For Quick Alerts
ALLOW NOTIFICATIONS  
For Daily Alerts

ಮದ್ಯ ಆರೋಗ್ಯವನ್ನು ಮಾತ್ರವಲ್ಲ ಸೌಂದರ್ಯವನ್ನೂ ಹೇಗೆ ಬಾಧಿಸುತ್ತದೆ ಗೊತ್ತೇ?

|

ಮದ್ಯ ಸೇವನೆ ಹಲವಾರು ಸಂಸ್ಕೃತಿಗಳಲ್ಲಿ ಜೀವನದ ಒಂದು ಭಾಗವೇ ಆಗಿದೆ. ವಾರಾಂತ್ಯದ ಸಮಯದಲ್ಲಿ ಮದ್ಯಸೇವನೆಯ ಹೊರತಾದ ಮೋಜು ಇದೆಯೇ? ಆದರೆ ವಾಸ್ತವವಾಗಿ ಮದ್ಯ ದೇಹವನ್ನು ಬಿಸಿಮಾಡುವ ಔಷಧಿಯಾಗಿ ನಮಗೆ ಅಗತ್ಯವಿದೆಯೇ ಹೊರತು ಮತ್ತು ಬರಿಸುವ ಮಾಧ್ಯಮವಾಗಿ ಅಲ್ಲ. ಆದರೆ ಮತ್ತು ಮನಸ್ಸಿನ ಮೇಲೆ ಮಾಡುವ ಪರಿಣಾಮವನ್ನೇ ಮಾನಸಿಕ ಶಮನಕಾರಕವೆಂದು ಪರಿಭಾವಿಸಿಯೇ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾ ಬಂದಿದ್ದು ಈಗಂತೂ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ ಯಾವುದೇ ಔಷಧಿ ಮಿತಿಮೀರಿದಾಗ ಆರೋಗ್ಯವನ್ನು ಕಸಿದುಕೊಳ್ಳುವಂತೆ ಮದ್ಯವೂ ಅಮಲಿನ ಜೊತೆಗೇ ಆರೋಗ್ಯವನ್ನೂ ಕಸಿದುಕೊಳ್ಳುವುದನ್ನು ನಿರಾಕರಿಸಲಾಗದು. ಅತಿಯಾದರೆ ಅಮೃತವೂ ವಿಷ ಎಂಬ ನಾಣ್ಣುಡಿ ಮದ್ಯಕ್ಕೆ ಅತ್ಯುತ್ತಮವಾಗಿ ಅನ್ವಯಿಸುತ್ತದೆ. ಮದ್ಯದ ಸೇವನೆಯಿಂದ ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲ, ತ್ವಚೆ, ಕೂದಲು ಮತ್ತು ಒಟ್ಟಾರೆ ದೇಹದ ಆಕಾರದ ಮೇಲೂ ಅಪಾರವಾದ ಪ್ರಭಾವವನ್ನು ಬೀರುತ್ತದೆ.

ಒಂದು ವೇಳೆ ಮದ್ಯಸೇವನೆ ನಿತ್ಯವಾಗಿದ್ದರೆ ಇದು ದೇಹದಿಂದ ಹಲವಾರು ಅಮೂಲ್ಯ ಪೋಷಕಾಂಶಗಳನ್ನು ಕಸಿದುಕೊಂಡು ದೇಹದ ಮೇಲೆ ಕೆಲವಾರು ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುತ್ತದೆ. ವಿಶೇಷವಾಗಿ ದೇಹವನ್ನು ಅತಿ ಹೆಚ್ಚಾಗಿ ನಿರ್ಜಲೀಕರಣಕ್ಕೆ ಒಳಗಾಗಿಸಿ ಇದರಿಂದ ಕೆಲವಾರು ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು. ಮದ್ಯಸೇವನೆ ವ್ಯಸನವಾಗಿ ಪರಿವರ್ತಿತವಾದವರು ಸ್ವತಃ ಇದರ ದುರ್ಗುಣ ಮತ್ತು ದುಷ್ಪರಿಣಾಮಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದರೂ ಇದರ ಸೇವನೆಯ ಮೂಲಕ ಪಡೆಯುವ ಸುಖ, ಮಾನಸಿಕ ಶಕ್ತಿ, ನೋವನ್ನು ಮರೆಸುವ ಸಾಮರ್ಥ್ಯ ಮೊದಲಾದವುಗಳನ್ನು ಕೊಂಡಾಡುತ್ತಾ, ಇದುವರೆಗೂ ಮದ್ಯವ್ಯಸನಿಗಳಾಗಿದ್ದೂ ಶತಾಯುಷಿಗಳಾಗಿರುವವರನ್ನು ಉದಾಹರಿಸಿ ಗುಣಗಾನ ಮಾಡುತ್ತಾ ಹೋಗುತ್ತಾರೆ. ಆದರೆ ಎಷ್ಟೇ ಆದರೂ ಮದ್ಯ ನಿಧಾನವಿಷವೇ ಆಗಿದ್ದು ಇದರಿಂದ ಎದುರಾಗಬಹುದಾದ ದುಷ್ಟರಿಣಾಮಗಳನ್ನು ಅರಿಯುವುದು ಅಗತ್ಯವಾಗಿದೆ. ಅತಿಯಾದ ಪ್ರಮಾಣದಲ್ಲಿ ಮದ್ಯ ಸೇವಿಸುವ ವ್ಯಸನಿಗಳಿಗೆ ಎದುರಾಗುವ ಕೆಲವಾರು ಚರ್ಮದ ಕಾಯಿಲೆಗಳೆಂದರೆ ಸೋರಿಯಾಸಿಸ್ (psoriasis) ಮತ್ತು ಎಕ್ಸಿಮಾ (eczema).ಈ ಸ್ಥಿತಿ ಎದುರಾದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಮದ್ಯದ ಪ್ರಮಾಣವನ್ನು ತಗ್ಗಿಸಿ ನೀರು ಕುಡಿಯುವುದನ್ನು ಹೆಚ್ಚಿಸುವುದು. ಇಂದಿನ ಲೇಖನದಲ್ಲಿ ಮದ್ಯದ ಪ್ರಭಾವದಿಂದ ತ್ವಚೆ, ಕೂದಲು ಹಾಗೂ ದೇಹ ಸೌಂದರ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ವಿವರಿಸಲಾಗಿದೆ.

ತ್ವಚೆಯನ್ನು ನಿರ್ಜಲೀಕರಣಗೊಳಿಸುತ್ತದೆ

ತ್ವಚೆಯನ್ನು ನಿರ್ಜಲೀಕರಣಗೊಳಿಸುತ್ತದೆ

ರಾತ್ರಿ ಮದ್ಯ ಸೇವಿಸಿ ಮಲಗಿದ ಮರುದಿನ ಬೆಳಿಗ್ಗೆದ್ದಾಗ ತಲೆ ತಿರುಗುವಂತಾಗುವುವುದಕ್ಕೆ ಮುಖ್ಯ ಕಾರಣ ದೇಹ ಈ ಸಮಯದಲ್ಲಿ ನಿರ್ಜಲೀಕರಣಕ್ಕೆ ಒಳಗಾಗಿರುವುದಾಗಿದೆ. ಮದ್ಯ ಜಠರದಿಂದ ನೇರವಾಗಿ ರಕ್ತಕ್ಕೆ ಸೇರುತ್ತದೆ ಹಾಗೂ ದೇಹವೆಲ್ಲಾ ಹರಡಿ ಮೆದುಳಿಗೂ ತಲುಪುತ್ತದೆ ಮತ್ತು ಅಮೂಲ್ಯವಾದ ನೀರಿನಂಶವನ್ನು ಬಳಸಿಕೊಂಡು ದೇಹಕ್ಕೆ ನೀರಿನ ಅಗತ್ಯವಿರುವ ಹಲವಾರು ವ್ಯವಸ್ಥೆಗಳಿಗೆ ನೀರಿನ ಕೊರತೆಯಾಗುತ್ತದೆ. ನಮ್ಮ ತ್ವಚೆಗೆ ಸತತವಾಗಿ ಒಳಗಿನಿಂದ ನೀರಿನ ಪೂರೈಕೆಯಾಗುತ್ತಲೇ ಇರಬೇಕು. ನೀರಿನ ಕೊರತೆಯಾದಾಗ ತ್ವಚೆ ಒಣಗುತ್ತದೆ. ಪರಿಣಾಮವಾಗಿ ತ್ವಚೆ ಸಡಿಲಗೊಂಡು ನೆರಿಗೆ ಮೂಡುವುದು, ಬಿರುಕು ಬಿಡುವುದು ಹಾಗೂ ದೊರಗಾಗಲು ತೊಡಗುತ್ತದೆ. ಈ ಪರಿಣಾಮವನ್ನು ಒಂದೇ ದಿನದಲ್ಲಿ ಕಾಣಲು ಸಾದ್ಯವಿಲ್ಲ. ಕ್ರಮೇಣ ಈ ಸ್ಥಿತಿ ಹಲವರು ತ್ವಚೆಯ ತೊಂದರೆಗಳಿಗೆ ಮೂಲವಾಗುತ್ತದೆ. ಹಾಗಾಗಿ ಮದ್ಯ ಸೇವಿಸಿದವರು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಲೇ ಬೇಕು.

Most Read: ಬೇಸಿಗೆಯ ಬೆವರುಸಾಲೆಯ ಪರಿಹಾರಕ್ಕಾಗಿ ಪರಿಣಾಮಕಾರಿಯಾದ ಸರಳ ಮನೆಮದ್ದುಗಳು

ಈಗಾಗಲೇ ಇರುವ ತ್ವಚೆಯ ತೊಂದರೆಗಳನ್ನು ಇನ್ನಷ್ಟು ಉಲ್ಬಣಿಸುತ್ತದೆ

ಈಗಾಗಲೇ ಇರುವ ತ್ವಚೆಯ ತೊಂದರೆಗಳನ್ನು ಇನ್ನಷ್ಟು ಉಲ್ಬಣಿಸುತ್ತದೆ

ಒಂದು ವೇಳೆ ನಿಮಗೆ ಈಗಾಗಲೇ ಮೊಡವೆ, ಕೆಂಪಗಾಗುವುದು, ಚಿಕ್ಕ ಗುಳ್ಳೆಗಳು ಮೊದಲಾದ ತ್ವಚೆಗೆ ಸಂಬಂಧಿಸಿದ ತೊಂದರೆಗಳು ಇದ್ದರೆ ಈ ತೊಂದರೆಗಳನ್ನು ಮದ್ಯ ಇನ್ನಷ್ಟು ಉಲ್ಬಣಿಸುತ್ತದೆ. ಇದಕ್ಕೆ ಮದ್ಯಸೇವನೆಯಿಂದ ಎದುರಾಗುವ ನಿರ್ಜಲೀಕರಣ ಪ್ರಮುಖ ಕಾರಣವಗಿದೆ. ಹಾಗಾಗಿ ಈಗಾಗಲೇ ತ್ವಚೆಯ ತೊಂದರೆ ಇರುವ ವ್ಯಕ್ತಿಗಳು ಮದ್ಯವನ್ನು ಕನಿಷ್ಟ ಪ್ರಮಾಣಕ್ಕಿಳಿಸುವುದು ಅಗತ್ಯ.

ಚರ್ಮ ಕೆಂಪಗಾಗುವುದು

ಚರ್ಮ ಕೆಂಪಗಾಗುವುದು

ಮದ್ಯ ರಕ್ತದಲ್ಲಿ ಬೆರೆತ ಬಳಿಕ ಚರ್ಮದಲ್ಲಿ ಉರಿಯೂತ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು, ಇದು ಚರ್ಮವನ್ನು ಕೆಂಪಗಾಗಿಸುತ್ತದೆ. ವಿಶೇಷವಾಗಿ ಚರ್ಮ ಹೆಚ್ಚು ಸೆಳೆದಿರುವ ಭಾಗದಲ್ಲಿ ಈ ಕೆಂಪಗಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಉದಾಹರಣೆಗೆ ಕಣ್ಣಿನ ಕೆಳಗಿರುವ ಕೆನ್ನೆಯ ಮೂಳೆಯ ಮೇಲಿರುವ ಚರ್ಮ. ಮದ್ಯ ಸೇವನೆ ನಿಯಮಿತವಾದಷ್ಟೂ ಈ ಕೆಂಪಗಾಗುವುದು ಇನ್ನಷ್ಟು ಸ್ಪಷ್ಟ ಮತ್ತು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಈ ಸ್ಥಿತಿಯನ್ನು ವೈದ್ಯವಿಜ್ಞಾನದಲ್ಲಿ rosacea ಎಂದು ಕರೆಯುತ್ತಾರೆ. ಮದ್ಯವ್ಯಸನಿಗಳು ತಮ್ಮ ಕೆನ್ನೆ ಕೆಂಪಗಾಗಿರುವುದು ತ್ವಚೆಗೆ ಆಗಿರುವ ಹಾನಿ ಎಂದು ಪರಿಗಣಿಸದೇ ತಮ್ಮ ಸೌಂದರ್ಯ ಇನ್ನಷ್ಟು ಉತ್ತಮಗೊಂಡಿದೆ ಎಂಬ ಭ್ರಮಎಯಲ್ಲಿರುತ್ತಾರೆ. ವಾಸ್ತವವಾಗಿ ಮದ್ಯಪಾನದ ಮೂಲಕ ಚರ್ಮ ಕೆಂಪಗಾಗಿ ಹಾನಿಗೊಂಡಿರುವುದೇ ಈ ಸೂಚನೆಯಾಗಿದೆ.

ಊದಿಕೊಂಡಿರುವ ಮುಖ

ಊದಿಕೊಂಡಿರುವ ಮುಖ

ರಾತ್ರಿ ವಿಪರೀತ ಮದ್ಯಸೇವನೆಯ ಬಳಿಕ ಮರುದಿನ ಮುಖವೆಲ್ಲಾ ಊದಿಕೊಂಡಿದ್ದು ವಿಶೇಷವಾಗಿ ಕಣ್ಣುಗಳ ಕೆಳಭಾಗದಲ್ಲಿ ಎರಡು ಚಿಕ್ಕ ಚೀಲಗಳಂತೆ ತುಂಬಿಕೊಂಡಿರುವುದು ಕಾಣಬರಬಹುದು(puffy eyes). ವಾಸ್ತವದಲ್ಲಿ ಅತಿಯಾದ ಮದ್ಯಸೇವನೆಯ ಪರಿಣಾಮವಾಗಿ ಮುಖದ ಸೌಂದರ್ಯ ಮತ್ತು ಕಳೆಯೇ ಹೊರಟು ಹೋಗುತ್ತದೆ. ಹಾಗಾಗಿ ನಿಮ್ಮ ಮುಖ ಊದಿಕೊಳ್ಳದೇ ಸಹಜವಾಗಿ ಕಾಣಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂದು ಈಗ ನಿಮಗೆ ವಿವರಿಸಿ ಹೇಳಬೇಕಾಗಿಲ್ಲ.

ವಯಸ್ಸು ಆವರಿಸುವ ಮುನ್ನವೇ ಆಗಮಿಸುವ ವೃದ್ಧಾಪ್ಯದ ಚಿಹ್ನೆಗಳು

ವಯಸ್ಸು ಆವರಿಸುವ ಮುನ್ನವೇ ಆಗಮಿಸುವ ವೃದ್ಧಾಪ್ಯದ ಚಿಹ್ನೆಗಳು

ವೃದ್ದಾಪ್ಯ ಪ್ರತಿಯೊಬ್ಬರಿಗೂ ಆವರಿಸುವ ಅನಿವಾರ್ಯ ಸ್ಥಿತಿಯಾಗಿದ್ದು ಕಾಲದ ಜೊತೆಗೇ ವೃದ್ದಾಪ್ಯದ ಚಿಹ್ನೆಗಳೂ ಆಗಮಿಸುತ್ತವೆ. ಆದರೆ ಅತಿಯಾದ ಮದ್ಯ ಸೇವಿಸುವ ವ್ಯಕ್ತಿಗಳ ತ್ವಚೆ ಹೆಚ್ಚು ಶಿಥಿಲವಾಗಿದ್ದು ವೃದ್ದಾಪ್ಯದ ಚಿಹ್ನೆಗಳು ಮುಂದಿನ ವರ್ಷಗಳಲ್ಲಿ ಬರಬೇಕಾಗಿದ್ದುದು ಈಗಲೇ ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ಮುಖದಲ್ಲಿ ನೆರಿಗೆಗಳು, ಜೋಲಾಡುವ ತ್ವಚೆ ಮೊದಲಾದವು ವ್ಯಕ್ತಿಯ ನಿಜವಾದ ವಯಸ್ಸಿಗೂ ಹೆಚ್ಚೇ ವಯಸ್ಸನ್ನು ಊಹಿಸಿಕೊಳ್ಳುವಂತೆ ಮಾಡುತ್ತವೆ.

ಹೊಟ್ಟೆಯನ್ನು ಡೊಳ್ಳಾಗಿಸುತ್ತದೆ

ಹೊಟ್ಟೆಯನ್ನು ಡೊಳ್ಳಾಗಿಸುತ್ತದೆ

ಬಿಯರ್ ಬೆಲ್ಲಿ ಅಥವಾ ಅತಿದೊಡ್ಡದೂ ಅಲ್ಲದ, ನಗಣ್ಯವೂ ಅಲ್ಲದಷ್ಟು ಚಿಕ್ಕದಿರುವ ಹೊಟ್ಟೆ ದೇಹದ ಗಾತ್ರದ ಅನುಪಾತಕ್ಕೆ ವಿರುದ್ದವಾಗಿ ಮುಂದೆ ಬಂದಿರುವ ಹೊಟ್ಟೆ ಮದ್ಯಸೇವನೆಯ ನೇರವಾದ ಪರಿಣಾಮವೇ ಆಗಿದೆ. ಮದ್ಯವನ್ನು ಅತಿಯಾಗಿ ಸೇವಿಸುವವರಲ್ಲಿ ಇದು ಅತಿ ಸ್ಪಷ್ಟವಾಗಿ ಕಾಣಬರುತ್ತದೆ ಹಾಗೂ ಇದು ದೇಹ ಸೌಂದರ್ಯವನ್ನೇ ಕುಂದಿಸುತ್ತದೆ. ಅದರಲ್ಲೂ ಬಿಯರ್, ವಿಸ್ಕಿ ಹಾಗೂ ವೋಡ್ಕಾ ಸೇವಿಸುವವರಲ್ಲಿ ಕೇವಲ ಹೊಟ್ಟೆ ಮಾತ್ರವಲ್ಲ, ದೇಹದ ಇತರ ಎಲ್ಲಾ ಭಾಗಗಳೂ ನೀರು ತುಂಬಿದಂತೆ ಊದಿಕೊಂಡು ಸಹಜಸೌಂದರ್ಯವನ್ನೇ ಕಸಿದು ಬಿಡುತ್ತವೆ.

Most Read: ಸೇಬಿನ ಶಿರ್ಕಾದ ಸೌಂದರ್ಯ ಪ್ರಯೋಜನಗಳು ಹಾಗೂ ಉಪಯೋಗಿಸುವ ವಿಧಾನಗಳು

ಕಣ್ಣ ಕೆಳಗಿನ ಕಪ್ಪು ವರ್ತುಲಗಳು

ಕಣ್ಣ ಕೆಳಗಿನ ಕಪ್ಪು ವರ್ತುಲಗಳು

ರಾತ್ರಿಯ ಮದ್ಯಸೇವನೆಯ ಬಳಿಕ ಮಲಗಿದಾಕ್ಷಣ ನಿದ್ದೆ ಬಂದುಬಿಡಬೇಕೆಂದು ಹೆಚ್ಚಿನವರು ಅಪೇಕ್ಷಿಸುತ್ತಾರೆ. ಆದರೆ ಮದ್ಯಸೇವನೆ ನಿಯಮಿತ ಮತ್ತು ಹೆಚ್ಚಿನ ಪ್ರಮಾಣದಲ್ಲಿದ್ದರೆ ಹೀಗಾಗದು. ಮದ್ಯದ ಪ್ರಮಾಣ ಅತಿಯಾದರೆ ಇದು ನಿದ್ದೆಯನ್ನೂ ಕೆಡಿಸುತ್ತದೆ ಹಾಗೂ ಅರೆನಿದ್ದೆ, ನಿದ್ದೆಯಿಲ್ಲದ ಕಕಮಕ ಹಲವಾರು ತಳಮಳಗಳನ್ನೂ ಹಲವಾರು ಪರೋಕ್ಷ ಅಪಾಯಗಳನ್ನೂ ತಂದೊಡ್ಡುತ್ತದೆ. ಯಾವಾಗ ನಿದ್ದೆ ಬಾಧಿತಗೊಂಡಿತೋ ತ್ವಚೆ ತನ್ನ ಬಿಗಿತನವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ಆಗ ಕಣ್ಣುಗಳ ಕೆಳಗಿನ ಮೇಲ್ಪದರ ಮತ್ತು ಕೆಳಪದರಗಳ ನಡುವಣ ಅಂತರ ಅತಿಯಾಗಿ ಕ್ಷೀಣಿಸುತ್ತದೆ. ಇದೇ ಕಾರಣಕ್ಕೆ ಈ ಭಾಗದ ತ್ವಚೆ ಕಪ್ಪಗಾಗಿ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ.

ದೇಹದ ದುರ್ಗಂಧ ಎದುರಾಗುತ್ತದೆ

ದೇಹದ ದುರ್ಗಂಧ ಎದುರಾಗುತ್ತದೆ

ಮದ್ಯದ ಪ್ರಭಾವ ಅತಿಯಾದರೆ ದೇಹದಿಂದ ದುರ್ಗಂಧ ಸೂಸುವುದು ಇನ್ನೊಂದು ತೊಂದರೆಯಾಗಿದೆ. ಒಂದು ವೇಳೆ ಈಗಾಗಲೇ ನೀವು ಹೆಚ್ಚು ಬೆವರುವವರಾಗಿದ್ದು ಬೆವರಿನ ವಾಸನೆಯ ತೊಂದರೆ ಇದ್ದರೆ ಮದ್ಯಸೇವನೆ ಈ ವಾಸನೆಯನ್ನು ಹತ್ತಾರು ಪಟ್ಟು ಉಲ್ಬಣಿಸುತ್ತದೆ. ಈ ದುರ್ಗಂಧ ಸಮಾಜದಲ್ಲಿ ನಿಮ್ಮ ಬಗ್ಗೆ ಋಣಾತ್ಮಕ ಅಭಿಪ್ರಾಯ ಪಡೆಯುವಂತಾಗಲು ಕಾರಣವಾಗುತ್ತದೆ. ಹೀಗಾಗದೇ ಇರಲು ಮುಂದಿನ ಬಾರಿ ಮದ್ಯಸೇವನೆಗೆ ಮನಸ್ಸಾದಾಗ ಈ ಮಾಹಿತಿ ನೆನಪಿರಲಿ.

Most Read:ನಿಮ್ಮ ದೇಹದ ದುರ್ಗಂಧವನ್ನು ಹೋಗಲಾಡಿಸುವುದು ಹೇಗೆ?

ಕೂದಲನ್ನು ಶಿಥಿಲ ಹಾಗೂ ಒಣದಾಗಿಸುತ್ತದೆ.

ಕೂದಲನ್ನು ಶಿಥಿಲ ಹಾಗೂ ಒಣದಾಗಿಸುತ್ತದೆ.

ಈ ಮೊದಲೇ ತಿಳಿಸಿದಂತೆ ಮದ್ಯಸೇವನೆಯಿಂದ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ನಿರ್ಜಲೀಕರಣದ ಪರಿಣಾಮದಿಂದ ದೇಹದ ಇತರ ಭಾಗಗಳಂತೆಯೇ ತಲೆಯ ಚರ್ಮಕ್ಕೂ ನೀರಿನ ಕೊರತೆ ಎದುರಾಗುತ್ತದೆ. ಪರಿಣಾಮವಾಗಿ ಕೂದಲ ಬುಡಗಳು ಒಳಗಿ ಕೂದಲಿಗೆ ಅಗತ್ಯವಾದ ನೀರು ಮತ್ತು ಪೋಷಕಾಂಶಗಳು ಸಿಗದೇ ಹೋಗುತ್ತವೆ. ಪರಿಣಾಮವಾಗಿ ಕೂದಲು ತೀರಾ ಒಣಗಿ ತನ್ನ ಗಾತ್ರವನ್ನು ಕಳೆದುಕೊಂಡು ಸುಲಭವಾಗಿ ತುಂಡಾಗುವಂತೆ ಹಾಗೂ ವಕ್ರವಕ್ರವಾಗಿ ಸಿಕ್ಕುಸಿಕ್ಕಾಗುತ್ತದೆ. ಅಲ್ಲದೇ ತ್ವಚೆಯ ಚರ್ಮದ ಹೊರಪದರ ವಿಪರೀತ ಒಣಗಿ ಬಿರಿದು ಪಕಳೆಯೇಳತೊಡಗುತ್ತದೆ. ಈ ಪಕಳೆಯೇಳುವ ತ್ವಚೆ ತುರಿಕೆ ಉಂಟುಮಾಡುತ್ತದೆ. ಪಕಳೆಯಿಂದ ಪ್ರತ್ಯೇಕವಾದ ಭಾಗ ತಲೆಹೊಟ್ಟಾಗಿ ಹಲವರು ಕೂದಲಿಗೆ ಸಂಬಂಧಿಸಿದ ತೊಂದರೆಗಳು ಆಗಮಿಸುತ್ತವೆ.

ಕೂದಲ ಉದುರುವಿಕೆಗೆ ನೇರವಾಗಿ ಕಾರಣವಾಗುತ್ತದೆ

ಕೂದಲ ಉದುರುವಿಕೆಗೆ ನೇರವಾಗಿ ಕಾರಣವಾಗುತ್ತದೆ

ಅನುವಂಶಿಕ ಕಾರಣಗಳ ಹೊರತಾಗಿ ಕೂದಲ ಉದುರುವಿಕೆಗೆ ನೇರವಾದ ಕಾರಣ ನಿರ್ಜಲೀಕರಣ. ಒಂದು ವೇಳೆ ಕೂದಲ ಬುಡಕ್ಕೆ ಸಾಕಷ್ಟು ಪೋಷಕಾಂಶಗಳು ಮತ್ತು ನೀರು ಲಭಿಸದೇ ಇದ್ದರೆ ಕೂದಲು ಒಣಗಿ ಶಿಥಿಲವಾಗಿ ಕೂದಲ ಬುಡ ಸಡಿಲಗೊಳ್ಳುತ್ತದೆ. ಈ ಕೂದಲನ್ನು ಕೊಂಚವೇ ಒತ್ತಡದಿಂದ ಎಳೆದರೂ ಸುಲಭವಾಗಿ ಕಿತ್ತು ಬರುತ್ತದೆ. ಮದ್ಯದ ಪ್ರಭಾವ ಅತಿಯಾದಷ್ಟೂ ಕೂದಲು ಹೀಗೆ ಉದುರುವ ಸಾಧ್ಯತೆಯೂ ಅಪಾರವಾಗಿ ಹೆಚ್ಚುತ್ತದೆ. ಒಂದು ವೇಳೆ ಕೂದಲು ಬುಡದಿಂದ ಉದುರದೇ ಇದ್ದರೂ ನಡುವೆಯೆಲ್ಲೋ ತುಂಡಾಗಿ ಹೋಗುತ್ತದೆ. ಹೀಗೆ ಒಟ್ಟಾರೆ ಕೂದಲಿನಲ್ಲಿ ಒಂದು ಉದ್ದ ಒಂದು ಗಿಡ್ಡ ಇದ್ದು ಕೂದಲು ಸಹಜ ಸೌಂದರ್ಯವನ್ನೇ ಕಳೆದುಕೊಳ್ಳುತ್ತದೆ.

ಮದ್ಯದಿಂದ ಆರೋಗ್ಯದ ಹೊರತಾಗಿ ತ್ವಚೆ ಮತ್ತು ಕೂದಲ ಮೇಲೆ ಉಂಟಾಗುವ

ಮದ್ಯದಿಂದ ಆರೋಗ್ಯದ ಹೊರತಾಗಿ ತ್ವಚೆ ಮತ್ತು ಕೂದಲ ಮೇಲೆ ಉಂಟಾಗುವ

ಪರಿಣಾಮಗಳನ್ನು ಈಗ ನಾವು ಅರಿತಿದ್ದೇವೆ. ಈ ಪರಿಣಾಮಗಳ ಬಗ್ಗೆ ಅರಿತ ಬಳಿಕವಾದರೂ ಸರಿ, ನೀವೇಕೆ ಈಗ ಮದ್ಯವರ್ಜನೆಯತ್ತ ಪ್ರಾಮಾಣಿಕ ಪ್ರಯತ್ನ ಮಾಡಬಾರದು? ಇದಕ್ಕೆ ಕೇವಲ ನಿಮ್ಮ ಮನೋದಾರ್ಢ್ಯ ಬೇಕಷ್ಟೇ. ಪ್ರಯತ್ನ ಪ್ರಾರಂಭಿಸಲು ಮದ್ಯವನ್ನು ಆದಷ್ಟೂ ಕಡಿಮೆ ಮಾಡಿ ಇದರ ಬದಲಿಗೆ ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಲು ಪ್ರಾರಂಭಿಸಿ ಹಾಗೂ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸಲು ಪೌಷ್ಟಿಕ ಆಹಾರ ಸೇವನೆ ಮತ್ತು ಸೂಕ್ತ ವ್ಯಾಯಾಮಗಳನ್ನು ಪ್ರಾರಂಭಿಸಿ. ಮದ್ಯವರ್ಜನೆಗೆ ನಿಜವಾಗಿ ಅಗತ್ಯವಿರುವುದು ಇದರ ಪ್ರಲೋಭನೆಗಳಿಂದ ದೂರವಿರುವುದು. ಈ ಪ್ರಲೋಭನೆಗೆ ಕಾರಣವಾಗುವ ಸ್ಥಳ, ಸ್ನೇಹಿತರು ಹಾಗೂ ಸ್ವತಃ ನಿಮ್ಮ ಮನಸ್ಸು, ಇವುಗಳನ್ನು ದೂರವಿರಿಸಲು ನಿಮ್ಮದೇ ಆದ ನೆಪಗಳನ್ನು ಅನ್ವೇಶಿಸಿ. ಈ ಕ್ರಮ ಅಧ್ಭುತವಾದ ಫಲಿತಾಂಶವನ್ನು ನೀಡುವುದು ಮಾತ್ರ ಸುಳ್ಳಲ್ಲ.

English summary

How Alcohol Affects Your Beauty!

Alcohol consumption has become a part of our lives. Remember those weekends that seem incomplete without a touch of alcohol? Yep, that's what we're talking about. Alcohol gradually has made its way into our regular lives and somehow we fail to see how harmful that can be for us in the long run. They say that too much of anything is bad and this definitely holds true for alcohol. Apart from its effects on health, alcohol can have a huge impact on your skin, hair and your overall appearance as well.
Story first published: Thursday, May 16, 2019, 18:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X