Just In
Don't Miss
- Movies
ತಮಿಳು ಸಿನಿಮಾದಲ್ಲಿ ನಟಿಸುವ ಅವಕಾಶ ಕೈಬಿಟ್ಟ ಶಿವರಾಜ್ ಕುಮಾರ್
- Sports
ಪುತ್ರನ ಚೊಚ್ಚಲ ವಿಮಾನಯಾನದ ಚಿತ್ರ ಹಂಚಿಕೊಂಡ ಹಾರ್ದಿಕ್ ಪಾಂಡ್ಯ
- News
ರಾಜ್ಯ ಹೆದ್ದಾರಿ ಅಗಲೀಕರಣ; ಧರೆಗುರುಳಿದ ಶತಮಾನದ ಮರಗಳು
- Automobiles
ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲಿದೆ ಹೋಂಡಾ ಕಾರ್ಸ್ ಕಂಪನಿಯ ಈ ಯೋಜನೆ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Finance
ರಾಜಸ್ಥಾನದ ಈ ನಗರದಲ್ಲಿ ಲೀಟರ್ ಗೆ ರು. 100 ದಾಟಿತು ಬ್ರ್ಯಾಂಡೆಡ್ ಪೆಟ್ರೋಲ್ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿತ್ಯ ಮಾಡುವ ಸಿಂಪಲ್ ತಪ್ಪುಗಳೇ ಚಳಿಗಾಲದಲ್ಲಿ ಕೂದಲಿನ ಅನಾರೋಗ್ಯಕ್ಕೆ ಕಾರಣ
ದಟ್ಟವಾದ ಸುಂದರ ಕೂದಲಿನ ಬಯಕೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತೆ. ಆದರೆ ಈಗಿನ ಜಮಾನದಲ್ಲಿ ಕೂದಲಿನ ಸಮಸ್ಯೆ ಅನ್ನೋದು ಪ್ರತಿಯೊಬ್ಬರನ್ನೂ ಬಿಟ್ಟೂಬಿಡದೆ ಕಾಡುತ್ತದೆ. ಕೂದಲಿನ ಸೌಂದರ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಪ್ರಯತ್ನಿಸುವುದೇನೋ ನಿಜ. ಆದರೂ ಕೂಡ ನಮ್ಮ ನಿತ್ಯ ಜೀವನದ ಕೆಲವು ಸಾಮಾನ್ಯ ತಪ್ಪುಗಳೇ ಕೂದಲಿನ ಆರೋಗ್ಯವನ್ನು ಹಾಳು ಮಾಡಿ ಬಿಡುತ್ತದೆ.
ಕೂದಲಿಗೆ ಬಣ್ಣ ಹಾಕಿಕೊಳ್ಳುವುದು, ಸ್ಟೈಲ್ ಗಾಗಿ ಕೂದಲನ್ನು ಬಿಸಿಗೊಳಿಸುವುದು, ಕೆಮಿಕಲ್ ಗಳ ಬಳಕೆ ಇತ್ಯಾದಿಗಳು ಕೂದಲಿನ ಆರೈಕೆಯಲ್ಲಿ ಮಾಡುವ ದೊಡ್ಡ ದೊಡ್ಡ ತಪ್ಪುಗಳು. ಆದರೆ ಕೆಲವು ಸಣ್ಣಪುಟ್ಟ ನಿತ್ಯದ ತಪ್ಪುಗಳು ನಿಮ್ಮ ಕೂದಲನ್ನು ಹಾಳು ಮಾಡುತ್ತವೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಅಂತಹ ಕೆಲವು ಸಿಂಪಲ್ ತಪ್ಪುಗಳ ಬಗ್ಗೆ ನಾವಿಲ್ಲಿ ನಿಮಗೆ ಪಟ್ಟಿ ಮಾಡಿ ಹೇಳುತ್ತಿದ್ದೇವೆ.

1. ಬಿಸಿ ನೀರಿನಲ್ಲಿ ಶವರ್ ಮಾಡಿಕೊಳ್ಳುವುದು
ಬಿಸಿಬಿಸಿಯಾದ ನೀರಿನಲ್ಲಿ ಕೂದಲಿನ ಸ್ನಾನ ಮಾಡುವುದೆಂದರೆ ಪ್ರತಿಯೊಬ್ಬರಿಗೂ ಇಷ್ಟವೇ. ಆದರೆ ಹೀಗೆ ನಾವು ಮಾಡುವ ನಿತ್ಯದ ಅಭ್ಯಾಸವು ನೀವು ಊಹಿಸದ ರೀತಿಯಲ್ಲಿ ನಿಮ್ಮ ಕೂದಲನ್ನು ಹಾಳು ಮಾಡುತ್ತದೆ. ಕೂದಲನ್ನು ಅತಿಯಾದ ಬಿಸಿ ನೀರಿನಿಂದ ತೊಳೆಯುವುದು ಅಥವಾ ಸ್ನಾನ ಮಾಡುವುದರಿಂದಾಗಿ ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆ ಅಂಶ ಮತ್ತು ಪೋಷಕಾಂಶಗಳು ಹೊರಹೋಗುತ್ತದೆ. ಹಾಗಾಗಿ ನೀವು ಯಾವಾಗ ಕೂದಲನ್ನು ತೊಳೆಯುತ್ತೀರೋ ಆಗ ಆದಷ್ಟು ನೀರಿನ ತಾಪಮಾನವನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಕಂಡೀಷನರ್ ಬಳಕೆಯನ್ನು ತಣ್ಣನೆಯ ನೀರಿನಿಂದಲೇ ಮಾಡಿ. ಇದು ಕೂದಲಿನ ಹೊರಪೊರೆಗಳನ್ನು ಮುಚ್ಚಲು ಮತ್ತು ಕೂದಲಿನ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ.

2. ಕೂದಲನ್ನು ಒಣಗಿಸುವುದಕ್ಕೆ ತಪ್ಪು ಟವೆಲ್ ಬಳಕೆ
ಸಾಮಾನ್ಯವಾಗಿ ದೇಹವನ್ನು ಮತ್ತು ಕೂದಲನ್ನು ಒಣಗಿಸುವುದಕ್ಕಾಗಿ ಒಂದೇ ಟವೆಲ್ ಅನ್ನು ಬಳಕೆ ಮಾಡುತ್ತೇವೆ. ಅಷ್ಟೇ ಅಲ್ಲ ಟವೆಲ್ ನಿಂದ ಹೇಗ್ಹೇಗೋ ಸ್ಕ್ರಬ್ ಮಾಡಿ, ಸಂಪೂರ್ಣ ಕೂದಲನ್ನು ಟವೆಲ್ ನಲ್ಲಿ ಕಟ್ಟಿ, ಉಜ್ಜಿ ಕೂದಲಿನಲ್ಲಿರುವ ನೀರಿನ ಅಂಶವನ್ನು ಹಿಂಡಲು ಪ್ರಯತ್ನಿಸುತ್ತೇವೆ. ಈ ರೀತಿ ಮಾಡುವುದರಿಂದಾಗಿ ಕೂದಲು ತುಂಡಾಗುತ್ತದೆ ಮತ್ತು ತೊಂದರೆಗೆ ಒಳಗಾಗುತ್ತದೆ. ಸಾಮಾನ್ಯ ಟೆರ್ರಿಕ್ಲೋತ್ ಟವೆಲ್ ಗಳು ಕೂದಲಿಗೆ ಕಠಿಣವಾಗಬಹುದು ಮತ್ತು ಸಾಕಷ್ಟು ಕೂದಲಿನ ಘರ್ಷಣೆಗೆ ಇದು ಕಾರಣವಾಗುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ನೀವೇನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ಮೈಕ್ರೋಫೈಬರ್ ಟವೆಲ್ ಗಳನ್ನು ಬಳಕೆ ಮಾಡಬಹುದು ಅಥವಾ ಕೂದಲು ಒಳಗಿಸುವುದಕ್ಕಾಗಿಯೇ ತಯಾರಿಸಲಾಗಿರುವ ಟವೆಲ್ ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಅಂತವುಗಳನ್ನೇ ಖರೀದಿಸುವುದು ಸೂಕ್ತವಾದದ್ದು ಅಥವಾ ನಿಮ್ಮ ಹಳೆಯ ಕಾಟನ್ ಟೀ-ಶರ್ಟ್ ಗಳನ್ನು ಮೃದುವಾಗಿ ಕೂದಲನ್ನು ಉಜ್ಜಿ ನೀರಿನಂಶವನ್ನು ಹೊರತೆಗೆಯುವುದಕ್ಕೆ ಬಳಕೆ ಮಾಡಬಹುದು.

3. ಅತಿಯಾದ ಡ್ರೈ ಶಾಂಪೂಗಳ ಬಳಕೆ
ಪ್ರತಿದಿನ ಬಳಕೆಯ ಹೇರ್ ಪ್ರೊಡಕ್ಟ್ ಗಳಲ್ಲಿ ಕೂದಲಿನ ಶಾಂಪೂ ಕೂಡ ಒಂದು. ಅದರಲ್ಲೂ ಸೋಮಾರಿಯಾಗಿದ್ದಾಗ ಕೂದಲನ್ನು ರಿಫ್ರೆಶ್ ಮಾಡುವುದಕ್ಕಾಗಿ ಡ್ರೈ ಶಾಂಪೂಗಳನ್ನು ಬಳಕೆ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ ಇದು ಅತ್ಯಂತ ಕೆಟ್ಟ ಅಭ್ಯಾಸವಾಗಿದೆ. ಅತಿಯಾಗಿ ಡ್ರೈ ಶಾಂಪೂ ಬಳಕೆ ಮಾಡಿದರೆ ನೆತ್ತಿಯ ರಂಧ್ರಗಳನ್ನು ಇವು ಮುಚ್ಚುತ್ತವೆ ಮತ್ತು ಕೂದಲಿನಲ್ಲಿರುವ ಅಗತ್ಯ ಪೋಷಕಾಂಶಗಳನ್ನು ತೆಗೆದು ಹಾಕುತ್ತದೆ. ಇದು ಮುಂದೆ ಕೂದಲಿನ ಸರ್ವ ರೀತಿಯ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆದಷ್ಟು ಡ್ರೈ ಶಾಂಪೂ ಬಳಕೆಯನ್ನು ನಿಷೇಧಿಸಿಕೊಳ್ಳಿ.

4. ಕೂದಲನ್ನು ಬಾಚುವಿಕೆಯಲ್ಲಿ ಎಸಗುವ ತಪ್ಪುಗಳು
ಕೂದಲು ಸಿಕ್ಕು ಬಿಡಿಸುವಾಗ ಅಥವಾ ಸಣ್ಣಸಣ್ಣ ಗಂಟುಗಳನ್ನು ಬಿಡಿಸಿ ಬಾಚಿಕೊಳ್ಳುವಾಗ ಅತಿಯಾಗಿ ಒತ್ತಡ ಹಾಕುವುದರಿಂದಾಗಿ ಕೂದಲು ತುಂಡಾಗುತ್ತದೆ. ಹೀಗೆ ಮಾಡುವ ಬದಲಾಗಿ ಕೂದಲು ಬಾಚುವಾಗ ಆದಷ್ಟು ತಾಳ್ಮೆಯಿಂದ ನಿಧಾನವಾಗಿ ಬಾಚಿಕೊಳ್ಳಿ. ಮೃದುವಾಗಿರುವ ಬಾಚಣಿಗೆಯನ್ನು ಬಳಕೆ ಮಾಡಿ. ಅಷ್ಟೇ ಅಲ್ಲ ಬಹಳ ಗಟ್ಟಿಯಾಗಿರುವ ಬ್ಯಾಂಡ್ ಗಳನ್ನು ಬಳಕೆ ಮಾಡಿ ಕೂದಲನ್ನು ಎಳೆದು ಕಟ್ಟುವುದು ಒಳ್ಳೆಯದು. ಹ್ಯಾಂಡಲ್ ವಿತ್ ಕೇರ್ ಅಂತ ಇಂಗ್ಲೀಷಿನಲ್ಲಿ ಒಂದು ಮಾತಿಲ್ಲವೇ ಹಾಗೆ ಕೂದಲನ್ನು ಸ್ವಲ್ಪ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ.

5. ತಪ್ಪಾದ ದಿಂಬಿನ ಕವರ್
ಈ ವಿಚಾರ ನಿಮಗೆ ಸ್ವಲ್ಪ ಆಶ್ಚರ್ಯ ಮತ್ತು ಆಡಂಬರವಾಗಿರುವುದು ಎಂದೆನಿಸಬಹುದು. ಆದರೆ ನಿಜಕ್ಕೂ ಹೇಳಬೇಕೆಂದರೆ ಕೆಲವು ರೀತಿಯ ದಿಂಬಿನ ಕವರ್ ಗಳೂ ಕೂಡ ನಿಮ್ಮ ಕೂದಲನ್ನು ಹಾನಿ ಮಾಡುತ್ತದೆ. ಸಾಮಾನ್ಯವಾಗಿ ಬಳಸುವ ಕಾಟನ್ ದಿಂಬಿನ ಕವರ್ ಗಳು ಕೂದಲಿನಲ್ಲಿ ಸಿಕ್ಕುಗಳು, ಕೂದಲಿನ ತುಂಡಾಗುವಿಕೆ ಮತ್ತು ಕೂದಲುದುರುವಿಕೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ರೇಷ್ಮೆಯ ಬಹಳ ಮೃದುವಾದ ದಿಂಬಿನ ಕವರ್ ಗಳನ್ನು ಮಲಗುವುದಕ್ಕಾಗಿ ಬಳಸಲು ಸಲಹೆ ನೀಡಲಾಗುತ್ತದೆ. ನೀವು ಮಲಗಿದಾಗ ಇವು ಕೂದಲನ್ನು ಹಾನಿಗೊಳಿಸುವುದಿಲ್ಲ.
ಒಟ್ಟಿನಲ್ಲಿ ದಿನನಿತ್ಯ ಮಾಡುವ ಸಾಮಾನ್ಯ ತಪ್ಪುಗಳು ಕೂಡ ಕೂದಲಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ನೀವು ಕೂದಲಿನ ಕಾಳಜಿ ತೆಗೆದುಕೊಳ್ಳದೇ ದೊಡ್ಡ ದೊಡ್ಡ ತಪ್ಪುಗಳನ್ನು ಎಸಗಿದರೆ ಕೂದಲನ್ನು ಕಾಪಾಡಿಕೊಳ್ಳುವುದು ಕಷ್ಟದ ಕೆಲಸವೇ ಆಗಬಹುದು. ಯಾವುದಕ್ಕೂ ನಿಮ್ಮ ಕೂದಲಿನ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.