For Quick Alerts
ALLOW NOTIFICATIONS  
For Daily Alerts

ಕಾಡುತ್ತಿದೆ ಸಾವಿನ ಕುರಿತು ಇರ್ಫಾನ್ ನುಡಿದ ಆ ಮಾತುಗಳು

|

ಬಾಲಿವುಡ್‌ ನಟ ಇರ್ಫಾನ್‌ ಖಾನ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಅವರ ಸ್ನೇಹಿತರ ಹಾಗೂ ಅಭಿಮಾನಿಗಳ ಹೃದಯ ಭಾರವಾಗಿದೆ. ತಮ್ಮ ಮನೋಯಜ್ಞ ನಟನೆ ಮೂಲಕ ವೀಕ್ಷಕರ ಹೃದಯಲ್ಲಿ ಭದ್ರವಾದ ಸ್ಥಾನಗಳಿಸಿಕೊಂಡಿದ್ದಾರೆ. ಈ ನಟನ ಅಭಿನಯಕ್ಕೆ ಮನಸೋಲದವರೇ ಇಲ್ಲ ಅನ್ನಬಹುದು, ಅಷ್ಟೊಂದು ಸುಂದರವಾಗಿ ಪಾತ್ರಗಳಿಗೆ ಜೀವ ತುಂಬುತ್ತಾರೆ. ಅವರ ನಟನೆಗೆ ಅವರೇ ಸಾಕ್ಷಿ.

ಈ ನಟನಿಗೆ 2018ರಲ್ಲಿ ಸಾವು ಹಿಂಬಾಲಿಸಲು ಪ್ರಾರಂಭಿಸಿತ್ತು. ಆದರೆ ಅವರೇ ಹೇಳಿದಂತೆ 'ಇಲ್ಲ.. ಇಲ್ಲ.. ನಾನು ತಲುಪಬೇಕಾದ ಸ್ಥಳ ಇನ್ನೂ ಬಂದಿಲ್ಲ' ಎಂದು ಮುಂದೂಡುತ್ತಲೇ ಬಂದಿದ್ದರು. ಅವರ ಹಿತೈಷಿಗಳೆಲ್ಲರೂ ಅವರು ಆರೋಗ್ಯವಂತರಾಗಿ ಮತ್ತೆ ಮೊದಲಿನಂತಾಗಲಿ ಎಂದು ಬಯಸಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು ಏನೋ... ಅವರು ತಮ್ಮ ಸ್ಟಾಪ್‌ ಬಂತೆಂದು ಇಳಿದೇ ಹೋಗಿಬಿಟ್ಟಿದ್ದಾರೆ...

ಇದೀಗ ಅವರಿಲ್ಲ, ಆದರೆ 2018ರಲ್ಲಿ ತಮಗೆ ಕ್ಯಾನ್ಸರ್‌ ಇದೆ ಎಂದು ಗೊತ್ತಾದಾಗ ಅವರು ಹೇಳಿದ ಬಾವುಕ ನುಡಿಗಳು ನೆನಪಾಗುತ್ತಿವೆ. ಆ ಮಾತುಗಳನ್ನು ಅವರು ಹೇಳಿದಂತೆಯೇ ನಿಮ್ಮ ಮುಂದೆ ಇಟ್ಟಿದ್ದೇವೆ ನೋಡಿ:

ಕಾಯಿಲೆ ಇದೆ ಎಂದು ಗೊತ್ತಾದಾಗ ಇರ್ಫಾನ್ ಹೇಳಿದ ಮಾತುಗಳು...

ಕಾಯಿಲೆ ಇದೆ ಎಂದು ಗೊತ್ತಾದಾಗ ಇರ್ಫಾನ್ ಹೇಳಿದ ಮಾತುಗಳು...

ಕೆಲವೊಮ್ಮೆ ಬದುಕಿನಲ್ಲಿ ಬರುವ ಅಚಾನಕ್ ಸಂಗತಿಗಳು ಬದುಕನ್ನೇ ಅಲುಗಾಡಿಸಿ ಬಿಡುತ್ತವೆ. ಕಳೆದ ಹದಿನೈದು ದಿನಗಳಿಂದ ನನ್ನ ಬದುಕು ಒಮದು ಸಸ್ಪೆನ್ಸ್ ಸ್ಟೋರಿಯಾಗಿದೆ. ಸ್ವಲ್ಪ ಗೊತ್ತಿರುವುದು ಏನೆಂದರೆ ನಾನು ಅಪರೂಪದ ಕತೆಗಳಿಗಾಗಿ ಹುಡುಕುತ್ತಿರುವಾಗ ಅಪರೂಪದ ಕಾಯಿಲೆ ಸಿಕ್ಕಿದೆ. ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ, ನನ್ನ ಆಯ್ಕೆಗಾಗಿ ಹೋರಾಡುತ್ತಿದ್ದೆ ಹಾಗೂ ಪಡೆಯುತ್ತಿದ್ದೆ. ನನ್ನ ಕುಟುಂಬ ಹಾಗೂ ಸ್ನೇಹಿತರು ನನ್ನ ಜೊತೆ ಇದ್ದಾರೆ, ನಾವೆಲ್ಲಾ ಇದರಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇವೆ. ಈ ಸಮಯದಲ್ಲಿ ನಾನು ನನ್ನ ಕತೆಯನ್ನು ವಾರದೊಳಗೆ ಅಥವಾ 10 ದಿನದೊಳಗೆ ಹೇಳುತ್ತೇನೆ ಎಂದು ಊಹಿಸಬೇಡಿ. ಮುಂದಿನ ವರದಿ ಬರಬೇಕಾಗಿದೆ, ಅಲ್ಲಿಯವರೆಗೆ ನನಗೆ ಒಳಿತನ್ನು ಬಯಸಿ ಎಂದು ತಮಗೆ ಬಂದ ಕಾಯಿಲೆಯ ಸೂಚನೆಯನ್ನು ನೀಡಿದ್ದರು.

ಅಪರೂಪದ ಕಾಯಿಲೆ ಬಗ್ಗೆ ಹೇಳಿದ ಇರ್ಫಾನ್

ಅಪರೂಪದ ಕಾಯಿಲೆ ಬಗ್ಗೆ ಹೇಳಿದ ಇರ್ಫಾನ್

‘ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್‌, ಈ ಹೆಸರೇ ನನ್ನ ಶಬ್ದಕೋಶಕ್ಕೆ ಹೊಸತು. ಇದು ತೀರಾ ಅಪರೂಪದ ಕ್ಯಾನ್ಸರ್​​ ರೋಗ. ಇದರ ಬಗ್ಗೆ ನಡೆದ ಅಧ್ಯಯನಗಳೂ ಕಡಿಮೆ. ಹೀಗಾಗಿ ನಿಶ್ಚಿತವಾದ ಔಷಧಿ ಇಲ್ಲ. ಹೀಗಾಗಿ, ನಾನೀಗ ವೈದ್ಯ ಲೋಕಕ್ಕೆ ಟ್ರಯಲ್ ಆ್ಯಂಡ್ ಎರರ್ ಆಟದ ವಸ್ತು ಅಷ್ಟೇ.

ಅಸಲಿಗೆ ನಾನೊಂದು ಭಿನ್ನ ಆಟದಲ್ಲಿದ್ದೆ... ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕನಸುಗಳು, ಯೋಜನೆಗಳು, ಆಕಾಂಕ್ಷೆಗಳು, ಗುರಿಗಳು ಈ ಎಲ್ಲವೂಗಳಲ್ಲಿ ನಾನು ಎಂಗೇಜ್​ ಆಗಿದ್ದೆ. ಥಟ್ಟನೆ ಯಾರೋ ಭಜ ತಟ್ಟಿದ ಹಾಗಾಯ್ತು. ತಿರುಗಿ ನೋಡಿದರೆ ಟಿಸಿ ನಿಂತಿದ್ದರು... ‘‘ನೀವು ತಲುಪಬೇಕಾದ ಸ್ಥಳ ಬಂದಿದೆ.. ಪ್ಲೀಸ್​ ಇಳಿದು ಬಿಡಿ..'' ಅಂದಾಗ ನನಗೆ ಗೊಂದಲ: ಇಲ್ಲ.. ಇಲ್ಲ.. ನಾನು ತಲುಪಬೇಕಾದ ಸ್ಥಳ ಇನ್ನೂ ಬಂದಿಲ್ಲ' ಎಂದೆ. ‘‘ಇಲ್ಲ, ಅದೇ ಇದು.. ಕೆಲಮೊಮ್ಮೆ ಹಾಗೆಯೇ ಆಗುತ್ತೆ. "

ನನಗೆ ಈಗ ಅರ್ಥವಾಗಿದ್ದು ಇಷ್ಟೇ; ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲು ಅಸಾಧ್ಯವಾಗುತ್ತದೆ ಹಾಗೂ ಅವುಗಳನ್ನು ನಿಯಂತ್ರಿಸಲು ನೀವು ಹತಾಶರಾಗಿ ಪ್ರಯತ್ನಿಸುತ್ತೀರಿ. ಇಂಥದೊಂದು ಗಾಬರಿ, ಆತಂಕ, ಭಯ ಪರಿಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ನಾನು, ನನ್ನ ಮಗನ ಬಳಿ ಹೇಳಿಕೊಂಡೆ: ‘‘ನನ್ನಿಂದ ನಾನು ನಿರೀಕ್ಷಿಸುವುದು ಇಷ್ಟೇ. ಈ ಪರಿಸ್ಥಿತಿಯನ್ನು ಮತ್ತೆ ಎಂದಿಗೂ ನಾನು ಎದುರಿಸಬಾರದು. ನನ್ನ ಕಾಲ ಮೇಲೆ ನಾನು ನಿಲ್ಲಬೇಕಿದೆ. ಭೀತಿ ಮತ್ತು ಭಯ ನನ್ನ ಆಕ್ರಮಿಸಿಕೊಳ್ಳಬಾರದು''

ನೋವಿನ ಅರಿವು ನಿಮಗೆ ತಿಳಿದಿದ್ದರೆ, ನನ್ನ ಈಗಿನ ಸ್ವರೂಪ ಮತ್ತು ತೀವ್ರತೆಯ ಅನುಭವ ನಿಮಗೂ ಇರುತ್ತದೆ. ಯಾವುದೇ ಸಮಾಧಾನ, ಪ್ರೇರಣೆ ಕೆಲಸ ಮಾಡುತ್ತಿಲ್ಲ. ಬರೀ ನೋವು, ಮತ್ತು ಈ ನೋವು ದೇವರಿಗಿಂತಲೂ ಅಗಾಧವಾದದ್ದು ಅನಿಸುತ್ತಿದೆ."

 ಸಾವಿನೊಡನೆ ಹೋರಾಡಿದ್ದ ಇರ್ಫಾನ್

ಸಾವಿನೊಡನೆ ಹೋರಾಡಿದ್ದ ಇರ್ಫಾನ್

ದುಗುಡ, ದಣಿವಿನಿಂದ ಲಂಡನ್ ಆಸ್ಪತ್ರೆ ಪ್ರವೇಶಿಸಿದಾಗ ಆಸ್ಪತ್ರೆಯ ಮುಂಭಾಗದಲ್ಲಿ ಲಾರ್ಡ್ಸ್ ಸ್ಟೇಡಿಯಂ ಇರೋದು ಅರಿವಾಯ್ತು. ಇದು ನನ್ನ ಬಾಲ್ಯದ ಕನಸಿನ ಮೆಕ್ಕಾ. ನೋವಿನ ಮಧ್ಯೆಯೂ ನಾನು ಅಲ್ಲಿ ನಗುತ್ತಿರುವ ವಿವಿಯನ್‌ ರಿಚರ್ಡ್ಸ್ ಅವರ ಪೋಸ್ಟರ್‌ ಕಂಡೆ. ನಾನು ಈ ಜಗತ್ತಿನಲ್ಲಿ ಇಲ್ಲದಿದ್ದರೂ ಈ ಪ್ರಪಂಚದಲ್ಲಿ ಏನೂ ಸಂಭವಿಸುವುದಿಲ್ಲ. ಎಲ್ಲವೂ ಹಾಗೆಯೇ ಇರುತ್ತದೆ.

ನನ್ನ ಕೊಠಡಿಯ ಬಲಭಾಗದಲ್ಲಿ ಕೋಮಾದಲ್ಲಿ ಇರುವವರ ವಾರ್ಡ್ ಇದೆ. ಒಂದೊಮ್ಮೆ ನಾನು ಆಸ್ಪತ್ರೆಯ ಬಾಲ್ಕನಿಯಲ್ಲಿ ನಿಂತು ದೂರಕ್ಕೆ ದೃಷ್ಟಿ ಹರಿಸಿದೆ. ತಕ್ಷಣ ವಿಲಕ್ಷಣವಾದ ಭಾವವೊಂದು ನನ್ನನ್ನು ಕಾಡಿತು. ಜೀವನ ಆಟ ಮತ್ತು ಸಾವಿನ ಆಟದ ನಡುವೆ ಒಂದು ಕೇವಲ ಒಂದು ರಸ್ತೆ ಮಾತ್ರ ಅಲ್ಲಿತ್ತು. ಒಂದು ಕಡೆ ಕ್ರೀಡಾಂಗಣ... ಮತ್ತೊಂದು ಕಡೆ ಆಸ್ಪತ್ರೆ ಇತ್ತು. ಆದರೆ ನಾವು ಇವೆರಡರಲ್ಲಿ ಒಂದರ ಭಾಗವಾಗಿದ್ದೇವೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಕ್ರೀಡಾಂಗಣಕ್ಕೂ ಸೇರಿದವರಲ್ಲ, ಆಸ್ಪತ್ರೆಗೂ ಸೇರಿದವರಲ್ಲ. ಈ ಸತ್ಯ ನನ್ನನ್ನು ಬಹಳವಾಗಿ ಕಾಡಿತು.

ಈ ಬ್ರಹ್ಮಾಂಡಕ್ಕೆ ಅದೆಂಥಾ ಅಭೂತ ಪೂರ್ವ ಶಕ್ತಿ ಇದೆ ಎಂಬುದು ಗೊತ್ತಾಯಿತು. ನನ್ನ ಆಸ್ಪತ್ರೆ ಇರುವ ಸ್ಥಳದ ಈ ಒಂದು ವಿಚಿತ್ರ ಘಟ್ಟ ನನ್ನನ್ನು ಬಹುವಾಗಿ ಕಾಡಿತು. ನನ್ನಲ್ಲೀಗ ಅನಿಶ್ಚಿತತೆ ಮನೆ ಮಾಡಿದೆ. ನಾನೀಗ ಮಾಡಲು ಸಾಧ್ಯವಿರುವುದು ಒಂದನ್ನೇ.. ನನ್ನ ಸಾಮರ್ಥ್ಯವನ್ನು ಅರಿತುಕೊಂಡು, ನನ್ನ ಪಾಲಿನ ಆಟವನ್ನು ಅತ್ಯುತ್ತಮವಾಗಿ ಆಡೋದು.

ಫಲಿತಾಂಶ ಏನಾಗಬಹುದೆಂದು ಯೋಚಿಸಿದೆ, ಇದು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದೆಂದೂ ಯೋಚಿಸಿದೆ. ಈಗಿನಿಂದ ನಾಲ್ಕು ಎಂಟು ತಿಂಗಳು ಅಥವಾ ಎರಡು ವರ್ಷವಾಗಲಿ, ಫಲಿತಾಂಶ ಏನೇ ಬರಲಿ. ನಾನು ನಂಬಿಕೆ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿದ್ದೇನೆ.

ಆಸ್ಪತ್ರೆಯ ಚಿಕಿತ್ಸೆ ಪಡೆಯುವಾಗ ಮೊದಲ ಬಾರಿಗೆ ಸ್ವಾತಂತ್ರ್ಯ ಎನ್ನುವ ಪದದ ನಿಜವಾದ ಅರ್ಥ ಮನವರಿಕೆಯಾಗಿದೆ. ಜೀವನದ ಮ್ಯಾಜಿಕನ್ನು ಮೊದಲ ಬಾರಿಗೆ ಪರೀಕ್ಷಿಸುತ್ತಿದ್ದೇನೆ. ಫಲಿತಾಂಶ ಏನಾಗಲಿದೆ ಎಂಬುದನ್ನು ಕಾಯುತ್ತಿದ್ದೇನೆ. ನನ್ನ ಪ್ರತಿಯೊಂದು ಕಣಕಣದಲ್ಲೂ ವಿಶ್ವಾಸವಿದೆ. ಅದು ಉಳಿಯುವುದೇ ಎನ್ನುವುದನ್ನು ಸಮಯವೇ ಹೇಳಲಿದೆ. "

ನನ್ನ ಜೀವನದ ಪ್ರಯಾಣದುದ್ದಕ್ಕೂ ಜಗತ್ತಿನಾದ್ಯಂತ ಜನ ನನಗಾಗಿ ಪ್ರಾರ್ಥಿಸಿಸುತ್ತಿದ್ದಾರೆ... ಶುಭ ಕೋರಿದ್ದಾರೆ. ನನಗೆ ತಿಳಿದಿರುವ, ತಿಳಿಯದೆ ಇರುವ ಜನರು ವಿಶ್ವದ ವಿವಿಧೆಡೆಯಿಂದ ನನಗಾಗಿ ಪ್ರಾರ್ಥಿಸುತ್ತಿದ್ದಾರೆ. ಬೇರೆ ಬೇರೆ ಜಾಗದಲ್ಲಿ ಬೇರೆ ಬೇರೆ ಕಾಲಮಾನದಲ್ಲಿ ಮಾಡಿದ ಈ ಪ್ರಾರ್ಥನೆ ಒಂದಾಗಿ ನನಗೆ ಸ್ಫೂರ್ತಿ ನೀಡುತ್ತಿದೆ... ನನ್ನ ಶಕ್ತಿಯ ಕಿರೀಟವಾಗಿದೆ. ಈ ವಿಶ್ವಾಸ ನಿಧಾನವಾಗಿ ಮೊಗ್ಗಾಗಿ, ಎಲೆಯಾಗಿ, ರೆಂಬೆವಾಗಿ ಬೆಳೆಯುತ್ತಿದೆ. ನಾನು ಈ ಪ್ರಾರ್ಥನೆಯನ್ನು ನೋಡುತ್ತ ತೃಪ್ತಿಪಡುತ್ತಿದ್ದೇನೆ. ಪ್ರತಿ ಹೂವು, ಪ್ರತಿ ರೆಂಬೆಯೂ ಸಾಮೂಹಿಕ ಪ್ರಾರ್ಥನೆಯ ಮೂಲಕ ನನ್ನನ್ನು ತಲುಪಿ ಅಚ್ಚರಿ, ಸಂತೋಷ ಮತ್ತು ಕುತೂಹಲ ಮೂಡಿಸಿದೆ. ಒಂದು ಪ್ರವಾಹವನ್ನು ತಡೆಯಲು ಮುಚ್ಚಳದ ಅಗತ್ಯವಿಲ್ಲ ಎನ್ನುವುದು ಮನವರಿಕೆಯಾಗಿದೆ. ಬಹುಶಃ ಪ್ರಕೃತಿ ನನಗೆ ಸಣ್ಣ ಆಘಾತ ನೀಡಿದೆಯಷ್ಟೆ.''

ಕದನದಲ್ಲಿ ಸಾವು ಗೆದ್ದಿದ್ದ ಇರ್ಫಾನ್...

ಕದನದಲ್ಲಿ ಸಾವು ಗೆದ್ದಿದ್ದ ಇರ್ಫಾನ್...

ಇರ್ಫಾನ್ ಖಾನ್‌ ಯುಕೆಯಿಂದ ಚೇತರಿಸಿಕೊಂಡು ಬಂದಾಗ ಅವರ ಪತ್ನಿ ತನ್ನ ಗಂಡ ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ, ನಾನು ನಿಮ್ಮ ಕರೆಗಳಿಗೆ, ಮಸೇಜ್‌ಗಳಿಗೆ ಸ್ಪಂದಿಸಲಿಲ್ಲ, ಅದಕ್ಕಾಗಿ ಕ್ಷಮೆ ಇರಲಿ, ನಾನೂ ಕೂಡ ಯುದ್ಧ ಭೂಮಿಯಲ್ಲಿ ಗೆಲ್ಲಲು ಸ್ಟ್ರಾಟಜಿಗಳನ್ನು ಮಾಡುತ್ತಿದ್ದೆ, ನಾವು ಇದನ್ನು ಜಯಿಸಲೇಬೇಕು ಎಂದು ಬರೆದಿದ್ದರು.

ಸಾವು ಗೆದ್ದು ಇರ್ಫಾನ್‌ ನೋಡಿದಾಗ ಎಲ್ಲರೂ ಸಂಭ್ರಮಿಸಿದ್ದರು, ಆದರೆ ಆ ಸಂಭ್ರಮ ತುಂಬಾ ಕಾಲ ಉಳಿಯಲಿಲ್ಲ... ಇರ್ಫಾನ್‌ ನೀವು ಇಲ್ಲದಿದ್ದರೂ ನಿಮ್ಮ ನಟನೆ, ನೆನಪುಗಳು ಸದಾ ನಮ್ಮ ಮನಸ್ಸಿನಲ್ಲಿ ಭದ್ರವಾಗಿರುತ್ತದೆ, ಮತ್ತೊಮ್ಮೆ ಹುಟ್ಟಿ ಬಾ ಇರ್ಫಾನ್....

English summary

Remembering Irfan Khan Heartfelt Letter

In the absence Of Irfan Khan remebering his heart felt letter written in 2018, Read on.
Story first published: Thursday, April 30, 2020, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X