For Quick Alerts
ALLOW NOTIFICATIONS  
For Daily Alerts

ಲಿಂಬೆ ಹಣ್ಣಿನ ಫೇಸ್ ಪ್ಯಾಕ್..! ಇನ್ನಷ್ಟು ಸೌಂದರ್ಯವಾಗಿ ಕಾಣುವಿರಿ

By Hemanth
|

ಸಿಟ್ರಸ್ ಗುಣವನ್ನು ಹೊಂದಿರುವ ಲಿಂಬೆಹಣ್ಣು ಹಲವಾರು ರೀತಿಯಿಂದ ನಮ್ಮ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದರಲ್ಲಿ ಕೆಲವೊಂದು ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳು ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರ ಹೊರತಾಗಿ ಲಿಂಬೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದಾಗಿದೆ. ಹೌದು, ನಿಮ್ಮ ಸೌಂದರ್ಯದ ಆರೈಕೆಯಲ್ಲಿ ಲಿಂಬೆಯನ್ನು ಫೇಸ್ ಪ್ಯಾಕ್ ಹಾಗೂ ಮಾಸ್ಕ್ ಆಗಿ ಬಳಸಬಹುದು. ಇದರಿಂದ ನಿಮ್ಮ ಸೌಂದರ್ಯವೃದ್ಧಿಯಾಗುವುದು. ನಮಗೆಲ್ಲರಿಗೂ ಮೊಡವೆ, ಕಲೆಗಳು ಮತ್ತು ಒಣಚರ್ಮ ಇತ್ಯಾದಿ ಸಾಮಾನ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ಇದಕ್ಕೆ ಒಳ್ಳೆಯ ಪರಿಣಾಮವೆಂದರೆ ಲಿಂಬೆಯನ್ನು ಬಳಸುವುದು. ಎಲ್ಲಾ ಋತುಗಳಲ್ಲಿ ಲಭ್ಯವಿರುವಂತಹ ಲಿಂಬೆ ಹಣ್ಣನ್ನು ಹೇಗೆ ಬಳಸುವುದು ಎನ್ನುವ ಬಗ್ಗೆ ನಿಮಗೆ ಚಿಂತೆಯಾಗಿದೆಯಾ? ಅದರ ಬಗ್ಗೆ ನೀವು ಯೋಚಿಸುವುದೇ ಬೇಡ. ಈ ಲೇಖನವನ್ನು ಓದುತ್ತಾ ಹೋದರೆ ನಿಮಗೆ ಲಿಂಬೆಯ ಸೌಂದರ್ಯವರ್ಧಕ ಗುಣಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ನೀವು ಮನೆಯಲ್ಲೇ ಇದ್ದುಕೊಂಡು ಲಿಂಬೆಯನ್ನು ಬಳಸಿದರೆ ಕಾಂತಿಯುತ, ಸುಂದರ ತ್ವಚೆಯು ನಿಮ್ಮದಾಗುವುದು. ಲಿಂಬೆ ಬಳಸುವುದು ಹೇಗೆ ತಿಳಿಯಿರಿ.

ಮೊದಲ ಹಂತ: ಶುಚಿಗೊಳಿಸುವುದು
ಫೇಶಿಯಲ್ ಗೆ ಮೊದಲು ನಿಮ್ಮ ಮುಖವನ್ನು ಶುಚಿಗೊಳಿಸುವುದು ತುಂಬಾ ಮುಖ್ಯ. ಇದರಿಂದ ಧೂಳು, ಕೊಳೆ, ಅತಿಯಾದ ಎಣ್ಣೆ ಮತ್ತು ಕಲ್ಮಶಗಳು ದೂರವಾಗುವುದು. ಇದರಿಂದ ಚರ್ಮವು ಸುಂದರವಾಗಿ ಕಾಣಿಸುವುದು.

lime

ಬೇಕಾಗುವ ಸಾಮಗ್ರಿಗಳು
1 ಚಮಚ ಲಿಂಬೆ ಸಿಪ್ಪೆಯ ಹುಡಿ
2-3 ಚಮಚ ಹಾಲು

ಮಾಡುವ ವಿಧಾನ
ಒಂದು ಚಮಚ ಲಿಂಬೆ ಸಿಪ್ಪೆಯ ಹುಡಿಯನ್ನು 2-3 ಚಮಚ ಹಾಲಿಗೆ ಹಾಕಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 2-3 ನಿಮಿಷ ಕಾಲ ಹದವಾಗಿ ಮಸಾಜ್ ಮಾಡಿ. 2 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ. ಈಗ ನಿಮ್ಮ ಮೊದಲ ಹಂತ ಪೂರ್ತಿಯಾಗಿದೆ.

2ನೇ ಹಂತ: ಸ್ಕ್ರಬ್
ಮುಖವನ್ನು ಶುಚಿಗೊಳಿಸಿದ ಬಳಿಕ ಮಾಡುವ ಎರಡನೇ ಕೆಲಸ ಸ್ಕ್ರಬ್. ಸ್ಕ್ರಬ್ ಮಾಡುವುದರಿಂದ ನಿಮ್ಮ ಮುಖದ ಸಂಪೂರ್ಣ ಕಾಂತಿಯು ಸುಧಾರಿಸುವುದು. ಸ್ಕ್ರಬ್ ಮಾಡುವುದರಿಂದ ಸತ್ತ ಚರ್ಮದ ಕೋಶಗಳು ಹೊರಬರುವುದು.

ಬೇಕಾಗುವ ಸಾಮಗ್ರಿಗಳು
2 ಚಮಚ ತೆಂಗಿನೆಣ್ಣೆ
1 ಚಮಚ ಸಕ್ಕರೆ
ಕೆಲವು ಹನಿ ಲಿಂಬೆ ಸಾರಭೂತ ಎಣ್ಣೆ

ತಯಾರಿಸುವ ವಿಧಾನ
ಒಂದು ಪಿಂಗಾಣಿಯಲ್ಲಿ ಒಂದು ಚಮಚ ಸಕ್ಕರೆ ಮತ್ತು ಕೆಲವು ಹನಿ ಲಿಂಬೆ ಸಾರಭೂತ ತೈಲ ಹಾಕಿ. ಎರಡು ಚಮಚ ತೆಂಗಿನೆಣ್ಣೆಯನ್ನು ಇದಕ್ಕೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ನಿಧಾನವಾಗಿ ಇದನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ 5-6 ನಿಮಿಷ ಕಾಲ ಮಸಾಜ್ ಮಾಡಿ. ಇದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದು, ಚರ್ಮವು ತುಂಬಾ ನಯ ಹಾಗೂ ಕಾಂತಿಯುತವಾಗಿ ಮಾಡುವುದು. 5 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

3ನೇ ಹಂತ
ಫೇಸ್ ಮಾಸ್ಕ್
ಫೇಶಿಯಲ್ ನಲ್ಲಿ ಪ್ರಮುಖ ಘಟ್ಟವೆಂದರೆ ಅದು ಫೇಸ್ ಮಾಸ್ಕ್. ಫೇಸ್ ಮಾಸ್ಕ್ ನಿಂದಾಗಿ ಚರ್ಮಕ್ಕೆ ತೇವಾಂಶ ಸಿಗುವುದು ಮತ್ತು ಸಂಪೂರ್ಣವಾಗಿ ಚರ್ಮವು ಸುಂದರವಾಗಿ ಕಾಣುವಂತೆ ಮಾಡುವುದು. ಲಿಂಬೆಯಿಂದ ಮಾಡಬಹುದಾದ ಕೆಲವು ಫೇಸ್ ಮಾಸ್ಕ್ ಗಳು.

ಬಾಳೆಹಣ್ಣು ಮತ್ತು ಲಿಂಬೆ ಫೇಸ್ ಮಾಸ್ಕ್
ಈ ಫೇಸ್ ಮಾಸ್ಕ್ ತ್ವಚೆಯಲ್ಲಿರುವಂತಹ ಮೊಡವೆ ಹಾಗೂ ಕಲೆಗಳನ್ನು ತೆಗೆದು, ಉರಿಯೂತ ಕಡಿಮೆ ಮಾಡುವುದು ಮತ್ತು ಚರ್ಮ ಮೊಶ್ಚಿರೈಸ್ ಮಾಡುವುದು.

ಬೇಕಾಗುವ ಸಾಮಗ್ರಿಗಳು
1 ಲಿಂಬೆ
1 ಬಾಳೆಹಣ್ಣು

ಮಾಡುವ ವಿಧಾನ
ಒಂದು ಪಿಂಗಾಣಿಯಲ್ಲಿ ಬಾಳೆಹಣ್ಣನ್ನು ಹಿಚುಕಿಕೊಳ್ಳಿ ಮತ್ತು ಅದಕ್ಕೆ ಕೆಲವು ಹನಿ ಲಿಂಬೆ ರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಹಾಗೆ ಬಿಡಿ. 20 ನಿಮಿಷ ಬಳಿಕ ನೀರಿನಿಂದ ತೊಳೆದು ಒರೆಸಿಕೊಳ್ಳಿ.

ಲಿಂಬೆ ಮತ್ತು ಓಟ್ ಮೀಲ್
ಬೇಕಾಗುವ ಸಾಮಗ್ರಿ
2 ಚಮಚ ಲಿಂಬೆ ಸಿಪ್ಪೆ ಹುಡಿ
1 ಚಮಚ ಜೇನುತುಪ್ಪ
1 ಚಮಚ ಓಟ್ ಮೀಲ್ ಹುಡಿ

ತಯಾರಿಸುವುದು ಹೇಗೆ
ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ 20 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ಪ್ಯಾಕ್ ಒಣಚರ್ಮದವರಿಗೆ ತುಂಬಾ ಒಳ್ಳೆಯದು.

ಅರಿಶಿನ ಮತ್ತು ಲಿಂಬೆ ಸಿಪ್ಪೆ ಹುಡಿಯ ಫೇಸ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು
1 ಚಮಚ ಲಿಂಬೆ ಸಿಪ್ಪೆ ಹುಡಿ
ಒಂದು ಚಿಟಿಕೆ ಅರಶಿನ
1 ಚಮಚ ರೋಸ್ ವಾಟರ್

ತಯಾರಿಸುವ ವಿಧಾನ
ಒಂದು ಪಿಂಗಾಣಿಯಲ್ಲಿ ಲಿಂಬೆಸಿಪ್ಪೆ ಹುಡಿ ಮತ್ತು ಅರಶಿನ ಹುಡಿ ಹಾಕಿ ಮಿಶ್ರಣ ಮಾಡಿ. ಇದಕ್ಕೆ ರೋಸ್ ವಾಟರ್ ಹಾಕಿಕೊಂಡು ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳೀ. 10-15 ನಿಮಿಷ ಇದು ಒಣಗಲು ಬಿಡಿ. 15 ನಿಮಿಷ ಬಳಿಕ ವೃತ್ತಾಕಾರದಲ್ಲಿ ಸರಿಯಾಗಿ ಉಜ್ಜಿಕೊಳ್ಳಿ ಮತ್ತು ತಣ್ಣೀರಿನಿಂದ ತೊಳೆಯಿರಿ.

ಅಲೋವೆರಾ ಮತ್ತು ಲಿಂಬೆ ಸಿಪ್ಪೆ ಹುಡಿ
ಈ ಪ್ಯಾಕ್ ಮುಖದ ಮೇಲಿನ ಕೆಂಪು ಕಲೆ ಮತ್ತು ಬಿಸಿಲಿನಿಂದ ಸುಟ್ಟ ಗಾಯ ಕಡಿಮೆ ಮಾಡುವುದು. ಇದರಿಂದ ಮುಖದ ಕಾಂತಿ ಹಾಗೂ ಬಣ್ಣ ವೃದ್ಧಿಸುವುದು.

ಬೇಕಾಗುವ ಸಾಮಗ್ರಿಗಳು
2 ಚಮಚ ಲಿಂಬೆಸಿಪ್ಪೆ ಹುಡಿ
2 ಚಮಚ ಅಲೋವೆರಾ ಲೋಳೆ
ಕೆಲವು ಹನಿ ಲಿಂಬೆ ರಸ

ತಯಾರಿಸುವ ವಿಧಾನ
ತಾಜಾ ಅಲೋವೆರಾ ಎಲೆ ತೆಗೆದು ಅದರ ಲೋಳೆ ಹೊರ ತೆಗೆಯಿರಿ. ತಾಜಾ ಅಲೋವೆರಾ ಎಲೆ ಸಿಗದೆ ಇದ್ದರೆ ಮಾರುಕಟ್ಟೆಯಲ್ಲಿ ಸಿಗುವುದನ್ನು ಬಳಸಿ. ಇದಕ್ಕೆ ಎರಡು ಚಮಚ ಲಿಂಬೆಸಿಪ್ಪೆ ಹುಡಿ ಮತ್ತು ಕೆಲವು ಹನಿ ಲಿಂಬೆರಸ ಹಾಕಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಒಣಗಲು ಬಿಡಿ. ನೀರಿನಿಂದ ತೊಳೆದು ಒರೆಸಿಕೊಳ್ಳಿ. ಲಿಂಬೆಯಿಂದ ತಯಾರಿಸಬಹುದಾದ ಈ ಸರಳ ಮಾಸ್ಕ್ ಗಳು ನಿಮ್ಮ ತ್ವಚೆಗೆ ಕಾಂತಿ ಹಾಗೂ ಬಣ್ಣ ನೀಡುವುದು. ವಾರದಲ್ಲಿ ಒಂದು ಸಲ 1-2 ತಿಂಗಳ ಕಾಲ ಇದನ್ನು ಹೀಗೆ ಮುಂದುವರಿಸಿದರೆ ಫಲಿತಾಂಶ ಖಚಿತ.

ಗಂಧದ ಪುಡಿ ಮತ್ತು ಲಿಂಬೆಪುಡಿ
ಎರಡು ಚಿಕ್ಕಚಮಚ ಗಂಧದ ಪುಡಿ ಮತ್ತು ಒಂದು ಚಿಕ್ಕ ಚಮಚ ಲಿಂಬೆರಸ ಬೆರೆಸಿ. ಇದಕ್ಕೆ ಎರಡು ಚಮಚ ಲಿಂಬೆಸಿಪ್ಪೆಯ ಪುಡಿ ಸೇರಿಸಿ ಒಂದು ಚಮಚ ಹಸಿ ಹಾಲು ಬೆರೆಸಿ. ಇವೆಲ್ಲವನ್ನೂ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಹಾಲಿನ ಕೆನೆ ಮತ್ತು ಜೇನು ತುಪ್ಪದ ಜೊತೆಗೆ
ಸುಂದರವಾದ ತುಟಿಗೆಳಿಗಾಗಿ ಲಿಂಬೆಹಣ್ಣನ್ನು ಬಳಸಿ... ಲಿಂಬೆ ಹಣ್ಣಿನ ರಸವು ನಿಮ್ಮ ತುಟಿಗಳಿಗು ಸಹ ಉಪಯೋಗಕಾರಿ. ಒಣಗಿದ, ನಿಸ್ತೇಜಗೊಂಡ ಮತ್ತು ಒಡೆದ ತುಟಿಗಳಿಗೆ ಲಿಂಬೆ ಹಣ್ಣಿನ ರಸವನ್ನು ಹಚ್ಚಿ. ಲಿಂಬೆ ಹಣ್ಣಿನ ರಸವನ್ನು ಹಾಲಿನ ಕೆನೆ ಮತ್ತು ಜೇನು ತುಪ್ಪದ ಜೊತೆಗೆ ಬೆರೆಸಿ ನಿಮ್ಮ ಮನೆಯಲ್ಲೇ ಒಂದು ಉತ್ತಮ ಸ್ವಾಭಾವಿಕ ಲಿಪ್ ಬಾಮ್ ಅನ್ನು ತಯಾರಿಸಿಕೊಳ್ಳಬಹುದು. ಈ ಬಾಮ್ ನಿಮ್ಮ ತುಟಿಗೆ ಆರೋಗ್ಯವನ್ನು ಮತ್ತು ಮಾಯಿಶ್ಚರೈಸ್ ಅನ್ನು ಒದಗಿಸಲು ನೆರವಾಗುತ್ತದೆ.

ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಲಿಂಬೆರಸ
ನಿಮ್ಮ ಕೈಗಳು ನಿಮ್ಮ ಮುಖದಷ್ಟೇ ಜನರ ಕಣ್ಣಿಗೆ ಕಾಣುವ ಒಂದು ಅಂಗವಾಗಿರುತ್ತದೆ. ಹಾಗಾಗಿ ಇದನ್ನು ಸಹ ನೀವು ಕಡೆಗಣಿಸದೆ, ಅಗತ್ಯವಾದ ಆರೈಕೆಯನ್ನು ಆಗಾಗ ಮಾಡುತ್ತಿರಬೇಕು. ನಿಮ್ಮ ಕೈಗಳಿಗೆ ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಲಿಂಬೆರಸವನ್ನು ಬೆರೆಸಿದ ಮಿಶ್ರಣವನ್ನು ಲೇಪಿಸಿ, ಮಸಾಜ್ ಮಾಡುತ್ತ ಬನ್ನಿ. ನಿಮ್ಮ ಕೈಗಳು ಮೃದು ಮತ್ತು ಶುಭ್ರವಾಗುವುದನ್ನು ನೀವೇ ನೋಡುವಿರಿ. ಇದು ಹಠಮಾರಿಯಂತೆ ಕೂತ ಮೊಣಕೈನ ಕಪ್ಪನೆಯ ಒರಟು ಚರ್ಮವನ್ನು ಸಹ ಹೋಗಲಾಡಿಸುತ್ತದೆ.

English summary

Try Out This Magical Ingredient For Glowing Skin

Lemons are packed with antioxidants and they contain some important minerals and vitamins. But did you know that apart from its health benefits, lemons can even help in enhancing your beauty? Yes, you just read that right! Lemons can be used in the form of masks and packs to gain a young and beautiful skin. let's see how to use lemon in your everyday skin care routine.
X
Desktop Bottom Promotion