For Quick Alerts
ALLOW NOTIFICATIONS  
For Daily Alerts

ಶೇವಿಂಗ್ ನಂತರ ಕಾಡುವ ಉರಿ, ಗುಳ್ಳೆಗಳನ್ನು ತಡೆಗಟ್ಟಲು ಏನು ಮಾಡಬೇಕು?

|

ಬಢ್ತೀ ಕಾ ನಾಮ್ ದಾಡಿ ಎಂಬುದೊಂದು ಹಿಂದಿ ಭಾಷೆಯ ಸುಭಾಷಿತ. ಗೊಬ್ಬರವಿಲ್ಲದ ಬೆಳೆ ಎಂಬುದು ಕನ್ನಡದ ಒಗಟು. ಗಡ್ಡ ಮೀಸೆಗಳು ದೇಹದ ಇತರ ಭಾಗದ ರೋಮಗಳಂತೆಯೇ ಬೆಳೆಯುತ್ತಲೇ ಇರುತ್ತವೆ. ಕೆಲವರಿಗೆ ಹೆಚ್ಚು ವೇಗದಿಂದ, ಕೆಲವರಿಗೆ ಅತಿ ನಿಧಾನವಾಗಿ. ಸಸ್ತನಿಗಳಾದ ನಮಗೆ ದೇಹವಿಡೀ ರೋಮಗಳಿದ್ದರೂ ಕೆಲವು ಭಾಗಗಳಲ್ಲಿ ಹೆಚ್ಚು ಸಾಂದ್ರೀಕೃತಗೊಂಡಿದ್ದು ಈ ಭಾಗಗಳಿಂದ ನಾವು ರೋಮಗಳನ್ನು ಕತ್ತರಿಸಿ ನಿವಾರಿಸುತ್ತೇವೆ. ಗಡ್ಡ ಮೀಸೆ ಇವುಗಳಲ್ಲಿ ಪ್ರಮುಖವಾದವು.

ಗಡ್ಡವನ್ನು ಹೆರೆದು ತೆಗೆದಷ್ಟೂ ಹೆಚ್ಚು ಸೊಂಪಾಗಿ ಮತ್ತು ಒರಟಾಗಿ ಗಡ್ಡ ಮತ್ತೆ ಬೆಳೆಯತೊಡಗುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಅಷ್ಟೇ ಅಲ್ಲ, ಕಡಿಮೆ ಅಂತರಗಳಲ್ಲಿ ಹೆರೆದುಕೊಂಡರೆ ಗಾಯಗಳಾಗುತ್ತವೆ ಮತ್ತು ಚರ್ಮದಲ್ಲಿ ಉರಿ ಉಂಟಾಗುತ್ತದೆ ಎಂದೂ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ವಾಸ್ತವದಲ್ಲಿ, ಶೇವಿಂಗ್ ಎಂಬ ನಾಪಿತಕ್ರಿಯೆಯನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಲ್ಪಡುವ ಮೂಲಕವೇ ಗಾಯ, ಉರಿ, ಒಣ ತ್ವಚೆ ಅಥವಾ ಇತರ ತೊಂದರೆಗಳಿಗೆ ಒಳಗಾಗದಂತೆ ನೋಡಿಕೊಳ್ಳಬಹುದು. ಇದು ಅರ್ಥವಾಗಬೇಕಾದರೆ ನಮ್ಮ ಕೂದಲುಗಳು ಬೆಳೆಯುವ ಕ್ರಮವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಪ್ರತಿ ಕೂದಲೂ ಚರ್ಮದ ಕೆಳಪದರಲ್ಲಿರುವ 'ಚೀಲಗಳು' ಅಥವಾ ಕೂದಲ ಬುಡದಿಂದಲೇ ಹುಟ್ಟುತ್ತವೆ. ನಮ್ಮ ಕಣ್ಣಿಗೆ ಕಾಣುವ ಕೂದಲ ಭಾಗ ವಾಸ್ತವದಲ್ಲಿ ಸತ್ತ ಕೆರಾಟಿನ್ ಜೀವಕೋಶಗಳು! ಇದೇ ಕಾರಣಕ್ಕೆ ನಮಗೆ ಕೂದಲು ಕತ್ತರಿಸಿದಾಗ ನೋವಾಗುವುದಿಲ್ಲ. ಕೂದಲು ಬೆಳೆಯುವುದು ಎಂದರೆ ಕೂದಲ ಬುಡ ಈ ಕೆರಾಟಿನ್ ಜೀವಕೋಶಗಳನ್ನು ಸತತವಾಗಿ ಹೊರದೂಡುತ್ತಾ ಇರುವುದು!.

ಕೂದಲ ಬುಡವನ್ನು ಸುತ್ತುವರೆದಿರುವ ರಕ್ತನಾಳಗಳು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಹೀಗೆ ಉತ್ಪತ್ತಿಯಾದ ಕೆರಾಟಿನ್ ಜೀವಕೋಶಗಳು ಗಟ್ಟಿಯಾಗಿ ಕಪ್ಪಗಾಗಿ ಒಂದರ ಹಿಂದೊಂದು ಪರಸ್ಪರ ಅಂಟಿಕೊಂಡು ಉದ್ದನೆಯ ಕೋಲಿನಂತಾಗಿ ಹೊರಚರ್ಮದ ಮೂಲಕ ಹೊರದೂಡಲ್ಪಡುತ್ತವೆ.

1. ನೀವು ಎಷ್ಟು ಅಂತರಗಳಲ್ಲಿ ಶೇವಿಂಗ್ ಮಾಡಿಕೊಳ್ಳಬೇಕು?

1. ನೀವು ಎಷ್ಟು ಅಂತರಗಳಲ್ಲಿ ಶೇವಿಂಗ್ ಮಾಡಿಕೊಳ್ಳಬೇಕು?

ಈ ಪ್ರಶ್ನೆಗೆ ಏಕ ಪ್ರಕಾರದ ಉತ್ತರವನ್ನು ನೀಡಲು ಸಾಧ್ಯವಿಲ್ಲ. ಇದು ಆಯಾ ವ್ಯಕ್ತಿಯ ಆದ್ಯತೆ, ಅವಶ್ಯಕತೆ, ಧಾರ್ಮಿಕ ಅಥವಾ ಇತರ ಅನಿವಾರ್ಯತೆಗಳನ್ನು ಅವಲಂಬಿಸಿರುತ್ತದೆ. ಕೆಲವರಿಗೆ ಚರ್ಮಕ್ಕೆ ತಾಕಿದಷ್ಟು ಕೆಳಗೆ ಅಥವಾ ಕ್ಲೀನ್ ಶೇವ್ ಇಷ್ಟವಾದರೆ, ಕೆಲವರಿಗೆ ಕೊಂಚವೇ ಗಿಡ್ಡವಾದ ಕೂದಲುಗಳನ್ನಿರಿಸಿಕೊಳ್ಳುವುದು ಇಷ್ಟವಾಗುತ್ತದೆ. ಕೆಲವರಿಗೆ ಹುಲುಸಾಗಿ ಗಡ್ಡ ಬಿಟ್ಟುಕೊಳ್ಳುವುದು ಇಷ್ಟವಾಗುತ್ತದೆ. ಒಂದು ವೇಳೆ ಶೇವಿಂಗ್ ಮಾಡಿಕೊಳ್ಳುವುದು ಅಗತ್ಯವಾದರೆ ಇದನ್ನು ನಿರ್ವಹಿಸಲು ನಿಮ್ಮ ಕೂದಲು ಬೆಳೆಯುವ ಕ್ರಮ ಮತ್ತು ಶೇವಿಂಗ್ ಆದ ಬಳಿಕ ನಿಮ್ಮ ತ್ವಚೆಗೆ ಯಾವ ಬಗೆಯ ಅನುಭವ ಆಗುತ್ತದೆ ಎಂಬುದರ ಮೇಲೆ ನೀವು ಎಷ್ಟು ಸಮಯದ ಅಂತರಗಳಲ್ಲಿ ಶೇವಿಂಗ್ ಮಾಡಿಕೊಳ್ಳಬಹುದು ಎಂಬುದನ್ನು ನಿರ್ಧರಿಸಬಹುದು.

ಅನಿವಾರ್ಯವಲ್ಲದ ಹೊರತು ಪ್ರತಿದಿನವೂ ಶೇವ್ ಮಾಡಿಕೊಳ್ಳಬೇಕಾಗಿಲ್ಲ. ಏಕೆಂದರೆ ಕ್ಲೀನ್ ಶೇವ್ ಮಾಡಿಕೊಳ್ಳುವಾಗ ಇದು ಕೇವಲ ಕೂದಲುಗಳನ್ನು ಮಾತ್ರವಲ್ಲ, ತ್ವಚೆಯ ಹೊರಪದರದ ತೆಳುವಾದ ಭಾಗವನ್ನೂ ನಿವಾರಿಸುತ್ತದೆ. ಆದ್ದರಿಂದ ನಿತ್ಯವೂ ಶೇವ್ ಮಾಡಿಕೊಳ್ಳುವುದನ್ನು ಆದಷ್ಟೂ ತಪ್ಪಿಸಿ ಎರಡು ದಿನಗಳಿಗೊಮ್ಮೆ ನಿರ್ವಹಿಸಿದರೆ ಶೇವಿಂಗ್ ನಿಂದ ನಿವಾರಣೆಯಾಗಿದ್ದ ತ್ವಚೆಯ ಹೊರಪದರ ಗುಣವಾಗಲು ಸಾಧ್ಯವಾಗುತ್ತದೆ.

2. ಸರಿಯಾದ ಶೇವಿಂಗ್ ನಿರ್ವಹಿಸಲು ಕೆಲವು ಸಲಹೆಗಳು:

2. ಸರಿಯಾದ ಶೇವಿಂಗ್ ನಿರ್ವಹಿಸಲು ಕೆಲವು ಸಲಹೆಗಳು:

ಸರಿಯಾದ ಕ್ರಮದಲ್ಲಿ ಶೇವ್ ಮಾಡಿದಾಗಲೇ ಚರ್ಮ ನುಣುಪಾಗಿ ಕಾಣಿಸುತ್ತದೆ ಹಾಗೂ ಹೆಚ್ಚು ಹೊತ್ತು ನುಣುಪುತನ ಉಳಿದುಕೊಳ್ಳುತ್ತದೆ. ಅಲ್ಲದೇ ಉರಿ, ಗೀರುಗಳು ಉಂಟಾಗುವುದನ್ನು ತಪ್ಪಿಸಿ ಸೋಂಕು ಎದುರಾಗುವುದರಿಂದಲೂ ರಕ್ಷಿಸುತ್ತದೆ.

ಎಂದಿಗೂ ರೇಜರ್ ಹಂಚಿಕೊಳ್ಳದಿರಿ

ಯಾವುದೇ ವೈಯಕ್ತಿಕ ನಾಪಿತವಸ್ತುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬಾರದು. ವಿಶೇಷವಾಗಿ ರೇಜರ್, ಚರ್ಮದ ಸೂಕ್ಷ್ಮ ಪದರವನ್ನು ಬ್ಲೇಡಿನಲ್ಲಿ ಅಂಟಿಸಿಕೊಳ್ಳುವ ಕಾರಣ ಚೆನ್ನಾಗಿ ತೊಳೆದಿದ್ದರೂ ಎಲ್ಲೋ ಒಂದೆರಡು ಜೀವಕೋಶಗಳಿದ್ದರೂ ಇದರ ಜೊತೆಗೆ ಇರುವ ಬ್ಯಾಕ್ಟೀರಿಯಾಗಳು ಇದನ್ನು ಬಳಸುವ ಇನ್ನೊಬ್ಬ ವ್ಯಕ್ತಿಗೆ ದಾಟಿ ಸೋಂಕು ಹರಡಬಹುದು.

ಹಾಗಾಗಿ, ರೇಜರ್ ಹಂಚಿಕೊಳ್ಳುವುದು ಎಂದರೆ ಇನ್ನೊಬ್ಬ ವ್ಯಕ್ತಿಯ ಬ್ಯಾಕ್ಟೀರಿಯಾಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡಂತೆ. ಕೆಲವು ಬಾರಿ ಅವರ ರಕ್ತದ ಕೆಲವು ಕಣಗಳೂ ಈ ವ್ಯಕ್ತಿಯ ಚರ್ಮದ ಮೂಲಕ ದೇಹ ಪ್ರವೇಶಿಸಬಹುದು. ಇದು ಕೇವಲ ಸೋಂಕು ಮಾತ್ರವಲ್ಲ, ಅನಪೇಕ್ಷಿತ ಕಾಯಿಲೆಗಳಿಗೂ ಕಾರಣವಾಗಬಹುದು.

3. ತ್ವಚೆಗೆ ಆದಷ್ಟೂ ಹೆಚ್ಚಿನ ಆರ್ದ್ರತೆ ಒದಗಿಸಿ:

3. ತ್ವಚೆಗೆ ಆದಷ್ಟೂ ಹೆಚ್ಚಿನ ಆರ್ದ್ರತೆ ಒದಗಿಸಿ:

ಪ್ರತಿ ಬಾರಿ ಶೇವ್ ಮಾಡುವ ಮುನ್ನ ಉತ್ತಮ ಗುಣಮಟ್ಟದ ಶೇವ್ ಜೆಲ್, ಶೇವಿಂಗ್ ಕ್ರೀಮ್ ಅಥವಾ ಸೋಪು, ಏನೂ ಇಲ್ಲದಿದ್ದ ಪಕ್ಷ ಉಗುರುಬೆಚ್ಚನೆಯ ನೀರಿನಿಂದ ಕೂದಲ ಭಾಗವನ್ನು ಚೆನ್ನಾಗಿ ನೆನೆಸಿ ಕೂದಲುಗಳನ್ನು ಮೃದುಗೊಳಿಸಬೇಕು ಹಾಗೂ ತ್ವಚೆಗೆ ಆದಷ್ಟೂ ಹೆಚ್ಚಿನ ಆರ್ದ್ರತೆಯನ್ನು ಒದಗಿಸಬೇಕು. ಈ ಮೂಲಕ ರೇಜರ್ ನ ಬ್ಲೇಡು ಸುಲಭವಾಗಿ ಜಾರಲು ಮತ್ತು ಕೂದಲುಗಳನ್ನು ಕತ್ತರಿಸಲು ಸಾಧ್ಯವಾಗುತ್ತದೆ ಮತ್ತು ಚರ್ಮಕ್ಕೆ ನೇರವಾದ ಸ್ಪರ್ಶವನ್ನು ತಗ್ಗಿಸುವ ಮೂಲಕ ಚರ್ಮದ ಹೊರಪದರ ಜೀವಕೋಶಗಳನ್ನು ಕೆರೆಯುವುದನ್ನು ಆದಷ್ಟೂ ತಪ್ಪಿಸಬಹುದು. ಇದರಿಂದ ಉರಿ ಅಥವಾ ಗಾಯಗಳಾಗುವ ಸಾಧ್ಯತೆಯೂ ಕನಿಷ್ಟಗೊಳ್ಳುತ್ತದೆ. ಚರ್ಮ ಒಣಗಿದ್ದಷ್ಟೂ ಗಾಯ ಮತ್ತು ಉರಿಯಾಗುವ ಸಾಧ್ಯತೆ ಹೆಚ್ಚು.

ಶೇವಿಂಗ್ ಗೂ ಮುನ್ನ ಸತ್ತ ಜೀವಕೋಶಗಳನ್ನು ನಿವಾರಿಸಿ (Exfoliate):

ನಮ್ಮ ತ್ವಚೆಯ ಹೊರಪದರದ ಮೇಲೆ ಸತ್ತ ಚರ್ಮದ ಜೀವಕೋಶಗಳು ಅಂಟಿಕೊಂಡು ತೆಳುವಾದ ಪದರ ನಿರ್ಮಾಣವಾಗಿರುತ್ತದೆ. ಆಗಾಗ ಇದನ್ನು ನಿವಾರಿಸುತ್ತಿರಬೇಕು. ಈ ಕ್ರಿಯೆಗೆ ಸ್ಕ್ರಬ್ ಎಂದು ಕರೆಯುತ್ತೇವೆ. ಮಾರುಕಟ್ಟೆಯಲ್ಲಿ skin scrub ಎಂಬ ಹೆಸರಿನಿಂದ ಲಭಿಸುವ ಪ್ರಸಾದನಗಳನ್ನು ಬಳಸಿ ಸ್ವಚ್ಛ ಟವೆಲ್ ಅಥವಾ ಲೂಫಾ ಬಳಸಿ ಈ ಕಾರ್ಯವನ್ನು ನಿರ್ವಹಿಸಿ. ಇದರಿಂದ ತ್ವಚೆ ಸ್ವಚ್ಛಗೊಳ್ಳುವುದು ಮಾತ್ರವಲ್ಲ ಕೂದಲು ಆದಷ್ಟೂ ತಳಭಾಗದಿಂದ ಕತ್ತರಿಸಲ್ಪಟ್ಟು ಅತ್ಯುತ್ತಮ ಶೇವ್ ಪಡೆಯಲು ಸಾಧ್ಯವಾಗುತ್ತದೆ.

4. ಗಾಯ, ಮೊಡವೆ, ಗೀರುಗಳ ಮೇಲೆ ಶೇವ್ ಮಾಡಿಕೊಳ್ಳದಿರಿ

4. ಗಾಯ, ಮೊಡವೆ, ಗೀರುಗಳ ಮೇಲೆ ಶೇವ್ ಮಾಡಿಕೊಳ್ಳದಿರಿ

ತ್ವಚೆಯ ಮೇಲೆ ಈಗಾಗಲೇ ಎದುರಾಗಿರುವ ಗುಳ್ಳೆ, ಮೊಡವೆ, ಗಾಯ ಮೊದಲಾದವುಗಳ ಮೇಲೆ ರೇಜರ್ ಓಡಿಸದಿರಿ. ಏಕೆಂದರೆ ಈ ಭಾಗಗಳು ಚರ್ಮದಿಂದ ಕೊಂಚ ಮೇಲೆದ್ದಿರುತ್ತವೆ ಹಾಗೂ ರೇಜರ್ ಬ್ಲೇಡ್ ಈ ಭಾಗಗಳನ್ನು ಬುಡದಿಂದ ಕತ್ತರಿಸಿಬಿಡುತ್ತದೆ. ಹಾಗಾಗಿ ಗುಣವಾಗಿ ಗಾಯದ ಪಕಳೆ ಉದುರುವವರೆಗೂ ಆ ಭಾಗದ ಮೇಲೆ ರೇಜರ್ ಓಡಿಸದಿರಿ. ಅಲ್ಲದೇ ರೇಜರ್ ತಾಕಿದಲ್ಲಿ ಬ್ಯಾಕ್ಟೀರಿಯಾದ ಸೋಂಕು ಹರಡಲೂ ಕಾರಣವಾಗಬಹುದು ಹಾಗೂ ಈಗಾಗಲೇ ಇರುವ ಸೋಂಕು ಇನ್ನಷ್ಟು ಉಲ್ಭಣಗೊಳ್ಳಬಹುದು. ಹಾಗಾಗಿ ಈ ಭಾಗಗಳ ಮೇಲಿನ ಕೂದಲುಗಳನ್ನು ಜಾಗ್ರತೆಯಿಂದ ಚಿಕ್ಕ ಕತ್ತರಿಯ ಮೂಲಕ ಕತ್ತರಿಸಿಕೊಳ್ಳಿ.

ಕೂದಲ ಬೆಳೆಯುವ ದಿಕ್ಕಿನತ್ತಲೇ ಶೇವಿಂಗ್ ಮಾಡಿಕೊಳ್ಳಿ

ಶೇವಿಂಗ್ ಗೂ ಮುನ್ನ ನಿಮ್ಮ ಕೂದಲುಗಳು ಯಾವ ದಿಕ್ಕಿನತ್ತ ವಾಲಿ ನಿಂತಿವೆ ಎಂದು ಗಮನಿಸಿ. ನಿಮ್ಮ ರೇಜರ್ ಅನ್ನು ಈ ದಿಕ್ಕಿನತ್ತಲೇ ಸಾಗುವಂತೆ ಚಲಿಸಿ. ಈ ಮೂಲಕ ಕತ್ತರಿಸಲ್ಪಟ್ಟ ಕೂದಲು ಹೆಚ್ಚೂ ಕಡಿಮೆ ಚರ್ಮಕ್ಕೆ ಸಮಾನಾಂತರವಾಗಿ ಕತ್ತರಿಸಲ್ಪಡುತ್ತದೆ. ಅಲ್ಲದೇ ಈ ಮೂಲಕ ಹೊರಚರ್ಮದ ಮೇಲೆ ಯಾವುದೇ ಒತ್ತಡ ಉಂಟಾಗದೇ ಚರ್ಮದ ಜೀವಕೋಶಗಳು ನಿವಾರಿಸುವ ಸಾಧ್ಯತೆ ಅತಿ ಕಡಿಮೆಯಾಗುತ್ತದೆ. ಒಂದು ವೇಳೆ ಇದು ವಿರುದ್ದ ದಿಕ್ಕಿನಲ್ಲಿದ್ದರೆ ಕೂದಲು ಅತಿಯಾಗಿ ಹಿಸಿಯಲ್ಪಟ್ಟು ಚರ್ಮದ ಹೊರಪದರದ ಭಾಗವೂ ಕೂದಲಿನೊಂದಿಗೆ ಕತ್ತರಿಸಲ್ಪಡುವ ಮೂಲಕ ಅತೀವ ಉರಿ ಎದುರಾಗುತ್ತದೆ.

5. ಆಗಾಗ ರೇಜರ್ ಹೊಸತಕ್ಕೆ ಬದಲಾಯಿಸಿಕೊಳ್ಳಿ

5. ಆಗಾಗ ರೇಜರ್ ಹೊಸತಕ್ಕೆ ಬದಲಾಯಿಸಿಕೊಳ್ಳಿ

ಎಷ್ಟು ಶೇವಿಂಗ್ ಬಳಿಕ ಹೊಸ ರೇಜರ್ ಗೆ ಬದಲಿಸಿಕೊಳ್ಳಬೇಕು ಎಂಬುದು ನೀವು ಈ ಉಪಕರಣಗಳನ್ನು ಹೇಗೆ ಬಳಸುತ್ತೀರಿ ಮತ್ತು ಇದರ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಗಡ್ಡದ ಗಡಸುತನವೂ ರೇಜರ್ ಬ್ಲೇಡ್ ಶೀಘ್ರವೇ ಮೊಂಡಾಗಲು ಕಾರಣವಾಗುತ್ತದೆ. ಆದರೆ ಯಾವುದೇ ಕಾರಣದಿಂದ ಬ್ಲೇಡ್ ನಲ್ಲಿ ಕೊಂಚವೂ ತುಕ್ಕು ಕಂಡು ಬಂದರೆ ತಕ್ಷಣವೇ ಇದನ್ನು ಬದಲಿಸಬೇಕು.

ಬಳಸಿ ಎಸೆಯುವ ರೇಜರ್ ಅನ್ನು ಸುಮಾರು ಐದರಿಂದ ಹತ್ತು ಬಾರಿ ಮಾತ್ರ ಬಳಸಬಹುದು. ಸುರಕ್ಷಾ ರೇಜರ್ ಅನ್ನು ಒಂದು ವಾರಕ್ಕಿಂತ ಹೆಚ್ಚು ಬಾರಿ ಬಳಸಬಾರದು.

ಮುಖದ ಶೇವಿಂಗ್ ಮಾಡಿಕೊಳ್ಳುವುದು ಹೇಗೆ?

ಗಡ್ಡದ ಶೇವಿಂಗ್ ಗೂ ಮುನ್ನ ಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆದುಕೊಂಡ ಬಳಿಕ ಶೇವಿಂಗ್ ಜೆಲ್ ಅಥವಾ ಕ್ರೀಂ ಹಚ್ಚಿ ಒಂದೆರಡು ನಿಮಿಷಗಳಾದರೂ ಹಾಗೇ ಬಿಡಬೇಕು. ಬಳಿಕವೇ ಕೂದಲ ಬೆಳವಣಿಗೆ ದಿಕ್ಕಿನತ್ತಲೇ ರೇಜರ್ ನಡೆಸಬೇಕು. ವಿಶೇಷವಾಗಿ ಕೆಳದವಡೆಯ ಅಂಚುಗಳು ಮತ್ತು ಕುತ್ತಿಗೆಯ ಭಾಗದಲ್ಲಿ ಹೆಚ್ಚಿನ ಒತ್ತಡ ಹಾಕದೇ ಚಲಿಸಬೇಕು. ಏಕೆಂದರೆ ಈ ಭಾಗಗಳೇ ಗಾಯಗಳಾಗುವ ಸಾಧ್ಯತೆಯನ್ನು ಹೆಚ್ಚಾಗಿ ಹೊಂದಿರುತ್ತವೆ.

ಕಾಲುಗಳನ್ನು ಶೇವಿಂಗ್ ಮಾಡಿಕೊಳ್ಳುವ ಕ್ರಮ:

ಶೇವಿಂಗ್ ಗೂ ಮೊದಲು ಉತ್ತಮ ಪ್ರಸಾದನ ಬಳಸಿ ಸತ್ತ ಜೀವಕೋಶಗಳನ್ನು ನಿವಾರಿಸಿ. ಇದಕ್ಕಾಗಿ ಸ್ವಚ್ಛ, ದಪ್ಪನೆಯ ಟವೆಲ್ ಅಥವಾ ಲೂಫಾ ಬಳಸಿ. ಬಳಿಕ ಕಾಲುಗಳ ಭಾಗಕ್ಕೆ ಶೇವಿಂಗ್ ಕ್ರೀಮ್ ಅಥವಾ ಜೆಲ್ ಹಚ್ಚಿ ಚೆನ್ನಾಗಿ ನೊರೆ ಬರಿಸಿ. ಇಲ್ಲಿಯೂ ಕೂದಲುಗಳು ಬೆಳೆಯುವ ದಿಕ್ಕಿನತ್ತಲೇ ರೇಜರ್ ಚಲಿಸಿ. ಒಂದು ಬಾರಿ ಮೇಲಿನಿಂದ ಕೆಳಕ್ಕೆ ಬಂದ ಬಳಿಕ ಬ್ಲೇಡಿನಿಂದ ಅಷ್ಟೂ ಕೂದಲುಗಳನ್ನು ನಿವಾರಿಸಿ ಸ್ವಚ್ಛಗೊಳಿಸಿಯೇ ಎರಡನೆಯ ಬಾರಿ ಮುಂದುವರೆಯಿರಿ.

ಹೀಗೇ ಎರಡೂ ಕಾಲುಗಳ ಭಾಗ ಸ್ವಚ್ಛಗೊಳಿಸಿದ ಬಳಿಕ ಚರ್ಮದ ಮೇಲೆ ಉಳಿದಿದ್ದ ಶೇವಿಂಗ್ ಕ್ರೀಂ ಅನ್ನು ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಕಾಲುಗಳನ್ನು ಒತ್ತಿ ಒಣಗಿಸಿ. ಎಂದಿಗೂ ಒತ್ತಿ ಒರೆಸದಿರಿ. ಬಳಿಕ ನಿಮ್ಮ ಆಯ್ಕೆಯ ತೇವಕಾರಕ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ. ಒಂದು ವೇಳೆ ಶೇವಿಂಗ್ ಬಳಿಕ ಉರಿ ಕಾಣಿಸಿಕೊಂಡರೆ ಆಲೋವೆರಾ ಅಥವಾ ವಿಜ್ ಹೇಜೆಲ್ ಉತ್ತಮ ಆಯ್ಕೆಗಳಾಗಿವೆ. ಈ ಕಾರ್ಯಕ್ಕೆ ಪ್ರತಿ ಬಾರಿಯೂ ಒಂದು ರೇಜರ್ ಬಳಸಿ ಬಳಿಕ ವಿಸರ್ಜಿಸಿ.

 6. ಜನನಾಂಗದ ಭಾಗದ ರೋಮಗಳನ್ನು ನಿವಾರಿಸುವ ಕ್ರಮ:

6. ಜನನಾಂಗದ ಭಾಗದ ರೋಮಗಳನ್ನು ನಿವಾರಿಸುವ ಕ್ರಮ:

ಈ ಭಾಗದ ಚರ್ಮ ಅತ್ಯಂತ ಸೂಕ್ಷ್ಮ ಸಂವೇದಿಯಾಗಿರುವ ಕಾರಣ ಶೇವಿಂಗ್ ಕಾರ್ಯವೂ ಅತಿ ನಾಜೂಕಿನಿಂದ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಈ ಭಾಗವನ್ನು ಶೇವ್ ಮಾಡಿಕೊಳ್ಳುವ 80% ಕ್ಕೂ ಹೆಚ್ಚಿನ ವ್ಯಕ್ತಿಗಳಿಗೆ ಶೇವಿಂಗ್ ಬಳಿಕ ತುರಿಕೆಯ ಅನುಭವ ಆಗುತ್ತದೆ. ಒಂದು ಅಧ್ಯಯನದ ಪ್ರಕಾರ ಇದೊಂದು ಶೇವಿಂಗ್ ನ ಅಡ್ಡ ಪರಿಣಾಮವಾಗಿದೆ.

ಶೇವ್ ಮಾಡಿಕೊಳ್ಳುವ ಮುನ್ನ ಐದರಿಂದ ಹತ್ತು ನಿಮಿಷವಾದರೂ ಬೆಚ್ಚಗಿನ ನೀರಿನ ಸಿಂಚನದ ಅಡಿಯಲ್ಲಿ ದೇಹವನ್ನು ತೋಯ್ದುಕೊಳ್ಳಿ. ಇದರಿಂದ ಕೂದಲುಗಳು ಆದಷ್ಟೂ ಮೃದುವಾಗುತ್ತವೆ ಹಾಗೂ ಶೇವ್ ಮಾಡಿಕೊಳ್ಳುವುದು ಸುಲಭವಾಗುತ್ತದೆ. ನಿಮ್ಮ ಆಯ್ಕೆಯ ಶೇವಿಂಗ್ ಜೆಲ್ ಅಥವಾ ಕ್ರೀಂ ಬಳಸಿ ಒಂದೆರಡು ನಿಮಿಷಗಳಾದರೂ ಕೂದಲುಗಳು ಮೃದುವಾಗುವಂತೆ ಮಾಡಿ. ಇತರ ಭಾಗದಂತೆಯೇ ಇಲ್ಲೂ ಕೂದಲ ಬೆಳವಣಿಗೆಯ ದಿಕ್ಕಿನತ್ತಲೇ ರೇಜರ್ ಚಲಿಸಬೇಕು, ಆದರೆ ಇದಕ್ಕೂ ಮುನ್ನ ಎದುರು ಭಾಗದ ಚರ್ಮವನ್ನು ಕೊಂಚವೇ ಎಳೆದು ಆದಷ್ಟೂ ಚರ್ಮದ ಬಿಗಿತ ಹೆಚ್ಚಿಸಿ ಶೇವ್ ಮಾಡಿಕೊಳ್ಳಬೇಕು. ಹೆಚ್ಚಿನ ಒತ್ತಡವಿಲ್ಲದೇ ನಿಧಾನವಾಗಿ ಕೊಂಚ ಕೊಂಚವಾಗಿಯೇ ಮುಂದುವರೆಯಬೇಕೇ ವಿನಃ ದೀರ್ಘವಾಗಿ ಎಳೆಯದಿರಿ. ಎಲ್ಲಾ ಭಾಗಗಳ ಶೇವ್ ಆದ ಬಳಿಕ ಉಳಿದ ಶೇವಿಂಗ್ ಕ್ರೀಂ ನೊರೆಯನ್ನು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿ. ಸರ್ವಥಾ ಒರೆಸದಿರಿ. ಬಳಿಕ ಅತ್ಯಂತ ಸೌಮ್ಯವಾದ ಆಫ್ಟರ್ ಶೇವ್ ಪ್ರಸಾದನವನ್ನು ಹಚ್ಚಿಕೊಂಡು ಒಣಗಿಸಿ.

ಕಂಕುಳ ಭಾಗದ ರೋಮ ನಿವಾರಣೆ

ಕಂಕುಳ ಭಾಗವೂ ಇನ್ನೊಂದು ಸೂಕ್ಷ್ಮ ಸಂವೇದಿಯಾದ ತ್ವಚೆಯಾಗಿದ್ದು ಹೆಚ್ಚಿನ ಸ್ವೇದ ಗ್ರಂಥಿಗಳಿರುವ ಕಾರಣ ಇಲ್ಲಿ ಬೆವರುವಿಕೆಯೂ ಹೆಚ್ಚೇ ಇರುತ್ತದೆ. ಹಾಗಾಗಿ ಮೊದಲಾಗಿ ಸಾಕಷ್ಟು ಹೊತ್ತು ಈ ಭಾಗದ ಮೇಲೆ ಬೆಚ್ಚನೆಯ ನೀರು ಬೀಳುವಂತೆ ಮಾಡಿ. ಈ ಮೂಲಕ ಸೂಕ್ಷ್ಮರಂಧ್ರಗಳು ಸ್ವಚ್ಛಗೊಳ್ಳುತ್ತವೆ. ಬಳಿಕ ಶೇವಿಂಗ್ ಕ್ರೀಮ್ ಅಥವಾ ಫೋಮ್ ಹಚ್ಚಿ ಚರ್ಮವನ್ನು ಎಳೆದು ಸೆಳೆತ ಹೆಚ್ಚಿಸಿ ಕೂದಲು ಬೆಳೆಯುವ ದಿಕ್ಕಿನತ್ತಲೇ ರೇಜರ್ ಚಲಿಸಿ ಶೇವ್ ಮಾಡಿಕೊಳ್ಳಿ. ಈ ಭಾಗದಲ್ಲಿ ಒಮ್ಮೆ ಮಾತ್ರ ಶೇವಿ ಮಾಡಿದರೆ ಸಾಕು.

7. ರೇಜರ್ ನಿಂದ ಎದುರಾದ ಉರಿಯನ್ನು ಶಮನಗೊಳಿಸುವುದು ಹೇಗೆ?

7. ರೇಜರ್ ನಿಂದ ಎದುರಾದ ಉರಿಯನ್ನು ಶಮನಗೊಳಿಸುವುದು ಹೇಗೆ?

ಶೇವಿಂಗ್ ಬಳಿಕ ಆ ಭಾಗದಲ್ಲಿ ಉರಿ ಕಾಣಿಸಿಕೊಂಡರೆ ಕೆಲವು ಸರಳ ಚಿಕಿತ್ಸೆಗಳಿವೆ. ಮೊದಲಾಗಿ ಈ ಭಾಗವನ್ನು ಗಾಳಿಗೆ ಒಡ್ಡಿಕೊಳ್ಳುವಂತಹ ಸಡಿಲವಾದ ಉಡುಪುಗಳನ್ನು ಧರಿಸಿ ಆದಷ್ಟೂ ಈ ಭಾಗ ತೆರೆದಿರುವಂತೆ ಇಟ್ಟರೆ ಉರಿ ಶೀಘ್ರ ಕಡಿಮೆಯಾಗುತ್ತದೆ.

ಇಲ್ಲಿ ನೈಸರ್ಗಿಕ, ಸುಗಂಧರಹಿತ ಮತ್ತು ಕೃತಕ ಬಣ್ಣಗಳಿಲ್ಲದ ತೇವಕಾರಕ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಆಲೋವೆರಾ ತಿರುಳು ಅಥವಾ ಕೊಬ್ಬರಿ ಎಣ್ಣೆಯೂ ಆಗಬಹುದು. ಈ ಕ್ರಮದಿಂದ ಶೀಘ್ರವೇ ಈ ಉರಿ ಕಡಿಮೆಯಾಗುತ್ತದೆ. ಲಭ್ಯವಿದ್ದರೆ hydrocortisone ಕ್ರೀಂ ಸಹಾ ಹಚ್ಚಿಕೊಳ್ಳಬಹುದು. ಇದರಿಂದ ಉರಿ ತಕ್ಷಣ ಕಡಿಮೆಯಾಗುತ್ತದೆ.

ಕೊನೆಯ ಮಾತು:

ಶೇವಿಂಗ್ ನ ಕ್ಲಿಷ್ಟತೆಗಳಿಗೆ ಒಳಗಾಗದೇ ಇರಲು ಶೇವಿಂಗ್ ಕ್ರಿಯೆಯನ್ನು ಸರಿಯಾದ ಕ್ರಮದಲ್ಲಿ ನಡೆಸುವುದು ಅಗತ್ಯವಾಗಿದೆ. ಅಲ್ಲದೇ ದೈಹಿಕ ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಸಹಾ ಮುಖ್ಯವಾಗಿದೆ. ಈ ಮೂಲಕ ಕೂದಲ ಬುಡಗಳ ಸೋಂಕು ಅಥವಾ folliculitis, ರೇಜರ್ ನಿಂದ ಎದುರಾಗಿರುವ ಗಾಯಗಳು ಅಥವಾ ಉರಿ ಎದುರಾಗುವುದನ್ನು ತಪ್ಪಿಸಿಕೊಳ್ಳಬಹುದು.

English summary

Shaving Correctly to Avoid Burns or Rashes

Here are tips for shaving correctly to avoid burns or rashes, read on,
X