For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಬೆವರುಸಾಲೆಯ ಪರಿಹಾರಕ್ಕಾಗಿ ಪರಿಣಾಮಕಾರಿಯಾದ ಸರಳ ಮನೆಮದ್ದುಗಳು

|

ಬೇಸಿಗೆಯ ದಿನಗಳಲ್ಲಿ ಬಿಸಿಲ ಧಗೆ, ಗಾಳಿಯಲ್ಲಿ ತೇಲಾಡುವ ಕಣಗಳು, ಧೂಳು, ಪ್ರದೂಷಣೆ ಮೊದಲಾದ ವುಗಳಿಂದ ಬೆವರಿದೆಡೆಯೆಲ್ಲಾ ಚಿಕ್ಕ ಚಿಕ್ಕ ನೀರುಭರಿತ ಗುಳ್ಳೆಗಳೇಳುತ್ತವೆ. ಅಪಾರ ತುರಿಕೆ ಇರುವ ಈ ಗುಳ್ಳೆಗಳನ್ನೇನಾದರೂ ಒಡೆದಿರೋ, ಈ ತುರಿಕೆ ಪರಾಕಾಷ್ಠೆಗೇರುತ್ತದೆ. ಇದೇ ಬೆವರುಸಾಲೆ (prickly heat).ತುರಿಸಿದ ಭಾಗವಷ್ಟೂ ಕೆಂಪಗಾಗಿ ಮುಟ್ಟಲಾಗದಂತೆ ಉರಿಯತೊಡಗುತ್ತದೆ. ಚಿಕ್ಕದಾಗಿ ಚುಚ್ಚಿದಂತಹ ಅನುಭವವೂ ಎದುರಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಬೆವರುಸಾಲೆ ಕಾಣಿಸಿಕೊಳ್ಳಬಹುದಾದರೂ ಸಾಮಾನ್ಯವಾಗಿ ಬೆವರು ಹೆಚ್ಚು ಸಂಗ್ರಹವಾಗುವ ಎದೆ, ಕೈಗಳು, ತೊಡೆಗಳ ಒಳಭಾಗ, ಮುಖ, ಕುತ್ತಿಗೆ ಮತ್ತು ಬೆನ್ನಿನ ಭಾಗಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ತೊಂದರೆಯನ್ನು ಸುಲಭವಾಗಿ ನಿವಾರಿಸಲು ಲಭ್ಯವಿರುವ ಕೆಲವು ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ಸಂಗ್ರಹಿಸಲಾಗಿದೆ. Prickly heat ಅಥವಾ miliaria ಎಂದೂ ಕರೆಯಲ್ಪಡುವ ಬೆವರುಸಾಲೆ ಬೇಸಿಗೆಯ ಮತ್ತು ತೇವಭರಿತ ದಿನಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ.

ಈ ಸಮಯದಲ್ಲಿ ಹೆಚ್ಚು ಬೆವರುತ್ತೇವೆ ಹಾಗೂ ಗಾಳಿಯಲ್ಲಿನ ಧೂಳಿನ ಸೂಕ್ಷ್ಮ ಕಣಗಳು ಈ ಬೆವರಿನಲ್ಲಿ ಬೆರೆತು ಚರ್ಮದ ಸೂಕ್ಷ್ಮರಂಧ್ರಗಳನ್ನು ಮುಚ್ಚಿಬಿಡುತ್ತದೆ. ಈಗ ಚರ್ಮದಾಳದಲ್ಲಿರುವ ಬೆವರ ಗ್ರಂಥಿಗಳು ಮತ್ತು ತೈಲಗ್ರಂಥಿಗಳು ಇನ್ನಷ್ಟು ಬೆವರು ಸುರಿಸಲು ಹೆಚ್ಚಿನ ಒತ್ತಡ ಹೇರಬೇಕಾಗುತ್ತದೆ. ಈ ಒತ್ತಡವೇ ಚರ್ಮದ ಒಳಭಾಗದಲ್ಲಿ ನೀರು ಚಿಕ್ಕದಾಗಿ ಗುಳ್ಳೆಯ ರೂಪದಲ್ಲಿ ತುಂಬಿಕೊಳ್ಳಲು ಕಾರಣವಾಗುತ್ತದೆ. ಒತ್ತಡದ ಕಾರಣ ಹೊರಚರ್ಮ ಉಬ್ಬಿ ತೆಳ್ಳಗಾಗಿ ಹಾಗೂ ಒಣದಾಗಿ ತುರಿಕೆಗೆ ಪ್ರಚೋದನೆ ನೀಡುತ್ತದೆ. ತುರಿಸಿದ ತಕ್ಷಣವೇ ಈಗಾಗಲೇ ಒತ್ತಡದಲ್ಲಿದ್ದ ಹೊರಚರ್ಮ ಬಿರಿದು ಒಳಗಿನ ನೀರು ಹೊರಬರುತ್ತದೆ. ಬಿರಿದ ಚರ್ಮ ಉರಿಯತೊಡಗಿ ಚರ್ಮ ಕೆಂಪಗಾಗುತ್ತದೆ. ಎಷ್ಟು ಹೆಚ್ಚು ನೀರು ತುಂಬಿಕೊಳ್ಳುತ್ತದೆಯೋ ಆ ಪ್ರಕಾರ ಚರ್ಮ ಕೆಂಪಗಾಗುವುದು, ಊದಿಕೊಳ್ಳುವುದು, ಚಿಕ್ಕ ಚಿಕ್ಕ ವೃತ್ತಾಕಾರದ ಕೆಂಪು ಆಕಾರಗಳು ಮೂಡುವುದು ಮೊದಲಾದವು ಪ್ರಾರಂಭವಾಗುತ್ತವೆ.

ಅಷ್ಟೇ ಅಲ್ಲ, ಯಾವಾಗ ಈ ಸೋಂಕುಭರಿತ ನೀರು ಚರ್ಮದ ಇತರ ಕಡೆಗಳಿಗೆ ಹರಡಿತೋ, ಅಲ್ಲೆಲ್ಲಾ ಬೆವರುಸಾಲೆಯೂ ಹರಡುತ್ತಾ ಸಾಗುತ್ತದೆ ಚರ್ಮ ತೆಳುವಾಗಿರುವ ಹಾಗೂ ಸೂಕ್ಷ್ಮವಾಗಿರುವ ಚಿಕ್ಕ ಮಕ್ಕಳಲ್ಲಿ ಮತ್ತು ವಿಶೇಷವಾಗಿ ತೊಟ್ಟಿಲಲ್ಲಿರುವ ಕಂದಮ್ಮಗಳಿಗೆ ಬೆವರುಸಾಲೆ ಅತಿಯಾಗಿ ಬಾಧಿಸುತ್ತದೆ. ಏಕೆಂದರೆ ಮಕ್ಕಳ ಚರ್ಮದಲ್ಲಿ ಇನ್ನೂ ಬೆವರಗ್ರಂಥಿಗಳು ಪೂರ್ಣವಾಗಿ ಬೆಳೆದಿರುವುದಿಲ್ಲ ಹಾಗೂ ಸೂಕ್ಷ್ಮರಂಧ್ರಗಳು ಮುಚ್ಚುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಬೇಸಿಗೆಯ ದಿನಗಳು ಮುಗಿಯುತ್ತಿದ್ದಂತೆಯೇ ಬೆವರುಸಾಲೆಯೂ ತನ್ನಿಂತಾನೇ ವಾಸಿಯಾಗುತ್ತದೆ. ಆದರೆ ಅಲ್ಲಿಯವರೆಗೆ ಮೈ ತುರಿಸಿಕೊಳ್ಳುತ್ತಾ ಕಾಯುವ ಬದಲು ಸುಲಭ ಮನೆಮದ್ದುಗಳನ್ನು ಉಪಯೋಗಿಸಿ ಈ ತೊಂದರೆಯಿಂದ ಪರಿಹಾರ ಪಡೆಯಬಹುದು. ಬನ್ನಿ, ಈ ಮನೆಮದ್ದುಗಳು ಯಾವುವು ಎಂದು ನೋಡೋಣ....

ಲೋಳೆಸರ (Aloe vera)

ಲೋಳೆಸರ (Aloe vera)

ಲೋಳೆಸರ ತ್ವಚೆಗೆ ತಂಪು ನೀಡುವ ಅತ್ಯುತ್ತಮ ಔಷಧಿಯಾಗಿದ್ದು ಬೆವರುಸಾಲೆಗೂ ಅತ್ಯುತ್ತಮವಾಗಿದೆ. ಇದರ ಉರಿಯೂತ ನಿವಾರಕ ಮತ್ತು ಗಾಯಗಳನ್ನು ಗುಣಪಡಿಸುವ ಗುಣಗಳು ಚರ್ಮದ ತುರಿಕೆ, ಉರಿ ಹಾಗೂ ಕೆಂಪಗಾಗಿರುವ ಚರ್ಮವನ್ನು ಆದಷ್ಟೂ ಶೀಘ್ರ ಸಾಮಾನ್ಯವಾಗಿಸುತ್ತದೆ.

ವಿಧಾನ: ಒಂದು ತಾಜಾ ಲೋಳೆಸರದ ಕೋಡನ್ನು ತೆರೆದು ಒಳಗಿನ ತಿರುಳನ್ನು ಸಂಗ್ರಹಿಸಿ ಈ ತಿರುಳನ್ನು ನೇರವಾಗಿ ಬೆವರುಸಾಲೆ ಕಂಡುಬಂದ ಭಾಗಕ್ಕೆ ತೆಳುವಾಗಿ ಸವರಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಒದ್ದೆಬಟ್ಟೆಯಿಂದ ಒರೆಸಿಕೊಳ್ಳಿ. ಉತ್ತಮ ಪರಿಣಾಮ ಪಡೆಯಲು ದಿನಕ್ಕೆರಡು ಬಾರಿ, ಒಂದು ವಾರದವರೆಗೆ ಮುಂದುವರೆಸಿ.

ಓಟ್ಸ್ ರವೆ (Oatmeal)

ಓಟ್ಸ್ ರವೆ (Oatmeal)

ಓಟ್ಸ ರವೆ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ಇದರ ಉರಿಯೂತ ನಿವಾರಕ ಗುಣ ಉರಿ ಮತ್ತು ತುರಿಕೆಯನ್ನು ಇಲ್ಲವಾಗಿಸುತ್ತದೆ. ಬೆವರುಸಾಲೆಗೆ ಒಳಗಾದ ಭಾಗದ ಚರ್ಮದ ಮೇಲೆ ಓಟ್ಸ್ ರವೆಯನ್ನು ಅರೆದು ಲೇಪಿಸುವ ಮೂಲಕ ತಕ್ಷಣವೇ ಉರಿ ಮತ್ತು ತುರಿಕೆ ಇಲ್ಲವಾಗುತ್ತದೆ.

ವಿಧಾನ: ಕೊಂಚ ಓಟ್ಸ್ ರವೆಯನ್ನು ನುಣ್ಣಗೆ ಪುಡಿಮಾಡಿ ಸ್ನಾನದ ತೊಟ್ಟಿಯ ನೀರಿಗೆ ಬೆರೆಸಿ ಈ ನೀರಿನಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಇಡಿಯ ದೇಹವನ್ನು ಮುಳುಗಿಸಿಡಿ ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿ.

ಸೌತೆಕಾಯಿ

ಸೌತೆಕಾಯಿ

ಸೌತೆಯಲ್ಲಿರುವ ನೀರಿನಂಶಕ್ಕೆ ಚರ್ಮವನ್ನು ತಂಪುಗೊಳಿಸುವ ಗುಣವಿದ್ದು ಬೆವರುಸಾಲೆಯ ತುರಿಕೆ ಮತ್ತು ಉರಿಯನ್ನೂ ಶಮನಗೊಳಿಸುತ್ತದೆ. ಅಲ್ಲದೇ ಉರಿ ತೀವ್ರವಾಗಿ ಕೆಂಪಗಾಗಿದ್ದ ತ್ವಚೆಗೆ ಸೌತೆಕಾಯಿ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.

ವಿಧಾನ:

ಇದಕ್ಕಾಗಿ ಎಳೆ ಸೌತೆಕಾಯಿಯನ್ನು ಸೇವಿಸಬಹುದು ಅಥವಾ ಜ್ಯೂಸ್ ಮಾಡಿಕೊಂಡೂ ಕುಡಿಯಬಹುದು. ಉರಿಯುತ್ತಿರುವ ಭಾಗದ ಮೇಲೆ ಸೌತೆಕಾಯಿಯನ್ನು ಅಡ್ಡಲಾಗಿ ಕತ್ತರಿಸಿ ತೆಳುವಾದ ಬಿಲ್ಲೆಗಳನ್ನಾಗಿಸಿ ಈ ಬಿಲ್ಲೆಗಳನ್ನು ಇರಿಸಿ. ಸುಮಾರು ಅರ್ಧಘಂಟೆಯವರೆಗೆ ಈ ಬಿಲ್ಲೆಗಳು ಹಾಗೇ ಇರಲಿ, ಬಳಿಕ ನಿವಾರಿಸಿ.

ಶ್ರೀಗಂಧದ ಪುಡಿ

ಶ್ರೀಗಂಧದ ಪುಡಿ

ಗಂಧದ ಪುಡಿ (ಗಂಧದ ಕೊರಡನ್ನು ತೇದಿದ ಲೇಪ ಇನ್ನೂ ಒಳ್ಳೆಯದು) ಉತ್ತಮ ತೇವಕಾರಕ ಹಾಗೂ ತಂಪುಗೊಳಿಸುವ ಗುಣವನ್ನು ಹೊಂದಿದ್ದು ತ್ವಚೆಗೆ ಕಾಂತಿ ಮತ್ತು ಆರೈಕೆಯನ್ನು ನೀಡುವ ಜೊತೆಗೇ ಉರಿಯನ್ನೂ ಇಲ್ಲವಾಗಿಸುತ್ತದೆ.

ವಿಧಾನ: ಎರಡು ದೊಡ್ಡ ಚಮಚ ಗಂಧದ ಪುಡಿ ಅಥವಾ ಕೊರಡನ್ನು ತೇದಿದ ಲೇಪ ಹಾಗೂ ಒಂದು ಚಿಕ್ಕ ಚಮಚ ಕೆನೆಭರಿತ ತಣ್ಣನೆಯ ಹಾಲು ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ತೆಳುವಾಗಿ ಬೆವರುಸಾಲೆ ಎದುರಾದ ಭಾಗದ ಮೇಲೆ ಲೇಪಿಸಿ. ಈ ಲೇಪ ಪೂರ್ಣವಾಗಿ ಒಣಗುವವರೆಗೂ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮಂಜುಗಡ್ಡೆಯ ಒತ್ತಡ (Cold compress)

ಮಂಜುಗಡ್ಡೆಯ ಒತ್ತಡ (Cold compress)

ಒಂದು ವೇಳೆ ತುರಿಕೆ ಅತಿಯಾಗಿದ್ದರೆ ತುರಿಸಿಕೊಳ್ಳುವ ಬದಲು ತಕ್ಷಣವೇ ಮಂಜುಗಡ್ಡೆಯ ತುಂಡೊಂದನ್ನು ಈ ಭಾಗದ ಮೇಲೆ ಒತ್ತಿ ಇರಿಸಿಕೊಂಡರೆ ಇದರಿಂದ ತ್ವಚೆಗೆ ತಕ್ಷಣವೇ ತಂಪು ದೊರಕುತ್ತದೆ ಹಾಗೂ ಊತ ಮತ್ತು ಉರಿ ತಕ್ಷಣವೇ ಕಡಿಮೆಯಾಗುತ್ತದೆ.

ವಿಧಾನ: ಒಂದು ಸ್ವಚ್ಛಬಟ್ಟೆಯಲ್ಲಿ ಮಂಜುಗಡ್ಡೆಯೊಂದನ್ನು ಸುತ್ತಿ ಬೆವರುಸಾಲೆ ಎದುರಾದ ಭಾಗದ ಮೇಲೆ ಹತ್ತು ನಿಮಿಷ ಇರಿಸಿ. ಬೆವರುಸಾಲೆಯ ತೀವ್ರತೆಯನ್ನು ಅನುಸರಿಸಿ ದಿನಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

Most Read: ಮುಖದ ಹಾಗೂ ಚರ್ಮದ ಮೇಲೆ ಬೀಳುವ ದದ್ದುಗಳಿಗೆ ಮನೆಮದ್ದುಗಳು

ಜೇನು

ಜೇನು

ಜೇನಿನಲ್ಲಿ ಬ್ಯಾಕ್ಟೀರಿಯಾನಿವಾರಕ, ಉರಿಯೂತ ನಿವಾರಕ ಹಾಗೂ ಗುಣಪಡಿಸುವ ಗುಣಗಳಿವೆ. ಬೆವರುಸಾಲೆ ಎದುರಾದ ಭಾಗದ ಮೇಲೆ ಜೇನನ್ನು ಸವರಿಕೊಂಡ ತಕ್ಷಣ ಉರಿ ಮತ್ತು ತುರಿಕೆ ಇಲ್ಲವಾಗುತ್ತದೆ ಹಾಗೂ ಚರ್ಮಕ್ಕೆ ಹೆಚ್ಚಿನ ಆರೈಕೆ ದೊರಕುತ್ತದೆ. ವಿಧಾನ: ಅಪ್ಪಟ ಜೇನನ್ನು ಬೆವರುಸಾಲೆಗೆ ಒಳಗಾಗಿದ್ದ ಭಾಗದ ಮೇಲೆ ನೇರವಾಗಿ, ತೆಳುವಾಗಿ ಸವರಿ. ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಅಡುಗೆ ಸೋಡಾ

ಅಡುಗೆ ಸೋಡಾ

ಬೆವರುಸಾಲೆಯ ಉರಿ ಮತ್ತು ತುರಿಕೆಯ ಶಮನಕ್ಕೆ ಅಡುಗೆ ಸೋಡಾ ಇನ್ನೊಂದು ಸುಲಭ ಪರಿಹಾರವಾಗಿದೆ. ಚರ್ಮದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸುವ ಮೂಲಕ ಕಟ್ಟಿಕೊಂಡಿದ್ದ ಸೂಕ್ಷ್ಮರಂಧ್ರಗಳನ್ನು ತೆರೆದು ತ್ವಚೆಯ ಒಳಗಿದ್ದ ಕಲ್ಮಶ ಹೊರಬರಲು ನೆರವಾಗುತ್ತದೆ. ಅಲದೇ ಇದರ ಉರಿಯೂತ ನಿವಾರಕ ಗುಣ ತುರಿಕೆಯನ್ನು ತಕ್ಷಣವೇ ಇಲ್ಲವಾಗಿಸುತ್ತದೆ.

ವಿಧಾನ: ಒಂದು ಚಿಕ್ಕ ಚಮಚ ಅಡುಗೆ ಸೋಡಾವನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಒಂದು ಸ್ವಚ್ಛ ಹತ್ತಿಯ ಬಟ್ಟೆಯನ್ನು ಈ ನೀರಿನಲ್ಲಿ ಮುಳುಗಿಸಿ ಹಿಂಡಿ ಒದ್ದೆಯಾಗಿಸಿ. ಈ ಬಟ್ಟೆಯನ್ನು ಬೆವರುಸಾಲೆಗೆ ಒಳಗಾಗಿದ್ದ ಭಾಗದ ಮೇಲೆ ಹರಡಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ದಿನಕ್ಕೆರಡು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ಲ್ಯಾವೆಂಡರ್ ಅವಶ್ಯಕ ತೈಲ (Lavender essential oil)

ಲ್ಯಾವೆಂಡರ್ ಅವಶ್ಯಕ ತೈಲ (Lavender essential oil)

ಈ ಅವಶ್ಯಕ ತೈಲದಲ್ಲಿ ಗುಣಪಡಿಸುವ ಹಾಗೂ ತಂಪುಕಾರಕ ಗುಣಗಳಿವೆ. ಬೆವರುಸಾಲೆಯ ತುರಿಕೆ ಮತ್ತು ಉರಿಯನ್ನು ಶಮನಗೊಳಿಸಲು ಈ ಗುಣಗಳು ನೆರವಾಗುತ್ತವೆ ಹಾಗೂ ಚರ್ಮವನ್ನು ಬ್ಯಾಕ್ಟೀರಿಯಾಗಳ ಧಾಳಿಯಿಂದ ರಕ್ಷಿಸುತ್ತವೆ, ವಿಧಾನ: ನೀವು ಸ್ನಾನ ಮಾಡುವ ನೀರಿನ ತೊಟ್ಟಿಯಲ್ಲಿ ಸುಮಾರು ಐದು ತೊಟ್ಟು ಈ ಅವಶ್ಯಕ ತೈಲವನ್ನು ಹಾಕಿ ಬೆರೆಸಿ. ಈ ನೀರಿನಿಂದ ಸ್ನಾನ ಮಾಡಿ.

ಮೊಸರು

ಮೊಸರು

ಮೊಸರು ಕೇವಲ ಆಹಾರರೂಪದಲ್ಲಿ ಮಾತ್ರವಲ್ಲ, ತ್ವಚೆಗೆ ಹಚ್ಚಿಕೊಳ್ಳುವ ಮೂಲಕವೂ ತಂಪುಗೊಳಿಸುವ ಗುಣವನ್ನು ಹೊಂದಿದೆ. ಈ ಗುಣ ಬೆವರುಸಾಲೆಯ ಚುಚ್ಚುವಿಕೆ ಮತ್ತು ತುರಿಕೆಯನ್ನು ಇಲ್ಲವಾಗಿಸುತ್ತದೆ. ಮೊಸರಿನಲ್ಲಿ ಶಿಲೀಂಧ್ರ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳೂ ಇದ್ದು ಚರ್ಮಕ್ಕೆ ಧಾಳಿಯಿಡುವ ಹಲವು ಬಗೆಯ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಒದಗಿಸುತ್ತದೆ.

ವಿಧಾನ: ಅಪ್ಪಟ ಮೊಸರನ್ನು ತಣ್ಣಗಿದ್ದಂತೆಯೇ ತೆಳುವಾಗಿ ಬೆವರುಸಾಲೆ ಎದುರಾಗಿರುವ ತ್ವಚೆಯ ಭಾಗದ ಮೇಲೆ ಲೇಪಿಸಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಹಿಬೇವಿನ ಎಲೆಗಳು

ಕಹಿಬೇವಿನ ಎಲೆಗಳು

ಬೇವಿನ ಎಲೆಗಳಲ್ಲಿ ಉರಿಯೂತ ನಿವಾರಕ, ಗುಣಪಡಿಸುವ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಈ ಗುಣಗಳು ಬೆವರುಸಾಲೆಗೆ ಒಳಗಾದ ಚರ್ಮದ ತುರಿಕೆ ಮತ್ತು ಉರಿಯನ್ನು ತಕ್ಷಣವೇ ಇಲ್ಲವಾಗಿಸುತ್ತವೆ.

ವಿಧಾನ: ಒಂದು ಮುಷ್ಠಿಯಷ್ಟು ಕಹಿಬೇಬಿನ ಎಲೆಗಳನ್ನು ನುಣ್ಣಗೆ ಅರೆದು ಈ ಲೇಪವನ್ನು ಬೆವರುಸಾಲೆಗೆ ಒಳಗಾಗಿದ್ದ ಭಾಗದ ಮೇಲೆ ತೆಳುವಾಗಿ ಸವರಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಪರ್ಯಾಯವಾಗಿ ಸ್ನಾನದ ನೀರಿನ ತೊಟ್ಟಿಯಲ್ಲಿ ಕೊಂಚ ಕಹಿಬೇವಿನ ಎಲೆಗಳನ್ನು ಹಾಕಿ ಈ ನೀರಿನಿಂದ ಸ್ನಾನ ಮಾಡಿಕೊಳ್ಳಬಹುದು.

ಮೆಕ್ಕೆಜೋಳದ ಹಿಟ್ಟು (Cornstarch)

ಮೆಕ್ಕೆಜೋಳದ ಹಿಟ್ಟು (Cornstarch)

ಈ ಹಿಟ್ಟು ಅತ್ಯುತ್ತಮ ಬೆವರುನಿವಾರಕವಾಗಿದ್ದು ಹೆಚ್ಚುವರಿ ಬೆವರನ್ನು ಹೀರಿಕೊಳ್ಳುವ ಗುಣ ಹೊಂದಿದೆ. ತನ್ಮೂಲಕ ಬೆವರುಸಾಲೆಯ ಉರಿ ಮತ್ತು ತುರಿಕೆಯನ್ನು ಇಲ್ಲವಾಗಿಸುತ್ತದೆ. ಒಂದು ವೇಳೆ ಬೆವರು ಅಪಾರ ಪ್ರಮಾಣದಲ್ಲಿದ್ದರೆ ಈ ವಿಧಾನ ಅತ್ಯುತ್ತಮವಾಗಿದ್ದು ತಕ್ಷಣವೇ ಉರಿ ಮತ್ತು ತುರಿಕೆ ಶಮನಗೊಳ್ಳುತ್ತದೆ.

ವಿಧಾನ: ಬೆವರಿರುವ ಹಾಗೂ ಬೆವರುಸಾಲೆ ಎದುರಾಗಿರುವ ಭಾಗದ ಮೇಲೆ ಈ ಹಿಟ್ಟನ್ನು ಸಿಂಪಡಿಸಿ ಬೆವರು ತೋಯುವಂತೆ ಮಾಡಿ. ಕೆಲವಾರು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಬೆವರುಸಾಲೆ ಬರದಂತೆ ತಡೆಗಟ್ಟಲು ಕೆಲವು ಸಲಹೆಗಳು

ಬೆವರುಸಾಲೆ ಬರದಂತೆ ತಡೆಗಟ್ಟಲು ಕೆಲವು ಸಲಹೆಗಳು

*ಬೇಸಿಗೆಯ ದಿನಗಳಲ್ಲಿ ಸಾಕಷ್ಟು ನೀರನ್ನು ಕುಡಿಯುತ್ತಾ ಇರುವ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ದೇಹ ತಂಪಗಾಗಿದ್ದರೆ ಹೆಚ್ಚು ಬೆವರುವ ಅವಶ್ಯಕತೆ ಬೀಳುವುದಿಲ್ಲ.

ಬೇಸಿಗೆಯ ದಿನಗಳಲ್ಲಿ ಸಡಿಲವಾದ ಮತ್ತು ಹತ್ತಿಯ ಬಟ್ಟೆಗಳನ್ನೇ ತೊಡಿರಿ

*ಆದಷ್ಟೂ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.

*ದಿನಕ್ಕೆರಡು ಅಥವಾ ಮೂರು ಬಾರಿ ತಣ್ಣೀರಿನಿಂದ ಸ್ನಾನ ಮಾಡಿ

*ಚರ್ಮದ ಸೂಕ್ಷ್ಮರಂಧ್ರಗಳನ್ನು ಮುಚ್ಚುವ ಯಾವುದೇ ಸೌಂದರ್ಯಪ್ರಸಾಧನ, ಮುಲಾಮು ಅಥವಾ ಎಣ್ಣೆಗಳನ್ನು ಹಚ್ಚಿಕೊಳ್ಳದಿರಿ.

English summary

Effective Home Remedies For Heat Rash

During summer prickly heat appears on the skin as an itchy rash, causing a stinging or prickling sensation on the skin. It can develop anywhere on the body, but it mostly shows up on the chest, arms, thighs, face, neck and back. In this article, we will be writing down the home remedies for prickly heat.Prickly heat, also called miliaria, is common during the hot and humid climate. It occurs when you sweat a lot and it blocks the skin pores. When the blocked skin pores are unable to expel the excess perspiration, it leads to rashes.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X