಮಾಣವನ್ನು ಹೆಚ್ಚಿಸಲು ಮೂತ್ರವರ್ಧಕ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಈ ವ್ಯಕ್ತಿಗಳಿಗೆ ಅಗತ್ಯವಾಗಿದೆ. ಅಲ್ಲದೇ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸೂಕ್ತ ಔಷಧಿಗಳು ಮತ್ತು ದೇಹದಲ್ಲಿ ಉಂಟಾಗಿರುವ ಸೋಂಕುಗಳನ್ನು ನಿವಾರಿಸಲು ಸೂಕ್ತ ಪ್ರತಿಜೀವಕಗಳನ್ನು ಸೇವಿಸುವುದು ಎಲ್ಲವೂ ಚಿಕಿತ್ಸೆಯ ಭಾಗವಾಗಿವೆ.
ಈ ಸ್ಥಿತಿ ಎದುರಾಗದೇ ಇರಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?
• ಬರೆ ಹೆಮಟುರಿಯಾ ಮಾತ್ರವಲ್ಲ, ಮೂತ್ರಪಿಂಡದ ಕಲ್ಲು ಮೊದಲಾದ ಇತರ ತೊಂದರೆಗಳು ಎದುರಾಗದಂತೆ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರಬೇಕು.
• ಲೈಂಗಿಕ ಕ್ರಿಯೆಯ ಬಳಿಕ ತಕ್ಷಣವೇ ಮೂತ್ರ ವಿಸರ್ಜಿಸಿ ಸೋಂಕು ಎದುರಾಗುವ ಸಾಧ್ಯತೆಗಳನ್ನು ತಳ್ಳಿ ಹಾಕಬೇಕು.
• ಅಧಿಕ ಸೋಡಿಯಂ ಇರುವ ಆಹಾರಗಳನ್ನು ವರ್ಜಿಸಿ ಮೂತ್ರಪಿಂಡ ಮತ್ತು ಮೂತ್ರಕೋಶದ ಕಲ್ಲುಗಳಾಗದಂತೆ ತಡೆಯಬಹುದು.
• ಧೂಮಪಾನ ಬೇಡವೇ ಬೇಡ ಹಾಗೂ ಮೂತ್ರಕೋಶದ ಕ್ಯಾನ್ಸರ್ ಗೆ ಕಾರಣವಾಗುವ ಯಾವುದೇ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೇ ಸೇವಿಸಬಾರದು

ಈ ಮಾಹಿತಿ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಆಪ್ತರೊಂದಿಗೆ ಈ ಲೇಖನದ ಕೊಂಡಿಯನ್ನು ಹಂಚಿಕೊಳ್ಳಿ

English summary

What Causes Blood In Urine (Haematuria)?

Blood in your urine is medically known as haematuria and could be due to different conditions and diseases. These include cancer, kidney disease, rare blood disorders and infections. The blood detected in the urine can come from the kidneys, ureters, bladder or urethra. This article will talk about the types, causes and symptoms of haematuria.
X
Desktop Bottom Promotion