For Quick Alerts
ALLOW NOTIFICATIONS  
For Daily Alerts

ಪ್ರೀತಿ ಬೇಡವೆಂದವಳಿಗೆ ಉಸಿರಾದ ಪ್ರೀತಿ

By ಶ್ರೇಯಾ ಪುಷ್ಪರಾಜ್‌ ಶೆಟ್ಟಿ
|

ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕನ್ನಡ ಬೋಲ್ಡ್‌ ಸ್ಕೈ ಪ್ರೇಮ ಲೇಖನಗಳನ್ನು ಆಹ್ವಾನಿಸಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರತಿಯೊಬ್ಬರ ಜೀವನದಲ್ಲಿ ಹೇಳಲು ಒಂದೊಂದು ಪ್ರೇಮ ಕಹಾನಿ ಇರುತ್ತದೆ. ನಿಮ್ಮ ಪ್ರೇಮ ಕಹಾನಿ ನಮ್ಮೊಂದಿಗೆ ಹಂಚಿಕೊಳ್ಳಬೇಕೇ? ಹಾಗಾದರೆ ಪ್ರೇಮ ಲೇಖನ ಬರೆದು kannada.boldsky@gmail.comಗೆ ಕಳುಹಿಸಿಕೊಡಿ.

ಇಲ್ಲಿ ಶ್ರೇಯಾ ಪುಷ್ಪರಾಜ್‌ ನಮ್ಮೊಂದಿಗೆ ಅವರ ಕ್ಯೂಟ್ ಲವ್ ಸ್ಟೋರಿ ಹಂಚಿಕೊಂಡಿದ್ದಾರೆ.

ಪ್ರೀತಿ ಅನ್ನೋ ಪದಕ್ಕೆ ಯಾರಿಂದಲೂ ಬೆಲೆ ಕಟ್ಟೋಕೆ ಆಗದು, ಅದು ಎರಡಕ್ಷರದ ಪದವಾದರೂ ಅದಕ್ಕಿರೋ ಶಕ್ತಿ ಎಂತವರನ್ನೂ ಕರಗಿಸಿಬಿಡುತ್ತೆ. ಎರಡು ಹೃದಯಗಳನ್ನು ಒಂದು ಮಾಡೋ ಆ ಎರಡಕ್ಷರಕ್ಕೆ ನಾನೂ ಮಣಿದವಳು . ನನ್ನ ಜೀವನದಲ್ಲಿ ನಡೆದ ಒಂದು ಕಹಿ ಘಟನೆಯಿಂದ ಯಾರನ್ನೂ ಪ್ರೀತಿ ಮಾಡಬಾರದು ಅಂದುಕೊಂಡಿದ್ದೆ.

ಆ ಪ್ರೀತಿ ತನ್ನ ಕದಂಬ ಬಾಹುವಿನಲ್ಲಿ ನನ್ನನ್ನು ಬರಸೆಳೆದಿತ್ತು

ಆ ಪ್ರೀತಿ ತನ್ನ ಕದಂಬ ಬಾಹುವಿನಲ್ಲಿ ನನ್ನನ್ನು ಬರಸೆಳೆದಿತ್ತು

ಆದರೆ ಸ್ನಾತಕೋತ್ತರ ಪದವಿ ಮುಗಿಯೋ ಹೊತ್ತಲ್ಲಿ ಆ ಪ್ರೀತಿ ನನ್ನನ್ನು ತನ್ನ ಕದಂಬ ಬಾಹುವಿನಲ್ಲಿ ನನ್ನನ್ನು ಬರಸೆಳೆದಿತ್ತು. ಹೌದು, ಆತ ನನ್ನ ಸೀನಿಯರ್ , ನನ್ನ ಸ್ನೇಹಿತೆಯಿಂದ ಪರಿಚಯ ಆಗಿ ಅಲ್ಪ ಸ್ವಲ್ಪ ಮಾತು ಆಡ್ತಿದ್ದೆ. ಆದ್ರೆ ಬರ್ತಾ ಬರ್ತಾ ಆತನ ಜೊತೆ ಮಾತನಾಡೋದೆಂದ್ರೆ ಏನೋ ಖುಷಿ. ಆತನೊಂದಿಗೆ ಮಾತನಾಡಲು ಹಾತೊರೆಯುತ್ತಿದ್ದೆ. ಯಾಕಂದ್ರೆ ಆತನ ನೇಚರ್ ಹಾಗಿತ್ತು. ಆ ಹುಡುಗ ಸಣ್ಣಕ್ಕಿದ್ರೂ ಗುಣ ಮಾತ್ರ ಅಪರಂಜಿ. ಹೆಸರು ಪುಷ್ಪರಾಜ್ ಶೆಟ್ಟಿ..

ನಾನು ಸ್ವಲ್ಪ ಕಿಡ್ಡಿಶ್ ತರ ಆಡ್ತಿದ್ದೆ, ಸೀರಿಯಸ್ ನೆಸ್ ಅನ್ನೋದು ಸ್ವಲ್ಪಕಡಿಮೆನೇ ಇತ್ತು. ಆವಾಗೆಲ್ಲ ಪುಷ್ಪರಾಜ್ ನನಗೆ ಹೇಳ್ತಿದ್ದ ಬುದ್ಧಿ ಮಾತು, ನನ್ನ ಮೇಲೆ ತೋರ್ತಿದ್ದ ಕಾಳಜಿ ಆತನ ಮೇಲಿದ್ದ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿತ್ತು. ಆತನೂ ನನ್ನ ಜೊತೆ ಹರಟೆ ಹೊಡೆಯಲು ತವಕದಿಂದ ಕಾಯುತ್ತಿದ್ದ. ಕಾಲೇಜ್ ಕ್ಯಾಂಪಸ್ ನಲ್ಲಿ ಸದಾ ಜೊತೆಯಾಗಿಯೇ ಓಡಾಡ್ತಿದ್ವಿ. ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ್ರೂ ಆತನ ಮುಖದಲ್ಲಿ ಟೆನ್ಷನ್ ಕಾಣಿಸ್ತಿತ್ತು. ಸದಾ ಪೋನ್ ಮಾಡಿ ವಿಚಾರಿಸುತ್ತಿದ್ದ .

ಪ್ರೀತಿಯ ಹೊಂಗನಸು

ಪ್ರೀತಿಯ ಹೊಂಗನಸು

ನಾನಿದ್ದಿದ್ದು ಹಾಸ್ಟೆಲ್ ನಲ್ಲಿ. ವಾರಕ್ಕೊಮ್ಮೆ ಮನೆ ಕಡೆ ಹೋಗುವಾಗ ಭಾರವಾದ ಮನಸ್ಸಲ್ಲೇ ಪಯಣ. ಕೆಲವೊಮ್ಮೆ ಪುಷ್ಪರಾಜ್ ಕೂಡ ನನ್ನ ಜೊತೆಯಾಗಿ ಬಂದು ಮೂಡಬಿದಿರೆವರೆಗೆ ಬಿಟ್ಟು ಆನಂತರ ಆತನ ಮನೆಗೆ ತೆರಳುತ್ತಿದ್ದ, ಅದು ಆತನ ಮನೆಗೆ ದೂರದ ದಾರಿಯಾದರೂ ನನ್ನ ಜೊತೆ ಬರಲು ಬಯಸುತ್ತಿದ್ದ, ನನ್ನ ಬಯಕೆಯೂ ಅದೆ ಆಗಿತ್ತು. ನಮ್ಮದು ಗಾಢವಾದ ಸ್ನೇಹವಾಗಿತ್ತು.

ಒಂದ್ಸಲ ಪುಷ್ಪರಾಜ್ ಅವರ ಸಂಬಂಧಿಕರೊಬ್ಬರ ಮದುವೆಗೆ ನಾನು ಕೂಡ ಹೋಗಿದ್ದೆ. ಆಗ ಒಬ್ಬಳು ಪುಷ್ಪರಾಜ್ ಜೊತೆ ಸಲುಗೆಯಿಂದ ನಡೆದುಕೊಂಡಿದ್ದನ್ನು ನೋಡಿ ಬೇಜಾರು ಮಾಡ್ಕೊಂಡು ವಾಪಾಸ್ ಬಂದಿದ್ದೆ . ಪಾಪ ಆತ ಅದೆಷ್ಟು ಅಂಗಲಾಚಿಕೊಂಡ್ರೂ ಕೇಳಿರಲಿಲ್ಲ . ಅತ್ತುಕೊಂಡೇ ಬಂದಿದ್ದೆ. ಯಾಕಂದ್ರೆ ಪುಷ್ಪರಾಜ್ ಜೊತೆ ಬೇರೆ ಹುಡುಗಿಯರು ಸಲುಗೆಯಿಂದ ಮಾತನಾಡೋದನ್ನು ನೋಡಿದಾಗ ಅದೇನೋ ಕಸಿವಿಸಿ. ಆ ಭಾವನೆ ಬಂದಿದ್ದೇ ಮೊದಲನೆ ಬಾರಿ. ಆವಾಗ್ಲೂ ಅದು ಪ್ರೀತಿ ಅನ್ನೋದು ಗೊತ್ತಾಗಿರಲಿಲ್ಲ.

ಒಂದೊಳ್ಳೆ ಗೆಳೆಯನನ್ನು ಕಳೆದುಕೊಳ್ಳಬಾರದೆನ್ನೊ ಭಾವನೆಯೇ ದಟ್ಟವಾಗಿತ್ತು.

ನಾವಿಬ್ಬರೂ ಜೊತೆಯಾಗಿರೋದನ್ನು ನೋಡಿ ಕ್ಲಾಸ್ ಮೇಟ್ಸ್ ಗಳು ಹಲವಾರು ಬಾರಿ ತಮಾಷೆ ಮಾಡಿದ್ದೂ ಇದೆ. ಇದಕ್ಕೆಲ್ಲಾ ನಾವು ತಲೆಕೆಡಿಸಿಕೊಂಡವರೂ ನಾವಲ್ಲ. ಆಡೋರು ಆಡ್ತಾರೆ ನಮ್ಮದು ನಿಷ್ಕಲ್ಮಷ ಸ್ನೇಹ ಅದರ ಬಗ್ಗೆ ಯೋಚನೆ ಮಾಡಬೇಡ ಅಂತ ಆತ ಹೇಳ್ತಿದ್ದ. ಹಾಗೇ ಇದ್ವಿ ನಾವು..

ಪ್ರೀತಿಯ ಅರಿವು ಮೂಡಿಸಿದ ಬೆಂಗಳೂರು ಪಯಣ

ಪ್ರೀತಿಯ ಅರಿವು ಮೂಡಿಸಿದ ಬೆಂಗಳೂರು ಪಯಣ

ಪುಷ್ಪರಾಜ್ ಸ್ನಾತಕ್ಕೋತ್ತರ ಪದವಿ ಮುಗಿಸಿ ಬೆಂಗಳೂರಿನೆಡೆ ಹೊಟ್ಟೆ ಪಾಡಿಗಾಗಿ ಉದ್ಯೋಗ ಅರಸಿ ಹೋಗುವ ದಿನ ಹತ್ತಿರ ಬಂದಾಗ ನನಗೆ ನಾನು ಯಾವುದನ್ನೋ ಕಳೆದುಕೊಳ್ತಿದ್ದೀನಿ ಅನ್ನೋ ಭಾವನೆ .. ಆತನ ಕಣ್ಣಲ್ಲೂ ಅದೇ ನೋವು. ಪ್ರತಿ ದಿನದ ಮಾತುಕತೆಯಲ್ಲಿ ಅದರ ಬಗ್ಗೆಯೇ ಚರ್ಚೆ. ಆತನಿಗೂ ನನ್ನ ಬಿಟ್ಟು ಹೋಗೋ ಮನಸು ಇಲ್ಲ ಅನ್ನೋದು ಗೊತ್ತಾಗಿತ್ತು. ಆವಾಗ ಅರಿವಾಗಿದ್ದು ಇದು ಬರಿ ಸ್ನೇಹ ಅಲ್ಲ ಇದು ಪ್ರೀತಿ ಅಂತ.

ಆತನೊಂದಿಗೆ ಜೀವನ ಪೂರ್ತಿ ಜೊತೆಯಾಗಿರಬೇಕು ಎಂದು ಬಯಸಿದ್ದೆ. ಹೀಗಾಗಿ ಪುಷ್ಪರಾಜ್ ಜೊತೆ ನೇರವಾಗಿ ನನಗೆ ಜೀವನ ಪೂರ್ತಿ ನಿಮ್ಮ ಪ್ರೀತಿಯನ್ನು ಧಾರೆ ಎಳೆಯುತ್ತೀರಾ ಅಂತ ಕೇಳಿಯೇ ಬಿಟ್ಟೆ. ಮಾತೇ ಇಲ್ಲ ಆ ಕಡೆಯಿಂದ. ಯಾಕಂದ್ರೆ ಆತನ ಇಚ್ಛೆಯೂ ಅದೇ ಅಗಿತ್ತು. ಆತನೂ ನನ್ನ ಜೊತೆ ಇದೆ ಮಾತು ಕೇಳಲು ಕಾಯುತ್ತಿದ್ದ ಅನ್ನೋದನ್ನು ಹೇಳಿಯೇ ಬಿಟ್ಟ.

ಅಷ್ಟೇ ಇಬ್ರೂ ಸಂತೋಷ ಸಾಗರದಲ್ಲಿ ತೇಲಿ ಬಿಟ್ಟಿದ್ವಿ.

ಜೊತೆ ಜೊತೆಯಾಗಿ

ಜೊತೆ ಜೊತೆಯಾಗಿ

ಪುಷ್ಪರಾಜ್ ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡ್ಕೊಂಡು ಸೆಟ್ಲ್ ಆದ್ರು, ಮರು ವರ್ಷವೇ ನಾನೂ ಸ್ನಾತಕೋತ್ತರ ಪದವಿ ಮುಗಿಸಿ ಬೆಂಗಳೂರಿನಲ್ಲಿ ಬಂದು ಒಳ್ಳೆಯ ಮೀಡಿಯಾದಲ್ಲಿ ಕೆಲಸ ಪಡ್ಕೊಂಡೆ. ನಾಲ್ಕು ವರ್ಷ ಎಲ್ಲೆ ಮೀರದ ಪ್ರೀತಿ ಕಡಲಲ್ಲಿ ತೇಲಿದ ನಾವು ನಮ್ಮ ಕುಟುಂಬಸ್ಥರ ಸಂಪೂರ್ಣ ಒಪ್ಪಿಗೆಯೊಂದಿಗೆ ಸಪ್ತಪದಿ ತುಳಿದೇ ಬಿಟ್ವಿ. ಆ ಕ್ಷಣ ಅನ್ನಿಸಿದ್ದು ಒಂದೇ, ಜೀವನದಲ್ಲಿ ಇನ್ನೇನು ಬೇಕು ಅನ್ನೋದು.

ಪ್ರೇಮದ ಕಾಣಿಕೆ ಆ ನನ್ನ ಗೆಳೆಯ

ಪ್ರೇಮದ ಕಾಣಿಕೆ ಆ ನನ್ನ ಗೆಳೆಯ

ಪುಷ್ಪರಾಜ್ ನನ್ನ ಜೀವನದಲ್ಲಿ ದೇವರು ಕೊಟ್ಟಿರೋ ದೊಡ್ಡ ಉಡುಗೊರೆ. ಅವರಿಗೆ ಚೂರು ನೋವಾದ್ರೂ ನಂಗೆ ಸಹಿಸೋಕಾಗಲ್ಲ, ನಂಗೆ ನೋವಾದ್ರೆ ಅವರು ಸಹಿಸಲ್ಲ.

ಇದೀಗ ನಾವು ಮದುವೆಯಾಗಿ ಆರು ವರುಷಗಳೇ ದಾಟಿದೆ, ನಮ್ಮಿಬ್ಬರ ಪ್ರೀತಿಯ ಸಾಕ್ಷಿಯಾಗಿ ಮುದ್ದಾದ ಹೆಣ್ಣು ಮಗಳು ಅವಳೆ ಹಿಮಾನಿ. ಈಗ ಪುಷ್ಪರಾಜ್ ಅವರ ಪ್ರೀತಿಯ ಧಾರೆ ನಮ್ಮಿಬ್ಬರ ಮೇಲೆ. ಆತನ ಪ್ರೀತಿಯಲ್ಲಿ ಸ್ವಲ್ಪ ಏರುಪೇರಾದ್ರೂ ಈಗಲೂ ನನ್ನಿಂದ ಸಹಿಸೋಕಾಗಲ್ಲ . ಆತ ಸದಾ ನನ್ನೊಂದಿಗೆ ನಗುನಗುತ್ತಾ ಇರಬೇಕು ಅನ್ನೋದೇ ನನ್ನ ಆಸೆ.

ಸೈಲೆಂಟ್ ಆದ್ರೂ ಎಲ್ಲರ ಮನಸ್ಸು ಗೆಲ್ಲುವ ಪುಷ್ಪರಾಜ್ ಪ್ರತಿ ಜನ್ಮದಲ್ಲೂ ನನ್ನ ಇನಿಯನಾಗಿಯೇ ಬರಲಿ ಅನ್ನೋದು ನನ್ನ ಹೆಬ್ಬಯಕೆ. ದೇವರಲ್ಲಿ ಸದಾ ಬೇಡೋದು ಕೂಡ ಅದನ್ನೇ. ಇಷ್ಟು ವರ್ಷಗಳ ಕಾಲ ಕಷ್ಟ ಇರಲಿ ನೋವಿರಲಿ, ನಲಿವಿರಲಿ ಜೊತೆ ಜೊತೆಯಾಗಿ ಹೆಜ್ಜೆ ಇಟ್ಟ ನಿನಗೆ ನಾನು ಚಿರರುಣಿ .. ಲವ್ ಯು ಮೈ ಡಿಯರ್ ಪಾಪು ..

English summary

Love Story by Shreya Pushparaji Shetty

Here we have shared cute love story shared by Shreya Pushparaj Shetty,Read on.
X