For Quick Alerts
ALLOW NOTIFICATIONS  
For Daily Alerts

ಮುಖದ ಕೆಂಪು ಕಲೆಗೆ, ಇಲ್ಲಿದೆ ನೋಡಿ ಒಂದಿಷ್ಟು ಸರಳ ಪರಿಹಾರಗಳು

By Arshad
|

ನಮ್ಮ ದೇಹದ ಅತ್ಯಂತ ಹೆಚ್ಚು ಗಮನಿಸಲ್ಪಡುವ ಭಾಗವೆಂದರೆ ಮುಖ. ನಮ್ಮ ಭಾವನೆಗಳನ್ನು ಅತ್ಯಂತ ಸೂಕ್ತವಾಗಿ ವ್ಯಕ್ತಪಡಿಸಲು ಹಾಗೂ ಇತರರು ನಮ್ಮನ್ನು ಗುರುತಿಸಲು ಸಾಧ್ಯವಾಗುವುದು ಮುಖದಿಂದ ಮಾತ್ರ. ಮುಖದ ತ್ವಚೆ ಅತಿ ಸೂಕ್ಷ್ಮವಾಗಿದ್ದು ಈ ಭಾಗದಲ್ಲಿ ಎದುರಾಗುವ ಯಾವುದೇ ಬದಲಾವಣೆ ಅಥವಾ ಆನಾಕರ್ಷಣೀಯ ಕಲೆ, ಕೆಂಪಗಾಗಿರುವ ಭಾಗವನ್ನು ಎದುರಿನವರು ಥಟ್ಟನೇ ಗುರುತಿಸಿಬಿಡುವ ಕಾರಣ ಮುಜುಗರ ಎದುರಿಸಬೇಕಾಗಿ ಬರಬಹುದು. ಇದು ವ್ಯಕ್ತಿಯ ಆತ್ಮವಿಶ್ವಾಸವನ್ನೇ ಅಲ್ಲಾಡಿಸಿಬಿಡಬಹುದು. ಮುಖದಲ್ಲಿ ಕೆಂಪುಕಲೆಗಳಾಲು ಕೆಲವಾರು ಕಾರಣಗಳಿವೆ.

ಆದರೆ ಪ್ರಮುಖವಾಗಿ ಇದು ಚರ್ಮದ ಆರೋಗ್ಯ ಸರಿಯಿಲ್ಲ ಎಂಬುದನ್ನು ಪ್ರಮುಖವಾಗಿ ತಿಳಿಸುತ್ತದೆ. ಕೆಲವು ಸಾಮಾನ್ಯ ಕಾರಣಗಳೆಂದರೆ ನಮ್ಮ ತ್ವಚೆಗೆ ಒಗ್ಗದ ಕೆಲವು ರಾಸಾಯನಿಕಗಳಿಗೆ ಚರ್ಮದ ಪ್ರತಿಕ್ರಿಯೆ, ಅಲರ್ಜಿಯ ಪರಿಣಾಮ, ಸೂರ್ಯ ಬೆಳಕಿಗೆ ಅತಿ ಹೆಚ್ಚು ಒಡ್ಡಿಕೊಂಡಿರುವುದು ಹಾಗೂ ಕೆಲವೊಮ್ಮೆ ಅನುವಂಶಿಕ ಕಾರಣಗಳೂ ಕಂಡುಬರಬಹುದು. ಈ ತೊಂದರೆಯ ತೀವ್ರತೆಯನ್ನು ಅನುಸರಿಸಿ ತುರಿಕೆ, ಉರಿ ಅಥವಾ ನೋವು ಸಹಾ ಕಂಡುಬರಬಹುದು.

ಅನುವಂಶಿಕ ಕಾರಣಗಳಾದರೆ ಇದನ್ನು ಹೋಗಲಾಡಿಸಲು ಪ್ರಮುಖ ಚಿಕಿತ್ಸೆಯ ಅಗತ್ಯವಿದೆ ಹಾಗೂ ಕೇವಲ ನುರಿತ ಚರ್ಮವೈದ್ಯರು ಮಾತ್ರ ಇದಕ್ಕೆ ಪರಿಹಾರ ಸೂಚಿಸಬಲ್ಲರು. ಉಳಿದಂತೆ ರಾಸಾಯನಿಕಗಳ ಪ್ರಭಾವದಿಂದ ಅಥವಾ ಯಾವುದೋ ಆಹಾರದ ಅಲರ್ಜಿ ಮೊದಲಾದ ಕಾರಣಗಳಿಂದ ಈಗತಾನೇ ಈ ಲಕ್ಷಣ ಕಂಡುಬಂದಿದ್ದರೆ ಆದಷ್ಟು ಬೇಗನೇ ಕೆಲವು ಸುಲಭ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಈ ತೊಂದರೆ ಉಲ್ಬಣಗೊಳ್ಳದಂತೆ ತಡೆದು ಶೀಘ್ರವೇ ಇಲ್ಲವಾಗಿಸಬಹುದು. ಬನ್ನಿ, ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದಾದ ಆರು ಸುಲಭ ಮನೆಮದ್ದುಗಳ ಬಗ್ಗೆ ಅರಿಯೋಣ...

ಲೋಳೆಸರ

ಲೋಳೆಸರ

ತ್ವಚೆಯ ಉರಿಯೂತವನ್ನು ನಿವಾರಿಸಲು ಲೋಳೆಸರ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ಪ್ರಬಲ ಉರಿಯೂತ ನಿವಾರಕಾ ಗುಣವಿರುವ ಕಾರಣ ಕೆಂಪಗಾಗಿರುವ ಚರ್ಮವನ್ನು ಶೀಘ್ರವೇ ಗುಣಪಡಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ಉಪಯೋಗಿಸುವ ಕ್ರಮ: ಮೊದಲು ಉಗುರುಬೆಚ್ಚನೆಯ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಬಳಿಕ ಈಗತಾನೇ ಕತ್ತರಿಸಿದ ಲೋಳೆಸರದ ಕೋಡೊಂದನ್ನು ಬಿಡಿಸಿ ಒಳಗಿನ ತಿರುಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ. ಈ ತಿರುಳನ್ನು ಕಿವುಚಿ ಕೆಂಪಗಾಗಿರುವ ಚರ್ಮದ ಭಾಗಕ್ಕೆ ನೇರವಾಗಿ ಹಚ್ಚಿ ಪೂರ್ಣವಾಗಿ ಒಣಗುವವರೆಗೂ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಫಲಿತಾಂಶ ಪಡೆಯಲು ಈ ವಿಧಾನವನ್ನು ದಿನದಲ್ಲಿ ಹಲವಾರು ಬಾರಿ ಪುನರಾವರ್ತಿಸಿ.

ಹಸಿರು ಟೀ

ಹಸಿರು ಟೀ

ಹಸಿರು ಟೀಯಲ್ಲಿಯೂ ಉತ್ತಮ ಉರಿಯೂತ ನಿವಾರಕ ಗುಣಗಳಿವೆ. ಇವು ಚರ್ಮದ ಪುನಃಶ್ಚೇತನಕ್ಕೆ ನೆರವಾಗುತ್ತವೆ ಹಾಗೂ ಕೆಂಪಗಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ಮರಳಿಸಲು ನೆರವಾಗುತ್ತವೆ.

ಉಪಯೋಗಿಸುವ ಕ್ರಮ: ಇದೊಂದು ಸರಳ ವಿಧಾನವಾಗಿದೆ. ಮೊದಲು ಒಂದು ಲೋಟದಷ್ಟು ನೀರಿನಲ್ಲಿ ಒಂದು ಹಸಿರು ಟೀ ಬ್ಯಾಗ್ ಹಾಕಿ ಚೆನ್ನಾಗಿ ಕುದಿಸಿ ಈ ನೀರನ್ನು ಟೀಪುಡಿಯ ಬ್ಯಾಗ್ ತೆಗೆಯದೇ ಹಾಗೇ ಫ್ರಿಜ್ಜಿನೊಳಗಿಸಿರಿ.

ಈ ನೀರು ಚೆನ್ನಾಗಿ ತಣಿದ ಬಳಿಕ ಹತ್ತಿಯುಂಡೆಯೊಂದನ್ನು ಈ ನೀರಿನಲ್ಲಿ ಮುಳುಗಿಸಿ ಕೆಂಪಗಾಗಿದ್ದ ಚರ್ಮದ ಮೇಲೆ ಹಚ್ಚಿಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ದಿನದಲ್ಲಿ ಮೂರು ಬಾರಿಯಾದರೂ ಈ ವಿಧಾನವನ್ನು ಪುನರಾವರ್ತಿಸಿ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಅತ್ಯುತ್ತಮವಾದ ನೈಸರ್ಗಿಕ ತೇವಕಾರಕವಾಗಿದೆ. ಇದು ತ್ವಚೆಯಲ್ಲಿ ನೀರಿನ ಅಂಶವನ್ನು ಉಳಿಸಿಕೊಳ್ಳಲು ಹಾಗೂ ಕೆಂಪಗಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ಮರಳಿಸಲು ನೆರವಾಗುತ್ತದೆ.

ಉಪಯೋಗಿಸುವ ಕ್ರಮ: ಮುಖವನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಹತ್ತಿಯುಂಡೆಯೊಂದನ್ನು ಕೊಂಚ ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಕೆಂಪಗಾಗಿದ್ದ ಭಾಗದಲ್ಲಿ ಹಚ್ಚಿದ ಬಳಿಕ ನಯವಾಗಿ ಮಸಾಜ್ ಮಾಡಿ. ಸುಮಾರು ಮೂವತ್ತು ನಿಮಿಷ ಬಿಟ್ಟು ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಹಾಗೂ ಶೀಘ್ರವಾದ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ಓಟ್ಸ್ ರವೆ

ಓಟ್ಸ್ ರವೆ

ಓಟ್ಸ್ ನಲ್ಲಿಯೂ ಉತ್ತಮವಾದ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಇದು ಉರಿ, ತುರಿಕೆ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ. ಈ ರವೆ ಯಾವುದೇ ದಿನದಲ್ಲಿ ಅಂಗಡಿಯಲ್ಲಿ ಸುಲಭವಾಗಿ ಸಿಗುತ್ತದೆ.

ಉಪಯೋಗಿಸುವ ಕ್ರಮ: ಅರ್ಧ ಕಪ್ ಓಟ್ಸ್ ರವೆಯನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಒಣದಾಗಿಯೇ ಪುಡಿಮಾಡಿ. ಇದಕ್ಕೆ ಕಾಲು ಕಪ್ ನೀರು ಹಾಕಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡಿರುವ ಮುಖದ ಕೆಂಪಗಾಗಿದ್ದ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ ಹಾಗೂ ದಪ್ಪನೆಯ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಪುನರಾವರ್ತಿಸಿ.

ಸೌತೆಕಾಯಿಯ ಮುಖಲೇಪನ

ಸೌತೆಕಾಯಿಯ ಮುಖಲೇಪನ

ಸೌತೆಕಾಯಿ ತ್ವಚೆಯು ಕಳೆದುಕೊಂಡಿದ್ದ ಆರ್ದ್ರತೆಯನ್ನು ಮತ್ತೆ ನೀಡುವ ಮೂಲಕ ತ್ವಚೆಗೆ ಅತ್ಯುತ್ತಮ ಆರೈಕೆ ನೀಡುತ್ತದೆ. ಇದರಿಂದ ಒಣಗಿದ್ದ ಚರ್ಮ ಮತ್ತೆ ತಾಜಾತನ ಪಡೆಯುತ್ತದೆ ಹಾಗೂ ಉರಿ, ತುರಿಕೆಗಳೂ ಇಲ್ಲವಾಗುತ್ತವೆ.

ಉಪಯೋಗಿಸುವ ಕ್ರಮ:

ಒಂದು ಚಿಕ್ಕ ಗಾತ್ರದ ಎಳೆ ಸೌತೆಯನ್ನು ಫ್ರಿಜ್ಜಿನಲ್ಲಿಟ್ಟು ತಣ್ಣಗಾಗಿಸಿ. ಉಪಯೋಗಿಸುವ ಮುನ್ನ ಇದನ್ನು ಹೊರತೆಗೆದು ಸಿಪ್ಪೆ ಸುಲಿದು ಚಿಕ್ಕದಾಗಿ ತುರಿಯಿರಿ. ಈಗ ತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ಈ ತುರಿಯನ್ನು ನೇರವಾಗಿ ಹಚ್ಚಿಕೊಳ್ಳಿ. ಸುಮಾರು ಮೂವತ್ತು ನಿಮಿಷವಾದರೂ ಇದು ಮುಖದ ಮೇಲೆ ಹಾಗೇ ಇರುವಂತೆ ಮಾಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ದಿನಕ್ಕೊಂದು ಬಾರಿಯಂತೆ ಒಂದು ತಿಂಗಳಾದರೂ ಈ ವಿಧಾನವನ್ನು ಅನುಸರಿಸಿದರೆ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ

ಇದೊಂದು ಅತಿ ಹಳೆಯ ವಿಧಾನವಾಗಿದೆ ಹಾಗೂ ತ್ವಚೆಗೆ ಸಂಬಂಧಿಸಿದ ಹಲವಾರು ತೊಂದರೆಗಳು ಇಲ್ಲವಾಗುತ್ತವೆ. ಪೆಟ್ರೋಲಿಯಂ ಜೆಲ್ಲಿ ತ್ವಚೆಗೆ ಅತ್ಯುತ್ತಮ ತೇವಕಾರಕ ಪರಿಣಾಮವನ್ನೂ ಒದಗಿಸುತ್ತದೆ ಹಾಗೂ ಈ ಮೂಲಕ ತ್ವಚೆ ಒಣಗುವ ಹಾಗೂ ಕೆಂಪಗಾಗುವುದರಿಂದ ರಕ್ಷಿಸುತ್ತದೆ. ಒಂದು ವೇಳೆ ನಿಮ್ಮ ಮುಖದಲ್ಲಿ ಈಗಾಗಲೇ ಮೊಡವೆಗಳಿದ್ದರೆ ಈ ವಿಧಾನ ನಿಮಗೆ ಸೂಕ್ತವಲ್ಲ!

ಉಪಯೋಗಿಸುವ ಕ್ರಮ:

ಮೊದಲು ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ ಹಾಗೂ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಕೆಂಪಗಾಗಿರುವ ಭಾಗಕ್ಕೆ ರಾತ್ರಿ ಮಲಗುವ ಮುನ್ನ ಕೊಂಚ ಪೆಟ್ರೋಲಿಯಂ ಜೆಲ್ಲಿ ಹಚ್ಚಿಕೊಳ್ಳಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಸತತ ಒಂದು ತಿಂಗಳಾದರೂ ಈ ವಿಧಾನವನ್ನು ಅನುಸರಿಸಿ.

English summary

Home Remedies To Treat Redness Of The Face

Redness on the face can be due to several reasons; but, most importantly, it is a sign of unhealthy skin. Some common reasons for redness of the skin are reactions to chemicals, allergies, sunburn and even genetics. Skin redness might sometimes even cause itchiness, a burning sensation and pain, depending on the severity. So, here is a complete guide on some of the best home remedies to try to reduce the redness of the skin.
X
Desktop Bottom Promotion