For Quick Alerts
ALLOW NOTIFICATIONS  
For Daily Alerts

ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ

|

ಭಾರತೀಯರ ಸೌಂದರ್ಯದ ಗುಟ್ಟಿನಲ್ಲಿ ಕೆಲವಾರು ನೈಸರ್ಗಿಕ ಪರಿಕರಗಳಿದ್ದು ಚಂದನ ಅವುಗಳಲ್ಲಿ ಪ್ರಮುಖವಾಗಿದೆ. ಅರಿಶಿನ, ಚಂದನ, ಮುಲ್ತಾನಿ ಮಿಟ್ಟಿ ಮೊದಲಾದ ನೈಸರ್ಗಿಕ ವಸ್ತುಗಳು ಆರೋಗ್ಯವೃದ್ಧಿಗೆ ಎಷ್ಟು ಪೂರಕ ಎಂದು ತಿಳಿದ ಬಳಿಕವೂ ನಾವು ಕೃತಕವಾದ ಸೌಂದರ್ಯಸಾಧನಗಳ ಬಳಕೆಗೆ ವಾಲುತ್ತಿರುವುದು ಆ ಜಾಹೀರಾತುಗಳಿಗೆ ನಾವು ಮರುಳಾಗಿರುವುದೇ ಕಾರಣ. ಯಾವುದೇ ಸೌಂದರ್ಯಪ್ರಸಾಧನದಲ್ಲಿ ಕೊಂಚವಾದರೂ ಕೆಲವು ರಾಸಾಯನಿಕಗಳ ಬಳಕೆ ಇದ್ದೇ ಇರುತ್ತದೆ, ಎಲ್ಲವೂ ಅಲ್ಲದಿದ್ದರೂ ಒಂದೆರಡು ರಾಸಾಯನಿಕಗಳು ಸಾಮಾನ್ಯವಾಗಿ ಚರ್ಮಕ್ಕೆ ತೊಂದರೆ ಮೂಡಿಸಿಯೇ ಇರುತ್ತವೆ.

ಇದರ ಬದಲಿಗೆ ನೈಸರ್ಗಿಕ ವಸ್ತುಗಳ ಬಳಕೆಗೆ ಒತ್ತು ನೀಡುವುದು ಉತ್ತಮ. ಆದರೆ ಇದರ ಪರಿಣಾಮ ಅರಿಯಲು ಕೃತಕ ಪ್ರಸಾಧನಗಳಿಗಿಂತ ಹೆಚ್ಚಿನ ಸಮಯ ತಗಲುವುದರಿಂದ ಕೊಂಚ ತಾಳ್ಮೆ ಅಗತ್ಯ. ಆದರೆ ಇದರ ಪರಿಣಾಮ ಅತ್ಯಂತ ಆರೋಗ್ಯಕರವೂ, ಬಹುಕಾಲ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಬಾಳುವಂತಹದ್ದೂ ಆಗಿರುವುದರಿಂದ ನಿಸರ್ಗದ ಮೊರೆ ಹೋಗುವುದೇ ಉತ್ತಮ. ನಿಮ್ಮ ತ್ವಚೆಯ ಅಂದಕ್ಕೆ ಬೇಕು ಶ್ರೀಗಂಧದ ಲೇಪನ!

ಚಂದನದ ಪುಡಿಯ ಮಹತ್ವದ ಬಗ್ಗೆ ಹೇಳಹೊರಟರೆ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಸದ್ಯಕ್ಕೆ ಕೇವಲ ಮುಖದ ಸೌಂದರ್ಯ ಮತ್ತು ತ್ವಚೆಯ ಆರೈಕೆಗಾಗಿ ಚಂದನದ ಪುಡಿಯನ್ನು ಹೇಗೆ ಬಳಸಿಕೊಳ್ಳಬಹುದೆಂದು ನೋಡೋಣ. ಕೇವಲ ಪುಡಿಯನ್ನು ಗೋಡೆಗೆ ಸುಣ್ಣ ಬಳಿದಂತೆ ಬಳಿದರೆ ಪ್ರಯೋಜನವಿಲ್ಲ. ಬದಲಿಗೆ ಒಂದು ಸುಲಭವಾದ ಕ್ರಮವನ್ನು ಅನುಸರಿಸಿದರೆ ಇದರ ಪರಿಪೂರ್ಣ ಪ್ರಯೋಜನವನ್ನು ಪಡೆಯಬಹುದು. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ವದನ ಚಂದನವದನವಾಗಲಿದೆ. ಅಪ್ಸರೆಯಂತಹ ತ್ವಚೆಗಾಗಿ ಶ್ರೀಗಂಧದ ಫೇಸ್ ಪ್ಯಾಕ್!

ಹಂತ#1

ಹಂತ#1

ಒಂದು ಚಿಕ್ಕ ಚಮಚದಷ್ಟು ಚಂದನದ ಪುಡಿಯನ್ನು ತೆಗೆದುಕೊಳ್ಳಿ. ಒಂದು ವೇಳೆ ನಿಮ್ಮ ಬಳಿ ಚಂದನದ ಪುಡಿ ಇಲ್ಲದಿದ್ದರೆ ಚಂದನದ ಕೊರಡನ್ನು ನದಿತೀರದಲ್ಲಿ ಸಿಗುವ ಕೊಂಚವೇ ಒರಟಾಗಿರುವ ಕಲ್ಲಿನ ಮೇಲೆ ಕೆಲವೇ ಹನಿ ನೀರಿನ ಜೊತೆ ತೇದಿ ಲೇಪನವನ್ನು ತಯಾರಿಸಿ. ಮಾರುಕಟ್ಟೆಯಲ್ಲಿ ದೊರಕುವ ಪುಡಿಗಿಂತ ಕಲ್ಲಿನಲ್ಲಿ ತೇದಿದ ಲೇಪನವೇ ಉತ್ತಮ.

ಹಂತ#2

ಹಂತ#2

ಇದಕ್ಕೆ ಒಂದು ಚಿಕ್ಕ ಚಮಚ ಹಸಿ ಹಾಲು ಅಥವಾ ಅರಿಶಿನದ ಪುಡಿ ಅಥವಾ ಗುಲಾಬಿ ನೀರನ್ನು ಸೇರಿಸಿ. ಇದರಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದಾದರೊಂದನ್ನು ಮಾತ್ರ ಬಳಸಿ, ಮೂರನ್ನೂ ಒಮ್ಮೆಲೇ ಉಪಯೋಗಿಸಬೇಡಿ. ಅರಿಶಿನದ ನಂಜುನಿರೋಧಕ ಗುಣ, ಹಾಲಿನ ಆರ್ದ್ರತೆ ನೀಡುವ ಗುಣ ಮತ್ತು ಗುಲಾಬಿ ನೀರಿನ ಚರ್ಮಕ್ಕೆ ಕೋಮಲತೆ ನೀಡುವ ಗುಣಗಳು ಚಂದನದೊಂದಿಗೆ ಮಿಶ್ರಣಗೊಂಡ ಬಳಿಕ ಹೆಚ್ಚು ಸಕ್ಷಮವಾಗುತ್ತವೆ. ನಿಮಗೆ ಸೂಕ್ತ ಎನಿಸಿದನ್ನು ಆರಿಸಿಕೊಳ್ಳಿ.

ಹಂತ#3

ಹಂತ#3

ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ನವಿರಾಗಿ ಹಚ್ಚಿಕೊಳ್ಳಿ. ಕಣ್ಣುಗಳ ಒಳಗೆ ಹೋಗದಂತೆ ಜಾಗ್ರತೆ ವಹಿಸಿ. ಕಣ್ಣು ಮುಚ್ಚಿ ರೆಪ್ಪೆಗಳ ಮೇಲೆಯೂ ಹಚ್ಚಿಕೊಳ್ಳಿ. ಇಡಿಯ ಮುಖ, ಕುತ್ತಿಗೆ ಮತ್ತು ಕಿವಿಯ ಬುಡ, ಒಟ್ಟಾರೆ ಇಡಿಯ ಮುಖವನ್ನು ಆವರಿಸಿ, ಆದರೆ ತುಟಿಗೆ ಹಚ್ಚಬೇಡಿ. ಇದಕ್ಕಾಗಿ ಮರದ ತೆಳುವಾದ ಪಟ್ಟಿಯನ್ನು ಉಪಯೋಗಿಸಿ ಕೆಳಗಿನಿಂದ ಮೇಲೆ ಬರುವಂತೆ ಹಚ್ಚಿ. ನಮ್ಮ ಸಲಹೆಯೆಂದರೆ ಇದಕ್ಕೆ ಬೇರೊಬ್ಬರ ಸಹಾಯ ಪಡೆದುಕೊಳ್ಳುವುದು. ತಲೆದಿಂಬು ಇಲ್ಲದ ಚಾಪೆಯ ಮೇಲೆ ಮಲಗಿ ಲೇಪನ ಹಚ್ಚಿಸಿಕೊಂಡು ವಿಶ್ರಮಿಸಿ.

ಹಂತ#4

ಹಂತ#4

ಈ ಲೇಪನ ಶೀಘ್ರವೇ ಒಣಗುತ್ತದೆ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಪ್ರಥಮ ಪ್ರಯತ್ನದಲ್ಲಿಯೇ ಚರ್ಮ ಹೊಳೆಯುವುದನ್ನು ಕಾಣಬಹುದು. ವಾರಕ್ಕೊಂದು ಬಾರಿ ಈ ವಿಧಾನವನ್ನು ಅನುಸರಿಸಿ. ಇದು ನಿಮ್ಮ ಮುಖದ ಮೇಲಿನ ಕಲೆ ಮತ್ತು ಮೊಡವೆಗಳ ಗುರುತುಗಳನ್ನು ನಿವಾರಿಸಲೂ ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಂತ#4

ಹಂತ#4

ಇದು ಮುಖಕ್ಕೆ ಉತ್ತಮವಾದ ಪೋಷಣೆಯನ್ನು ನೀಡುವ ಜೊತೆಗೇ ಚರ್ಮಕ್ಕೆ ಆದ್ರತೆ ಮತ್ತು ಕಾಂತಿಯನ್ನೂ ನೀಡುತ್ತದೆ. ಸಹಜ ವರ್ಣ ಪಡೆದ ಬಳಿಕ ಬೇರೆ ಯಾವುದೇ ಕೃತಕ ವಿಧಾನವನ್ನು ಅನುಸರಿಸುವ ಅಗತ್ಯವೇ ಇಲ್ಲ. ಒಂದು ವೇಳೆ ಇಂತಹ ಉಪಯುಕ್ತ ಮಾಹಿತಿ ನಿಮ್ಮಲ್ಲಿದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

English summary

Best Sandalwood Face Packs To Get Gorgeous Naturally

Though most of us know about the benefits of sandalwood powder, we still prefer to use creams that never solve skin problems without damaging it. If you have the patience and time, natural remedies are the best. Using sandalwood on face can have a very soothing and a healing effect on your skin.
Story first published: Monday, September 28, 2015, 11:42 [IST]
X
Desktop Bottom Promotion