For Quick Alerts
ALLOW NOTIFICATIONS  
For Daily Alerts

ಚಳಿ-ಮಳೆ ಕಾಲದಲ್ಲಿ ತುಟಿಗಳ ಅಂದ ಕಾಪಾಡುವುದು ಹೇಗೆ?

By Manorama Hejmadi
|

ತಾನು ಅಂದ ವಾಗಿ ಕಾಣಿಸ ಬೇಕು ಎಂಬ ಭಾವನೆಯು ಆಬಾಲ ವೃದ್ಧಾದಿ ಎಲ್ಲರಿಗೂ ಇದ್ದೇ ಇರುತ್ತದೆ. ಮುಖದ ಅಂದ ಚೆಂದ , ಒಟ್ಟು ಶರೀರದ ಮೈಮಾಟ, ಉಡುಗೆ ತೊಡುಗೆ, ನಡಿಗೆ, ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ವ್ಯಕ್ತಿತ್ವದ ಸೌಂದರ್ಯ ಇವೆಲ್ಲವೂ ಮೇಳೈಸಿದಾಗ ಮಾತ್ರ ವ್ಯಕ್ತಿಯು ಅಂದವಾಗಿ ಕಾಣಬಹುದು.

ನಾವು ಯಾರನ್ನೇ ಭೇಟಿಯಾದಾಗಲೂ ಮೊದಲು ನೋಡುವುದು ಮುಖವನ್ನು. ಮುಖದಲ್ಲಿ ಪ್ರಧಾನವಾಗಿ ಕಣ್ಣು, ಮೂಗು, ಬಾಯಿಗಳು ನೋಡುಗನ ಗಮನ ಸೆಳೆಯುತ್ತವೆ. ಇವುಗಳಲ್ಲಿ ಯಾವುದೇ ಒಂದು ಸರಿಯಾಗಿ ಇಲ್ಲದಿದ್ದರೂ, ನೋಡುಗನ ಕಣ್ಣು ಥಟ್ಟನೆ ಅಲ್ಲಿಗೇ ಹೊರಳುತ್ತದೆ! ತುಟಿ ಒಡೆಯುವುದು ಒಂದು ಸಾಮಾನ್ಯ ಸಮಸ್ಯೆ.

Lip Care Tips for This Monsoon

ಅದರಲ್ಲೂ ಒಣ ತ್ವಚೆ ಉಳ್ಳವರಿಗೆ ಇದು ಹೆಚ್ಚು. ಚಳಿಗಾಲ - ಮಳೆಗಾಲಗಳಲ್ಲಿ ತ್ವಚೆ ಒಡೆಯುವ ಸಮಸ್ಯೆ ಬಹಳವಾಗಿ ಕಾಡುವುದು. ಇದಕ್ಕೆ ಯಾವೆಲ್ಲ ಪರಿಹಾರಗಳಿವೆ ಎಂಬುದನ್ನು ಈಗ ನೋಡೋಣ. ಗುಲಾಬಿ ವರ್ಣದ ತುಟಿಗಳಿಗಾಗಿ ಸಿಂಪಲ್ ಮನೆಮದ್ದು

ಮೊದಲನೆಯದಾಗಿ : ಒಣಗಿದ ತುಟಿಯಲ್ಲಿ ಸಿಪ್ಪೆ ಎದ್ದು ಬಂದಿರುತ್ತದೆ. ಇದು ತರುವ ಮುಜುಗರದಿಂದಾಗಿ, ಒಣಗಿ ಎದ್ದ ತ್ವಚೆಯನ್ನು ಕಚ್ಚಿ ಕೀಳಲು ಹೋಗದಿರಿ. ಇದರಿಂದ ತುಟಿಯ ಅಂದ ಇನ್ನಷ್ಟು ಕೆಡುತ್ತದೆ. ಸಮಸ್ಯೆ ಬಿಗಡಾಯಿಸುತ್ತದೆ. ತುಟಿ ಹರಿದು ರಕ್ತ ಜಿನುಗಿದರೆ, ಗುಣ ಪಡಿಸುವುದು ಮತ್ತೂ ಕಷ್ಟ. ಹಾಗೆಂದು ಒಣಗಿ ಮೇಲೆದ್ದ ತುಟಿಯ ಚರ್ಮವನ್ನು ಇಟ್ಟುಕೊಂಡು ತಿರುಗುವಂತಿಲ್ಲ. ಅದಕ್ಕೆ, ಈ ಸತ್ತ ತ್ವಚೆಯನ್ನು ನಿಧಾನವಾಗಿ ಮಸಾಜ್ ಮಾಡುತ್ತಾ ಕೀಳಬೇಕು.

ಮುಖವನ್ನು ಸ್ಕ್ರಬ್ ಮಾಡುವ ಅವಕಾಡೋ ಸ್ಕ್ರಬ್ ನಿಮ್ಮಲ್ಲಿ ಇದ್ದರೆ, ಕೆಲಸ ಬಹಳ ಸರಳ. ಸ್ಕ್ರಬ್ಬನ್ನು ತೆಳ್ಳಗೆ ತುಟಿಗಳಿಗೆ ಸವರಿ, ಹಳೆಯ ಹಲ್ಲುಜ್ಜುವ ಬ್ರಶ್ ನಿಂದ ಮೆಲ್ಲಗೆ ಮಸಾಜ್ ಮಾಡಿ. 5-10 ಬಾರಿ ವರ್ತುಲಾಕಾರವಾಗಿ ತುಟಿಯ ಮೇಲೆ ತಿರುಗಿಸಿದರೆ ಸಾಕು. ಸ್ಕ್ರಬ್ಬರ್ ಇಲ್ಲವಾದರೆ, ಪೆಟ್ರೋಲಿಯಂ ಜೆಲ್ಲಿಗೆ ಸಕ್ಕರೆ ಬೆರೆಸಿ ಹೀಗೆ ಮಾಡಿ.

ಮನೆಯಲ್ಲಿರುವ ತುಪ್ಪ/ಬೆಣ್ಣೆ/ತೆಂಗಿನ ಎಣ್ಣೆ ಸಹ ಈ ನಿಟ್ಟಿನಲ್ಲಿ ಒಳ್ಳೆಯದೇ. ವಾರಕ್ಕೊಮ್ಮೆ ಬೆಣ್ಣೆ ಹಚ್ಚಿ ಮಸಾಜ್ ಮಾಡುತ್ತಿದ್ದರೆ, ತುಟಿ ಸಹಜವಾದ ಕೆಂಪು ಬಣ್ಣ ಪಡೆದು ಕೊಳ್ಳುತ್ತದೆ. ಮೃದುವಾಗಿ, ಕಾಂತಿಯುತವಾಗಿ ಇರುವುದು. ಒಡೆಯುವ ಮಾತೇ ಹತ್ತಿರ ಸುಳಿಯದು.

ಇವಿಷ್ಟು ಚಿಕಿತ್ಸೆ ಆದರೆ, ಇನ್ನುಳಿದಂತೆ, ನೀವು ನಿತ್ಯವೂ ಸ್ನಾನ ಆದ ಮೇಲೆ, ತುಟಿಗೆ ಮೇಲೆ ತಿಳಿಸಿದ ಯಾವುದೇ ಜಿಡ್ಡನ್ನು ನಿತ್ಯವೂ ಸವರುವ ಅಭ್ಯಾಸ ಮಾಡಿದರೆ, ತೇವಾಂಶದಿಂದ ಕೂಡಿದ ತುಟಿ ಪರಿಪೂರ್ಣ ಸೌಂದರ್ಯದಿಂದ ಕಂಗೊಳಿಸುವುದು. ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?

ಹಸಿಯಾದ ತೆಂಗಿನ ತುರಿಯನ್ನು ಹಿಂಡಿದಾಗ ಸಿಗುವ ತೆಂಗಿನ ಹಾಲು ಒಡೆದ ತುಟಿಯನ್ನು ಒಂದೇ ಏಟಿಗೆ ನವುರಾಗಿಸಬಲ್ಲದು. ನಿತ್ಯವೂ ಇದನ್ನು ತುಟಿಗಳಿಗೆ ಸವರುತ್ತಿದ್ದರಂತೂ (ನಿಮಗೆ ಬೇಕಾಗುವುದು ಕೇವಲ 2 ಬಿಂದು ತೆಂಗಿನ ಹಾಲು) ತುಟಿ ಅತ್ಯಂತ ಸುಂದರವಾಗಿ ಉಳಿಯ ಬಲ್ಲುದು.

ನಿಮ್ಮ ಶರೀರದ ಹೊರಗಿನ ಅಂದವು ನಿಮ್ಮ ಆರೋಗ್ಯವನ್ನು ಅವಲಂಬಿಸಿದೆ. ಹೊರಗಿನಿಂದ ಎಷ್ಟೇ ಲೇಪಿಸಿದರೂ ಸಹಜ ಕಾಂತಿ ಮೂಡುವುದು ಒಳಗಿನಿಂದ. ಆದ್ದರಿಂದ ನೀವು ಸೇವಿಸುವ ಆಹಾರದಲ್ಲಿ ಸಾಕಷ್ಟು ಹಸಿರು ತರಕಾರಿ, ಸೊಪ್ಪು ಇರುವಂತೆ ನೋಡಿಕೊಳ್ಳಿ. ಹೊರಗಿನ ಜಂಕ್ ಫುಡ್ ನಿಂದ ದೂರವಿರಿ. ತುಟಿಯ ಅಂದ ತೊಂಡೆ ಹಣ್ಣಿನಂತಿರಬೇಕು..! ಏನಂತೀರಿ?

ಋತುಮಾನಕ್ಕೆ ಅನುಗುಣವಾಗಿ ಸಿಗುವ ತಾಜಾ ಹಣ್ಣುಗಳನ್ನು ಸೇವಿಸುತ್ತಿರಿ.. ನಿತ್ಯವೂ ಸಾಕಷ್ಟು ನೀರು ಕುಡಿಯುವುದನ್ನು ಮರೆಯದಿರಿ. ಇದರಿಂದ ತ್ವಚೆಗೆ ಬೇಕಾದ ತೇವಾಂಶವನ್ನು ಒದಗಿಸಿದಂತೆ ಆಗುತ್ತದೆ. ಅದು ಕಾಂತಿಯುತವಾಗಿರಲು ನೀರು ಸಹಕಾರಿ. ಹೀಗೆ ಕಾಪಾಡಿದ ತುಟಿಗಳು ಬಿರಿದು ನಕ್ಕಾಗ, ಹೂವಿನ ಪಕಳೆ ಅರಳಿದಂತಹ ಸೌಂದರ್ಯ ನಿಮ್ಮದಾಗುವುದು.

English summary

Lip Care Tips for This Monsoon

Cracked and chapped lips are the story of winter. But, you can't ignore your beautiful lips in other seasons too. There are many people who suffer from rough lip problems throughout the year; and if you don't take steps to cure that, those cracked and bleeding lips will ruin your image.
X
Desktop Bottom Promotion