For Quick Alerts
ALLOW NOTIFICATIONS  
For Daily Alerts

ಅಣ್ಣ-ತಂಗಿಯ ನಡುವಿನ ಬಂಧ, ಜನ್ಮ ಜನ್ಮದ ಅನುಬಂಧ

By Arshad
|

ಬಾಲ್ಯವೆಂಬುದು ಒಂದು ಶಾಶ್ವತ ನೆನಪು. ಬಾಲ್ಯದ ಆಟ, ಗೆಳೆಯರೊಡನೊಡನಾಟ, ಸಹೋದರ ಸಹೋದರಿಯರಲ್ಲಿ ಮಾಡಿದ ಜಗಳ, ಮನೆಯಲ್ಲಿ ತಿಂದ ಏಟು ಎಲ್ಲವೂ ನಿನ್ನೆಯಷ್ಟೇ ಸಂಭವಿಸಿದೆಯೇ ಎಂಬಷ್ಟು ಸ್ಪಷ್ಟವಾಗಿ ನೆನಪಿರುತ್ತದೆ. ಅದರಲ್ಲೂ ಅಣ್ಣ-ತಂಗಿ, ಅಕ್ಕ-ತಮ್ಮನ ಅನುಬಂಧ ಜೀವಮಾನವಿಡೀ ಮರೆಯಲಾಗದಂತಹದ್ದು. ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಇರುವ ಮಹಿಳೆಯ ಸ್ಥಾನದಲ್ಲಿ ತಾಯಿಯ ಬಳಿಕ ಸಹೋದರಿಯೇ ಇರುತ್ತಾಳೆ.

ಸಾಮಾನ್ಯವಾಗಿ ಹೆಣ್ಣು ಮಕ್ಕಳೆಂದರೆ ತಂದೆಗೂ ಗಂಡು ಮಕ್ಕಳೆಂದರೆ ತಾಯಿಗೂ ಮುದ್ದು ಹೆಚ್ಚು. ಇದನ್ನು ಮನಗಂಡ ಸಹೋದರಿಯರು ಕೆಲವೊಮ್ಮೆ ಸವಿಮಾತಿನಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವುದೂ ಉಂಟು. ಕೆಲವೊಮ್ಮೆ ಇದಕ್ಕಾಗಿ ತಮ್ಮನಿಗೆ ಪಾಲನ್ನು ಕೊಡಲಾರದೇ ವೈಮನಸ್ಸು ಹೆಚ್ಚುತ್ತದೆ. ಉದಾಹರಣೆಗೆ ಸುಮಾರು ಎಂಭತ್ತು ತೊಂಬತ್ತು ದಶಕದವರೆಗೂ ಗಂಡುಮಕ್ಕಳಿಗೆ ಮನೆಯಿಂದ ಹೋಗುವ ದೂರಪ್ರವಾಸದ ಭಾಗ್ಯವೇ ಇರಲಿಲ್ಲ.

Ways To Build A Stronger Bond With Your Sister

ಏಕೆಂದರೆ ತಂದೆ ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡುತ್ತಾ ನಾಳೆ ಇವರು ಮದುವೆಯಾಗಿ ಹೋಗುವ ಮನೆಯಲ್ಲಿ ಈ ಭಾಗ್ಯ ದೊರಕುತ್ತದೆಯೋ ಇಲ್ಲವೋ, ನೀವಾದರೆ ಇಲ್ಲೇ ಇರುವವರು, ನೀವು ಗಳಿಸಿದ ಮೇಲೆ ಹೋಗಬಹುದು ಎಂಬ ಉತ್ತರವನ್ನು ನೀಡುತ್ತಿದ್ದರು. ಇಂತಹದ್ದೇ ಯಾವುದಾದರೊಂದು ನೆಪದಿಂದ ಸಹೋದರಿಯ ಮೇಲೆ ನಿಧಾನವಾಗಿ ವೈಮನಸ್ಸು ಮೂಡುತ್ತಾ ವಯಸ್ಸಾದಂತೆ ಯಾವುದೇ ಸಂಪರ್ಕವಿಲ್ಲದೇ ಒಂದು ನೆನಪಾಗಿ ಮಾತ್ರ ಉಳಿದುಬಿಡುತ್ತಾರೆ.

ಆದರೆ ಅಣ್ಣತಂಗಿಯ ಬಾಂಧವ್ಯ ಶಾಶ್ವತವಾದದ್ದು. ಬಾಲ್ಯದ ಅಥವಾ ಇನ್ನೆಂದೋ ಆದ ಘಟನೆ ಅಥವಾ ಮಾತು ಬೆಳೆದು ಸಹೋದರಿಯಿಂದ ದೂರಾಗಿದ್ದೀರಾ? ಅಥವಾ ಮೊದಲಿನಷ್ಟು ಸಲಿಗೆ ಇಲ್ಲವೇ? ವಾಸ್ತವವೆಂದರೆ ನಿಮ್ಮ ಸಹೋದರಿಯೂ ಈ ಬಗ್ಗೆ ನಿಮಗಿಂತ ಹೆಚ್ಚು ವ್ಯಾಕುಲಳಾಗಿರುತ್ತಾಳೆ. ಆದರೆ ಗಂಡನ ಮನೆಗೆ ಬಂದ ಮೇಲೆ ತೌರಿನ ಹಂಗು ಇರಬಾರದೆಂದೂ, ಮಾತು ಬೆಳೆಸಿದರೆ ನೀವೆಲ್ಲಾದರೂ ನೊಂದುಕೊಳ್ಳಬಹುದೆಂದೂ ನಿಮ್ಮ ತಿರಸ್ಕಾರವನ್ನೇ ತನ್ನ ಪಾಲಿಗೆ ಬಂದ ಅಮೃತವೆಂದು ತಿಳಿದುಕೊಂಡಿರುತ್ತಾಳೆ.

ಒಮ್ಮೆ ನಿಮ್ಮ ಸಹೋದರಿಯೊಂದಿಗೆ ಮನಬಿಚ್ಚಿ ಮಾತನಾಡಿ, ಹಳೆಯ ಪುರಾಣಗಳನ್ನೊಂದೂ ಬಿಚ್ಚದೇ ಇಂದಿನ ಮತ್ತು ಆಕೆಯ ಮನೆಯವರ, ಆಪ್ತರ, ಆಕೆಯ ಅಭಿರುಚಿಗಳ ಬಗ್ಗೆಯೇ ಮಾತನಾಡಿ. ನಿಮಗೇ ಆಶ್ಚರ್ಯವಾಗುವಂತೆ ನಿಮಗಿಂತಲೂ ಹೆಚ್ಚಾಗಿ ನಿಮ್ಮ ಮೇಲೆ ಆಕೆ ಪ್ರೀತಿಯ ಸುರಿಮಳೆ ಸುರಿಸುತ್ತಾಳೆ. ಆದರೆ ಹೇಗೆ ಪ್ರಾರಂಭಿಸಬೇಕು ಎಂಬ ದ್ವಂದ್ವವೇ? ಮುಂದೆ ಓದಿ...

ನಿಮ್ಮ ಸಹೋದರಿಯ ಬಗ್ಗೆ ಮೃದು ಧೋರಣೆ ತಾಳಿ
ನಿಮ್ಮ ಸಹೋದರಿಯ ಬಗ್ಗೆ ಯಾವುದೇ ಭಾವನೆ ಇದ್ದರೂ ಅದನ್ನು ತೊಡೆದು ಈ ಹೊತ್ತಿಗೆ ಆಕೆ ನನ್ನ ಬಾಲ್ಯದ ಗೆಳತಿ ಎಂದು ಮನಸ್ಸಿನಲ್ಲಿ ಗಟ್ಟಿಯಾಗಿಸಿಕೊಳ್ಳಿ. ಇದೇ ಭಾವನೆಯೊಂದಿಗೆ ಆಕೆಯೊಂದಿಗೆ ಮುಕ್ತವಾಗಿ ಮಾತನಾಡಿ, ಭೇಟಿಯಾಗಿ, ಸಾಧ್ಯವಿದ್ದರೆ ಬಾಲ್ಯದ ಆಟಗಳನ್ನು ಮತ್ತೊಮ್ಮೆ ಆಡಿ, ನರ್ತಿಸಿ, ಹಾಡುಗಳನ್ನು ಜೊತೆಯಾಗಿ ಕೇಳಿ. ಸಾಧ್ಯವಾದರೆ ಕುಟುಂಬ ಸಹಿತ ಬಾಲ್ಯದಲ್ಲಿ ಭೇಟಿ ನೀಡಿದ್ದ ಸ್ಥಳಗಳನ್ನು, ನೆಂಟರ ಮನೆಯನ್ನು, ಶಾಲೆ ಕಾಲೇಜುಗಳನ್ನು ಮತ್ತೊಮ್ಮೆ ಭೇಟಿ ನೀಡಿ ನಿಮ್ಮ ಬಾಲ್ಯದ ನೆನಪುಗಳನ್ನು ಕೆದಕಿ. ನಿಮ್ಮ ಮನ ಹೇಗೆ ಪ್ರಪುಲ್ಲಿತವಾಗುತ್ತದೆ, ನಿಮ್ಮ ಸಹೋದರಿ ಎಷ್ಟು ಸಂಭ್ರಮ ಪಡುತ್ತಾರೆ ನೋಡಿ.

ನಿಮ್ಮ ಕೆಲವು ಖಾಸಗಿ ವಿಷಯಗಳನ್ನು ಆಕೆಗೆ ತಿಳಿಸಿ
ನಿಮ್ಮ ಸಹೋದರಿ ನಿಮ್ಮ ಬಗ್ಗೆ ಅನುಬಂಧ ತಳೆಯಲು ಉತ್ತಮವಾದ ಇನ್ನೊಂದು ಮಾರ್ಗವೆಂದರೆ ನಿಮ್ಮ ಖಾಸಗಿ ವಿಷಯಗಳನ್ನು ಆಕೆಗೆ ತಿಳಿಸುವುದು. ಇದು ಆಕೆಯಲ್ಲಿ ನಿಮ್ಮ ಬಗ್ಗೆ ಅಭಿಮಾನವನ್ನುಂಟು ಮಾಡುತ್ತದೆ. ಆದರೆ ಈ ವಿಷಯಗಳು ಆಕೆಯ ವೈಯಕ್ತಿಯ ಜೀವನದಲ್ಲಿ ಯಾವುದೇ ಬಾಧತೆಯುಂಟಾದಿರುವಂತೆ ನೋಡಿಕೊಳ್ಳಿ. ಆಕೆಯ ಮನೆಯವರ ಬಗ್ಗೆ ಎಂದಿಗೂ ಚಕಾರವೆತ್ತಬೇಡಿ. ಸಾಧ್ಯವಾದಷ್ಟು ಬಾಲ್ಯಕ್ಕೆ ಮತ್ತು ನಿಮ್ಮ ವೈಯಕ್ತಿಯ ವಿಷಯಗಳಿಗೆ, ನಿಮ್ಮ ಪುರೋಭಿವೃದ್ಧಿಗೆ ಸಂಬಂಧಿಸಿದ ವಿಷಯಗಳೇ ಇರಲಿ. ಆದರೆ ನಿಮ್ಮ ಕುಟುಂಬ ಮತ್ತು ನಿಮ್ಮ ಪತ್ನಿಯ ಕುರಿತಾದ ಅತಿ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಪರಾಮರ್ಶೆ ಅಗತ್ಯ.

ಆಕೆಯಲ್ಲಿ ಸಲಹೆಯನ್ನು ಕೇಳಿ
ನಿಮ್ಮ ವೈಯಕ್ತಿಕ ಅಥವಾ ಔದ್ಯೋಗಿಕ ವಿಷಯಗಳ ಬಗ್ಗೆ ನಿಮ್ಮ ಸಹೋದರಿಯಲ್ಲಿ ಪ್ರಸ್ತಾಪಿಸಿ ಆಕೆಯ ಸಲಹೆ ಅಥವಾ ಅಭಿಪ್ರಾಯ ಕೇಳಿ. ನೀವು ಈಗಾಗಲೇ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದರೂ ಸರಿ, ಇದನ್ನು ಪ್ರಸ್ತಾಪಿಸದೇ ಸಹೋದರಿಯಲ್ಲಿ ಇದರ ಬಗ್ಗೆ ವಿಚಾರ ವಿಮರ್ಶೆ ಮಾಡಿ. ಇದರಿಂದ ಆಕೆಗೆ ನಿಮ್ಮ ಮೇಲೆ ಅಭಿಮಾನ ಮೂಡುತ್ತದೆ. ತನ್ನ ಸಹೋದರ ತನ್ನನ್ನೊಂದು ಮಾತು ಕೇಳಿದನಲ್ಲಾ ಅಷ್ಟೇ ಸಾಕು, ಎಂಬ ಯೋಚನೆಯೇ ಆಕೆಯಲ್ಲಿ ಪುಳಕವುಂಟುಮಾಡುತ್ತದೆ
ಆಕೆಯ ಅಭಿಪ್ರಾಯಗಳನ್ನು ನೀವು ಬಳಿಕ ಕಡೆಗಣಿಸಿದರೂ ಆಕೆಗೆ ಅದು ಮುಖ್ಯವಾಗುವುದಿಲ್ಲ, ನೀವು ಆಕೆಯ ಅಭಿಪ್ರಾಯ ಕೇಳಿದ್ದೇ ಮುಖ್ಯವಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಸಹೋದರಿ ನೀಡಿದ ಸಲಹೆಗಳು ತಾಯಿ ನೀಡಿದ ಸಲಹೆಗಿಂತಲೂ ಹೆಚ್ಚು ಫಲಪ್ರದವಾಗುವುದು ಕಂಡುಬಂದಿದೆ. ಉದಾಹರಣೆಗೆ ಉದ್ಯೋಗಕ್ಕೆ ನಗರಕ್ಕೆ ಹೋಗಬೇಕಾದ ಸಂದರ್ಭ ಬಂದಾಗ ತಾಯಿ ಬೇಡ ಇಲ್ಲೇ ಏನಾದರೂ ಮಾಡು ಎಂದರೆ ಸಹೋದರಿ, ಸಿಕ್ಕಿರುವ ಅವಕಾಶ ಬಿಡಬೇಡ, ನಗರಕ್ಕೆ ಹೋಗು ಎಂದ ಸಲಹೆಯನ್ನು ಪಾಲಿಸಿದವರು ಇಂದು ಯಶಸ್ವಿ ಉದ್ಯಮಿಗಳಾಗಿದ್ದಾರೆ.

ನಿಮ್ಮ ಸಹೋದರಿಯೊಂದಿಗೆ ಅತಿ ಸೌಜನ್ಯದಿಂದ ವರ್ತಿಸಿ
ಬಾಲ್ಯದಲ್ಲಿ ಜಡೆ ಎಳೆದ ನಿಮ್ಮ ಸಹೋದರಿಯನ್ನು ಈಗ ಓರ್ವ ಅತಿಮುಖ್ಯ ವ್ಯಕ್ತಿಯಂತೆ ಪರಿಗಣಿಸಿ. ಏಕೆಂದರೆ ಆಕೆ ಈಗ ಪ್ರೌಢಳಾಗಿದ್ದು ಆಕೆಯ ಲೋಕ ಬಾಲ್ಯಕ್ಕಿಂತ ಬೇರೆಯದ್ದಾಗಿರುತ್ತದೆ. ಈ ಸಮಯದಲ್ಲಿ ನಿಮ್ಮಿಂದ ಅತಿಸೌಜನ್ಯವನ್ನು ಪಡೆದ ಆಕೆಗೆ ನಿಮ್ಮಲ್ಲಿ ಉತ್ತಮ ಅನುಬಂಧವನ್ನು ಹೊಂದಲು ಸಾಧ್ಯವಾಗುತ್ತದೆ. ಎಷ್ಟೇ ವ್ಯಸ್ತರಿದ್ದರೂ ತಿಂಗಳಿಗೊಂದೆರಡು ಬಾರಿಯಾದರೂ ಪರಸ್ಪರ ಭೇಟಿಯಾಗಿ. ಎಂದಿಗೂ ಧನಿ ಎತ್ತರಿಸಬೇಡಿ. ಆಕೆಯ ಮಾತುಗಳನ್ನು ಸಾವಧಾನದಿಂದ ಕೇಳಿ. ಆಕೆಯ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮಿಂದ ಸಾಧ್ಯವಾದ ನೆರವು ನೀಡಿ.

English summary

Ways To Build A Stronger Bond With Your Sister

Most of us are quite fortunate to have strong bonds with our sisters from a very young age. But some are not so lucky as they have rivalry between them which leads to sour relationships. But some are not so lucky as they have rivalry between them which leads to sour relationships. Check out different ways to build a stronger bond with your sister with these simple tricks and share an everlasting bond with them.
X
Desktop Bottom Promotion