For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಹೊತ್ತಿನ ತ್ವಚೆ ಆರೈಕೆಯ ದಿನಚರಿ-ಇಂತಹ ಸರಳ ಟಿಪ್ಸ್ ಅನುಸರಿಸಿ

|

ಆರೋಗ್ಯವಂತ ಮತ್ತು ಸುಂದರ ತ್ವಚೆಯನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಅಲ್ಲದೇ ಇದನ್ನೊಂದು ನಿತ್ಯಕ್ರಮವನ್ನಾಗಿಸುವುದು ಇನ್ನೊಂದು ಕಷ್ಟದ ಕೆಲಸ. ಇಂದಿನ ಧಾವಂತಯುಗದಲ್ಲಿ ಈ ಕಾರ್ಯಕ್ಕಾಗಿ ಸಮಯವನ್ನು ಮೀಸಲಿಡುವುದು ಬಹಳ ಕಷ್ಟ, ಅದರಲ್ಲೂ, ಬೆಳಗ್ಗಿನ ಹೊತ್ತು ಎಲ್ಲರೂ ಹೊರಡುವ ಅವಸರದಲ್ಲಿರುತ್ತಾರೆ. ಆದರೆ ಕಾರಣವೇನೇ ಇರಲಿ, ತ್ವಚೆ ಆರೋಗ್ಯಕರವಾಗಿರಬೇಕಾದರೆ ಇದಕ್ಕೆ ವಹಿಸಬೇಕಾದ ಕಾಳಜಿಯನ್ನು ನಿತ್ಯವೂ ವಹಿಸಲೇಬೇಕಾಗುತ್ತದೆ. ಈ ಮೂಲಕ ರಾತ್ರಿಯ ಸಮಯದಲ್ಲಿ ತ್ವಚೆಯ ಮೇಲೆ ಕುಳಿತುಕೊಂಡ ಕಲ್ಮಶಗಳನ್ನು ನಿವಾರಿಸುವುದು ಮಾತ್ರವಲ್ಲ ದಿನದ ಅವಧಿಯಲ್ಲಿ ಎದುರಿಸಬೇಕಾದ ಸಂದರ್ಭಗಳನ್ನೂ ಯಶಸ್ವಿಯಾಗಿ ಎದುರಿಸಲು ಅಗತ್ಯವಾದ ತಯಾರಿ ಮಾಡಲು ಸಾಧ್ಯವಾಗುತ್ತದೆ.

ಒಮ್ಮೆ ಮನೆಯಿಂದ ಹೊರ ಹೋದ ಬಳಿಕ ಹಲವಾರು ಅಡ್ಡಿಗಳು ಹಾಗೂ ತ್ವಚೆಗೆ ಹಾನಿ ಎಸಗುವಂತಹ ಸನ್ನಿವೇಶಗಳು ಎದುರಾಗುತ್ತಲೇ ಇರುತ್ತವೆ. ಇದರಿಂದ ರಕ್ಷಣೆ ಪಡೆಯಲು ಎಷ್ಟೇ ಧಾವಂತವಿದ್ದರೂ ಸರಿ, ನಿತ್ಯವೂ ಕನಿಷ್ಟ ಈ ಹತ್ತು ಹಂತಗಳನ್ನು ಕ್ಷಿಪ್ರವಾಗಿಯಾದರೂ ಪೂರೈಸಿಯೇ ಹೊರಡುವ ಮೂಲಕ ತ್ವಚೆಗೆ ಎದುರಾಗುವ ಮೊಡವೆ, ಕೀವುಗುಳ್ಳೆ, ಬ್ಲಾಕ್ ಹೆಡ್, ಹೊರಪದರ ಒಣಗುವುದು ಮೊದಲಾದ ಸಾಮಾನ್ಯ ತೊಂದರೆಗಳಿಂದ ರಕ್ಷಿಸಿಕೊಳ್ಳಬಹುದು. ಬನ್ನಿ, ನಿತ್ಯಕ್ರಮದ ಈ ರಕ್ಷಣೆ ಪಡೆಯುವುದು ಹೇಗೆ ಎಂಬುದನ್ನು ನೋಡೋಣ:

ಮುಖವನ್ನು ತೊಳೆಯಿರಿ

ಮುಖವನ್ನು ತೊಳೆಯಿರಿ

ನಿತ್ಯಕ್ರಮದ ಮೊದಲ ಹಂತದಲ್ಲಿ ನಿಮ್ಮ ಮುಖಕ್ಕೆ ತಣ್ಣೀರನ್ನು ನಾಲ್ಕಾರು ಬಾರಿ ಚಿಮುಕಿಸಿಕೊಳ್ಳಿ. ಇದರಿಂದ ಬೆಳಿಗ್ಗೆದ್ದ ಬಳಿಕ ನಿದ್ದೆಯ ಜೊಂಪಿನಿಂದ ಪೂರ್ಣವಾಗಿ ಹೊರಬರಲು ಸಾಧ್ಯವಾಗುತ್ತದೆ ಹಾಗೂ ತ್ವಚೆಯೂ ಕಾರ್ಯನಿರತಗೊಳ್ಳಲು ಸಾಧ್ಯವಾಗುತ್ತದೆ. ರಾತ್ರಿಯಿಡೀ ತ್ವಚೆಯ ಸೂಕ್ಷ್ಮರಂಧ್ರಗಳಲ್ಲಿ ಕೊಳೆ ಮತ್ತು ಎಣ್ಣೆಯಂಶ ತುಂಬಿರುತ್ತವೆ. ಬೆಳಿಗ್ಗೆದ್ದ ಬಳಿಕ ಮೊದಲಾಗಿ ಮುಖ ತೊಳೆದುಕೊಂಡರೆ ಇವು ಗಟ್ಟಿಯಾಗುವ ಮುನ್ನವೇ ಸುಲಭವಾಗಿ ನೀರಿನಲ್ಲಿ ಕರಗಿ ಹೋಗುತ್ತವೆ.

ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಿ

ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಿ

ಮೊದಲ ಹಂತದಲ್ಲಿ ಮುಖವನ್ನು ತೊಳೆಯುವಾಗ ಕೇವಲ ಹೊರಚರ್ಮವಷ್ಟೇ ಸ್ವಚ್ಛಗೊಳ್ಳುತ್ತದೆಯೇ ಹೊರತು ಸೂಕ್ಷ್ಮರಂಧ್ರಗಳ ಒಳಗಿರುವ ಕೊಳೆಯಲ್ಲ. ಇದಕ್ಕೆ ಆಳವಾದ ಸ್ವಚ್ಛತೆಯ ಅಗತ್ಯವಿದೆ. ಇದಕ್ಕಾಗಿ ಸೌಮ್ಯ ಕ್ಲೀನ್ಸರ್ ದ್ರಾವಣವನ್ನು ಬಳಸಿ. ಇದರಿಂದ ಸೂಕ್ಷ್ಮರಂಧ್ರಗಳ ಒಳಗೂ ಇದ್ದ ಕಲ್ಮಶ ಹೊರದಬ್ಬಲ್ಪಟ್ಟು ಸ್ವಚ್ಛಗೊಳ್ಳುತ್ತದೆ. ತನ್ಮೂಲಕ ತ್ವಚೆಗೆ ಉಸಿರಾಡಲು ಸಾಧ್ಯವಾಗುತ್ತದೆ ಹಾಗೂ ಹೊಸ ತಾಜಾತನ ಲಭಿಸುತ್ತದೆ. ಈ ಹಂತದ ಬಳಿಕ ತ್ವಚೆ ಸೌಮ್ಯ ಹಾಗೂ ಹೊಸತನದಿಂದ ಕೂಡಿರುತ್ತದೆ. ಈ ಹಂತದಲ್ಲಿ ಸೋಪನ್ನು ಮುಖಕ್ಕೆ ಬಳಸದಿರಿ. ಬದಲಿಗೆ ಫೇಸ್ ವಾಶ್ ಬಳಕೆ ಉತ್ತಮ. ಇದು ಮುಖದ ತ್ವಚೆಗೆ ಸೌಮ್ಯವಾಗಿದ್ದು ಅಪೇಕ್ಷಿತ ಕೆಲಸವನ್ನು ಯಾವುದೇ ಅಪಾಯವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

ಸತ್ತ ಜೀವಕೋಶಗಳನ್ನು ನಿವಾರಿಸಿ

ಸತ್ತ ಜೀವಕೋಶಗಳನ್ನು ನಿವಾರಿಸಿ

ಒಂದು ವೇಳೆ ನಿತ್ಯಕ್ರಮದ ಅವಶ್ಯಕತೆ ಇಲ್ಲವೆನಿಸಿದರೂ ಸರಿ, ಈ ಕ್ರಮವನ್ನು ಮಾತ್ರ ಎಂದಿಗೂ ತಪ್ಪಿಸಬಾರದು. ಕನಿಷ್ಟ ವಾರಕ್ಕೊಮ್ಮೆಯಾದರೂ ಈ ಕ್ರಮವನ್ನು ಅನುಸರಿಸಲೇ ಬೇಕು. ಈ ಮೂಲಕ ತ್ವಚೆಯ ಹೊರಪದರಕ್ಕೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳು ನಿವಾರಣೆಗೊಂಡು ತ್ವಚೆಗೆ ನವಚೈತನ್ಯ ನೀಡುತ್ತದೆ. ಕ್ಲೀನ್ಸರ್ ದ್ರಾವಣದಿಂದ ಎರಡನೆಯ ಹಂತ ಪೂರೈಸಿದ ಬಳಿಕ ಈ ಕಾರ್ಯ ನಿರ್ವಹಿಸುವ ನಿಮ್ಮ ಆಯ್ಕೆಯ ಪ್ರಸಾದನವನ್ನು ಬಳಸಿ ಹೆಚ್ಚಿನ ಒತ್ತಡವಿಲ್ಲದೇ ಹೊರಚರ್ಮವನ್ನು ಉಜ್ಜಿ ಸತ್ತ ಜೀವಕೋಶಗಳನ್ನು ನಿವಾರಿಸಬೇಕು. ಇದರಿಂದ ಸೂಕ್ಷ್ಮರಂಧ್ರಗಳನ್ನು ಮುಚ್ಚಿದ್ದ ಈ ಕೊಳೆ ನಿವಾರಣೆಯಾಗುತ್ತದೆ. ಆದರೆ, ಈ ಹಂತದಲ್ಲಿ ಬೆರಳುಗಳ ಒತ್ತಡ ಅತಿ ಹೆಚ್ಚೂ ಇರಬಾರದು, ಅತಿ ಕಡಿಮೆಯೂ ಇರಬಾರದು, ಅಷ್ಟರ ಮಟ್ಟಿಗಿರುವಂತೆ ಎಚ್ಚರವಹಿಸಿ. ಅಲ್ಲದೇ ನಿಧಾನವಾಗಿಯೇ ಉಜ್ಜಿ, ಅವಸರ ಬೇಡ.

ತ್ವಚೆಗೆ ಟೋನಿಂಗ್ ಆರೈಕೆ ನೀಡಿ (ಆಮ್ಲೀಯತೆಯ ಸಂತುಲತೆ)

ತ್ವಚೆಗೆ ಟೋನಿಂಗ್ ಆರೈಕೆ ನೀಡಿ (ಆಮ್ಲೀಯತೆಯ ಸಂತುಲತೆ)

ಮುಂದಿನ ಹಂತದಲ್ಲಿ ಟೋನಿಂಗ್ ಆರೈಕೆ ಒದಗಿಸುವುದಾಗಿದೆ. ಹೆಚ್ಚಿನ ಮಹಿಳೆಯರಿಗೆ ಟೋನಿಂದ್ ಎಂದರೇನು ಎಂದೇ ಗೊತ್ತಿರುವುದಿಲ್ಲ. ಏಕೆಂದರೆ ಇದರ ಮಹತ್ವವನ್ನು ನಮ್ಮಲ್ಲಿ ಹೆಚ್ಚಿನವರು ಅರಿತಿಲ್ಲ. ಈ ಮೂಲಕ ತ್ವಚೆಯ ಆಮ್ಲೀಯತೆಯನ್ನು ಅಥವಾ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸುವುದಾಗಿದೆ ಹಾಗೂ ತ್ವಚೆಗೆ ಸೂಕ್ತ ಆರೈಕೆಯನ್ನು ಒದಗಿಸುವುದಾಗಿದೆ. ತ್ವಚೆಯ ಸತ್ತ ಜೀವಕೋಶಗಳನ್ನು ನಿವಾರಿಸಿದ ಬಳಿಕ ಹೊರಚರ್ಮ ಈಗ ಗಾಳಿಗೆ ನೇರವಾಗಿ ಒಡ್ಡಿಕೊಳ್ಳುವ ಕಾರಣ ಸೂಕ್ಷ್ಮರಂಧ್ರದಲ್ಲಿದ್ದ ಆರ್ದ್ರತೆ ಹಾರಿ ತ್ವಚೆ ಒಣಗುವ ಸಂಭವವಿದೆ. ಒಣಗಿದ ತ್ವಚೆ ಶೀಘ್ರವೇ ಬಿರುಕು ಬಿಡುತ್ತದೆ. ಟೋನಿಂಗ್ ನಿಂದ ಈ ಅಪಾಯವನ್ನು ತಪ್ಪಿಸಬಹುದು. ಅಷ್ಟೇ ಅಲ್ಲ, ಮೂರನೆಯ ಹಂತದ ಪರಿಣಾಮವಾಗಿ ಅಗಲವಾಗಿ ತೆರೆದಿದ್ದ ರಂಧ್ರಗಳಿಂದ ಒಸರಿದ್ದ ತೈಲದ ಅಂಶವನ್ನು ನಿವಾರಿಸಿ ಸೂಕ್ಷ್ಮರಂಧ್ರಗಳನ್ನು ಕುಗ್ಗಿಸಿ ಚಿಕ್ಕದಾಗಿಸುತ್ತದೆ. ಈ ಹಂತ ವಿಶೇಷವಾಗಿ ಎಣ್ಣೆ ಚರ್ಮದ ವ್ಯಕ್ತಿಗಳಿಗೆ ಅತ್ಯಗತ್ಯವಾಗಿದೆ. ಈ ಕ್ರಮ ಅನುಸರಿಸದೇ ಇರುವವರಲ್ಲಿ ಮೊಡವೆಗಳು ಹಾಗೂ ತ್ವಚೆ ಬಿರುಕು ಬಿಟ್ಟು ಒಡೆಯುವುದು ಕಂಡುಬರುತ್ತದೆ.

ಸೀರಂ ಹಚ್ಚಿಕೊಳ್ಳಿ

ಸೀರಂ ಹಚ್ಚಿಕೊಳ್ಳಿ

ಸೀರಂ ಎಂಬ ಪ್ರಸಾದನ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿದೆ. ಈ ಬಗ್ಗೆ ಹೆಚ್ಚಿನವರು ಕೇಳಿ ತಿಳಿದುಕೊಂಡಿದ್ದರೂ ಬಳಕೆಯ ಬಗ್ಗೆ ಹೆಚ್ಚು ಆಸಕ್ತರಾಗಿರಲಿಕ್ಕಿಲ್ಲ. ಆದರೆ ಸೀರಂ ಕೆಲವು ವಿಶಿಷ್ಟ ತ್ವಚೆಯ ತೊಂದರೆಗಳನ್ನು ಸರಿಪಡಿಸಲು ಅತ್ಯುತ್ತಮವಾದ ವಿಧಾನವಾಗಿದೆ. ಇವುಗಳಲ್ಲಿ ಅಧಿಕ ಸಾಂದ್ರತೆಯ ಕ್ರಿಯಾತ್ಮಕ ಪೋಷಕಾಂಶಗಳಿದ್ದು ತ್ವಚೆಗೆ ಹೆಚ್ಚಿನ ಆರೈಕೆ ಒದಗಿಸಿ ಈ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಹಾಗಾಗಿ ಒಂದು ವೇಳೆ ನೆರಿಗೆ, ಕಪ್ಪು ಕಲೆಗಳು, ನಿರ್ಜಲೀಕರಣ ಮೊದಲಾದ ತೊಂದರೆಗಳಿದ್ದರೆ ಈ ಸೀರಂಗಳ ಉಪಯೋಗ ಉತ್ತಮ. ಆದರೆ ಈ ಪ್ರಸಾದನಗಳನ್ನು ಕೇವಲ ಮೂರನೆಯ ಹಂತ ದಾಟಿದ ಬಳಿಕವೇ ಉಪಯೋಗಿಸಬೇಕು ಹಾಗೂ ಈ ಹಂತ ಕಳೆದ ನಂತರವೇ ತೇವಕಾರಕ ಕ್ರಮ ಕೈಗೊಳ್ಳಬೇಕು.

ತೇವಕಾರಕ ಪ್ರಸಾಧನ ಹಚ್ಚಿಕೊಳ್ಳಿ

ತೇವಕಾರಕ ಪ್ರಸಾಧನ ಹಚ್ಚಿಕೊಳ್ಳಿ

ಇದು ತ್ವಚೆಗೆ ತೇವವನ್ನು ಒದಗಿಸುವ ತೇವಕಾರಕ ಅಥವಾ ಮಾಯಿಶ್ಚರೈಸ ಹಚ್ಚಿಕೊಳ್ಳುವ ಹಂತವಾಗಿದೆ. ಮೇಲಿನ ಹಂತಗಳಲ್ಲಿ ನಾವು ಅನುಸರಿಸಿದ ಕ್ರಮದಿಂದ ಚರ್ಮದ ಸೂಕ್ಷ್ಮರಂಧ್ರಗಳಿಂದ ಅಮೂಲ್ಯ ತೇವಾಂಶವೂ ಗಾಳಿಗೆ ಆವಿಯಾಗಿ ತ್ವಚೆ ಒಣಗಿರುತ್ತದೆ. ಆದರೆ ಇದನ್ನು ಮರುತುಂಬಿಸುವುದು ತುಂಬಾ ಸುಲಭ. ಇದಕ್ಕಾಗಿ ಉತ್ತಮ ಗುಣಮಟ್ಟದ ತೇವಕಾರಕ ಪ್ರಸಾದನವನ್ನು ಬಳಸಿದರೆ ತಕ್ಷಣವೇ ತ್ವಚೆ ಕೋಮಲ ಹಾಗೂ ಸೌಮ್ಯವಾಗಿದ್ದು ದಿನದ ಮುಂದಿನ ಅವಧಿಯಲ್ಲಿಯೂ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ಸೌಮ್ಯ ತೇವಕಾರಕವನ್ನೇ ಬಳಸಿ,

ಸನ್ ಸ್ಕ್ರೀನ್ ಹಚ್ಚಿಕೊಳ್ಳಿ

ಸನ್ ಸ್ಕ್ರೀನ್ ಹಚ್ಚಿಕೊಳ್ಳಿ

ಮುಂದಿನ ಹಂತ ಅತ್ಯಂತ ಮುಖ್ಯವಾಗಿದ್ದು ವಿಶೇಷವಾಗಿ ಬಿಸಿಲಿಗೆ ತ್ವಚೆ ಒಡ್ಡಿಕೊಳ್ಳುವ ಸಂದರ್ಭ ಎದುರಾದರೆ ಅನಿವಾರ್ಯವೂ ಆಗಿದೆ. ತ್ವಚೆಗೆ ಸೂರ್ಯನ ಪ್ರಖರ ಹಾಗೂ ಅತಿನೇರಳೆ ಕಿರಣಗಳು ಹಾನಿ ಎಸಗುತ್ತವೆ ಹಾಗೂ ಅವಧಿಗೂ ಮುನ್ನ ವೃದ್ದಾಪ್ಯದ ಲಕ್ಷಣಗಳನ್ನು ತೋರಲು ಕಾರಣವಾಗುತ್ತದೆ. ಹಾಗಾಗಿ ಈ ಹಾನಿಯಿಂದ ರಕ್ಷಿಸಿಕೊಳ್ಳಲು ಈ ಕ್ರಮ ಅನಿವಾರ್ಯವಾಗಿದ್ದು ಸನ್ ಸ್ಕ್ರೀನ್ ಇಲ್ಲದೇ ಮನೆಯಿಂದ ಹೊರಡಲೇ ಬಾರದು. ಇದಕ್ಕಾಗಿ ಆಯ್ದುಕೊಳ್ಳುವ ಪ್ರಸಾದನದಲ್ಲಿ ಎಷ್ಟು ಹೆಚ್ಚು SPF ಗುಣಾಂಕವಿರುತ್ತದೆಯೋ ಅಷ್ಟೂ ಒಳ್ಳೆಯದು. ನಿಮ್ಮ ಆಯ್ಕೆಯ ಪ್ರಸಾದನವನ್ನು ತೆಳ್ಳಗೆ, ಬಿಸಿಲಿಗೆ ಒಡ್ಡುವ ಎಲ್ಲಾ ತ್ವಚೆಗೆ ಹಚ್ಚಿಕೊಳ್ಳಬೇಕು.

ಊದಿಕೊಂಡಿದ್ದ ಕಣ್ಣುಗಳನ್ನು ಸರಿಪಡಿಸಿ

ಊದಿಕೊಂಡಿದ್ದ ಕಣ್ಣುಗಳನ್ನು ಸರಿಪಡಿಸಿ

ಕಣ್ಣುಗಳ ಕೆಳಗಿನ ತ್ವಚೆ ಅತಿ ನಾಜೂಕಿನದ್ದಾಗಿದ್ದು ಇಲ್ಲಿ ಸಾಕಷ್ಟು ಕಾಳಜಿಯಿಂದ ಆರೈಕೆಯನ್ನು ಒದಗಿಸಬೇಕಾಗುತ್ತದೆ. ಹೆಚ್ಚಿನವರಲ್ಲಿ ಬೆಳಿಗ್ಗೆದ್ದಾಗ ಈ ಭಾಗದಲ್ಲಿ ತ್ವಚೆ ಕೊಂಚ ಊದಿಕೊಂಡಂತೆ ತೋರುತ್ತದೆ. ಈ ಊತವನ್ನು ನಿವಾರಿಸಲು ಉತ್ತಮ ಗುಣಮಟ್ಟದ ಐ ಕ್ರೀಂ ಪ್ರಸಾದನವನ್ನು ಬಳಸಿ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಕಣ್ಣುಗಳ ಕೆಳಗಿನ ಭಾಗದ ತ್ವಚೆಗೆ ಉತ್ತಮ ಆರೈಕೆ ದೊರೆತು ದಿನವಿಡೀ ಸಾಕಷ್ಟು ಆರ್ದ್ರತೆಯನ್ನು ಪಡೆದಿರಲು ಸಾಧ್ಯವಾಗುತ್ತದೆ.

ನಿರ್ಜಲೀಕರಣಕ್ಕೆ ಒಳಗಾಗದಿರಲು ಕ್ರಮ ಕೈಗೊಳ್ಳಿ

ನಿರ್ಜಲೀಕರಣಕ್ಕೆ ಒಳಗಾಗದಿರಲು ಕ್ರಮ ಕೈಗೊಳ್ಳಿ

ತ್ವಚೆಯ ಆರೈಕೆಯನ್ನು ಕೇವಲ ಹೊರಗಿನಿಂದ ಮಾತ್ರವೇ ಪಡೆದುಕೊಂಡರೆ ಸಾಕಾಗುವುದಿಲ್ಲ, ಬದಲಿಗೆ ಒಳಗಿನಿಂದಲೂ ಅವಶ್ಯವಾಗಿದೆ. ತ್ವಚೆಯನ್ನು ಒಳಗಿನಿಂದಲೂ ಆರೋಗ್ಯರಕವಾಗಿರಿಸಲು ವಹಿಸಬಹುದಾದ ಅತ್ಯಂತ ಸುಲಭ ಮತ್ತು ಅತ್ಯಂತ ಸಮರ್ಪಕ ವಿಧಾನವೆಂದರೆ ದಿನವಿಡೀ ಸಾಕಷ್ಟು ನೀರನ್ನು ಕುಡಿಯುವುದು. ವಿಶೇಷವಾಗಿ ಬೆಳಿಗ್ಗೆ ಮನೆಯಿಂದ ಹೊರಡುವ ಮುನ್ನ ಸಾಕಷ್ಟು ನೀರು ಕುಡಿದೇ ಹೊರಡಬೇಕು. ಇದರಿಂದ ತ್ವಚೆಯ ಸೂಕ್ಷ್ಮರಂಧ್ರಗಳಿಂದ ಕಲ್ಮಶಗಳು ನಿವಾರಣೆಯಾಗಲು ಸಾದ್ಯವಾಗುತ್ತದೆ ಹಾಗೂ ಆರೋಗ್ಯಕರ ತ್ವಚೆ ಪಡೆಯಲು ಸಾಧ್ಯವಾಗುತ್ತದೆ.

ಆರೋಗ್ಯಕರ ಆಹಾರಕ್ರಮ

ಆರೋಗ್ಯಕರ ಆಹಾರಕ್ರಮ

ದೇಹದ ಆರೋಗ್ಯದ ಜೊತೆಗೇ ತ್ವಚೆಯೂ ಉತ್ತಮ ಆರೋಗ್ಯ ಪಡೆಯುವಂತಾಗಲು ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಬೆಳಗ್ಗಿನ ಉಪಾಹಾರ ಆರೋಗ್ಯಕವಾಗಿರಬೇಕು ಯಾವುದೇ ಕಾರಣಕ್ಕೂ ಉಪಾಹಾರ ತಪ್ಪಿಸಕೂಡದು. ನಮ್ಮ ದಿನದ ಎಲ್ಲಾ ಹೊತ್ತುಗಳಲ್ಲಿ ಉಪಾಹಾರವೇ ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ ಬೆಳಗ್ಗಿನ ಅಹಾರ ಸಾಕಷ್ಟು ಪೌಷ್ಟಿಕ ಹಾಗೂ ಹೆಚ್ಚಿನ ನೀರಿನಂಶವನ್ನು ಹೊಂದಿರುವಂತೆ ನೋಡಿಕೊಳ್ಳಿ. ದಿನದ ಇತರ ಆಹಾರಗಳಲ್ಲಿಯೂ ಸಮತೋಲನವನ್ನು ಅನುಸರಿಸಿ ಆರೋಗ್ಯಕರ ಆಹಾರಗಳನ್ನೇ ಸೂಕ್ತ ಪ್ರಮಾಣದಲ್ಲಿ ಸೇವಿಸಿ. ಇದರಿಂದ ದೇಹ ಹಾಗೂ ತ್ವಚೆ ಇಡಿಯ ದಿನ ಉತ್ತಮ ಆರೋಗ್ಯ ಮತ್ತು ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ.

English summary

Best Morning Skincare Routine In Simple Steps

Morning skincare routine is an essential part of your skincare. It not only removes the overnight build-up from your face, but also helps to prepare your skin for the day that is to follow. It cleanses and refreshes your skin to keep skin issues like acne, pimples, blackheads etc. at bay. Listed here for you is the best morning skincare routine in 10 simple steps.
Story first published: Tuesday, June 4, 2019, 12:27 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X