For Quick Alerts
ALLOW NOTIFICATIONS  
For Daily Alerts

ಬೆನ್ನಿನ ಮೇಲೆ ಕಾಣಿಸುವ ಮೊಡವೆಗಳಿಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

By Arshad
|

ಬ್ಯಾಕ್ನೆ ಅಥವಾ ಬೆನ್ನಿನ ಮೇಲ್ಭಾಗದಲ್ಲಿ ಮೂಡುವ ಮೊಡವೆಗಳು ಕೆಲವೊಮ್ಮೆ ಕಿರಿಕಿರಿ ತರಿಸಬಹುದು. ಬೆನ್ನಿನ ಮೇಲಿರುವ ಮೊಡವೆ ಕಾಣದದಿರುವುದರಿಂದ ಉಡುಪು ಧರಿಸಿ ಹೊರಹೋದ ಬಳಿಕವೇ ಚಿಕ್ಕದಾಗಿ ತುರಿಕೆ ಅಥವಾ ಉರಿಯಾಗುತ್ತಾ ತನ್ನ ಇರುವಿಕೆಯನ್ನು ಪ್ರಕಟಿಸಿ ಮುಜುಗರ ತರಿಸುತ್ತದೆ. ಒಂದಲ್ಲಾ ಒಂದು ಹಂತದಲ್ಲಿ ನಾವೆಲ್ಲಾ ಈ ಕಾಟಕ್ಕೆ ಒಳಗಾಗಿಯೇ ಇದ್ದೇವೆ. ತ್ವಚೆಯ ಸೂಕ್ಷ್ಮರಂಧ್ರ ಮುಚ್ಚಿಹೋಗಿ ಒಳಗಿನ ಕಲ್ಮಶ ಹೊರಬರದೇ ಚರ್ಮದಡಿಯಲ್ಲಿ ಸಂಗ್ರಹಗೊಳ್ಳುತ್ತಾ ಸೋಂಕಿಗೊಳಗಾಗುತ್ತದೆ ಹಾಗೂ ಕೀವು ತುಂಬಿಕೊಂಡು ಚರ್ಮವನ್ನು ಹೊರದೂಡಿ ಮೊಡವೆಯ ಆಕಾರ ತಾಳುತ್ತದೆ. ಸ್ವಚ್ಛತೆಯ ಕೊರತೆ, ವಾತಾವರಣದ ಬದಲಾವಣೆ, ರಾಸಾಯನಿಕ ಆಧಾರಿತ ಉತ್ಪನ್ನಗಳ ಅತಿಯಾದ ಬಳಕೆ ಮೊದಲಾದವು ಇದಕ್ಕೆ ಕಾರಣವಾಗಿವೆ.

home remedies to treat back acne

ಮೊಡವೆಯ ಅಡಿಯಲ್ಲಿ ಕೀವು ಹೆಚ್ಚುತ್ತಿದ್ದಂತೆಯೇ ಚರ್ಮದ ಸೂಕ್ಷ್ಮರಂಧ್ರವೂ ಮುಚ್ಚಿಹೋಗುತ್ತದೆ ಹಾಗೂ ಇದರ ಮೇಲೆ ಸತ್ತ ಜೀವಕೋಶದ ಪದರವೂ ಕೀವು ಹೊರಬರದಂತೆ ಇನ್ನಷ್ಟು ಅಡ್ಡಿಯಾಗುವ ಮೂಲಕ ಮೊಡವೆಯ ಗಾತ್ರ ಹೆಚ್ಚಲು ಸಾಧ್ಯವಾಗುತ್ತದೆ. ಒಂದು ಹಂತದಲ್ಲಿ ಒಳಗಿನ ಒತ್ತಡ ಹೆಚ್ಚಾಗಿ ಚರ್ಮ ಹರಿದು ಒಳಗಿನ ಕೀವು ಹೊರಸಿಡಿಯಬಹುದು ಹಾಗೂ ತೊಟ್ಟ ಬಟ್ಟೆಯನ್ನೂ ಮಲಿನಗೊಳಿಸಿ ಇತರರ ಗಮನ ಸೆಳೆಯಲು ಕಾರಣವಾಗಬಹುದು. ಹಾಗಾಗಿ ಈ ಮೊಡವೆಗಳು ಬರದೇ ಇರಲಾದರೂ ಸರಿ ಆರೋಗ್ಯಕರ ಜೀವನಕ್ರಮವನ್ನು ಅಳವಡಿಸಿಕೊಳ್ಳುವುದು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ. ಇದರೊಂದಿಗೆ ಸುಲಭ ಮನೆಮದ್ದುಗಳೂ ಸಾಕಷ್ಟು ನೆರವು ನೀಡಬಲ್ಲವು.

ಒಂದು ವೇಳೆ ನಿಮ್ಮ ಬೆನ್ನಿನ ಮೇಲೂ ಮೊಡವೆಗಳಿದ್ದರೆ ಇದನ್ನು ನಿವಾರಿಸಲು ಕೆಲವು ಉತ್ತಮವಾದ ಮನೆಮದ್ದುಗಳಿವೆ ಹಾಗೂ ನಿತ್ಯದ ಆರೈಕೆಯಲ್ಲಿ ಅಳವಡಿಸಿಕೊಂಡು ಇವುಗಳನ್ನು ನಿವಾರಿಸಿಕೊಳ್ಳಬಹುದು ಮಾತ್ರವಲ್ಲ, ಮತ್ತೆ ಬರದಂತೆ ನಿಯಂತ್ರಿಸಲೂ ಸಾಧ್ಯ. ಬನ್ನಿ ನೋಡೋಣ:

ನಿಯಮಿತವಾಗಿ ಸತ್ತ ಜೀವಕೋಶಗಳ ಪದರವನ್ನು ನಿವಾರಿಸಿ

ನಿಯಮಿತವಾಗಿ ಸತ್ತ ಜೀವಕೋಶಗಳ ಪದರವನ್ನು ನಿವಾರಿಸಿ

ಮೊಡವೆಗಳು ಮೂಡಲು ಪ್ರಮುಖ ಕಾರಣವೆಂದರೆ ಸೂಕ್ಷ್ಮರಂಧ್ರಗಳು ಮುಚ್ಚಿಹೋಗುವುದು. ಮುಖದ ತ್ವಚೆಯಂತೆಯೇ ಬೆನ್ನಿನ ಚರ್ಮದಲ್ಲಿಯೂ ಎಣ್ಣೆಪಸೆ ಮೂಡುತ್ತದೆ ಹಾಗೂ ಈ ಪಸೆಯಲ್ಲಿ ಸತ್ತ ಜೀವಕೋಶಗಳು ಅಂಟಿಕೊಂಡು ತೆಳುವಾದ ಪದರದಂತೆ ಚರ್ಮದ ಹೊರಭಾಗದಲ್ಲಿ ಅಂಟಿಕೊಳ್ಳುತ್ತವೆ. ಇದೇ ಮೊಡವೆಗಳಿಗೆ ಪ್ರಮುಖ ಕಾರಣವಾಗಿದೆ. ಹೆಚ್ಚು ಹೆಚ್ಚು ಎಣ್ಣೆಪಸೆ ಸ್ರವಿಸಿದಷ್ಟೂ ಸತ್ತ ಜೀವಕೋಶಗಳು ಅಂಟಿಕೊಳ್ಳುವ ಪ್ರಮಾಣವೂ ಹೆಚ್ಚುತ್ತಾ ಮೊಡವೆಗಳಾಗುವ ಮತ್ತು ದೊಡ್ಡ ಗಾತ್ರ ಪಡೆಯುವ ಸಾದ್ಯತೆಯೂ ಹೆಚ್ಚುತ್ತದೆ. ಹಾಗಾಗಿ ಈ ಪದರವನ್ನು ನಿವಾರಿಸುತ್ತಾ ತ್ವಚೆಯನ್ನು ಸ್ವಚ್ಛವಾಗಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ.ಇದಕ್ಕಾಗಿ ನಿಮ್ಮ ನೆಚ್ಚಿನ ಚರ್ಮ ಉಜ್ಜುವ ವಿಧಾನವನ್ನು ಅನುಸರಿಸಬಹುದು ಆದರೆ ನಿಯಮಿತವಾಗಿ ಅನುಸರಿಸುವುದು ತುಂಬಾ ಮುಖ್ಯವಾಗಿದೆ. ಮೊಡವೆಗಳು ಮೂಡದೇ ಇರಲು ಕನಿಷ್ಟ ವಾರಕ್ಕೊಮ್ಮೆಯಾದರೂ ಈ ಪದರವನ್ನು ಉಜ್ಜಿ ನಿವಾರಿಸಿ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ.

ತ್ವಚೆ ಉಸಿರಾಡಲು ಅನುವು ಮಾಡಿಕೊಡಿ:

ತ್ವಚೆ ಉಸಿರಾಡಲು ಅನುವು ಮಾಡಿಕೊಡಿ:

ನಿಮ್ಮ ನೆಚ್ಚಿನ ಮೈಗಂಟುವ ದಿರಿಸು ಸಹಾ ಬೆನ್ನಿನಲ್ಲಿ ಮೊಡವೆ ಮೂಡಿಸಲು ಕಾರಣವಾಗಬಹುದು ಎಂದು ನಿಮಗೆ ಗೊತ್ತಿತ್ತೇ? ಹೌದು, ನೀವು ಸರಿಯಾಗಿಯೇ ಓದಿದಿರಿ. ತ್ವಚೆಯನ್ನು ಅಪ್ಪಿ ಹಿಡಿಯುವ ಉಡುಪುಗಳು ತ್ವಚೆಯ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಬೆವರು ಹೊರಬರದಂತೆ ತಡೆಯುತ್ತದೆ ಹಾಗೂ ಇದೇ ಕಾರಣಕ್ಕೆ ಬೆನ್ನಿನ ಮೇಲ್ಭಾಗದಲ್ಲಿಯೇ ಅಂದರೆ ಉಡುಪು ತ್ವಚೆಯನ್ನು ಹೆಚ್ಚು ಒತ್ತಿರುವ ಭಾಗದಲ್ಲಿಯೇ ಮೊಡವೆಗಳಾಗುತ್ತವೆ. ಒಮ್ಮೆ ಈ ಮೊಡವೆಗಳು ಪ್ರಾರಂಭವಾದರೆ ಇವು ನಿಧಾನವಾಗಿ ಕೆಳಬೆನ್ನಿನತ್ತ ವ್ಯಾಪಿಸುತ್ತಾ ಇಡಿಯ ಬೆನ್ನನ್ನೇ ಆವರಿಸಿಬಿಡಬಹುದು! ಹಾಗಾಗಿ ಬೆನ್ನಿನ ಮೇಲ್ಬಾಗದಲ್ಲಿ ಮೊಡವೆ ಮೂಡಲು ಪ್ರಾರಂಭವಾಯಿತೋ ತಕ್ಷಣವೇ ಬಿಗಿ ಉಡುಪುಗಳನ್ನು ಬಿಟ್ಟು ಸಡಿಲವಾದ ಮತ್ತು ಹತ್ತಿಯ ಉಡುಪುಗಳನ್ನೇ ತೊಡಲು ಪ್ರಾರಂಭಿಸಬೇಕು.

ವ್ಯಾಯಾಮದ ಬಳಿಕ ಸ್ನಾನ ಮರೆಯದಿರಿ

ವ್ಯಾಯಾಮದ ಬಳಿಕ ಸ್ನಾನ ಮರೆಯದಿರಿ

ಮೊದಲೇ ತಿಳಿಸಿದಂತೆ ಬೆವರಿನ ಗ್ರಂಥಿಯ ತುದಿ ಮುಚ್ಚಿಹೋದರೆ ಬೆವರು ಹೊರಬರಲಾರದೇ ಒಳಗೇ ಗಡ್ಡೆಯಾಗುತ್ತದೆ ಹಾಗೂ ಇದೇ ಮೊಡವೆಗಳಿಗೆ ಕಾರಣವಾಗುತ್ತದೆ. ನಿಮ್ಮ ನಿತ್ಯದ ವ್ಯಾಯಾಮದ ಬಳಿಕ ಸ್ನಾನ ಮಾಡಲು ಎಂದೂ ಮರೆಯಬಾರದು. ಏಕೆಂದರೆ ಈ ಅವಧಿಯಲ್ಲಿ ಒಸರಿದ ಹೆಚ್ಚಿನ ಬೆವರು ತ್ವಚೆಯಿಂದ ಹೊರಬೀಳುವುದು ಅಗತ್ಯವಾಗಿದೆ. ಸ್ನಾನವಿಲ್ಲದೇ ಇದ್ದರೆ ಇದು ಮೊಡವೆಗಳ ಸಹಿತ ಇತರ ಗಂಭೀರ ಚರ್ಮಸಂಬಂಧಿ ತೊಂದರೆಗಳನ್ನೂ ತಂದೊಡ್ಡಬಲ್ಲುದು.

ಮೃದುವಾದ ಬಟ್ಟೆಯನ್ನು ಬಳಸಿ

ಮೃದುವಾದ ಬಟ್ಟೆಯನ್ನು ಬಳಸಿ

ಸ್ನಾನದ ಬಳಿಕ ಟವೆಲ್ಲಿನಿಂದ ತ್ವಚೆಯನ್ನು ಗಸಗಸ ಉಜ್ಜಬಾರದು, ಏಕೆಂದರೆ ಇದು ಈಗಾಗಲೇ ಇರುವ ಮೊಡಗೆಗಳ ತುದಿಯನ್ನು ಹರಿದು ಸೋಂಕು ಇನ್ನಷ್ಟು ಹರಡಲು ಕಾರಣವಾಗಬಹುದು! ಈ ಮೊಡವೆಗಳು ಹರಡದಂತೆ ತಡೆಯಲು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಮೃದುವಾದ ಬಟ್ಟೆ ಅಥವಾ ಟವೆಲನ್ನೇ ಬಳಸಿ ಹಾಗೂ ಸ್ನಾನದ ಬಳಿಕ ಚರ್ಮದ ಮೇಲೆ ಉಳಿದ ನೀರನ್ನು ಹೀರಿಕೊಳ್ಳಲು ಒತ್ತಿ ಒರೆಸಿಕೊಳ್ಳಿ, ಚರ್ಮದ ಮೇಲೆ ಜಾರಿಸದಿರಿ. ಅಲ್ಲದೇ ವಿಶೇಷವಾಗಿ ಮೊಡವೆಗಳಿರುವ ಭಾಗದ ಮೇಲೆ ಸೌಮ್ಯವಾಗಿ ಟವೆಲ್ಲನ್ನು ಬಳಸಿ.

ಬಾಡಿ ಲೋಶನ್ ಬಳಸಿ

ಬಾಡಿ ಲೋಶನ್ ಬಳಸಿ

ಬಾಡಿ ಲೋಶನ್ ದ್ರಾವಣದ ಬಳಕೆಯಿಂದ ತ್ವಚೆಗೆ ಅಗತ್ಯವಾದ ಆರ್ದ್ರತೆ ದೊರಕುವ ಮೂಲಕ ಉತ್ತಮ ಆರೈಕೆ ದೊರಕುವ ಜೊತೆಗೇ ಮೊಡವೆಗಳನ್ನು ಶೀಘ್ರವಾಗಿ ಗುಣಪಡಿಸಲೂ ಸಾಧ್ಯವಾಗುತ್ತದೆ. ತ್ವಚೆಗೆ ಸೂಕ್ತ ತೇವ ಒದಗಿಸದೇ ಇದ್ದಲ್ಲಿ ಚರ್ಮದಿಂದ ಹೆಚ್ಚು ಹೆಚ್ಚು ಎಣ್ಣೆಪಸೆ ಸಂಗ್ರಹಗೊಳ್ಳಲು ಸಾಧ್ಯವಾಗುತ್ತದೆ ಹಾಗೂ ಮೊಡವೆಗಳು ದೊಡ್ಡದಾಗಿ ಚರ್ಮವನ್ನು ಹರಿದು ಒಡೆಯುವ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ ನಿಯಮಿತವಾಗಿ ಬೆನ್ನಿನ ತ್ವಚೆಗೂ ಬಾಡಿ ಲೋಶನ್ ಅಥವಾ ಸೂಕ್ತ ತೇವಕಾರಕವನ್ನು ಹೆಚ್ಚಿಕೊಂಡು ಆರೈಕೆ ನೀಡಬೇಕು.

ಮೊಡವೆಗಳನ್ನು ಒಡೆಯದಿರಿ

ಮೊಡವೆಗಳನ್ನು ಒಡೆಯದಿರಿ

ಮೊಡವೆಗಳನ್ನು ಚಿವುಟಿ ಕೀವನ್ನು ಹೊರತೆಗೆಯುವ ಮೂಲಕ ಮೊಡವೆಯ ತುದಿ ಮಾತ್ರವನ್ನೇ ನಿವಾರಿಸಿದಂತಾಗುತ್ತದೆಯೇ ವಿನಃ ಬುಡದ ಸೋಂಕು ಹಾಗೇ ಇರುತ್ತದೆ. ಇದರಿಂದ ಒಳಗಿನ ಬ್ಯಾಕ್ಟೀರಿಯಾಗಳಿಗೆ ಇನ್ನಷ್ಟು ವೃದ್ದಿಗೊಳ್ಳಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಹಾಗೂ ಇವು ತೆರೆದ ಮೊಡವೆಯ ರಂಧ್ರದಿಂದ ಅಕ್ಕಪಕ್ಕದ ತ್ವಚೆಯ ಸೂಕ್ಷ್ಮರಂಧ್ರಗಳಿಗೆ ದಾಟಿಕೊಂಡು ಅಲ್ಲಿಯೂ ಮೊಡವೆಗಳನ್ನು ಸ್ಥಾಪಿಸುತ್ತವೆ. ಮೊಡವೆ ಹರಡಲು ಇದೇ ಕಾರಣ! ಹಾಗಾಗಿ ಮುಂದಿನ ಬಾರಿ ಮೊಡವೆಯನ್ನು ಒಡೆಯುವ ಮನಸ್ಸಾದರೆ ಇದರಿಂದ ಎದುರಾಗುವ ಪರಿಣಾಮಗಳ ಬಗ್ಗೆ ಮೊದಲು ಗಮನ ಹರಿಸಿ.

ಕಂಡೀಶನರ್ ಬಳಸಿದ್ದರೆ ತೊಳೆದುಕೊಳ್ಳುವುದನ್ನು ಮರೆಯದಿರಿ

ಕಂಡೀಶನರ್ ಬಳಸಿದ್ದರೆ ತೊಳೆದುಕೊಳ್ಳುವುದನ್ನು ಮರೆಯದಿರಿ

ಸಾಮಾನ್ಯವಾಗಿ ತಲೆಗೂದಲಿಗೆ ಕಂಡೀಶನರ್ ಹಾಕಿ ತೊಳೆದುಕೊಂಡ ಬಳಿಕ ಬೆನ್ನನ್ನು ಸೋಪಿನಿಂದ ತೊಳೆದುಕೊಳ್ಳುವುದನ್ನು ಮರೆತುಬಿಡುತ್ತೇವೆ. ಏಕೆಂದರೆ ನಮ್ಮ ಗಮನವೆಲ್ಲಾ ತಲೆಗೂದಲಿನತ್ತಲೇ ಹೆಚ್ಚು ಕೇಂದ್ರೀಕೃತವಾಗಿದ್ದು ಇದರ ನೊರೆ ಬೆನ್ನಿನ ಮೇಲೆ ಉಳಿದುಬಿಡುತ್ತದೆ. ಇದಕ್ಕೊಂದು ಪರಿಹಾರವಿದೆ, ಮುಂದಿನ ಬಾರಿ ಕಂಡೀಶನರ್ ಹಚ್ಚಿಕೊಂಡ ಬಳಿಕ ತಲೆಗೂದಲನ್ನು ಶವರ್ ಕ್ಯಾಪ್ ಒಂದರಲ್ಲಿ ಬಂಧಿಸಿ ಕೆಳಕ್ಕಿಳಿಯದಂತೆ ತಡೆಯಿರಿ. ಸಾಮಾನ್ಯವಾಗಿ ಕಂಡೀಶನರ್ ಗಳಲ್ಲಿರುವ ರಾಸಾಯನಿಕಗಳು ಕೂದಲಿಗೆ ಮಾತ್ರವೇ ಸೂಕ್ತವಾಗಿದ್ದು ಬೆನ್ನಿನ ತ್ವಚೆಯ ಮೇಲೆ ಹಾದುಹೋದರೆ ಉರಿಯುಂಟುಮಾಡಬಹುದು. ಹಾಗಾಗಿ ಕಂಡೀಶನರ್ ಬಳಕೆಯ ನಂತರ ಬೆನ್ನಿನ ಚರ್ಮವನ್ನು ಸೋಪು ಬಳಸಿ ಉಜ್ಜಿಕೊಂಡು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ.

ಒಂದು ವೇಳೆ ಮೇಲಿನ ವಿಧಾನಗಳನ್ನು ಅನುಸರಿಸಿದ ಬಳಿಕವೂ ಬೆನ್ನಿನ ಮೊಡವೆ ಕಡಿಮೆಯಾಗದೇ ಇದ್ದರೆ ಆದಷ್ಟೂ ಬೇಗನೇ ಚರ್ಮವೈದ್ಯರ ಸಲಹೆ ಪಡೆಯುವುದು ಸೂಕ್ತ. ಒಂದು ವೇಳೆ ಈ ಸಲಹೆಗಳು ಉಪಯುಕ್ತ ಎನಿಸಿದರೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.

English summary

Tips And Tricks To Get Rid Of Back Acne

Bacne or back acne can be irritating enough at times. Back acne appears usually when there are clogged and unclean pores, lack of hygiene, climate change, overuse of chemical-infused products, etc. Making some lifestyle changes and following some home remedies can always help. Exfoliating your skin regularly & applying lotion will work.
Story first published: Thursday, September 6, 2018, 13:40 [IST]
X
Desktop Bottom Promotion