For Quick Alerts
ALLOW NOTIFICATIONS  
For Daily Alerts

  ಸೌಂದರ್ಯ ವಿಷಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ...

  |

  ನಿತ್ಯಜೀವನದಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ಬಗೆಯ ಚರ್ಮಸಂಬಂಧಿ ತೊಂದರೆಯನ್ನು ಅನುಭವಿಸಿಯೇ ಇರುತ್ತೇವೆ. ಒಣಚರ್ಮ, ಬಿಸಿಲಿಗೆ ಕಪ್ಪಗಾಗುವುದು, ಮೊಡವೆಗಳು, ಗಾಯದ ಗುರುತುಗಳು ಮೊದಲಾದವುಗಳು ಈ ಪಟ್ಟಿಯನ್ನು ಉದ್ದವಾಗಿಸುತ್ತಲೇ ಹೋಗುತ್ತವೆ. ಇವೆಲ್ಲವೂ ಸಾಮಾನ್ಯವಾಗಿ ಎದುರಾಗುವ ತೊಂದರೆಗಳಾಗಿದ್ದು ಹಲವರಿಗೆ ಇದು ಅನುವಂಶಿಕವಾಗಿಯೂ ಆಗಮಿಸಿರಬಹುದು. ಕೆಲವರ ದೇಹದಲ್ಲಿ ರಸದೂತಗಳ ಏರುಪೇರು, ಪರ್ಯಾವರಣ ಕಾರಣಗಳು, ಉದಾಹರಣೆಗೆ ಧೂಳು, ಪ್ರದೂಷಣೆ, ಬಿಸಿಲಿಗೆ ಅತಿಯಾಗಿಯೇ ಒಡ್ದಿಕೊಳ್ಳುವುದು ಮೊದಲಾದವು ಈ ತೊಂದರೆಗಳನ್ನು ತಂದಿರಿಸಿರಬಹುದು.

  ಇದರಲ್ಲಿ ಕೆಲವು ಮುಜುಗರ ತರಿಸುವಂತಹ ತೊಂದರೆಗಳೂ ಇವೆ ಹಾಗೂ ಇವುಗಳನ್ನು ದೂರವಾಗಿಸಲು ಜಾಹೀರಾತುಗಳ ಮೊರೆಹೋಗಿ ದುಬಾರಿ ಪ್ರಸಾಧನಗಳನ್ನು ನಾವೆಲ್ಲಾ ಪ್ರಯತ್ನಿಸಿಯೇ ಇದ್ದೇವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ತೊಂದರೆಗಳಿಗೆ ನಮ್ಮ ನಿರ್ಲಕ್ಷ್ಯ ಹಾಗೂ ಅರಿವಿಲ್ಲದೇ ಮಾಡುವ ತಪ್ಪುಗಳೂ ಕಾರಣವಾಗಿವೆ ಎಂಬುದನ್ನು ಧಾರಾಳವಾಗಿ ಮರೆತು ಬಿಡುತ್ತೇವೆ. ಪರಿಣಾಮವಾಗಿ ತ್ವಚೆ ಘಾಸಿಗೊಳ್ಳುತ್ತದೆ.

  ಒಂದು ವೇಳೆ ನಿಮ್ಮ ಈಗಿನ ನಿತ್ಯದ ಸೌಂದರ್ಯ ಪ್ರಸಾಧನಗಳು ಈ ತೊಂದರೆಯನ್ನು ತೃಪ್ತಿಕರವಾಗಿ ನಿವಾರಿಸುತ್ತಿಲ್ಲದಿದ್ದರೆ ಅಥವಾ ನೀವು ಈಗ ಅನುಸರಿಸುತ್ತಿರುವ ಕಾಳಜಿಯ ವಿಧಾನಗಳು ದೀರ್ಘಾವಧಿಯಲ್ಲಿ ನಿಮಗೆ ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಹೆಚ್ಚಾಗಿ ಮಾಡುತ್ತಿದ್ದರೆ, ಕೆಳಗೆ ವಿವರಿಸಿರುವ ಕೆಲವು ಮಾಹಿತಿಗಳು ನಿಮ್ಮನ್ನು ಸರಿದಾರಿಗೆ ತರಲು ನೆರವಾಗಬಹುದು....

  Pimples

  ಅತಿ ಹೆಚ್ಚು ಚರ್ಮವನ್ನು ಉಜ್ಜಿಕೊಳ್ಳುವುದು

  ತ್ವಚೆಯ ಹೊರಪದರದಲ್ಲಿ ಸತ್ತಜೀವಕೋಶಗಳು ಸಂಗ್ರಹವಾಗುತ್ತಲೇ ಇರುತ್ತವೆ. ಕಾಲಕಾಲಕ್ಕೆ ಇವನ್ನು ಕೆರೆದು ಸ್ವಚ್ಛಗೊಳಿಸುತ್ತಲೇ ಇರಬೇಕು. ಆದರೆ ಈ ಪದರವನ್ನು ನಿವಾರಿಸಲು ಅಗತ್ಯಕ್ಕೂ ಹೆಚ್ಚು ಒತ್ತಡ ಹೇರಿದರೆ ಅಥವಾ ಹೆಚ್ಚು ಕಾಲ ಮುಂದುವರೆಸಿದರೆ ಇದು ಚರ್ಮದ ಅವಶ್ಯಕ ಪದರವನ್ನೇ ನಿವಾರಿಸಿಬಿಡಬಹುದು. ಆದ್ದರಿಂದ ಸೌಮ್ಯವಾದ ಫೇಸ್ ವಾಶ್ ಬಳಸಿ ಈ ಪದರವನ್ನು ನಿವಾರಿಸಿ. ವಿಶೇಷವಾಗಿ ಮೊಡವೆಗಳಿರುವಲ್ಲಿ ಹೆಚ್ಚಿನ ಒತ್ತಡ ಬೀಳದಂತೆ ಕಾಳಜಿ ವಹಿಸಿ.

  ತಪ್ಪಾದ ಉತ್ಪನ್ನಗಳನ್ನು ಬಳಸುವುದು

  ತ್ವಚೆಗೆ ಸಂಬಂಧಿಸಿದ ಉತ್ಪನ್ನಗಳು ತ್ವಚೆಯ ಬಗೆಯನ್ನು ಅನುಸರಿಸಿಯೇ ಉತ್ಪಾದಿಸಲಾಗಿರುತ್ತದೆ. ಹಾಗಾಗಿ ನಿಮ್ಮ ತ್ವಚೆ ಯಾವ ಬಗೆಯದ್ದೆಂದು ತಿಳಿದುಕೊಂಡು ಅದಕ್ಕೆ ಸೂಕ್ತವಾದ ಉತ್ಪನ್ನಗಳನ್ನೇ ಕೊಳ್ಳಬೇಕು ಹಾಗೂ ಸೂಚಿಸಿದ ವಿಧಾನ ಮತ್ತು ಪ್ರಮಾಣದಷ್ಟೇ ಬಳಸಬೇಕು. ಒಂದು ವೇಳೆ ನಿಮ್ಮ ತ್ವಚೆಗೆ ಹೊಂದಿಕೊಳ್ಳದ ಉತ್ಪನ್ನಗಳನ್ನು ಅರಿವಿಲ್ಲದೇ ಖರೀದಿಸಿ ಬಳಸಿದರೆ ನಿಮ್ಮ ಮುಖದಲ್ಲಿ ಮೊಡವೆಗಳು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ ಖಚಿತಪಡಿಸಿಕೊಂಡೇ ಉತ್ಪನ್ನಗಳನ್ನು ಖರೀದಿಸಿ, ಅನುಮಾನವಿದ್ದರೆ ಸಂಬಂಧಪಟ್ಟ ವ್ಯಕ್ತಿಗಳ ಸಲಹೆಯನ್ನು ಪಡೆಯಿರಿ.

  ತೇವಕಾರಕ ಬಳಸದೇ ಇರುವುದು

  ಎಣ್ಣೆಚರ್ಮದಲ್ಲಿ ಮೊಡವೆಗಳಾಗುವ ಸಾಧ್ಯತೆ ಹೆಚ್ಚು. ಒಂದು ವೇಳೆ ನಿಮ್ಮ ತ್ವಚೆ ಎಣ್ಣೆಚರ್ಮವಾಗಿದ್ದರೆ ಇದಕ್ಕೆ ತೇವಕಾರಕ ಹಚ್ಚಿಕೊಳ್ಳುವುದರಿಂದ ಎಣ್ಣೆ ಪಸೆ ಇನ್ನಷ್ಟು ಹೆಚ್ಚಿ ಸೌಂದರ್ಯ ಕುಂದುತ್ತದೆ ಎಂದು ಭಾವಿಸಿರಬಹುದು. ಆದರೆ ತೇವಕಾರಕ (ಮಾಯಿಶ್ಚರೈಸರ್) ಹಚ್ಚಿಕೊಳ್ಳದೇ ಇದ್ದರೆ ಮೊಡವೆಗಳಾಗುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ. ಹಾಗಾಗಿ ತ್ವಚೆಯಲ್ಲಿ ಸಾಕಷ್ಟು ಆರ್ದ್ರತೆ ಇರಬೇಕಾದರೆ ಅಗತ್ಯ ಪ್ರಮಾಣದ ತೇವಕಾರಕವನ್ನು ತಪ್ಪದೇ ಹಚ್ಚಿಕೊಳ್ಳಬೇಕು.

  stress

  ಮಾನಸಿಕ ಒತ್ತಡ

  ಮಾನಸಿಕ ಒತ್ತಡದಿಂದಲೂ ಮೊಡವೆಗಳು ಹೆಚ್ಚಾಗಬಹುದು. ಕೇವಲ ದೈಹಿಕ ಕಾರಣಗಳು ಮಾತ್ರವಲ್ಲ, ಮಾನಸಿಕ ಕಾರಣಗಳೂ ಮೊಡವೆಗಳಿಗೆ ಕಾರಣವಾಗುತ್ತವೆ. ಇದರಲ್ಲಿ ಮಾನಸಿಕ ಒತ್ತಡ ಅತಿ ಹೆಚ್ಚು ಪ್ರಭಾವ ಬೀರುತ್ತದೆ. ಯಾವಾಗ ಮಾನಸಿಕ ಒತ್ತಡ ಹೆಚ್ಚುತ್ತದೆಯೋ ಆಗೆಲ್ಲಾ ಇದನ್ನು ಕಡಿಮೆಗೊಳಿಸಲು ಧ್ಯಾನ, ಓದು, ಕ್ಷಿಪ್ರವಾದ ನಡಿಗೆ ನಡೆಯುವುದು, ಒಟ್ಟಾರೆ ನಿಮ್ಮ ಮನಸ್ಸಿಗೆ ಮುದ ನೀಡುವ ಯಾವುದೇ ಕೆಲಸವನ್ನು ಮಾಡುವ ಮೂಲಕ ಒತ್ತಡ ಕಡಿಮೆಗೊಳಿಸಿದರೆ ಸೌಂದರ್ಯವೂ ಉಳಿದುಕೊಳ್ಳುತ್ತದೆ.

  ಮೊಡವೆಗಳನ್ನು ಚಿವುಟುವುದು

  ನಮ್ಮಲ್ಲಿ ಹೆಚ್ಚಿನವರಿಗೆ ಮೊಡವೆಗಳನ್ನು ಚಿವುಟಿ ಒಳಗಿನ ಕೀವನ್ನು ಹೊರದೂಡುವ ಅಭ್ಯಾಸವಿರುತ್ತದೆ. ಒಂದು ವೇಳೆ ನಿಮಗೂ ಈ ಅಭ್ಯಾಸವಿದ್ದರೆ ಇದನ್ನು ತಕ್ಷಣ ನಿಲ್ಲಿಸಿ! ಏಕೆಂದರೆ ಮೊಡವೆಗಳನ್ನು ಚಿವುಟುವ ಮೂಲಕ ಇದನ್ನು ನೀವು ನಿವಾರಿಸುತ್ತಿಲ್ಲ, ಬದಲಿಗೆ ಇನ್ನಷ್ಟು ಹೆಚ್ಚಲು ಕಾರಣರಾಗುತ್ತಿದ್ದೀರಿ. ಹೇಗೆಂದರೆ ಮೊಡವೆ ಚಿವುಟುವ ಮೂಲಕ ಕೇವಲ ಮೇಲ್ಭಾಗದ ಕೀವು ಮಾತ್ರವೇ ನಿವಾರಣೆಯಾಗುತ್ತದೆ ಆದರೆ ಒಳಭಾಗದ ಕೀವು ಹಾಗೇ ಇರುತ್ತದೆ ಹಾಗೂ ಈಗ ಚಿವುಟಿದ ಕಾರಣ ಚರ್ಮ ತೆರೆದಿದ್ದು ಗಾಳಿಯಲ್ಲಿರುವ ಕ್ರಿಮಿಗಳಿಗೆ ಒಳಬರಲು ಮಹಾದ್ವಾರವನ್ನು ತೆರೆದು ಒಳಬರಲು ಆಹ್ವಾನ ನೀಡಿದ್ದೀರಿ. ಇದು ಸೋಂಕನ್ನು ಉಂಟುಮಾಡಿ ರಕ್ತದ ಮೂಲಕ ಮುಖದ ಇತರ ಭಾಗಕ್ಕೂ ತೆರಳಿ ಇನ್ನಷ್ಟು ಮೊಡವೆಗಳಾಗಲು ಕಾರಣವಾಗುತ್ತದೆ. ಮುಂದಿನ ಬಾರಿ ಮೊಡವೆ ಚಿವುಟಲು ಮನಸ್ಸಾದಾಗ ಈ ವಿಷಯ ನೆನಪಿರಲಿ.

  ಸ್ವಚ್ಛವಿಲ್ಲದ ಮೊಬೈಲ್ ಫೋನ್ ಬಳಕೆ

  ನಿಮ್ಮ ಮುಖದ ಚರ್ಮದಲ್ಲಿಯೂ ಬೆವರು, ಎಣ್ಣೆಪಸೆ, ಧೂಳು ಮೊದಲಾದವು ಇರುತ್ತವೆ. ಪ್ರತಿಬಾರಿ ಮೊಬೈಲನ್ನು ಉಪಯೋಗಿಸಿದಾಗ ಇವು ಮೊಬೈಲಿನ ಕವಚಕ್ಕೆ ಅಂಟಿಕೊಳ್ಳುತ್ತವೆ. ಹಾಗಾಗಿ ಮುಂದಿನ ಬಾರಿ ಕರೆಯನ್ನು ಸ್ವೀಕರಿಸುವ ಮುನ್ನ ಮೊಬೈಲನ್ನು ಸ್ವಚ್ಛಗೊಳಿಸಿ. ಅಲ್ಲದೇ ಆಗಾಗ, ಪ್ರತಿದಿನವೂ ಸ್ವಚ್ಛಗೊಳಿಸುತ್ತಲೇ ಇರಬೇಕು. ಸ್ವಚ್ಛವಿಲ್ಲದ ಮೊಬೈಲಿನ ಮೂಲಕ ಕ್ರಿಮಿಗಳು ತ್ವಚೆಗೆ ಹತ್ತಿಕೊಂಡು ಸೋಂಕು ಹರಡುವ ಸಾಧ್ಯತೆ ಇದೆ. ಅಗತ್ಯಕ್ಕೂ ಹೆಚ್ಚು ಬಾರಿ ಮುಖ ತೊಳೆದುಕೊಳ್ಳುವುದು ಆಗಾಗ ಮುಖ ತೊಳೆದುಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ. ಆದರೆ ಪ್ರತಿಬಾರಿ ಮುಖ ತೊಳೆದುಕೊಂಡಾಗಲೂ ತ್ವಚೆಯಲ್ಲಿರುವ ನೈಸರ್ಗಿಕ ತೈಲವೂ ನಷ್ಟವಾಗುತ್ತವೆ. ಇದನ್ನು ಮರುತುಂಬಿಸಲು ಕೊಂಚ ಸಮಯಾವಕಾಶ ಬೇಕು. ಈ ತೈಲ ಪೂರ್ಣ ತುಂಬಿಕೊಳ್ಳುವ ಮುನ್ನವೇ ಮತ್ತೊಮ್ಮೆ ತೊಳೆದುಕೊಂಡರೆ? ಇದರಿಂದ ತೈಲ ಸಂಪೂರ್ಣ ನಷ್ಟವಾಗುತ್ತದೆ ಹಾಗೂ ಚರ್ಮವನ್ನು ವಿಪರೀತವಾಗಿ ಒಣಗಿಸುತ್ತದೆ. ಒಣಚರ್ಮ ಸುಲಭವಾಗಿ ಪರೆ ಬಿಡುವುದು, ಬಿರುಕು ಬಿಡುವುದು, ನೆರಿಗೆ ಮೂಡುವುದು ಮೊದಲಾದ ತೊಂದರೆಗಳಿಗೆ ಸಿಲುಕಿಕೊಳ್ಳುತ್ತದೆ. ಇದನ್ನು ಸರಿಪಡಿಸಲು ತ್ವಚೆ ಅಗತ್ಯಕ್ಕೂ ಹೆಚ್ಚು ಎಣ್ಣೆಯನ್ನು ಉತ್ಪಾದಿಸಬೇಕಾಗುತ್ತದೆ. ಹೆಚ್ಚಿನ ಎಣ್ಣೆ ಅಂದರೆ ಹೆಚ್ಚಿನ ಮೊಡವೆಗಳು. ಹಾಗಾಗಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಮುಖ ತೊಳೆದುಕೊಂಡರೆ ಸಾಕು.

  makeup

  ಮೇಕಪ್ ನಿವಾರಿಸದೇ ಮಲಗಿಕೊಳ್ಳುವುದು

  ದಿನವಿಡೀ ದಣಿದ ದೇಹ ಮನೆ ಸೇರುತ್ತಿದ್ದಂತೆಯೇ ನಿದ್ದೆಗೆ ಜಾರಲು ಹವಣಿಸುತ್ತಿದ್ದು ಮುಖದ ಮೇಕಪ್ ತೆಗೆಯಲೂ ಸೋಮಾರಿತನವಾದರೆ ಇದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಏಕೆಂದರೆ ನಿದ್ದೆಯ ಸಮಯದಲ್ಲಿ ನಮ್ಮ ತ್ವಚೆಯಲ್ಲಿ ಹಲವಾರು ಕಾರ್ಯಗಳು ಜರುಗುತ್ತವೆ. ಮೇಕಪ್ ಪದರ ಹಾಗೇ ಇದ್ದರೆ ಸೂಕ್ಷ್ಮರಂಧ್ರಗಳೆಲ್ಲಾ ಮುಚ್ಚಿ ಈ ಕಾರ್ಯಗಳು ಜರುಗಲು ಸಾಧ್ಯವಾಗದೇ ತ್ವಚೆ ಸೊರಗುತ್ತದೆ ಹಾಗೂ ತ್ವಚೆಯಲ್ಲಿ ಹೆಚ್ಚು ತೈಲ ಉತ್ಪನ್ನವಾಗುತ್ತದೆ. ಪರಿಣಾಮವಾಗಿ ಚರ್ಮದ ಒಳಪದರದಲ್ಲಿ ಸೋಂಕು ಉಂಟಾಗುತ್ತದೆ ಹಾಗೂ ಮೊಡವೆಗಳು ಮೂಡುತ್ತವೆ. ಆದ್ದರಿಂದ ಎಷ್ಟೇ ದಣಿವಾಗಿರಲಿ, ಮೇಕಪ್ ನಿವಾರಿಸಿಯೇ, ತಣ್ಣನೆಯ ನೀರಿನಿಂದ ಸ್ವಚ್ಛವಾಗಿ ಮುಖ ತೊಳೆದುಕೊಂಡೇ ಮಲಗಬೇಕು.

  ಸ್ವಚ್ಛವಿಲ್ಲದ ಕನ್ನಡಕ ಧರಿಸುವುದು

  ಕನ್ನಡಕ ಧರಿಸುವ ಎಲ್ಲಾ ವ್ಯಕ್ತಿಗಳೂ ತಮ್ಮ ಕನ್ನಡಕಗಳನ್ನು ಆಗಾಗ ಸ್ವಚ್ಛಗೊಳಿಸುತ್ತಲೇ ಇರಬೇಕು. ಇಲ್ಲದಿದ್ದರೆ ಕನ್ನಡಕದ ಮೇಲೆ ಸಂಗ್ರಹವಾಗುವ ಧೂಳು, ಬ್ಯಾಕ್ಟೀರಿಯಾಗಳು ಚರ್ಮಕ್ಕೂ ದಾಟಿಕೊಳ್ಳುತ್ತವೆ ಹಾಗೂ ಮುಖದಲ್ಲಿ ಮೊಡವೆಗಳನ್ನುಂಟುಮಾಡುತ್ತವೆ. ಹಾಗಾಗಿ ತ್ವಚೆಯನ್ನು ಈ ಮೂಲಕ ಅಪಾಯಕ್ಕೆ ಒಡ್ಡುವ ಸಾಧ್ಯತೆಯನ್ನು ಇಲ್ಲವಾಗಿಸಲು ನಿತ್ಯವೂ, ಬೆಳಿಗ್ಗೆ ಕನ್ನಡಕ ಧರಿಸುವ ಮುನ್ನ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇತರ ಸಮಯಗಳಲ್ಲಿ ಆಗಾಗ ಸ್ವಚ್ಛವಾದ ಕನ್ನಡಕ ಒರೆಸುವ ಬಟ್ಟೆಯಿಂದ ಒರೆಸಿಕೊಳ್ಳಬೇಕು ಹಾಗೂ ಈ ಬಟ್ಟೆಯನ್ನೂ ನಿತ್ಯವೂ ತೊಳೆದು ಒಣಗಿಸಿಕೊಳ್ಳಬೇಕು.

  English summary

  These Will Make Your Acne Worse

  We tend to try various home remedies or buy different products from the market to treat these. But we are not aware that this also can be caused due to our carelessness and some mistakes that we unconsciously make, which leads to the damage of our skin. If you've been feeling like your skin care routine just isn't doing it for you, or you just want to be sure that you're not doing anything that could be backfiring in the long run, then here are some common mistakes many people make when it comes to their skin that they should definitely keep in mind.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more