For Quick Alerts
ALLOW NOTIFICATIONS  
For Daily Alerts

ಮಲಬದ್ಧತೆ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಕಾರಣ ತಿಳಿದುಕೊಳ್ಳಿ

By Super
|

ಊಟ ಬಲ್ಲವನಿಗೆ ರೋಗವಿಲ್ಲ ಎಂಬುದೊಂದು ಗಾದೆ. ಆದರೆ ಉತ್ತಮ ಆರೋಗ್ಯಕ್ಕಾಗಿ ಕೇವಲ ಊಟ ಮಾಡಿದರೆ ಸಾಲದು, ದೇಹದ ಇತರ ದೈನಂದಿನ ಕ್ರಿಯೆಗಳೂ ಸಮರ್ಪಕವಾಗಿ ನಡೆಯಬೇಕು. ಅದರಲ್ಲಿ ದೈನಂದಿನ ನಿತ್ಯಕರ್ಮವಾದ ಮಲಮೂತ್ರ ವಿಸರ್ಜನೆಯೂ ಒಂದು. ನೀರಿನಲ್ಲಿ ಕರಗುವ ವಿಷಕಾರಿ ಕಲ್ಮಶಗಳು ಮೂತ್ರದ ರೂಪದಲ್ಲಿ ಹೊರಹೋದರೆ ಘನ ಮತ್ತು ನಾರುಗಳು ಮಲದ ರೂಪದಲ್ಲಿ ವಿಸರ್ಜನೆಗೊಳ್ಳುತ್ತವೆ.

ಸಾಮಾನ್ಯವಾಗಿ ಮೂತ್ರವಿಸರ್ಜನೆ ಪ್ರತಿ ಎರಡು ಗಂಟೆಗಳಿಗೊಮ್ಮೆ ನಡೆದರೆ ಮಲವಿಸರ್ಜನೆ ದಿನಕ್ಕೊಮ್ಮೆ (ಪ್ರಾತಃಕಾಲದಲ್ಲಿ ಆಗಬೇಕಾದುದರಿಂದಲೇ ಇದಕ್ಕೆ ಪ್ರಾತಃವಿಧಿ ಎಂದೂ ಕರೆಯಲಾಗುತ್ತದೆ). ಈ ಅವಧಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಒಂದೂವರೆ ಅಥವಾ ಎರಡು ದಿನಕ್ಕೆ ವಿಸ್ತರಿಸಿದರೂ ಆತಂಕವಿಲ್ಲ. ಆದರೆ ವಿಸರ್ಜನೆ ಇದಕ್ಕೂ ಹೆಚ್ಚು ಸಮಯ ತೆಗೆದುಕೊಂಡರೆ ಅಥವಾ ವಿಸರ್ಜನೆಯಲ್ಲಿ ಹೆಚ್ಚಿನ ಒತ್ತಡ ನೀಡಬೇಕಾದ ಅಗತ್ಯವಿದ್ದಲ್ಲಿ, ಈ ಸಮಯದಲ್ಲಿ ನೋವುಂಟಾಗುವುದು ಮಲಬದ್ಧತೆಯ ಲಕ್ಷಣಗಳಾಗಿವೆ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದೇ ಮುಂದುವರೆದಲ್ಲಿ ಸ್ಥಿತಿ ಮೂಲವ್ಯಾಧಿ ಹಾಗೂ ಇತರ ತೊಂದರೆಗಳಿಗೂ ಕಾರಣವಾಗಬಹುದು. ಮಲಬದ್ಧತೆಗೆ ಸಮಸ್ಯೆಗೆ ಮನೆಮದ್ದು-ಲೋಳೆಸರ

ಮಲಬದ್ಧತೆಗೆ ಪ್ರಮುಖವಾಗಿ ನಾವು ಸೇವಿಸುವ ಆಹಾರದ ಬಗ್ಗೆ ನಮಗಿರುವ ಮಾಹಿತಿಯ ಕೊರತೆಯೇ ಮೊತ್ತ ಮೊದಲ ಕಾರಣವಾಗಿದೆ. ವಾಸ್ತವವಾಗಿ ಆಹಾರದ ಮತ್ತು ಔಷಧಿಗಳ ವಿಷಯದಲ್ಲಿ ಪ್ರತಿಯೊಬ್ಬರ ದೇಹರಚನೆಯೂ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಎಣ್ಣೆಯಲ್ಲಿ ಕರಿದ ಮೆಣಸಿನ ಬೋಂಡ ರುಚಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಸಮಾನವಾಗಿ ಕಂಡುಬಂದರೂ ಹೊಟ್ಟೆಗೆ ಹೋದ ಬಳಿಕ ಇಬ್ಬರಲ್ಲೂ ಬೇರೆ ಬೇರೆ ರೀತಿಯಲ್ಲಿ ಪ್ರಭಾವ ಬೀರಬಹುದು.

ಇದನ್ನು ತಡೆಯಲು ನಾವು ಸೇವಿಸುವ ಆಹಾರ ಮತ್ತು ಮಲಬದ್ಧತೆಗೆ ಕಾರಣವಾಗುವ ಸಂಗತಿಗಳ ಬಗ್ಗೆ ಮಾಹಿತಿ ಇರುವುದು ಮೊದಲ ಅವಶ್ಯಕತೆಯಾಗಿದೆ. ವೈದ್ಯಲೋಕದ ಖ್ಯಾತ ಉಕ್ತಿಯಾದ "prevention is better than cure"(ವಾಸಿ ಮಾಡುವುದಕ್ಕಿಂತ ತಡೆಗಟ್ಟುವ ಮುನ್ನೆಚ್ಚರಿಕೆಯೇ ಮೇಲು) ಇಲ್ಲೂ ಅನ್ವಯಿಸುತ್ತದೆ. ಮಲಬದ್ಧತೆಗೆ ಬಗ್ಗೆ ಅರಿತು ಉತ್ತಮ ಆರೋಗ್ಯ ಹೊಂದಲು ಕಾರಣವಾಗುವ ಈ ಹತ್ತು ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದು

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದು

ಪ್ರತಿಯೊಬ್ಬರಿಗೂ ಎಂಟು ಲೋಟದಷ್ಟು ನೀರು ಅಗತ್ಯವಿದೆ. ಇಲ್ಲಿ ಎಂಟು ಲೋಟ ನೀರು ಎಂದರೆ ನಾವು ಸೇವಿಸುವ ದ್ರವಾಹಾರಗಳು, ಕಾಫಿ, ಟೀ, ಜ್ಯೂಸ್, ಲಘುಪಾನೀಯ ಎಲ್ಲವನ್ನೂ ಒಳಗೊಂಡ ಪ್ರಮಾಣ. ಒಂದು ವೇಳೆ ಇದಕ್ಕೂ ಕಡಿಮೆ ನೀರಿನಂಶ ದೇಹ ಪಡೆದರೆ ದೇಹ ಅನಿವಾರ್ಯವಾಗಿ ನಮ್ಮ ದೇಹದ ಇತರೆಡೆಗಳಿಂದ ನೀರನ್ನು ಸಾಲವಾಗಿ ಪಡೆಯಬೇಕಾಗಿ ಬರುತ್ತದೆ. (ನಮ್ಮ ದೇಹದ ಶೇ ಎಪ್ಪತ್ತು ಭಾಗ ನೀರು). ಅದರಲ್ಲಿ ಮೊತ್ತ ಮೊದಲ ಆಯ್ಕೆ ಎಂದರೆ ದೊಡ್ಡಕರುಳಿನ ಒಳಗಿರುವ ಪೂರ್ಣವಾಗಿ ಜೀರ್ಣವಾಗಿರದ ಆಹಾರದಲ್ಲಿರುವ ನೀರು. ಪರಿಣಾಮವಾಗಿ ಈಗ ದೊಡ್ಡಕರುಳಿನಲ್ಲಿ ಉಳಿದಿರುವ ತ್ಯಾಜ್ಯ ನೀರು ರಹಿತವಾಗಿರುವುದರಿಂದ ಸುಟ್ಟ ಇಟ್ಟಿಗೆಯಂತೆ ಗಟ್ಟಿಯಾಗುತ್ತಾ ಹೋಗುತ್ತದೆ. ಬಳಿಕ ಗುದನಾಳ ಈ ಗಟ್ಟಿಯಾದ ಮಲವನ್ನು ಹೊರಹಾಕಲು ಸಾಕಷ್ಟು ಒತ್ತಡ ನೀಡಬೇಕಾಗುತ್ತದೆ. ಈ ಒತ್ತಡ ಗುದನಾಳದ ಒಳಗೋಡೆಗಳನ್ನು ಘರ್ಷಿಸುತ್ತಾ ಹೋಗುವ ಮೂಲಕ ಒಳಗೋಡೆಗಳಲ್ಲಿ ನೆರಿಗೆಗಳನ್ನು ಮೂಡಿಸುತ್ತದೆ. (ನಮ್ಮ ಅಂಗಿಯ ಕೈತೋಳು ತೆಗೆಯುವಾಗ ಮುಷ್ಟಿಕಟ್ಟಿ ಹೊರತೆಗೆಯಲು ಪ್ರಯತ್ನಿಸಿ, ಆಗ ಕೈತೋಳಿನ ಬಟ್ಟೆ ನೆರಿಗೆಯಾಗುವುದನ್ನು ಗಮನಿಸಿ). ಈ ನೆರಿಗೆಗಳೇ ಮೂಲವ್ಯಾಧಿಗೆ ಮೂಲ ಕಾರಣ. ಒಂದು ವೇಳೆ ಈ ನೆರಿಗೆಗಳು ಹೊರಬಂದರೆ ಅತೀವ ನೋವು, ರಕ್ತಸ್ರಾವ ಮೊದಲಾದ ತೊಂದರೆಗಳು ಎದುರಾಗುತ್ತವೆ. ವೈದ್ಯರಿಗೆ ಶಸ್ತ್ರಚಿಕಿತ್ಸೆಯ ವಿನಃ ಬೇರೆ ಮಾರ್ಗ ಉಳಿಯದಾಗುತ್ತದೆ. ಇದೆಲ್ಲಾ ರಾಮಾಯಣ ಬೇಡ ಅಲ್ಲವೇ, ಸಾಕಷ್ಟು ನೀರು ಕುಡಿಯಿರಿ, ಇಡಿಯ ದಿನ, ನಿರಂತರ.

 ಜಡತ್ವದ ದಿನಚರಿ

ಜಡತ್ವದ ದಿನಚರಿ

ಕೆಲವು ಕೆಲಸಗಳು ಕುಳಿತಲ್ಲಿಯೇ ಮಾಡಬೇಕಾಗುತ್ತದೆ. ಒಂದು ನಿಮಿಷವೂ ಹೊರಹೋಗಲು ಪುರುಸೊತ್ತು ಸಿಗುವುದಿಲ್ಲ. ಉದಾಹರಣೆಗೆ ರೈಲು ನಿಲ್ದಾಣದ ಕಿಟಕಿಯಲ್ಲಿ ಟಿಕೆಟ್ ನೀಡುವ ಸಿಬ್ಬಂದಿ. ಒಂದು ವೇಳೆ ಇವರಿಗೆ ಬಿಡುಗಡೆ ನೀಡಲು ಯಾರೂ ಬರದೇ ಇದ್ದರೆ (ಸಾಮಾನ್ಯವಾಗಿ ಈ ಪರಿಸ್ಥಿತಿ ಹೆಚ್ಚಿನ ಜನರು ರಜೆ ಹಾಕಿದ್ದಾಗ ಆಗುತ್ತದೆ) ಘಂಟೆಗಟ್ಟಲೇ ಕುಳಿತಲ್ಲಿಂದ ಅಲುಗಾಡದೇ ಕೆಲಸ ಮಾಡಬೇಕಾಗಿ ಬರುತ್ತದೆ. ಕಾರಣವೇನೇ ಇರಲಿ, ಕುಳಿತಲ್ಲೇ ಬಹಳ ಹೊತ್ತಿನವರೆಗೆ ಕುಳಿತಲ್ಲೇ ಇರುವುದು ಮಲಬದ್ಧತೆಗೆ ಮುಖ್ಯಕಾರಣವಾಗಿದೆ. ಏಕೆಂದರೆ ನಮ್ಮ ಗುದನಾಳ ಮತ್ತು ಆಸನದ್ವಾರದಲ್ಲಿ ಒಂದು ಜಿಗುಟುರಸ ಜಿನುಗುತ್ತಾ ಇರುತ್ತದೆ. (ಇದಕ್ಕೆ rectal juice ಎಂದು ಕರೆಯುತ್ತಾರೆ). ಇದು ಮಲವಿಸರ್ಜನೆಗೆ ಅಗತ್ಯವಾದ ಜಾರುಕದಂತೆ ಕೆಲಸ ಮಾಡುತ್ತದೆ. ಇದರ ಜಿನುಗುವಿಕೆಗೆ ದೇಹ ಚಟುವಟಿಕೆಯಲ್ಲಿರುವುದು ಅಗತ್ಯವಾಗಿದೆ. ಚಟುವಟಿಕೆಯಿಲ್ಲದ ದೇಹದಲ್ಲಿ ಈ ರಸ ಕಡಿಮೆ ಸ್ರವಿತವಾಗಿ ಮಲದ ಮೊದಲ ಭಾಗ ಹೊರಬರುತ್ತಲೇ ಖಾಲಿಯಾಗಿಬಿಡುತ್ತದೆ. ಉಳಿದ ಭಾರ ಹೊರಬರುವ ವೇಳೆ ಗುದನಾಳದ ಒಳಗೋಡೆಗಳು ನೇರವಾಗಿ ಗಟ್ಟಿಯಾದ ಮಲದ ಒತ್ತಡಕ್ಕೆ ನೆರಿಗೆಯಾಗಲು ಕಾರಣವಾಗುತ್ತದೆ. ಆದ್ದರಿಂದ ಎಷ್ಟೇ ಕೆಲಸದ ಒತ್ತಡವಿದ್ದರೂ ಅರ್ಧ ಘಂಟೆ ಅಥವಾ ಒಂದು ಘಂಟೆಗೊಂದು ಬಾರಿ ಎದ್ದು ಚಿಕ್ಕದಾದ ನಡಿಗೆ ನಡೆಯುವುದು ಅತಿ ಅಗತ್ಯವಾಗಿದೆ.

ಕೆಲವು ಔಷಧಿಗಳ ಅಡ್ಡಪರಿಣಾಮಗಳು

ಕೆಲವು ಔಷಧಿಗಳ ಅಡ್ಡಪರಿಣಾಮಗಳು

ಯಾವುದೇ ಔಷಧಿಯಾದರೂ ಕೆಲವೊಂದು ಅಡ್ಡಪರಿಣಾಮಗಳು ಇದ್ದೇ ಇರುತ್ತದೆ. ವೈದ್ಯರು ನಿಮಗೆ ಈ ಔಷದಿಗಳನ್ನು ನೀಡುವ ವೇಳೆ ಇದನ್ನು ಪರಿಗಣಿಸಿಯೇ ಇರುತ್ತಾರೆ. ಆದರೆ ಅನಿವಾರ್ಯ ಕಾರಣಗಳಲ್ಲಿ ಮಲಬದ್ಧತೆಯ ಅಡ್ಡಪರಿಣಾಮವಿದ್ದರೂ ಆರೋಗ್ಯದ ದೃಷ್ಟಿಯಿಂದ ನೀಡಲೇಬೇಕಾದ ಅನಿವಾರ್ಯತೆಯಿದ್ದಾಗ ಮಲಬದ್ಧತೆಯೂ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಮನಸ್ಸಿನ ಬೇಗುದಿ ಕಡಿಮೆಗೊಳಿಸುವ ಔಷಧಿಗಳಾದ antidepressant ಗಳು, ಮೂತ್ರ ವರ್ಧಕಗಳು ಈ ತೊಂದರೆ ಉಂಟುಮಾಡುತ್ತದೆ.

ಗರ್ಭಾವಸ್ಥೆಯ ಕಾಲದಲ್ಲಿ

ಗರ್ಭಾವಸ್ಥೆಯ ಕಾಲದಲ್ಲಿ

ಗರ್ಭಿಣಿಯರಿಗೆ ಎರಡನೆಯ ತ್ರೈಮಾಸಿಕದಲ್ಲಿ (ನಾಲ್ಕನೆಯ ತಿಂಗಳಿನಿಂದ ಆರನೆಯ ತಿಂಗಳವರೆಗೆ) ದೇಹ ಹೆಚ್ಚು ಹಾರ್ಮೋನುಗಳ ಪ್ರಭಾವಕ್ಕೆ ಒಳಗಾಗುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಮಹಿಳೆಯರು ಮಲಬದ್ಧತೆಯನ್ನು ಅನುಭವಿಸುತ್ತಾರೆ. ಇದಕ್ಕೆ ಇನ್ನೊಂದು ಕಾರಣವೆಂದರೆ ಒಡಲಿನಲ್ಲಿ ಬೆಳೆಯುತ್ತಿರುವ ಶಿಶು ಗರ್ಭಕೋಶದ ಗಾತ್ರವನ್ನು ಹೆಚ್ಚಿಸುತ್ತಿದ್ದಂತೆಯೇ ಜೀರ್ಣಾಂಗಗಳ ಮೇಲೆ ಸ್ವಲ್ಪಸ್ವಲ್ಪವಾಗಿ ಒತ್ತಡವನ್ನು ಹೇರುತ್ತಾ ಹೋಗುತ್ತದೆ. ಇದರಿಂದ ಆಹಾರ ಮುಂದುವರೆಯಲು ತಡೆಯಾಗಿ ಮಲಬದ್ಧತೆ ಉಂಟಾಗುತ್ತದೆ. ಇದನ್ನು ಗಮನಿಸುವ ವೈದ್ಯರು ನೀಡುವ ಔಷಧಿಗಳು ಮತ್ತು ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಆರನೆಯ ತಿಂಗಳ ಬಳಿಕ ಹೊಟ್ಟೆ ಮುಂದೆ ಬರುವುದರಿಂದ ಜೀರ್ಣಂಗಗಳಿಗೆ ಕೊಂಚ ಒತ್ತಡ ಕಡಿಮೆಯಾಗಿ ಮಲಬದ್ಧತೆಯೂ ಕಡಿಮೆಯಾಗುತ್ತದೆ.

ವಯಸ್ಸಿನ ಪ್ರಭಾವ

ವಯಸ್ಸಿನ ಪ್ರಭಾವ

ವಯಸ್ಸಾದಂತೆಯೇ ದೇಹದ ಇತರ ಅಂಗಗಳಂತೆಯೇ ಜೀರ್ಣಾಂಗಗಳೂ ಶಿಥಿಲಗೊಂಡು ಮಲಬದ್ಧತೆಗೆ ಕಾರಣವಾಗುತ್ತದೆ. ಜೀರ್ಣಶಕ್ತಿಯಲ್ಲಿ ಕೊರತೆ, ದೇಹದ ಇತರ ಚಟುವಟಿಕೆಗಳಲ್ಲಿ ಕುಂಠಿತವಾಗುವಿಕೆ ಮೊದಲಾದವು ಮಲಬದ್ಧತೆಯನ್ನು ಹೆಚ್ಚಿಸುತ್ತವೆ.

ವಿರೇಚಕದ ಅತಿಹೆಚ್ಚು ಬಳಕೆ

ವಿರೇಚಕದ ಅತಿಹೆಚ್ಚು ಬಳಕೆ

ಮಲಬದ್ಧತೆಗೆ ವೈದ್ಯರು ಹಲವು ವಿರೇಚಕ (laxative)ಗಳನ್ನು ಶಿಫಾರಸ್ಸು ಮಾಡುತ್ತಾರೆ. ಸುಲಭವಾದ ವಿರೇಚಕವೆಂದರೆ ಹರಳೆಣ್ಣೆ. ಇದರಿಂದಾಗಿ ಬೆಳಗ್ಗಿನ ಪ್ರಾತಃವಿಧಿ ಸುಲಭವಾಗಿ ಆಗುತ್ತದೆ. ಆದರೆ ಈ ವಿಧಾನವನ್ನು ಪ್ರತಿದಿನ ಮಾಡುವುದು ಅಥವಾ ಪದೇ ಪದೇ ಅನುಸರಿಸುವುದು ಆರೋಗ್ಯಕರವಲ್ಲ. ಏಕೆಂದರೆ ದೇಹ ಈ ವಿರೇಚಕವನ್ನು ಒಂದು ಚಟ ಅಥವಾ ವ್ಯಾಧಿಯ ರೂಪದಂತೆ ಸ್ವೀಕರಿಸಿ ಸ್ವಾಭಾವಿಕವಾದ ವಿಸರ್ಜನೆಯನ್ನೇ ತಿರಸ್ಕರಿಸಿಬಿಡುತ್ತದೆ. (ಧೂಮಪಾನ ಪ್ರಾರಂಭಿಸಿದ ಬಳಿಕ ಬಿಟ್ಟುಬಿಡಲು ಕಷ್ಟಕರವಾಗುವ ಹಾಗೆ). ಮೊದಮೊದಲು ಸ್ವಲ್ಪ ಪ್ರಮಾಣಕ್ಕೆ ಸುಖವಾಗಿ ಆಗುತ್ತಿದ್ದ ಪ್ರಾತಃವಿಧಿ ಕಾಲಕಳೆದಂತೆ ಹೆಚ್ಚಿನ ಪ್ರಮಾಣವನ್ನು ಬೇಡುತ್ತದೆ, ಈ ಬೇಡಿಕೆ ಏರುತ್ತಾ ಹೋಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ಈ ತೊಂದರೆಯಿಂದ ಪಾರಾಗಲು ನಿಧಾನವಾಗಿ ವಿರೇಚಕಗಳ ಚಟದಿಂದ ಹೊರಬರಬೇಕು. ಇದಕ್ಕಾಗಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಕ್ಯಾನ್ಸರ್ ಮತ್ತು ಇತರ ವ್ಯವಸ್ಥಿತ ಕಾಯಿಲೆಗಳು

ಕ್ಯಾನ್ಸರ್ ಮತ್ತು ಇತರ ವ್ಯವಸ್ಥಿತ ಕಾಯಿಲೆಗಳು

ಕೆಲವು ವ್ಯವಸ್ಥಿತ ಕಾಯಿಲೆಗಳಾದ ಮಧುಮೇಹ, ಥೈರಾಯ್ಡ್ ಗ್ರಂಥಿಯ ಊತ (hypothyroidism), ಪಾರ್ಕಿನ್ಸನ್ ಕಾಯಿಲೆ ಹಾಗೂ ಕರುಳಿನ ಕ್ಯಾನ್ಸರ್ ಮಲಬದ್ಧತೆಗೆ ಕಾರಣವಾಗುತ್ತವೆ. ಇದಕ್ಕೆ ವೈದ್ಯರ ಸಲಹೆ ಪಡೆಯದೇ ಯಾವುದೇ ಕ್ರಮವನ್ನೂ ಕೈಗೊಳ್ಳುವುದು ಅಪಾಯಕಾರಿಯಾಗಿದೆ.

ಬೇಕೆಂದಲೇ ಮಲವಿಸರ್ಜಿಸದಿರುವುದು

ಬೇಕೆಂದಲೇ ಮಲವಿಸರ್ಜಿಸದಿರುವುದು

ಇಂದಿಗೂ ಭಾರತದ ಎಷ್ಟೋ ಹಳ್ಳಿಗಳಲ್ಲಿ ಮಹಿಳೆಯರು ಬಹಿರ್ದೆಶೆಗೆ ಹೋಗಲು ರಾತ್ರಿಯಾಗುವುದನ್ನು ಕಾಯಬೇಕಾದ ಪರಿಸ್ಥಿತಿ ಇದೆ. ಇವರಿಗೆ ಅನಿವಾರ್ಯವಾಗಿ ತಮ್ಮ ಒತ್ತಡವನ್ನು ಬಲವಂತವಾಗಿ ಅದುಮಿಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ರಾತ್ರಿಯಾದ ಬಳಿಕ ಹೊರಗೆ ಹುಲಿ ತಿರುಗುತ್ತಿದೆ, ಯಾರೂ ಮನೆಯಿಂದ ಹೊರಬರಬೇಡಿ ಎಂದು ಊರಿನ ಮುಖಂಡರು ಕರೆ ಕೊಟ್ಟರೆ ಪರಿಸ್ಥಿತಿ ಏನಾಗಬಹುದು? ಆಗ ಒಂದು ದಿನದ ಒತ್ತಡ ಎರಡು ದಿನಕ್ಕೆ ತಿರುಗುತ್ತದೆ. ಇನ್ನೂ ಕೆಲವರಿಗೆ ಪ್ರಯಾಣದ ನಡುವೆ ಮಲವಿಸರ್ಜನೆ ಮಾಡಲು ಸಿಗುವ ಸ್ಥಳಗಳು ಸ್ವಚ್ಛವಾಗಿಲ್ಲದ ಕಾರಣ ಮಲವಿಸರ್ಜಿಸಲು ಮನಸ್ಸೇ ಆಗದೇ ದಿನಗಟ್ಟಲೇ ಬಲವಂತವಾಗಿ ಅದುಮಿಟ್ಟುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಗಳು ಮಲಬದ್ಧತೆ ಮತ್ತು ಇತರ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಈ ಸ್ಥಿತಿಗೆ ವೈದ್ಯಭಾಷೆಯಲ್ಲಿ ‘obstipation' ಎಂದು ಕರೆಯುತ್ತಾರೆ.

ಹಾಲು ಮತ್ತು ಇತರ ಡೈರಿ ಆಹಾರಗಳು

ಹಾಲು ಮತ್ತು ಇತರ ಡೈರಿ ಆಹಾರಗಳು

ಕೆಲವರಿಗೆ ಹಾಲು ದೇಹಕ್ಕೆ ಒಗ್ಗುವುದಿಲ್ಲ. ಈ ಪರಿಸ್ಥಿತಿಗೆ ‘lactose intolerance‘ ಎಂದು ಕರೆಯುತ್ತಾರೆ. ಇವರಿಗೆ ಹಾಲು ಮೊಸರು ಮಜ್ಜಿಗೆಗಳು ಅಲರ್ಜಿಯಾಗುತ್ತವೆ. ಒಂದು ವೇಳೆ ಕುಡಿದರೆ ಆಮಶಂಕೆ ಅಥವಾ ಮಲಬದ್ಧತೆ, ಎರಡರಲ್ಲಿ ಒಂದು ತೊಂದರೆಗೆ ಒಳಗಾಗುತ್ತಾರೆ. ವಿಸ್ಮಯವೆಂದರೆ ಈ ವ್ಯಕ್ತಿಗಳಿಗೆ ತಮ್ಮ ದೇಹದ ಈ ವ್ಯಾಧಿಯ ಬಗ್ಗೆ ವೈದ್ಯರು ತಿಳಿಸುವವರೆಗೆ ಗೊತ್ತೇ ಇರುವುದಿಲ್ಲ.

ಶೌಚಾಲಯಕ್ಕೆ ಹೋಗದೇ ಇರುವುದು

ಶೌಚಾಲಯಕ್ಕೆ ಹೋಗದೇ ಇರುವುದು

ಕೆಲವೊಮ್ಮೆ ಕಛೇರಿಯಲ್ಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಶೌಚಾಲಯವಿಲ್ಲದೇ ಇದ್ದಲ್ಲಿ ಅಥವಾ ಶುಚಿಯಾಗಿಲ್ಲದಿದ್ದಲ್ಲಿ ಕೆಲವರು ಶೌಚಕ್ರಿಯೆಗೆ ಮನಸ್ಸೇ ಮಾಡುವುದಿಲ್ಲ. ಈ ವಿಷಯದಲ್ಲಿ ಮಹಿಳೆಯರ ಸಂಖ್ಯೆ ದೊಡ್ಡದು. ಒಂದೆರಡು ದಿನಗಳ ಮಟ್ಟಿಗಾದರೆ ದೇಹ ಹೊಂದಿಕೊಳ್ಳುತ್ತದೆ. ಆದರೆ ದಿನಂಪ್ರತಿ ಇದೇ ಅಭ್ಯಾಸವಾದರೆ ನಿಧಾನವಾಗಿ ಮಲಬದ್ಧತೆ ಆವರಿಸಿಕೊಳ್ಳುತ್ತದೆ. ಇನ್ನೊಂದು ಕಾರಣವೆಂದರೆ ಗುದನಾಳದಲ್ಲಿ ಮುಂದೆ ಬಂದು ಮೆದುಳಿಗೆ ವಿಸರ್ಜನೆಯ ಸೂಚನೆ ನೀಡಿದ ಬಳಿಕ ಬಲವಂತವಾಗಿ ತಡೆಯುವುದರಿಂದ ಮಲ ಹಿಂದಕ್ಕೆ ಚಲಿಸುತ್ತದೆ. ಆದರೆ ದೊಡ್ಡಕರುಳಿಗೆ ಹಿಂದಿರುಗದೇ ಗುದನಾಳದ ಮೇಲ್ಭಾಗದಲ್ಲಿ ಸಂಗ್ರಹವಾಗಿರುತ್ತದೆ. ಈ ಪರಿಸ್ಥಿತಿ ಅಪಾಯಕಾರಿಯಾಗಿದೆ. ಇದು ಮಲಬದ್ಧತೆ, ಒಳಗೋಡೆಯಲ್ಲಿ ಹುಣ್ಣು, ಮೂಲವ್ಯಾಧಿ, ಉರಿತ, ಮೊದಲಾದ ತೊಂದರೆಗಳಿಗೆ ಆಹ್ವಾನ ನೀಡುತ್ತದೆ.

English summary

10 causes of constipation you probably didn’t know about

Constipation, a condition that is often treated as a joke can be very uncomfortable and sometimes painful for a person suffering from it. Clinically defined as condition where a person has difficulty in 
 
 passing motion or suffers from infrequent bowel movements, So, to help you out, here are 10 common causes of the condition.
X
Desktop Bottom Promotion