For Quick Alerts
ALLOW NOTIFICATIONS  
For Daily Alerts

ಪ್ರೇಮವೆಂದರೆ ಜೊತೆಯಲ್ಲಿ ಸುತ್ತಾಟ, ಸರಸ, ಸಲ್ಲಾಪ ಅಷ್ಟೇನಾ?

By Lavakumar B.m.
|

ಪ್ರೇಮ ಅಂದರೆ ಜೊತೆ ಜೊತೆಯಲ್ಲಿ ಸುತ್ತಾಡುವುದಾ...? ಪಾರ್ಕ್‌ಗಳಲ್ಲಿ ಕುಳಿತು ಐಸ್ ಕ್ರೀಮ್ ತಿನ್ನುವುದಾ? ಅದರಾಚೆಗೆ ಒಂದಷ್ಟು ಸರಸ ಸಲ್ಲಾಪನಾ? ಹೀಗೆ ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತವೆ..

ಇಷ್ಟಕ್ಕೂ ಭಾರತದಂತಹ ಸಂಪ್ರದಾಯದ ದೇಶದಲ್ಲಿ ಪ್ರೇಮಿಸೋಕೆ ಒಂದು ದಿನ ಬೇಕಾ ಎಂಬ ಹತ್ತಾರು ಪ್ರಶ್ನೆಗಳು ನಮ್ಮನ್ನು ಕಾಡದಿರದು.

valentine day

ಪ್ರೀತಿ, ಪ್ರೇಮದ ವಿಚಾರಕ್ಕೆ ಬಂದರೆ ಅದನ್ನು ಪ್ರತಿಯೊಬ್ಬರೂ ಶಾಶ್ವತವಾಗಿರಿಸಿಕೊಳ್ಳಬೇಕೆಂದು ಬಯಸುತ್ತಾರೆಯೇ ವಿನಃ ಒಂದು ದಿನದ ಅಗ್ರಿಮೆಂಟ್ ಆಗಿ ನೋಡಲು ಇಷ್ಟಪಡುವುದಿಲ್ಲ. ಜತೆಗೆ ಪ್ರತಿ ಪ್ರೇಮಿಯೋ ತಮ್ಮದು ನಿತ್ಯ ಪ್ರೇಮೋತ್ಸವವಾಗಿರಬೇಕೆಂದು ಆಶಿಸುತ್ತಾರೆ..

ಮದುವೆಗೆ ಮುನ್ನ ಪ್ರೇಮಕಾಲ

ಮದುವೆಗೆ ಮುನ್ನ ಪ್ರೇಮಕಾಲ

ಮದುವೆಗೆ ಮುನ್ನ ಬರುವ ಒಂದಷ್ಟು ದಿನಗಳು ಹಲವರಿಗೆ ಪ್ರೇಮಕಾಲ.. ಆ ದಿನಗಳಲ್ಲಿ ಥೇಟ್ ಪ್ರೇಮಿಗಳಾಗಿ ಜೊತೆ ಜೊತೆಯಾಗಿ ಸುತ್ತಾಡುತ್ತಾ ಸಂಭ್ರಮಿಸುತ್ತಾ ವಿಚಾರ ವಿನಿಮಯ ಮಾಡುತ್ತಾ ಕಾಲ ಕಳೆಯುವುದರಲ್ಲಿಯೇ ಖುಷಿಪಡುತ್ತಾರೆ. ಅದು ಪ್ರೀತಿ, ಪ್ರೇಮ, ಆಕರ್ಷಣೆಯನ್ನು ಹೃದಯ, ದೇಹ, ಮನಸ್ಸುಗಳಲ್ಲಿ ತುಂಬುವ ಮತ್ತು ಸದಾ ಜೊತೆಯಾಗಿರಬೇಕೆಂದುಕೊಳ್ಳುವ ಸುಂದರ ಕ್ಷಣಗಳೆಂದರೆ ತಪ್ಪಾಗಲಾರದು.

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪ್ರೇಮ ಕಥೆಗಳು ನೂರಾರು ಸಿಗುತ್ತವೆ. ಪ್ರೇಮಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಇಷ್ಟಕ್ಕೂ ಪ್ರೇಮ ಎನ್ನುವುದು ತೋರಿಕೆಯಲ್ಲ ಅದು ಎರಡು ಹೃದಯಗಳ ವಿಷಯ..

ಪ್ರೇಮಕ್ಕೆ ನಂಬಿಕೆ ಮುಖ್ಯ

ಪ್ರೇಮಕ್ಕೆ ನಂಬಿಕೆ ಮುಖ್ಯ

ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಅಗತ್ಯ. ಅದೆರಡು ಇಲ್ಲದೆ ಹೋದರೆ ಪ್ರೀತಿಸೋಕೆ ಆಗಲ್ಲ. ಒಂದು ವೇಳೆ ಪ್ರೀತಿಸಿದರೂ ಉಳಿಯಲ್ಲ. ಹಾಗೆ ಸುಮ್ಮನೆ ಒಮ್ಮೆ ನಮ್ಮ-ನಿಮ್ಮ ಸುತ್ತಮುತ್ತ ದೃಷ್ಠಿ ಹಾಯಿಸಿ ನೋಡಿ ಬಿಡಿ.. ನಿಮ್ಮ ಗೆಳೆಯ-ಗೆಳೆಯರ ಪ್ರೀತಿ ಪ್ರೇಮಗಳೆಷ್ಟು ಯಶಸ್ವಿಯಾಗಿವೆ? ಇನ್ನೆಷ್ಟು ಮುರಿದುಬಿದ್ದಿವೆ ಎಂಬುದನ್ನು ಲೆಕ್ಕ ಹಾಕಿನೋಡಿ. ಅದರಾಚೆಗೆ ಪ್ರೀತಿಸಿ, ಎಲ್ಲ ಸಮಸ್ಯೆಯನ್ನು ಎದುರಿಸಿ ಮದುವೆಯಾದವರೆಷ್ಟು ಮಂದಿ ಸುಖವಾಗಿದ್ದಾರೆ?

ಪ್ರೀತಿಸೋದು ಸುಲಭ ಆದರೆ ಹೊಂದಿ ಕೊಂಡು ಬಾಳ್ವೆ ಮಾಡಿ ಅದಕ್ಕೊಂದು ನ್ಯಾಯ ಒದಗಿಸೋದು ಕಷ್ಟವೇ.. ಇತರರಿಗೆ ಮಾದರಿಯಾಗಿ ಬದುಕೋದು ಪ್ರೇಮಿಗಳು ಪ್ರೇಮಕ್ಕೆ ಕೊಡುವ ದೊಡ್ಡ ಗೌರವವಾಗುತ್ತದೆ. ಈ ವಿಚಾರದಲ್ಲಿ ನಾವು ಎಡವಿದ್ದೇ ಆದರೆ ಪ್ರತಿ ವರ್ಷದ ಪ್ರೇಮಿಗಳ ದಿನವೂ ಕರಾಳ ದಿನವಾಗಿ ಗೋಚರಿಸುವುದರಲ್ಲಿ ಎರಡು ಮಾತಿಲ್ಲ...

ಪ್ರೇಮಗಳ ದಿನಕಷ್ಟೇ ಮೀಸಲಾಗದಿರಲಿ ಪ್ರೇಮ

ಪ್ರೇಮಗಳ ದಿನಕಷ್ಟೇ ಮೀಸಲಾಗದಿರಲಿ ಪ್ರೇಮ

ಸಾಮಾನ್ಯವಾಗಿ ಪ್ರೇಮಿಗಳು ಅಂದರೆ ಅವರಲ್ಲಿ ಅದುಮಿಡಲಾರದ ಉತ್ಸಾಹ... ಸಂಭ್ರಮ... ಉಲ್ಲಾಸ... ಕಾತರ... ಇದ್ದದ್ದೇ.. ಜತೆಗೆ ಒಬ್ಬರ ಮೇಲೊಬ್ಬರು ತಲೆಯಿಟ್ಟು ಏನೇನೋ ಉಸುರುವ ಅಭಿಲಾಷೆ, ಕುಣಿದು ಕುಪ್ಪಳಿಸಬೇಕೆನ್ನುವ ತವಕ... ಉಡುಗೊರೆ ನೀಡಿ ಖುಷಿ ಪಡಿಸುವ.. ನೆನಪುಗಳನ್ನು ಶಾಶ್ವತವಾಗಿಸುವ ಬಯಕೆಗಳು ಇದ್ದೇ ಇರುತ್ತವೆ. ಆದರೆ ಇವುಗಳೆಲ್ಲವೂ ಒಂದು ದಿನಕ್ಕೆ ಸೀಮಿತವಾಗದೆ ಶಾಶ್ವತವಾಗಿ ಉಳಿದು ಬೆಳೆಯುವ ವಿಶಾಲ ಪ್ರೇಮಮರವಾದರೆ ಅದೆಷ್ಟು ಖುಷಿ ಅಲ್ವಾ?

ಪ್ರೇಮ ನಿವೇದನೆ

ಪ್ರೇಮ ನಿವೇದನೆ

ಹಾಗೆನೋಡಿದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿಕೊಂಡ ಈ ಪ್ರೇಮಿಗಳ ದಿನ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ತೀವ್ರಗತಿಯಲ್ಲಿ ಆಚರಣೆಯಾಗಿ ಬೆಳೆಯತೊಡಗಿದೆ. ಇದಕ್ಕೆ ಒಂದಷ್ಟು ಪರ-ವಿರೋಧಗಳು ಇವತ್ತಿಗೂ ಇದೆ. ಆದರೆ ಅದೆಲ್ಲವನ್ನು ಮೀರಿ ಪ್ರೇಮಿಗಳು ಪ್ರೇಮೋತ್ಸವದಲ್ಲಿ ಭಾಗಿಯಾಗುತ್ತಿದ್ದು, ರೆಸ್ಟೋರೆಂಟ್, ಹೋಟೆಲ್, ರೆಸಾರ್ಟ್‌ಗಳು ಮಾಲೀಕರು ಅದಕ್ಕೆ ಕೈಜೋಡಿಸುತ್ತಿದ್ದಾರೆ.

ಪ್ರೇಮಪತ್ರ ನೀಡಿ, ಗುಲಾಬಿ ಹೂ ನೀಡಿ, ಪ್ರೇಮ ನಿವೇದನೆ ಮಾಡುವ ಕಾಲ ಬದಲಾಗಿದೆ. ಈ ಪ್ರೇಮ ನಿವೇದನೆಗೆ ದಾರಿಗಳು ಹಲವಾರು ಇವೆ.

 ಪ್ರೇಮ ಪದಗಳಿಗೆ ನಿಲುಕದ ಅನುಭವ

ಪ್ರೇಮ ಪದಗಳಿಗೆ ನಿಲುಕದ ಅನುಭವ

ಕೇವಲ ದೈಹಿಕ ಆಕರ್ಷಣೆಯಿಂದಲೋ ಅಥವಾ ಇನ್ಯಾವುದೋ ಸನ್ನಿವೇಶಗಳಿಂದ ಆರಂಭವಾಗುವ ಪ್ರೀತಿಗಳಿಗೆ ಆಯುಷ್ಯ ಕಡಿಮೆಯಾಗುತ್ತಿದೆ. ಜತೆಗೆ ವಂಚನೆಗೆಂದೇ ಪ್ರೇಮದ ನಾಟಕವಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹಿಂದಿನ ಕಾಲದ ಮಡಿವಂತಿಕೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಪ್ರೇಮಿಗಳು ಯಾರ ಭಯವಿಲ್ಲದೆ ವಿಹರಿಸುವ, ಪ್ರೇಮ ಸಲ್ಲಾಪಗಳ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಎಲ್ಲವೂ ಅಷ್ಟೆ ಅವುಗಳಿಗೊಂದು ಚೌಕಟ್ಟಿದ್ದರೆ ಲಕ್ಷಣ ಇಲ್ಲದೆ ಹೋದರೆ ಸಮಸ್ಯೆಗೂ ದಾರಿ ಮಾಡಿಕೊಟ್ಟರೂ ಕೊಡಬಹುದು.

ಇಷ್ಟಕ್ಕೂ ಪ್ರೀತಿ, ಪ್ರೇಮವನ್ನು ವರ್ಣಿಸಲು ಪದವೇ ಇಲ್ಲ.

ಪ್ರೇಮ ಮತ್ತು ವಿವಾಹ

ಪ್ರೇಮ ಮತ್ತು ವಿವಾಹ

ಈಗಾಗಲೇ ಕೋಟ್ಯಂತರ ಮಂದಿ ತಮ್ಮದೇ ಕಲ್ಪನೆಯಲ್ಲಿ ಪ್ರೇಮವನ್ನು ತೆರೆದಿಟ್ಟಿದ್ದಾರೆ. ಕೆಲವರು ಪ್ರೇಮ ಅಂದ್ರೆ ಅದೊಂದು ಸೂಕ್ಷ್ಮ ಸಂವೇದಿ. ಅದಕ್ಕೆ ಆಳ, ಗಾತ್ರ ಯಾವುದೂ ಇಲ್ಲ ಎಂದರೆ, ಮತ್ತೆ ಕೆಲವರು ಪ್ರೇಮ ಹೃದಯಾಂತರಾಳದಲ್ಲಿ ಅಂಕುರಿಸಿತೆಂದರೆ ಸಾಕು ಅದು ಜಾತಿಯ ಹಂಗು, ಬಡತನ, ವಯಸ್ಸು, ಸ್ಥಾನಮಾನ ಎಲ್ಲವನ್ನೂ ಧಿಕ್ಕರಿಸಿ ಬೆಳೆವ ವಿಸ್ಮಯ ಎಂದಿದ್ದಾರೆ ಅಷ್ಟೇ ಅಲ್ಲದೆ ವರ್ಣಿಸಿದಷ್ಟೂ ಮುಗಿಯದ ಸುಂದರ ಅದ್ಭುತ ಲೋಕವಾಗಿದೆ ಎಂದು ವರ್ಣಿಸಿದ್ದಾರೆ.

ಪ್ರೇಮ ಅಂದ್ರೆ ಪ್ರಣಯ, ದೇಹ ಸಂಬಂಧ ಅರ್ಥಾತ್ ಕಾಮವನ್ನು ತ್ಯಜಿಸಿದ ಪ್ರೀತಿ, ಕರುಣೆ, ಅನುಕಂಪ ತುಂಬಿದ ಸಂಬಂಧ. ಪ್ರೀತಿ ಭವಸಾಗರ ದಾಟಿಸುವ ಹಡಗಾದರೆ ಪ್ರೇಮಿಗಳು ನಾವಿಕರಾಗಬೇಕಷ್ಟೆ.

ಪ್ರೀತಿಯ ಹುಟ್ಟನ್ನು ಹುಡುಕಲು ಅದಕ್ಕೆ ಮೂಲವೂ ಇಲ್ಲ ಹೇಳಿಕೊಡೋದಕ್ಕೆ ಗುರುವೂ ಬೇಕಾಗಿಲ್ಲ. ನಿಷ್ಕಲ್ಮಶ ಮನಸ್ಸು, ನಿಷ್ಠೆ, ನಂಬಿಕೆ, ಪ್ರಾಮಾಣಿಕತೆಯಷ್ಟೆ ಪ್ರೀತಿಗೆ ಬೇಕಾಗಿರೋದು. ಪ್ರೇಮ ಮತ್ತು ವಿವಾಹ ಎರಡು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪ್ರೀತಿಯ ಮುಂದಿನ ಹಂತವೇ ಮದುವೆ. ಪ್ರೇಮವೆಂಬುವುದು ಸಾಗರದಂತೆ. ಅಲ್ಲಿ ಈಜಿ ಗೆಲ್ಲಬೇಕು ಸಂಸಾರದ ಸುಖ ಅನುಭವಿಸಬೇಕು. ಇನ್ನು ಪ್ರೇಮದ ಬಗ್ಗೆ ಮಾತನಾಡಿದ ಮೇಲೆ ಇವತ್ತಿನ ಪ್ರೇಮಿಗಳ ದಿನದ ಆಚರಣೆಗೆ ಕಾರಣನಾದ ವ್ಯಾ ವ್ಯಾಲೆಂಟೈನ್ ಬಗ್ಗೆ ಹೇಳದೆ ಹೋದರೆ ಅಪೂರ್ಣವಾಗಿ ಬಿಡುತ್ತದೆ.

ವ್ಯಾಲೆಂಟೈನ್ ಡೇ ಹೇಗೆ ಬಂತು?

ವ್ಯಾಲೆಂಟೈನ್ ಡೇ ಹೇಗೆ ಬಂತು?

ಪ್ರೇಮಿಗಳ ದಿನ ಅರ್ಥಾತ್ ವ್ಯಾಲೆಂಟೈನ್ ಡೇ ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಹಲವು ಶತಮಾನಗಳ ಹಿಂದೆ ನಡೆದ ಘಟನೆಯೊಂದು ಆಚರಣೆಯಾಗಿ ಮುಂದುವರೆಯಿತು ಎಂಬ ಪುರಾವೆ ಲಭಿಸುತ್ತದೆ.

ಅದು ಕ್ರಿ.ಶ.269ನೇ ಇಸವಿಯ ದಿನಗಳು... ಆಗ ರೋಮ್ ಸಾಮ್ರಾಜ್ಯವನ್ನು ಕ್ಲಾಡಿಯಸ್ ಎಂಬ ದೊರೆಯು ಆಳುತ್ತಿದ್ದನಂತೆ. ಆತ ಮಹಾಕಟುಕನಾಗಿದ್ದನಂತೆ ಅಷ್ಟೇ ಅಲ್ಲ ಮದುವೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಅವನ ಪ್ರಕಾರ ಮದುವೆಯಾಗುವುದು ಮಹಾಅಪರಾಧವಾಗಿತ್ತು. ವ್ಯಕ್ತಿಯೊಬ್ಬ ಮದುವೆ ಎಂಬ ಬಂಧನದಲ್ಲಿ ಸಿಕ್ಕಿಬಿದ್ದರೆ ಸಂಸಾರದ ಜಂಜಾಟದಲ್ಲಿ ತನ್ನ ಕ್ರಿಯಾಶೀಲತೆ ಹಾಗೂ ಬುದ್ದಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂಬುವುದು ಕ್ಲಾಡಿಯಸ್‌ನ ಅಭಿಪ್ರಾಯವಾಗಿತ್ತು. ಹಾಗಾಗಿ ಆತ ಮದುವೆ ಎಂದರೆ ಕೆಂಡಮಂಡಲವಾಗುತ್ತಿದ್ದನು.

ಇದು ಪ್ರೇಮದ ವಿಷಯ.. ಇಲ್ಲಿನ ಎಲ್ಲ ಒಳಿತು ಕೆಡಕುಗಳಿಗೆ ನೀವೇ ಜವಾಬ್ದಾರರು...

ಇದು ಪ್ರೇಮದ ವಿಷಯ.. ಇಲ್ಲಿನ ಎಲ್ಲ ಒಳಿತು ಕೆಡಕುಗಳಿಗೆ ನೀವೇ ಜವಾಬ್ದಾರರು...

ಒಂದು ವೇಳೆ ರಾಜಾಜ್ಞೆಯನ್ನು ಮೀರಿ ಮದುವೆಯಾಗಿದ್ದೇ ಆದಲ್ಲಿ ಮದುವೆಯಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಗಲ್ಲಿಗೇರಿಸುತ್ತಿದ್ದನು.

ದೊರೆ ಕ್ಲಾಡಿಯಸ್‌ನ ಈ ಹುಚ್ಚಾಟ ಪಾದ್ರಿ ವ್ಯಾಲೆಂಟೈನನ್ನು ಕೆರಳಿಸಿತ್ತು. ಹಾಗಾಗಿ ದೊರೆಯ ನೀತಿಯನ್ನು ಖಂಡಿಸುತ್ತಾ ದೊರೆ ಕ್ಲಾಡಿಯಸ್‌ನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸಿ ಅವರಿಗೆ ಮದುವೆ ಮಾಡತೊಡಗಿದ್ದನು. ಆದರೆ ಇದು ಹೆಚ್ಚು ದಿನ ಗುಪ್ತವಾಗಿ ಉಳಿಯಲಿಲ್ಲ. ಪಾದ್ರಿ ವ್ಯಾಲೆಂಟೈನ್ ಪ್ರೇಮಿಗಳನ್ನು ಒಂದುಗೂಡಿಸುತ್ತಿರುವ ವಿಚಾರ ದೊರೆ ಕ್ಲಾಡಿಯಸ್‌ನ ಕಿವಿಗೆ ಬಿತ್ತು. ತನ್ನ ಆಜ್ಞೆಯನ್ನು ಮೀರಿದ ವ್ಯಾಲೆಂಟೈನ್ ಮೇಲೆ ಕೆಂಡಾಮಂಡಲನಾದನಲ್ಲದೆ, ಅವನಿಗೆ ಮರಣದಂಡನೆಯನ್ನು ವಿಧಿಸಿದನು.

ಅದರಂತೆ ಫೆಬ್ರವರಿ 14ರಂದು ಪಾದ್ರಿ ವ್ಯಾಲೆಂಟೈನನ್ನು ಗಲ್ಲಿಗೇರಿಸಲಾಯಿತು. ಪ್ರೇಮಿಗಳಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಪಾದ್ರಿ ವ್ಯಾಲೆಂಟೈನ್‌ನ ಸ್ಮರಣೆಗಾಗಿ ಆ ದಿನವನ್ನು ವ್ಯಾಲೆಂಟೈನ್ ಡೇ ಆಚರಣೆಗೆ ಬಂತೆಂದು ಹೇಳಲಾಗುತ್ತಿದೆ. ಇದೀಗ ಆಚರಣೆ ವರ್ಷದಿಂದ ವರ್ಷಕ್ಕೆ ಒಂದಷ್ಟು ಬದಲಾವಣೆ ಕಾಣುತ್ತಾ ಸಾಗುತ್ತಿದೆ. ಇಷ್ಟಕ್ಕೂ ಆಚರಣೆ ಮಾಡಿ ಅಥವಾ ಮಾಡಬೇಡಿ ಎಂದು ಹೇಳೋದಕ್ಕಾಗಲ್ಲ ಏಕೆಂದರೆ..? ಇದು ಪ್ರೇಮದ ವಿಷಯ.. ಇಲ್ಲಿನ ಎಲ್ಲ ಒಳಿತು ಕೆಡಕುಗಳಿಗೆ ನೀವೇ ಜವಾಬ್ದಾರರು...

English summary

Why And How To Celebrate Valentines Day

valentines day should not be a one day celebration.love means not only roaming together and doing romance it has very wonderful feeling. In this article explained about importance of valentines day.
X
Desktop Bottom Promotion